ಅಲೌಕಿಕ ಸಂಸಾರಿV/S ಲೌಕಿಕ ಸನ್ಯಾಸಿ…

ಹೀಗೊಂದು ಕಥೆ…ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು ಬುದ್ಧ ಕಿಸಾಗೌತಮಿಗೆ ಹೇಳಿದ ಕಥೆಯ ರೀತಿಯಲ್ಲಿರುವ ಇನ್ನೊಂದು ಕಥೆಯಿದು.
ಒಂದಾನೊಂದು ಕಾಲದಲ್ಲಿ ಬಲೇ ಪ್ರಖ್ಯಾತನಾದ ಓರ್ವ ರಾಜ ಇದ್ದ. ಅಧಿಕಾರ, ಐಶ್ವರ್ಯ, ಆರೋಗ್ಯ ಎಲ್ಲವೂ ಅವನಲ್ಲಿ ಇತ್ತು. ಅಪಾರ ಪ್ರಜಾ ಬೆಂಬಲವೂ ಇತ್ತು. ವಿರೋಧಿಗಳಿಗೂ ಆತನೆಂದರೆ ಒಂದು ತೆರನಾದ ಭಯ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ರಾಜ್ಯ ಸುಭಿಕ್ಷ ವಾಗಿತ್ತು. ಇಷ್ಟಾದರೂ ರಾಜನಿಗೆ ನೆಮ್ಮದಿ ಎಂಬುದಿರಲಿಲ್ಲ. ಸದಾ ದುಃಖ, ಕೊರಗಿನಲ್ಲೇ ಇರುತ್ತಿದ್ದ. ಮನೋ ಸಂತೋಷ ಅರಸಿಕೊಂಡು ದಿನವೂ ಸಾಧು ಸಂತರನ್ನು ಸಂದರ್ಶನ ಮಾಡುತ್ತಿದ್ದ. ಆದರೆ ಪ್ರಯೋಜನ ಆಗುತ್ತಿರಲಿಲ್ಲ. ಈ ನಡುವೆ ರಾಜಧಾನಿಗೆ ಸಾಧುವೊಬ್ಬರ ಆಗಮನವಾಯಿತು. ಅವರ ಬಳಿ ಹೋಗಿ ತನ್ನ ದುಗುಡವನ್ನು ರಾಜ ನಿವೇದಿಸಿಕೊಂಡ. ರಾಜ ಅಳಲು ತೋಡಿಕೊಳ್ಳುತ್ತಿದ್ದಂತೆ ಮಹಾರಾಜರೆ ನಿಮ್ಮ ದುಃಖ ದೂರಮಾಡಬಲ್ಲ ಮಹದುಪಾಯವೊಂದು ತನ್ನ ಬಳಿ ಇದೆಯೆಂದು ಹೇಳಿದ ಆ ಸಾಧು, ‘‘ನಿಮ್ಮ ರಾಜ್ಯದಲ್ಲಿ ಅತ್ಯಂತ ಸಂತುಷ್ಟನಾಗಿರುವ, ದುಃಖದ ಲವಲೇಶವೂ ಇರದ ನಿಷ್ಕಲ್ಮಶ ವ್ಯಕ್ತಿಯ ಅಂಗಿಯನ್ನು ನೀನು ಹಾಕಿಕೊಂಡರೆ ನಿನ್ನನ್ನು ಆವರಿಸಿರುವ ದುಃಖವೆಲ್ಲ ದೂರವಾಗಿ ನೆಮ್ಮದಿ ದೊರಕುತ್ತದೆ,’’ ಎಂದು ಸೂಚಿಸಿದರು.
