ಜಮ್ಮು ಕಾಶ್ಮೀರ, ಹೈದರಾಬಾದ್ ಚುನಾವಣೆ ಫಲಿತಾಂಶಗಳು ಜನಮನದ ದಿಕ್ಸೂಚಿಯಾಗಿವೆ

ಒಡೆಯುವವರಿಗೆ ತಿರಸ್ಕಾರ, ಬೆಸೆಯುವವರಿಗೆ ಜನಾದೇಶದ ಪುರಸ್ಕಾರ

 
ಜ್ಯೋತಿಷ್ಯ ಪಂಡಿತರ ಭಾಷೆಯಲ್ಲಿ ಹೇಳುವುದಾದರೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಶುಕ್ರದೆಸೆ ಶುರು ಆದಂತೆ ತೋರುತ್ತಿದೆ. ಕೊರೊನಾ ಕಾಲಿಡುತ್ತಿದ್ದ ಹೊತ್ತಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆ ಹೊರತು ಪಡಿಸಿ, ಬಳಿಕ ನಡೆದಿರುವ ಎಲ್ಲ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು,
ಜಮ್ಮು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿಗಳಿಗೆ ನಡೆದ ಚುನಾವಣೆವರೆಗೆ ಎಲ್ಲ ಕಡೆಯೂ ಅಧಿಕಾರದ ಕಡೆ ಮುಖ ಮಾಡಿದೆ. ಈ ನಡುವೆ, ಅದು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ ಸಿ) ಚುನಾವಣೆ, ಅಸ್ಸಾಂನ ಬೋಡೋ ಲ್ಯಾಂಡ್ ಟೆರಿಟೋರಿಯಲ್ ಕೌನ್ಸೆಲ್ ಹಾಗೂ ಕೇರಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲೂ ಒಂದು ರಾಜಕೀಯ ಪಕ್ಷವಾಗಿ ಗಮನಾರ್ಹ ಸಾಧನೆ ಮಾಡಿದೆ. ನಿಮಗೆ ನೆನಪಿರಲಿ, ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ಎಂಬ ಸಾಂಕ್ರಮಿಕ ಪಿಡುಗು ಹಾಗೂ ಅದು ತಂದೊಡ್ಡಿದ ಲಾಕ್ಡೌನ್ ಸಂಕಟಗಳು ದೇಶವನ್ನು ಕಾಡುತ್ತಿರುವ ಸಂದರ್ಭದಲ್ಲಿಯೇ, ಬಿಜೆಪಿ ತಳಮಟ್ಟದಲ್ಲಿ ಬೇರು ಬಿಡಲಾರಂಭಿಸಿದೆ.
ಅಲ್ಪಸಂಖ್ಯಾತರ ಮತಗಳನ್ನು ಯಾರು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೇ, ಗ್ರೇಟರ್ ಹೈದರಾಬಾದ್ ಯಾರಿಗೆ ಒಲಿಯುತ್ತದೆ ಎಂಬುದು ನಿರ್ಧಾರಿತವಾಗುತ್ತಿದ್ದ, ಹೈದ್ರಬಾದ್ ಪಾಲಿಕೆಯಲ್ಲಿ ಆ ಪಕ್ಷ 50 ಸ್ಥಾನಗಳ ಗಡಿ ದಾಟಿದೆ. ಕಳೆದ ಚುನಾವಣೆವರೆಗೂ ಅದು ಮೂರು ಸೀಟು ಗೆಲ್ಲಲು ಪ್ರಯಾಸ ಪಡುತಿತ್ತು. ಮುಸ್ಲಿಂ ವಿರೋಧಿ ಪಕ್ಷ ಎಂಬ ಹಣೆಪಟ್ಟಿ ಧಾರಣೆ ಮಾಡಿರುವ ಪಕ್ಷವೊಂದು, ಅವರೇ ನಿರ್ಣಾಯಕವಾಗಿರುವ ನೆಲದಲ್ಲಿ ಇಷ್ಟೊಂದು ಸೀಟುಗಳನ್ನು ಗೆದ್ದದ್ದು ಹೇಗೆ ಎಂಬುದು ತಿಂಗಳ ಹಿಂದೆ ರಾಷ್ಟ್ರರಾಜಕಾರಣದಲ್ಲಿ ಪ್ರಮುಖ ಚರ್ಚೆಗೆ ಕಾರಣವಾಗಿತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಮಿತ್ ಷಾ ಮುಂತಾದವರು ಪಾಲಿಕೆ ಚುನಾವಣಾ ಪ್ರಚಾರಕ್ಕೆ ಬರಬೇಕೇ? ಬಂದದ್ದು ಸರಿಯೋ ತಪ್ಪೋ ಎಂಬುದರ ಕುರಿತೇ ರಾಷ್ಡ್ರೀಯ ವಾಹಿನಿಗಳಲ್ಲಿ ವಾರಗಟ್ಟಲೆ ಚರ್ಚೆಗೆ ಕಾರಣವಾಯಿತು. ಅದರ ಪರಿಣಾಮ ಎಂಬಂತೆ ಜಿಎಚ್ ಸಿ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ವರದಿಯನ್ನು ದೇಶದ ರಾಜಕೀಯ ಭವಿಷ್ಯವನ್ನು ನಿರ್ಣಯಿಸುವ ಲೋಕಸಭಾ ಚುನಾವಣೆಗೆ ಏನೂ ಕಡಿಮೆ ಇಲ್ಲದಂತೆ ದೇಶದ ಹತ್ತಾರು ರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ನೂರಾರು ಪ್ರಾದೇಶಿಕ ವಾಹಿನಿಗಳು ಹೆಚ್ಚೂ ಕಡಿಮೆ ಎರಡು ಮೂರು ದಿನಗಳ ಕಾಲ ಬಿತ್ತರಿಸಿದವು. ಇದರ ಬೆನ್ನಲ್ಲೇ ನಡೆದದ್ದು ಅಸ್ಸಾಂನ ಬೋಡೋ ಲ್ಯಾಂಡ್ ಟೆರಿಟೋರಿಯನ್ ಕೌನ್ಸೆಲ್ ಚುನಾವಣೆ. ಈ ಚುನಾವಣೆಯೂ ಕೂಡ ಪ್ರಾದೇಶಿಕವಾಗಿ ಮತ್ತು ರಾಜಕೀಯ ಸೂಕ್ಷ್ಮತೆಯ ದೃಷ್ಟಿಯಿಂದ ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆಯಷ್ಟೇ ಮಹತ್ವದ್ದು. ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸೆಲ್ ಚುನಾವಣೆ ರಾಜಕೀಯವಾಗಿ ಮಾತ್ರವಲ್ಲ,ಭೌಗೋಳಿಕ ಸಮಗ್ರತೆ ದೃಷ್ಟಿಯಿಂದಲೂ ಕೂಡ ಅಷ್ಟೇ ಮಹತ್ವದ್ದು. ಬೋಡೋ ಲ್ಯಾಂಡ್ ಟೆರಿಟೋರಿಯಲ್ ಕೌನ್ಸೆಲ್ ನಲ್ಲಿ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಕೇವಲ ಮೂರು ಸ್ಥಾನವನ್ನು ಹೊಂದಿತ್ತು. ಈ ಬಾರಿ ೩೩ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಿತು. ತಿವಾ ಕೌನ್ಸೆಲ್ ನಲ್ಲಿ ಇದುವರೆಗೆ ಬಿಗಿ ಹಿಡಿತ ಹೊಂದಿದ್ದ ಅಸ್ಸಾಂ ಗಣಪರಿಷತ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದಂಕಿ ಸ್ಥಾನವನ್ನು ಗಳಿಸುವುದಕ್ಕೆ ಮಾತ್ರ ಸಫಲವಾದವು.
