ಸಿಂಹಸದೃಶ ವ್ಯಕ್ತಿತ್ವದ ಮುಖರ್ಜಿ

– ತರುಣ್‌ ವಿಜಯ್‌.

ಭಾರತೀಯ ರಾಜಕಾರಣದಲ್ಲಿ ಸಿಂಹಸದೃಶ ವ್ಯಕ್ತಿತ್ವದವರಾಗಿದ್ದ ಶ್ಯಾಮಪ್ರಸಾದ ಮುಖರ್ಜಿ ಅವರ 119ನೇ ಜನ್ಮದಿನವನ್ನು ಜುಲೈ 6ರಂದು ಆಚರಿಸಿದೆವು. ಅವರು ಬಹಳ ಕಾಲ ಬದುಕಿದ್ದರೆ ಇಂದಿನ ರಾಜಕೀಯದ ಸ್ವರೂಪವೇ ಬೇರೆ ರೀತಿ ಇರುತ್ತಿತ್ತು.
ಆಧುನಿಕ ಅಮೆರಿಕದ ರಾಜಕೀಯವನ್ನು ಅಬ್ರಹಾಂ ಲಿಂಕನ್‌ ಹೇಗೆ ಪ್ರಭಾವಿಸಿದರೋ ಹಾಗೆಯೇ ಶ್ಯಾಮಪ್ರಸಾದ್‌ ಮುಖರ್ಜಿ ಭಾರತವನ್ನು ಪ್ರಭಾವಿಸಿದರು. ಎರಡೇ ದಶಕಗಳ ಕ್ಲುಪ್ತ ಕಾಲದ ರಾಜಕೀಯ ಜೀವನದಲ್ಲಿ ಅವರು ದೇಶದ ಹಿಂದೂಗಳ ಜೀವನವನ್ನು, ಅವರ ಸುರಕ್ಷತೆಯನ್ನು ಎತ್ತಿ ಹಿಡಿದರು. 1953ರಲ್ಲಿಯೇ ಜಮ್ಮು- ಕಾಶ್ಮೀರ ಭಾರದಲ್ಲಿ ಸಂಪೂರ್ಣ ವಿಲೀನವಾಗಬೇಕು ಎಂದು ಪ್ರತಿಪಾದಿಸಿದರು. ಅದಕ್ಕಾಗಿ ಹೋರಾಡಿದರು. ಅದಕ್ಕಾಗಿಯೇ ಜೀವ ತೆತ್ತರು. 2019ರಲ್ಲಿ ಜಮ್ಮು- ಕಾಶ್ಮೀರವನ್ನು ಭಾರತದಿಂದ ಬೇರೆ ಮಾಡಿದ್ದ ಆರ್ಟಿಕಲ್‌ 370 ಹಾಗೂ 35ಎಯನ್ನು ರದ್ದುಗೊಳಿಸಿ, ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದಾಗ ಮುಖರ್ಜಿಯವರ ಆಶಯ ನಿಜವಾಗಿಯೂ ಈಡೇರಿತು.
‘‘ನನ್ನ ಸ್ವಭಾವ ಶೈಕ್ಷಣಿಕ ಆಡಳಿತದ್ದು. ಗದ್ದಲದ ರಾಜಕೀಯ ನನಗೆ ಇಷ್ಟವಿಲ್ಲ. ನನ್ನ ದೇಶಕ್ಕೆ ಸರಿಯಾದ ಸೇವೆ ಸಲ್ಲಿಸುವ ದಾರಿಯೆಂದರೆ ಶಿಕ್ಷಣವೇ ಎಂಬುದು ನನ್ನ ತಿಳಿವಳಿಕೆ,’’ ಎಂಬುದು ಮುಖರ್ಜಿಯವರ ಮಾತು. ಅವರು ಅಕಾಡೆಮಿಶಿಯನ್‌, ಮುತ್ಸದ್ದಿ, ರಾಜಕೀಯ ಚಿಂತಕ, ರಾಷ್ಟ್ರೀಯವಾದಿ ಆಗಿದ್ದವರು. ಬೌದ್ಧಮತದ ಅತ್ಯುನ್ನತ ಸ್ಥಾನಗಳಲ್ಲಿ ಒಂದಾದ ಬೋಧಗಯಾದ ಮಹಾಬೋಧಿ ಸೊಸೈಟಿಯ ಅಧ್ಯಕ್ಷರಾಗಿದ್ದವರು. ಅಂಥ ವ್ಯಕ್ತಿಯ ಅಂತ್ಯ ನಿಗೂಢತೆಯಲ್ಲಿ ಅದ್ದಿದೆ. ಪಕ್ಷದ ನಾಯಕರು ಇದನ್ನು ರಾಜಕೀಯ ಕಗ್ಗೊಲೆ ಎನ್ನುತ್ತಾರೆ. ಆದರೆ ಅದರ ವಿಚಾರಣೆ ನಡೆಯಲೇ ಇಲ್ಲ.