ಒಂದು ಕ್ಷ ಣವೂ ತಡಮಾಡದೆ ಡಂಗುರ ಸಾರಿ ರಾಜ ಮಂತ್ರಿಗಳು ಮತ್ತು ಧನಿಕರ ಸಭೆಯನ್ನು ಕರೆದ. ಸಾಧುಗಳು ಹೇಳಿದ ವಿಚಾರವನ್ನು ಉಲ್ಲೇಖಿಸಿ ನಿಮ್ಮಲ್ಲಿ ಯಾರಾದರೂ ನಿಷ್ಕಲ್ಮಶ ಸಂತಸವನ್ನು ಹೊಂದಿದವರಿದ್ದರೆ ಅವರ ಅಂಗಿಯನ್ನು ನನಗೆ ತಂದು ಕೊಡಿ ಎಂದು ಅಪ್ಪಣೆ ಮಾಡಿದ. ಅದರೆ ಅಲ್ಲಿ ನೆರೆದಿದ್ದವರೆಲ್ಲ ತಮಗೆ ಒಂದಿಲ್ಲೊಂದು ಕೊರಗಿದ್ದೇ ಇದೆ ಎಂದು ಜಾರಿಕೊಂಡರು. ಆದರೂ ಪ್ರಯತ್ನ ಮುಂದುವರೆಸಿದ ರಾಜ ಊರಲ್ಲೆಲ್ಲ ಡಂಗುರ ಸಾರಿದ. ಹಾಗೆ ಮಾಡಲಾಗಿ ಒಂದು ದಿನ ಸಂತೃಪ್ತ ಸನ್ಯಾಸಿಯೊಬ್ಬರು ಇರುವುದನ್ನು ಯಾರೋ ರಾಜನಿಗೆ ಉಸುರಿದರು. ಉಟ್ಟ ವಸ್ತ್ರದಲ್ಲೇ ರಾಜ ಆತನಲ್ಲಿಗೆ ಓಡಿದ. ಆ ವ್ಯಕ್ತಿ ಹಳ್ಳಿಗಾಡಿನ ನದಿ ಪಕ್ಕದ ಪುಟ್ಟ ಜೋಪಡಿಯೊಂದರಲ್ಲಿ ವಾಸವಾಗಿದ್ದ. ಅವನ ಗುಡಿಸಲಿನಲ್ಲೋ ಊಟಕ್ಕೂ ತತ್ವಾರ. ಕೂರಲು ಚಾಪೆಯೂ ಇರಲಿಲ್ಲ. ಅದ್ಯಾವುದನ್ನೂ ಗಮನಿಸದ ರಾಜ ಆ ವ್ಯಕ್ತಿಯನ್ನು ತಬ್ಬಿಕೊಂಡು, ‘‘ನನಗೆ ನೀನೊಂದು ಉಪಕಾರ ಮಾಡು, ನಿನ್ನ ಅಂಗಿಯನ್ನು ನನಗೆ ಕೊಟ್ಟುಬಿಡು, ನೀನು ಕೇಳಿದ್ದನ್ನೆಲ್ಲ ಕೊಡುವೆ,’’ ಎಂದ. ಆದರೆ ಆ ಸಂತೃಪ್ತ ಸನ್ಯಾಸಿ ಅಸಹಾಯಕನಾಗಿದ್ದ. ಆತನ ಬಳಿ ಅಂಗಿ ತೊಡುವಷ್ಟೂ ಅನುಕೂಲವಿರಲಿಲ್ಲ. ಹಾಗಾಗಿ ಆತ ಅಂಗಿ ತೊಡುವ ಗೊಡವೆಗೇ ಹೋಗಿರಲಿಲ್ಲ. ರಾಜನ ದುಃಖ ಕೊನೆಗೂ ದೂರವಾಗಲೇ ಇಲ್ಲ!
ಹಾಗಾದರೆ ಇಲ್ಲಿ ರಾಜ ಹೆಚ್ಚಾ ಇಲ್ಲ ಸನ್ಯಾಸಿ ಹೆಚ್ಚಾ?!
ಸನ್ಯಾಸತ್ವದ ಕುರಿತು, ಸನ್ಯಾಸಿಗಳ ಕುರಿತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಪೀಠಿಕೆಯ ಉದಾಹರಣೆ ಅಷ್ಟೆ. ನೀವೆಲ್ಲ ಪ್ರತ್ಯಕ್ಷ ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಯಾರೋ ಒಬ್ಬರಿಗೆ ತಾನು ಮುಖ್ಯಮಂತ್ರಿಯಾಗಬೇಕೆಂಬ ಹಂಬಲವಿರುತ್ತದೆ. ಇನ್ಯಾರಿಗೋ ಉಪ ಮುಖ್ಯಮಂತ್ರಿ, ಕನಿಷ್ಠ ಓರ್ವ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಆಗ ಅದನ್ನು ನೇರವಾಗಿ ಹೇಳಿಕೊಳ್ಳುವ ಬದಲು ನಾನು ಸನ್ಯಾಸಿಯಲ್ಲ ಎಂದು ಹೇಳುತ್ತ ತನ್ನಲ್ಲಿರುವ ಬಯಕೆಯನ್ನು ಹಕ್ಕಿನ ರೂಪದಲ್ಲಿ ಯಾವುದೇ ಮುಚ್ಚುಮರೆ, ಅಂಜಿಕೆ ಅಳುಕು ಯಾವುದೂ ಇಲ್ಲದೆ ಹೇಳಿಕೊಳ್ಳುತ್ತಾರೆ.
