ಕೊರೊನಾ ನಡುವೆ ಶಿಕ್ಷಕರ ಸ್ಫೂರ್ತಿಯ ಸೆಲೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಅನೇಕರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ವೈದ್ಯರು, ದಾದಿಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ. ಕೊರೊನಾ ಯೋಧರ ಸಾಲಿನಲ್ಲಿ ಬರುವ ಶಿಕ್ಷಕರು ಜೀವದ ಹಂಗು ತೊರೆದು ಹೇಗೆ ಕೆಲಸ ಮಾಡುತ್ತಿದ್ದಾರೆ? ಪ್ರತಿಕೂಲ ಪರಿಸ್ಥಿತಿಯಲ್ಲೂ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ? ಶಿಕ್ಷಕರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

ಜಾಗೃತಿ ಮೂಡಿಸಿದ ‘ಉಷಾ’
ಲಾಕ್‌ಡೌನ್‌ ಸಮಯದಲ್ಲೂ ತಮ್ಮದೇ ಆದ ಸುರಕ್ಷಾ ಮಾರ್ಗಗಳ ಮೂಲಕ ಶಾಲೆಯ ಮಕ್ಕಳು ಆಟ ಪಾಠ ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಂಡಿದ್ದಾರೆ. ಕೊರೊನಾ ಕುರಿತು ಮಕ್ಕಳು ಹಾಗೂ ಅವರ ಪೋಷಕರನ್ನು ಶಾಲೆಗೆ ಕರೆಸಿ ಸೋಂಕಿನ ಬಗ್ಗೆ ಅಗತ್ಯ ಜಾಗೃತಿಯನ್ನು ವಿಡಿಯೊ ಚಿತ್ರಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಪೆಂಡ್ಲಿವಾರಹಳ್ಳಿಯ ಶಾಲಾ ಶಿಕ್ಷಕಿ ವಿ.ಉಷಾ ಮಾಡಿದ್ದಾರೆ. ಹೊರಗಿನಿಂದ ಊರಿಗೆ ಬಂದವರು ಹಾಗೂ ಊರಿನವರೆ ಹೊರಗೆ ಹೋಗಿ ಬಂದರೆ ಅವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ನೆರವಾಗಿದ್ದಾರೆ. ಇವರ ಕಾರ್ಯಕ್ಕೆ ಶಾಲೆಯ ಮತ್ತೊಬ್ಬ ಶಿಕ್ಷಕ ಚನ್ನಕೃಷ್ಣ ಹಾಗೂ ಹಿರಿಯ ವಿದ್ಯಾರ್ಥಿಗಳು, ಎಸ್ಡಿಎಂಸಿಯವರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ದಾರೆ.

ಮಾಹಿತಿ ನೀಡಲು ಹಿಂದೇಟು
ಕಲಬುರಗಿ ತಾಲೂಕಿನ ಡೊಂಗರಗಾಂವ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮೀನಾಕ್ಷಿ ಅವರು ಕೊರೊನಾ ವಾರಿಯರ್ ಆಗಿ ಗಮನ ಸೆಳೆದಿದ್ದಾರೆ. ಕೊರೊನಾ ಆತಂಕ ಆರಂಭಗೊಂಡ ದಿನಗಳಲ್ಲಿ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವ ವೇಳೆ ಕೆಲವು ಕುಟುಂಬಗಳು ಸಿಎಎ ಸಲುವಾಗಿ ಮಾಹಿತಿ ಸಂಗ್ರಹಿಸುವುದಾದರೆ ತಾವು ಮಾತೇ ಆಡುವುದಿಲ್ಲ ಎಂದು ಜನರು ಪ್ರತಿಭಟಿಸಿದ್ದೂ ಇದೆ. ಇಂಥ ಜನರಿಗೆ ಕೊರೊನಾ ಗುಣಲಕ್ಷಣ ಕುರಿತು ತಿಳಿಸಿ ಹೇಳಿ, ಬಳಿಕ ಅವರ ಮನೆಗಳಲ್ಲಿ ಗಂಭೀರ ಸ್ವರೂಪದ ಕಾಯಿಲೆ ಇರುವ ವ್ಯಕ್ತಿಗಳ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ.

