ರೈತರಿಗೆ ಟೋಲ್‌ ಹೊರೆ: ಕೃಷಿ ಉತ್ಪನ್ನ ಸಾಗಣೆಗೆ ಸದ್ಯ ಸುಂಕ ವಿಧಿಸದಂತೆ ರೈತರ ಮೊರೆ

– ಆರ್‌. ತುಳಸಿಕುಮಾರ್‌, ಬೆಂಗಳೂರು / ಸುನೀಲ್‌ ಕುಮಾರ್,‌ ಕೋಲಾರ.

ವಿಕ ವಿಶೇಷ: ದರ ಕುಸಿತದಿಂದ ಕಂಗಾಲಾಗಿರುವ ರೈತರೀಗ ಟೋಲ್‌ ಹೊಡೆತದಿಂದ ಕಂಗೆಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ವಾಹನಗಳ ಅಭಾವವಿರುವುದರ ನಡುವೆಯೇ, ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗದಂತೆ ಕೇಂದ್ರ ಸರಕಾರವು ಟೋಲ್‌ ಸಂಗ್ರಹಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು. ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತಿತರ ಜಿಲ್ಲೆಗಳಿಂದ ಕೊರೊನಾ ನಡುವೆಯೂ ಬೆಂಗಳೂರಿಗೆ ಹಣ್ಣು-ತರಕಾರಿ ಪೂರೈಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಿತ್ತು. ಆದರೆ, ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿನ 34 ಸ್ಥಳಗಳಲ್ಲಿ ಟೋಲ್‌ ಶುಲ್ಕ ವಸೂಲು ಮಾಡಲಾಗುತ್ತಿದೆ.

ಕೃಷಿಕರಿಗೆ ವಿನಾಯಿತಿ ಏಕೆ ಬೇಕು?
ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿದೆ. ಬೆಳೆದ ಬೆಳೆಯನ್ನು ಕನಿಷ್ಠ ದರಕ್ಕೂ ಮಾರಾಟ ಮಾಡಲಾಗದೆ ರೈತರು ತೊಳಲಾಟಕ್ಕೆ ಸಿಲುಕಿದ್ದಾರೆ. ವಾಹನ ಸಂಚಾರ ಹಳಿ ತಪ್ಪಿರುವ ಕಾರಣ ಕೃಷಿ ಉತ್ಪನ್ನಗಳ ಸಾಗಣೆಗೆ ವಾಹನಗಳು ಸಿಗುತ್ತಿಲ್ಲ. ಹೆಚ್ಚಿನ ರೈತರು ಸ್ವಂತ ವಾಹನ ಹೊಂದಿಲ್ಲ. ಅವರಿವರನ್ನು ಕಾಡಿಬೇಡಿ ವಾಹನದಲ್ಲಿ ಹೇರಿಕೊಂಡು ಮಾರುಕಟ್ಟೆಗೆ ತರಬೇಕಿದೆ.

ಸದ್ಯದ ಸ್ಥಿತಿಯಲ್ಲಿ ವಾಹನ ಬಾಡಿಗೆ ದರ ಕೂಡ ದುಪ್ಪಟ್ಟಾಗಿದೆ. ರೈತರು ಹಲವು ದಿನಗಳ ಕಾಲ ನಿರಂತರವಾಗಿ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸಬೇಕಿದೆ. ದಿನವೂ ದುಬಾರಿ ಟೋಲ್‌ ಕಟ್ಟುವುದೆಂದರೆ ಕಷ್ಟಪಟ್ಟು ಮಾರಿದ ದುಡ್ಡೆಲ್ಲ ಟೋಲ್‌ನಲ್ಲೇ ಸೋರಿ ಹೋಗುವಂತಾಗುತ್ತದೆ. ಈ ಕಾರಣದಿಂದಾಗಿ ಟೋಲ್‌ ಶುಲ್ಕದ ಹೊರೆಯನ್ನು ತಾತ್ಕಾಲಿಕವಾಗಿಯಾದರೂ ತಪ್ಪಿಸುವಂತೆ ರೈತರು ಮೊರೆ ಇಡುತ್ತಿದ್ದಾರೆ.

