ಸ್ವಯಂಪೂರ್ಣ ಭಾರತಕ್ಕಾಗಿ ನಾವೆಲ್ಲ ಒಂದಾಗಬೇಕಿದೆ – ದತ್ತಾತ್ರೇಯ ಹೊಸಬಾಳೆ

ಸಮರ್ಥ ಭಾರತವನ್ನು ಕಟ್ಟಬೇಕಾದರೆ ಅಂತಹ ಭಾರತದ ಚಿತ್ರ ಹೇಗಿರಬೇಕು ಎಂಬ ಕನಸನ್ನು ನಾವು ನಮ್ಮ ಮುಂದಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀ (ಈ ಕುರಿತು ‘ಮೇರೇ ಸಪನೋಂ ಕಾ ಭಾರತ್’ ಎಂಬ ಅವರ ಪುಸ್ತಕವಿದೆ) ಸೇರಿದಂತೆ ಅನೇಕ ಮಹಾಪುರುಷರು ಬೇರೆಬೇರೆ ಸಂದರ್ಭಗಳಲ್ಲಿ ಭಾರತದ ಬಗೆಗಿನ ತಮ್ಮ ಚಿತ್ರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಸಮರ್ಥ ಭಾರತವೆಂದರೆ ಒಗ್ಗಟ್ಟಿನ ಏಕಾತ್ಮ ಭಾರತ. ಅನೇಕ ರಾಜ್ಯಗಳು, ಭಾಷೆಗಳು, ಮತ ಪಂಥ ಸಂಪ್ರದಾಯಗಳು, ಹೀಗೆ ವಿಭಿನ್ನ ರೀತಿಯಲ್ಲಿರುವ ವೈವಿಧ್ಯಮಯ ದೇಶ ಭಾರತ. ಇಲ್ಲಿಅನೇಕ ರೀತಿಯ ಸವಾಲುಗಳು ಎದುರಾಗಿವೆ. 1947ರ ಸ್ವಾತಂತ್ರ್ಯ ಪಡೆದ ನಂತರವೂ ದೇಶದ ಐಕಮತ್ಯಕ್ಕೆ ಸವಾಲಾಗುವ ನೂರಾರು ಸಂದರ್ಭಗಳನ್ನು ಭಾರತ ಎದುರಿಸಿದೆ. ಆಂತರಿಕ ಒಗ್ಗಟ್ಟಿನ ಫಲವಾಗಿಯೋ ಅಥವಾ ನೇತೃತ್ವ ವಹಿಸಿದವರ ಕಾರಣಕ್ಕಾಗಿಯೋ ಭಾರತ ಇಂದಿಗೂ ಏಕಾತ್ಮವಾಗಿ ಉಳಿದಿದೆ.
ದೇಶದ ಶಕ್ತಿ ಇರುವುದು ಸಮಾಜದ ಜನರ ಒಗ್ಗಟ್ಟಿನಲ್ಲಿ, ಸಮಾಜ-ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ, ಅಲ್ಲಿಯ ಜನರ ಜೀವನದಲ್ಲಿರುವ ಉನ್ನತಿಯಲ್ಲಿ. ಸಶಕ್ತ ಭಾರತದಲ್ಲಿ ಒಗ್ಗಟ್ಟಿನ ಭಾಗವೂ ಇದೆ. ಭಾಷೆ, ಮತ, ಸಂಪ್ರದಾಯಗಳಿಂದ ಮೇಲೆದ್ದು ಒಗ್ಗಟ್ಟಾಗಬೇಕು. ನಮ್ಮ ಆರ್ಥಿಕ ಬಲ, ಸೈನ್ಯದ ಬಲ, ವಿಜ್ಞಾನದ ಬಲ, ಶಿಕ್ಷ ಣದಿಂದ ಸಶಕ್ತ ಭಾರತ ನಿರ್ಮಾಣವಾಗುತ್ತದೆ. ಇಡೀ ಸಮಾಜ ಒಂದಾಗಿ ನಿಲ್ಲಬೇಕು. ಸ್ವಾಭಿಮಾನೀ ಭಾರತ, ಸಶಕ್ತ ಭಾರತ, ಸಂಘಟಿತ ಭಾರತ, ಏಕಾತ್ಮ ಭಾರತ ಇವು ಸಮರ್ಥ ಭಾರತಕ್ಕೆ ಅಡಿಗಲ್ಲುಗಳು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ‘ಆತ್ಮನಿರ್ಭರ ಭಾರತ’ ಎಂಬುದನ್ನು ಉಲ್ಲೇಖಿಸಿದರು. ಆತ್ಮನಿರ್ಭರ ಭಾರತ ಎಂದರೆ ಸ್ವಾವಲಂಬೀ ಸ್ವಯಂಪೂರ್ಣ ಭಾರತ. ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಯ ವಿಷಯವಲ್ಲ. ಆರ್ಥಿಕತೆಗೆ ಪ್ರಾಧಾನ್ಯ ಇದ್ದರೂ ಇದು ಅದನ್ನು ಮೀರಿರುವಂತಹದ್ದು ಮತ್ತು ವ್ಯಾಪಕವಾದದ್ದು. ನನಗೆ ನಾನೇ ಹೊರೆಯಾಗದಂತೆ, ಆತ್ಮಕ್ಕೆ ನಾನು ಹೊರೆಯಾಗದಂತೆ ಇರುವುದು ಹೇಗೆ? ಇದರಲ್ಲಿ ಆಧ್ಯಾತ್ಮಿಕತೆಯೂ ಅಡಗಿದೆ. ನಾನು ನನ್ನ ಮನೆಗೆ, ಸಮಾಜಕ್ಕೆ ಸೃಜನಾತ್ಮಕವಾಗಿ ಕೊಡುಗೆ ನೀಡುವವನಾದಾಗ ನಾನು ನನಗೆ, ನಾಡಿಗೆ ಭಾರವಾಗುವುದಿಲ್ಲ. ಅದಕ್ಕೆ ನನ್ನೊಳಗಿನ ಚೇತನವನ್ನು ನಾನು ಜಾಗೃತವಾಗಿಡಬೇಕು. ಇದೇ ಮಾತು ಸಮಾಜಕ್ಕೂ ದೇಶಕ್ಕೂ ಅನ್ವಯಿಸುತ್ತದೆ.
ರಾಷ್ಟ್ರಪುರುಷ ಎಂಬ ಕಲ್ಪನೆಯಿದೆ. ಪುರುಷಸೂಕ್ತದಲ್ಲಿ ಸಹಸ್ರಪುರುಷಃ ಸಹಸ್ರಾಕ್ಷ ಸಹಸ್ರಪಾತ್‌ಗಳ ಕುರಿತು ಹೇಳಲಾಗಿದೆ. ರಾಷ್ಟ್ರಪುರುಷನ ಕಲ್ಪನೆ ಇರುವುದು, ಇಡೀ ರಾಷ್ಟ್ರ, ಒಬ್ಬ ಪರುಷನಂತೆ ಎದ್ದು ನಿಲ್ಲಬೇಕು ಎಂಬ ಅರ್ಥದಲ್ಲಿ. ಒಬ್ಬ ವ್ಯಕ್ತಿ ತನ್ನ ಕಾಲ ಮೇಲೆ ನಿಂತಾಗ ಮಾತ್ರ ಅವನನ್ನು ಸ್ವಾವಲಂಬೀ ಎನ್ನಬಹುದು. ಆಗ ಆತ ತನ್ನ ಕಣ್ಣುಗಳಿಂದ ನೋಡುತ್ತಾನೆ, ತನ್ನ ಮನಸ್ಸಿನಿಂದ ತಿಳಿದುಕೊಳ್ಳುತ್ತಾನೆ. ತನ್ನ ಬುದ್ಧಿಯಿಂದ ಅದನ್ನು ವಿವೇಚಿಸುತ್ತಾನೆ ಮತ್ತು ತನ್ನ ವಾಣಿಯಿಂದ ಅದನ್ನು ವ್ಯಕ್ತಪಡಿಸುತ್ತಾನೆ. ಸ್ವಾವಲಂಬಿಯಾಗಿ ಬದುಕಬೇಕು ಎನ್ನುವುದು ಎಲ್ಲರ ಇಚ್ಛೆ. ಇದು ಸ್ವಾಭಿಮಾನವನ್ನೂ ಕಲಿಸುತ್ತದೆ. ಮನುಷ್ಯನಂತೆಯೇ ಸಮಾಜ, ರಾಷ್ಟ್ರವೂ ಸ್ವಾವಲಂಬಿಯೂ ಸ್ವಯಂಪೂರ್ಣವೂ ಆಗಿರಬೇಕು. ಇದೇ ಆತ್ಮನಿರ್ಭರತೆ. ಭರ ಎಂದರೆ ಭರಿಸುವಂತಹದ್ದು, ತುಂಬುವಂತಹದ್ದು ಎಂದರ್ಥ. ನಿರ್ಭರ ಎಂದರೆ ವಿಶೇಷವಾಗಿ ತುಂಬುವಂತಹದ್ದು. ಒಂದು ರಾಷ್ಟ್ರವು ಆತ್ಮನಿರ್ಭರವಾಗಲು ಸ್ವಾವಲಂಬಿಯಾಗುವುದರ ಜೊತೆಗೆ ಸ್ವಾಭಿಮಾನ, ಸಂಘಟನೆ, ಸಶಕ್ತತೆಯನ್ನು ಒಳಗೊಂಡಿರಬೇಕು.
ಮೋದಿ ಅವರು ತಮ್ಮ ಭಾಷಣದಲ್ಲಿ ಮನುಸ್ಮೃತಿಯ ‘ಸರ್ವಂ ಆತ್ಮವಶಂ ಸುಖಮ್’ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಅಲ್ಲಿ‘ಸರ್ವಂ ಪರವಶಂ ದುಃಖಮ್, ಸರ್ವಂ ಆತ್ಮವಶಂ ಸುಖಮ್’ ಎಂದು ಹೇಳಿದೆ. ಅಂದರೆ ಯಾವುದು ಪರಾಧೀನವಾಗಿದೆಯೋ ಅದು ದುಃಖವನ್ನು ಕೊಡುತ್ತದೆ. ಯಾವುದು ಸ್ವಾಧೀನವಾಗಿರುತ್ತದೊ ಅದು ಸುಖವನ್ನು ತರುತ್ತದೆ. ಪರಾವಲಂಬನೆ ಮತ್ತು ಪರಾಧೀನತೆ ದುಃಖಕ್ಕೆ ಕಾರಣ; ಸ್ವಾವಲಂಬನೆ ಮತ್ತು ಸ್ವಾಧೀನತೆ ಸುಖಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬ ಮನುಸ್ಮೃತಿಯ ಈ ವಾಕ್ಯವನ್ನು ಪ್ರಧಾನಮಂತ್ರಿಗಳು ಉಲ್ಲೇಖಿಸಿದ್ದು, ಅತ್ಯಂತ ಸಮಯೋಚಿತವಾಗಿದೆ.
ಸಂಪೂರ್ಣ ದೇಶ ಆತ್ಮವಶವಾಗಬೇಕು. ನನ್ನ ಕೈಯಲ್ಲಿನಾನಿದ್ದೇನೆ ಎಂದು ಒಂದು ರಾಷ್ಟ್ರ ಯಾವಾಗ ಯೋಚನೆ ಮಾಡಬಹುದು? ನಮಗೆ ಬೇಕಾದ ಆವಶ್ಯಕತೆಗಳನ್ನು ನಾವೇ ಪೂರೈಸಿಕೊಂಡು ನಿಲ್ಲುವಂತಾದಾಗ ನಾವು ನಮ್ಮ ಕೈಯಲ್ಲಿದ್ದೇವೆ ಎನ್ನಬಹುದು. ಜೀವನಾವಶ್ಯಕ ವಸ್ತುಗಳಿಗಾಗಿ ಕೈಯೊಡ್ಡಬಾರದು. ಒಂದು ರಾಷ್ಟ್ರದ ಜೀವನಾವಶ್ಯಕತೆಗಳು ಯಾವುವು? ಆಧುನಿಕ ಭಾಷೆಯಲ್ಲಿ ಹೇಳುವುದಾದರೆ, ಅನ್ನದ ಭದ್ರತೆ. ನಮ್ಮ ಬೆಳೆಯನ್ನು ನಾವೇ ಬೆಳೆಯಬೇಕು. ಆಹಾರದಲ್ಲಿ ಸ್ವಾವಲಂಬಿಗಳಾಗುವುದು