ಚೆಕ್‌ಪೋಸ್ಟ್‌ ಡ್ಯೂಟಿ
ಜೇವರ್ಗಿ ತಾಲೂಕಿನ ಯಾತನೂರ್ ಸರಕಾರಿ ಶಾಲೆ ಶಿಕ್ಷಕ ರಾಮನಗೌಡ ಎಸ್.ಮಣೂರ್ ಅದೇ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೊರ ರಾಜ್ಯಗಳಿಂದ ಕದ್ದುಮುಚ್ಚಿ ಬರುತ್ತಿದ್ದ ಜನರನ್ನು ತಡೆದು ಅವರ ಕುರಿತಾದ ಪೂರ್ಣ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವ ಕೆಲಸವನ್ನು ಮಾಡಿದ್ದಾರೆ. ಇನ್ನೊಂದೆಡೆ, ಆಳಂದ ತಾಲೂಕಿನ ನೆಲ್ಲೂರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಣ್ಣಾರಾಯ ಬಿರಾದಾರ್ ಮನೆಗಳ ಸಮೀಕ್ಷೆ ಕೈಗೊಂಡಿದ್ದಾರೆ. ಈ ತಾಲೂಕಿನ ತಾಂಡಾಗಳ ಬಹುತೇಕ ಜನರು ಮುಂಬಯಿ ಮಹಾನಗರಕ್ಕೆ ಕೆಲಸಕ್ಕಾಗಿ ವಲಸೆ ಹೋಗಿ ವಾಪಸ್ ಆಗಿದ್ದಾರೆ. ಈ ಜನರ ಸಮೀಕ್ಷೆ ಕೈಗೊಂಡು ಜಿಲ್ಲಾಡಳಿತದ ಜೊತೆಗೆ, ಪಾಸಿಟಿವ್ ವ್ಯಕ್ತಿಗಳ ಮಾಹಿತಿಯನ್ನು ಆರೋಗ್ಯ ಸೇತು ಆ್ಯಪ್‌ಗೆ ಮಾಹಿತಿ ಅಪ್ಲೋಡ್ ಮಾಡುವ ಕೆಲಸ ನಿಭಾಯಿಸಿದ್ದಾರೆ.

ಹಂದರ ಹಾಕುವ ದಿನವೂ ಹಾಜರಿ!
ಮದುವೆಗೆ ಹಂದರ ಹಾಕುವ ದಿನ, ಮದುವೆಯಾದ ವಾರದೊಳಗೆ ಕರ್ತವ್ಯಕ್ಕೆ ಹಾಜರಾಗುವ ಜತೆಗೆ ಸರಕಾರದ ಆದೇಶಕ್ಕೂ ಮುನ್ನವೇ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಕೊರೊನಾ ಜಾಗೃತಿ, ಪಾಠ ಆರಂಭಿಸಿದ ಹಗರಿಬೊಮ್ಮನಹಳ್ಳಿ ಆದರ್ಶ ಶಾಲೆಯ ಶಿಕ್ಷ ಕ ಸಂತೋಷ್‌ಕುಮಾರ್‌ ಕೊಟಿಗಿ. ಲಾಕ್‌ಡೌನ್‌ ವೇಳೆ ನಿಗದಿತ ಅವಧಿಯಲ್ಲಿ ನಿತ್ಯವೂ 40 ಕಿ.ಮೀ.ನಷ್ಟು ಬೈಕ್‌ನಲ್ಲಿ ಸಂಚರಿಸಿ ಶಾಲೆಯ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಲಾಕ್‌ಡೌನ್‌ ತೆರವು ಬಳಿಕ ನಿತ್ಯವೂ ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಯ ಮೊದಲ ಅಥವಾ ಕೊನೆಯ ಅಂಶವೂ ಕೊರೊನಾ ಕುರಿತ ಜಾಗೃತಿಯಾಗಿರುತ್ತದೆ. ಆರೋಗ್ಯದ ಅಭಯ ನೀಡುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಶೈಕ್ಷಣಿಕ ವಾರಿಯರ್ ಕುರಿತು ವಿದ್ಯಾರ್ಥಿಗಳಿಗೆ ತುಂಬಾ ಗೌರವವಿದೆ.

