ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿ – ಮಕ್ಕಳ ಸುರಕ್ಷತೆ ಆದ್ಯತೆಯಾಗಿರಲಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗಳನ್ನು ಯಾವಾಗ ನಡೆಸಬೇಕು, ನಡೆಸಬೇಕೋ ಬೇಡವೋ, ನಡೆಸಿದರೆ ಹೇಗೆ, ನಡೆಸದಿದ್ದರೆ ಏನು ತೊಂದರೆ ಮುಂತಾದ ಚರ್ಚೆಗಳು ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿವೆ. ಜೂನ್ 25ರಿಂದ ಜುಲೈ 4ರವರೆಗೆ ಸರಕಾರ ಪರೀಕ್ಷೆ ನಿಗದಿಪಡಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಾಗ ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಅವರನ್ನು ಕೊರೊನಾ ಆತಂಕಕ್ಕೆ ತಳ್ಳಿದಂತಾಗಬಹುದು ಮತ್ತು ಒತ್ತಡ ಸೃಷ್ಟಿಗೆ ಕಾರಣವಾಗಬಹುದು. ಇದರಿಂದ ಅವರು ಪರೀಕ್ಷೆಯನ್ನೂ ಸರಿಯಾಗಿ ಬರೆಯಲಾಗದೆ ಹೋಗಬಹುದು ಎಂಬ ವಾದದಲ್ಲಿ ಭಾಗಶಃ ಸತ್ಯವಿದೆ. ಬಸ್ ವ್ಯವಸ್ಥೆ ಇನ್ನೂ ಸರಿಯಾಗಿ ಆರಂಭಗೊಳ್ಳದಿರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗುವುದೂ ಒಂದು ದೊಡ್ಡ ಸಮಸ್ಯೆ ಆಗುವ ಸಾಧ್ಯತೆ ಇದೆ.
ಎಲ್ಲ ಪರ-ವಿರೋಧಗಳನ್ನು ಗಮನಿಸಿದಾಗ, ಪರೀಕ್ಷೆಯನ್ನು ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ನಡೆಸುವುದೇ ಸೂಕ್ತವಾಗಿ ಕಾಣಿಸುತ್ತದೆ. ಯಾಕೆಂದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದು ಜೀವನದ ಅತ್ಯಂತ ಪ್ರಮುಖ ಘಟ್ಟ. ತಮ್ಮ ಮುಂದಿನ ಉನ್ನತ ಶಿಕ್ಷಣಕ್ಕೆ ಮೆಟ್ಟಿಲಾಗಬಹುದಾದ ಈ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿ ಅಧ್ಯಯನ ಮಾಡಿರುತ್ತಾರೆ. ಈ ವಿದ್ಯಾರ್ಥಿ ಮುಂದಿನ ಶಿಕ್ಷಣಕ್ಕೆ ಅರ್ಹನೋ ಅಲ್ಲವೋ ಎಂಬುದನ್ನು ನಿರ್ಣಯಿಸುವುದಕ್ಕೆ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗಿಂತ ಸಮರ್ಪಕವಾದ ವ್ಯವಸ್ಥೆಯಿಲ್ಲ. ಅದನ್ನು ಆಧರಿಸಿಯೇ ಆತನ ಮುಂದಿನ ಶೈಕ್ಷಣಿಕ ಸಾಧನೆಗಳು ನಿರ್ಧಾರವಾಗುತ್ತವೆ. ಹಾಗೆಂದು ಎಲ್ಲರನ್ನೂ ಉತ್ತೀರ್ಣಗೊಳಿಸುವುದೂ ಸಮಂಜಸವಲ್ಲ. ಇದರಿಂದ ಮೆರಿಟ್ ನಿರೀಕ್ಷಿಸಿದ್ದ, ಅದಕ್ಕಾಗಿ ಕಠಿಣ ಶ್ರಮಪಟ್ಟ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿದರೆ ಅಥವಾ ರದ್ದುಪಡಿಸಿದರೆ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ. ತಜ್ಞರೂ ಇದನ್ನೇ ಹೇಳಿದ್ದಾರೆ.