ಆತ್ಮನಿರ್ಭರತೆಯ ಬಹುಮುಖ್ಯ ಆಯಾಮ. ಮೂಲಾವಶ್ಯಕವಾದ ಸಂಗತಿಗಳಾದ ಅನ್ನ, ಅರಿವು, ಬಟ್ಟೆ, ವಸತಿ, ಔಷಧ ಇವುಗಳಲ್ಲಿ ನಾವು ಪೂರ್ಣ ಸ್ವಾವಲಂಬನೆ ಸಾಧಿಸಬೇಕು. ಜಗತ್ತಿಗೆ ಬೇಕಾಗುವ ಆಹಾರ ಮತ್ತು ಉತ್ಪನ್ನಗಳನ್ನು ನೀಡುವಂತಹ ಮಟ್ಟಕ್ಕೆ ಭಾರತ ಬೆಳೆಯಬೇಕು. ನಿಸ್ಸಂಶಯವಾಗಿ ಇದಕ್ಕೆ ಅಗತ್ಯವಾದ ಸಂಪನ್ಮೂಲಗಳು ಭಾರತದಲ್ಲಿವೆ.
ಇನ್ನೊಂದು ಆವಶ್ಯಕತೆ ಔಷಧ. ಕೊರೊನಾ ಸಂಕಟದ ಸಮಯದಲ್ಲಿ ಅನೇಕ ದೇಶಗಳ ಕೋರಿಕೆಯ ಮೇರೆಗೆ ಭಾರತ, ಅವುಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಸಿಟಮಾಲ್‌ಗಳನ್ನು ಕಳುಹಿಸಿಕೊಟ್ಟಿದೆ. ಅನೇಕ ಸಂಗತಿಗಳಿಗೆ ನಾವು ಬೇರೆ ದೇಶಗಳ ಮೇಲೆ ಅವಲಂಬಿಸಬೇಕಾದ ಸನ್ನಿವೇಶವೂ ಎದುರಾಯಿತು. (ಉದಾ: ಪಿಪಿಇ ಕಿಟ್, ವೆಂಟಿಲೇಟರ್‌ಗಳು ಇತ್ಯಾದಿ.) ಆದರೆ ಕಳೆದ ಎರಡು ತಿಂಗಳಲ್ಲಿ ಭಾರತ ಆತ್ಮನಿರ್ಭರತೆಯ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ಇಂತಹ ಸಂಕಟದ ಪರಿಸ್ಥಿತಿಯಲ್ಲಿ ಭಾರತದ ಜನತೆ ಮತ್ತು ಸರಕಾರ ಒಂದಾಗಿ ಸಾಧಿಸಿದ ಇಂತಹ ಅನೇಕ ವಿಕ್ರಮಗಳು ಐತಿಹಾಸಿಕ ಸಂಗತಿಗಳಾಗಿವೆ. ಇದು ಮುಂದಿನ ಪೀಳಿಗೆಗೆ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದವುಗಳು.
ಹಾಲು, ಹಣ್ಣು, ತರಕಾರಿಗಳಲ್ಲಿಯೂ ನಾವು ಪೂರ್ಣ ಸ್ವಾವಲಂಬನೆ ಸಾಧಿಸಬೇಕು. ದೇಶದ ಪ್ರತಿ ಮನೆಗೂ ಪ್ರತಿ ಮಗುವಿಗೂ ಪೌಷ್ಟಿಕಾಂಶ ಪೂರ್ಣ ಹಾಲು ಸಿಗುವುದು ಹೇಗೆ? ಇದಕ್ಕಾಗಿ ‘ಕ್ಷೀರ ಕ್ರಾಂತಿ’ ನಡೆದಿದೆ. ಅದು ಇನ್ನಷ್ಟು ಸಾರ್ಥಕವಾಗಿ ಮೂಲೆಮೂಲೆಗಳನ್ನು ಮುಟ್ಟುವಂತೆ ಮಾಡಬೇಕು. ದೇಸೀ ಗೋತಳಿಗಳನ್ನು ವೃದ್ಧಿಸುವ, ಸಂರಕ್ಷಿಸುವ ದೊಡ್ಡ ಅಭಿಯಾನ ಕೈಗೊಳ್ಳಬೇಕು.