ಸೋಂಕಿತರನ್ನು ಸಲುಹಿದ ತೃಪ್ತಿ
‘‘ಉಟಕ್ಕೆ ತೊಂದರೆಯಾಗಿದೆ, ನೀರು ಸಿಗುತ್ತಿಲ್ಲ…ಮೇಡಂ’’ ಅಂತ ಸೋಂಕಿತರು ಬೇಡಿಕೆ ಇಟ್ಟಾಗಲೆಲ್ಲ ಅವರಿಗೆ ನೀರು, ಊಟ ನೀಡಿ ಪ್ರೀತಿಯಿಂದ ನೋಡಿಕೊಂಡ ತೃಪ್ತಿ ನಮಗಿದೆ. ಜಿಲ್ಲೆಯ ಗಡಿಗಳು ಸಂಚಾರಕ್ಕೆ ಮುಕ್ತವಾದ ನಂತರ ಹೆಚ್ಚಿನ ಸೋಂಕು ಪತ್ತೆಯಾಗಿ ಆತಂಕಕ್ಕೆ ಕಾರಣವಾಯಿತು. ಆದರೆ ಈ ಸಂದರ್ಭದಲ್ಲಿಯೂ ಎದೆಗುಂದದೆ, ಯಾವ ಅಂಜಿಕೆಯೂ ಇಲ್ಲದೇ ನಮ್ಮ ಸುರಕ್ಷತೆಯನ್ನೂ ನೋಡಿಕೊಂಡು ಕೊರೊನಾ ಸೋಂಕಿತರ ಸೇವೆಯನ್ನು ಮಾಡಿದ್ದೇವೆ. ಚೆಕ್‌ಪೋಸ್ಟ್‌, ಕ್ವಾರಂಟೈನ್ ಕೆಲಸದೊಂದಿಗೆ ಮನೆ ಮನೆ ಗಣತಿ ಕಾರ್ಯವನ್ನೂ ಶಿಕ್ಷಕರು ಮಾಡಿದ್ದು, ಸೋಂಕಿತರ ಬಗ್ಗೆ ಕಾಳಜಿ ತೋರಿ, ಅವರು ಗುಣಮುಖರಾಗಲು ನೆರವಾದ ಸಂತೃಪ್ತಿ ನಮ್ಮಲ್ಲಿದೆ.
– ಎಂ.ಕೆ ಮಂಜುಳಾ ಶಿಕ್ಷಕಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಡಿಕೇರಿ.

ಇದು ಮಾನವೀಯ ಕಾರ್ಯ
ಶಿಕ್ಷಣ ಇಲಾಖೆ ಸಿಆರ್‌ಪಿಯಾದ ನನ್ನನ್ನು ಈ ಕೋವಿಡ್ ಕಾಲಮಾನದಲ್ಲಿ ವಯಸ್ಸಾದವರು, ತೀವ್ರ ಉಸಿರಾಟದಿಂದ ಬಳಲುತ್ತಿರುವವರು, ಮಕ್ಕಳ ಸಮೀಕ್ಷೆಗೆಂದು ನೇಮಕ ಮಾಡಲಾಗಿತ್ತು. ಈ ಕಾರ್ಯವನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ. ಇದೀಗ ಅಂತಾರಾಜ್ಯ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಆ ಭಾಗದಿಂದ ಬರುವ ಮಂದಿ ಅನುಮತಿ ಪಡೆದಿದ್ದಾರೆಯೇ ಇಲ್ಲವೇ ಎಂಬ ದಾಖಲಾತಿ ಪರಿಶೀಲಿಸುವ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಈ ನಡುವೆ ಶಿಕ್ಷಣ ಇಲಾಖೆ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇವೆ. ಕರ್ತವ್ಯ ಮುಗಿಸಿ ಮನೆಗೆ ಹೋಗಲು ಸಹ ಆತಂಕ ಇದ್ದೇ ಇದೆ. ನಾವು ಸೋಂಕಿತರಾದರೆ, ಮನೆಯವರಿಗೆ, ಮಕ್ಕಳಿಗೆ, ವಯಸ್ಸಾದ ತಂದೆ, ತಾಯಿಗಳಿಗೆ ಹರಡಿದರೆ ಮಾಡುವುದೇನು ಎಂಬ ಭಯ ಇದ್ದೇ ಇದೆ.
-ಎಲ್. ಗೋವಿಂದರಾಜು ಸಿಆರ್‌ಪಿ, ಕೋಳಿಪಾಳ್ಯ ಕ್ಲಸ್ಟರ್, ಚಾಮರಾಜನಗರ

ಅನುಮಾನದಿಂದ ನೋಡುತ್ತಿದ್ದರು
ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಯಾರು ಎಂದು ಕೂಗಿ, ಬಾಗಿಲು ತೆರೆಯದೇ, ಕಿಟಕಿಯಲ್ಲಿ ಇಣುಕಿ ನಮ್ಮನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದರು… ಅಂಥವರಿಗೆ ನಮ್ಮ ಪರಿಚಯ ಹೇಳಿಕೊಂಡು ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಮನೆಮನೆಗೆ ತೆರಳಿ ಸಮೀಕ್ಷೆಯಂತಹ ಕೆಲಸ ಮಾಡಲು ಮೊದಲು ಭಯವಿತ್ತು. ಇದು ನಮಗೆ ಹೊಸ ಅನುಭವವೂ ಹೌದು. ಕೊರೊನಾ ವಾರಿಯರ್ ಆಗಿ ಮನೆ ಮನೆ ಭೇಟಿಯ ಸಮಯದಲ್ಲಿ ಆದ ಅನುಭವಗಳು ವಿಭಿನ್ನ. ಜನರಲ್ಲಿ ಕೊರೊನಾ ಭಯ ಹೋಗಲಾಡಿಸುವ, ಜಾಗೃತಿ ಮೂಡಿಸುವ ಕಾರ್ಯವನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ಮಾಡಿದ್ದೇವೆ. ಇದು ಮುಂದುವರಿಯಬೇಕಿದೆ.
-ಎಂ.ಇ.ಶಿವಣ್ಣ ಸಹ ಶಿಕ್ಷಕ, ಪಿಇಎಸ್ ಪ್ರೌಢಶಾಲೆ, ಮಂಡ್ಯ

25 ಕಿ.ಮೀ. ದೂರ ಸಂಚಾರ
ಕೊರೊನಾ ಜಾಗೃತಿ ಮೂಡಿಸುವ ಜವಾಬ್ದಾರಿ ವಹಿಸಿದಾಗ ಮೊದಲು ಸ್ವಲ್ಪ ಆತಂಕವಿತ್ತು. ನಂತರ ಧೈರ್ಯ, ಕಾಳಜಿಯಿಂದಲೇ ಆ ಕೆಲಸವನ್ನು ಮಾಡಿದ್ದೇವೆ. ಸಾಮಾಜಿಕ ಅಂತರ, ಸ್ವಯಂ ರಕ್ಷಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸಿಸುವಂತೆ, ವ್ಯಾಯಾಮ ಮಾಡುವಂತೆ ಅರಿವು ಮೂಡಿಸಿದ್ದೇವೆ. ಕೊರೊನಾ ಕಾಲದಲ್ಲಿ ಸೋಂಕು ಬಗ್ಗೆ ಜನರಿಗೆ ಜಾಗೃತಿ ಜೊತೆಗೆ, ನಮ್ಮ ಶಾಲೆ ಮಕ್ಕಳು ಓದಿನಿಂದ ದೂರ ಆಗದಂತೆ ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಲಾಕ್‌ಡೌನ್‌ನಿಂದ ಬಸ್ ಇಲ್ಲದಿರುವ ಸಮಯದಲ್ಲೂ 25 ಕಿ.ಮೀ. ದೂರದ ಚಟ್ನಹಳ್ಳಿ ಹೋಗಿ ಕೊರೊನಾ ಜಾಗೃತಿ ಮೂಡಿಸುವುದು ಹಾಗೂ ಮಕ್ಕಳನ್ನು ಓದಿನೆಡೆಗೆ ಸೆಳೆಯುವ ಕಾಯಕವನ್ನು ಮಾಡುತ್ತಲೇ ಇದ್ದೇವೆ.
– ಕುಮುದಾ ಮುಖ್ಯಶಿಕ್ಷಕಿ, ಚಟ್ನಹಳ್ಳಿ ಸರಕಾರಿ ಪ್ರೌಢಶಾಲೆ, ಮೈಸೂರು ತಾಲೂಕು.

