ಉತ್ತಮ ಕೆಲಸಕ್ಕೂ ಸಹಕರಿಸದಿದ್ದರೆ ಹೇಗೆ…

bank-rushಓರ್ವ ವ್ಯಕ್ತಿ ಮಾಡಿದ್ದಕ್ಕೆಲ್ಲ ಜೈ ಎನ್ನಬೇಕೆಂಬುದು ಸರಿಯಾದ ವಾದವಲ್ಲ. ಆದರೆ ಸರಿಯಾದ, ಕಠಿಣವಾದ ಮತ್ತು ಬಹು ಅಪೇಕ್ಷಿತವಾದ ಕಾರ್ಯಕ್ಕೆ ಮುಂದಾದಾಗ ಸಹಾಯ, ಸಹಕಾರ ಕೊಡದಿದ್ದರೆ ಆ ವ್ಯಕ್ತಿಗೆ ಮಾತ್ರವಲ್ಲ ರಾಷ್ಟ್ರಕ್ಕೂ ನಷ್ಟವಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಈ ಮಾತು ಹೆಚ್ಚು ಅರ್ಥಪೂರ್ಣ.

ಭಾರತೀಯರಾದ ನಾವು ಬೆಳೆಸಿಕೊಂಡಿರುವ ರೂಢಿಯೇ ಹಾಗೆ. ಯಾರು ಯಾವುದೇ ಯೋಜನೆ ರೂಪಿಸಲಿ ಉಪಯೋಗಕ್ಕಿಂತ ಅದರ ದುರುಪಯೋಗದ ಕಡೆಗೇ ಮೊದಲು ಗಮನ ಕೊಡುತ್ತೇವೆ. ಹೀಗಾಗಿ ಮೂಲಯೋಜನೆ ರೂಪಿಸುವವರು ಅದರ ದುರ್ಬಳಕೆ ಮಾಡಿಕೊಳ್ಳುವವರಿಗೆ ಚಳ್ಳೆಹಣ್ಣು ತಿನ್ನಿಸುವುದು ಹೇಗೆಂಬುದರ ಕುರಿತೇ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ರೂಪಿಸಿದ ಯೋಜನೆ ಶೇ. 50/60ರಷ್ಟು ಸಫಲವಾದರೆ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ಈಗಿನ ನೋಟು ರದ್ದತಿ ಯೋಜನೆಯ ವಿಷಯದಲ್ಲೂ ಅದೇ ಮಾನದಂಡ ಅನುಸರಿಸಿದರೆ ಸರಿಯಾದೀತು.

ಸರ್ಕಾರದ ಯೋಜನೆಗಳ ಸಾಧಕ-ಬಾಧಕಗಳ ವಿಚಾರಕ್ಕೆ ಬಂದಾಗ ಸಾಮಾನ್ಯ ಅಭಿಪ್ರಾಯವೊಂದಿದೆ. ಬಡವರಿಗೋಸ್ಕರ ರೂಪಿಸುವ ಜನಪ್ರಿಯ ಯೋಜನೆಗಳಿಂದಾಗಿ ತೆರಿಗೆ ಹಣವೆಲ್ಲ ವ್ಯರ್ಥವಾಗುತ್ತೆ; ಅದರಿಂದಾಗಿ ಉಳಿದ ಮೂಲಸೌಕರ್ಯ ಯೋಜನೆಗಳಿಗೆ ನಿಧಿಯ ಕೊರತೆ ಆಗುತ್ತದೆ ಎಂಬುದು. ವಾಸ್ತವದಲ್ಲಿ ಇದು ಅರ್ಧಸತ್ಯ ಮಾತ್ರ. ಬಡಬಗ್ಗರಿಗೋಸ್ಕರ ರೂಪಿಸುವ ಯೋಜನೆಗಳಿಗೆ ಬಿಡುಗಡೆ ಆಗುವ ಹಣ ಮಧ್ಯವರ್ತಿಗಳು, ಖದೀಮರು ತಿಂದು ತೇಗಲು ಬಿಡದೆ ನಿಜವಾದ ಫಲಾನುಭವಿಗಳಿಗೆ ತಲುಪುವಂತಾದರೆ ಈಗಿನ ಯೋಜನಾ ವೆಚ್ಚದ ಕಾಲುಭಾಗ ಸಾಕು ಎಂಬುದು ತಜ್ಞರ ಅನಿಸಿಕೆ. ಇದು ಪೂರ್ಣಸತ್ಯ. ಹಾಗಾದರೆ ರೂಪಿಸಿದ ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸಲು ಸರ್ಕಾರಗಳು ಆಲೋಚಿಸಬೇಕೋ ಅಥವಾ ಉದಾರ ಯೋಜನೆಗಳನ್ನೇ ನಿಲ್ಲಿಸಿಬಿಡಬೇಕೋ?

