ಈ ಚುನಾವಣೆಗಳು ನಿರ್ಣಾಯಕವಲ್ಲ, ಆದರೂ ಮಹತ್ವಪೂರ್ಣಕರ್ನಾಟಕದಲ್ಲಿ ಕಾಂಗ್ರೆಸ್‌ ಅಸ್ತಿತ್ವದ ಪ್ರದರ್ಶನ, ಬಿಹಾರದಲ್ಲಿ ಬಿಜೆಪಿಗೆ ಮೈತ್ರಿಯ ಪ್ರಶ್ನೆ

ಕೊರೊನಾ ಕಾಲದ ಅತಿದೊಡ್ಡ ಚುನಾವಣೆ ಎನ್ನಬಹುದಾದ ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ, ಮಧ್ಯಪ್ರದೇಶ ಉಪ ಚುನಾವಣೆಗಳ ಬಗ್ಗೆಯೇ ರಾಜಕೀಯ ಆಸಕ್ತರ ನಡುವೆ ಮಾತು-ಕತೆ, ಚರ್ಚೆ ನಡೆಯುತ್ತಿದೆ. ಕೋವಿಡ್‌ ಸಂತ್ರಸ್ತರಿಗೂ ಮತ ಚಲಾಯಿಸುವ ಹಕ್ಕು ನೀಡಿಕೆ, ಚುನಾವಣಾ ಪ್ರಚಾರ ಶೈಲಿಯನ್ನು ತುಸು ಬದಲಿಸಿರುವುದು ಸೇರಿದಂತೆ 10 ಪ್ರಮುಖ ಬದಲಾವಣೆಗಳೊಂದಿಗೆ ಚುನಾವಣೆಯನ್ನು ನಡೆಸಲು ಗಟ್ಟಿ ನಿರ್ಧಾರವನ್ನು ಮಾಡಿದ್ದ ಕೇಂದ್ರ ಚುನಾವಣಾ ಆಯೋಗ, ಆ ಪ್ರಯತ್ನದಲ್ಲಿ ಒಂದು ಹೆಜ್ಜೆಯನ್ನು ಈಗಾಗಲೇ ದಿಟ್ಟವಾಗಿಯೇ ಇಟ್ಟಿದೆ. ಕೊರೊನಾ ಆತಂಕದ ನಡುವೆಯೂ ಬಿಹಾರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಶೇ.53ರಷ್ಟು ಮತದಾನವಾಗಿದೆ. 2015ರಲ್ಲಿ ನಡೆದ ಮೊದಲ ಹಂತದ ಚುನಾವಣೆಗೂ ಇಷ್ಟೇ ಮತದಾನ ದಾಖಲಾಗಿತ್ತು. ಅಂದರೆ, ಬಿಹಾರದ ಮತದಾರರು ಕೊರೊನಾಗೆ ಹೆದರಿಲ್ಲ. ನಿರ್ಭಯವಾಗಿಯೇ ಮತ ಚಲಾಯಿಸಿದ್ದಾರೆ. ನಿಜಕ್ಕೂ ಭಾರತೀಯ ಮತದಾರರಿಗೆ ಭೇಷ್‌ ಎನ್ನಲೇಬೇಕು!
ಅಂದಹಾಗೆ ನಮ್ಮ ಬೆಂಗಳೂರು, ಶಿರಾದಿಂದ ಹಿಡಿದು ದೂರದ ಬಿಹಾರ ಚುನಾವಣೆಗಳು ಯಾವ ನಿರೀಕ್ಷೆಗಳನ್ನು ಹುಟ್ಟುಹಾಕಿವೆ? ಅವು ಹೇಗೆ ನಡೆಯುತ್ತಿವೆ ಎಂಬುದರ ಕುರಿತು ನೋಡೋಣ. ಕರ್ನಾಟಕದ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಭರಾಟೆ, ಯಾವುದೇ ಕಾಲದ ಉಪ ಚುನಾವಣೆಯ ಭರಾಟೆಯನ್ನೇ ನೆನಪಿಸುತ್ತಿದೆ. ಕೊರೊನಾಕ್ಕೂ ಭರಾಟೆಗೂ ಸಂಬಂಧವಿಲ್ಲ!
