ಸಾವುಗಳನ್ನು ತಡೆಯುವ ಸವಾಲು – ಮುನ್ನೆಚ್ಚರಿಕೆಯೊಂದಿಗೆ ಆರ್ಥಿಕ ಚಟುವಟಿಕೆ

ಲಾಕ್‌ಡೌನ್‌ ಸುದೀರ್ಘ ಕಾಲಕ್ಕೆ ಮುಂದುವರಿದರೆ, ಕೊರೊನಾ ಸೊಂಕಿನಿಂದ ಸಾಯುವವರಿಗಿಂತಲೂ ಹಸಿವಿನಿಂದ ಸಾಯುವವರ ಸಂಖ್ಯೆಯೇ ಅಧಿಕವಾಗಲಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋಟ್ಯಂತರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಲಾಕ್‌ಡೌನ್‌ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ ಎಂದಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸುವ ಸಾವಿನ ದರ 0.25-0.5 ಶೇ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ. ಆದರೆ ಭಾರತದಂತಹ ದುಡಿಯುವ ಜನ ಇರುವ ದೇಶದಲ್ಲಿ ಲಾಕ್‌ಡೌನ್‌ ಹೆಚ್ಚು ಕಾಲ ಮುಂದುವರಿಯಬಾರದು. ದುರ್ಬಲರನ್ನು ರಕ್ಷಿಸುತ್ತಲೇ, ಕೆಲಸಕ್ಕೆ ಮರಳಲು ಸಮರ್ಥರಾದವರಿಗೆ ಅವಕಾಶ ನೀಡಬೇಕು ಎಂದು ಮೂರ್ತಿ ಪ್ರತಿಪಾದಿಸಿದ್ದಾರೆ.
ನಾರಾಯಣಮೂರ್ತಿ ಅವರ ವಾದದಲ್ಲಿ ಸತ್ಯಾಂಶವಿದೆ. ಲಾಕ್‌ಡೌನ್ ಆರಂಭವಾದ ಕೆಲವೇ ದಿನಗಳಲ್ಲಿ ವಲಸೆ ಕಾರ್ಮಿಕರು ಕೆಲಸ ದೊರೆಯದೆ ಊರಿಗೆ ಮರಳಿ ಗುಳೆ ಎದ್ದ ಗಂಭೀರ ಸಮಸ್ಯೆಯನ್ನು ನಾವೆಲ್ಲ ಕಂಡಿದ್ದೇವೆ. ಸಂಘಟಿತ ವಲಯದಲ್ಲೂ ಉತ್ಪಾದನಾ ಚಟುವಟಿಕೆಗಳು ನಡೆಯದಿರುವುದರಿಂದ ಉದ್ದಿಮೆಗಳು ನಷ್ಟದಲ್ಲಿವೆ. ಸ್ಟಾರ್ಟಪ್‌‌ಗಳು  ಮುಚ್ಚುವ ಸ್ಥಿತಿಯಲ್ಲಿವೆ. ಹೀಗಾಗಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು, ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇವರ ಇಎಂಐಗಳು ಪಾವತಿಯಾಗದಿದ್ದರೆ ಬ್ಯಾಂಕಿಂಗ್ ವ್ಯವಸ್ಥೆಗೂ ಕಷ್ಟ ಖಚಿತ. ಉದ್ಯೋಗ ಉಳಿಸಿಕೊಂಡವರು ಸಂಬಳ ಕಡಿತ ಇತ್ಯಾದಿ ಕಷ್ಟ ಎದುರಿಸುತ್ತಿದ್ದಾರೆ. ದೈನಂದಿನ ದುಡಿಮೆಯಿಂದ ಬದುಕುತ್ತಿದ್ದ ಸಾವಿರಾರು ಮಂದಿ ಸರಕಾರ ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಉಚಿತ ನೆರವನ್ನು ಅವಲಂಬಿಸಬೇಕಾಗಿ ಬಂದಿದೆ. ಇವೆಲ್ಲವೂ ಲಾಕ್‌ಡೌನ್‌ನಿಂದ ಆದ ಆರ್ಥಿಕ ಕುಸಿತದ ಪರಿಣಾಮ. ಕೋವಿಡ್‌ನಿಂದ ಇದುವರೆಗೆ ಸತ್ತವರು ಸಾವಿರ ಮಂದಿ ಆದರೆ, ಲಾಕ್‌ಡೌನ್ ಮುಂದುವರಿದರೆ ಹಸಿವಿನಿಂದ ಇನ್ನಷ್ಟು ಸಾವಿರ ಮಂದಿ ಸಾಯಬಹುದು ಎಂಬುದು ನಿಜ. ಹೀಗಾಗಿ ಲಾಕ್‌ಡೌನ್ ತೆಗೆದು ಆರ್ಥಿಕ ಚಟುವಟಿಕೆಗಳಿಗೆ ಹಾದಿ ಮಾಡಿಕೊಡುವುದು ಅನಿವಾರ್ಯ.