ಯೋಜನೆ ಜಾರಿಯಲ್ಲಿ ಇಚ್ಛಾಶಕ್ತಿ, ಪಾರದರ್ಶಕತೆ ಇದ್ದರೆ ಮತ್ತು ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಕೆಲ ಉದಾಹರಣೆಗಳನ್ನು ನೋಡಬಹುದು. ಕೇಂದ್ರ ಸರ್ಕಾರ ಪ್ರತಿವರ್ಷ ಅಗಾಧ ಪ್ರಮಾಣದಲ್ಲಿ ಉತ್ಪಾದಿಸುವ ಯೂರಿಯಾ ರಸಗೊಬ್ಬರದ ವಿಚಾರವನ್ನೇ ತೆಗೆದುಕೊಳ್ಳೋಣ. ಅನೇಕ ವರ್ಷಗಳಿಂದಲೂ ರಸಗೊಬ್ಬರ ಉತ್ಪಾದನೆಗೆ ಲಕ್ಷ ಕೋಟಿ ರೂಪಾಯಿ ತೆರಿಗೆ ಹಣವನ್ನು ಸರ್ಕಾರ ವೆಚ್ಚ ಮಾಡುತ್ತ ಬಂದಿದೆ. ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಉತ್ಪಾದನೆಯನ್ನೂ ಮಾಡಲಾಗುತ್ತಿತ್ತು. ಆದರೂ ರಸಗೊಬ್ಬರ ಕೊರತೆ, ಹಾಹಾಕಾರ ಇಲ್ಲದ ಕಾಲ ಇತ್ತೇ? ಉತ್ಪಾದನೆ ಆದ ರಸಗೊಬ್ಬರ ತಲುಪಬೇಕಾದವರನ್ನು ತಲುಪುತ್ತಿರಲಿಲ್ಲ. ಸರ್ಕಾರದ ವಿತರಣಾ ವ್ಯವಸ್ಥೆಯಲ್ಲಿ ಕೊರತೆ ಇದ್ದರೂ, ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಅದೇ ಗೊಬ್ಬರ ಬೇಕಾದಷ್ಟು ಸಿಗುತ್ತಿತ್ತು. ಇದು ಹೇಗೆ ಸಾಧ್ಯ? ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಸಬ್ಸಿಡಿ ದರದಲ್ಲಿ ಉತ್ಪಾದನೆ ಆಗುವ ರಸಗೊಬ್ಬರದಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡುವ ಒಂದು ಮಾಫಿಯಾವೇ ಕೆಲಸ ಮಾಡುತ್ತಿತ್ತು. ರಸಗೊಬ್ಬರ ಕಾರ್ಖಾನೆಗಳಲ್ಲಿ ಉತ್ಪಾದನೆ ಆಗುವ ಸಬ್ಸಿಡಿ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ದೇಶದ ವಿವಿಧ ಕೆಮಿಕಲ್ ಕಾರ್ಖಾನೆಗಳನ್ನು ಸೇರುತ್ತಿತ್ತು. ಸಬ್ಸಿಡಿ ಯೋಜನೆಯ ಲಾಭ ರೈತರ ಬದಲು ಕೆಮಿಕಲ್ ಉದ್ಯಮಗಳ ಜೇಬು ಸೇರುತ್ತಿತ್ತು. ಇದೇನು ಗುಟ್ಟಿನ ವಿಚಾರ ಆಗಿರಲಿಲ್ಲ. ರಸಗೊಬ್ಬರ ಸಬ್ಸಿಡಿ ಯೋಜನೆಯ ಲೂಟಿ ತಡೆಯಲು ಅನೇಕ ವರ್ಷಗಳ ಹಿಂದೆಯೇ ಒಂದು ಉಪಾಯ ಕಂಡುಹಿಡಿಯಲಾಗಿತ್ತು. ರಸಗೊಬ್ಬರಕ್ಕೆ ನೀಮ್ ಕೋಟ್(ಬೇವು ಲೇಪನ) ಮಾಡಿದರೆ ಅದು ನೇರವಾಗಿ ಹೊಲ ಗದ್ದೆಗಳಿಗೆ ಮಾತ್ರ ತಲುಪುತ್ತದೆ. ಕೆಮಿಕಲ್ ಫ್ಯಾಕ್ಟರಿಗಳಿಗೆ ಅನುಪಯುಕ್ತವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ರಸಗೊಬ್ಬರಕ್ಕೆ ನೀಮ್ೋಟ್ ಮಾಡಬೇಕೇ ಬೇಡವೇ ಎಂಬುದಕ್ಕೆ ಸಂಸತ್ತಿನ ಎಷ್ಟು ಅಮೂಲ್ಯ ಸಮಯವನ್ನು ವ್ಯರ್ಥಮಾಡಿಲ್ಲ ಹೇಳಿ. ಚರ್ಚೆ ಮುಗಿದು ತೀರ್ಮಾನ ಜಾರಿಯಾಗುತ್ತಿ್ತಲಿಲ್ಲ. ಇದೇ ಮೊದಲ ಬಾರಿಗೆ ನೂರಕ್ಕೆ ನೂರರಷ್ಟು ನೀಮ್ೋಟೆಡ್ ಯೂರಿಯಾ ಉತ್ಪಾದನೆ ಶುರುವಾಯಿತು. ಆ ಕೆಲಸವನ್ನು ಕೇಂದ್ರದ ರಸಗೊಬ್ಬರ ಸಚಿವ ಅನಂತಕುಮಾರ್ ಪಟ್ಟು ಹಿಡಿದು ಮಾಡಿದರು. ಈ ಗೊಬ್ಬರ ಉಪಯೋಗ ಆಗದಿರುವುದರಿಂದ ಅದು ಕೆಮಿಕಲ್ ಫ್ಯಾಕ್ಟರಿ ಸೇರುವುದು ಸಂಪೂರ್ಣವಾಗಿ ನಿಂತಿತು. ಅದರ ಫಲವಾಗಿ ಇದೇ ಮೊದಲ ಬಾರಿಗೆ ದೇಶದ ಎಲ್ಲ ಭಾಗಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ದಾಸ್ತಾನಾಗಿದೆ. ಇದರ ನೇರ ಮತ್ತು ಪರೋಕ್ಷ ಪ್ರಯೋಜನ ಅಷ್ಟಿಷ್ಟಲ್ಲ. ಅರೋಗ್ಯಯುಕ್ತ ನೀಮ್ ಕೋಟೆಡ್ ಗೊಬ್ಬರ ಹೆಚ್ಚು ಇಳುವರಿಗೆ ಸಹಕಾರಿ. ರಸಗೊಬ್ಬರದ ಅಡ್ಡ ಪರಿಣಾಮ ತಡೆಗೂ ಅನುಕೂಲ. ಹತ್ತು ಕೇಜಿ ಮಾಮೂಲಿ ರಸಗೊಬ್ಬರ ಬಳಸುವಲ್ಲಿ ಆರರಿಂದ ಎಂಟು ಕೆಜಿ ನೀಮ್ ಕೋಟೆಡ್ ರಸಗೊಬ್ಬರ ಬಳಸಿದರೆ ಸಾಕು. ದೇಶದ ರೈತರು ಬಳಸುವ ಗೊಬ್ಬರ ಪ್ರಮಾಣ ಲೆಕ್ಕ ಹಾಕಿದರೆ ಆಗುವ ಉಳಿತಾಯದ, ವೆಚ್ಚ ಕಡಿತದ ಪ್ರಮಾಣ ಕಡಿಮೆಯಲ್ಲ. ಸಮಸ್ಯೆಗೆ ಪರಿಹಾರ ಇಷ್ಟು ಸರಳ ಇರುವಾಗ ಅದರ ಆಚರಣೆಗೆ ಇಷ್ಟು ವರ್ಷ ತಿಣುಕಾಡಿದ್ದೇಕೆ? ಮುಖ್ಯವಾಗಿ ವಾರ್ಷಿಕವಾಗಿ ಸರ್ಕಾರದ ಬೊಕ್ಕಸದಿಂದ ಸೋರಿಕೆಯಾಗುತ್ತಿದ್ದ ಹತ್ತಾರು ಸಾವಿರ ಕೋಟಿ ರೂಪಾಯಿ ಉಳಿತಾಯವಾಯಿತು.

ಇಂಥದ್ದೇ ಮತ್ತೊಂದು ಯೋಜನೆ ಗ್ಯಾಸ್ ಸಬ್ಸಿಡಿಯದ್ದು. ಗ್ರಾಹಕರ ಖಾತೆಗೆ ನೇರ ನಗದು ಜಮಾ ಜಾರಿಗೆ ಬರುವ ಪೂರ್ವದಲ್ಲಿ ಆಗಿರುವ ಸಬ್ಸಿಡಿ ಸೋರಿಕೆಗೆ ಲೆಕ್ಕವೇ ಇರಲಿಲ್ಲ. ಸಬ್ಸಿಡಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುವುದನ್ನು ಕಡ್ಡಾಯಗೊಳಿಸಿದ ನಂತರ ಶೇ.75ರಷ್ಟು ಸೋರಿಕೆ ನಿಂತು ಹೋಗಿದೆ. ‘ಗಿವ್ ಇಟ್ ಅಪ್’ ಯೋಜನೆ ಪ್ರಚಾರದಿಂದ ಮತ್ತೊಂದಿಷ್ಟು ಅನುಕೂಲವಾಯಿತು. ಇಷ್ಟಾದರೂ ನೂರಕ್ಕೆ ನೂರರಷ್ಟು ಸೋರಿಕೆ ನಿಂತಿದೆ ಅನ್ನುವ ಹಾಗಿಲ್ಲ. ಇನ್ನೂ ಕೆಲ ಖದೀಮರು ಗ್ರಾಹಕರ ಹೆಸರಲ್ಲಿ ಸಿಲಿಂಡರು ಬುಕ್ ಮಾಡಿ ಅವರಿಗೆ ಕಮಿಷನ್ ನೀಡಿ ಮನೆ ಬಳಕೆ ಸಿಲಿಂಡರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಾರೆ. ಮತ್ತಷ್ಟು ಕಟ್ಟುನಿಟ್ಟಿನ ಯೋಜನೆ ಜಾರಿಗೊಳಿಸಿದರೆ ಸಂಪೂರ್ಣ ಅಕ್ರಮ ತಡೆಗಟ್ಟಬಹುದು. ಶೇ.25ರಷ್ಟು ಸೋರಿಕೆ ಇದ್ದರೂ ಸಹ ಗ್ಯಾಸ್ ಸಬ್ಸಿಡಿ ನೇರ ನಗದು ವರ್ಗಾವಣೆಯಿಂದ ವರ್ಷಕ್ಕೆ ಹದಿನೈದು ಸಾವಿರ ಕೋಟಿ ರೂಪಾಯಿ ಸೋರಿಕೆ ತಡೆಯಲಾಗಿದೆ ಎಂಬ ಅಂದಾಜು ಲೆಕ್ಕ ಸಿಕ್ಕಿದೆ. ಇದೇನು ಕಡಿಮೆ ಮೊತ್ತವೇ?