ಜೆಡಿಎಸ್‌ನಿಂದ ಆಯ್ಕೆಯಾಗಿ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅಕಾಲಿಕ ನಿಧನದಿಂದ ತೆರವಾದ ಕಾರಣಕ್ಕೆ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದರೆ, ಮುನಿರತ್ನ ಅವರ ಪಕ್ಷಾಂತರದ ಕಾರಣಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಈ ಎರಡೂ ಆಡಳಿತಾರೂಢ ಬಿಜೆಪಿ ಕ್ಷೇತ್ರಗಳಲ್ಲ. ಆದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಆಯ್ಕೆಯಾಗಿದ್ದ ಅಭ್ಯರ್ಥಿ ಮುನಿರತ್ನ ಎದುರು ಬಿಜೆಪಿ ಗಣನೀಯ ಮತಗಳಿಸಿತ್ತು. ಆದರೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಬೋರ್ಡಿಗೂ ಇರಲಿಲ್ಲ. ವಾಸ್ತವ ಇದಾಗಿದ್ದರೂ ಈ ಎರಡು ಕ್ಷೇತ್ರಗಳ ಉಪಚುನಾವಣೆ ರಾಜ್ಯ ರಾಜಕಾರಣದ ಮಟ್ಟಿಗೆ ಕೆಲವು ಲೆಕ್ಕಾಚಾರಗಳನ್ನು ಮುನ್ನೆಲೆಗೆ ತಂದು ನಿಲ್ಲಿಸಿರುವುದು ಸುಳ್ಳಲ್ಲ.
ಮೊದಲು ಕರ್ನಾಟಕದ ರಾಜಕಾರಣದ ಮೇಲೆ ಆಗಬಹುದಾದ ಪರಿಣಾಮ ಗಮನಿಸೋಣ.
ಈ ಎರಡು ಕ್ಷೇತ್ರಗಳ ಫಲಿತಾಂಶ, ಏನೇ ಬಂದರೂ, ಅದು ರಾಜ್ಯ ಬಿಜೆಪಿ ಸರಕಾರದ ಮೇಲೆ ತಕ್ಷ ಣಕ್ಕೆ ಅಂತಹ ಪರಿಣಾಮವನ್ನು ಬೀರುವುದಿಲ್ಲ. ಅದಕ್ಕೆ ಮುಖ್ಯವಾದ ಎರಡು ಕಾರಣಗಳಿವೆ. ಮೊದಲನೆಯದು, ಸಂಖ್ಯಾಬಲದಲ್ಲಿ ಬಿಜೆಪಿ ಸರಕಾರ ಈಗಾಗಲೇ ಭದ್ರವಾಗಿದೆ. ಹಾಗಾಗಿ, ಬಿಜೆಪಿ ಎರಡೂ ಕಡೆ ಸೋತರೂ ಸರಕಾರಕ್ಕೆ ಏನೂ ಆಗುವುದಿಲ್ಲ. ಗೆದ್ದರೆ, ಬೋನಸ್‌ ಬಲ ಎಂದು ಬೀಗಬೇಕಷ್ಟೇ. ಎರಡನೇ ಸಂಗತಿ, ಫಲಿತಾಂಶ ಸರಕಾರದ ನಾಯಕತ್ವದ ಮೇಲೂ ಯಾವುದೇ ಪರಿಣಾಮ ಬೀರದು. ಏಕೆಂದರೆ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಬಿಟ್ಟರೆ ಸರಕಾರ ಮುನ್ನಡೆಸಬಲ್ಲ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷ ದ ನೇತೃತ್ವ ವಹಿಸಬಲ್ಲ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿ ಸದ್ಯಕ್ಕೆ ಯಾರು ಎಂಬ ಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ. ಅಷ್ಟರಮಟ್ಟಿಗೆ ಬಿಎಸ್‌ವೈ ನಾಯಕತ್ವ ಅಬಾಧಿತ. ಅಷ್ಟಕ್ಕೂ ಯಾವುದೇ ಉಪ ಚುನಾವಣೆಗಳ ಫಲಿತಾಂಶ, ಯಾವುದೇ ಸರಕಾರದ ಜನಾದೇಶವಲ್ಲ. ಹಾಗಾಗಿ, ಫಲಿತಾಂಶ ಬಿಜೆಪಿ ಪರವಾಗಿ ಬಂದರೆ ಈ ಸರಕಾರ ಇಲ್ಲವೇ ಪಕ್ಷ ಕ್ಕೆ ಜನಾದೇಶ ಗಟ್ಟಿಯಾಗಿದೆ ಎಂದು ಯಾರೂ ಭಾವಿಸುವುದಿಲ್ಲ. ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಆಳುವ ಪಕ್ಷದ ಪರವಾಗಿಯೇ ಫಲಿತಾಂಶ ಬರುತ್ತದೆ. ಅದಕ್ಕೆ ಕಾರಣ, ಆಡಳಿತಾರೂಢ ಪಕ್ಷ ತನ್ನೆಲ್ಲ ಅಸ್ತ್ರ-ಶಸ್ತ್ರಗಳೊಂದಿಗೆ ಚುನಾವಣೆಗೆ ಇಳಿದಿರುತ್ತದೆ. ಸಂಪೂರ್ಣ ಸರಕಾರವೇ ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಹೋಗಿ ಕುಳಿತುಕೊಳ್ಳುವುದರಿಂದ ಗೆಲುವು ಅಸಾಧ್ಯದ ಕೆಲಸವಲ್ಲ. ಎಲ್ಲ ಪಕ್ಷ ಗಳ ಆಡಳಿತದ ಕಾಲದಲ್ಲೂ ಇದು ಪದೇ ಪದೇ ನಿರೂಪಿತವಾಗುತ್ತಲೇ ಇರುವ ಸಂಗತಿ. ಆದರೆ ಸಾರ್ವತ್ರಿಕ ಚುನಾವಣೆ ಹಾಗಲ್ಲ. ಇದಕ್ಕೆ ಸಂಪೂರ್ಣ ತದ್ವಿರುದ್ಧ. ಹಾಗಾಗಿ ಈ ಕುರಿತು ವಿವರವಾಗಿ ಚರ್ಚಿಸುವುದಿಲ್ಲ. ಆದರೆ, ಇಂಥಾ ಚುನಾವಣೆಗಳು ಪ್ರತಿಪಕ್ಷ ಗಳ ಪಾಲಿಗೆ ತುಂಬುವ ಶಕ್ತಿ, ನೀಡುವ ಸಂದೇಶ ಬೇರೆಯದ್ದೇ ಆಗಿರುತ್ತದೆ. ಒಂದು ಸರಕಾರ ಅರ್ಧ ಹಾದಿಯಲ್ಲಿರುವಾಗ ನಡೆಯುವ ಉಪಚುನಾವಣೆಗಳು ಪ್ರತಿಪಕ್ಷ ಗಳ ಪಾಲಿಗೆ ನಿಜಕ್ಕೂ ಒಂದು ಅಳತೆಗೋಲಾಗುತ್ತವೆ. ಆಳುವ ಪಕ್ಷ ತನ್ನ ಅಧಿಕಾರ ಬಲದೊಂದಿಗೆ ನಡೆಸುವ ಉಪಚುನಾವಣೆಗಳನ್ನು ಪ್ರತಿಪಕ್ಷ ಗಳು ಗೆದ್ದರೆ ಅದೊಂದು ಅದ್ಭುತವೇ ಸರಿ. ಒಂದು ವೇಳೆ, ಅವು ಗೆಲುವಿನ ಸಮೀಪಕ್ಕೆ ಬಂದರೂ, ಅದು ಕಡಿಮೆ ಸಾಧನೆಯಲ್ಲ. ಈಗ ಉಪಚುನಾವಣೆ ನಡೆಯುತ್ತಿರುವ ಶಿರಾದಲ್ಲಿ ಕಾಂಗ್ರೆಸ್‌ ಗೆಲುವಿನ ಆತ್ಮವಿಶ್ವಾಸ ತೋರಿಸುತ್ತಿದೆ. ಆರ್‌.ಆರ್‌. ನಗರದಲ್ಲೂ ಕಾಂಗ್ರೆಸ್‌ ತನ್ನ ಜಾಣ ನಡೆ ಮೂಲಕ, ಎಚ್ಚರಿಕೆಯ ಹೆಜ್ಜೆಗಳನ್ನೇ ಮೊದಲಿನಿಂದಲೂ ಹಾಕುತ್ತಿದೆ. ಆರಂಭದಲ್ಲಿ ಗೆಲುವಿನ ಅತಿ ಆತ್ಮವಿಶ್ವಾಸದಲ್ಲಿದ್ದ ಮುನಿರತ್ನ ಮತದಾನದ ದಿನಾಂಕ ಸಮೀಪಿಸುತ್ತಿರುವಂತೆ ತೋರಿಕೆಗಾದರೂ ಕಣ್ಣೀರು ಹಾಕಲು ಆರಂಭಿಸಿದ್ದಾರೆ ಎಂದರೆ, ಗುರಿಯೆಡೆಗಿನ ಕಾಂಗ್ರೆಸ್‌ನ ನಡೆಗಳು ನಿಖರವಾಗಿವೆ ಎಂದೇ ಅರ್ಥ. (ಆದರೆ, ಗೆಲುವಿನ ಗೆರೆ ಕಡೆ ಒಂದು ಕ್ಷಣದಲ್ಲೂ ಬದಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ).