ಜನರಲ್ಲಿತುಂಬ ಹೆದರಿಕೆ ಇತ್ತು
ಸಮೀಕ್ಷೆ ಮಾಡುವಾಗ ಕೊರೊನಾ ಆರ್ಭಟವೂ ಜೋರಾಗಿತ್ತು. ಜತೆಗೆ ಆಗ ಕ್ವಾರಂಟೈನ್ ಮಾಡಲಾಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಗರ್ಭಿಣಿ, ಬಾಣಂತಿಯರು ಇರುವ ಮನೆಗಳಲ್ಲಿ ಬಹಳ ಹೆದರಿಕೊಂಡಿದ್ದರು. ವಯಸ್ಕರಿದ್ದ ಕೆಲ ಮನೆಗಳಲ್ಲಿ ಮಾಹಿತಿಯನ್ನ ಮುಚ್ಚಿಡುವ ಪ್ರಯತ್ನ ಕೂಡ ಮಾಡುತ್ತಿದ್ದರು. ಸಂಚಾರ ವ್ಯವಸ್ಥೆ ಇಲ್ಲದ ಕಾರಣ ನನ್ನ ಪತಿಯ ಸಹಕಾರದೊಂದಿಗೆ ಬೈಕ್‌ನಲ್ಲೇ ಸಂಚರಿಸಿ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಈಗಲೂ ಅದೇ ಸ್ಥಿತಿಯಲ್ಲಿ ಶಾಲೆಗೆ ಬಂದು ಕೆಲಸ ಮಾಡುತ್ತಿದ್ದೇನೆ.
-ಶಿವಕ್ಕ ಆರ್. ಬಣಕಾರ್ ಶಿಕ್ಷಕಿ, ಕತ್ತಲಗೆರೆ, ದಾವಣಗೆರೆ ಜಿಲ್ಲೆ

ಸಾಕಷ್ಟು ರಿಸ್ಕ್ ಇದ್ದವು
ಕೆಲಸದ ಸಂದರ್ಭದಲ್ಲಿ ಸಾಕಷ್ಟು ರಿಸ್ಕ್ ಇರುತ್ತಿದ್ದವು. ನಮ್ಮ ಸುರಕ್ಷ ತೆ ಜತೆಗೆ ಬೇರೆಯವರಿಗೆ ನೆರವು ನೀಡಬೇಕಿತ್ತು. ಕೊಗನಳ್ಳಿ ಚೆಕ್ ಪೋಸ್ಟ್ ನಲ್ಲಿ ಬರುವವರ ನೋಂದಣಿ ಮಾಡುವುದು, ಪ್ರಯಾಣಿಕರ ಮಾಹಿತಿ ಸಂಗ್ರಹಿಸಬೇಕಿತ್ತು. ಅಷ್ಟೆಲ್ಲ ಕೆಲಸ ಮಾಡಿ ಮನೆಗೆ ಬಂದ ಮೇಲೆ ವಾಹನ, ಮೊಬೈಲ್ಗೆ ಸ್ಯಾನಿಟೈಸರ್ ಸಿಂಪಡಿಸಿ ಬಿಸಿ ನೀರಿನಲ್ಲಿಸ್ನಾನ ಮಾಡಿಯೇ ಮನೆಯೊಳಗೆ ಹೋಗುತ್ತಿದ್ದೆವು. ಕೆಲಸಕ್ಕೆ ಹೋಗುವಾಗ ಡ್ರೈಫ್ರುಟ್ಸ್ ತೆಗೆದುಕೊಂಡು ಹೋಗುತ್ತಿದ್ದೆವು.
– ಬಿ.ಎಸ್. ಬಣಕಾರ್ ಶಿಕ್ಷಕ, ಬೆಳಗಾವಿ ಜಿಲ್ಲೆ

