– ಭೋಪಾಲ್ ದುರಂತವನ್ನು ನೆನಪಿಸಿದ ವಿಷಾಖಪಟ್ಟಣಂನ ವಿಷಾನಿಲ ಸೋರಿಕೆಗೆ 11 ಬಲಿ
– ನೋಡನೋಡುತ್ತಿದ್ದಂತೆಯೇ ಬಿದ್ದು ಒದ್ದಾಡಿದ ಜನ
– ಪ್ರಾಣಿಗಳೂ ಸಾವು | ಸಾವಿರಾರು ಮಂದಿ ಅಸ್ವಸ್ಥ
ವಿಶಾಖಪಟ್ಟಣಂ: ನಲವತ್ತಾರು ವರ್ಷಗಳ ಹಿಂದೆ ನಡೆದ ಭೋಪಾಲ್ ವಿಷಾನಿಲ ದುರಂತವನ್ನೇ ನೆನಪಿಸುವ ಅನಿಲ ಸೋರಿಕೆ ಘಟನೆ ಗುರುವಾರ ನಸುಕಿನ ಜಾವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಂಭವಿಸಿದೆ. ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಅಸ್ವಸ್ಥರಾಗಿದ್ದಾರೆ.
ಆರ್ ಆರ್ ವೆಂಕಟಾಪುರಂ ಗ್ರಾಮದ ಎಲ್‌ಜಿ ಪಾಲಿಮರ್ಸ್ ಕೆಮಿಕಲ್ ಪ್ಲ್ಯಾಂಟ್‌ನಲ್ಲಿ ಲಾಕ್‌ಡೌನ್ ಬಳಿಕ ಘಟಕ ಪುನರಾರಂಭಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಗುರುವಾರ ನಸುಕಿನ 3 ಗಂಟೆ ಸುಮಾರಿಗೆ ಸ್ಟೈರಿನ್ ಎಂಬ ವಿಷಾನಿಲ ಸೋರಿಕೆಯಾಗಿದೆ.
ಘಟಕದ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ವಿಷಾನಿಲ ಪಸರಿಸಿದ್ದು ಬೆಳಗ್ಗೆ ಎದ್ದು ಹೊರಗೆ ಬರುತ್ತಿದ್ದಂತೆಯೇ ಉಸಿರಾಟ, ಕಣ್ಣುರಿ, ಗಂಟಲು ನೋವು ಮೊದಲಾದ ಸಮಸ್ಯೆಗಳಿಗೆ ಒಳಗಾದರು. ಅಸ್ವಸ್ಥಗೊಂಡು ರಸ್ತೆ, ಚರಂಡಿ.. ಹೀಗೆ ಎಲ್ಲೆಂದರಲ್ಲಿ ಬಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾವಿರಾರು ಮಂದಿಯನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಿದರು. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳು ಐದು ಗ್ರಾಮಗಳ ಜನರನ್ನು ಸ್ಥಳಾಂತರಿಸಿವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಪ್ರಜ್ಞಾಹೀನರು ಇದ್ದಿರಬಹುದೆಂಬ ಅಂದಾಜಿನಲ್ಲಿ ಎನ್‌ಡಿಆರ್‌ಎಫ್ ತಂಡಗಳು ಪ್ರತಿ ಮನೆಗಳಿಗೂ ತೆರಳಿ
ಪರಿಶೀಲನೆ ನಡೆಸಿವೆ.
ಪ್ರಧಾನಿ ಮೋದಿ ಭರವಸೆ
ದುರಂತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಎನ್‌ಡಿಆರ್‌ಎಫ್ ತಂಡಗಳ ರವಾನೆ ಜತೆಗೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಸಂಪುಟ ಕಾರ್ಯದರ್ಶಿ, ಎನ್‌ಡಿಆರ್‌ಎಫ್, ಏಮ್ಸ್ ನಿರ್ದೇಶಕರು ಹಾಗೂ ವೈದ್ಯಕೀಯ ತಜ್ಞರೊಂದಿಗೆ ಮಾತುಕತೆ ನಡೆಸಿ ತಜ್ಞರ ತಂಡಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಏನಿದು ಎಲ್‌ಜಿ ಪ್ಲ್ಯಾಂಟ್?
