ಸ್ವದೇಶಿ, ಜಾಗತೀಕರಣ ನಡುವಿನ ಆಯ್ಕೆ ಯಾವುದು?

– ಸ್ವಾವಲಂಬನೆಯೊಂದಿಗೆ ವೈಶ್ವಿಕ ಗ್ರಾಮ ಬಲಗೊಳಿಸುವ ಭಾರತೀಯ ಚಿಂತನೆ

– ಹರಿಪ್ರಕಾಶ್ ಕೋಣೆಮನೆ. 
ಕೊರೊನಾ ವೈರಸ್‌ನಿಂದ ಪಾರಾಗುವುದು ಹೇಗೆ ಎಂಬುದೇ ಮೂರು ತಿಂಗಳ ಹಿಂದೆ ನಮ್ಮೆದುರಿನ ಬೃಹತ್ ಸವಾಲಾಗಿತ್ತು. ಕಾರಣ ಎದುರಾಗಿದ್ದ ಜೀವ ಭಯ! ಅದೊಂದು ಜೀವನ್ಮರಣದ ಪ್ರಶ್ನೆ ಎಂಬಂತೆಯೇ ಸರಕಾರವೂ ಯೋಚನೆಗೆ ಬಿದ್ದಿತ್ತು. ಆದರೆ ಈಗ ಅದು ನಮ್ಮ ಚಿಂತನೆಯ ಕೇಂದ್ರ ವಸ್ತುವಲ್ಲ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂದು ಸರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಮುನ್ನವೇ, ಅದರೊಟ್ಟಿಗೆ ಬದುಕಲು ಕಲಿಯಲಾರಂಭಿಸಿದ್ದೇವೆ. ಆದರೆ, ಈಗ ನಮ್ಮ ಚಿಂತೆ ಬೇರೆಯಾಗಿದೆ. ಕೊರೊನೋತ್ತರ ಕಾಲದ ಜೀವನ, ನಮ್ಮ ಉದ್ಯೋಗ, ಗಳಿಕೆ, ಕಿಸೆಯಲ್ಲಿ ಕರಗುತ್ತಿರುವ ಕಾಸು- ಈ ಎಲ್ಲವೂ ನಮಗೆ ಮುಖ್ಯವಾಗುತ್ತಿದೆ. ಈ ಸವಾಲುಗಳು ನಮ್ಮನ್ನು ಅಧೀರರನ್ನಾಗಿ ಮಾಡಿವೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ‘ಆತ್ಮ ನಿರ್ಭರತೆ’ ಅಥವಾ ‘ಆತ್ಮ ನಿರ್ಭರ ಭಾರತ’ ಎಂಬ ಹೊಸ ಘೋಷವಾಕ್ಯವೊಂದು ಎಲ್ಲರ ಗಮನಸೆಳೆದಿದೆ. ಉನ್ನತ ಆಶಯವನ್ನು ಹೊಂದಿರುವ ಆ ಘೋಷ ವಾಕ್ಯದ ಸುತ್ತವೇ ನಮ್ಮ ಆಲೋಚನೆಗಳು ಸುತ್ತಲಾರಂಭಿಸಿವೆ. ಕೆಲವರಂತೂ ಈ ಘೋಷಣೆಯನ್ನೇ ಹರಿದು, ಹಿಂಜಿ ಹಿಪ್ಪೆ ಮಾಡುತ್ತಿದ್ದಾರೆ. ನಾಳಿನ ಬದುಕಿನ ಚಿಂತೆ ನಮ್ಮನ್ನು ಅಷ್ಟೊಂದು ಕಾಡುತ್ತಿದೆ. ಆ ಹಿನ್ನೆಲೆಯಲ್ಲಿ ನಾವೊಂದಿಷ್ಟು ಆಲೋಚನೆ ಮಾಡೋಣ:

ಆತ್ಮನಿರ್ಭರತೆ ಭಾರತಕ್ಕೆ ಹೊಸದೇ?
ಮೊಟ್ಟ ಮೊದಲನೆಯದಾಗಿ ಆತ್ಮ ನಿರ್ಭರತೆ ಸ್ಪಷ್ಟ, ನೇರ ಮತ್ತು ಸರಳ ಅರ್ಥವಾದರೂ ಏನು? ಸ್ವಾವಲಂಬನೆ ಅಂತ. ಸ್ವಾವಲಂಬನೆಯ ಕಲ್ಪನೆ ಭಾರತಕ್ಕೆ ಹೊಸದಲ್ಲ. ಅದು ಆಮದು ಕಲ್ಪನೆಯೂ ಅಲ್ಲ. ಆತ್ಮ ನಿರ್ಭರತೆಯ ಕಲ್ಪನೆಯೇ ಶುದ್ಧ ಸ್ವದೇಶಿ. ಜಗತ್ತಿನ ಇತರ ಎಲ್ಲ ದೇಶಗಳ ಪೈಕಿ ಭಾರತ ಮಾತ್ರ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲದು. ಅದಕ್ಕೆ ಬಲವಾದ ಕಾರಣವೂ ಇದೆ.