ಮುಖ್ಯವಾಗಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಜೋಡೆತ್ತಿನ ರೀತಿಯಲ್ಲಿ ಉಪಚುನಾವಣೆಗೆ ಕೆಲಸ ಮಾಡುತ್ತಿರುವುದು ಹೊಸ ರಂಗು ತಂದಿದೆ. ಇದನ್ನು ಎಂಥವರೂ ಗಮನಿಸಬಹುದು. ಈ ಜತೆಯಾಟ ಮುಂದೆ ಹೇಗೆ ಸಾಗುತ್ತದೆ ಎಂಬುದರ ಮೇಲೆ ಕಾಂಗ್ರೆಸ್‌ನ ಭವಿಷ್ಯ ನಿಂತಿದೆ. ಎರಡು ಕ್ಷೇತ್ರಗಳ ಪೈಕಿ ಎರಡಲ್ಲ, ಕೇವಲ ಒಂದು ಕ್ಷೇತ್ರವನ್ನು ಗೆದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಬೇರುಗಳು ಗಟ್ಟಿ ಎಂಬುದು ಮತ್ತೊಮ್ಮೆ ನಿರೂಪಿತವಾಗುತ್ತದೆ. ಎರಡರಲ್ಲಿ ಎರಡನ್ನೂ ಗೆದ್ದರಂತೂ ಕಾಂಗ್ರೆಸ್‌ ಓಟಕ್ಕೆ ಬ್ರೇಕ್‌ ಹಾಕುವರೇ ಇರುವುದಿಲ್ಲ.
ಈ ಉಪಚುನಾವಣೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಫ್ಯಾಕ್ಟರ್‌ ಕೂಡ ಕುತೂಹಲಕಾರಿಯಾದ ಸಂಗತಿ.