ಇಲ್ಲಿ ಜಿಜ್ಞಾಸೆ ಉಂಟಾಗುವುದು ಸಂಸಾರಿ ಆದವನು ಏನು ಬೇಕಾದ್ದನ್ನೆಲ್ಲ ಪಡೆಯಬಹುದೇ, ಮಾಡಬಹುದೇ ಎಂಬುದು ಒಂದು. ಹಾಗೆಯೇ ಸನ್ಯಾಸಿ ಆದವನು ಆಸೆ, ಆಕಾಂಕ್ಷೆ, ಗೊತ್ತುಗುರಿ ಏನೂ ಇಲ್ಲದವನೇ ಎಂಬುದು ಮತ್ತೊಂದು.
ಹಿಂದು ಫಿಲಾಸಫಿಯಲ್ಲಿ ವ್ಯಕ್ತಿಯ ಜೀವನದ ಕೊನೆಯ (ಬ್ರಹ್ಮಚರ‍್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ) ಹಂತ ಸನ್ಯಾಸ. ಅದಕ್ಕಿಂತಲೂ ಭಗವದ್ಗೀತೆಯ 18ನೇ ಅಧ್ಯಾಯ, ಕರ್ಮಸನ್ಯಾಸ ಯೋಗದ ಸಂದರ್ಭದಲ್ಲಿ ಕೃಷ್ಣಾರ್ಜುನರ ನಡುವೆ ನಡೆಯುವ ಸಂಭಾಷಣೆಯಲ್ಲಿ ಸನ್ಯಾಸಿ ಮತ್ತು ಸಂಸಾರಿಯ ನಡುವಿನ ವ್ಯತ್ಯಾಸದ ಪ್ರಸ್ತಾಪ ಈಗಿನ ಸನ್ನಿವೇಶದಲ್ಲಿ ಹೆಚ್ಚು ಪ್ರಸ್ತುತ. ಅದರಲ್ಲಿ ಗೃಹಸ್ಥರನ್ನೂ ಒಳಗೊಂಡು ಎಲ್ಲ ಸಾಧಕರಿಗೂ ಅನ್ವಯವಾಗುವ ಸನ್ಯಾಸ ಉತ್ತಮವಾದದ್ದು ಎಂಬ ಅರ್ಥ ವ್ಯಕ್ತವಾಗುತ್ತದೆ. ಸನ್ಯಾಸದಲ್ಲಿ ಎರಡು ವಿಧ, ಒಂದು ಕರ್ಮದ ಫಲವನ್ನು ಬಿಡುವುದು. ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಯಾವುದೇ ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು.
ಸನ್ಯಾಸದ ಕುರಿತು ಡಿವಿಜಿಯವರು
ಕಾಷಾಯವೇಂ ತಪಸು,
ಗೃಹಲೋಕ ನಿರ್ವಾಹ
ವೇಷ ತಾಳದ ತಪಸು
ಕಠಿಣ ತೆರ ತಪಸು…ಎನ್ನುತ್ತಾರೆ.
ಹಾಗೇ ಇನ್ನೊಂದು ಕಡೆ
ಮನೆಯೇ ಮಠವೆಂದು ತಿಳಿ
ಬಂಧು ಬಳಗವೇ ಗುರುವು ಎಂದು
ಕಾವಿ ಬಟ್ಟೆ ಧರಿಸಿದವನು ಮಾತ್ರ ತಪಸ್ವಿಯೇ? ತ್ಯಾಗಿಯೇ? ಅಲ್ಲ, ಸಂಸಾರವೂ ಒಂದು ತಪಸ್ಸೇ. ಅದು ವೇಷ ತಾಳದ ತಪಸ್ಸು. ಮನೆಯೇ ನಮ್ಮ ಪಾಠಶಾಲೆ, ಬಂಧುಬಳಗವೇ ನಮ್ಮ ಪಾಲಿಗೆ ಗುರುಗಳು, ಅವರ ಸೇವೆ ನಾವು ಪಡೆವ ಶಿಕ್ಷ ಣ, ಲೋಕಸಂಪರ್ಕವೇ ವಿಶ್ವವಿದ್ಯಾಲಯ, ಮನೆಪಾಠದಿಂದ ನಮ್ಮ ಮನಸ್ಸು ಕೊಳೆ ತೊಳೆದುಕೊಂಡು ಪುಟಗೊಳ್ಳುತ್ತದೆ ಎನ್ನುತ್ತಾರೆ.