ಶಿಕ್ಷಣತಜ್ಞರಾಗಿದ್ದ ಅವರು ಕೋಲ್ಕತ್ತಾ, ಆಗ್ರಾ, ದಿಲ್ಲಿ, ಮೈಸೂರು, ಪಟನಾ ಹೀಗೆ ಎಲ್ಲೆಲ್ಲೂ ಪದವಿಪ್ರದಾನ ಭಾಷಣಗಳನ್ನು ನೀಡಿದ್ದಾರೆ. ‘ನ್ಯಾಷನಲಿಸ್ಟ್‌’ ನ್ಯೂಸ್‌ ನಿಯತಕಾಲಿಕದ ಸಂಪಾದಕರಾಗಿದ್ದ ಅವರು ಉಗ್ರ ರಾಷ್ಟ್ರೀಯವಾದಿ ವಿಚಾರಗಳ ಪ್ರತಿಪಾದಕರಾಗಿದ್ದರು. ಅವರ ಆಧ್ಯಾತ್ಮಿಕ ಸ್ವಭಾವ ಅವರನ್ನು ಮಹರ್ಷಿ ಅರವಿಂದರ ಬಳಿಗೂ ಒಯ್ದಿತಲ್ಲದೆ, ಪಾಂಡಿಚೆರಿಯ ಶ್ರೀ ಅರಬಿಂದೊ ಯೂನಿವರ್ಸಿಟಿಯ ಕುಲಪತಿಗಳೂ ಆಗಿದ್ದರು. ಸಾವರ್ಕರ್‌ ಅವರಿಗೆ ಆಪ್ತರಾಗಿದ್ದರು. ಸ್ವತಂತ್ರ ಭಾರತದಲ್ಲಿ, ಪ್ರಧಾನಿ ನೆಹರೂ ಅವರ ಸಚಿವ ಸಂಪುಟದಲ್ಲಿ ಯಾರಿರಬೇಕು ಎಂದು ಸೂಚಿಸುವಾಗ ಮಹಾತ್ಮ ಗಾಂಧಿ ಮುಖರ್ಜಿಯವರ ಹೆಸರನ್ನು ಸೂಚಿಸಿದ್ದರು. ಆಗವರು ಉದ್ಯಮ ಸಚಿವರಾಗಿದ್ದರು. ನೆಹರೂ- ಲಿಯಾಖತ್‌ ಒಪ್ಪಂದ ವಿರೋಧಿಸಿ ಸಂಪುಟಕ್ಕೆ ರಾಜೀನಾಮೆ ನೀಡಿದರು. ಭಾರತೀಯ ಜನಸಂಘ ಸ್ಥಾಪನೆಯಾದಾಗ, ಅದರ ಅಧ್ಯಕ್ಷ ಸ್ಥಾನಕ್ಕೆ ಮೊದಲ ಹೆಸರಾಗಿ ಇವರನ್ನು ಸೂಚಿಸಿದವರು ಸರಸಂಘಚಾಲಕ ಗೋಳ್ವಲ್ಕರ್‌. ಅದೇ ಇಂದಿನ ಬಿಜೆಪಿ.
ಜಿನ್ನಾ ಭಾರತದ ಆತ್ಮವನ್ನೇ ನಾಶ ಮಾಡಲಿದ್ದಾರೆ ಎಂದು ಮುಖರ್ಜಿ ತುಂಬ ಮೊದಲೇ ಹೇಳಿದ್ದರು. ಕೋಲ್ಕತ್ತಾದ ಹತ್ಯಾಕಾಂಡದ ಮೂಲಕ ಅದು ನಿಜವಾಯಿತು. ಜಿನ್ನಾ ಮುಸ್ಲಿಂ ಲೀಗ್‌ಗೆ ಕರೆ ನೀಡಿದ ‘ಡೈರೆಕ್ಟ್ ಆಕ್ಷನ್‌’ ಪಾಕಿಸ್ತಾನದ ಕೊನೆಯ ಮೊಳೆಯಾಯಿತು. ಮೊದಲ ಬಾರಿಗೆ ಕಾಂಗ್ರೆಸ್‌ ಟಿಕೆಟ್‌ನಿಂದ ಬಂಗಾಳದಲ್ಲಿ ಶಾಸನಸ»ಗೆ ಆಯ್ಕೆಯಾಗಿದ್ದ ಮುಖರ್ಜಿಗೆ ಬಂಗಾಳದಲ್ಲಿ ನಡೆದ ಹಿಂದುಗಳ ಹತ್ಯಾಕಾಂಡವನ್ನು ನೋಡಿ ಕಣ್ಣೀರು ಬಂತು. ‘‘ಇದು ಚರಿತ್ರೆಯಲ್ಲಿ ಹಿಂದೆಂದೂ ನಡೆದ ಯಾವ ಹತ್ಯಾಕಾಂಡಕ್ಕೂ ಹೋಲಿಸಲಾಗದ್ದು,’’ ಎಂದವರು ಹೇಳಿದರು. ಕಾಂಗ್ರೆಸ್‌ ಇದಕ್ಕೆ ಮೂಕ ಪ್ರೇಕ್ಷಕನಾಗಿತ್ತು. ಇದನ್ನೂ ಮುಖರ್ಜಿ ವಿರೋಧಿಸಿದರು.
