– ವರ್ಗಾವಣೆ ತಪ್ಪಿಸಿಕೊಳ್ಳಲು ಶಾಲಾ ಶಿಕ್ಷಕರ ಹೊಸ ಸಿಲೆಬಸ್
– ಆರ್.ಶ್ರೀಧರ್ ರಾಮನಗರ.
ಹೊಸದಾಗಿ ನಿಯೋಜನೆಗೊಂಡ ಶಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡುವುದು. ಆ ಮೂಲಕ ಸಸ್ಪೆಂಡ್ ಆಗುವುದು. ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತುಪಡಿಸಿ ತಾವು ಕೆಲಸ ಮಾಡುತ್ತಿದ್ದ ಹಳೆಯ ಶಾಲೆಯಲ್ಲೇ ಮರು ನಿಯೋಜನೆಗೊಳ್ಳುವುದು…!
ಹೇಗೆ ಪ್ಲ್ಯಾನ್? ಹೌದು, ಕೆಲವು ಶಿಕ್ಷಕರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಇಂಥದೊಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಯೊಂದರಲ್ಲೇ ಆಗಿರುವ 105 ಶಿಕ್ಷಕರ ಅಮಾನತು ಪ್ರಕರಣಗಳಲ್ಲಿ 95 ಪ್ರಕರಣಗಳಲ್ಲಿ ಶಿಕ್ಷಕರು ನಿರ್ದೋಷಿ ಎಂದು ಕಳಂಕಮುಕ್ತಗೊಂಡಿರುವುದೇ ಇದಕ್ಕೆ ನಿದರ್ಶನ. ಮೂರು ದಿನದ ಹಿಂದೆ ರಾಮನಗರ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುತ್ತಿರುವ ಹೊಸ ದಂಧೆಯನ್ನು ಬಯಲಿಗೆಳೆದಿದ್ದಾರೆ.
ನಿಯಮಗಳ ಪ್ರಕಾರ ಶಾಲಾ ಶಿಕ್ಷ ಕರು ವರ್ಗಾವಣೆಯಲ್ಲೇ ಆಗಲೇಬೇಕು. ಆದರೆ, ಬಹುತೇಕರು ತಮ್ಮ ತವರೂರಿನಲ್ಲಿಯೇ ಶಿಕ್ಷಕರಾಗಿ ಮುಂದುವರಿಯುತ್ತಿದ್ದಾರೆ. ವರ್ಗಾವಣೆ ಆದ ಸಮಯದಲ್ಲಿ ಬೇರೆ ಊರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸರಕಾರದ ನಿಯಮಕ್ಕೆ ವಾಮಮಾರ್ಗದ ಮೂಲಕ ಸಡ್ಡು ಹೊಡೆಯುತ್ತಿದ್ದಾರೆ.
ಇಲ್ಲಿದೆ ನಿದರ್ಶನ
ಮಾಗಡಿ ತಾಲೂಕಿನ ಮುಖ್ಯ ಶಿಕ್ಷಕರೊಬ್ಬರು ಕನಕಪುರ ತಾಲೂಕಿನ ಹುಲಿಮಲೆ ಗ್ರಾಮದ ಸರಕಾರಿ ಶಾಲೆಗೆ ಮುಖ್ಯಶಿಕ್ಷಕನಾಗಿ ವರ್ಗಾವಣೆಯಾಗಿದ್ದರು. ಇವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಶಾಲಾಭಿವೃದ್ಧಿ ಹಣವನ್ನು ಖರ್ಚು ಮಾಡಿಲ್ಲ ಎಂಬ ಕಾರಣಕ್ಕೆ ಸಸ್ಪೆಂಡ್ ಆಗಿದ್ದರು. ಕೆಲ ದಿನಗಳ ನಂತರ ಕರ್ತವ್ಯಕ್ಕೆ ಮರು ನಿಯೋಜನೆಗೊಂಡಿದ್ದಾರೆ. ಅವರನ್ನು ಮತ್ತೆ ಮಾಗಡಿಯ ಸರಕಾರಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಸಸ್ಪೆಂಡ್ ಮಾಡೋದು, ನಿರ್ದೋಷಿ ಅನ್ನೋದು ನಂತರ ಶಿಕ್ಷಕ ಕೇಳಿದ ಜಾಗಕ್ಕೆ ನಿಯೋಜಿಸುವುದು ಇದರ ವೈಶಿಷ್ಟ್ಯ.