ಹಾಗಿದ್ದರೆ ಇಂಥ ಸನ್ನಿವೇಶದಲ್ಲಿ ಏನು ಮಾಡಬಹುದು? ಸರಕಾರವಂತೂ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಹಂತದಲ್ಲಿ ಕೊರೊನಾ ಬಗ್ಗೆ ಮೈಮರೆಯುವುದು ಸಲ್ಲ. ಒಂದೇ ಸೆಂಟರ್‌ಗೆ ಹಲವು ಶಾಲೆಯ ವಿದ್ಯಾರ್ಥಿಗಳು ಹೋಗುವುದರಿಂದ ವಿದ್ಯಾರ್ಥಿಗಳ ಪ್ರವಾಹ ಮತ್ತು ಜನದಟ್ಟಣೆ ಹೆಚ್ಚುತ್ತದೆ. ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಓಡಾಡುವುದು, ಸಾರ್ವಜನಿಕ ಸಾರಿಗೆ ಒತ್ತಡದ ಬಳಕೆ, ಅಧಿಕ ಸಂಖ್ಯೆಯ ಮಕ್ಕಳಿದ್ದಾಗ ಸಹಜವಾಗಿ ಸಾಮಾಜಿಕ ಅಂತರದ ಉಪೇಕ್ಷೆ- ಇವೆಲ್ಲವೂ ಆತಂಕಕಾರಿ. ಹೀಗಾಗಿ ಸರಳವಾದ ಪರಿಹಾರ ಅಂದರೆ ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಸುವುದು. ಪೂರಕವಾದ ಮೂಲಸೌಕರ್ಯಗಳನ್ನು ಏರ್ಪಡಿಸಿಕೊಂಡರೆ ಆಯಾ ಶಾಲೆಗಳಲ್ಲೇ ಪರೀಕ್ಷೆ ಬರೆಯುವುದು ಮಕ್ಕಳಿಗೆ ಸಹಜವಾಗಿ ಒತ್ತಡಮುಕ್ತ ಪರೀಕ್ಷೆ ವಾತಾವರಣ ಒದಗಿಸಿಕೊಟ್ಟಂತಾಗುತ್ತದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡರೆ ವೈರಾಣು ಹಬ್ಬುವ ಆತಂಕವೂ ಇರುವುದಿಲ್ಲ. ಪೋಷಕರಿಗೂ ಯಾವ ಉದ್ವೇಗವೂ ಇರುವುದಿಲ್ಲ.
ಪರೀಕ್ಷೆ ನಡೆಯುವ ಶಾಲೆಗಳಲ್ಲಿ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಹಜವಾದ ಕಟ್ಟುನಿಟ್ಟಿನ ಜೊತೆಗೆ ಕೊರೊನಾ ಆತಂಕ ನಿವಾರಣೆ ಸುರಕ್ಷತಾ ಕ್ರಮಗಳೂ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಬೇಕು. ಅಗತ್ಯಬಿದ್ದಲ್ಲಿ ಬಳಕೆಗೆ ಸಾಕಷ್ಟು ನೀರು, ಸೋಪು, ಸ್ಯಾನಿಟೈಸರ್ ಒದಗಿಸಬೇಕು. ಪ್ರತಿ ಪರೀಕ್ಷಾ ಕೇಂದ್ರವನ್ನೂ ಈ ವಿಚಾರದಲ್ಲಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು. ತುರ್ತು ಅಗತ್ಯಕ್ಕೆ ಆ್ಯಂಬುಲೆನ್ಸ್, ವೈದ್ಯರು, ಶುಶ್ರೂಷಕಿಯರು ದೊರೆಯುವಂತಿರಬೇಕು. ಪ್ರತಿ ವಿದ್ಯಾರ್ಥಿಯೂ ಅಧ್ಯಯನದ ನಡುವೆ ವೈಯಕ್ತಿಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವುದು ಅಗತ್ಯ. ಈ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಂದರ್ಭ ಅತಿ ಅಪರೂಪದ ಸನ್ನಿವೇಶವಾಗಿದ್ದು, ಮಾದರಿಯೂ ಆಗಿರಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top