ಇಂಗ್ಲಿಷಿನಲ್ಲಿ ಸನ್ಯಾಸ ಪದಕ್ಕೆ ಸಂವಾದಿಯಾಗಿ ‘Abandonment’ ಅನ್ನುವ ಪದಪ್ರಯೋಗವಿದೆ. ಹಾಗಂದರೆ ಸ್ವಂತ ಹಿತಾಸಕ್ತಿಯನ್ನು ತ್ಯಜಿಸುವುದು, ಬಂಧನಗಳಿಂದ ಮುಕ್ತವಾಗುವುದು, ಕಳಚಿಕೊಳ್ಳುವುದು ಇತ್ಯಾದಿ ಅರ್ಥಗಳಿವೆ. ಒಟ್ಟಾರೆ ಹೇಳುವುದಾದರೆ ಅದಕ್ಕೆ ಅಧ್ಯಾತ್ಮದ ಲೇಪವಿದೆ. ಈ ಬಗ್ಗೆ ಬಸವಣ್ಣನವರ ಅನೇಕ ವಚನಗಳನ್ನು ಉದಾಹರಿಸಬಹುದು. ಆ ಪೈಕಿ ಒಂದು ವಚನ ಹೀಗಿದೆ.
ನೂಲಿನೊಳಗೊಂದೆಳೆಯ
ಹೊನ್ನಿನೊಳಗೊಂದರೆಯ
ಇಂದಿಗೆ ನಾಳೆಗೆ ಮಡದಿ ಮಕ್ಕಳಿಗೆಂದು
ಕುದಿದೆನಾದರೆ ತಲೆ ದಂಡ
ಬಟ್ಟೆಯೊಳಗಿನ ಒಂದು ನೂಲು, ಬಂಗಾರದ ಒಂದರೆ, ಗುಲಗುಂಜಿಯಷ್ಟು ಅಂತೀವಲ್ಲ ಅದು, ತೆಗೆದಿಟ್ಟುಕೊಂಡರೆ ತಲೆದಂಡ. ಸಾರ್ವಜನಿಕ ಜೀವನದಲ್ಲಿರುವವರು ಅನುಸರಿಸಬೇಕಾದ ತ್ಯಾಗ, ಪ್ರಾಮಾಣಿಕತೆ ಅಥವಾ ಸನ್ಯಾಸತ್ವದ ಕಲ್ಪನೆಯನ್ನು ಅಥವಾ ಕರ್ಮಫಲ ತ್ಯಾಗದ ಅಗತ್ಯವನ್ನು ಬಸವಣ್ಣನವರು ಹೇಳುತ್ತಾರೆ.
ಈಗಿನ ಆಧುನಿಕ ಕಾಲದಲ್ಲೂ ಅಧಿಕಾರದ ಪದವಿಗೇರುವ ಮುನ್ನ ಸಂವಿಧಾನದಬದ್ಧವಾಗಿ ಪ್ರಮಾಣವಚನ ಸ್ವೀಕರಿಸುವಾಗ ಉಲ್ಲೇಖವಾಗುವ ಪ್ರಾಮಾಣಿಕವಾಗಿ, ಪ್ರತ್ಯಕ್ಷವಾಗಿ ಇಲ್ಲ ಅಪ್ರತ್ಯಕ್ಷವಾಗಿ ಭಯ,ಪಕ್ಷಪಾತಕ್ಕೆ ಆಸ್ಪದವಿಲ್ಲದೆ ಅಲಂಕರಿಸಿದ ಪದವಿಗೆ ನ್ಯಾಯ ದೊರಕಿಸುತ್ತೇನೆನ್ನುವುದು ನಮ್ಮ ಸಂವಿಧಾನ ನಿರೀಕ್ಷಿಸುವ ಅಧ್ಯಾತ್ಮ, ಸನ್ಯಾಸತ್ವವೇ ಅಲ್ಲದೆ ಮತ್ತೇನು..?