‘ಔಷಧಗಳು ದುಬಾರಿ ಆಗುತ್ತಿವೆ, ಬಡಬಗ್ಗರು ಔಷಧ ತೆಗೆದುಕೊಳ್ಳುವ ಹಾಗಿಲ್ಲ, ಆಸ್ಪತ್ರೆಯ ಮೆಟ್ಟಿಲು ಹತ್ತುವ ಹಾಗಿಲ್ಲ’ ಎಂಬ ಗೊಣಗಾಟವನ್ನು ಕೇಳಿಕೊಂಡೇ ಬರುತ್ತಿದ್ದೇವೆ. ಸಾಮಾನ್ಯ ಔಷಧ-ಮಾತ್ರೆಗಳು ಅಗ್ಗದ ಬೆಲೆಯಲ್ಲಿ ಸಿಗುವಂತಾಗಲು ಬೇರೆಬೇರೆ ಸರ್ಕಾರಗಳು ಅದೆಷ್ಟು ಯೋಜನೆಗಳನ್ನು ರೂಪಿಸಿಲ್ಲ. ಅದೆಷ್ಟು ಹಣ ಬಿಡುಗಡೆ ಮಾಡಿರಲಿಲ್ಲ. ಔಷಧ ಬೆಲೆ ಇಳಿಯಿತೇನು? ಅದೇ ಈಗ ಸರ್ಕಾರದ ಜನರಿಕ್ ಔಷಧ ಮಳಿಗೆಗಳು ಆರಂಭವಾದ ನಂತರದಲ್ಲಿ ಔಷಧ ಮಾಫಿಯಾ ನಿಯಂತ್ರಣಕ್ಕೆ ಬರುತ್ತಿದೆ. ಈ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಉತ್ತಮ ಔಷಧ ಸಿಗುತ್ತಿರುವುದರಿಂದ ಅಕ್ಕಪಕ್ಕದ ಇತರೆ ಔಷಧ ಅಂಗಡಿಯವರೂ ಯೋಗ್ಯ ದರಕ್ಕೇ ಔಷಧ ಮಾರುವುದು ಅನಿವಾರ್ಯವಾಗುತ್ತದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಕ್ ಔಷಧ ಮಳಿಗೆಗಳನ್ನು ತೆರೆದರೆ ಈ ಯೋಜನೆ ಮತ್ತಷ್ಟು ಪರಿಣಾಮಕಾರಿ ಆಗುತ್ತದೆ. ಇದರ ಅನುಷ್ಠಾನದ ಶ್ರೇಯಸ್ಸು ಕೂಡ ಸಚಿವ ಅನಂತಕುಮಾರ್ ಅವರಿಗೇ ಸಲ್ಲುತ್ತದೆ.

