ಜ್ಞಾನಸೂರ್ಯ, ಅದ್ವಿತೀಯ ಸಂತ ಶಂಕರ

ಇಂದು ಶ್ರೀ ಶಂಕರಾಚಾರ್ಯ ಜಯಂತಿ.

– ಸ್ವಾಮಿ ವೀರೇಶಾನಂದ ಸರಸ್ವತೀ, ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು. 

ಭಗವಾನ್‌ ಶ್ರೀ ರಾಮಕೃಷ್ಣರು ಹೇಳುತ್ತಾರೆ: ”ಲೋಕ ಶಿಕ್ಷಣ ಕಾರ್ಯವು ಯಾರೆಂದರೆ ಅವರಿಂದ ಸಾಧ್ಯವಿಲ್ಲ. ಅದಕ್ಕೆ ಜಗನ್ಮಾತೆಯ ಲೈಸೆನ್ಸ್‌ ಬೇಕು. ಅವಳು ಹಿಂದೆ ಶುಕದೇವನಿಗೆ, ನಾರದರಿಗೆ, ಶ್ರೀ ಶಂಕರಾಚಾರ್ಯರಿಗೆ ಲೋಕಶಿಕ್ಷಣಕ್ಕೆ ಲೈಸೆನ್ಸ್‌ ನೀಡಿದ್ದಳು. ಈಗ ನರೇಂದ್ರ(ಮುಂದೆ ಸ್ವಾಮಿ ವಿವೇಕಾನಂದರು)ನಿಗೆ ನೀಡಿದ್ದಾಳೆ…” ಭಾರತೀಯ ದಾರ್ಶನಿಕರಲ್ಲಿ ಮುಕುಟಪ್ರಾಯರು, ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರೆನಿಸಿದ ಶಂಕರರು ಅನುಭಾವಿ ಸಂತ, ತತ್ತ್ವಜ್ಞಾನಿ, ಭಕ್ತ, ಸಮಾಜ ಸುಧಾರಕ, ಅದ್ಭುತ ಬರಹಗಾರ, ಸಮರ್ಥ ಸಂಘಟಕ. ಶಂಕರರು ಒಂದೆಡೆ ಬೌದ್ಧಿಕ ದಾರ್ಶನಿಕತ್ವಕ್ಕೆ ಹೆಸರಾದರೆ, ಇತರ ಧರ್ಮಗಳನ್ನು ವಿರೋಧಿಸದೆ, ಅವುಗಳಿಗೆ ಸಫಲತೆಯನ್ನು ತಂದುಕೊಟ್ಟು ಜಗತ್ತಿಗೆ ವ್ಯಾಪಕವೂ ಅರ್ಥವತ್ತಾದಂಥ ಧಾರ್ಮಿಕ ತತ್ವಚಿಂತನೆಯನ್ನು ಲೋಕಕ್ಕೆ ಮೊಟ್ಟಮೊದಲು ತಂದು ಕೊಟ್ಟ ಮಹಾನುಭಾವರು.

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್‌|

ಷೋಡಶೇ ಕೃತವಾನ್‌ ಭಾಷ್ಯಂ ಸ್ವಾತ್ರಿಂಶೇ ಮುನಿರಭ್ಯಗಾತ್‌||

ಶ್ರೀ ಶಂಕರಾಚಾರ್ಯರು ಎಂಟು ವರ್ಷದವರಿದ್ದಾಗಲೇ ನಾಲ್ಕೂ ವೇದಗಳನ್ನು ಕಲಿತಿದ್ದರು, ಹನ್ನೆರಡನೆಯ ವಯಸ್ಸಿನಲ್ಲಿ ಸರ್ವಶಾಸ್ತ್ರಗಳನ್ನು ಅರಿತಿದ್ದರು, ಹದಿನಾರನೇ ವಯಸ್ಸಿಗೆ ಭಾಷ್ಯವನ್ನು ಬರೆದು ಮೂವತ್ತನೇ ವಯಸ್ಸಿಗಾಗಲೇ ಇಹಲೋಕಯಾತ್ರೆ ಪೂರೈಸಿದರು.