ಆ ನಂತರದ್ದು ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ. ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂ ಎಡರಂಗ ತನ್ನೆಲ್ಲ ರಾಜಕೀಯ ಜಂಜಾಟಗಳ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಗಮನ ಸೆಳೆದದ್ದು ಒಂದೆಡೆಯಾದರೆ ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಹಾಗೂ ಜಿಲ್ಲಾ ಪಂಚಾಯತದವರೆಗೆ ಖಾತೆ ತೆರೆದು ಮತಗಳಿಕೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿಕೊಂಡದ್ದು ರಾಜಕೀಯವಾಗಿ ಬಿಜೆಪಿಗೆ ಮಹತ್ವದ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನನ್ನ ದೃಷ್ಟಿಯಲ್ಲಿಇವೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದದ್ದು ಜಮ್ಮು ಕಾಶ್ಮೀರ ಜಿಲ್ಲಾಭಿವೃದ್ಧಿ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ. ಇಲ್ಲೂ ಅಷ್ಟೇ, ಜಮ್ಮುವಿನಲ್ಲಿ, ಲದಾಕ್ ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದು ಅಷ್ಟು ಮಹತ್ವದ್ದಲ್ಲ, ಇದುವರೆಗೂ ಭಯೋತ್ಪಾದಕರ, ಪ್ರತ್ಯೇಕತಾವಾದಿಗಳ ಹಿಡಿತದಲ್ಲೇ ಇದ್ದ ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಯಿಂದ ಅಧಿಕೃತವಾಗಿ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳು ಜಯಶಾಲಿಗಳಾಗಿರುವುದು ಗಮನಿಸಬೇಕಾಗಿರುವ ಸಂಗತಿ. ಬಿಜೆಪಿ ಎಲ್ಲ ಜಾತಿ,ಸಮುದಾಯಗಳನ್ನ ಒಳಗೊಳ್ಳಲು ಆರಂಭಿಸಿದೆ. ಈ ಹಿಂದಿನಂತೆ ಅದು, ನಿರ್ದಿಷ್ಟ ಸಮುದಾಯಗಳನ್ನು ಪ್ರತ್ಯೇಕವಾಗಿಡುವ ಮಾತುಗಳನ್ನು ಕಡಿಮೆ ಮಾಡುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಹಬ್ಬಿರುವ ತಾಲೂಕು, ಜಿಲ್ಲೆ, ನಗರಾಡಳಿತ, ರಾಜ್ಯಾಡಳಿತದವರೆಗಿನ ಎಲ್ಲ ಹಂತದಲ್ಲೂ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ಸಿದ್ಧಾಂತ ಏನೇ ಇರಲಿ, ಎಲ್ಲ ರಾಜಕೀಯ ಪಕ್ಷಗಳು ಎಲ್ಲರನ್ನೂ ಒಳಗೊಳ್ಳುವುದು ಒಳ್ಳೆಯ ಬೆಳವಣಿಗೆ.
ಇದೆಲ್ಲವೂ ಒಂದು ಸಂಗತಿಯಾದರೆ, ಬಿಜೆಪಿ ಕಾಶ್ಮೀರದಲ್ಲಿ ಸಾಧಿಸಿರುವ ಫಲಿತಾಂಶ, ಇಡೀ ಜಗತ್ತಿಗೆ ನೀಡಿರುವ ಸಂದೇಶ ಬಹಳ ಮಹತ್ತರವಾದುದು, ಸ್ವತಂತ್ರ ಭಾರತದ ನಿರಂತರ ತಲೆನೋವಾಗಿ, ನೆತ್ತಿಯ ಹುಣ್ಣಾಗಿದ್ದ ಕಾಶ್ಮೀರ, ಕೆಲವರ ಪಾಲಿಗೆ, ನೆರೆ ರಾಷ್ಟ್ರಗಳ ದೃಷ್ಟಿಯಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ, ಅಭದ್ರತೆಯ ಹಾಗೂ ಅಶಾಂತಿಯ ತಾಣವಾಗಿತ್ತು. ಅದು ಭಾರತದ ಭಾಗ ಎಂಬುದು ಮನವರಿಕೆಯಾಗಬೇಕಾದರೆ ಅಲ್ಲಿ ಜನಮತಗಣನೆ ನಡೆಯಬೇಕು ಎಂಬ ಕ್ಲೀಷೆಯ ಕೂಗೂ ಇತ್ತು.ಇದೆಲ್ಲವನ್ನೂ ಅಲ್ಲಿ ನಡೆಯುತ್ತಿದ್ದ ಚುನಾವಣೆಗಳು ನಿರಾಕರಿಸುತ್ತಲೇ ಬಂದಿದ್ದರೂ, ಈ ಚುನಾವಣೆ ನೀಡಿದ ಸಂದೇಶ ಹಾಗೂ ಅಲ್ಲಿ ಬಿಜೆಪಿಯ ಸ್ಥಾನ ಗಳಿಕೆ, ಕಾಂಗ್ರೆಸ್ನ ನಿಲುವು- ಎಲ್ಲವೂ ಪರಿಣಾಮಕಾರಿ.
