ಇರೋಣ ಮನೆಯಲ್ಲಿ ಬೆಚ್ಚಗೆ, ತೋರೋಣ ಸೇನಾನಿಗಳಿಗೆ ಮೆಚ್ಚುಗೆ

ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ. 

ಕೊರೊನಾ ಲಾಕ್‌ಡೌನ್‌ ಏಪ್ರಿಲ್‌ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್‌ಡೌನ್‌ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್‌ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್‌ಡೌನ್‌-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ 3ಕ್ಕೆ ಲಾಕ್‌ಡೌನ್‌ ಸಂಪೂರ್ಣವಾಗಿ ಕೊನೆಗೊಳ್ಳುವುದೇ ಎಂಬ ಎರಡು ಪ್ರಶ್ನೆಗಳು ಎದ್ದಿವೆ. ಇವುಗಳಿಗೆ ಈ ಹಂತದಲ್ಲಿ ಉತ್ತರ ಹೇಳುವುದು ಕಷ್ಟ. ಏಕೆಂದರೆ ‘ಸರ್ವವ್ಯಾಪಿಯಾಗಿ ಹರಡುವ ಅಸುರ’ ದುರ್ಗುಣದ ಕೊರೊನಾ ವೈರಸ್‌ನ ಪ್ರವೃತ್ತಿ ಕರ್ನಾಟಕದಲ್ಲಿಮತ್ತು ದೇಶದ ಇತರ ಭಾಗಗಳಲ್ಲಿದಿನದಿಂದ ದಿನಕ್ಕೆ ಗಂಭೀರ ಸ್ವರೂಪಕ್ಕೆ ತಿರುಗುತ್ತಿದೆ. ಹೀಗೆ ಸುರಕ್ಷಿತವಾಗಿಯೇ ಇರಬಹುದಾಗಿದ್ದ ಭಾರತ ಕೋವಿಡ್‌ ಅಪಾಯದ ಸುಳಿಯಲ್ಲಿಸಿಲುಕಿರುವುದಕ್ಕೆ ಕೆಲ ನಿರ್ದಿಷ್ಟ ಕಾರಣಗಳಿವೆ. ಅದನ್ನು ಪ್ರತ್ಯೇಕವಾಗಿ ಚರ್ಚೆ ಮಾಡಿದರಾಯಿತು.
ಲಾಕ್‌ಡೌನ್‌ ಕತೆ ಏನಾದರೂ ಆಗಲಿ, ನಾವೀಗ ಆಲೋಚನೆ ಮಾಡಬೇಕಾಗಿರುವುದು ಆ ಸಂಗತಿಯನ್ನಲ್ಲ. ಬದಲು, ಸದ್ಯಕ್ಕೆ ನಾವು ನಿರೀಕ್ಷೆ ಮಾಡುತ್ತಿರುವಂತೆ ಏ. 20ಕ್ಕೆ ಲಾಕ್‌ಡೌನ್‌ ತುಸು ಸಡಿಲಗೊಂಡು, ಮುಂದೆ ಮೇ 3ಕ್ಕೆ ಪೂರ್ಣ ಈ ಬಂಧನ ಸಂಪೂರ್ಣ ತೆರವುಗೊಂಡರೆ ಏನು ಮಾಡಬೇಕು? ಒಂದು ವೇಳೆ, ಮೇ ನಂತರವೂ ಲಾಕ್‌ ಡೌನ್‌ ಮುಂದುವರಿದರೆ ಆಗ ನಮ್ಮ ಆಲೋಚನೆ, ಕ್ರಿಯೆ, ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನಷ್ಟೇ ಪ್ರಧಾನವಾಗಿ ಯೋಚನೆ ಮಾಡೋಣ.
ಕಳೆದ ಏ. 14ರಂದು ಲಾಕ್‌ಡೌನ್‌ ವಿಸ್ತರಣೆ ಸಂದರ್ಭದಲ್ಲಿದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಳು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಅದು ‘ಸಪ್ತಪದಿ’ ಎಂದು ಜನಪ್ರಿಯಗೊಂಡಿತು. ಆ ಹಿನ್ನೆಲೆಯಲ್ಲೇ ಇನ್ನೂ ಒಂದಿಷ್ಟು ಉತ್ತಮ ಸಂಗತಿಗಳನ್ನು ನಾವಿಲ್ಲಿ ಅವಲೋಕನ ಮಾಡೋಣ.