ಜಗತ್ತನ್ನು ಬೆಳಗಿದ ಭಗವಾನ್‌ ಬುದ್ಧ, ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು ಸಾವಿರ ವರ್ಷಗಳ ಅಂತರದಲ್ಲಿ ಅವತರಿಸಿ ಮಾನವಕುಲದ ಉದ್ಧಾರಗೈದ ಯುವ ಯತಿತ್ರಯರು! ಹಿಂದೂಧರ್ಮಕ್ಕೆ ಸತ್ಯಯುಗದಲ್ಲಿ ಬ್ರಹ್ಮ, ತ್ರೇತಾಯುಗದಲ್ಲಿ ವಸಿಷ್ಠ, ದ್ವಾಪರಯುಗದಲ್ಲಿ ವ್ಯಾಸ ಹಾಗೂ ಕಲಿಯುಗದಲ್ಲಿ ಅನುಕ್ರಮವಾಗಿ ಬುದ್ಧ-ಶಂಕರ-ವಿವೇಕಾನಂದರು ಮಾರ್ಗದರ್ಶಿ ಗುರುಗಳಾಗಿದ್ದಾರೆ. ಶಂಕರ-ವಿವೇಕಾನಂದರು ಹಿಂದೂಧರ್ಮದ ನಿಷ್ಠಾವಂತ ಸಂತರೆನಿಸಿದರೆ ಬುದ್ಧನು ಹಿಂದೂಧರ್ಮ ದೇವತೆಯ ಬಂಡಾಯ ಶಿಶು!

ಶಂಕರರ ಸಾಧನೆಗಳು: ಜನರಿಗೆ ಕಠಿಣವೆನಿಸಿದ್ದ ವೈದಿಕ ಗ್ರಂಥಗಳ ಗಾಢವಾದ ಅರ್ಥವನ್ನು ಸ್ಪಷ್ಟೀಕರಿಸಿ, ವಿಸ್ತೃತವಾದ ವ್ಯಾಖ್ಯಾನವನ್ನು ಶಂಕರರು ಅನುಗ್ರಹಿಸಿದರು. ತಮ್ಮ ಭಾಷ್ಯಗ್ರಂಥಗಳ ಕುರಿತಾದ ವೃತ್ತಿ ಮತ್ತು ವಾರ್ತಿಕೆಗಳನ್ನು ರಚಿಸಲು ವಿದ್ವಾಂಸರನ್ನು ಪ್ರೋತ್ಸಾಹಿಸಿ ವೇದಾಂತ ಶಾಸ್ತ್ರ ಸಿದ್ಧಾಂತಗಳ ವಿಸ್ತೃತ ಪ್ರಚಾರಕ್ಕೆ ಪ್ರೋತ್ಸಾಹವಿತ್ತರು. ಧರ್ಮ ಸ್ಥಾಪನೆಯ ಕಾರ್ಯವನ್ನು ಚಿರಸ್ಥಾಯಿಯಾಗಿಸುವ ದೃಷ್ಟಿಯಿಂದ ತ್ಯಾಗ-ವೈರಾಗ್ಯ ಆದರ್ಶ ಹೊತ್ತ ಸಂನ್ಯಾಸಿಗಳನ್ನು ‘ಸಂಘಬದ್ಧ’ರಾಗಿಸಿ ಅವರುಗಳು ವೈದಿಕ ಧರ್ಮದ ಅಭ್ಯುದಯ, ಅಭ್ಯುತ್ಥಾನ ಮತ್ತು ಮಂಗಳ ಸಾಧನೆಗೆ ಶ್ರಮಿಸಲು ಪ್ರೇರೇಪಿಸಿದರು.

ಮಠಾಧಿಪತಿಗಳು ಭೂಮಿಯಲ್ಲಿ ಧಾರ್ಮಿಕ ಪ್ರತಿನಿಧಿಗಳಾಗಿ ಆಸ್ತಿಕರಿಗೆ ನಿರಂತರ ಧರ್ಮ ಬೋಧನೆಗೈಯಲು ಅನುವಾಗುವಂತೆ ಭಾರತದ ನಾಲ್ಕು ದಿಕ್ಕುಗಳಲ್ಲಿ, ದೇಶದ ಧಾರ್ಮಿಕ ಹಿತದೃಷ್ಟಿಯಿಂದ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಭರತಖಂಡಕ್ಕೊಂದು ಧರ್ಮ, ವೇದಾಂತ ಧರ್ಮ; ಒಂದು ತತ್ತ್ವ, ಅದ್ವೈತ ತತ್ವ ಮತ್ತು ಸಂಪರ್ಕ ಭಾಷೆ, ಸಂಸ್ಕೃತ ಭಾಷೆಯಿತ್ತು ಆಶೀರ್ವದಿಸಿದರು.

