ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್‌ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಅಗಸ್ಟ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ.
ಹಾಗೆ ನೋಡಿದರೆ ಈ ಪರೀಕ್ಷೆಯನ್ನು ನಡೆಸುವುದು ಒಂದು ದೊಡ್ಡ ಸವಾಲೇ ಆಗಿತ್ತು. ಪರೀಕ್ಷೆ ನಡೆಸಬೇಕೇ ಬೇಡವೇ ಎಂಬುದೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಕೆಲವರು ಕೋರ್ಟಿಗೂ ಹೋಗಿದ್ದರು. ಆದರೆ ಪರೀಕ್ಷೆ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಸಕಾರಾತ್ಮಕ ತೀರ್ಪು ಹಾಗೂ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಸೂಚನೆ ನಿರ್ದೇಶನ ನಿಗಾಗಳ ಜೊತೆಯಲ್ಲಿ ಪರೀಕ್ಷೆ ನಡೆಸಲಾಯಿತು. ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸಿದ ಅನುಭವದ ಹಿನ್ನೆಲೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಸರಕಾರ ಇದನ್ನೂ ಯಾವುದೇ ಭಾರಿ ವಿಘ್ನವಿಲ್ಲದೆ ನಡೆಸಿತು. ಪರೀಕ್ಷಾ ಕೇಂದ್ರಗಳ ಮೂಲಕ ಯಾವುದೇ ಮಗುವಿಗೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲಾಯಿತು. ಕಟ್ಟುನಿಟ್ಟಾದ ಸಾಮಾಜಿಕ ಅಂತರ ಪಾಲನೆ, ಪ್ರತಿ ಮಗುವಿಗೂ ದೇಹ ತಾಪಮಾನ ಪರೀಕ್ಷೆ, ಸ್ಯಾನಿಟೈಸರ್ ಬಳಕೆ, ಕಡ್ಡಾಯ ಮಾಸ್ಕ್ ಧಾರಣೆ, ಕೆಮ್ಮು ಶೀತ ಮುಂತಾದ ಅನಾರೋಗ್ಯ ಪೀಡಿತರಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ- ಇತ್ಯಾದಿಗಳ ಮೂಲಕ ಪರೀಕ್ಷೆಯನ್ನು ಸುರಕ್ಷಿತವಾಗಿಸಲು ಶ್ರಮಿಸಲಾಯಿತು.
ಅತ್ಯಂತ ಸೂಕ್ಷ್ಮವಾದ ಇಂಥ ಸನ್ನಿವೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೀಗೊಂದು ಪರೀಕ್ಷಾ ಕಾಂಡ ನಡೆಸಿರುವುದು ಜಟಿಲವಾದ ಸಾಹಸವೇ ಸರಿ. ಇದು ವಿದ್ಯಾರ್ಥಿಗಳ ಹಿತ ಕಾಯುವ ಪ್ರಶ್ನೆಯೊಂದಿಗೆ ಸರಕಾರದ ಪ್ರತಿಷ್ಠೆಯ ಪ್ರಶ್ನೆಯೂ ಆಗಿದ್ದಂತೆ ತೋರುತ್ತದೆ. ಆದರೆ, ಈ ಯಶಸ್ಸಿನ ಸಮಗ್ರ ಶ್ಲಾಘನೆ ಸಲ್ಲಬೇಕಿರುವುದು ತಳಮಟ್ಟದಲ್ಲಿ ಇದನ್ನು ನಡೆಸಿಕೊಟ್ಟವರಿಗೆ. ಕೊರೊನಾ ವಾರಿಯರ್‌ಗಳಿಗೆ ಏನೇನೂ ಕಡಿಮೆಯಿಲ್ಲದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅದನನ್ನು ನಡೆಸಿದ ಮೇಲ್ವಿಚಾರಕರು, ಶಿಕ್ಷಕರು, ಆಯಾ ಕೇಂದ್ರಗಳ ಹೊಣೆ ಹೊತ್ತ ಅಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿಗಳು, ಒಟ್ಟಾರೆ ಶಿಕ್ಷಣ ಇಲಾಖೆಯವರು ಈ ವಿಚಾರದಲ್ಲಿ ಒಗ್ಗಟ್ಟು, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಇದನ್ನು ಸಾಧ್ಯವಾಗಿಸಿದ್ದಾರೆ. ಸೋಂಕು ವಿಪರೀತ ಹಬ್ಬುತ್ತಿರುವ ಸಂದರ್ಭದಲ್ಲಿ ಈ ಪರೀಕ್ಷೆ ಬರೆಯುವವರಿಗೂ ಕೇಂದ್ರವನ್ನು ಸೋಂಕುಮುಕ್ತವಾಗಿ ನಡೆಸಬೇಕಿದ್ದವರಿಗೂ ಯಾವ ಬಗೆಯ ಮನೋವೈಜ್ಞಾನಿಕ ಒತ್ತಡಗಳು ಇದ್ದಿರಬಹುದು ಎಂಬುದನ್ನು ನೆನೆದುಕೊಂಡರೆ, ಪರೀಕ್ಷೆಯ ಯಶಸ್ಸು ಎಂಥದು ಎಂಬುದು ಅರಿವಾಗುತ್ತದೆ. ಪ್ರತಿ ಮಗುವಿನ ಶಿಕ್ಷಣದ ಹೊಣೆಯನ್ನೂ ಹೊತ್ತು, ಸೋಂಕಿನ ಕಾಲದಲ್ಲೂ ಪರೀಕ್ಷೆಗೆ ಸಜ್ಜುಗೊಳಿಸಿದ ಶಿಕ್ಷಕರು, ಪರೀಕ್ಷೆ ಬರೆದ ಮಕ್ಕಳು, ಮಕ್ಕಳನ್ನು ಧೈರ್ಯವಾಗಿ ಹಾಗೂ ಸನ್ನದ್ಧವಾಗಿ ಪರೀಕ್ಷೆಗೆ ಕಳುಹಿಸಿದ ಹೆತ್ತವರು, ಅವರನ್ನು ಕೇಂದ್ರಗಳಿಗೆ ಕರೆತಂದ ಸಾರಿಗೆ ವ್ಯವಸ್ಥೆಯ ನೌಕರರು- ಇವರನ್ನೂ ಮರೆಯುವಂತಿಲ್ಲ.
ಕಂಟೇನ್‌ಮೆಂಟ್, ಕ್ವಾರಂಟೈನ್ ಮುಂತಾದ ನಾನಾ ಕಾರಣಗಳಿಂದ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೂ ಆದಷ್ಟು ಬೇಗನೆ ಸುರಕ್ಷಿತವಾಗಿ ಪರೀಕ್ಷೆ ನಡೆಸಬೇಕು. ಹಾಗೇ ಈಗ ನಡೆದ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಕೂಡ ಸುರಕ್ಷಿತವಾಗಿ ನಡೆಸಿ ಬೇಗನೆ ಫಲಿತಾಂಶ ಪಡೆಯುವುದು ಸಾಧ್ಯವಾಗಲಿ.