2018ರ ಆಪರೇಶನ್‌ ಕಮಲದ ನಂತರ ಕೆ. ಆರ್‌. ಪೇಟೆಯಲ್ಲಿ ನಡೆದ ಮರುಚುನಾವಣೆಯಲ್ಲಿ ಕಮಲದ ಅಭ್ಯರ್ಥಿಯ ಗೆಲುವು ಸಾಧ್ಯವೇ ಇಲ್ಲ ಎಂದು ಬಿಜೆಪಿಯ ವರಿಷ್ಠರೇ ಕೈಚೆಲ್ಲಿ ಕುಳಿತಿದ್ದರು. ತಮ್ಮ ಗೆಲುವಿನ ಪಟ್ಟಿಯಿಂದ ಕೆ. ಆರ್‌. ಪೇಟೆ ಕ್ಷೇತ್ರವನ್ನು ಅಳಿಸಿಹಾಕಿಯೇ, ಆ ಪಕ್ಷ ಅಲ್ಲಿ ನಾರಾಯಣಗೌಡರನ್ನು ಕಣಕ್ಕಿಳಿಸಿತ್ತು. ಆದರೆ, ಇಂಥಾ ಕ್ಷೇತ್ರದಲ್ಲಿಯೂ ಗೆಲುವನ್ನು ಕಟ್ಟಿಕೊಂಡು ಬರುವ ಎಂದು ಕೆ.ಆರ್‌.ಪೇಟೆಗೆ ಬಂದು, ಮತದಾನ ಮುಗಿಯುವವರೆಗೂ ಅಲ್ಲಿಯೇ ಠಿಕಾಣಿ ಹೂಡಿದ್ದ ವಿಜಯೇಂದ್ರ, ಅಲ್ಲಿನ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಗೆಲುವನ್ನೂ ನಿರಾಯಾಸವಾಗಿಸಿದರು. ಅದೇ, ಬಿ.ವೈ. ವಿಜಯೇಂದ್ರ ಈಗ ಶಿರಾ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಮತ್ತೊಂದು ಸುತ್ತಿನ ಕೈ ಚಳಕ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ಅವರ ಪರಿಶ್ರಮ, ತಂತ್ರಗಾರಿಕೆ, ಸಂಘಟನೆ ಪಕ್ಷ ದ ಭವಿಷ್ಯದ ಜತೆಗೆ, ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ನಿರ್ಣಾಯಕ ಎಂಬುದು ನಿರ್ವಿವಾದ. ಈ ಬೆಳವಣಿಗೆ ತಿಳಿಯುತ್ತಲೇ ಶಿರಾ ಕ್ಷೇತ್ರದಲ್ಲಿ ಲಾಭ-ನಷ್ಟದ ಲೆಕ್ಕಕ್ಕೆ ಸಾಮೂಹಿಕ ನಾಯಕತ್ವದ ಖದರ್‌ ನೀಡಲು ಕಮಲ ನಾಯಕರು ಮುಂದಾಗಿರುವುದು ಗೌಪ್ಯವಾಗಿ ಉಳಿದಿಲ್ಲ. ಒಟ್ಟಿನಲ್ಲಿ ಈ ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ, ನವ ಲೆಕ್ಕಾಚಾರಕ್ಕೆ ಮುನ್ನುಡಿ ಬರೆಯುವುದರಲ್ಲಿ ಅನುಮಾನವೇ ಬೇಡ.
ಮಧ್ಯಪ್ರದೇಶದ ಆಪರೇಷನ್‌ ಕತೆ
ಆಪರೇಶನ್‌ ಕಮಲದ ಚುನಾವಣೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಹಿಂದಿ ಪ್ರದೇಶದ ಹೃದಯ ಭಾಗ ಮಧ್ಯಪ್ರದೇಶದಲ್ಲೂ ನಡೆಯುತ್ತಿದೆ. ಒಂದಲ್ಲ, ಎರಡಲ್ಲ ಬರೊಬ್ಬರಿ 28 ಕ್ಷೇತ್ರಗಳಿಗೆ ಅಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಧ್ಯಪ್ರದೇಶ ವಿಧಾನಸಭೆಯ 22 ಕಾಂಗ್ರೆಸ್‌ ಶಾಸಕರ ರಾಜೀನಾಮೆಯಿಂದ ಅಧಿಕಾರ ಹಿಡಿದ ಶಿವರಾಜ್‌ ಸಿಂಗ್‌ ಚೌಹಾಣ ಸರಕಾರ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆ. ಶಿವರಾಜ್‌ ಸಿಂಗ್‌ ಅವರ ಸರಕಾರ ಅಧಿಕಾರದಲ್ಲಿ ಮುಂದುವರೆಯ ಬೇಕಾದರೆ ಬಿಜೆಪಿ 28ರಲ್ಲಿ ಕನಿಷ್ಠ 9 ಸ್ಥಾನಗಳನ್ನು ಗೆಲ್ಲಲೇ ಬೇಕು. ಅದು ಸರಳ ಬಹುಮತದ ಮಾತು. ಅಷ್ಟಾದರೂ ಬಿಜೆಪಿ ಸರಕಾರ ಸುಭದ್ರ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಪಕ್ಷಾಂತರಿಗಳಿಗೆ ಮಣೆ ಹಾಕುವ ಪ್ರವೃತ್ತಿ, ಮಂತ್ರಿ ಮಂಡಳದ 33 ಸ್ಥಾನಗಳ ಪೈಕಿ 14ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷಾಂತರಿಗಳಿಗೇ ನೀಡಿರುವುದರ ಪರಿಣಾಮ ಬಿಜೆಪಿಯಲ್ಲಿ ಆಂತರಿಕ ಬೇಗುದಿಯನ್ನು ಹೆಚ್ಚಿಸಿದೆ.
