ಕಳವಾಗಿದ್ದ ಬೈಕ್ ಮನೆಗೆ ಪಾರ್ಸೆಲ್ ಬಂದಾಗ!

– 15 ದಿನದ ಬಳಿಕ ಮಾಲೀಕನಿಗೆ ಹಿಂದಿರುಗಿಸಿದ ಕಳ್ಳ
– ಕೊಯಮತ್ತೂರಿನಲ್ಲೊಂದು ಅಪರೂಪದ ಘಟನೆ

ಕೊಯಮತ್ತೂರು: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೊಸದು ಸಂಪಾದಿಸುವುದಿರಲಿ, ಇರುವುದನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ಬಹುತೇಕ ಜನರದ್ದು. ಅಂಥದ್ದರಲ್ಲಿ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಮಾಯವಾದರೆ ಮಾಲೀಕನ ಸ್ಥಿತಿ ಹೇಗಿರಬಹುದು? ಆದರೆ 15 ದಿನದಲ್ಲೇ ಆ ಬೈಕ್ ಮನೆಗೆ ಪಾರ್ಸಲ್ ಬಂದರೆ ಆತನಿಗೆ ಹೇಗಾಗಬಹುದು? ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂಥದ್ದೇ ಅಪರೂಪದ ಘಟನೆ ನಡೆದಿದೆ.
ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಲು ವಾಹನವಿಲ್ಲದೆ ಬೈಕ್ ಕದ್ದಿದ್ದ ವ್ಯಕ್ತಿಯೊಬ್ಬರು ಅದನ್ನು ಮತ್ತೆ ಮಾಲೀಕನಿಗೆ ಪಾರ್ಸೆಲ್ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಸಂಕಷ್ಟದ ಕಾಲದಲ್ಲೇ ಬೈಕ್ ಕಳೆದು ಹೋಯಿತೆಂದು ವ್ಯಥೆ ಪಡುತ್ತಿದ್ದ ಮಾಲೀಕ ಅದು ಎರಡು ವಾರದಲ್ಲಿ ತನ್ನನ್ನೇ ಹುಡುಕಿಕೊಂಡು ಬಂದಿದ್ದನ್ನು ಕಂಡು ಖುಷಿಯಾಗಿದ್ದಾರೆ.
ಪ್ರಶಾಂತ್ (30) ಎಂಬ ಯುವಕ ಇಲ್ಲಿನ ಮನ್ನಾರ್ಗುಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ವೇಳೆ, ಮೇ 18ರಂದು ಆತ 200 ಕಿ.ಮೀ. ದೂರದ ಊರಿಗೆ ಹೋಗಬೇಕಿತ್ತು. ಆದರೆ ಸಾರಿಗೆ ಸಂಪರ್ಕ ಇಲ್ಲದ ಕಾರಣ ಆತ ಬೇಕರಿ ಬಳಿ ನಿಲ್ಲಿಸಿದ್ದ ‘ಹೀರೊ ಸ್ಪ್ಲೆಂಡರ್’ ಬೈಕ್ ಅನ್ನು ಕದ್ದು, ಅದರಲ್ಲಿ ತವರೂರಿಗೆ ಮರಳಿದ್ದ. ಬೈಕ್‌ನಲ್ಲಿರುವ  ದಾಖಲೆಗಳನ್ನು ಪರಿಶೀಲಿಸಿದಾಗ ಅದು, ಕೊಯಮತ್ತೂರು ನಿವಾಸಿ, ಸುರೇಶ್ (34) ಅವರಿಗೆ ಸೇರಿದ್ದೆಂದು ತಿಳಿದು ಬಂದಿತ್ತು.
ಅಷ್ಟರಲ್ಲಿ ಇತ್ತ ಬೈಕ್ ಮಾಲೀಕ ಸುರೇಶ್ ವಾಹನ ಕಳವಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಕೊವಿಡ್-19 ಬಿಕ್ಕಟ್ಟು ಮುಗಿದ ಬಳಿಕ ತನಿಖೆ ನಡೆಸುವುದಾಗಿ ಅವರು ಹೇಳಿದ್ದರು. ಇದರಿಂದ ನಿರಾಸೆಗೊಂಡ ಸುರೇಶ್ ತಾವೇ ಬೈಕ್ ತಲಾಶ್‌ಗೆ ಮುಂದಾಗಿದ್ದರು. ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಜಾಲಾಡಿದಾಗ ಯುವಕನೊಬ್ಬ ಬೈಕ್ ಕದ್ದು ಹೋಗುವುದು ತಿಳಿದುಬಂದಿತ್ತು. ಸುತ್ತಮುತ್ತಲ ಅಂಗಡಿಯಲ್ಲಿ ವಿಚಾರಿಸಿದಾಗ ಅದು ಪ್ರಶಾಂತ್ ಎಂದು ತಿಳಿದು ಬಂದಿತ್ತು. ಪ್ರಶಾಂತ್ ತಂಗಿದ್ದ ಕೊಯಮತ್ತೂರು ಹೊರವಲಯದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಆತ ತವರಿಗೆ ಮರಳಿದ್ದಾರೆಂದು ತಿಳಿದುಬಂದಿತು. ಅಷ್ಟರಲ್ಲಿ ಪ್ರಶಾಂತ್‌ಗೂ ಬೈಕ್ ಮಾಲೀಕರಿಗೆ ತನ್ನ ಬಗ್ಗೆ ಗೊತ್ತಾಗಿರುವ ವಿಷಯವು ಪರಿಚಿತರಿಂದ ಗೊತ್ತಾಗಿತ್ತು.
ಈ ಮಧ್ಯೆ ಕಳೆದ ಭಾನುವಾರ ಮಧ್ಯಾಹ್ನ ಬೈಕ್ ಮಾಲೀಕ ಸುರೇಶ್ ಅವರಿಗೆ ಕೊರಿಯರ್ ಕಚೇರಿಯಿಂದ ಫೋನ್ ಬಂದಿತ್ತು. 1,400 ಕೊಟ್ಟು ಬೈಕ್ ಬಿಡಿಸಿಕೊಂಡು ಹೋಗುವಂತೆ ತಿಳಿಸಲಾಯಿತು. ಪಾರ್ಸಲ್ ದುಡ್ಡು ತಾವೇ ಕೊಟ್ಟರೂ ಅಂತೂ ಬೈಕ್ ವಾಪಸ್ ಬಂದಿದ್ದಕ್ಕೆ ಸುರೇಶ್ ಫುಲ್ ಖುಷ್ ಆಗಿದ್ದಾರೆ. ಕಳ್ಳನಿಗೆ ಥ್ಯಾಂಕ್ಸ್ ಹೇಳಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top