– ಸುರಕ್ಷತಾ ಕ್ರಮಗಳೊಂದಿಗೆ ಎಕ್ಸಾಮ್: ಸುರೇಶ್ ಕುಮಾರ್.
– ತಮಿಳುನಾಡು, ಪುದುಚೆರಿ, ತೆಲಂಗಾಣದಲ್ಲಿ ಪರೀಕ್ಷೆ ರದ್ದು.
ವಿಕ ಸುದ್ದಿಲೋಕ ಉಡುಪಿ/ಬೆಂಗಳೂರು.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ಖಚಿತವಾಗಿ ನಡೆಸುತ್ತೇವೆ, ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಬಾರದು ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿ ಸುಳ್ಳು ವದಂತಿ ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಈ ನಡುವೆ ತಮಿಳುನಾಡು, ಪುದುಚೆರಿ ಮತ್ತು ತೆಲಂಗಾಣ ಸರಕಾರಗಳು ಎಸ್ಎಸ್ಎಲ್ಸಿ ಪರೀಕ್ಷೆ ರದ್ದುಪಡಿಸಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲು ನಿರ್ಧರಿಸಿವೆ.
‘‘ಪರೀಕ್ಷೆಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜೂ. 25ರಿಂದ ಪರೀಕ್ಷೆ ನಡೆಸಲಾಗುವುದು. ಕೇಂದ್ರದ ಗೃಹ ಇಲಾಖೆ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ರಾಜ್ಯ ಹೈಕೋರ್ಟ್ ಕೂಡ ಹಸಿರು ನಿಶಾನೆ ನೀಡಿದೆ,’’ ಎಂದು ಸಚಿವರು ಹೇಳಿದ್ದಾರೆ.
‘‘ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೈಕೋರ್ಟ್‌ಗೆ ವಿಸ್ತೃತ ಮಾಹಿತಿ ನೀಡಿದ್ದೇವೆ. ಮಕ್ಕಳ ಸುರಕ್ಷತೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ಬಗ್ಗೆ ವಿಶೇಷ ಗಮನವಿಟ್ಟು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಬಗ್ಗೆ ರಾಜ್ಯ ಹೈಕೋರ್ಟ್, ಶಿಕ್ಷಣ ತಜ್ಞರು, ಪೋಷಕರು ಸೇರಿದಂತೆ ಹಲವರ ಸಲಹೆಗಳನ್ನು ಪಡೆದು ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ತಿಳಿಸಿದ್ದಾರೆ.
ತಮಿಳುನಾಡು ನಮ್ಮನ್ನು ಫಾಲೋ ಮಾಡಬೇಕಿತ್ತು. ನಾವು ಮಕ್ಕಳ ಹಿತ, ಭವಿಷ್ಯಕ್ಕಾಗಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ.
– ಸುರೇಶ್ ಕುಮಾರ್ ಶಿಕ್ಷಣ ಸಚಿವ