ಭಾರತ ಆತ್ಮನಿರ್ಭರವಾಗುವ ಮೊದಲ ಮೆಟ್ಟಿಲು ಗ್ರಾಮಭಾರತವನ್ನು ಸಶಕ್ತಗೊಳಿಸುವುದು. ಗ್ರಾಮಜೀವನ ಸಶಕ್ತಗೊಂಡಾಗ ಕೃಷಿ, ಗ್ರಾಮಕೈಗಾರಿಕೆ, ಕುಶಲಕೆಲಸ ಮುಂತಾದವು ಇಂದಿನ ಪರಿಸ್ಥಿತಿಗೆ ತಕ್ಕಂತೆ ವಿಕಸಿತಗೊಂಡು ಭಾರತವನ್ನು ಆತ್ಮನಿರ್ಭರಗೊಳಿಸುತ್ತವೆ. ಇಂದು ಬಹುದೊಡ್ಡ ಸವಾಲಾಗಿರುವ ವಲಸೆ ಕಾರ್ಮಿಕರ ಸಂಕಟವನ್ನು ಬಹುಮಟ್ಟಿಗೆ ಪರಿಹರಿಸುವ ಉಪಾಯ ಅದೇ. ತನ್ನ ಪರಿಸರದಲ್ಲೇ ಗೌರವಯುತವಾಗಿ ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಇದ್ದಾಗ ನಮ್ಮ ಜನ ದೂರದ ನಗರಗಳಿಗೆ ಗುಳೆ ಎದ್ದು ಕೊಳಚೆ ಪ್ರದೇಶದ ನರಕಗಳಲ್ಲಿ ಜೀವಿಸಬೇಕಾದ ದುಸ್ಥಿತಿ ಬಾರದು.
ರಕ್ಷ ಣೆ ಮತ್ತು ಭದ್ರತೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಒಂದು ಯುವಕರ ಅಧಿವೇಶನಕ್ಕೆ ಡಾ. ಅಬ್ದುಲ್ ಕಲಾಂ ಅವರು ಒಂದು ಸಂದೇಶವನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಮೂರು ಸಂಗತಿಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದರು. ಒಂದು, ಆಹಾರದಲ್ಲಿ ಸ್ವಾವಲಂಬನೆ. 350 ಮಿಲಿಯ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡುವಂತಾಗಬೇಕು. ಎರಡು, ನಮಗೆ ಅಗತ್ಯವಾದಷ್ಟು ವಿದ್ಯುತ್ ನಾವೇ ಉತ್ಪಾದಿಸಬೇಕು. ಮೂರನೆಯದಾಗಿ, ಇಂದಿನ ಅಗತ್ಯತೆಯ ದೃಷ್ಟಿಯಿಂದ ಮೆಟೀರಿಯಲ್ ಸೈನ್ಸ್, ನ್ಯಾನೋ ಎಂಜಿನಿಯರಿಂಗ್‌ಗಳಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಮುಂದಿನ ಹತ್ತಿಪತ್ತು ವರ್ಷಗಳಲ್ಲಿ ನಾವು ಈ ಮೂರು ವಿಷಯಗಳಲ್ಲಿ ಸ್ವಯಂಪೂರ್ಣರಾಗಬೇಕಾದ ಅತ್ಯಂತ ಆವಶ್ಯಕತೆಯಿದೆ ಎಂದರು. ಇವು ಮೂರೂ ಆತ್ಮನಿರ್ಭರತೆಗೆ ತುಂಬಾ ಆವಶ್ಯಕ ಆಯಾಮಗಳು. ದೇಶದ ರಕ್ಷ ಣಾ ರಂಗದಲ್ಲೂ ಪೂರ್ಣ ಸ್ವಾವಲಂಬನೆ ನಮ್ಮ ಗುರಿಯಾಗಬೇಕು. ಸಶಕ್ತ ಮಿಲಿಟರಿ ಶಕ್ತಿಯನ್ನು ರೂಪಿಸಿಕೊಳ್ಳಬೇಕು.