ಹಾಗೇ ಜನಧನ ಯೋಜನೆ. ಇದು ಒಂದು ರೀತಿಯಲ್ಲಿ ನೋಟು ರದ್ದತಿ ಯೋಜನೆಯ ಪೂರ್ವಸಿದ್ಧತೆಯ ಕ್ರಮ ಎನ್ನುವುದೇ ಸರಿಯಾದೀತು. ಈ ಯೋಜನೆಯಿಂದ ಬ್ಯಾಂಕು, ಅಕೌಂಟು ಇತ್ಯಾದಿಗಳ ಗಂಧವೇ ಇಲ್ಲದ ಮೂರ್ನಾಲ್ಕು ಕೋಟಿ ಬಡಜನರು ಬ್ಯಾಂಕ್ ಅಕೌಂಟು ಹೊಂದಲು ಸಹಕಾರಿ ಆಯಿತು. ಆದರೂ ದೊಡ್ಡ ಪ್ರಮಾಣದ ಫಲಾನುಭವಿಗಳು ಈ ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿರಲಿಲ್ಲ. ಈಗ ನೋಟು ರದ್ದತಿ ಬಳಿಕ, ದುಡ್ಡು-ನೋಟು ಇವುಗಳ ಪರಿಚಯ ಯಾರಿಗೆಲ್ಲ ಇದೆಯೋ ಅವರೆಲ್ಲರಿಗೂ ಬ್ಯಾಂಕು, ಅಕೌಂಟಿನ ಮಹತ್ವ ಏನೆಂಬುದು ಗೊತ್ತಾಗಿದೆ.

ನೋಟು ರದ್ದತಿ ವಿಷಯದಲ್ಲಿ ಎರಡು ಕಾರಣಗಳನ್ನು ಮುಂದೆ ಮಾಡಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಮೊದಲನೆಯದ್ದು ಸಾಕಷ್ಟು ಪೂರ್ವಸಿದ್ಧತೆ(ಮುನ್ಸೂಚನೆ ಕೊಡದೆ ಪೂರ್ವಸಿದ್ಧತೆಗೆ ಅವಕಾಶ ಕೊಡದೆ ಮಾಡಿದ್ದು ಸರಿಯಲ್ಲ, ಅದರಿಂದಾದ ನಷ್ಟ ಅಷ್ಟಿಷ್ಟಲ್ಲ ಎಂಬುದು ಮಾತಿನ ಒಳಮರ್ಮ) ಇಲ್ಲದೆ ಈ ಯೋಜನೆ ಜಾರಿಮಾಡಲಾಗಿದೆ. ಅದರಿಂದ