ಒಂದೊಮ್ಮೆ ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶದಲ್ಲಿ ಮತ್ತೆ ಆಧಿಕಾರ ಹಿಡಿಯಬೇಕೆಂದರೆ 18 ಸ್ಥಾನಗಳನ್ನು ಈ ಉಪ ಚುನಾವಣೆಯಲ್ಲಿ ಗೆಲ್ಲಬೇಕು. ಒಂದು ವೇಳೆ ಹತ್ತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೂ ಬಿಜೆಪಿ ಸರಕಾರ ಮುಂದುವರೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ಕಮಲನಾಥ್‌ ಶಪಥ ಮಾಡಿದ್ದಾರೆ. 10ರ ಜತೆಗೆ, ಏಳು ಮಂದಿ ಪಕ್ಷೇತರರು, ಎಸ್ಪಿ, ಬಿಎಸ್ಪಿಯ ಸದಸ್ಯರ ಬೆಂಬಲದಿಂದ ತಾನು ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬುದು ಅವರ ಮಹಾದಾಸೆ. ಕಾಂಗ್ರೆಸ್‌ ಶಾಸಕರ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಬಂದ ನಾಯಕರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇದು ಮುಂದಿನ ದಿನಗಳಲ್ಲಿ ರಿವರ್ಸ್‌ ಆಪರೇಷನ್‌, ಮತ್ತೊಂದು ಸುತ್ತಿನ ಪಕ್ಷಾಂತರ, ನಾಯಕರ ವಿನಿಮಯ ಪ್ರವೃತ್ತಿ ಘಟಿಸುವ ಕೆಟ್ಟ ಸೂಚನೆಯಂತೂ ಹೌದು. ಕೊರೊನಾ ಕಾರಣಕ್ಕೆ ಎಲ್ಲ ರಾಜ್ಯಗಳಂತೆ ಮಧ್ಯಪ್ರದೇಶದಲ್ಲಿ ಆರ್ಥಿಕತೆ ಸಂಪೂರ್ಣ ಜರ್ಜರಿತವಾಗಿದೆ. ಇದೂ ಕೂಡ, ಅಲ್ಲಿನ ರಾಜಕೀಯ ಅಸ್ಥಿರತೆಯನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಬಹುದು ಎಂದು ಬಹುತೇಕ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಇದೆಲ್ಲದಕ್ಕೂ ಪುಟವಿಟ್ಟಂತೆ ನಿರ್ಣಾಯಕ ಆಗಿರುವುದು ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ. 21ನೇ ಶತಮಾನದ ರಾಜಕಾರಣದಲ್ಲಿ ಐದು ವರ್ಷದ ಅಧಿಕಾರಾವಧಿಯೇ ಹೆಚ್ಚು. ಇನ್ನು ಹದಿನೈದು ವರ್ಷ ಎಂದರೆ ಸುಮ್ಮನೆ ಆದೀತೆ? ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ ಸರಕಾರದ ಜಂಗಲ್‌ ರಾಜ್‌ ವಿರುದ್ಧ ಜನಾಭಿಪ್ರಾಯ ಮೂಡಿಸಿ, ಒಂದೂವರೆ ದಶಕ ಅಧಿಕಾರ ನಡೆಸುವಲ್ಲಿ ಯಶಸ್ವಿಯಾಗಿದ್ದ ನಿತೀಶ್‌ ಕುಮಾರ್‌ಗೆ ಈಗ ವಯಸ್ಸಾಗಿದೆ. ಅವರ ವಿರುದ್ಧ ಈಗ 30 ವರ್ಷ ಪ್ರಾಯದ ಲಾಲು ಪುತ್ರ ತೇಜಸ್ವಿ ಯಾದವ್‌ ಅವರು ಮತ್ತದೇ ಜಂಗಲ್‌ ರಾಜ್‌ ಅಸ್ತ್ರವನ್ನು ಮರುಪ್ರಯೋಗ ಮಾಡುತ್ತಿದ್ದಾರೆ. ಹದಿನೈದು ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂಬ ಸವಾಲನ್ನು ತೇಜಸ್ವಿ ಯಾದವ್‌ ಅವರು ಸಿಎಂ ನಿತೀಶ್‌ಗೆ ಎಸೆಯುತ್ತಲೇ ಇದ್ದಾರೆ. ಇಳಿ ವಯಸ್ಸಿನ ನಿತೀಶ್‌ ಮತ್ತು ಹದಿ ಹರೆಯದ ತೇಜಸ್ವಿ ನಡುವಿನ ಬಿಹಾರ ಚುನಾವಣಾ ಕಣ ನಿಜಕ್ಕೂ ಕುತೂಹಲ ಮೂಡಿಸಿದೆ.