ವ್ಯವಸ್ಥೆಗಳು ಮತ್ತು ಸಂಸ್ಥೆಗಳು
ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯ ಅನೇಕ ಸಂಗತಿಗಳು ಸ್ವಾತಂತ್ರ್ಯದ 73 ವರ್ಷಗಳ ನಂತರವೂ ಅನೇಕ ಮುಖಗಳಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಮುಕ್ತಿ ಪಡೆಯದೇ ಆತ್ಮನಿರ್ಭರ ಭಾರತಕ್ಕೆ ಅಗತ್ಯ ಪೂರಕ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗಲಾರದು. ನಮ್ಮ ಶಿಕ್ಷಣ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಚುನಾವಣಾ ವ್ಯವಸ್ಥೆ- ಎಲ್ಲವೂ ಇಂದು ಪ್ರಶ್ನಾರ್ಹ ಸ್ಥಿತಿಯಲ್ಲಿವೆ. ಅವುಗಳನ್ನು ನಾವು ಭಾರತೀಯ ಪದ್ಧತಿಗೆ ಹೊಂದಿಕೆಯಾಗುವಂತೆ ಪುನಃ ಎರಕ ಹೊಯ್ಯಬೇಕಾದ ಆವಶ್ಯಕತೆ ಇದೆ.
ನಮ್ಮ ಜನಮಾನಸವನ್ನೂ ಕೂಡಾ ಕೆಲ ಪರಿವರ್ತನೆಗಳಿಗೆ ತೆರೆದುಕೊಳ್ಳುವಂತೆ ಮಾಡಬೇಕು. ಜನಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಎರಡನೆಯದು, ಅವರು ಪರಿಶ್ರಮಿಗಳಾಗಬೇಕು. ನಮ್ಮ ರಾಜ್ಯ, ಕೇಂದ್ರ ಸರಕಾರಗಳ ಎಲ್ಲ ಅಧಿಕಾರಿಗಳೂ ಕೊರೊನಾ ಸಂದರ್ಭದಲ್ಲಿ ಜನರಿಗಾಗಿ ಸಕ್ರಿಯವಾಗಿ ಹಗಲಿರುಳು ಕೆಲಸ ಮಾಇದಂತೆ, ಸದಾ ಕಾಲದಲ್ಲಿಯೂ ಮಾಡುವಂತಾಗಬೇಕು.
ಫ್ರಾನ್ಸ್ ಯುದ್ಧದಲ್ಲಿ ಸೋತಾಗ, ಫ್ರಾನ್ಸ್‌ನ ಸೇನಾಪತಿಯನ್ನು ‘ಫ್ರಾನ್ಸ್ ಯಾಕೆ ಸೋತಿತು, ಇಂಗ್ಲೆಂಡ್‌ಗಿಂತ ನಿಮ್ಮ ಮಿಲಿಟರಿ ಹೆಚ್ಚಾಗಿದ್ದರೂ ಯಾಕೆ ಗೆಲ್ಲಲಿಲ್ಲ?’ ಎಂದು ಯಾರೋ ಕೇಳಿದರಂತೆ. ಅದಕ್ಕೆ ಅವನು ‘‘ನಮ್ಮ ಯುವಕರು ಫ್ರಾನ್ಸ್ ಯುದ್ಧದಲ್ಲಿದೆ ಎಂಬುದನ್ನು ಮನಗಾಣದೆ ಮೋಜಿನಲ್ಲಿ ತೊಡಗಿದ್ದುದರಿಂದ ಫ್ರಾನ್ಸ್ ಸೋಲನ್ನು ಕಾಣಬೇಕಾಯಿತು,’’ ಎಂದು ಉತ್ತರ ನೀಡಿದ. ದೇಶದ ಪ್ರಧಾನಮಂತ್ರಿಯೋ ಸರಕಾರವೋ ಹಗಲಿರುಳು ಕೆಲಸ ಮಾಡಿದರೆ ಸಾಲದು. ಇಡೀ ಸಮಾಜ ಕಠಿಣ ಪರಿಶ್ರಮ ಪಡಬೇಕು.