ಪುಣ್ಯಕ್ಷೇತ್ರ ಶ್ರೀಶೈಲದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದಾದ ಶ್ರೀಶೈಲ ಮಲ್ಲಿಕಾರ್ಜುನನನ್ನು ಕಾಪಾಲಿಕರ ಅವೈದಿಕ ಮತಪ್ರಭಾವದಿಂದ ಮುಕ್ತಗೊಳಿಸಿ ವೈದಿಕ ಧರ್ಮೋಪಾಸನೆಗೆ ಅವಕಾಶವಿತ್ತರು.

ಪ್ರಮಾದಯುಕ್ತ ಆಶಾವಾದ ಮತ್ತು ಭಾವೋದ್ರೇಕವೇ ನೈಜಭಕ್ತಿ ಎಂದು ಭ್ರಮಿಸುವವರನ್ನು ಖಂಡಿಸಿದ ಶಂಕರರು, ಬೌದ್ಧಾಚಾರ್ಯರ ದಿಙನಾದ ಮತ್ತು ಧರ್ಮಕೀರ್ತಿ ಎಂಬ ಗ್ರಂಥಗಳ ಬಗ್ಗೆ ತಮಗಿದ್ದ ಅದ್ಭುತ ಜ್ಞಾನದ ಸಹಾಯದಿಂದ ಬೌದ್ಧರಿಗೆ ತಿಳುವಳಿಕೆಯಿತ್ತರು. ಇತರ ಧರ್ಮಗಳ ದೋಷಗಳನ್ನು, ಲೋಪಗಳನ್ನು ತಿದ್ದಿ, ಅವುಗಳಲ್ಲಿನ ವೇದಸಮ್ಮತವಲ್ಲದ ರೀತಿನೀತಿಗಳನ್ನೆತ್ತಿ ತೋರಿದರು. ಅಧ್ಯಾತ್ಮ ತತ್ವವು ಇಂದ್ರಿಯಗ್ರಾಹ್ಯ ವಸ್ತುವೇ ಅಲ್ಲದಿರುವುದರಿಂದ ಅದನ್ನು ಇಂದ್ರಿಯ ಜ್ಞಾನವನ್ನೇ ಅವಲಂಬಿಸಿದ ವೈಜ್ಞಾನಿಕ ಸಂಶೋಧನಾ ವಿಧಾನಗಳಿಂದ ಪರೀಕ್ಷಿಸುವುದು ಮೂರ್ಖತನವೆಂಬುದನ್ನು ಮನದಟ್ಟು ಮಾಡಿಕೊಟ್ಟರು.

ಶಂಕರರ ಕುರಿತು ವಿಖ್ಯಾತರು:
”ಆಧುನಿಕ ಭೌತ ವಿಜ್ಞಾನದ ಅತ್ಯುನ್ನತ ಸಿದ್ಧಾಂತಗಳನ್ನು ಯೋಗ್ಯವಾಗಿ ಸಮನ್ವಯಗೊಳಿಸುವ ಸಿದ್ಧಾಂತವೆಂದರೆ ಅದ್ವೆತ್ರೖತ ಮಾತ್ರ,” ಎಂದಿದ್ದಾನೆ ಆರ್ಥರ್‌ ಐಸನ್‌ಬರ್ಗ್‌. ”ಜ್ಞಾನ, ಭಕ್ತಿ, ವಿವೇಕದಿಂದೊಡಗೂಡಿದ ಭೂತದಯೆಯ ಸಂಗಮದ ಭಾರತದ ಅತ್ಯುದಾತ್ತ ಮಾನವ ವ್ಯಕ್ತಿತ್ವದ ಪ್ರತೀಕ ಶ್ರೀ ಶಂಕರರು,” ಎಂಬುದು ವಿಲ್‌ ಡ್ಯೂರೆಂಟ್‌ ಉದ್ಗಾರ. ”ಶಂಕರರ ಸಿದ್ಧಾಂತವು ಪ್ಲೇಟೋ ಹಾಗೂ ಕ್ಯಾಂಟ್‌- ಇವರೀರ್ವರ ಸಿದ್ಧಾಂತಕ್ಕಿಂತ ಅಧಿಕವಾದ ಪೂರ್ಣತೆಯನ್ನು ಸಾಧಿಸಿದೆ,” ಎಂದು ಪಾಲ್‌ ಡ್ಯೂಸನ್‌ ಹೇಳಿದರೆ, ‘ಸಂತ ಫ್ರಾನ್ಸಿಸ್‌ನ ದೈವಭಕ್ತ ಅಬಲ್‌ ರಾಡ್‌ನ ಬುದ್ಧಿಶಕ್ತಿ, ಮಾರ್ಟಿನ್‌ ಲೂಥರ್‌ನ ಓಜಸ್ಸು-ಸ್ವಾತಂತ್ರ್ಯ ಮತ್ತು ಇಗ್ನೇಷಿಯಸ್‌ ಲಯೋಲನ ರಾಜಕೀಯ ದಕ್ಷತೆ, ಇವೆಲ್ಲದರ ಒಟ್ಟು ಸ್ವರೂಪ ಹಾಗೂ ಪಾಶ್ಚಾತ್ಯರು ಊಹಿಸಲೂ ಸಾಧ್ಯವಾಗದ ಅದ್ಭುತ ವ್ಯಕ್ತಿತ್ವ ಶಂಕರಾಚಾರ್ಯರದ್ದಾಗಿತ್ತು,” ಎಂದಿದ್ದಾರೆ ನಿವೇದಿತಾ.