ಶ್ರೀ ಅರವಿಂದರ ಭಕ್ತರಾಗಿದ್ದ ಮುಖರ್ಜಿ, ಸಂಯುಕ್ತ ಭಾರತಕ್ಕಾಗಿ ಹೋರಾಡಿದವರು, ಅದರಲ್ಲಿ ನಂಬಿಕೆಯಿಟ್ಟಿದ್ದವರು. ‘‘ನಮ್ಮ ಮುಂದಿರುವ ಆತಂಕಗಳು ಹಲವು. ಅದರಲ್ಲಿ ಮುಖ್ಯವಾದುದು ಪಾಕಿಸ್ತಾನದ ಬೇಡಿಕೆ. ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಿಂದೂಸ್ತಾನದ ನಿರೀಕ್ಷೆಯಲ್ಲಿ ಇರುವವರು ಇದನ್ನು ಒಳಕೆಯಲ್ಲೇ ಚಿವುಟಿ ಹಾಕಬೇಕು,’’ ಎಂದವರು ಮೊದಲೇ ಹೇಳಿದ್ದರು. ಆದರೆ ಜಿನ್ನಾ ಬೇಡಿಕೆಗೆ ಕಾಂಗ್ರೆಸ್‌ ಮಣಿಯಿತು. ಬಂಗಾಲ ವಿಭಜನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಮುಖರ್ಜಿ ಒಪ್ಪಿದರು. ಯಾಕೆಂದರೆ ಅವರಿಗೆ ಹಿಂದೂಗಳ ಸುರಕ್ಷತೆ ಮುಖ್ಯವಾಗಿತ್ತು.
ನೆಹರೂ ಕ್ಯಾಬಿನೆಟ್‌ನಲ್ಲಿ ಕೈಗಾರಿಕಾ ಸಚಿವರಾಗಿ ಮುಖರ್ಜಿ ಬಹು ದೊಡ್ಡ ಹೊಣೆಯನ್ನೇ ನಿಭಾಯಿಸಿದರು. ಹೆಚ್‌ಎಎಲ್‌ನಲ್ಲಿದ್ದ ಎಲ್ಲ ಇಂಗ್ಲಿಷ್‌ ಅಧಿಕಾರಿಗಳನ್ನೂ ಅಲ್ಲಿಂದ ತೆಗೆದುಹಾಕಿ, ಭಾರತೀಯರನ್ನು ತಂದರು. ಉಕ್ಕಿನ ಕಾರ್ಖಾನೆಗಳು, ರಸಗೊಬ್ಬರ ಕೈಗಾರಿಕೆಗಳು, ಸ್ಥಳೀಯ ಉದ್ಯಮಶೀಲತೆಯ ಮೂಲಕ ದೇಶದ ಉದ್ಯಮರಂಗಕ್ಕೆ ದೊಡ್ಡದೊಂದು ವೇದಿಕೆಯನ್ನೇ ನಿರ್ಮಿಸಿಕೊಟ್ಟರು. ಮೋದಿಯವರ ‘ಆತ್ಮನಿರ್ಭರ’ ಕರೆಯ ಹಿಂದೆ ಮುಖರ್ಜಿಯವರ ದೇಸೀಯ ಚಿಂತನೆಗಳ ಪ್ರೇರಣೆ ಇದೆ. ಮುಖರ್ಜಿ ಸಂಸತ್ತಿನ ಸಿಂಹವಾಗಿದ್ದರು. ನೆಹರೂ ಇವರಿಗೆ ಅಂಜುತ್ತಿದ್ದರು.