ಸಂಶೋಧನೆಯ ಕ್ಷೇತ್ರ
ನಮ್ಮಲ್ಲಿರುವ ಅಪಾರ ಜ್ಞಾನಭಂಡಾರವನ್ನು ಪುನಃ ಅಭಿವ್ಯಕ್ತಗೊಳಿಸಬೇಕು. ಅದರ ಆಧಾರದ ಮೇಲೆ ಸಂಶೋಧನೆಗಳನ್ನು ನಡೆಸಿ ಆಧುನಿಕ ಕಾಲದ ಹೊಸ ಜ್ಞಾನವನ್ನು ಹುಟ್ಟಿಸಬೇಕು. ಯೋಗಿ ಅರವಿಂದರು, ಭಾರತ ಪೂರ್ಣ ಸ್ವತಂತ್ರವಾಗಲು ಬೇಕಾದ ಮೂರು ಸಂಗತಿಗಳನ್ನು ಹೇಳಿದ್ದಾರೆ. ಒಂದು, ಭಾರತದಲ್ಲಿರುವ ಅಪಾರ ಜ್ಞಾನರಾಶಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಅದನ್ನು ನೀಡಬೇಕು. ಎರಡನೆಯದು, ಭಾರತದಲ್ಲಿರುವ ಜ್ಞಾನರಾಶಿಯನ್ನು ಇವತ್ತಿನ ಯುಗಕ್ಕೆ ತಕ್ಕಂತೆ ವ್ಯಾಖ್ಯೆ ಮಾಡಬೇಕು. ಮೂರನೆಯದು, ಹೊಸ ಜ್ಞಾನದ ಸೃಷ್ಟಿ ಮಾಡಬೇಕು. ಅನೇಕ ಬಾರಿ ವಿವಿಧ ಸ್ವಾರ್ಥದಿಂದಾಗಿ ಸಮಾಜವನ್ನು ಕುಗ್ಗಿಸುವ ಕೆಲಸಗಳು ನಡೆಯುತ್ತಿರುತ್ತವೆ. ಒಂದು ದೇಶ, ಸಮುದಾಯ ಈ ರೀತಿಯ ವಿರೋಧಾಭಾಸಗಳಿಂದ ತನ್ನನ್ನು ತಾನು ಮೇಲೆತ್ತಿಕೊಳ್ಳಬೇಕು. ಒಳ್ಳೆಯದು ಎಲ್ಲಿ ನಡೆದರೂ ಅದನ್ನು ಬೆಂಬಲಿಸಬೇಕು.
ನಾವು ನಮ್ಮ ಕಾಲ ಮೇಲೆ ನಿಲ್ಲಬೇಕು. ನಮ್ಮ ಕೈಯೊಳಗೆ ನಾವಿರಬೇಕು. ನನ್ನ ಬುದ್ಧಿ ನಮ್ಮನ್ನು ನಡೆಸಬೇಕು. ನನ್ನ ಮನಸ್ಸು ನನ್ನನ್ನು ಅರಳಿಸಬೇಕು. ನನ್ನ ಹೃದಯ ಎಲ್ಲರನ್ನೂ ಒಪ್ಪಿಕೊಳ್ಳಬೇಕು. ಈ ದೃಷ್ಟಿಯಿಂದ ಆತ್ಮನಿರ್ಭರರಾಗಿ ಭಾರತವನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವೆಲ್ಲಮಾಡಬೇಕು. ‘ಅಪಿ ಸ್ವರ್ಣಮಯೀ ಲಂಕಾ, ನ ಮೇ ಲಕ್ಷ್ಮಣ ರೋಚತೇ|| ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಇದು ರಾಮಾಯಣದ ಪ್ರಚಲಿತ ಮಾತು. ಜನನೀ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮೇಲು- ಎಂದು. ಈ ಆಧಾರದ ಮೇಲೆ ಆತ್ಮನಿರ್ಭರತೆಯಒಂದು ಸಮರ್ಥ ಭಾರತವನ್ನು ನಾವು ಕಟ್ಟಬೇಕಾಗಿದೆ.
(ಲೇಖಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top