ಅವರೇ ಅಲ್ಲ, ಅವರೂ ಒಬ್ಬರು…
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬಲ್ಲವರು ಮತ್ತು ಆ ಹಿನ್ನೆಲೆಯಿಂದಲೇ ಸ್ವರಾಜ್ಯದ ಕಲ್ಪನೆಯ ಕುರಿತು ಮಾತನಾಡುವವರು ಸ್ವಾವಲಂಬನೆಯ ಜನಕ ಮಹಾತ್ಮಾ ಗಾಂಧೀಜಿ ಎಂದು ಹೇಳುತ್ತಾರೆ. ಅದೇ ನಿಜವಲ್ಲ. ಭಾರತೀಯ ಆತ್ಮ ನಿರ್ಭರತೆ ಕಲ್ಪನೆಯನ್ನು ಬಲಗೊಳಿಸಿದ ಹಲವು ಪ್ರವರ್ತಕರಲ್ಲಿ ಗಾಂಧೀಜಿ ಕೂಡ ಒಬ್ಬರು. ವಾಸ್ತವದಲ್ಲಿ ಭಾರತದ ಸಂಸ್ಕೃತಿ, ಭಾರತೀಯ ಅಧ್ಯಾತ್ಮ, ಭಾರತೀಯ ತತ್ವಜ್ಞಾನದ ತಳಹದಿಯೇ ಆತ್ಮ ನಿರ್ಭರತೆ ಅಥವಾ ಸ್ವಾವಲಂಬನೆ. ಇತರರ ಒಳಿತಿನಲ್ಲಿ ತನ್ನ ಒಳಿತನ್ನು ಕಾಣುವುದೇ ಅದರ ತಿರುಳು. ಕೆಲಸ ಮಾಡುತ್ತ ಬದುಕೋಣ ಎಂಬುದು ಭಾರತದ ವೇದಗಳ ಆದಿಯಾಗಿ ಎಲ್ಲ ತತ್ವಗಳೂ ಪ್ರತಿಪಾದಿಸುವ ಮಹೋನ್ನತವಾದ ಬದುಕಿನ ವಿಧಾನ. ಅದು ಇಂದಿಗೂ ಎಂದೆಂದಿಗೂ ಪ್ರಸ್ತುತ.

ವಿವೇಕಾನಂದ ಕಲ್ಪನೆಯಲ್ಲಿ ಸಾರ್ಥಕತೆ/ಆರ್ಥಿಕತೆ
ಜಗದ್ವಿಖ್ಯಾತ ರಾಮಕೃಷ್ಣ ಮಹಾಸಂಘ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು, ‘ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯ ಚ’ ಎಂಬ ಧ್ಯೇಯವೊಂದನ್ನು ಅದಕ್ಕೆ ಜೋಡಿಸಿದರು. ಆ ಧ್ಯೇಯ ವಾಕ್ಯದ ಅರ್ಥ- ‘ಮನುಷ್ಯ ಜನ್ಮದ ಸಾರ್ಥಕತೆ ಇರುವುದು ಸ್ವಂತದ ಮುಕ್ತಿಗಾಗಿಯೂ ಮತ್ತು ಜಗತ್ತಿನ ಹಿತಕ್ಕಾಗಿಯೂ ಬದುಕುವುದರಲ್ಲಿ ಮಾತ್ರ !’