ಆರೋಗ್ಯ ಸೇತು ಆ್ಯಪ್‌
ಕೊರೊನಾ ಆತಂಕದ ನಡುವೆ ಕೇಂದ್ರ ಸರಕಾರ ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್‌ ಹೊಸ ಭರವಸೆಯಾಗಿ ಪರಿಣಮಿಸಿದೆ. ಕೊರೊನಾ ಹರಡುವಿಕೆ ತಡೆಗೆ ನಿರ್ದಿಷ್ಟ ಔಷಧ ಅಭಿವೃದ್ಧಿ ಆಗದೇ ಇರುವುದರಿಂದ ಈಗ ರೋಗ ಹರಡದಂತೆ ತಡೆಯುವುದೇ ಉತ್ತಮ ಉಪಕ್ರಮವಾಗಿದೆ. ಕೊರೊನಾ ಸೋಂಕಿತರ ಪತ್ತೆ, ಚಲನವಲನವನ್ನು ಪತ್ತೆ ಹಚ್ಚಲು, ಅಂತಹ ವ್ಯಕ್ತಿಗಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತಿ ಪ್ರಜೆಗೆ ಅನುಕೂಲ ಆಗುವ ಮೊಬೈಲ್‌ ಆ್ಯಪ್‌ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ದಿ ಸೌತ್‌ ಇಕಾನಮಿಕ್‌ ಫೋಕಸ್‌ ವರದಿಯಲ್ಲಿ ಕೊರೊನಾ ತಡೆಗೆ ಭಾರತ ಸರಕಾರ ತ್ವರಿತವಾಗಿ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ ಅನ್ನು ಕೊಂಡಾಡಿದೆ. ಈ ಉಪಕ್ರಮ ವಿಶ್ವದ ಇತರೆ ದೇಶಗಳ ಎದುರು ಭಾರತದ ಗೌರವವನ್ನು ಎತ್ತರಿಸಿದೆ.

ನಾಗರಿಕ ಸೇವಾಕರ್ತರಿಗೊಂದು ಮೆಚ್ಚುಗೆ ಇರಲಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್‌ಡೌನ್‌ ಘೋಷಣೆ ಮಾಡುತ್ತಿದ್ದಂತೆ ಜನಸಾಮಾನ್ಯರು ಮನೆ ಸೇರಿದರು. ವ್ಯಾಪಾರ ವಹಿವಾಟು ನಡೆಸುವವರೂ ನಾಲ್ಕು ಗೋಡೆಗಳ ನಡುವೆ ರಕ್ಷ ಣೆ ಪಡೆದರು. ಆದರೆ, ನಾಗರಿಕ ಸೇವೆಯ ಉನ್ನತ ಆಡಳಿತದಲ್ಲಿರುವ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಸಹಾಯಕರವರೆಗೆ ಸಾವಿರಾರು ನಾಗರಿಕ ಸೇವಾಕರ್ತರು ನಮ್ಮೆಲ್ಲರ ರಕ್ಷ ಣೆಯ ಕಾರ್ಯಾಚರಣೆಗೆ ಇಳಿದರು. ಮುಖ್ಯವಾಗಿ ದೇಶದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಸ್ಥಳೀಯ ಆಡಳಿತಗಳ ಮುಖ್ಯಸ್ಥರು, ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳು ದಿನದಲ್ಲಿ20 ತಾಸು ಕೆಲಸ ಮಾಡಿದ್ದಾರೆ. ಕೆಲವು ದಿನಗಳಲ್ಲಿನಿರಂತರವಾಗಿ ದಣಿವಿಲ್ಲದಂತೆ 48ರಿಂದ