ಎನ್‌ಡಿಎ ಭವಿಷ್ಯಕ್ಕೆ ಬಿಹಾರ ಚುನಾವಣೆ ದಿಕ್ಸೂಚಿ
ಇದು ಎಲ್ಲದಕ್ಕಿಂತ ಮುಖ್ಯವಾದ ವಿಚಾರ! ರಾಷ್ಟ್ರ ಮಟ್ಟದಲ್ಲಿ ರೂಪಿತವಾಗಿರುವ ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಮೈತ್ರಿಕೂಟ (ಎನ್‌ಡಿಎ) ಈಗ ನೆಪಮಾತ್ರಕ್ಕೆ ಇದೆ. ಸದ್ಯಕ್ಕೆ ಮಹಾರಾಷ್ಟ್ರದ ರಾಮದಾಸ್‌ ಅಠಾವಳೆ ಎಂಬ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರನ್ನು ಬಿಟ್ಟರೆ ಬಹುತೇಕ ಬೇರೆಲ್ಲರೂ ಎನ್‌ಡಿಎ ತೊರೆದಿದ್ದಾರೆ.
ಬಿಹಾರದ ಜೆಡಿಯು ಎನ್‌ಡಿಎ-2 ಸರಕಾರದ ಮೊದಲ ದಿನದಿಂದಲೇ ದೂರ ಉಳಿಯಿತು. ಬಿಹಾರದಲ್ಲಿ ರಾಜ್ಯಾಧಿಕಾರ ಅಧಿಕಾರ ಉಳಿಸಿಕೊಳ್ಳುವ ಕಾರಣಕ್ಕೆ ನಿತೀಶ್‌ ಕುಮಾರ್‌ ಬಿಹಾರದ ಮಟ್ಟಿಗೆ ಎನ್‌ಡಿಎ ಕೈ ಕುಲುಕಿಕೊಂಡಿದ್ದರು. ಈ ಚುನಾವಣೆಯಲ್ಲಿ ಏನಾದರೂ ಎನ್‌ಡಿಎ ಕೂಟಕ್ಕೆ ಹಿನ್ನೆಡೆಯಾದರೆ, ಖಂಡಿತವಾಗಿ ನಿತೀಶ್‌ ಬಿಜೆಪಿ ಸಹವಾಸದಲ್ಲಿ ಇರಲಾರರು. ಇದೇ ಮುಂದೆ ರಾಷ್ಟ್ರ ರಾಜಕಾರಣದಲ್ಲಿ ಆಗುವ ತಿರುವುಗಳಿಗೆ ಮೂಲ ಕಾರಣ ಆದರೂ ಆಗಬಹುದು.