ತಮ್ಮ ಪರಮ ಗುರುಗಳಾದ ರಾಮಕೃಷ್ಣ ಪರಮಹಂಸರ ಜೀವನದಿಂದ ಪಡೆದ ಪ್ರೇರಣೆಯಿಂದಲೇ ವಿವೇಕಾನಂದರು ಈ ಘೋಷವಾಕ್ಯ ಹುಟ್ಟು ಹಾಕಿದರು. (ಇಂಥದ್ದೊಂದು ಮಾತು ಋುಗ್ವೇದದಲ್ಲೂ ಕಂಡು ಬರುತ್ತೆ) ವಿವೇಕಾನಂದರು ಈ ಉದಾತ್ತ ಧ್ಯೇಯವನ್ನು ವಿಸ್ತರಿಸಿ ಹೀಗೆ ಹೇಳುತ್ತಾರೆ. ‘‘ಪ್ರತಿಯೊಬ್ಬರೂ ಈ ಸಮಾಜಕ್ಕಾಗಿ, ಇತರರಿಗಾಗಿ ಬದುಕಬೇಕು. ಸನ್ಯಾಸಿಯಾದವನಿಗೂ ಈ ತತ್ತ್ವ ಅನ್ವಯ. ಸನ್ಯಾಸಿಯೂ ಸಮಾಜಸೇವೆ ಮಾಡುತ್ತಲೇ ಆತ್ಮೋದ್ಧಾರ ಕಂಡುಕೊಳ್ಳಬೇಕು. ಈ ಎರಡೂ ಪರಸ್ಪರ ಪೂರಕವಾಗಿರಬೇಕೆ ಹೊರತು ಬೇರೆ ಬೇರೆ ಅಲ್ಲ. ಅಂದರೆ, ಆತ್ಮೋದ್ಧಾರಕ್ಕಾಗಿ (ಆಧ್ಯಾತ್ಮಿಕ ತಪಸ್ಸು) ಸಮಾಜವನ್ನು ಮರೆಯುವುದು ಇಲ್ಲವೇ ಸಮಾಜ ಸೇವೆ ಮಾಡುತ್ತ ಆತ್ಮೋದ್ಧಾರವನ್ನು ಮರೆಯವುದು ಸಲ್ಲದು. ಅವೆರಡೂ ಜೊತೆಜೊತೆಯಾಗಿ ಸಾಗಬೇಕು,’’ ಎಂದು ಖಚಿತವಾಗಿ ಹೇಳಿದ್ದರು. ವಿವೇಕಾನಂದರ ಸುಪ್ರಸಿದ್ಧ ಚಿಕಾಗೋ ಭಾಷಣದ ವಿಚಾರ ಗೊತ್ತೇ ಇದೆ. 1993ರಲ್ಲಿ ಅದೇ ಚಿಕಾಗೋ ಭಾಷಣದ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು. ಅದರಲ್ಲಿ ಭಾಗವಹಿಸಿ ಮಾತನಾಡಿದ ಯುನೆಸ್ಕೋ ಡೈರೆಕ್ಟರ್ ಜನರಲ್ ಫೆಡರಿಕೋ ಮೇಯರ್ ವಿವೇಕಾನಂದರ ಚಿಂತನೆಯ ಕುರಿತು ಆಡಿದ ಮಾತು ಇಲ್ಲಿ ಉಲ್ಲೇಖನೀಯ. ‘‘ಸ್ವಾಮಿ ವಿವೇಕಾನಂದರು 1897ರಷ್ಟು ಹಿಂದೆಯೇ ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಸಂವಿಧಾನಕ್ಕೂ 1945ರಲ್ಲಿ ರೂಪುಗೊಂಡ ಯುನೆಸ್ಕೋ ಸಂವಿಧಾನಕ್ಕೂ ಇರುವ ಸಾಮ್ಯವನ್ನು ಕಂಡು ನಾನು ಚಕಿತನಾಗಿದ್ದೇನೆ. ಇವೆರಡರ ಪ್ರಗತಿಯ ಕೇಂದ್ರ ಬಿಂದು ಮನುಷ್ಯನೇ ಆಗಿದ್ದಾನೆ. ಪ್ರಜಾಸತ್ತಾತ್ಮಕತೆಯನ್ನು ರೂಪಿಸುವ ಈ ಮಹಾನ್ ಸಂಸ್ಥೆಗಳ ಕಾರ್ಯಸೂಚಿಯಲ್ಲೂ ಸಹಿಷ್ಣುತೆ ಎಂಬುದೇ ಅಗ್ರಸ್ಥಾನದಲ್ಲಿದೆ. ಇವೆರಡೂ ಮಾನವ ಸಂಸ್ಕೃತಿ ಮತ್ತು ಸಮಾಜಗಳ ವೈವಿಧ್ಯವನ್ನು ಸಮಾನ ಪರಂಪರೆಯ ಅಗತ್ಯ ಅಂಶಗಳೆಂದು ಗುರುತಿಸಿವೆ.’’ ಆತ್ಮ ನಿರ್ಭರತೆಯ ಭಾರತೀಯ ಹಿನ್ನೆಲೆಗೆ ಇಂಥ ಹತ್ತಾರು ಉಲ್ಲೇಖಗಳು ನಮ್ಮ ವೇದ ಉಪನಿಷತ್ಗಳಲ್ಲಿ, ಮಹಾನ್ ಸಾಧುಸಂತರ ನಡೆ-ನುಡಿಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ.