ಸರಕಾರ ಕೂಡ ಈ ದಿಸೆಯಲ್ಲಿ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಬಡವರಿಗೆ ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜನ್ನು ಎತ್ತಿಟ್ಟಿದೆ. ಆರೋಗ್ಯ ಸೇವೆಯನ್ನು ಸಜ್ಜುಗೊಳಿಸಿದೆ. ಕೋವಿಡ್ ಸೋಂಕಿತರ ಪ್ರಮಾಣ ಪರಿಗಣಿಸಿ ನಾಲ್ಕು ಜೋನ್‌ಗಳನ್ನು ನಿಗದಿಪಡಿಸಿದ್ದು, ಈ ಜೋನ್‌ಗಳಲ್ಲಿ ಚಟುವಟಿಕೆಗಳನ್ನು ಹಂತ ಹಂತವಾಗಿ ಸಡಿಲಿಸುತ್ತಿದೆ. ಗ್ರೀನ್ ಜೋನ್‌ಗಳಲ್ಲಿ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ವಲಯವಾರು ನೋಡಿದಾಗ, ಕೃಷಿ ಕ್ಷೇತ್ರದಲ್ಲಿ ಎಲ್ಲ ಬಗೆಯ ಕಾರ್ಯಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ರಿಯಾಲ್ಟಿ ಮತ್ತು ರಿಟೇಲ್ ಅಂಗಡಿಗಳ ವಲಯವನ್ನು ಭಾಗಶಃ ಮುಕ್ತಗೊಳಿಸಲಾಗಿದೆ. ಹೀಗೆ ಹಂತ ಹಂತವಾಗಿ ಲಾಕ್‌ಡೌನ್ ಮುಕ್ತಗೊಳಿಸುತ್ತಿರುವ ಕ್ರಮ ಶ್ಲಾಘನೀಯ. ಇದು ಮುಂದಿನ ದಿನಗಳಲ್ಲಿ ನಾವು ಹೊಸ ಬಗೆಯ ವಾಸ್ತವಕ್ಕೆ ನಮ್ಮನ್ನು ತೆರೆದುಕೊಳ್ಳುವುದಕ್ಕೆ ಇರುವ ಮುನ್ನುಡಿ.
ಲಾಕ್‌ಡೌನ್ ಮುಂದಿನ ದಿನಗಳಲ್ಲಿ ತೆರವಾಗಬಹುದು. ಆದರೆ ಸರಕಾರ ವೈದ್ಯಕೀಯ ಸುಸಜ್ಜಿತತೆ, ಪೊಲೀಸ್ ನಿಗಾ ಇತ್ಯಾದಿಗಳನ್ನು ಬಿಗಿಯಾಗಿ ಜಾರಿ ಮಾಡುವುದು ಅಗತ್ಯ. ಪ್ರಜೆಗಳಿಗೆ ಕೂಡ ಸೋಂಕು ಹಬ್ಬದಂತೆ ನೋಡಿಕೊಳ್ಳುವ ಹೊಣೆಗಾರಿಕೆಯಿದ್ದು, ಅವರೂ ಹೊಸ ವಾಸ್ತವಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸುವುದು ಅಗತ್ಯ. ಇದುವರೆಗಿನ ಲಾಕ್‌ಡೌನ್ ಅವಧಿಯನ್ನು ಒಂದು ತರಬೇತಿ ಕಾಲಾವಧಿಯಂತೆ ಪರಿಗಣಿಸಬೇಕು. ಈಗಿದ್ದಂತೆಯೇ ಸ್ವಚ್ಛತೆ, ಸೋಶಿಯಲ್ ಡಿಸ್ಟೆನ್ಸ್, ಸೋಂಕಿತರ ಕ್ವಾರಂಟೈನ್, ಸೋಂಕು ಶಂಕಿತರ ಐಸೋಲೇಶನ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಸೋಂಕಿನ ಹಬ್ಬುವ ಪ್ರವೃತ್ತಿ ಹೇಗೆ ಎಂಬುದು ನಮಗೆ ಈಗ ಚೆನ್ನಾಗಿ ಮನವರಿಕೆಯಾಗಿರುವುದರಿಂದ, ಎಲ್ಲರಲ್ಲೂ ಎಚ್ಚರಿಕೆ ಮೂಡಿದೆ. ಎಲ್ಲ ಆರ್ಥಿಕ ಚಟುವಟಿಕೆಗಳ ಜೊತೆಗೆ ಈ ಎಚ್ಚರಿಕೆಗಳನ್ನು ಇನ್ನಷ್ಟು ಕಾಲ ಮುಂದುವರಿಸಬೇಕು. ಆಗ ಎರಡು ಬಗೆಯ ಸಾವುಗಳೂ ತಪ್ಪಿ ಸಮಾಜ ಸ್ವಸ್ಥವಾದೀತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top