ಧ್ವನಿವರ್ಧಕ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

– ಡಾ. ಮಲ್ಲಿಕಾರ್ಜುನ ಗುಮ್ಮಗೋಳ.
ಅನ್ಯರಿಗೆ ಇರಸುಮುರಸು ಆಗುವ ಧ್ವನಿವರ್ಧಕ ಬಳಕೆಯನ್ನು ಮಸೀದಿಗಳು ನಿಲ್ಲಿಸಬೇಕು ಎಂದು ಲೇಖಕ, ಚಿತ್ರ ಸಾಹಿತಿ ಜಾವೇದ್ ಅಕ್ತರ್ ಟ್ವೀಟ್ ಮಾಡಿದ್ದಾರೆ. ‘‘ಯಾವ ಧರ್ಮವೂ ಧ್ವನಿವರ್ಧಕದ ಮೂಲಕ ಪ್ರಾರ್ಥನೆ ಮಾಡಬೇಕೆಂದು ಪ್ರತಿಪಾದಿಸುವುದಿಲ್ಲ. ಆದ್ದರಿಂದ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಬೇಕು,’’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೆ ಬಂದಿರುವ ಈ ಟ್ವೀಟ್‌ಗೆ ಹೆಚ್ಚಿನ ಮಹತ್ವವಿದೆ. ಅದೇ ಸಮುದಾಯದ ಮತಧರ್ಮದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿ, ಈ ಆಚರಣೆಗಳಲ್ಲಿ ಅರ್ಥವಿಲ್ಲ ಎಂದು ಹೇಳುವುದರಲ್ಲಿ ಅರ್ಥವಿದೆ. ಧಾರ್ಮಿಕ ಉದಾರವಾದ ಬಗ್ಗೆ ಹೇಳುವ ಇಂಥವರ ಮಾತುಗಳನ್ನು ಹಾಗೂ ನ್ಯಾಯಾಲಯದ ಆದೇಶವನ್ನು ಕೇಳಬೇಕಾದವರು ಕೇಳುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆ. ಆಧುನಿಕ ಶಿಕ್ಷಣದ ಬದಲಾಗಿ ಕೇವಲ ಮತೀಯ ಶಿಕ್ಷಣವನ್ನು ಕೊಡುತ್ತ ಹೋದರೆ ವ್ಯಕ್ತಿ ಮತ ಭ್ರಾಂತನಾಗುತ್ತಾನೆ. ಧಾರ್ಮಿಕ ಮುಖಂಡರು ಅದನ್ನೇ ಮಾಡುತ್ತ ಜನರನ್ನು ಮೂಢರನ್ನಾಗಿ ಮಾಡುತ್ತಾರೆ. ಆದರೆ ಉದಾರವಾದಿಗಳು ಜಾತಿಮತಗಳಾಚೆ ನಿಂತು ಆಲೋಚಿಸಿದರೆ ಅವರನ್ನು ಬಾಗಿಸಿ, ಹೆದರಿಸಿ ಮತೀಯ ತೆಕ್ಕೆಗೆ ತೆಗೆದುಕೊಳ್ಳಲಾಗುತ್ತದೆ.
ಸಾರ್ವಜನಿಕ ಬದುಕಿಗೆ ಮಾರಕವಾಗುವ ಆಚರಣೆಗಳನ್ನು ನಿರ್ಬಂಧಿಸುವ ಕಾನೂನುಗಳು, ನ್ಯಾಯಾಲಯದ ಆದೇಶಗಳು ಸಾಕಷ್ಟು ಇವೆ. ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಇಚ್ಛಾಶಕ್ತಿ ನಮ್ಮ ವ್ಯವಸ್ಥೆಗೆ ಬೇಕು. ಪ್ರತಿದಿನ, ತಾಸುತಾಸಿಗೆ ಧ್ವನಿವರ್ಧಕ ಬಳಸುವುದು, ಅದರಲ್ಲೂ ಬೆಳಗು ಆಗುವುದಕ್ಕೆ ಮುಂಚೆ, ಜನ ಸಕ್ಕರೆಯ ಸಿಹಿನಿದ್ರೆಯ ಜೊಂಪಿನಲ್ಲಿರುವಾಗ ಕಿವಿಗಳು ಮರಗಟ್ಟುವ ಹಾಗೆ ಧ್ವನಿವರ್ಧಕವನ್ನು ಬಳಸಿದರೆ ಎಷ್ಟೊಂದು ನ್ಯೂಸೆನ್ಸ್ ಅಲ್ಲವೇ?