ವಾಹನ ಸೌಲಭ್ಯದ ಭರವಸೆ ಹುಸಿ
ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆ ಕಷ್ಟವಾದಾಗ ಸರಕಾರ ರೈತರಿಗೆ ವಾಹನಗಳನ್ನು ಒದಗಿಸುವ ಭರವಸೆ ನೀಡಿತ್ತು. ಟೋಲ್‌ಗಳಲ್ಲಿ ಸಿಬ್ಬಂದಿ ಹಾಗೂ ಚೆಕ್‌ ಪೋಸ್ವ್‌ಗಳಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಬ್ರೇಕ್‌ ಹಾಕುವ ಅಭಯ ಕೂಡ ಹುಸಿಯಾಗಿದೆ. ರೈತ ಮುಖಂಡರು ಸಿಎಂ ಜತೆ ಚರ್ಚಿಸಿದ ಬಳಿಕ ಕಿರಿಕಿರಿ ಪ್ರಮಾಣ ತಗ್ಗಿದ್ದರೂ ಪೂರ್ಣವಾಗಿ ನಿಂತಿಲ್ಲ.

ಈ ಬಗ್ಗೆ ಸ್ವತಃ ಆಸಕ್ತಿವಹಿಸಿ ಕಾರ‍್ಯಪ್ರವೃತ್ತರಾಗಿರುವ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡರು ಟೋಲ್‌ ಸಂಗ್ರಹಿಸುತ್ತಿರುವ ವಿಚಾರವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದಿದ್ದು, ರೈತರ ಹಿತದೃಷ್ಟಿಯಿಂದ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ತಕ್ಷಣವೇ ರೈತರಿಂದ ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕು ಮತ್ತು ಲಾಕ್‌ಡೌನ್‌ ತೆರವಾದ ಬಳಿಕವೂ ರೈತರಿಂದ ಟೋಲ್‌ ಸಂಗ್ರಹಿಸಬಾರದೆಂದು ಆದೇಶ ಹೊರಡಿಸಬೇಕು ಆಗ್ರಹಿಸಿದ್ದಾರೆ.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರಿಂದ ಟೋಲ್‌ ಸಂಗ್ರಹಿಸುತ್ತಿರುವವರನ್ನು ಜೈಲಿಗೆ ಹಾಕಬೇಕು. ರೈತರ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವಂತಹ ವಾಹನಗಳಿಂದ ಟೋಲ್‌ ಸಂಗ್ರಹಿಸದಂತೆ ಪೊಲೀಸ್‌ ಇಲಾಖೆ ಉನ್ನತಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಎಚ್‌. ನಾಗೇಶ್‌ ಹೇಳಿದರು.

ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲು ವಾಹನಗಳ ಕೊರತೆ ಇದೆ. ಟೋಲ್‌ನವರಿಗೆ ನಿತ್ಯ ನೂರಾರು ರೂ. ಪಾವತಿಸಲು ಸಾಧ್ಯವಾಗುತ್ತಿಲ್ಲ. ಮೇ ಅಂತ್ಯದವರೆಗೂ ಶುಲ್ಕ ಪಾವತಿಗೆ ವಿನಾಯಿತಿ ನೀಡಲಿ ಎಂಬುದು ರೈತ ಅಶೋಕ್‌ ಕುಮಾರ್‌ ಅವರ ಕೋರಿಕೆಯಾಗಿದೆ.

ರೈತರ ಜಮೀನು ಬಳಸಿಕೊಂಡೇ ಹೆದ್ದಾರಿ ನಿರ್ಮಿಸಿದ್ದರೂ, ಕೃಷಿ ಉತ್ಪನ್ನಗಳ ಸಾಗಣೆಗೆ ಟೋಲ್‌ ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಸಂದರ್ಭದಲ್ಲೂ ನಿಯಮ ಸಡಿಲಿಸದಿರುವುದು ಸರಿಯಲ್ಲ. ಈ ವಿಷಯವಾಗಿ ಸಿಎಂ ಜತೆ ಚರ್ಚಿಸಿ ಶುಲ್ಕ ವಿನಾಯಿತಿಗೆ ಆಗ್ರಹಿಸುವೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಕಡೆಗಳಲ್ಲಿ ಶುಲ್ಕ ತಡೆಗೆ ರಾಜ್ಯಕ್ಕೆ ಅಧಿಕಾರ ಇಲ್ಲ. ರೈತರ ಹಿತದೃಷ್ಟಿಯಿಂದ ಲಾಕ್‌ಡೌನ್‌ವರೆಗೆ ವಿನಾಯಿತಿ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್‌ ಭರವಸೆ ನೀಡಿದರು.

ಕೃಷಿ ಉತ್ಪನ್ನಗಳ ಸಾಗಾಣೆ ಮಾಡುವ ವಾಹನಗಳಿಂದ ಟೋಲ್‌ಗಳಲ್ಲಿ ಹಣ ಸಂಗ್ರಹಿಸುತ್ತಿರುವುದು ಸರಿಯಲ್ಲ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top