50 ತಾಸುಗಳ ಕಾಲ ಜನರ ಒಳಿತಿಗಾಗಿ ದುಡಿಯುತ್ತಿದ್ದಾರೆ.
ಸಾಮಾನ್ಯವಾಗಿ ತುರ್ತು ಸಂದರ್ಭ ಇಲ್ಲವೇ ವಿಪತ್ತು ನಿರ್ವಹಣೆ ಕೆಲಸದಲ್ಲಿ ಮಾತ್ರ ಕೆಲವು ಡಿಸಿ/ಎಸ್ಪಿಗಳಿಗೆ ಇಂತಹ ಅನುಭವ ಸಿಗುತ್ತದೆ. ಆದರೆ ಇಡೀ ದೇಶದ ಎಲ್ಲಡಿಸಿಗಳಿಗೆ ಕೊರೊನಾ ಈ ಸಂಕಷ್ಟ ಎದುರಿಸುವ ಬಗೆಯನ್ನು ಕಲಿಸಿಕೊಟ್ಟಿದೆ. ಎಲ್ಲರೂ ಒಂದೇ ತೆರನಾಗಿ ಕೆಲಸ ಮಾಡಿ ಸೈ ಎನಿಸಿಕೊಂಡರು. ಎಷ್ಟೋ ಜನ ಮಹಿಳಾ ಉನ್ನತಾಧಿಕಾರಿಗಳು ತಮ್ಮ ಚಿಕ್ಕ ಮಕ್ಕಳಿಂದಲೂ ದೂರವಿದ್ದು ಸಾಮಾಜಿಕ ಸಂಕಷ್ಟ ನಿವಾರಣೆಗೆ ಟೊಂಕ ಕಟ್ಟಿ ನಿಂತರು. ಹೈದರಾಬಾದಿನ ಡಿಸಿಯೊಬ್ಬರು ತಿಂಗಳ ಹಸುಳೆಯೊಂದಿಗೆ ಕಚೇರಿಗೆ ಬಂದು ಕೆಲಸ ಮಾಡಿದ್ದಾರೆ. ನಾಗರಿಕ ಸೇವೆ ಎಂದರೆ ಇದೇ ಅಲ್ಲವೇ? ದೇಶ ನಿರೀಕ್ಷೆ ಮಾಡುವುದು ಕೂಡ ಇದನ್ನೇ!

ಆರಕ್ಷಕರು ಜೀವರಕ್ಷಕರಾದರು
ಸಾಮಾನ್ಯವಾಗಿ ಪೊಲೀಸರು ಎಂದರೆ ಹಲವರು ಮೂಗು ಮುರಿಯುವುದುಂಟು. ಆದರೆ ಕೊರೊನಾ ಕಾಲದಲ್ಲಿ ಪೊಲೀಸರು ನಿರ್ವಹಿಸಿದ ಪಾತ್ರ ನಿಜಕ್ಕೂ ಮೆಚ್ಚುವಂಥದ್ದು. ಜನರನ್ನು ಮನೆಯೊಳಗಿಡಲು ಖಾಕಿ ತೊಟ್ಟು ಬೀದಿಗಿಳಿದವರು ವಾರಗಟ್ಟಲೆ ಹಗಲು ರಾತ್ರಿ ಎನ್ನದೆ ಅಲ್ಲೇ ನಿಂತರು. ಕೋವಿಡ್‌ ಎಂಬ ಹೊಸರೋಗವೇ ಸರ್ವವ್ಯಾಪಿಯಾಗಿ ಹರಡುವ ಪೆಂಡಮಿಕ್‌ ವ್ಯಾಧಿ. ಹಾಗಾಗಿ ರಸ್ತೆಯಲ್ಲಿ ತಿರುಗಾಡುವವರನ್ನು ತಡೆದು, ತಪಾಸಣೆ ನಡೆಸುವ ಪೊಲೀಸರ ದೇಹದೊಳಗೆ ಸುಲಭವಾಗಿ ಪ್ರವೇಶಿಸುವ ಸಾಧ್ಯತೆ ಕೊರೊನಾಗಿದೆ. ಈ ಅಪಾಯವನ್ನು ಲೆಕ್ಕಿಸದೇ, ತಮ್ಮ ಸುರಕ್ಷೆಯನ್ನು ಬದಿಗೊತ್ತಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹರಡುವುದನ್ನು ತಡೆಯುವುದೇ ತಮ್ಮ ಪರಮ ಕರ್ತವ್ಯ ಎಂಬ ಸಂಕಲ್ಪ ತೊಟ್ಟವರಂತೆ ದುಡಿಯುತ್ತಿದ್ದಾರೆ. ಈಗ ಹೇಳಿ, ಪೊಲೀಸರು ಎರಡು ಛಡಿ ಏಟು ಕೊಟ್ಟದ್ದಕ್ಕೆ ಕೊಂಕನ್ನೇಕೆ ತೆಗೆಯಬೇಕು? ‘‘ಬೈದವರೆನ್ನ ಬಂಧುಗಳು’’ ಎಂದು ಬಸವಣ್ಣ ಹೇಳುವಂತೆ, ಕೊರೊನಾ ಕಾಲದಲ್ಲಿ ಲಾಠಿ ಬೀಸಿದವರೆನ್ನ ಬಾಂಧವರು ಎಂದು ಅರಿತರೂ ತಪ್ಪಲ್ಲ.