12ನೇ ಶತಮಾನದಲ್ಲಿ ಬಸವಣ್ಣ
ಕಾಯಕವೇ ಕೈಲಾಸ ಎನ್ನುವ ಮೂಲಕ 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಸಂಸ್ಕೃತಿಗೆ ಅಧ್ಯಾತ್ಮವನ್ನು ಬೆಸೆದರು. ಜತೆಗೆ, ಸ್ವಾವಲಂಬನೆ ಮೂಲಕ ಆರ್ಥಿಕ ಸಬಲತೆ ಅಥವಾ ಸಮಾನತೆ ಸಾಧಿಸಬೇಕೆಂಬುದೇ ಕಾಯಕ ಸಂಸ್ಕೃತಿಯ ಉದ್ದೇಶ. ಕಾಯಕದಲ್ಲಿ ಮೇಲು ಕೀಳು ಇರುವುದಿಲ್ಲ ಎಂಬ ಬಸವಣ್ಣನ ಮಾತಿನಲ್ಲಿಆರ್ಥಿಕ ಸಮಾನತೆಯ ಆಶಯವನ್ನೂ ಗುರುತಿಸಬಹುದಾಗಿದೆ. ಆಗಿನ ಕಾಲದ ಸಮಾಜದಲ್ಲಿ ಬಡವ ಬಲ್ಲಿದ, ಮೇಲು ಕೀಳು ಇತ್ಯಾದಿ ತಾರತಮ್ಯಗಳನ್ನು ನಿವಾರಣೆ ಮಾಡಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಬಸವಣ್ಣನವರ ಈ ಧ್ಯೇಯ ವಾಕ್ಯದ ಸಂದೇಶದ ಪ್ರಭಾವವೇ ಅನನ್ಯ.

ಗಾಂಧಿ ಕಲ್ಪನೆಯ ಆತ್ಮ ನಿರ್ಭರತೆ
ಸ್ವಾವಲಂಬನೆ ತತ್ವದಲ್ಲಿ ವಿಶ್ವಕ್ಕೇ ಮಾದರಿಯಾದ ಭಾರತ ಸತತವಾಗಿ ಪರಕೀಯ ಆಳ್ವಿಕೆಗೆ, ದಾಸ್ಯಕ್ಕೆ, ಆತ್ಮ ವಿಸ್ಮೃತಿಗೆ ಜಾರಿದ್ದು ಕೂಡ ಇತಿಹಾಸದಲ್ಲಿ ಅಚ್ಚಳಿಯದೇ ದಾಖಲಾಗಿರುವ ಸತ್ಯ. 1916ರಲ್ಲಿ ಆಫ್ರಿಕಾದಿಂದ ಸ್ವದೇಶಕ್ಕೆ ಮರಳಿದ ಗಾಂಧೀಜಿ ಮೊದಲು ಅರಿತದ್ದು ಈ ಮಿಸ್ಸಿಂಗ್ ಲಿಂಕನ್ನು. ಸ್ವಾವಲಂಬನೆಯ ಪ್ರಬಲ ಪ್ರತಿಪಾದಕಾರದ ಜಾನ್ ರಸ್ಕಿನ್, ಅಮೆರಿಕನ್ ಬರಹಗಾರ ಹೆನ್ರಿ ಡೇವಿಡ್ ಥೋರೊ ಮುಂತಾದವರಿಂದ ಪ್ರಭಾವಿತರಾದ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸಲು ಬಳಸಿದ್ದು ಇದೇ ಸ್ವಾವಲಂಬನೆ ಅಸ್ತ್ರವನ್ನು. ಅಂದು ಭಾರತೀಯರಿಗೆ ಆತ್ಮ ನಿರ್ಭರತೆಯ ಅತಿಯಾದ ಅವಶ್ಯಕತೆಯಿತ್ತು. ಕಾರಣ ಆಗ ನಾವು ಪರಕೀಯರ ಆಳ್ವಿಕೆಯಲ್ಲಿದ್ದೆವು. ನಮ್ಮ ದೇಶವನ್ನು ನಮ್ಮವರೇ ಆಳುವ ಹಾಗೆ ಮಾಡುವುದು ಗಾಂಧೀಜಿಯವರ ಆದ್ಯ ಗುರಿ ಆಗಿತ್ತು. ಅವರು ಕೇವಲ ಉಪದೇಶ ಮಾಡಲಿಲ್ಲ. ಅಂತಹ ಆಚರಣಾತ್ಮಕ ಹೋರಾಟವನ್ನು ತಮ್ಮಿಂದಲೇ ಆರಂಭ ಮಾಡಿದರು. ಉದಾಹರಣೆಗೆ ಖಾದಿ ವಸ್ತ್ರ ತಯಾರಿಕೆ ಮತ್ತು ಬಳಕೆ. ಆ ವಿಚಾರದಲ್ಲಿ ಗಾಂಧೀಜಿ ಉಗ್ರ ರೂಪವನ್ನು ತಾಳಿದರು. ಟೆರಿಲಿನ್, ಟೆರಿಕೋಟ್ ಬಟ್ಟೆಗಳನ್ನು ದಹಿಸಿ ಪ್ರತಿಭಟನೆ ಕಿಡಿ ಹೊತ್ತಿಸಿದರು. ಜತೆಗೆ, ಕಾರ್ಯಾನುಷ್ಠಾನ ಮಾರ್ಗವನ್ನು ಹೇಳಿಕೊಟ್ಟರು.