ಎಲ್‌ಜಿ ಪಾಲಿಮರ್ಸ್ ಪ್ಲ್ಯಾಂಡ್‌ನಲ್ಲಿ ವಿದ್ಯುತ್ ಫ್ಯಾನ್ ಬ್ಲೇಡ್ಸ್, ಕಫ್ಸ್, ಮೇಕಪ್‌ಗೆ ಬೇಕಾಗುವ ಉತ್ಪನ್ನಗಳು, ರಬ್ಬರ್ ಮ್ಯಾಟ್, ಪ್ಲಾಸ್ಟಿಕ್ ಕೊಳವೆ ಇತ್ಯಾದಿಗಳ ಉತ್ಪನ್ನಗಳ ತಯಾರಿಕೆಗೆ ಸ್ಟೈರಿನ್ ರಾಸಾಯನಿಕ ಬಳಸಲಾಗುತ್ತಿತ್ತು. ಇದೊಂದು ಬಣ್ಣ ರಹಿತ ದ್ರವವಾಗಿದ್ದು ಸುಲಭವಾಗಿ ಹೊತ್ತಿ ಉರಿಯಬಲ್ಲ ಹಾಗೂ ಆವಿಯಾಗುವ ಗುಣ ಹೊಂದಿದೆ.
ಆಗಿದ್ದೇನು?
ಘಟಕದಲ್ಲಿ 2000 ಟನ್ ಸಾಮರ್ಥ್ಯದ ಎರಡು ಸ್ಟೈರಿನ್ ಅನಿಲ ಘಟಕಗಳಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ 40 ದಿನಗಳ ಬಳಿಕ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸುವ ವೇಳೆ ರಾಸಾಯನಿಕ ಸೋರಿಕೆಯಾಗಿದೆ. ರಾಸಾಯನಿಕ ಕ್ರಿಯೆ ಏರ್ಪಟ್ಟು ಅತಿಯಾದ ಶಾಖದಿಂದ ಅನಿಲ ಸೋರಿಕೆಯಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಕಂಪನಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬ ಆಪಾದನೆಗಳು ಕೇಳಿಬಂದಿವೆ.
ಕಂಡಕಂಡಲ್ಲಿ ಕುಸಿದು ಬಿದ್ದರು
ಘಟಕದ ಸಮೀಪದ ಗ್ರಾಮಸ್ಥರು ಬೆಳಗು ಹರಿಯುತ್ತಿದ್ದಂತೆ ಹೊರಗೆ ಬಂದ ಕೆಲವೇ ಹೊತ್ತಿನಲ್ಲಿ ತೀವ್ರತರದ ಉಸಿರಾಟ ಸಮಸ್ಯೆ ಅನುಭವಿಸಿದರು. ನೋಡ ನೋಡುತ್ತಿದ್ದಂತೆಯೇ ರಸ್ತೆ ಮಧ್ಯೆ ಪ್ರಜ್ಞಾಹೀನರಾಗಿ ಬಿದ್ದ, ಕಣ್ಣುರಿಯಿಂದ ಬೈಕ್ ಸವಾರಿರಬ್ಬರು ಪರಸ್ಪರ ಡಿಕ್ಕಿ ಹೊಡೆದು ಮೃತಪಟ್ಟ, ಇದ್ದಕ್ಕಿದ್ದಂತೆ ತರುಣಿಯೊಬ್ಬಳು ಕುಸಿದ, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಪೋಷಕರು ಸಿಕ್ಕ ಸಿಕ್ಕ ವಾಹನಗಳ ಮೂಲಕ ಆಸ್ಪತ್ರೆಯತ್ತ ದೌಡಾಯಿಸುತ್ತಿರುವ ದೃಶ್ಯಗಳು ವಿಷಾನಿಲ ಸೋರಿಕೆಯ ಭೀಕರತೆಗೆ ಸಾಕ್ಷಿಯಾಗಿದ್ದವು.
ಆರೋಗ್ಯದ ಮೇಲೆ ಪರಿಣಾಮ
ಸ್ಟೈರಿನ್ ಅನಿಲ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ. ಅನಿಲ ಸೇವನೆಯಿಂದ ಮಾನವನ ಶ್ವಾಸಕೋಶ, ಜಠರ, ಮೂತ್ರಪಿಂಡಗಳಿಗೆ ಘಾಸಿಯಾಗುತ್ತದೆ. ನರಮಂಡಲದ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ. ಸ್ಟೈರಿನ್ ಕ್ಯಾನ್ಸರ್ಕಾರಕ ಎಂಬ ದೂರಿದೆ.
1 ಕೋಟಿ ರೂ. ಪರಿಹಾರ
ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಆಂಧ್ರ ಪ್ರದೇಶ ಸರಕಾರ ತಲಾ 1 ಕೋಟಿ ರೂ. ಪರಿಹಾರ ಘೋಷಿಧಿಸಿದೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 10 ಲಕ್ಷ ರೂ. ಸಿಗಲಿದೆ. ಆಸ್ಪತ್ರೆ ಸೇರಿದವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.
ದುರಂತವು ಮನಸ್ಸನ್ನು ವ್ಯಾಕುಲಗೊಳಿಸಿದೆ. ಪರಿಸ್ಥಿತಿ ನಿಭಾಯಿಸಲು ಎನ್‌ಡಿಆರ್‌ಎಫ್ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುವೆ.
-ಅಮಿತ್ ಶಾ ಗೃಹ ಸಚಿವ