ಸರಕಾರಿ ಆಸ್ಪತ್ರೆಗಳೇ ಆಸರೆ
ಎಲ್ಲವೂ ಚೆನ್ನಾಗಿರುವಾಗ ಸರಕಾರಿ ಆಸ್ಪತ್ರೆ ಎಂದರೆ ನಿಕೃಷ್ಟವಾಗಿ ಕಂಡವರೇ ಹೆಚ್ಚು. ಆದರೆ ಕೊರೊನಾ ಕಾಲದಲ್ಲಿಸರಕಾರಿ ಆಸ್ಪತ್ರೆಯ ಮಹತ್ವ ಎಲ್ಲರಿಗೂ ಸ್ಪಷ್ಟವಾಯಿತು. ಸ್ವಂತ ಹಸುಗೂಸುಗಳಿಂದ ತಿಂಗಳಾನುಗಟ್ಟಲೆ ದೂರವಿದ್ದು ಕೊರೊನಾ ಸೋಂಕಿತರ ಶುಶ್ರೂಷೆಯಲ್ಲಿ ನಿರತ ದಾದಿಯರು, ಜೀವವನ್ನೇ ಪಣಕ್ಕಿಟ್ಟ ಸರಕಾರಿ ವೈದ್ಯರು, ಇತರ ಆರೋಗ್ಯ ಸಿಬ್ಬಂದಿಗೆ ನಾವೊಂದು ಹ್ಯಾಟ್ಸಾಪ್‌ ಹೇಳಬೇಕಲ್ಲವೇ? ಕೊರೊನಾ ತುರ್ತು ಸ್ಥಿತಿಯಲ್ಲಿ ರೋಗಿಗಳನ್ನು ಬದುಕಿಸಲು ಹೋಗಿ ಪ್ರಾಣತೆತ್ತ ವೈದ್ಯರಿಗೆ ಯಾವ ರೀತಿಯಲ್ಲಿ ನಾವು ಧನ್ಯವಾದ ಹೇಳೋಣ ಹೇಳಿ. ನಿಮಗೆ ಗೊತ್ತಿರಲಿ, ನಮಗಾಗಿ ವೈದ್ಯಲೋಕದ ಈ ಜನ ಕೆಲಸ ಮಾಡುವಾಗ, ಆಶಾ ಕಾರ್ಯಕರ್ತೆಯರು ಹಲ್ಲೆಗೊಳಗಾದರು. ವೈದ್ಯರು ಹುತಾತ್ಮರಾದರು!