ಚಿರಾಗ್‌ ನಡೆ ಸೃಷ್ಟಿಸಿರುವ ಯಕ್ಷ ಪ್ರಶ್ನೆ
ದಿವಂಗತ ರಾಂ ವಿಲಾಸ ಪಾಸ್ವಾನ್‌ ಅವರ ಲೋಕಜನಶಕ್ತಿ ಪಕ್ಷದೊಂದಿಗಿನ ಬಿಜೆಪಿ ವ್ಯವಹಾರ ಸ್ವತಃ ನಿತೀಶ್‌ ಕುಮಾರ್‌ ಅವರಿಗೂ ಅರ್ಥವಾಗುತ್ತಿಲ್ಲ. ನಿತೀಶ್‌ ಕುಮಾರ್‌ ಅವರನ್ನು ಸಿಎಂ ಅಭ್ಯರ್ಥಿ ಎಂದು ತಾನು ಒಪ್ಪಲಾರೆ ಎಂದು ಆ ಪಕ್ಷವನ್ನು ಮುನ್ನಡೆಸುತ್ತಿರುವ ಪಾಸ್ವಾನ್‌ ಪುತ್ರ ಚಿರಾಗ್‌ ಹೇಳಿದ್ದಾರೆ. ಜತೆಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರಗುಳಿದಿದ್ದಾರೆ. ಇಷ್ಟಾದರೂ ಚಿರಾಗ್‌ ಬಗ್ಗೆ ಬಿಜೆಪಿ ಮೃದುವಾಗಿದೆ.
ಗಯಾ ಜಿಲ್ಲೆಯಲ್ಲಿ ಬಿಹಾರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಅವರು, ನಿತೀಶ್‌ ಕುಮಾರ್‌ ಅವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದು ಪ್ರಧಾನಿ ಮೋದಿ ಅವರ ಆದೇಶ ಕೂಡ ಎಂಬುದನ್ನೂ ಹೇಳಿದ್ದಾರೆ. ಆದರೆ, ಬಿಜೆಪಿ ಸ್ಪರ್ಧೆ ಮಾಡಿರುವ ಕ್ಷೇತ್ರಗಳ ಹೊರತು ಪಡಿಸಿ ಬೇರೆಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಲೋಕಜನಶಕ್ತಿ ಪಕ್ಷ ದ ಚಿರಾಗ್‌ ವಿರುದ್ಧ ಬಿಜೆಪಿ ಮೌನ ವಹಿಸಿದೆ. ಈ ಮೌನದ ಅರ್ಥವೇನು ಎಂಬುದನ್ನು ಜೆಡಿಯು ನಾಯಕರು ಬಹಿರಂಗವಾಗಿಯೇ ಪ್ರಶ್ನೆ ಮಾಡುತ್ತಿದ್ದಾರೆ. ಈಗಿನ ಅಂದಾಜಿನ ಪ್ರಕಾರ ಬಿಹಾರದಲ್ಲಿ ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ. ಹಾಗೊಮ್ಮೆ ಆದರೆ ಇತರರ ಬೆಂಬಲದಿಂದ ‘ಆತ್ಮ ನಿರ್ಭರತೆ’ ಸಾಧಿಸುವುದು ಬಿಜೆಪಿಯ ಆಂತರಿಕ ಲೆಕ್ಕಾಚಾರವೇ? ಹಾಗಾದರೆ ಮೈತ್ರಿ ಧರ್ಮದ ಕತೆ ಏನು?
ಎಲ್ಲದಕ್ಕಿಂತ ಮುಖ್ಯವಾಗಿ ರಾಜಕೀಯವಾಗಿ ಅತಿ ಬುದ್ಧಿವಂತಿಕೆ ಮೆರೆಯಲು ಹೋಗಿ 2019ರ ಲೋಕಸಭಾ ಚುನಾವಣೆಯ ನಂತರ ಸತತವಾಗಿ ಬಿಜೆಪಿ ಸೋತ ಹತ್ತು ರಾಜ್ಯಗಳ ಸಾಲಿಗೆ ಹನ್ನೊಂದನೆಯದ್ದನ್ನು ಸೇರಿಸಲು ಹೊರಟಿದೆಯೇ?
ಜಯಪ್ರಕಾಶ್‌ ನಾರಾಯಣ್‌ ಹುಟ್ಟಿದ ನಾಡಿನ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಮತ್ತೊಂದು ತಿರುವು ನೀಡುವುದೇ? ಎಲ್ಲದಕ್ಕೂ ನವೆಂಬರ್‌ 10 ನಿರ್ಣಾಯಕ ದಿನ ಆಗುವುದು ಪಕ್ಕಾ!
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top