ಆತ್ಮನಿರ್ಭರತೆಯ ಬೆನ್ನಲ್ಲಿಯೇ ಹೆಚ್ಚು ಚರ್ಚೆಗೆ ಒಳಪಟ್ಟಿರುವ ಇನ್ನೊಂದು ವಿಷಯ ಸ್ವದೇಶಿ ವಸ್ತುಗಳ ಬಳಕೆ. ಈ ವಿಷಯದಲ್ಲಿ ಗಾಂಧೀಜಿಯ ಕಲ್ಪನೆಯನ್ನು ನೋಡಿ. 1916ರಲ್ಲಿ ಸ್ವದೇಶಿ ಕಲ್ಪನೆ ಕುರಿತು ಗಾಂಧೀಜಿ ಹೀಗೆ ಹೇಳುತ್ತಾರೆ: ‘‘ಸ್ವದೇಶಿ ಅಂದರೆ ನಮ್ಮ ಹತ್ತಿರದಲ್ಲಿ ಲಭ್ಯವಿರುವ ವಸ್ತುಗಳು ಮತ್ತು ಸೇವೆಯ ಮೇಲೆ ಅವಲಂಬಿಸುವುದು ಹಾಗೂ ದೂರದವುಗಳನ್ನು ತಿರಸ್ಕರಿಸುವುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಮುಂಬಯಿನಿಂದ ಯಾರಾದರೂ ವ್ಯಾಪಾರಿ ಬಂದು ನಿಮಗೆ ಪದಾರ್ಥಗಳನ್ನು ಮಾರಲು ಯತ್ನಿಸಿದರೆ, ಅವನನ್ನು ತಿರಸ್ಕರಿಸಿ ನಿಮ್ಮ ಬಾಗಿಲಲ್ಲೆ ಇರುವ ಮದರಾಸಿನ ವ್ಯಾಪಾರಿಯನ್ನು ಪ್ರೋತ್ಸಾಹಿಸಿ.’’

ಶ್ವೇತಕ್ರಾಂತಿಯಲ್ಲೂ ಸ್ವಾವಲಂಬಿ ಸೂತ್ರ
ಗಾಂಧೀಜಿ ಪ್ರತಿಪಾದಿಸಿದ ಸ್ವಾವಲಂಬನೆಯ ಅನುಷ್ಠಾನದ ಮಾರ್ಗ ಸಹಕಾರ ತತ್ವವೇ ಆಗಿತ್ತು. 19ನೇ ಶತಮಾನದ ಕಡೆಯಲ್ಲಿ ಶುರುವಾದ ಸಹಕಾರಿ ಚಳವಳಿಯ ಮೂಲ ಆಶಯವೇ- ‘ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರು’ ! ‘ಪರಸ್ಪರ ಅವಲಂಬಿತನಾಗಿ ನಿನ್ನ ಪ್ರಗತಿಯನ್ನು ಕಾಣು. ಅವಲಂಬಿತನಾಗಿ ನಿನಗೆ ಬೇಕಾಗಿರುವುದನ್ನು ಪಡೆದುಕೊಂಡು, ಇತರರ ಪ್ರಗತಿಗೂ ಹೆಗಲು ನೀಡು. ಪರಸ್ಪರರ ನಡುವೆ ಸಂಘರ್ಷಕ್ಕೆ, ಸ್ಪರ್ಧೆಗೆ ಆಸ್ಪದ ಮಾಡಿಕೊಡದೆ ಅಭಿವೃದ್ಧಿ ಹೊಂದು’ – ಇವೇ ಆ ಸಹಕಾರ ತತ್ವದ ಮೂಲಾಂಶಗಳು. ಅಂದರೆ ಆತ್ಮ ನಿರ್ಭರತೆ ಸಾಧನೆಗೆ ಅತ್ಯುತ್ತಮ ಸಾಧನ ಅಥವಾ ವಿಧಾನ ಎಂದರೆ ಸಹಕಾರ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವುದು.
ಗುಜರಾತ್‌ನಲ್ಲಿ ನಡೆದ ಶ್ವೇತ ಕ್ರಾಂತಿಯಲ್ಲಿ ಇದನ್ನು ಗಮನಿಸಬಹುದು. ವಿಶ್ವದಲ್ಲಿಯೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತ್ಯಂತ ದೊಡ್ಡ ಉತ್ಪಾದನೆಯ ದೇಶ ಎಂಬ ಕೀರ್ತಿ ಬರಲು, ಗುಜರಾತ್‌ನ ಅಮುಲ್ ಕಾರಣ. ಸಹಕಾರಿ ಕ್ಷೇತ್ರದ ಅತ್ಯುತ್ತಮ ಮಾದರಿ ಇದು.