ಸುಪ್ರೀಂ ಕೋರ್ಟ್ 2000ರಲ್ಲಿ ಚರ್ಚ್ ಆಫ್ ಗಾಡ್ ವಿರುದ್ಧ ಕೆಕೆಆರ್ ಮೆಜೆಸ್ಟಿಕ್ ಕಾಲೋನಿ ವೆಲೆಫೇರ್ ಅಸೋಷಿಯೇಷನ್ ಪ್ರಕರಣದಲ್ಲಿ ‘‘ಧಾರ್ಮಿಕ ಸ್ವಾತಂತ್ರ್ಯ ಸಾರ್ವಜನಿಕ ಶಾಂತಿ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಧಕ್ಕೆ ತರುವಂತಿರಬಾರದು. ನಮಾಜ್‌ಗೆ ಧ್ವನಿವರ್ಧಕ ಬಳಕೆ ಮಾಡುವುದು ಧಾರ್ಮಿಕ ಅಗತ್ಯವಲ್ಲ,’’ ಎಂದು ಹೇಳಿದೆ.
ಅಮೆರಿಕ, ನೆದರ್ಲೆಂಡ್, ಜರ್ಮನಿ, ಸ್ವಿಜರ್ಲೆಂಡ್, ಫ್ರಾನ್ಸ್, ಇಂಗ್ಲೆಂಡ್, ಆಸ್ಟ್ರೀಯಾ, ನಾರ್ವೆ, ಬೆಲ್ಜಿಯಂ, ನೈಜಿರಿಯಾ, ಲಾಗೋಸ್, ಇಸ್ರೇಲ್, ಚೀನಾ ಮುಂತಾದ ದೇಶಗಳಲ್ಲಿ ನಮಾಜ್‌ಗೆ ಧ್ವನಿವರ್ಧಕ ಬಳಕೆಯನ್ನು ನಿರ್ಬಂಧಿಸಲಾಗಿದೆ. ಭಾರತದಲ್ಲಿ ಇದು ಹಲವಾರು ಬಾರಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟುಮಾಡಿದೆ. ಬಿಹಾರದ ಬೋಧ ಗಯಾ ಮಂದಿರಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ ಮಸೀದಿಯಲ್ಲಿ ಧ್ವನಿವರ್ಧಕ ಬಳಸಿ ಬೌದ್ಧರ ಪ್ರಾರ್ಥನೆಗೆ ತೊಂದರೆ ಉಂಟು ಮಾಡಿದ್ದು(2016) ಹಾಗೂ 1999ರಲ್ಲಿ ಮಹಾರಾಷ್ಟ್ರದ ನಂದೂರಬಾರನಲ್ಲಿ ಅನ್ಯ ಕೋಮಿನವರ ಭಾವನೆಗೆ ಧಕ್ಕೆ ತರುವಂತೆ ಧ್ವನಿವರ್ಧಕ ಮೂಲಕ ಪ್ರಚೋದನೆ ನಿಡಿದ್ದು ಗಲಭೆಗೆ ಕಾರಣವಾಗಿತ್ತು.
ಸಾರ್ವಜನಿಕರಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುವುದನ್ನು ನಿಯಂತ್ರಿಸುವ ಅಧಿಕಾರ ರಾಜ್ಯದ ಪೊಲೀಸ್ ಇಲಾಖೆ ಇದೆ. ಕರ್ನಾಟಕ ಪೊಲೀಸ್ ಅಧಿನಿಯಮ 1963ರ ನಿಯಮ 31ಎನ್, 36, 37 ಈ ಕುರಿತು ಹೇಳುತ್ತವೆ. ಸಾರ್ವಜನಿಕ ರಸ್ತೆ, ಪ್ರದೇಶದಲ್ಲಿ ವಾದ್ಯ, ಸಂಗೀತ, ಹಾರ್ನ್, ಧ್ವನಿ ಮುಂತಾದವುಗಳನ್ನು ನಿಯಂತ್ರಿಸುವ, ಪರವಾನಗಿ ನೀಡುವ ಅಧಿಕಾರ ಕುರಿತು ನಿಯಮ 31ಎನ್ ಹೇಳುತ್ತದೆ. ಸಂಗೀತ, ಸೌಂಡ್ ಮುಂತಾದವುಗಳನ್ನು ಕಟ್ಟಡದ ಮೇಲೆ ಅಥವಾ ಆವರಣದಲ್ಲಿ ಹಚ್ಚಿ ಸದ್ದುಗದ್ದಲ ಮಾಡುವಂತಿಲ್ಲ. ರಹವಾಸಿಗಳಿಗೆ ಶಬ್ದಮಾಲಿನ್ಯದಿಂದ ಹಾನಿ, ಹಿಂಸೆ ಹಾಗೂ ತೊಂದರೆ ಉಂಟುಮಾಡುವುದನ್ನು ಪೊಲೀಸ್ ಆಯುಕ್ತರು, ಪ್ರಥಮ ದರ್ಜೆ ದಂಡಾಧಿಕಾರಿಗಳು ಸೂಕ್ತ ಆದೇಶದ ಮೂಲಕ ನಿಯಂತ್ರಿಸತಕ್ಕದ್ದು ಎಂದು ನಿಯಮ 36 ಹೇಳುತ್ತದೆ.
