ಜನಜೀವನ ಇನ್ನಷ್ಟು ಮುಕ್ತ

ಇಂದಿನಿಂದ ಟೆಂಪಲ್‌, ಮಾಲ್‌, ಹೋಟೆಲ್‌ ಓಪನ್‌ | ಷರತ್ತುಗಳು ಅನ್ವಯ.
ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ. 

ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಮಾಲ್‌ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ.
ಕೊರೊನಾದ ಜತೆಗೇ ಬದುಕಬೇಕು ಎಂಬ ಸೂತ್ರದಡಿ, ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿದ್ದರೂ ಜನಜೀವನಕ್ಕೆ ಹಾಕಿದ ಬಾಗಿಲನ್ನು ಒಂದೊಂದಾಗಿ ತೆರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಲ್‌, ಟೆಂಪಲ್‌ ಮತ್ತು ಹೋಟೆಲ್‌ಗಳ ಆರಂಭ ದೊಡ್ಡ ಉಪಕ್ರಮವಾಗಿದೆ. ಆದರೆ, ಇದು ಸೋಂಕು ಹರಡುವಿಕೆಗೆ ತೆರೆದ ಬಾಗಿಲಾಗಬಾರದು ಎಂಬ ಕಾರಣಕ್ಕೆ ಕಟ್ಟೆಚ್ಚರದ ಕ್ರಮಗಳನ್ನು ಅನುಸರಿಸುವ ಷರತ್ತನ್ನು ವಿಧಿಸಲಾಗಿದೆ.
ಸರಕಾರದ ಷರತ್ತಿನಂತೆ ದೇವಾಲಯ, ಹೋಟೆಲ್‌, ಮಾಲ್‌ಗಳನ್ನು ತೆರೆಯಲು ಸಂಬಂಧಿತರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಕುಳಿತುಕೊಳ್ಳುವ ವ್ಯವಸ್ಥೆ, ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಗಡಿಭಾಗದವು ಸೇರಿದಂತೆ ಕೆಲವು ದೇವಾಲಯಗಳನ್ನು ತೆರೆಯುವಿಕೆಯನ್ನು ಒಂದೆರಡು ವಾರ ಮುಂದೂಡಲು ಬಯಸಿವೆ.

ತ್ರಿವಳಿ ತೆರವಿನ ಲಾಭವೇನು?
– ಜನರ ಓಡಾಟದಿಂದ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ
– ದೇವಾಲಯಗಳ ಭೇಟಿಯಿಂದ ಜನರಿಗೆ ಮಾನಸಿಕ ನೆಮ್ಮದಿ
– ಉದ್ಯೋಗಿಗಳು, ಕಾರ್ಮಿಕರಿಗೆ ಊಟೋಪಚಾರ ಲಭ್ಯ
– ಪ್ರವಾಸಿ ತಾಣಗಳ ಭೇಟಿಯಿಂದ ನಿರಾಳತೆ

ಎಚ್ಚರಿಕೆಯಿಂದ ಇರಿ ಎಂದ ಸಿಎಂ
ಸೋಮವಾರದಿಂದ ದೇವಾಲಯಗಳು, ಮಾಲ್‌, ಹೋಟೆಲಗಳು ಪುನರಾರಂಭ ಆಗಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ.

ದೇವರ ದರ್ಶನಕ್ಕೆ ಸಜ್ಜು
ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳು ಭಕ್ತರ ಪ್ರವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಆದರೆ, ಉಡುಪಿ, ಗೋಕರ್ಣ, ಮಹಾರಾಷ್ಟ್ರ ಗಡಿ ಭಾಗದ ಕೆಲವೊಂದು ದೇವಾಲಯಗಳು ಸ್ವಲ್ಪ ದಿನ ಕಾದು ತೆರೆಯುವ ಚಿಂತನೆಯಲ್ಲಿವೆ. ತೆರೆಯುವ ದೇವಾಲಯಗಳಲ್ಲೂ ದರ್ಶನ ಮಾತ್ರವಿದ್ದು, ಸೇವೆಗಳು ಇರುವುದಿಲ್ಲ. ಶೃಂಗೇರಿ ಶಾರದಾಂಬಾ ದೇಗುಲವೂ ತೆರೆಯಲಿದೆ.

ನಿಯಮ ಮೀರಬೇಡಿ
ಹಿರಿಯ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ

* ದೇವಾಲಯಗಳಲ್ಲಿ
– ಮಾಸ್ಕ್‌ ಕಡ್ಡಾಯ, 6 ಅಂತರ ಕಾಯಲು ರೇಲಿಂಗ್‌
– ವಿಗ್ರಹ, ಘಂಟೆ, ಧರ್ಮ ಗ್ರಂಥ ಮುಟ್ಟಬಾರದು
– ಪ್ರಸಾದ, ತೀರ್ಥವಿಲ್ಲ, ಹಣ್ಣುಕಾಯಿ ತರುವಂತಿಲ್ಲ
– ಧರ್ಮಸ್ಥಳ ಹೊರತಾಗಿ ಹೆಚ್ಚಿನೆಡೆ ವಸತಿ ವ್ಯವಸ್ಥೆ ಇಲ್ಲ

–ಹೋಟೆಲ್‌ಗಳಲ್ಲಿ–
– ಏಕಕಾಲದಲ್ಲಿ 50% ಗ್ರಾಹಕರಿಗೆ ಅವಕಾಶ
– ಬಳಸಿ ಎಸೆವ ಮೆನು, ಬಟ್ಟೆ ಬದಲು ನ್ಯಾಪ್ಕಿನ್‌
– ತಿನ್ನಲು ಕೂರುವಾಗ ಸಾಮಾಜಿಕ ಅಂತರ
– ಪ್ರತಿ ಬಾರಿಯೂ ಟೇಬಲ್‌ ಸ್ಯಾನಿಟೈಸೇಷನ್‌

— ಮಾಲ್‌ಗಳಲ್ಲಿ–
– ಸಾಮಾಜಿಕ ಅಂತರದ ಮೇಲೆ ನಿಗಾ
– ಕ್ಯಾಶ್‌ ಬದಲು ಡಿಜಿಟಲ್‌ ಪಾವತಿಗೆ ಆದ್ಯತೆ
– ಮಕ್ಕಳ ಗೇಮ್ಸ್‌, ಆಟಕ್ಕೆ ಅವಕಾಶವಿಲ್ಲ
– ಮಲ್ಟಿಪ್ಲೆಕ್ಸ್‌ ತೆರೆಯಲು ಅವಕಾಶವಿಲ್ಲ

–ಪ್ರವಾಸಿ ತಾಣ ಓಪನ್‌–
– ಬನ್ನೇರುಘಟ್ಟ ಉದ್ಯಾನವನ, ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಆರಂಭ
– ಚಿಕ್ಕಮಗಳೂರು, ಕೊಡಗಿನಲ್ಲಿ ರೆಸಾರ್ಟ್‌ಗಳು ಮುಕ್ತ, ಮೈಸೂರು ಮೃಗಾಲಯವೂ ತೆರೆಯಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top