ಬಡಬಗ್ಗರಿಗೆ, ದಿನಗೂಲಿಯವರಿಗೆ ತೊಂದರೆ ಆಗಿದೆ ಎಂಬುದು. ಮತ್ತೊಂದು- ಪ್ರಧಾನಿ ಮೋದಿ ಸಂಪುಟದ ಸದಸ್ಯರನ್ನು, ದೇಶದ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ರೀತಿಯಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ ಎಂಬುದು. ರಾಹುಲ್ ಗಾಂಧಿ ಮಾತ್ರವಲ್ಲ, ಗುರುವಾರ ಸಂಸತ್ತಿನಲ್ಲಿ ಮಾತನಾಡುವ ವೇಳೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಮನಮೋಹನ ಸಿಂಗ್ ಕೂಡ ಇದನ್ನೇ ಹೇಳಿದ್ದಾರೆ- ‘ನೋಟು ರದ್ದತಿ ಯೋಜನೆಯಲ್ಲಿ ತಪ್ಪಿಲ್ಲ, ಅದರ ಜಾರಿ ಮಾಡಿದ ರೀತಿ ಸರಿಯಿಲ್ಲ’. ರೀತಿ ಅಂದರೆ ಅದೇ ‘ಮೊದಲೇ ತಿಳಿಸಲಿಲ್ಲ, ಪೂರ್ವಸೂಚನೆ ನೀಡಲಿಲ್ಲ’ ಎಂಬ ವರಾತ. ಇದು ಹೇಳಿ ಮಾಡುವ ಯೋಜನೆಯೇ? ಲಂಚಕೋರರ ಮೇಲೆ ದಾಳಿ, ಖದೀಮರ ವಿರುದ್ಧ ಕಾರ್ಯಾಚರಣೆಯನ್ನೆಲ್ಲ ಹೇಳಿ ಕೇಳಿ ಮಾಡಲಾಗುತ್ತದೆಯೇ?

ಮೋದಿ ಹಿಟ್ಲರ್ ರೀತಿಯ ಸರ್ವಾಧಿಕಾರಿ. ನೋಟು ರದ್ದತಿ ನಿರ್ಧಾರವನ್ನು ಸಂಪುಟ ಸದಸ್ಯರಿಗೂ ತಿಳಿಸಲಿಲ್ಲ; ಸಂಸತ್ತನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ವಾಸ್ತವದಲ್ಲಿ ದೇಶದ ಹಿತಕ್ಕೋಸ್ಕರ ಕಠಿಣ ನಿರ್ಧಾರಗಳನ್ನು ಜಾರಿಗೊಳಿಸಲು ಐದು ವರ್ಷ ಮುದ್ದತ್ತಿನ ಅಧಿಕಾರವನ್ನು ದೇಶದ ಜನರು ಚುನಾಯಿತ ಸರ್ಕಾರಕ್ಕೆ ಮತ್ತು ಅದರ ಮುಖ್ಯಸ್ಥನಿಗೆ ನೀಡಿರುತ್ತಾರೆ. ಸಂಸತ್ತು ಮತ್ತು ಪ್ರತಿಪಕ್ಷಗಳು ಇರುವುದು ಸರ್ಕಾರ ಜಾರಿಗೊಳಿಸುವ ಯೋಜನೆಗಳು ಸರಿಯಾಗಿ ಜಾರಿ ಆಗುತ್ತಿವೆಯೇ ಎಂದು ಪರಾಮರ್ಶೆ ಮಾಡಲು. ಈಗ ನಮ್ಮ ಸಂಸತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಕಣ್ಣಾರೆ ಕಾಣುತ್ತಿದ್ದೇವಲ್ಲ.

ಒಂದು ಮಾತು ನಿಜ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ವಾಧಿಕಾರವಲ್ಲ, ಅದರ ಸಣ್ಣ ವಾಸನೆಯೂ ಹತ್ತಿರ ಸುಳಿಯಬಾರದು. ಆದರೆ ಈ ಮಾತನ್ನು ಹೇಳುವ ನೈತಿಕ ಅಧಿಕಾರ ರಾಹುಲ್ ಗಾಂಧಿಗೆ ಇದೆಯೇ? ಅಷ್ಟಕ್ಕೂ ಸರ್ವಾಧಿಕಾರದ ಇತಿಹಾಸದ ಆರಂಭ ಆಗಿದ್ದು ಎಲ್ಲಿಂದ?