ಸಹಕರಿಸಿದ ಜನರು
ಮೊದಲು ಒಂದು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಮನೆಯಲ್ಲೇ ಇರಿ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಾಗ ಅದರ ಮಹತ್ವ ಅಷ್ಟಾಗಿ ಗೊತ್ತಾಗಲಿಲ್ಲ. ಹೀಗಾಗಿ ಯಾಕೆ ಮನೆಯೊಳಗೇ ಇರಬೇಕೆಂದು ನಿಖರವಾಗಿ ಗೊತ್ತಿಲ್ಲದೇ ಮನೆಯೊಳಗೆ ಬಂಧಿಯಾದವರೇ ಹೆಚ್ಚು. ನಂತರ 21 ದಿನ ಲಾಕ್‌ ಡೌನ್‌ ಎಂದಾಗ ಕೆಲವರು ದಿಕ್ಕೇ ತೋಚದಾದರು. ಇನ್ನು ಕೆಲವರಿಗೆ ಮೂರ್ನಾಲ್ಕು ದಿನ ಆಗುತ್ತಿದ್ದಂತೆ ಹೊಸ್ತಿಲಾಚೆ ಇಳಿಯದೆ ಮನೆಯೊಳಗೇ ಇರುವುದರ ಮತ್ತೊಂದು ಮುಖ ಅನುಭವವಾಗತೊಡಗಿತು. ಕೆಲವರು ಆದೇಶ ಉಲ್ಲಂಘಿಸಲು ಹೋಗಿ ಲಾಠಿ ಏಟು ತಿಂದು ಮನೆಗೆ ವಾಪಸಾದರು. ಎಂಟು ದಿನ ಆಗುವ ಹೊತ್ತಿಗೆ ಬಹುತೇಕರು ಒಂದು ವ್ಯವಸ್ಥೆಗೆ ಹೊಂದಿಕೊಂಡರು. ವಾಸ್ತವದಲ್ಲಿ ಮೊದಲ ಭಾನುವಾರ ಲಾಕ್‌ ಡೌನ್‌ ಒಂದು ಟೆಸ್ಟ್‌ ಡೋಸ್‌ ಮಾತ್ರ ಆಗಿತ್ತು. ಪೂರ್ಣ ಔಷಧೋಪಚಾರ ಶುರುವಾಗಿದ್ದು 21 ದಿನಗಳ ಲಾಕ್‌ಡೌನ್‌ ಘೋಷಣೆ ಆದಾಗ. ಹೀಗಾಗಿ ಏಪ್ರಿಲ್‌ 14ರಂದು ಲಾಕ್‌ ಡೌನ್‌ ಮರುವಿಸ್ತರಣೆ ಆದಾಗ ವಿಶೇಷ ಅನ್ನಿಸಲೇ ಇಲ್ಲ.

ಪರಿಸರ, ಪಶುಪಕ್ಷಿಗಳು ಸಂಭ್ರಮಿಸಿದವು
ಬೆಂಗಳೂರಿನ ವಿಷಯಕ್ಕೆ ಸಂಬಂಧಿಸಿದಂತೆ ಒಂದು ತಮಾಷೆಯ ಮಾತಿದೆ. ಲಾಕ್‌ಡೌನ್‌ ಆರಂಭದಲ್ಲಿ ಬೆಂಗಳೂರಿನ ಬೀದಿ ನಾಯಿಧಿಗಳು ತಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದವಂತೆ. ‘‘ಬೆಂಗಳೂರಿನ ಬೀದಿಗಳಲ್ಲಿ ಹಗಲಿನಲ್ಲೂ ನರಜಂತುಗಳು ಓಡಾಡುತ್ತಿಲ್ಲ. ಈ ಬಾರಿ ಬಿಬಿಎಂಪಿಯವರು ನಮ್ಮ ಬದಲು ಬೆಂಗಳೂರಿನ ನಾಗರಿಕರನ್ನು ಹಿಡಿದುಕೊಂಡು ಹೋಗಿಬಿಟ್ಟಿದ್ದಾರೆ !’’ ರಾಜಧಾನಿಯ ರಸ್ತೆಗಳ ಪರಿಸ್ಥಿತಿ ಹಾಗೇ ಇತ್ತು. ಇಲ್ಲಿನ ಗುಡಿ ಗೋಪುರಗಳು, ಖಿಲ್ಲೆ-ಗಲ್ಲಿಗಳು, ಉದ್ಯಾನ ಮಾರುಕಟ್ಟೆಗಳು-ಯಾವ ಕಡೆಯೂ ನರಪಿಳ್ಳೆಗಳ ಚಲನವಲನವೇ ಇರಲಿಲ್ಲ. ಎಲ್ಲೆಡೆ ಮನುಷ್ಯರ ಸುಳಿವೇ ಇಲ್ಲದ ಪರಿಣಾಮ ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ತಮ್ಮ ಜಾಗದಲ್ಲಿ ವಿಹರಿಸಿದವು. ಕೆರೆ, ತೊರೆ, ನದಿಗಳೆಲ್ಲ ಸ್ವಚ್ಛವಾದವು. ಉಸಿರಾಟಕ್ಕೆ ಸ್ವಚ್ಛ ಗಾಳಿ ಸಿಗುವಂತಾಯಿತು. ಈ ಸ್ಥಿತಿಯನ್ನು ಮುಂದೆಯೂ ಕಾಪಾಡಿಕೊಳ್ಳಲು ನಾವು ಆಲೋಚನೆ ಮಾಡಬಹುದೇ?

ಕೊರೊನಾ ಹೀರೋಗಳ ನೆನೆಯದೇ ಹೋದರೆ?
ಕೈಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ, ದುಡ್ಡಿದ್ದರೂ ಬೇಕಾದ ವಸ್ತು ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಸರಕಾರಕ್ಕೆ ಸಮಾನವಾಗಿ ಜನರ ನೆರವಿಗೆ ನಿಂತವರು ಸಹಸ್ರ ಸಹಸ್ರ ಸಂಖ್ಯೆಯ ಸಮಾಜ ಸೇವಕರು ಮತ್ತು ಸಾಮಾಜಿಕ ಸಂಘಟನೆಗಳು. ಊಟ ಇಲ್ಲದವರಿಗೆ ಊಟ ಕೊಟ್ಟರು, ಸೂರಿಲ್ಲದವರಿಗೆ ಸೂರು ಕೊಟ್ಟರು. ಯಾರು ಏನು ಕೇಳಿದರೂ ಮನೆಮನೆಗೆ ತಲುಪಿಸಿದರು. ವಾಸ್ತವದಲ್ಲಿ ಇದೇ ಭಾರತೀಯರ ಜಾಯಮಾನ, ಶಕ್ತಿ-ಸಾಮರ್ಥ್ಯ‌. ಅದು ಮತ್ತೊಮ್ಮೆ ಅನಾವರಣ ಆಯಿತು. ಒರೆಗೆ ಹಚ್ಚಿದ ಶಕ್ತಿ ಮತ್ತಷ್ಟು ಬಲಗೊಳ್ಳಲಿ.

ಸರಕಾರಕ್ಕೆ ಭೇಷ್‌ ಎನ್ನೋಣ
ಪರ-ವಿರೋಧದ ಚರ್ಚೆ ಏನಾದರೂ ಇರಲಿ, ಕೊರೊನಾ ಕಾಯಿಲೆ ನಿಯಂತ್ರಣಕ್ಕೆ ಇರುವುದರಲ್ಲಿ ಭಾರತ ಸರಕಾರ ಅತ್ಯುತ್ತಮ ಕ್ರಮಗಳನ್ನೇ ತೆಗೆದುಕೊಂಡಿದೆ. ಒಂದು ಕಠಿಣ ನಿರ್ಧಾರಕ್ಕೆ ಬರುವ ಮುನ್ನ ಸರಕಾರ ವ್ಯಾವಹಾರಿಕ ಲಾಭ, ನಷ್ಟವನ್ನು ಪ್ರಧಾನವಾಗಿ ನೋಡದೆ ಜನರ ಜೀವ ಉಳಿಸುವ ಮಾರ್ಗೋಪಾಯವನ್ನೇ ಪ್ರಧಾನವಾಗಿ ಪರಿಗಣಿಸಿದೆ. ವ್ಯಾವಹಾರಿಕ ಸಂಗತಿಗಳನ್ನಷ್ಟೇ ಪರಿಗಣನೆಗೆ ತೆಗೆದುಕೊಂಡ ಅಮೆರಿಕ, ಸಿಂಗಪುರ, ಇಟಲಿಯಂತಹ ದೇಶಗಳು ದೊಡ್ಡ ಬೆಲೆ ತೆತ್ತಿರುವಾಗ ಸಾಮಾಜಿಕ ಅಂತರವೇ ಸದ್ಯದ ಔಷಧ ಎಂಬುದನ್ನು ಬಲುಬೇಗ ಅರಿತ ಸರಕಾರ ಮುಲಾಜಿಲ್ಲದೆ ಲಾಕ್‌ಡೌನ್‌ ಘೋಷಣೆ ಮಾಡಿ ದೊಡ್ಡ ಅನಾಹುತಕ್ಕೆ ಬ್ರೇಕ್‌ ಹಾಕಿತು. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಮ್ಯಾನ್‌ ಆಫ್‌ ದಿ ಮ್ಯಾಚ್‌ ಎನ್ನಲೇಬೇಕು. ವಯಸ್ಸು, ದಣಿವನ್ನೆಲ್ಲ ಮೀರಿದ ಅವರ ಪರಿಶ್ರಮ ಬೆರಗು ಹುಟ್ಟಿಸುವಂಥದ್ದು. ಅದನ್ನು ನಾವು ಗುರುತಿಸಲೇಬೇಕು. ಈ ಶ್ರಮವೆಲ್ಲ ಸಾರ್ಥಕವಾಗಲು ಜನರು ಮತ್ತಷ್ಟು ಜಾಣರಾಗಬೇಕು ಅಷ್ಟೆ.