ಭಾರತ ದೇಶದ ಚಿತ್ರವನ್ನು ಕಣ್ಣಮುಂದೆ ತಂದುಕೊಳ್ಳುವಾಗ ದೇಶದ ಮುಕುಟವಾದ ಜಮ್ಮು ಮತ್ತು ಕಾಶ್ಮೀರದ ಇಲ್ಲದೆ ಇರುವುದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಸಂವಿಧಾನದ 370 ಮತ್ತು 35 ಎ ವಿಧಿಯನ್ನೇ ಅಸ್ತ್ರವಾಗಿಸಿಕೊಂಡಿದ್ದ
ಕಾಶ್ಮೀರದ ಪ್ರತ್ಯೇಕತಾವಾದಿಗಳು, ಭಾರತೀಯರ ಕಲ್ಪನೆಗೆ ಕೊಳ್ಳಿ ಇಟ್ಟಿದ್ದರು. ಈ ಹಿಂದಿನ ಭಾರತದ ರಾಜಕೀಯ ನೇತಾರರು ಸಂವಿಧಾನಬದ್ಧವಾಗಿ ಎಸಗಿದ್ದ ಪ್ರಮಾದ, ಪ್ರತ್ಯೇಕತಾವಾದಿಗಳಿಗೆ ಆಡಿದ್ದೇ ಆಟ, ಹೂಡಿದ್ದೇ ಹೂಟ ಎಂಬಂತಾಗಿತ್ತು. ಪರಿಣಾಮ, ಹೆಚ್ಚೂ ಕಡಿಮೆ ಕಾಶ್ಮೀರ ಭಾರತದ ಕೈತಪ್ಪಿಯೇ ಹೋಯಿತೆಂಬ ಆತಂಕ, ಎಪ್ಪತ್ತು ವರ್ಷಗಳಿಂದ ಜೀವಂತವಾಗಿತ್ತು. ಬಿಜೆಪಿ ತನ್ನ ಅಧಿಕಾರದ ಎರಡನೇ ಪರ್ವದ ಶುರುವಿನಲ್ಲಿಯೇ ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. 16 ತಿಂಗಳುಗಳ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿಯ ನಿರ್ಧಾರಕ್ಕೆ ಹಸಿರು ಮುದ್ರೆ ದೊರೆತಿದೆ.
ಅಲ್ಲಿನ ಜಿಲ್ಲಾಭಿವೃದ್ಧಿ ಸಮಿತಿಗೆ ನಡೆದ ಚುನಾವಣಾ ಫಲಿತಾಂಶದಲ್ಲಿ ಕಾಶ್ಮೀರದ ಪ್ರಜೆಗಳೇ ಇದನ್ನು ಸಾರಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಎಂದೂ ಪರಸ್ಪರ ಮುಖ ನೋಡಿಕೊಳ್ಳಲೂ ಸಿದ್ಧರಿಲ್ಲದ ಸ್ವಾರ್ಥಿಗಳಾದ, ಸದಾ ದೇಶದ್ರೋಹದ ವರ್ತನೆಯನ್ನು ಪ್ರದರ್ಶನ ಮಾಡಲು ಹಿಂದೆಮುಂದೆ ನೋಡದ ಫರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾರ ನ್ಯಾಷನ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮತ್ತು ಇತರ ಹತ್ತಾರು ಪಕ್ಷಗಳು ಒಟ್ಟಾಗಿ ಮುನ್ನಡೆ ಸಾಧಿಸಿದ್ದರೂ, 75 ಸ್ಥಾನಗಳನ್ನು ಪಡೆದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ರಾಜಕೀಯವಾಗಿ ಹೆಚ್ಚು ಮಹತ್ವದ್ದು. ಇದು ಭವಿಷ್ಯದ ಕಾಶ್ಮೀರ ರಾಜಕಾರಣ ಹಾಗೂ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದು ಅನೇಕ ರಾಜಕೀಯ ಪರಿಣಿತರು ವ್ಯಕ್ತಪಡಿಸಿರುವ ಖಚಿತ ಅಭಿಪ್ರಾಯ.