ವಿಭಜನೆಯ ಬಳಿಕ ಪಾಕಿಸ್ತಾನದಿಂದ ಬರುತ್ತಿದ್ದ ಹಿಂದೂಗಳ ಸ್ಥಿತಗತಿ ಮುಖರ್ಜಿಯವರನ್ನು ತುಂಬಾ ಕಾಡಿತ್ತು. ಅದರಲ್ಲಿ ಎಲ್ಲರೂ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಪಾಕ್‌ನ ಜನತೆ ಹಾಗೂ ಸರಕಾರ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿತ್ತು. ಈ ಬಗ್ಗೆ ಪ್ರಧಾನಿ ನೆಹರೂ ಕಟುವಾದ ನಿಲುವು ತಾಳಬೇಕೆಂದು ಮುಖರ್ಜಿ ಬಯಸಿದ್ದರು. ಅವರನ್ನು ಬಹಳ ಬಾರಿ ಎಚ್ಚರಿಸಿದರು ಕೂಡ. ಆದರೆ ಅದಕ್ಕೆ ಕಿವಿಗೊಡದ ನೆಹರೂ, ಪಾಕ್‌ನ ಪ್ರಧಾನಿ ಲಿಯಾಖತ್‌ ಅಲಿ ಜೊತೆ ಒಪ್ಪಂದ ಮಾಡಿಕೊಂಡರು. ಪಾಕಿಸ್ತಾನ ಕಾಶ್ಮೀರಕ್ಕೆ ದಾಳಿ ಮಾಡಿತು. ನೆಹರೂ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದರು. ಇದನ್ನು ಸಹಿಸಲಾಗದೆ ಮುಖರ್ಜಿ ರಾಜೀನಾಮೆ ನೀಡಿದರು.
1951ರ ಅಕ್ಟೋಬರ್‌ನಲ್ಲಿ ಜನಸಂಘದ ಜನನವಾಯಿತು. ಮುಖರ್ಜಿ ಅಧ್ಯಕ್ಷರಾದರು. ವಾಜಪೇಯಿ ಮುಂತಾದವರು ಅದರಲ್ಲಿ ಸೇರಿಕೊಂಡರು. ಮುಖರ್ಜಿಯವರ ಪ್ರಭಾವದಿಂದ 1952ರ ಚುನಾವಣೆಯ ವೇಳೆಗೆ ಜನಸಂಘ ಮನೆಮನೆ ಮಾತಾಗಿತ್ತು. ಆ ಚುನಾವಣೆಯಲ್ಲಿ ಪಕ್ಷ ಮೂರು ಸ್ಥಾನ ಗೆದ್ದಿತು. ಅದೇ ಇಂದಿನ ಮಹಾವಿಜಯದ ಬೀಜ.
ಕಾಶ್ಮೀರ ವಿಮುಕ್ತಿಯ ಚಳವಳಿಯನ್ನು ಮುಖರ್ಜಿಯವರು ಜನಸಂಘದ ಮೂಲಕ ಅಲ್ಲಿದ್ದುಕೊಂಡೇ ಮುಂದುವರಿಸತೊಡಗಿದರು. ಆದರೆ ಶ್ರೀನಗರದ ಶೇಖ್‌ ಅಬ್ದುಲ್ಲಾ ಜೈಲಿನಲ್ಲಿ ಅವರು ಸಾವಿಗೀಡಾದರು. ಇದೊಂದು ರಾಜಕೀಯ ಸಂಚು ಹಾಗೂ ಕಗ್ಗೊಲೆ ಎಂದು ಅಟಲ್‌ ಬಿಹಾರಿ ವಾಜಪೇಯಿ ಆರೋಪಿಸಿದ್ದರು. ಆದರೆ ತನಿಖೆ ನಡೆಸಲು ನೆಹರೂ ಮುಂದಾಗಲಿಲ್ಲ. 82 ವರ್ಷದ, ಮುಖರ್ಜಿಯವರ ತಯಿ ಜೋಗ್‌ಮಾಯಾ ದೇವಿ, ನೆಹರೂ ಅವರಿಗೆ ಕಟುವಾಗಿ ಒಂದು ಪತ್ರ ಬರೆದರು- ‘‘ಕಾಶ್ಮೀರ ಸರಕಾರ ನನ್ನ ಮಗನ ಮರಣಕ್ಕೆ ಕಾರಣ. ನೀವೂ ಇದರಲ್ಲಿ ಭಾಗಿ.’’ ಸುಭಾಷ್‌ಚಂದ್ರ ಬೋಸ್‌ ಅವರ ಸಾವಿನ ಬಗ್ಗೆ ತನಿಖೆಗಳು ನಡೆಯಬಹುದಾದರೆ, ಮುಖರ್ಜಿ ಅವರ ಸಾವಿನ ಬಗ್ಗೆಯೂ ತನಿಖೆ ನಡೆಯುವುದರಲ್ಲಿ ತಪ್ಪಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top