ಗ್ಲೋಬಲ್ ವಿಲೇಜಲ್ಲಿ ಸ್ವಾವಲಂಬನೆ ಹೇಗೆ?
ಈಗ ನಮ್ಮನ್ನು ನಾವು ಗ್ಲೋಬಲ್ ವಿಲೇಜಿನಲ್ಲಿ(ವೈಶ್ವಿಕ ಗ್ರಾಮಗಳು) ವಾಸಿಸುತ್ತಿರುವ ಆಧುನಿಕ ಜಗತ್ತಿನ ಮನುಷ್ಯರು ಎಂದು ಕರೆದುಕೊಂಡಿದ್ದೇವೆ. ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶದವರೆಗೆ ನಮ್ಮ ಸಹಕಾರದ ಬಾಹುಗಳು ಚಾಚಿ ದೇಶದೇಶಗಳ ನಡುವೆ ಈಗ ನಾವು ಸಹಕಾರ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಆಹಾರ ಪದಾರ್ಥಗಳ ಉತ್ಪಾದನೆಯಿಂದ ಹಿಡಿದು, ಆಧುನಿಕ ತಂತ್ರಜ್ಞಾನದವರೆಗಿನ ಎಲ್ಲ ಬೇಕುಗಳಿಗೆ ಈ ಸಹಕಾರ ವ್ಯವಸ್ಥೆಯನ್ನೇ ನಾವು ಅತಿಯಾಗಿ ಅವಲಂಬಿಸಿಕೊಂಡಿದ್ದೇವೆ. ಈ ಹಂತದಲ್ಲಿ ನಾವು ಸ್ವಾವಲಂಬನೆ ಅಥವಾ ಆತ್ಮ ನಿರ್ಭರತೆಯನ್ನು ಸಾಧಿಸುವುದು ಹೇಗೆ? ಸ್ವದೇಶಿ ಮತ್ತು ಜಾಗತೀಕರಣದ ನಡುವೆ ಆಯ್ಕೆ ಯಾವುದು? ಈ ತಾಕಲಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಹಳ್ಳಿ ಅಥವಾ ದೇಶ ನಡುಗಡ್ಡೆ ಆಗಲು ಸಾಧ್ಯವೇ ಎಂಬ ಪ್ರಶ್ನೆ ಏಳುತ್ತದೆ. ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯ ಅಥವಾ ಮೋದಿ ಹೇಳಿದ ಆತ್ಮನಿರ್ಭರತೆಯಲ್ಲೂ ಈ ಜಿಜ್ಞಾಸೆಯ ಅಂಶವಿದೆ. ನಾವು ಯಾವುದರಲ್ಲಿ ನೈಪುಣ್ಯತೆ ಗಳಿಸಿದ್ದೇವೋ, ಯಾವುದನ್ನು ಸ್ಪರ್ಧಾತ್ಮಕವಾಗಿ ಉತ್ಪಾದಿಸುತ್ತೇವೆಯೋ ಅವುಗಳಿಗೆ ಒತ್ತು ನೀಡಿ, ಉಳಿದವುಗಳಿಗೆ ಇತರರನ್ನು ಅವಲಂಬಿಸುವುದೇ ಬುದ್ಧಿವಂತಿಕೆ. ಸ್ವಾವಲಂಬನೆ ಎಂಬುದು ಏನನ್ನೂ ನಿರಾಕರಿಸುವುದಿಲ್ಲ. ಸ್ವಾವಲಂಬನೆ ಎಂದರೆ ನೈಪುಣ್ಯತೆ ಇಲ್ಲದೇ ಇರುವುದನ್ನು ಹಟಮಾರಿತನದಿಂದ ಉತ್ಪಾದಿಸಬೇಕು ಎಂದಲ್ಲ. ಸ್ವಾವಲಂಬನೆಯ ಕ್ಷೇತ್ರಗಳನ್ನು ವಿಸ್ತರಿಸುವ ಕಡೆ ಸದಾ ಕಣ್ಣಿದ್ದರೆ ಸಾಕು. ಈ ಎಲ್ಲದಕ್ಕೂ ನಮಗೆ ಸ್ಪಷ್ಟತೆ ಬರಬೇಕೆಂದರೆ ಭಾರತೀಯ ಚಿಂತನೆಯನ್ನು ಪ್ರತಿಪಾದಿಸುವ ವಸುದೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ), ಆ ನೋ ಭದ್ರಾಃಕೃತವೋ ಯಂತು ವಿಶ್ವತಃ (ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮಗೆ ಬರಲಿ)ಎಂಬ ಘೋಷ ವಾಕ್ಯಗಳನ್ನು ಗಮನಿಸಬೇಕು. ಆಗ ವೈಶ್ವಿಕ ಗ್ರಾಮ ಕಲ್ಪನೆ ಮತ್ತು ಸ್ವದೇಶಿ ಚಿಂತನೆ ಪರಸ್ಪರ ವಿರೋಧವಲ್ಲ, ಪೂರಕ ಎಂಬುದು ಗೊತ್ತಾಗುತ್ತದೆ.