ವಿವೇಕಾನಂದರು ನುಡಿದಂತೆ, ”ಲೋಕಜೀವನಕ್ಕೆ ಶಂಕರರು ಆಧ್ಯಾತ್ಮಿಕ ದೃಷ್ಟಿಕೋನ ನೀಡಿದವರು, ಅವರು ವೈದಿಕ ಧರ್ಮವನ್ನು ಶುದ್ಧೀಕರಿಸಿ ಪುನಃ ಸ್ಥಾಪಿಸಿದರು. ಶಂಕರರ ಆಧ್ಯಾತ್ಮಿಕತೆ ಹಾಗೂ ಬುದ್ಧನ ಚೈತನ್ಯಶೀಲ ಭಾವ ಭಾರತಕ್ಕೆ ಅತ್ಯವಶ್ಯಕ. ಶಂಕರರು ಅರಣ್ಯಗಳಲ್ಲಿ ಅಸ್ತವ್ಯಸ್ತವಾಗಿ ಹರಿದು ಹಂಚಿಹೋಗಿದ್ದ ಘನವೇದಾಂತ ತತ್ವಗಳನ್ನು ಸಂಗ್ರಹಿಸಿ ಮಠಗಳಲ್ಲಿಸಂರಕ್ಷಿಸಿದರು. ನಾನು ಮತ್ತು ನನ್ನ ಅನುಯಾಯಿಗಳು ಮಠಗಳಲ್ಲಿ ಸಂರಕ್ಷಿತವಾದ ವೇದಾಂತ ಸಂಪತ್ತನ್ನು ಮನೆಮನೆಗೆ ಹಂಚುತ್ತೇವೆ.”

”ಬುದ್ಧನು ಪೂರ್ವರಾಷ್ಟ್ರಗಳಿಗೆ ಸಂದೇಶವಿತ್ತರೆ ನಾನು ಪಶ್ಚಿಮರಾಷ್ಟ್ರಗಳಿಗೆ ವೇದಾಂತ ಸಂದೇಶವನ್ನು ನೀಡುವುದಿದೆ,” ಎಂದ ಸ್ವಾಮಿ ವಿವೇಕಾನಂದರು ಒಮ್ಮೆ ಗಂಭೀರವಾಗಿ ಹೇಳಿದ್ದೂ ಉಂಟು: ”ನನಗೆ ನಿಶ್ಚಯವಾಗಿ ಅನ್ನಿಸಿದೆ, ನಾನೇ ಶಂಕರನಾಗಿದ್ದೆ ಎಂದು” ನಿಜ! ಶಂಕರರ ಆಧ್ಯಾತ್ಮಿಕ ದೃಷ್ಟಿಕೋನದ ತಳಹದಿಯ ಮೇಲೆ ವಿವೇಕಾನಂದರು ಆಧುನಿಕ ದೃಷ್ಟಿಕೋನವನ್ನು ದಯಪಾಲಿಸಿ ಮಾನವೀಯತೆಯ ಪುನರ್ವಿಮರ್ಶನಗೈದದ್ದು ಸತ್ಯ; ಸ್ಪಷ್ಟ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top