ನಿಯಮ 37 ಧ್ವನಿವರ್ಧಕ ಬಳಸುವುದಕ್ಕೆ ಪರವಾನಗಿ ಪಡೆಯುವುದರ ಕುರಿತು ಹೇಳುತ್ತದೆ. ಧ್ವನಿವರ್ಧಕ ಶಬ್ದ ಆ ಕಟ್ಟಡ, ಆವರಣದಿಂದ 50 ಅಡಿಗಳಿಗಿಂತ ದೂರ ಕೇಳಿಸುವಂತಿರಬಾರದು. ಒಂದುವೇಳೆ ಆ ಪ್ರದೇಶ ಖುಲ್ಲಾಜಾಗೆ (ನಿರ್ಜನ ಪ್ರದೇಶ)ಯಾಗಿದ್ದರೆ ಧ್ವನಿವರ್ಧಕದ ಶಬ್ದ 200 ಅಡಿಗಳಿಗಿಂತ ದೂರಕ್ಕೆ ಕೇಳಿಸುವಂತಿರಬಾರದು. ವಿಶೇಷ ಸಂದರ್ಭಗಳಲ್ಲಿ ಈ ನಿಗದಿತ ಶಬ್ದ ಮಾನದಂಡವನ್ನು ಮೀರಿ ಧ್ವನಿವರ್ಧಕ ಬಳಸುವಂತಿದ್ದರೆ ಷರತ್ತುಗಳಿಗೆ ಒಳಪಟ್ಟು ಮುಂಚಿತ ಪರವಾನಗಿಯನ್ನು ಪಡೆಯತಕ್ಕದ್ದು ಎಂದು ಹೇಳುತ್ತದೆ. ನಿಯಮಗಳನ್ನು ಉಲ್ಲಂಘಿಸಿದರೆ ನಿಯಮ 109ರ ಅನುಸಾರ 3 ತಿಂಗಳ ಜೈಲು ಶಿಕ್ಷೆ ಅಥವಾ 500 ರೂ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಶಿಕ್ಷೆಯ ಪ್ರಮಾಣ ಕಡಿಮೆ ಎಂದು ಕಂಡುಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲೂಬಹುದು.
ಸಂವಿಧಾನ, ಕಾನೂನು, ಕಟ್ಟಳೆಗಳಿಗಿಂತ ಸಂಪ್ರದಾಯ, ಪದ್ಧತಿ, ಆಚರಣೆಗಳೇ ಹೆಚ್ಚು ಪ್ರಬಲವಾಗಿವೆ ಎಂದು ಅನ್ನಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ವ್ಯವಸ್ಥೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಮನಸನ್ನು ತೋರಿಸುವುದಿಲ್ಲ. ಹಾಗೆ ಮಾಡಿದರೆ ಪ್ರತಿಭಟನೆ, ಹಿಂಸೆ ಎದುರಿಸಬೇಕಾಗುತ್ತದೆ. ಇದರಿಂದ ಸಾಮಾಜಿಕ ಶಾಂತಿ ಸುವ್ಯವಸ್ಥೆ ಕೆಡುತ್ತದೆ. ಅದನ್ನು ನಿಗ್ರಹಿಸಲು ಬಲಪ್ರಯೋಗ ಮಾಡಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದು, ಚುನಾವಣೆಯಲ್ಲಿ ವಿರುದ್ಧ ಜನಾಭಿಪ್ರಾಯ ಉಂಟಾಗಿ ಸೋಲಬೇಕಾಗುತ್ತದೆ ಎಂಬ ಭಯ ಅಧಿಕಾರಸ್ಥರದು. ಈ ಭಯವೇ ಕೆಲವು ವಿವೇಕರಹಿತರಿಗೆ ವರದಾನವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top