ಮುಂದೇನು?
ಇದೇ ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ. 20ಕ್ಕೆ ಲಾಕ್‌ಡೌನ್‌ ತುಸು ಸಡಿಲ ಆಗಬಹುದು. ಹಾಗಂತ ಕೇಕೆ ಹಾಕಬೇಕಿಲ್ಲ. ಮೇ 3ಕ್ಕೆ ಲಾಕ್‌ಡೌನ್‌ ಪೂರ್ತಿ ತೆರವಾಗಬಹುದು. ಒಮ್ಮೆಲೆ ಇಡೀ ದೇಶದ ಜನರು ಬೀದಿಗಿಳಿಯಬೇಕಿಲ್ಲ. ಕೊರೊನಾ ಸೋಂಕಿನ ಪರಿಸ್ಥಿತಿಯೇನೂ ತಿಳಿಯಾಗಿಲ್ಲ. ಮುಂದೆ ನಾವು ಹೇಗಿರಬೇಕು ಎಂಬುದನ್ನು ಒಂದು ಹಂತದ ತರಬೇತಿ ಕೊಟ್ಟು ಸರಕಾರ ಅನಿವಾರ್ಯವಾಗಿ ಲಾಕ್‌ಡೌನ್‌ ತೆರವುಗೊಳಿಸಬಹುದು. ಈಗ ಕಲಿತ ಪಾಠವನ್ನು, ಶಿಸ್ತನ್ನು ಜೀವನಪರ್ಯಂತ ಮಂದುವರಿಸಿದರೆ ಮುಂದೆ ಇದಕ್ಕಿಂತಲೂ ದೊಡ್ಡ ಸಂಕಷ್ಟವೇ ಎದುರಾದರೂ ಸುಲಭದಲ್ಲಿ ಎದುರಿಸಿಬಿಡಬಹುದು.

ಓದುಗರ ಒಡಲಾಳ
ತಬ್ಲಿಘಿ ಸಮಾವೇಶಕ್ಕೆ ಹೋದ ಕೆಲವರು ಜವಾಬ್ದಾರಿಯಿಂದ ವರ್ತಿಸದೇ ಇರುವ ಮೂಲಕ ಕೊರೊನಾ ಸೋಂಕು ಹೆಚ್ಚು ಹರಡಲು ಕಾರಣವಾಗಿರುವುದು ನಿಜವೇ ಆದರೂ, ಮಾಧ್ಯಮ ವರದಿಗಳ ವಿರುದ್ಧ ಸಿಡುಕುವುದೇಕೆ? ಕುಂಬಳಕಾಯಿ ಕಳವಿ ನ ಕತೆ ನೆನಪಾಗುತ್ತಿದೆ!
– ಡ್ಯಾನಿ ಪಿರೇರಾ ಶಿಕ್ಷಕರು, ಹಳ್ಳಿ ಮೈಸೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top