1ರಿಂದ ಮಂದಿರ ಓಪನ್ – ಹೋಟೆಲ್‌ಗಳ ಆರಂಭಕ್ಕೂ ಸಿಎಂ ಯಡಿಯೂರಪ್ಪ ಸಮ್ಮತಿ

ವಿಕ ಸುದ್ದಿಲೋಕ ಬೆಂಗಳೂರು:

ಸುಮಾರು ಎರಡು ತಿಂಗಳ ಬಳಿಕ ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು, ಹೋಟೆಲ್‌ಗಳು ಪುನರಾರಂಭಗೊಳ್ಳಲಿವೆ.  ಮಾಲ್‌ಗಳೂ ತೆರೆಯುವ ನಿರೀಕ್ಷೆ ಇದೆ. ಕೊರೊನಾ ಸುರಕ್ಷತಾ ವ್ಯವಸ್ಥೆಯೊಂದಿಗೆ, ಸಾಮಾಜಿಕ ಅಂತರದ ಎಚ್ಚರ ಕಾಪಾಡಿಕೊಂಡು ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ಮಂದಿರಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ತಿಳಿಸಿದ್ದಾರೆ. ಇದರ ಜತೆಗೆ, ಈ ಹಿಂದೆ ಘೋಷಿಸಿದಂತೆ 52 ದೇವಸ್ಥಾನಗಳಲ್ಲಿ ಆನ್‌ಲೈನ್‌ ಸೇವೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಈ ಸಂಬಂಧ ಮುಜರಾಯಿ ಸಚಿವ ಕೋಟ  ಶ್ರೀನಿವಾಸ ಪೂಜಾರಿ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು. ದೇವಸ್ಥಾನಗಳಲ್ಲಿ ಸುರಕ್ಷತಾ ಕ್ರಮ ಕುರಿತು ಬುಧವಾರ ಸಭೆ ನಡೆಯಲಿದೆ.ಈ ನಡುವೆ, ಜೂ.1ರಿಂದ ಹೋಟೆಲ್ ತೆರೆಯಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೋಟೆಲ್ ಮಾಲೀಕರಿಗೆ ಭರವಸೆ ನೀಡಿದ್ದಾರೆ. ರಾಜ್ಯ ಹೋಟೆಲ್ ಮಾಲೀಕರ ಸಂಘ, ಸೌತ್ ಇಂಡಿಯಾ ಹೋಟೆಲ್ ಅಸೋಸಿಯೇಷನ್, ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘಗಳ ನಿಯೋಗ ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸಿತು.  ನಿಯೋಗದಲ್ಲಿ ಸೌತ್ ಇಂಡಿಯಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮರಾಜು ಮತ್ತಿತರರಿದ್ದರು.‘‘ಬಸ್, ಆಟೊ ಜತೆಗೆ ವಿಮಾನಗಳ ಹಾರಾಟವೂ ಆರಂಭವಾಗಿದೆ. ಹೀಗಾಗಿ ಜನಸಂಚಾರ ಹೆಚ್ಚಾಗಿದ್ದು, ಜನರಿಗೆ ಊಟ, ತಿಂಡಿಯ ಅವಶ್ಯಕತೆ ಇದೆ. ಲಕ್ಷಾಂತರ ಮಂದಿ ಹೋಟೆಲ್ ಕಾರ್ಮಿಕರು, ಮಾಲೀಕರು ಅತಂತ್ರಗೊಂಡಿದ್ದಾರೆ. ಹೀಗಾಗಿ ಹೋಟೆಲ್ ತೆರೆಯಲು ಅನುಮತಿ ನೀಡಬೇಕು,’’ ಎಂದು ವಿನಂತಿಸಲಾಯಿತು.

ಕೋರ್ಟ್ ಕಲಾಪ ಜೂ. 1ರಿಂದ ಕೋರ್ಟ್‌ಗಳ ದೈನಂದಿನ ಕಲಾಪ ಆರಂಭವಾಗಲಿರುವುದರಿಂದ ಜಿಲ್ಲಾ ನ್ಯಾಯಾಲಯಗಳಿಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ 38 ಅಂಶಗಳ ಮಾರ್ಗಸೂಚಿಯ ಆದೇಶ ಹೊರಡಿಸಿದ್ದಾರೆ. ಕೋರ್ಟ್ ಹಾಲ್‌ಗಳಲ್ಲಿ 20ಕ್ಕಿಂತ ಹೆಚ್ಚು ವಕೀಲರು, ಸಿಬ್ಬಂದಿ ಇರುವಂತಿಲ್ಲ. ಮೊದಲೆರಡು ವಾರ ಸಾಕ್ಷ್ಯ ವಿಚಾರಣೆ ಇಲ್ಲ.

ರಾಜ್ಯದಲ್ಲಿ ಮತ್ತೆ 101 ಕೇಸ್‌ :ರಾಜ್ಯದಲ್ಲಿ ಮಂಗಳವಾರ ಇನ್ನೂ 101 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 81 ಹೊರರಾಜ್ಯದಿಂದ ಬಂದವರು. ಗ್ರೀನ್‌ಝೋನ್‌ ಎನಿಸಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ 20 ಜನರಿಗೆ ಪಾಸಿಟಿವ್ ಬಂದಿರುವುದು ಕೋಟೆ ನಗರಿಯ ಜನರನ್ನು ಬೆಚ್ಚಿ ಬಿದ್ದಿದೆ. ಇವರೆಲ್ಲರೂ ತಮಿಳುನಾಡಿನಿಂದ ಬಂದವರು.

ಸಾವಿನ ಸಂಖ್ಯೆ 8,000 ದಾಟದು:  ಎಲ್ಲ ರಾಜ್ಯಗಳಲ್ಲೂ ನಿರ್ಬಂಧಗಳ ಕಟ್ಟುನಿಟ್ಟಿನ ಪಾಲನೆ ಮಾಡಿದರೆ ದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆ 8,000 ದಾಟದಂತೆ ನೋಡಿಕೊಳ್ಳಬಹುದು ಎಂದು ಆರೋಗ್ಯ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಏಳು ರಾಜ್ಯಗಳಲ್ಲಿ ದೇಶದ ಶೇ.70ರಷ್ಟು ಸೋಂಕಿತರಿದ್ದಾರೆ. ಈ ರಾಜ್ಯಗಳ ಬಗ್ಗೆ ವಿಶೇಷ ಗಮನ ನೀಡಿದರೆ ಸೋಂಕು ನಿಯಂತ್ರಣ ಸುಲಭ ಎಂದೂ ಅವರು ಹೇಳಿದ್ದಾರೆ.

ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರ ಸಂಕಷ್ಟದ ಕುರಿತು “ವಿಜಯ ಕರ್ನಾಟಕ’ ಮೇ 24ರ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ನಾವು ಸಿಎಂ ಅವರನ್ನು ಭೇಟಿಯಾದೆವು. ಹೋಟೆಲ್ ತೆರೆಯಲು ಮೇ 31ರೊಳಗೆ ಅನುಮತಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. – ಚಂದ್ರಶೇಖರ ಹೆಬ್ಬಾರ್, ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ 

ಸಾಮಾಜಿಕ ಅಂತರ ಕಾಯ್ದುಕೊಂಡು ಹೋಟೆಲ್ ನಡೆಸಲಾಗುವುದು. ಮಾರ್ಗಸೂಚಿ ಅನುಸರಿಸಲು ಸಿದ್ಧ.- ಪಿ. ಸಿ. ರಾವ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top