ತಿಳಿಯಾದ ದಶಕಗಳ ಆತಂಕ!
2016ರಲ್ಲಿ ಕಾಶ್ಮೀರದ ಪ್ರತ್ಯೇಕತಾವಾಗಿ ಉಗ್ರ ಬುರ್ಹನ್ ವಾನಿಯನ್ನು ಭದ್ರಯಾ ಪಡೆಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಉಂಟಾದ ಕ್ಷೋಭೆ, ಕಾಶ್ಮೀರಕ್ಕೆ ಆವರಿಸಿದ ಪ್ರಕ್ಷುಬ್ದತೆ ಅಷ್ಟಿಷ್ಟಲ್ಲ. ಭಾವನಾತ್ಮಕವಾಗಿ ಕಾಶ್ಮೀರವನ್ನು ಹೆಚ್ಚೂ ಕಡಿಮೆ ಭಾರತದಿಂದ ಪ್ರತ್ಯೇಕಿಸಿಬಿಟ್ಟಿದ್ದ 370ನೇ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಬೇರು ಬಿಟ್ಟಿರುವ ಫರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಅಂಥವರು ಹೊಟ್ಟೆಪಾಡಿಗೆ ಚೀರಾಟ ಶುರು ಮಾಡುತ್ತಾರೆಂಬುದು ನಿರೀಕ್ಷಿತವಾಗಿತ್ತು. ಪ್ರತ್ಯೇಕತಾವಾದಿ ಸಂಘಟನೆಗಳು ಹಿಂಸಾಚಾರಕ್ಕೆ ಇಳಿಯುತ್ತವೆಂಬುದೂ ನಿರೀಕ್ಷಿತವೇ ಆಗಿತ್ತು. ಆದರೆ ಕಾಶ್ಮೀರದ ಪ್ರಜ್ಞಾವಂತ ಜನರು ಈ ನಿರ್ಧಾರವನ್ನು ಹೇಗೆ ಸ್ವೀಕರಿಸುತ್ತಾರೆಂಬುದು ನಿಗೂಢ ಪ್ರಶ್ನೆಯಾಗಿತ್ತು. ಜಮ್ಮು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿಗೆ ನಡೆದ ಚುನಾವಣಾ ಫಲಿತಾಂಶದ ಬಳಿಕ ಕಾಶ್ಮೀರದ ಜನರು ಭಾರತ ಸರಕಾರದ ನಿರ್ಧಾರದೊಂದಿಗೇ ಇದ್ದಾರೆಂಬುದು ನಿಚ್ಚಳವಾಯಿತು.
ಬೆಳವಣಿಗೆಗಳು ಸಂವಿಧಾನದ ಆಶಯಕ್ಕೆ ಪೂರಕ
ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾದೇಶಕ್ಕೇ ಮೊದಲ ಪ್ರಾಶಸ್ತ್ಯ. 2019ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ವಾಗ್ದಾನ ಮಾಡಿತ್ತು. ಆ ಪ್ರಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಲಾಯಿತು. 2019ರ ಆಗಸ್ಟ್ ನಲ್ಲಿ ಸಂಸತ್ತು ಅನುಮೋದನೆ ಮಾಡಿದ ಕಾಶ್ಮೀರ ಪುನರ್ ಸಂಘಟನೆ ಕಾಯಿದೆ ಪ್ರಕಾರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಸ್ಥಳೀಯಾಡಳಿತದಲ್ಲಿ ಭಾರತ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಕುರಿತೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಅದಕ್ಕೆ ಪೂರಕವಾಗಿ ಜಮ್ಮು ಮತ್ತು ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ದೃಷ್ಟಿಯಿಂದಲೂ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಹೀಗಾಗಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ವಿರೋಧಿಸಿ ಹೋರಾಟಕ್ಕೆ ಇಳಿದಿದ್ದ ಪ್ರತ್ಯೇಕತಾವಾದಿ ನಾಯಕರನ್ನು ಮತ್ತು ಅವರ ಬೆಂಬಲಕ್ಕೆ ನಿಂತ ಕಾಶ್ಮೀರದ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದು, ಗೃಹಬಂಧನವನ್ನು ಪ್ರಶ್ನೆಮಾಡಿ ಗೊಂದಲ ಸೃಷ್ಟಿಸುವ ಸಾಮಾಜಿಕ ಜಾಲತಾಣ, ಮಾಧ್ಯಮದ ಒಂದು ವರ್ಗವನ್ನು ತಹಬಂದಿಗೆ ತೆಗೆದುಕೊಂಡಿದ್ದನ್ನೆಲ್ಲ ಕಾಯಿದೆ ಉಲ್ಲಂಘನೆ ಎಂದು ಹೇಳುವುದ ಕಷ್ಟ. ಈ ಎಲ್ಲ ಸಂಗತಿಗಳನ್ನು ಬದಿಗಿಟ್ಟು ಇನ್ನೊಂದು ಅಂಶದ ಕಡೆ ನಾವು ಗಮನ ಹರಿಸಬೇಕಾಗುತ್ತದೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಮಾತನಾಡುತ್ತ ಒಂದು ಭರವಸೆ ನೀಡಿದ್ದರು . ಅದೇನೆಂದರೆ ಜಮ್ಮು ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದಕ್ಕೆ ಮುಕ್ತ ಮನಸ್ಸನ್ನು ಹೊಂದಿದ್ದೇವೆ ಎಂದಿದ್ದರು. ಬಹುಶಃ ಈಗ ಬಿಜೆಪಿಗೆ ಸಿಕ್ಕಿರುವ ಜನಾದೇಶ ಅಥವಾ ಸ್ಥಳೀಯ ಜನರ ಬೆಂಬಲ ಜಮ್ಮು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದರ ಕಡೆ ಮೊದಲ ಹೆಜ್ಜೆ ಎಂದು ಪರಿಗಣಿಸಬಹುದು. ಅರ್ಧ ಆಗಿರುವ ಕೆಲಸ ಪೂರ್ಣಗೊಳ್ಳುವುದು ಅಲ್ಲಿನ ಜನರ ನೀತಿ ನಿರ್ಧಾರ ನಡವಳಿಕೆಗಳ ಮೇಲೆ ನಿಂತಿದೆ ಎಂದು ಭಾವಿಸೋಣ.
ಬದಲಾದ ಕಾಶ್ಮೀರ ಬಲಿಷ್ಠ ಭಾರತದ ಭರವಸೆ
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಭಾರತದ ಪಾಲಿಗೆ ಒಂದು ರೀತಿಯಲ್ಲಿ ಭಾರತದ ಭದ್ರತೆ ಮತ್ತು ಸಮಗ್ರತೆ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಎನ್ನುವಂತಾಗಿತ್ತು. 2019ರ ಜೂನ್ ಆಗಸ್ಟ್ ತಿಂಗಳಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ ಆಗುವ ಹೊತ್ತಿಗೆ ಸರಿಯಾಗಿ ಆಘ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಘೋಷಣೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡಿಬಿಟ್ಟಿದ್ದರು. ಅಮೆರಿಕ ಪಡೆಗಳ ಹಿಂತೆಗೆತ ಎಂದರೆ ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಆಡಳಿತ ಜಾರಿ ಎಂದು ಬೇರೆ ಹೇಳಬೇಕಿಲ್ಲ, ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಚಿಗಿತುಕೊಂಡರೆ ಇತ್ತ ಕಾಶ್ಮೀರದಲ್ಲಿ ಪಾಕ್/ ಆಫ್ಘಾನ್ ಪ್ರಚೋದಿತ ಉಗ್ರರ ಅಟ್ಟಹಾಸವೂ ಚಿಗಿತುಕೊಳ್ಳುತ್ತಿತ್ತು. ಆ ದೃಷ್ಟಿಯಿಂದ ನೋಡಿದರೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಭಾವನಾತ್ಮಕತೆಗಿಂತಲೂ ವ್ಯಾವಹಾರಿಕೆವಾಗಿ ಹೇಗೆ ಮಹತ್ವದ್ದು ಎಂಬುದು ಮನವರಿಕೆ ಆಗುತ್ತದೆ.