  • 1947ರಲ್ಲಿ ಭಾರತದ ಸೇನೆ ಇಡೀ ಕಾಶ್ಮೀರದ ಮೇಲೆ ಹತೋಟಿ ಸಾಧಿಸುವುದರಲ್ಲಿತ್ತು. ಅಷ್ಟರಲ್ಲಿ ಯುದ್ಧವಿರಾಮ ಘೊಷಿಸಿ ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವಾಗ ಪ್ರಧಾನಿ ನೆಹರು ಸಂಪುಟ, ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ? ಆಗ ಗೃಹ ಸಚಿವ, ಉಪಪ್ರಧಾನಿ ಪಟೇಲ್ ಅಕ್ಷರಶಃ ಕಣ್ಣೀರು ಹಾಕಿದ್ದರು. ಕಾಶ್ಮೀರಕ್ಕಾಗಿ ಇಡೀ ದೇಶ ಈಗಲೂ ಕಣ್ಣೀರು ಹರಿಸಬೇಕಿದೆ.
  • ಟಿಬೆಟ್ಟನ್ನು ಚೀನಾ ಅತಿಕ್ರಮಿಸಿದಾಗ ಸರ್ಕಾರ, ಕ್ಯಾಬಿನೆಟ್ಟಿನ ನಿರ್ಧಾರವನ್ನು ನೆಹರು ಪಾಲಿಸಿದರೇ? ಅದರಿಂದ ಸಾವಿರಾರು ಸೈನಿಕರು ಅನ್ಯಾಯವಾಗಿ ಸಾವನ್ನಪ್ಪಿದರಲ್ಲ? ನೆಹರು ಮೌನದ ಮರ್ಮವೇನು?
  • ಸಂವಿಧಾನಶಿಲ್ಪಿ ಅಂಬೇಡ್ಕರ್ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಆದರೆ ಬಹಿರಂಗವಾಗಿ ತಮ್ಮ ನಿಲುವನ್ನು ವಿರೋಧಿಸಿ ನೆಹರು ಮಾಡಿದ ಅಪಮಾನ ಸಹಿಸಲಾಗದೆ ಬೇಸತ್ತು ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ನೆಹರು ಸಂಪುಟದಿಂದ ಹೊರ ನಡೆದರಲ್ಲ, ಇತಿಹಾಸ ಗೊತ್ತಿಲ್ಲವೇನು?
  • ಅಕ್ಸಯ್ಚಿನ್ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದಾಗ ಅದನ್ನು ತಡೆಯಬೇಕೆಂದು ಇಡೀ ಕ್ಯಾಬಿನೆಟ್ ಹೇಳಿತ್ತು. ಅದು ದೇಶದ ಒಕ್ಕೊರಲ ಭಾವನೆಯಾಗಿತ್ತು. ಆಗ ‘ಅಕ್ಸಯ್ಚಿನ್ ಪ್ರದೇಶದಲ್ಲಿ ಒಂದು ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ. ಅದಕ್ಕೇಕೆ ತಲೆ ಕೆಡಿಸಿಕೊಳ್ಳುತ್ತೀರಿ’ ಎಂದರಲ್ಲ ನೆಹರು. ಅದಕ್ಕೇನನ್ನಬೇಕು.
  • ಬ್ಯಾಂಕುಗಳ ರಾಷ್ಟ್ರೀಕರಣ ನಿರ್ಧಾರ ತೆಗೆದುಕೊಂಡಾಗ, ಅಮೃತಸರದ ಸುವರ್ಣ ಮಂದಿರಕ್ಕೆ ಮಿಲಿಟರಿ ನುಗ್ಗಿಸುವಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು?
  • ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವಾಗ ನಡುರಾತ್ರಿಯಲ್ಲಿ ಸಂಸತ್ತು, ಕ್ಯಾಬಿನೆಟ್ಟು ಇತ್ಯಾದಿಗಳಲ್ಲಿ ಚರ್ಚೆ ಆಯಿತೇ?
  • ಶ್ರೀಲಂಕಾದಲ್ಲಿ ಎಲ್ಟಿಟಿಇ ವಿರುದ್ಧ ಕಾರ್ಯಾಚರಣೆಗೆ ಸೈನಿಕರನ್ನು ಕಳಿಸುವಾಗ ರಾಜೀವ ಗಾಂಧಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು? 1500 ಭಾರತೀಯ ಸೈನಿಕರು ವಿನಾಕಾರಣ ಪ್ರಾಣ ಕಳೆದುಕೊಂಡರು, ಅಷ್ಟೇ ಸಂಖ್ಯೆಯ ಸೈನಿಕರು ಗಾಯಾಳುಗಳಾದರು. ಅದಕ್ಕೆ ಸಂಸತ್ತಿನ ಅನುಮತಿ ಇತ್ತೇನು?
  • ಸಜ್ಜನ ವ್ಯಕ್ತಿ ಮನಮೋಹನ ಸಿಂಗ್ ಅಖಂಡ ಹತ್ತು ವರ್ಷ ಪ್ರಧಾನಿ ಆದರು. ಅವರು ಪ್ರಾಮಾಣಿಕವಾಗಿ ಹೇಳಿಬಿಡಲಿ ಈ ಅವಧಿಯಲ್ಲಿ ಒಂದೇ ಒಂದು ನಿರ್ಧಾರವನ್ನು ಸೋನಿಯಾ ಗಾಂಧಿ ಅವರ ಆಣತಿ ಇಲ್ಲದೆ ತೆಗೆದುಕೊಂಡಿದ್ದೇನೆ ಅಂತ. ನಿಜಕ್ಕೂ ಮನಮೋಹನ ಸಿಂಗ್ ಅವರ ವಿದ್ವತ್ತು, ಜಾಣ್ಮೆಗೆ ಬೆಲೆ ಸಿಕ್ಕಿದ್ದು ನರಸಿಂಹ ರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ, ಸೋನಿಯಾ ಅಧಿಪತ್ಯದಲ್ಲಿ ಅಲ್ಲ.

