ಶೈಕ್ಷಣಿಕ ಜೀವನದ ಅತಿ ಮಹತ್ವದ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ ಕಟ್ಟೆಚ್ಚರದ ನಡುವೆ ಆರಂಭಗೊಳ್ಳಲಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಈ ವಾತಾವರಣದಲ್ಲಿ ಒಂದು ಬಗೆಯ ಉದ್ವಿಗ್ನತೆ ನಿರ್ಮಿಸುತ್ತವೆ. ಈಗಂತೂ ಕೊರೊನಾ ಕಾಲಘಟ್ಟದಲ್ಲಿ ಅದು ನಡೆಯುತ್ತಿರುವುದರಿಂದ, ಅದಕ್ಕೆ ಇನ್ನಷ್ಟು ಆತಂಕದ ಅವರಣ ನಿರ್ಮಾಣವಾಗಿದೆ. ಜೂನ್ 25ರಂದು ಪರೀಕ್ಷೆ ನಡೆಯಲಿ ಎಂದು ಸರಕಾರ ಹಾಗೂ ತಜ್ಞರು ತೀರ್ಮಾನಿಸುವಾಗ, ಕೊರೊನಾ ಕೇಸುಗಳು ಇಷ್ಟೊಂದು ಪ್ರಮಾಣದಲ್ಲಿ ವೃದ್ಧಿಯಾಗುತ್ತವೆ ಎಂಬ ನಿರೀಕ್ಷೆಯಿರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಸೋಂಕು ಹಾಗೂ ಮರಣ ಪ್ರಮಾಣ ಹೆಚ್ಚಿರುವುದರಿಂದ ಪರೀಕ್ಷೆಗಳು ಆತಂಕದ ನಡುವೆ ನಡೆಯಬೇಕಿದೆ.
ಈ ಬಾರಿ 2,879 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 8,48,203 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ತಜ್ಞ ವೈದ್ಯರ ಸಮಿತಿ ಜೊತೆ ಸರಕಾರ ಚರ್ಚಿಸಿದ್ದು, ತಜ್ಞರು ನೀಡಿದ ಮಾರ್ಗದರ್ಶನದ ಮೇಲೆ ನಮ್ಮ ‘ಪ್ರಾಮಾಣಿತ ಕಾರ್ಯಾಚರಣ ವಿಧಾನಗಳನ್ನು (ಎಸ್‌ಒಪಿ)’ ತಯಾರಿಸಲಾಗಿದೆ. ಅದನ್ನು ಪರಿಶೀಲಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿವೆ. ಹೀಗಾಗಿ ವಿದ್ಯಾರ್ಥಿ ಹಾಗೂ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ ಸಜ್ಜುಗೊಳಿಸಲಾಗಿದ್ದು, ಎಲ್ಲಾ ಪರೀಕ್ಷಾರ್ಥಿಗಳಿಗೆ ಮಾಸ್ಕ್‌ಗಳ ವಿತರಣೆ, ಸ್ಯಾನಿಟೈಸರ್ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಪರೀಕ್ಷಾ ಕೇಂದ್ರಗಳಿವೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಬಿಳಿ ಬಣ್ಣದಿಂದ ಬಾಕ್ಸ್‌ಗಳನ್ನು ನಿರ್ಮಿಸಿ, ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗಿದೆ. ಹಲವೆಡೆ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪರೀಕ್ಷಾರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ. ಕಂಟೈನ್ಮೆಂಟ್ ವಲಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆಯೂ ಇದೆ.
ಕಳೆದ ವಾರ ಬಿಗಿ ಸುರಕ್ಷತಾ ಕ್ರಮಗಳ ನಡುವೆ ನಡೆದ ಪಿಯುಸಿ ಇಂಗ್ಲಿಷ್ ಪರೀಕ್ಷೆಯ ಯಶಸ್ಸಿನಿಂದ ಸರಕಾರ ಇನ್ನಷ್ಟು ಆತ್ಮವಿಶ್ವಾಸ ಹೊಂದಿತ್ತು. ಇದನ್ನು ನಡೆಸಿದ ಕ್ರಮವನ್ನು ಮಾದರಿಯಾಗಿ ಪರಿಗಣಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿತ್ತು. ಹಾಗೆಯೇ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿರುವುದು ಅಪೇಕ್ಷಣೀಯವಾಗಿತ್ತು. ಇಷ್ಟರಲ್ಲಾಗಲೇ ಎಸ್ಸೆಸ್ಸೆಲ್ಸಿಯ ಪರೀಕ್ಷೆ ಮುಗಿದು ಫಲಿತಾಂಶವೂ ಬಂದು ಪಿಯುಸಿ ತರಗತಿಗಳು ಆರಂಭವಾಗಬೇಕಿತ್ತು. ಆದರೆ ಅದಕ್ಕೆ ಕೊರೊನಾ ತಡೆಯಾಗಿತ್ತು. ಈ ಮಧ್ಯೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬ ಬಗ್ಗೆಯೂ ಸಾರ್ವಜನಿಕ ಚರ್ಚೆಯಾಗಿತ್ತಲ್ಲದೆ, ಪರೀಕ್ಷೆ ನಡೆಸದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ, ಪರೀಕ್ಷೆ ನಡೆಸಲು ಸರಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಇತರ ರಾಜ್ಯಗಳು ಕೋವಿಡ್ ಆತಂಕದ ನಡುವೆ ಪರೀಕ್ಷೆಯನ್ನು ರದ್ದುಪಡಿಸಿವೆ. ರಾಜ್ಯ ರಿಸ್ಕ್‌ನ ನಡುವೆಯೂ ಪರೀಕ್ಷೆ ನಡೆಸಲು ಮುಂದಾಗಿದೆ.
ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವ, ನಿರ್ಣಾಯಕವಾದ ಈ ಪರೀಕ್ಷೆಯನ್ನು ಸರಕಾರ ಹಗುರವಾಗಿ ಪರಿಗಣಿಸಿಲ್ಲ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಯಾವುದೇ ಆತಂಕ ಇಟ್ಟುಕೊಳ್ಳದೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ನಿರಾಳವಾಗಿ ಪರೀಕ್ಷೆಯನ್ನು ಬರೆಯಬಹುದು. ಹೆತ್ತವರು ಕೂಡ ಈ ಬಗ್ಗೆ ಆತಂಕಪಟ್ಟುಕೊಂಡು ಮಕ್ಕಳಿಗೆ ಒತ್ತಡ ಉಂಟುಮಾಡುವ ಅಗತ್ಯವಿಲ್ಲ. ಹಾಗೆಯೇ ಈ ಪರೀಕ್ಷೆ ಒಂದು ದಿನದ್ದಲ್ಲ. ಐದಾರು ದಿನಗಳ ಕಾಲ ನಡೆಯುವ ಈ ಪರೀಕ್ಷಾ ಘಟ್ಟದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಒಂದು ಸವಾಲು. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಹದಿಹರೆಯದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಂಡು, ಆರೋಗ್ಯ ರಿಸ್ಕ್‌ಗಳಿಗೆ ತುತ್ತಾಗದಂತೆ ಕಾಪಾಡಿಕೊಳ್ಳುವ ಸವಾಲನ್ನು ಇಲಾಖೆ ಸಮರ್ಥವಾಗಿ ನಿರ್ವಹಿಸಬೇಕು. ಕೊರೊನಾ ಆತಂಕದಿಂದ ನಿಂತುಹೋಗಿರುವ ಶೈಕ್ಷಣಿಕ ಚಕ್ರ ಹಳಿಗೆ ಮರಳಲಿ.