ಅಮಾನತು ಆದೇಶದಲ್ಲಿ ವರ್ಗಾವಣೆ ತಪ್ಪಿಸಿಕೊಂಡ ಇದೇ ಮುಖ್ಯ ಶಿಕ್ಷಕ ಈಗ ಮಾಗಡಿಯಲ್ಲಿ ತನ್ನ ಮನೆಯಿಂದ ಕೇವಲ 100 ಮೀಟರ್ ಅಂತರದ ಶಾಲೆಯಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾರೆ.
ಸುಲಭ ಮಾರ್ಗ
ಈ ಮೊದಲು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಯಾಗಬೇಕಿದ್ದರೆ, ಶಾಸಕರು, ಸಚಿವರನ್ನು ಅಂಗಲಾಚಬೇಕಿತ್ತು. ಆದರೆ, ಈಗೆಲ್ಲ ಸಸ್ಪೆಂಡ್ ತಂತ್ರದ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ, ಊರು ಬಿಟ್ಟರೂ ಮತ್ತೆ ಅದೇ ಊರಿನಲ್ಲಿ ಮರುಸೇವೆ ಸಲ್ಲಿಸಬಹುದಾಗಿದೆ.
ವರವಾದ ನಿಯಮ!
ಯಾವುದೋ ಕಾರಣಕ್ಕೆ ಸಸ್ಪೆಂಡ್ ಆದ ಶಿಕ್ಷಕನನ್ನು ಅದೇ ಶಾಲೆಯಲ್ಲಿ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ನಿಯಮವೇ ಮೈಗಳ್ಳ ಶಿಕ್ಷಕರಿಗೆ ವರದಾನವಾಗಿದೆ. ಹೀಗಾಗಿ ಶಿಕ್ಷಕ ಕೇಳಿದ ಕ್ಷೇತ್ರಕ್ಕೆ ನಿಯೋಜಿಸುವ ಸಲುವಾಗಿಯೇ ಅಮಾನತು ಅಸ್ತ್ರ ಪ್ರಯೋಗವಾಗುತ್ತಿದೆ.
+++++++++++++++++
ಶಿಕ್ಷಣ ಇಲಾಖೆಯಲ್ಲಿ ಸಸ್ಪೆಂಡ್ ಮಾಡೋದು ಮತ್ತೆ ಮರು ನಿಯೋಜನೆ ಮಾಡೋದು ಒಂದು ದಂಧೆಯಾಗಿದೆ. ಇದು ಇಲಾಖೆ ಅಧಿಕಾರಿಗಳಿಗೆ ತಿಳಿಯದೆಯೇ ನಡೆಯುತ್ತಿದೆಯೇ? ಇದನ್ನು ಹಗಲು ದರೋಡೆ ಎನ್ನಬಹುದು.
-ಡಿ.ಕೆ.ಶಿವಕುಮಾರ್, ರಾಮನಗರ ಜಿಪಂ ಸದಸ್ಯ
+++++++++++++++
ಕನಕಪುರ ಮುಖ್ಯಶಿಕ್ಷಕರನ್ನು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಶಿಪಾರಸಿನ ಮೇರೆಗೆ ಸಸ್ಪೆಂಡ್ ಮಾಡಲಾಗಿದೆ, ತಮ್ಮ ಅವಧಿಯಲ್ಲಿ ಕೇವಲ 4 ಸಸ್ಪೆಂಡ್ ಪ್ರಕರಣಗಳಿವೆ. ರಿಇನ್ಸ್‌ಸ್ಟೇಟ್ ಆದ ನಂತರ ಅವರನ್ನು ಮಾಗಡಿಗೆ ತತ್ಕಾಲಿಕವಾಗಿ ನಿಯೋಜಿಸಲಾಗಿದೆ.
-ಸೋಮಶೇಖರಯ್ಯ, ಡಿಡಿಪಿಐ,ರಾಮನಗರ