ವಾಸ್ತವದಲ್ಲಿ ಮೇಲಿನ ಎಲ್ಲ ಸಂದರ್ಭಗಳನ್ನು ಈಗಿನ ಸಂದರ್ಭಕ್ಕೆ ಹೋಲಿಸುವಂತೆಯೂ ಇಲ್ಲ, ಅವು ಪೂರ್ವಭಾವಿಯಾಗಿ ರ್ಚಚಿಸುವ ವಿಷಯಗಳೂ ಅಲ್ಲ.

ಒಂದು ವಿಚಾರ ನೆನಪಿಟ್ಟುಕೊಳ್ಳಬೇಕು. ಕಾಳಧನಿಕರನ್ನು ಮಟ್ಟ ಹಾಕುವುದಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಗೌಪ್ಯತೆ ಕಾಪಾಡಿಕೊಂಡು 500-1000 ರೂ. ನೋಟು ರದ್ದತಿ ಮಾಡುವುದನ್ನು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಒಂದೇ ರಾತ್ರಿ ಕಳೆಯುವುದರೊಳಗಾಗಿ ಇಲ್ಲಿಂದ ಸ್ವಿಸ್ ಬ್ಯಾಂಕ್ವರೆಗೆ ಬಚ್ಚಿಟ್ಟಿದ್ದ ಕಾಸಿನ ಗಂಟು ನಿರ್ಜೀವ ಆಯಿತು. ಇದೇ ಕಾಳಧನಕ್ಕಾಗಿ ನಮ್ಮ ಸಂಸತ್ತು ಅದೆಷ್ಟು ದುಡ್ಡು-ಸಮಯ ವ್ಯರ್ಥ ಮಾಡಿತ್ತು ಎಂಬುದು ಗೊತ್ತಿಲ್ಲದ ವಿಚಾರವೇನು?

ಒಟ್ಟಾರೆ ಅನ್ನಿಸುವುದು ಇಷ್ಟು. ಒಂದು ಉತ್ತಮ ಉದ್ದೇಶಕ್ಕಾಗಿ ಒಗ್ಗಟ್ಟಿನಿಂದ ಹೆಜ್ಜೆ ಹಾಕುವ, ಇತಿಹಾಸ ಬರೆಯುವ ಸುವರ್ಣಾವಕಾಶವನ್ನು ಕಾಂಗ್ರೆಸ್ಸೂ ಸೇರಿ ಕೆಲ ಪಕ್ಷಗಳು ಕಳೆದುಕೊಂಡುಬಿಟ್ಟವು…

ಯಾರೋ ಕಳಿಸಿದ ಆಸಕ್ತಿಕರ ಮೆಸೇಜು: ‘ದೇಶದಲ್ಲಿ ಅಚ್ಛೇದಿನ್ ಬರುತ್ತಿದೆ… ಮುನ್ಸೂಚನೆ ಏನು ಗೊತ್ತೇ? ಹತ್ತು ವರ್ಷ ಪ್ರಧಾನಿ ಆಗಿದ್ದಾಗ ಮೌನವಾಗಿದ್ದ ಮನಮೋಹನ ಸಿಂಗ್ ಕಳೆದ ಎರಡು ವರ್ಷದಲ್ಲಿ ಸಂಸತ್ತಿನಲ್ಲಿ ಎರಡೆರಡು ಬಾರಿ ಮಾತನಾಡಿದ್ದಾರೆ!’

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top