ಕಾಂಗ್ರೆಸ್ ನಿಲುವು ಸರಿಯಾಗಿದೆ
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಭಾರತ ಸರಕಾರದ ಕ್ರಮವನ್ನು ವಿರೋಧಿಸಿ ಕಾಶ್ಮೀರದ ಪ್ರತ್ಯೇಕತಾವಾದಿಗಳು. ಕಾಶ್ಮೀರದ ರಾಜಕೀಯ ಪಕ್ಷಗಳು ಹಮ್ಮಿಕೊಂಡ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಕೂಡ ಕೈ ಜೋಡಿಸಿ ಪ್ರಮಾದ ಮಾಡಿತ್ತು. ಆದರೆ ಈಗಷ್ಟೇ ಮುಕ್ತಾಯವಾದ ಜಮ್ಮು ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಗುಪ್ಕರ್ ಮೈತ್ರಿಕೂಟ ಸೇರದೆ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡು ಸರಿಯಾದ ಹೆಜ್ಜೆ ಇಟ್ಟಿತು, ಅಥವಾ ಈ ಹಿಂದೆ ತಪ್ಪಿದ ಹೆಜ್ಜೆಯನ್ನು ಸರಿಪಡಿಸಿಕೊಂಡಿತು. ಇದೂ ಕೂಡ ಕಾಶ್ಮೀರದ, ಆ ಮೂಲಕ ಭಾರತದ ಶಾಂತಿ ಮತ್ತು ಸ್ಥಿರತೆಯಲ್ಲಿ ಮಹತ್ವದ ಮೈಲಿಗಲ್ಲು. ಕಾಂಗ್ರೆಸ್ ಪಕ್ಷ ಇತರೆಡೆಯಲ್ಲಿ ಮತ್ತೆ ಚೇತರಿಸಿಕೊಳ್ಳುವ ನಿಟ್ಟಿನಲ್ಲೂ ಈ ನಿಲುವು ಒಂದು ದಿಕ್ಸೂಚಿ ಆದರೆ ಒಳ್ಳೆಯದು.
ಅಷ್ಟು ಮಾತ್ರವಲ್ಲ,ಬಿಜೆಪಿ ಒಂದು ಪಕ್ಷವಾಗಿ ತಳಮಟ್ಟದಲ್ಲಿ ಸಂಘಟನೆ ಬಲಪಡಿಸುತ್ತಿರುವ ರೀತಿ,ಪಕ್ಷದ ವೈಚಾರಿಕ ನಿಲುವಿಗೆ ಪೂರಕವಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು,ರೂಪಿಸುತ್ತಿರುವ ಕಾರ್ಯಕ್ರಮಗಳು ದೇಶದ ಎಲ್ಲ ಪಕ್ಷಗಳು ಅನುಸರಿಸಬಹುದಾದ ಮಾದರಿ.
ಕ್ಷೇತ್ರ ಮರುವಿಂಗಡಣೆ ಅಂತಿಮ ಪರಿಹಾರ
ಇನ್ನು ಜಮ್ಮು ಕಾಶ್ಮೀರದ ವಿಧಾನಸಭೆ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯಸೂಚಿಯೊಂದು ಬಾಕಿ ಉಳಿದಿದೆ. ಕ್ಷೇತ್ರ ಮರುವಿಂಗಡನೆ ಮಾಡಿದಾಗ ಚಿಕ್ಕ ವಿಧಾನಸಭಾ ಕ್ಷೇತ್ರಗಳು ಹಾಗೂ ಹೆಚ್ಚಿನ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳು ರಚನೆ ಆಗುತ್ತವೆ. ಆಗ ಆ ಸಂಖ್ಯೆಗೆ ಅನುಗುಣವಾಗಿ ಎಸ್ಸಿ,ಎಸ್ಟಿ ಮೀಸಲು ಕ್ಷೇತ್ರಗಳ ಸಂಖ್ಯೆನ್ನು ಹೆಚ್ಚಿಗೆ ಮಾಡಬೇಕಾಗುತ್ತದೆ. ಅಲ್ಲಿಗೆ ಜಮ್ಮುಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ರಾಜಕೀಯ ಅಟಾಟೋಪ ಪೂರ್ಣ ತಹಬಂದಿಗೆ ಬರುವ ನಿರೀಕ್ಷೆಯನ್ನು ಎಲ್ಲರೂ ಇಟ್ಟುಕೊಳ್ಳಬಹುದು.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top