ಹೊಸ ಅನುಭವ ದೊರೆಯಿತು
ನಿಯಮ ಪಾಲನೆಗೆ ತಹಸೀಲ್ದಾರ್ ನೇತೃತ್ವದ ಟೀಮ್‌ನಲ್ಲಿ ಕೆಲಸ ಮಾಡಿದ್ದು ಹೊಸ ಅನುಭವ ನೀಡಿದೆ. ಕೊರೊನಾಕ್ಕೆ ಸ್ವಯಂ ಜಾಗೃತಿಯೊಂದೇ ಪರಿಹಾರ. ಪ್ರಸ್ತುತ ಸನ್ನಿವೇಶದಲ್ಲಿ ಮನೆಯೇ ಸುರಕ್ಷಿತ ಜಾಗವಾಗಿದೆ. ಬಹುತೇಕ ಸಮಾಜ ಶಿಕ್ಷಕರ ಮಾತು ಕೇಳುತ್ತದೆ ಎಂದು ಅಂದುಕೊಂಡಿದ್ದೇವೆ. ಹೀಗೆ ಹೊಸ ಅನುಭವ ಜನರೊಂದಿಗೆ ಆಯಿತು. ಕೆಲವರು ಹೇಳಿದ ಮಾತು ಕೇಳಿ ನಿಯಮ ಪಾಲಿಸುತ್ತಿದ್ದಾರೆ. ನಾನೂ ಸುರಕ್ಷತೆಯೊಂದಿಗೆ ಕಾರ್ಯ ನಿರ್ವಹಿಸಿ ಇತರರಿಗೂ ಸುರಕ್ಷತೆಯ ಪಾಠ ಹೇಳಿದ್ದೇನೆ. ಸದ್ಯ ವಿಡಿಯೋ ಕಾರ್ಯ ಮಾಡದಿದ್ದರೂ ಅಂದಿನ ಕಾರ್ಯ ಗುರುತಿಸುವ ಜನತೆ ಎದುರಿಗೆ ಬಂದಾಕ್ಷಣ ಮಾಸ್ಕ್ ಧರಿಸುತ್ತಾರೆ. ಹೀಗಾಗಿ ನಾನು ಮಾಡಿದ ಕಾರ್ಯ ಅಲ್ಪಮಟ್ಟಿಗಾದರೂ ಬೆಲೆ ನೀಡಿದೆ ಎಂದೆನಿಸುತ್ತಿದೆ.
-ಮಹಾದೇವ ಬಸರಕೋಡ ಪ್ರೌಢಶಾಲೆ ಶಿಕ್ಷ ಕ, ಅಮೀನಗಡ, ಬಾಗಲಕೋಟೆ ಜಿಲ್ಲೆ.

 

ಇದ್ದದ್ದು ಮಾಸ್ಕ್, ಸ್ಯಾನಿಟೈಜರ್!
40 ದಿನಗಳ ಕಾಲ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ನಾಲ್ವರ ಜತೆ ದಿನದ 24 ಗಂಟೆ ಕೊರೊನಾ ವಾರಿಯರ್ಸ್ ಆಗಿ ದುಡಿದಿದ್ದೇವೆ. ಇದರ ಜತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲೂ 18 ದಿನ ಇದೇ ರೀತಿಯ ಕೆಲಸ ಮಾಡಿದ್ದೇವೆ. ಒಂದು ಸ್ಯಾನಿಟೈಸರ್ ಜತೆಗೆ ನಮ್ಮಲ್ಲಿರುವ ಮಾಸ್ಕ್ ಬಿಟ್ಟರೆ ಬೇರೆ ಯಾವುದೇ ಸುರಕ್ಷತಾ ಸಾಧನ ಇರಲಿಲ್ಲ. ನಮ್ಮ ಜತೆಗೆ ನಿಂತ 10 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂತು. ಆದರೂ ಆ ಸ್ಥಳವನ್ನು ಸ್ಯಾನಿಟೈಸರ್ ಮಾಡಿಸುವ ಕಾರ್ಯವೇ ಮಾಡಿರಲಿಲ್ಲ. ಯಾರಿಗೂ ಇಂತಹ ಡ್ಯೂಟಿ ಹಾಕಿದ್ರೆ ಹೋಗುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಆದರೆ ನಾವು ಕೊಂಚವೂ ಧೈರ್ಯಗೆಡದೇ ನಿರಂತರ ಪಾಸಿಟಿವ್ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವ ಜತೆಯಲ್ಲಿ ಅವರಿಗೆ ಮುದ್ರೆ ಹಾಕುವ ಕೆಲಸ ಮಾಡುತ್ತಿದ್ದೆವು.
-ಗಣೇಶ್ ಬಿ ಕುಲಾಲ್ ದೈಹಿಕ ಶಿಕ್ಷ ಕ, ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆ, ಮಂಗಳೂರು