ಮೇಕ್ ಇನ್- ಮೇಡ್ ಇನ್ ನಡುವಿನ ಅಂತರ
ಕೊರೊನಾ ಸಂಕಷ್ಟದ ಕಾಲದಲ್ಲಿ ಆತ್ಮನಿರ್ಭರತೆಯ ಆಶಾಕಿರಣ ಹೊಮ್ಮಿಸಿದ ಪ್ರಧಾನಿ ಮೋದಿ ಅವರ ಸರಕಾರ ಮೇಕ್ ಇನ್ ಇಂಡಿಯಾ ಎಂಬ ಜನಪ್ರಿಯ ಘೋಷಣೆ ಮೊಳಗಿಸಿದ್ದನ್ನು ನೋಡಿದ್ದೇವೆ. ಅದಕ್ಕೂ ಮೊದಲು ಮೇಡ್ ಇನ್ ಇಂಡಿಯಾ ಘೋಷಣೆ ಇತ್ತು. ಮೇಡ್ ಇನ್ ಇಂಡಿಯಾ ಅಂದರೆ ಭಾರತೀಯ ನೆಲದಲ್ಲಿ, ಭಾರತೀಯ ತಂತ್ರಜ್ಞಾನ ಆಧರಿಸಿ ಭಾರತೀಯರಿಂದಲೇ ಉತ್ಪಾದಿತವಾದ ವಸ್ತು ಎಂದು. ಮೇಕ್ ಇನ್ ಇಂಡಿಯಾ ಎಂದರೆ ಭಾರತದಲ್ಲಿ ಉತ್ಪಾದನೆಯಾದ ವಸ್ತು. ಉತ್ಪಾದಿಸುವ ದೇಶ ಮತ್ತು ಜನ ಯಾರಾದರೂ ಇರಬಹುದು. ಆತ್ಮ ನಿರ್ಭರತೆ ದೃಷ್ಟಿಯಿಂದ ನೋಡಿದರೆ ಮೇಕ್ ಇನ್ ಇಂಡಿಯಾ ಹೆಚ್ಚು ಪ್ರಯೋಜನಕಾರಿ. ಸರಕಾರ ಉತ್ತೇಜನ ಕೊಡಬೇಕಾಗಿರುವುದು ಮೇಕ್ ಇನ್ ಇಂಡಿಯಾಕ್ಕೆ, ಅವಕಾಶ ನೀಡಬೇಕಿರುವುದು ಮೇಡ್ ಇನ್ ಇಂಡಿಯಾಕ್ಕೆ.

ಪ್ರಯೋಗ ಸಾಧ್ಯ ಪುರದ ಕಲ್ಪನೆ
ಸ್ವಾವಲಂಬನೆ ಎಂದ ತಕ್ಷಣ ನೆನಪಾಗುವುದು ಹಳ್ಳಿಗಳು. ಪ್ರಧಾನಿ ಪ್ರಸ್ತಾಪಿಸಿದ ಆತ್ಮ ನಿರ್ಭರತೆ ಕೂಡ ಅದರ ಸುತ್ತಲೇ ಕೇಂದ್ರೀಕರಿಸಿದೆ. ಅದಕ್ಕೆ ಡಾ. ಎಪಿಜೆ ಅಬ್ದುಲ್ ಕಲಾಂ ಸೂತ್ರ ಹೆಚ್ಚು ಪರಿಣಾಮಕಾರಿ. ಹಳ್ಳಿಗಳು ಪ್ರಗತಿಯಾಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ನಗರಗಳಲ್ಲಿ ಸಿಗಬಹುದಾದ ಆಧುನಿಕ ಸೌಲಭ್ಯಗಳು ದೊರಕಬೇಕು ಎಂಬುದು ಕಲಾಂ ಅವರ ಕನಸಿನ ‘ಪುರ’ ಯೋಜನೆ ಸೂಕ್ತ. (Providing Urban Amenities to Rural Areas-PURA ) ಕಲಾಂ ಅವರು ತಮ್ಮ ಜನಪ್ರಿಯ ಪುಸ್ತಕವಾದ ‘ಟಾರ್ಗೆಟ್ 3 ಬಿಲಿಯನ್’ ಎಂಬ ಪುಸ್ತಕದಲ್ಲಿ ಈ ಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಆತ್ಮನಿರ್ಭರತೆ ಸಾಧನೆಗೆ ಸರಕಾರಗಳು ಕಲಾಂ ಕಲ್ಪನೆ ಸಾಕಾರಕ್ಕೆ ತುರ್ತಾಗಿ ಮುಂದಾಗುವುದು ಅವಶ್ಯಕ.

