ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ನಂತರ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ಆಗುತ್ತಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಲಾಕ್‌ಡೌನ್ ಅನ್ನು ಪೊಲೀಸರು ನಿರ್ವಹಿಸಿದ ರೀತಿ ಸರಿಯಾಗಲಿಲ್ಲ ಎಂಬ ಆಕ್ಷೇಪ ಕೇಳಿಬಂತು. ಕೆಲವೆಡೆ ಬೀದಿಗಿಳಿದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ ಸುದ್ದಿ, ದೃಶ್ಯಗಳು ಇದಕ್ಕೆ ಪೂರಕವಾಗಿ ಕಂಡುಬಂದವು. ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಲಾಠಿ ಎತ್ತದೆ ಕಾರ್ಯ ನಿರ್ವಹಿಸುವಂತೆಯೂ ಪೊಲೀಸ್ ಮುಖ್ಯಸ್ಥರು ನಿರ್ದೇಶನ ನೀಡಿದ್ದಾರೆ. ಇನ್ನೊಂದು ಬೆಳವಣಿಗೆಯೆಂದರೆ, ಕೋವಿಡ್-19 ಸಂಬಂಧಿತ ನಾನಾ ಬಗೆಯ ವದಂತಿಗಳಿಗೆ ತುತ್ತಾಗಿ ಕೆಲವು ಕಡೆ ಜನತೆ ವಿವೇಚನೆಯಿಲ್ಲದೆ ವರ್ತಿಸಿದ್ದಾರೆ. ರಾತ್ರಿಯಿಡೀ ಜಾಗರಣೆ ಮಾಡಿರುವುದು, ನಿರ್ದಿಷ್ಟ ಕ್ಷೇತ್ರದಲ್ಲಿ ಸ್ನಾನಕ್ಕಾಗಿ ನೂಕುನುಗ್ಗಲು ಮಾಡಿದ್ದು- ಇತ್ಯಾದಿ. ಇನ್ನು ಯಾವುದೇ ಇಲಾಖೆಯಾಗಲೀ ವೈದ್ಯರಾಗಲೀ ಸೂಚಿಸಿರದ ಔಷಧಗಳನ್ನು ಕೊರೊನಾಗೆ ಮದ್ದು ಎಂಬಂತೆ ವಾಟ್ಸ್ಯಾಪ್‌ನಲ್ಲಿ ಹರಡುವುದು ಇನ್ನೊಂದು ಜಾಲ.
ಕೋವಿಡ್ ವಿರುದ್ಧದ ನಮ್ಮ ಸಮರದಲ್ಲಿ ನಾವು ಮನಗಾಣಬೇಕಿರುವುದು ಏನೆಂದರೆ, ಇದು ಒಬ್ಬಿಬ್ಬರಿಂದ ಸಾಧ್ಯವಾಗುವ ಯುದ್ಧವಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಇದನ್ನು ಮಣಿಸಲು ಸಾಧ್ಯ. ಲಾಕ್‌ಡೌನ್‌ನ ಉದ್ದೇಶವೇ ಇದು. ಯಾರೂ ಅನಗತ್ಯವಾಗಿ ತಿರುಗಾಡದೆ, ಮನೆಯಲ್ಲಿದ್ದು, ಲಾಕ್‌ಡೌನ್ ಪಾಲಿಸಿದರೆ ಈ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಟಲಿ, ಸ್ಪೇನ್‌ಗಳ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ. ಆದರೂ ನಾವು ಪಾಠ ಕಲಿಯುತ್ತಿಲ್ಲ. ಖಾಲಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರು, ಗುಂಪುಗೂಡಿ ಹರಟೆ ಹೊಡೆಯುವ ಪಡ್ಡೆಗಳು, ಅನಗತ್ಯವಾಗಿ ದಿನಕ್ಕೆ ನಾಲ್ಕಾರು ಬಾರಿ ಅಂಗಡಿಗೆ ಎಡತಾಕುವವರು, ಅಗತ್ಯ ವಸ್ತುಗಳು ಲಭ್ಯವಿದ್ದರೂ ಗಾಬರಿ ಬಿದ್ದು ಅವುಗಳನ್ನು ಖರೀದಿಸಲು ನೂಕು ನುಗ್ಗಲು ನಡೆಸುವವರು- ಇವೆಲ್ಲ ವಿವೇಚನೆರಹಿತವಾಗಿ ವರ್ತಿಸುವುದಕ್ಕೆ ಉದಾಹರಣೆ. ಇದರಿಂದ ಆಗುವ ಅನಾಹುತಗಳ ಬಗ್ಗೆ ಎಷ್ಟೇ ಮಾಹಿತಿ ನೀಡಿದರೂ, ಉಡಾಫೆಯಿಂದ ಬೀದಿಗಿಳಿಯುವವರನ್ನು, ಕಾನೂನನ್ನು ಗೌರವಿಸದವರನ್ನು ಮಣಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರೆ ಅದರಲ್ಲಿ ತಪ್ಪೇನೂ ಕಾಣಿಸುವುದಿಲ್ಲ. ಪೊಲೀಸರೂ ಊಟ ತಿಂಡಿ ಬಿಟ್ಟು, ಬಿಸಿಲಿನಲ್ಲಿ ನಿಂತು ತಮ್ಮ ಜೀವಕ್ಕೂ ರಿಸ್ಕ್ ಇರುವುದನ್ನು ಅರಿತುಕೊಂಡೇ ಕರ್ತವ್ಯ ನಿರ್ವಹಿಸುತ್ತಿರುವವರು. ನಮ್ಮ ದೇಶದಲ್ಲಿ ದುರದೃಷ್ಟವಶಾತ್, ಸ್ವಇಚ್ಛೆಯಿಂದ ಕಾನೂನು ಪಾಲಿಸುವವರು ಕಡಿಮೆ. ಹೀಗಾಗಿ ಪೊಲೀಸರೂ ಬಿಗಿಯಾಗಿ ವರ್ತಿಸಿರಬಹುದು. ಅರ್ಥ ಮಾಡಿಕೊಂಡು ಲಾಕ್‌ಡೌನ್‌ನ ನಿಯಮಗಳನ್ನು ಪಾಲಿಸುವುದರಲ್ಲಿ ಎಲ್ಲರ ಹಿತವಿದೆ. ಪೊಲೀಸರೂ ವಿವೇಚನೆ ಉಪಯೋಗಿಸಿ ಅವಶ್ಯ ಸೇವೆಗಳಲ್ಲಿರುವವರಿಗೆ ತೊಂದರೆ ಕೊಡದಂತೆ ಕಾರ್ಯ ನಿರ್ವಹಿಸಬೇಕು.
ಇನ್ನು ವದಂತಿಗಳಿಗೆ ಸಂಬಂಧಿಸಿದಂತೆ, ವಿವೇಚನೆಯೇ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕೊರೊನಾ ವೈರಸ್‌ಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಪಡೆಯಬೇಕಿದ್ದರೂ ಆರೋಗ್ಯ ಇಲಾಖೆಯ ಬುಲೆಟಿನ್ ಅಧಿಕೃತ. ವಿಶ್ವಾಸಾರ್ಹ ಮಾಧ್ಯಮಗಳು ಸುದ್ದಿ ವಿಶ್ಲೇಷಣೆಗಳನ್ನು ಜನತೆಗೆ ಹೊಣೆಯರಿತು ತಲುಪಿಸುತ್ತಿವೆ. ಕೋವಿಡ್‌ಗೆ ಖಚಿತ ಔಷಧವಿಲ್ಲ. ಸಂಶೋಧನೆಗಳು ನಡೆಯುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದರೆ ಮಾತ್ರ ಅಧಿಕೃತ ಔಷಧವೆನಿಸುತ್ತದೆ. ಸ್ಥಳೀಯ ವೈದ್ಯ ಪದ್ಧತಿಗಳು ರೋಗ ಪ್ರತಿರೋಧಕ ಶಕ್ತಿ ಬೆಳೆಸಲು ಅವುಗಳದೇ ಆದ ವಿಧಾನಗಳನ್ನು ಅನುಸರಿಸುತ್ತವೆ. ಇವುಗಳಿಗೂ ಪರಿಣತ ವೈದ್ಯರ, ಆಯುಷ್ ಇಲಾಖೆಯ ಸಮ್ಮತಿ ಅಗತ್ಯ. ಇದನ್ನು ಹೊರತುಪಡಿಸಿದರೆ, ಕಾಯಿಲೆಯನ್ನು ತಡೆಯಲು ಸಾಧ್ಯ ಎಂದು ಘೋಷಿಸುವ ಯಾವುದೇ ಪವಾಡಸದೃಶ ಕ್ರಿಯೆಗಳಾಗಲೀ, ಔಷಧಗಳಾಗಲೀ ನಕಲಿ ಎಂದು ತಿಳಿಯಬೇಕು. ಅಂಥ ನಕಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು ಅಪರಾಧ. ಸತ್ಯ ಗೆಲ್ಲಬೇಕಾದರೆ ಸುಳ್ಳನ್ನು ತಡೆಯುವುದು ಮೊದಲ ಅಗತ್ಯ. ಕೋವಿಡ್ ವಿರುದ್ಧದ ಯುದ್ಧದಲ್ಲಿ ಈ ಕೆಲವು ಸಣ್ಣಪುಟ್ಟ, ಆದರೆ ಮಹತ್ವದ ಸಂಗತಿಗಳನ್ನು ಪಾಲಿಸಿ ನಮ್ಮನ್ನು ನಾವೇ ಕಾಪಾಡಿಕೊಳ್ಳೋಣ.