ಆಧುನಿಕ ಸಂದರ್ಭದಲ್ಲಿ ಗಾಂಧೀಜಿ ನಡವಳಿಕೆ, ಸೇವೆಯಲ್ಲಿ ಕಠೋರತೆ ಎಷ್ಟಿರಬೇಕೆನ್ನುವುದಕ್ಕೆ, ‘‘ತಿನ್ನುವ ಅನ್ನದಲ್ಲೂ ರುಚಿಯನ್ನು ಹುಡುಕಬಾರದು,’’ ಎನ್ನುತ್ತಾರೆ. ಕಸ್ತೂರ್‌ ಬಾ ಅವರನ್ನು ಎಳವೆಯಲ್ಲಿಯೇ ವಿವಾಹವಾಗಿ, ನಾಲ್ಕು ಗಂಡು ಮಕ್ಕಳನ್ನು ಹೊಂದಿದ್ದ ಮಹಾತ್ಮ ಗಾಂಧೀಜಿ ಒಂದು ಅರ್ಥದಲ್ಲಿ ಲೌಕಿಕ ಸಂಸಾರಿ. ಆದರೆ, ಗ್ರಾಮ ಪಂಚಾಯಿತಿ ಸದಸ್ಯರಂಥ ಚಿಕ್ಕ ಅಧಿಕಾರವನ್ನೂ ಹೊಂದದೇ, ಬರಿಮೈಯಲ್ಲಿ ಇಡೀ ದೇಶವನ್ನೇ ಪ್ರಭಾವಿಸಿದ ಗಾಂಧಿ ಇನ್ನೊಂದು ಅರ್ಥದಲ್ಲಿ ದೊಡ್ಡ ಸನ್ಯಾಸಿ. ರಾಜಾಜಿ, ಪಂ.ದೀನದಯಾಳ್‌ ಉಪಾಧ್ಯಾಯ, ಶ್ಯಾಮಾಪ್ರಸಾದ್‌ ಮುಖರ್ಜಿ,ಎಪಿಜೆ ಅಬ್ದುಲ್‌ ಕಲಾಂ, ಅಟಲ್‌ ಬಿಹಾರಿ ವಾಜಪೇಯಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಯಾಸಿ ಎನ್ನೋಣವೆ ಇಲ್ಲ ಸಂಸಾರಿ, ರಾಜಕಾರಣಿ ಅಂತ ಅನ್ನೋಣವೇ?
ಇಷ್ಟೆಲ್ಲ ಹೇಳಿದ ಮೇಲೆ ತಾತ್ಪರ್ಯ ಹೇಳಲೇಬೇಕಲ್ಲ! ತಾನು ಸನ್ಯಾಸಿಯಲ್ಲ ಎಂದು ಪೂರ್ವಾಪರ ತಿಳಿಯದೇ ಹೇಳಿಕೊಳ್ಳುವವರಿಗೆ ಅಧಿಕಾರ, ಪದವಿಗಳೆಲ್ಲ ದೊರಕಬೇಕಾ?ದೊರಕುವುದಲ್ಲ,ದೊರಕದಂತೆ‌ ಮಾಡಲು ಇದೇ ನಿಜವಾದ ಅನರ್ಹತೆ ಆಗಬೇಕು!

(ಸೂಚನೆ: ಸಮಕಾಲೀನ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ, ಸದಭಿರುಚಿಯ ಚರ್ಚೆ ಮಾಡುವ,ಆಲೋಚನೆಯಲ್ಲಿ,ಕ್ರಿಯೆಯಲ್ಲಿ ಬದಲಾವಣೆ ತರಬೇಕೆಂಬ ಆಶಯದ ಅಂಕಣ. ಓದುಗರು ಅನಿಸಿಕೆ, ಅಭಿಪ್ರಾಯ ಕಳಿಸಿ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಬಹುದು- ಸಲಹೆ ಸೂಚನೆ ಕೊಡಬಹುದು. )
ಇಮೇಲ್‌ ವಿಳಾಸ:
[email protected]
[email protected]
F/b,twitter, instagram
www.konemane.comನಲ್ಲೂ ಪ್ರತಿಕ್ರಿಯಿಸಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top