ಸಾಧ್ಯತೆಗಳ ಬೆಳಕಿನ ಕಿಂಡಿ
ಮನಸ್ಸು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ ಎಂಬುದಕ್ಕೆ ಕೊರೊನಾ ಲಾಕ್‌ಡೌನ್‌ ಅನುಭವವೇ ಸಾಕ್ಷಿ. ಹಳ್ಳಿಗಳ ಕಡೆ ಮುಖ ಮಾಡಿ ಎಂದು ಸ್ವಾತಂತ್ರ್ಯ ಬಂದಾಗಲೇ ಗಾಂಧೀಜಿ ಹೇಳಿದ್ದರು. ಆದರೆ ಇಷ್ಟು ದಿನ ಕೇವಲ ನಗರ ಮತ್ತು ದೊಡ್ಡ ನಗರಗಳ ಕಡೆ ಮಾತ್ರ ಮುಖ ಮಾಡಿದ್ದ ಜನರು ಈಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಮದ್ಯ, ಮಾಂಸ ಬೇಡ ಎಂದು ಗಾಂಧೀಜಿ ಹೇಳಿದ್ದನ್ನು 70 ವರ್ಷ ಕೇಳಿಸಿಕೊಂಡಿರಲಿಲ್ಲ. ಕೊರೊನಾ ಕಿವಿ ಹಿಂಡಿ ಹೇಳಿ ಆ ಕೆಲಸ ಮಾಡಿದೆ. ಅಷ್ಟೇ ಸಾಲದ್ದಕ್ಕೆ ಸ್ವಾವಲಂಬನೆ, ಸ್ವದೇಶಿ, ಸಹಕಾರ ತತ್ವದ ಜಪ ಮಾಡುತ್ತಿದ್ದೇವೆ. ಇವನ್ನೆಲ್ಲ ವಾಸ್ತವದಲ್ಲಿ ಶಾಶ್ವತವಾಗಿ ಆಚರಣೆಗೆ ತರುತ್ತೇವಾ ಎಂಬುದು ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ.
ಕಡೆಯದಾಗಿ ಒಂದು ಮಾತು. think globally and act locally ಎಂಬುದು ಇಂಗ್ಲಿಷ್‌ನ ಪ್ರಸಿದ್ಧವಾದ ವಿವೇಕದ ನುಡಿ. ನಾವು ಉದಾರವಾಗಿ ಜಗತ್ತಿನ ಕ್ಷೇಮ ಸಮಾಚಾರಗಳ ಕುರಿತು, ಅದರ ಒಳಿತಿನ ಕುರಿತು ಚರ್ಚಿಸೋಣ. ಚಿಂತನ ಮಂಥನವನ್ನೇ ನಡೆಸೋಣ. ಆದರೆ, ನಮ್ಮ ಕ್ರಿಯೆ, ಸಹಕಾರ, ವಿಶ್ವಾಸ ಎಲ್ಲವೂ ನಮ್ಮೂರು, ನಮ್ಮ ರಾಜ್ಯ, ನಮ್ಮ ದೇಶ ಎಂಬಿತ್ಯಾದಿ ನೆಲೆಯಲ್ಲಿಯೇ ಇರಲಿ.
ಜಗದಗಲ ಅರಿವು ಬೆಳೆಸಿಕೊಂಡು, ಸ್ಥಳೀಯವಾಗಿ ಕಾಯಕ ಮಾಡುತ್ತಲೇ ಸ್ವಾವಲಂಬಿ ಭಾರತ ಕಟ್ಟೋಣ!

ಓದುಗರ ಒಡಲಾಳ
ಕೇಂದ್ರ ಸರಕಾರ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ. ಆ ಬಗ್ಗೆ ಹೊಗಳುವವರು ಇರುವ ಹಾಗೆ ಕಟು ಟೀಕೆ ಮಾಡುವವರೂ ಇದ್ದಾರೆ. ವಾಸ್ತವವನ್ನು ಸಮಚಿತ್ತದಿಂದ ವಿವರಿಸ್ತೀರಾ?
-ಗುರುನಾಥ ಹುಣಶ್ಯಾಳ ಎಂಕೆ ಹುಬ್ಬಳ್ಳಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top