ಕೊರೊನಾ ವಾರಿಯರ್ ಹೆಮ್ಮೆ
ಲಾಕ್‌ಡೌನ್‌ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿನ ಡೆಂಟಲ್ ಕ್ಲಿನಿಕ್ ಹಾಗೂ ಇತರ ಆಸ್ಪತ್ರೆಗಳಿಗೆ ಹೋಗಿ ರೋಗಿಗಳ ಮಾಹಿತಿ ಸಂಗ್ರಹಿಸುತ್ತಿದ್ದೆವು. ಈ ವೇಳೆ ನಾವು ಹೆಚ್ಚಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರಿಂದ ನಮಗೂ ಎಲ್ಲಿಸೋಂಕು ತಗುಲುತ್ತದೆ ಎಂಬ ಭಯ ಸಾಮಾನ್ಯ ವಾಗಿತ್ತು. ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಸ್ನಾನ ಮಾಡಿ, ಸ್ಯಾನಿಟೈಸರ್ ಹಾಕಿ ಕೈಗಳನ್ನು ಸ್ವಚ್ಚಗೊಳಿಸಿದರೂ ಸಮಾಧಾನ ಆಗುತ್ತಿರಲಿಲ್ಲ. ಪ್ರಾರಂಭದಲ್ಲಿ ಡ್ಯೂಟಿ ಅನಿವಾರ್ಯ ಎನಿಸಿತ್ತು. ನಂತರದ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಮಾಡುತ್ತಿದ್ದೇನೆ ಎಂದು ಹೆಮ್ಮೆ ಪಡುತ್ತ ಆತ್ಮವಿಶ್ವಾಸದಿಂದ ಕೆಲಸ ಮಾಡಿದೆ.
-ಸಿ.ಎಫ್.ಭಗವಂತಗೌಡರ ಶಿಕ್ಷ ಕರು, ಬ್ಯಾಹಟ್ಟಿ, ಧಾರವಾಡ ಜಿಲ್ಲೆ.

ಬರಲೇಬೇಡಿ ಎನ್ನುತ್ತಿದ್ದರು!
ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಅವಧಿಯಲ್ಲಿ ಆರೋಗ್ಯ ಮಾಹಿತಿ ಸಂಗ್ರಹಿಸುವ ಸಮೀಕ್ಷಾ ಕಾರ್ಯ ನಿರ್ವಹಿಸಲಾಯಿತು. ಜತೆಗೆ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಬಿಎಲ್ಒ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆರೋಗ್ಯ ಮಾಹಿತಿಗಾಗಿ ಮನೆ ಮನೆ ಭೇಟಿಗೆ ಹೋದಾಗ ಮೊದ ಮೊದಲು ಜನ ಸಹಕರಿಸದೆ ಮಾಹಿತಿ ಹೇಳಲು ನಿರಾಕರಿಸಿದರು. ನಾವು ನೋಡಿದ್ದವರೆ, ಆದ್ದರಿಂದ ಅವರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಿ ಮಾಹಿತಿ ಸಂಗ್ರಹಿಸಬೇಕಾದ ಸ್ಥಿತಿ ಇತ್ತು. ಕೆಲವರು ನೀವು ಸಿಟಿಯಿಂದ ಓಡಾಡುತ್ತೀರಿ, ಇಲ್ಲಿ ಬರಲೇ ಬೇಡಿ ಎಂದೆಲ್ಲ ತಿರಸ್ಕರಿಸಿದ್ದೂ ಇದೆ. ಫೋನ್ ನಂಬರ್, ಆಧಾರ ನಂಬರ್ ಹೇಳದ ಕಾರಣ ಕೆಲ ಮನೆಗಳಿಗೆ 3 ಬಾರಿ ಸುತ್ತಾಡಿದ್ದೆವೆ.
-ಕೆ.ಎಚ್. ಶಿವಕುಮಾರ್, ಶಿಕ್ಷಕ ಕಾರಿಗನೂರು, ದಾವಣಗೆರೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top