ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಆತಂಕದ ನಡುವೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ನಡೆದಿದ್ದು, ಶೇ.98.3ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸರು, ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಎಲ್ಲರೂ ಸೇರಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ, ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ಪರೀಕ್ಷೆಯನ್ನು ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ನಡೆಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಒಟ್ಟು 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.
ಪಿಯುಸಿ ಪರೀಕ್ಷೆ ವೇಳೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಆಗಿದ್ದ ಗೊಂದಲ ಈ ಬಾರಿ ಇರಲಿಲ್ಲ. ವಿದ್ಯಾರ್ಥಿಗಳಿಗೆ ಎಂಎಸ್ಎಂ ಮೂಲಕವೇ ಕೊಠಡಿ ಸಂಖ್ಯೆ ತಿಳಿಸಲಾಗಿತ್ತು. ಜತೆ ಪ್ರತಿ ಕೇಂದ್ರದಲ್ಲಿ ಹೆಚ್ಚುವರಿ ನೋಟಿಸ್ ಬೋರ್ಡ್ ಹಾಕಲಾಗಿತ್ತು.
ಅಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು, ಪೋಷಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಸಂಘಟಿತ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಮುಂದಿನ ಪರೀಕ್ಷೆಗಳನ್ನೂ ಇದೇ ಮಾದರಿಯಲ್ಲಿ ನಡೆಸಲಾಗುವುದು.
– ಎಸ್.ಸುರೇಶ್ ಕುಮಾರ್, ಶಿಕ್ಷಣ ಸಚಿವ
– ವಿದ್ಯಾರ್ಥಿಗಳ ಉತ್ಸಾಹ –
ನೋಂದಣಿ- 7,85,140
ಹಾಜರು- 7,71,878
ಗೈರು- 13,212
ಕಳೆದ ವರ್ಷ ನೋಂದಾಯಿತ 7,87,493 ಮಂದಿಯ ಪೈಕಿ 7,77,556 (98.6%) ವಿದ್ಯಾರ್ಥಿಗಳು ಹಾಜರಾಗಿದ್ದರು.
ಆತಂಕದ ಕ್ಷಣಗಳು
– ಮಗನನ್ನು ಪರೀಕ್ಷೆ ಬಿಡಲು ಬಂದ ಶಿಕ್ಷಕ ತಂದೆ ಅಪಘಾತದಲ್ಲಿ ಮೃತ್ಯು
– ಮಗಳು ಪರೀಕ್ಷೆಗೆ ಹೊರಟಾಗ ಅಪ್ಪನಿಗೆ ವಿದ್ಯುತ್ ಆಘಾತ
– ಪರೀಕ್ಷೆ ಮುಗಿಸಿ ಬರುತ್ತಿದ್ದ ಬೈಕ್ ಅಪಘಾತ: ಒಬ್ಬ ಸಾವು
– ಕೆಲವೆಡೆ ಅಸ್ವಸ್ಥರಾದ ವಿದ್ಯಾರ್ಥಿಗಳು, ತಕ್ಷಣವೇ ಆಸ್ಪತ್ರೆಗೆ
– ಸೋಂಕುಪೀಡಿತರ ಮಕ್ಕಳಿಗೆ ಪರೀಕ್ಷೆ ತಪ್ಪಿದ ಬೇಸರ