ನಾನು ಬೆಂಗಳೂರಿಗೆ ವಾಪಸ್ ಬರುತ್ತೇನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಮೇ 10ರ ಸಂಜೆ 5 ಗಂಟೆ ಸುಮಾರಿಗೆ ‘ಲಂಡನ್‌ನಿಂದ ಬೆಂಗಳೂರಿಗೆ ರಾತ್ರಿ 9.45ಕ್ಕೆ ವಿಮಾನ ಹೊರಡಲಿದೆ’ ಎಂದು ‘ಏರ್ ಇಂಡಿಯಾ’ ಕಚೇರಿಯಿಂದ ಫೋನ್ ಕರೆ ಬಂದಾಕ್ಷಣ ನಂಬಲು ಸಾಧ್ಯವಾಗದೆ ಜೋರಾಗಿ ಅತ್ತು ಬಿಟ್ಟೆ.
ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಲಾಕ್‌ಡೌನ್ ನೋವಿನ ಕತೆಯನ್ನು ‘ವಿಜಯ ಕರ್ನಾಟಕ’ದ ಮುಂದೆ ತೆರೆದಿಟ್ಟದ್ದು ಹೀಗೆ. ಇದು ವಿದೇಶಗಳಲ್ಲಿ ಅತಂತ್ರರಾದ ಸಾವಿರಾರು ಮಂದಿಯ ಕತೆಯೂ ಹೌದು.
”ಸ್ನೇಹಿತೆಯೊಂದಿಗೆ ಎರಡು ತಿಂಗಳ ಕಾಲ ‘ಹೋಮ್ ಕ್ವಾರೆಂಟೈನ್’ನಲ್ಲಿದ್ದೆ. ಇನ್ನು ಕೆಲವು ವರ್ಷಗಳ ಕಾಲ ವಿಮಾನ ಪ್ರಯಾಣದತ್ತ ತಲೆ ಹಾಕುವುದಿಲ್ಲ. ವಿದೇಶಗಳಿಗಿಂತ ನಮ್ಮೂರೇ ಸಾಕು ಎನಿಸಿದೆ,” ಎಂದರು ಸೌಂದರ್ಯ.
ಇಂಗ್ಲೆಂಡ್‌ನ ವೇಲ್ಸ್ ನಗರದಲ್ಲಿರುವ ‘ಸ್ವಾನ್‌ಸೀ ವಿವಿ’ಯಲ್ಲಿ ಅಂತಿಮ ವರ್ಷದ ಬಿ.ಎಸ್ಸಿ (ಬಾಟನಿ) ಆನರ್ಸ್ ವ್ಯಾಸಂಗ ಮಾಡುತ್ತಿದ್ದ ಅವರು ಬಾಡಿಗೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಇಂಗ್ಲೆಂಡ್‌ನಲ್ಲಿ ಪ್ರತಿ ಮೂವರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಹರಡಿದ್ದು, ಲಾಕ್‌ಡೌನ್‌ನಿಂದಾಗಿ ವಿದೇಶಿ ವಿದ್ಯಾರ್ಥಿಗಳು ಹೋರ ಹೋಗದಂತೆ ನಿರ್ಬಂಧಿಸಲಾಗಿತ್ತು. ಆದರೆ, ಕೇಂದ್ರ ಸರಕಾರ ಭಾರತದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದ ಕಾರಣ ಲಂಡನ್‌ನಿಂದ ಸೋಮವಾರ ಬೆಂಗಳೂರಿಗೆ ಆಗಮಿಸಿದ ಮೊದಲ ವಿಮಾನದಲ್ಲಿ ಸೌಂದರ್ಯ ಅವರೂ ಬಂದು ಖಾಸಗಿ ಹೋಟೆಲೊಂದರಲ್ಲಿ ಕ್ವಾರೆಂಟೈನ್‌ನಲ್ಲಿದ್ದಾರೆ.
ವಿವಿಯ ಮೂವರಿಗೆ ಸೋಂಕು
”ನಮ್ಮ ವಿವಿಯ ಇಬ್ಬರು ಪ್ರೊಫೆಸರ್‌ಗಳು ಹಾಗೂ ಒಬ್ಬ ವಿದ್ಯಾರ್ಥಿಗೆ ಸೋಂಕು ಹರಡಿ, ಪ್ರೊಫೆಸರ್ ಮೃತಪಟ್ಟರು. ನಂತರ ವಿವಿಯನ್ನು ಸೀಲ್‌ಡೌನ್ ಮಾಡಲಾಯಿತು. ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕಾರಣ ಸೋಂಕು ವ್ಯಾಪಕವಾಗಿ ಹರಡಿತು. ಹಾಗಾಗಿ ಮಾ.6ಕ್ಕೆ ಇಡೀ ಇಂಗ್ಲೆಂಡ್ ಅನ್ನು ಲಾಕ್‌ಡೌನ್ ಮಾಡಲಾಯಿತು,” ಎಂದವರು ವಿವರಿಸಿದರು.
”ದುಬೈ ಮೂಲಕ ಬೆಂಗಳೂರಿಗೆ ಬರಲು ಹೊರಟೆವು. ಆದರೆ ಮಾ.22ರಂದು ಮಧ್ಯರಾತ್ರಿ ವಿಮಾನ ಇಳಿಯುವ ಮುಂಚೆ ದುಬೈನಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳಿಗೂ ನಿರ್ಬಂಧ ವಿಧಿಸಲಾಯಿತು. ಈ ವೇಳೆ ನಮಗೆ ಕಾಡಿದ ಅನಾಥ ಪ್ರಜ್ಞೆ ವಿವರಿಸಲಾಗದು. ಮತ್ತೆ ನಮ್ಮನ್ನು ದುಬೈಯಿಂದ ಲಂಡನ್‌ಗೆ ಕಳುಹಿಸಲಾಯಿತು. ಆ ವೇಳೆಗಾಗಲೇ ವೇಲ್ಸ್‌ನಲ್ಲಿದ್ದ ನನ್ನ ಮನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದೆ. ಮಧ್ಯರಾತ್ರಿ ಲಂಡನ್ ವಿಮಾನ ನಿಲ್ದಾಣದಲ್ಲಿಳಿದ ನಾನು ನಿಜವಾದ ನಿರಾಶ್ರಿತಳಾಗಿದ್ದೆ,” ಎಂದು ನೋವು ತೋಡಿಕೊಂಡರು.
ಕಾಪಾಡಿದ ಕುವೈತ್ ಸ್ನೇಹಿತೆ
”ಅನ್ಯಮಾರ್ಗವಿಲ್ಲದೆ ಮಧ್ಯರಾತ್ರಿ ನನ್ನ ಪರಿಸ್ಥಿತಿ ವಿವರಿಸಿ, ನನಗೆ ಮನೆ ನೀಡಿದ್ದ ಮಾಲೀಕರಿಗೆ ಎಸ್‌ಎಂಎಸ್ ಕಳುಹಿಸಿದೆ. ಬೇರೊಬ್ಬರ ಸಹಾಯದಿಂದ ಮನೆ ಬಾಗಿಲು ತೆರೆಸಿದರು. ಮನೆಯಲ್ಲಿ ವಿದ್ಯುತ್, ನೀರು, ಇಂಟರ್‌ನೆಟ್, ಫೋನ್ ಸೇರಿದಂತೆ ಎಲ್ಲಾ ಸಂಪರ್ಕ ಕಡಿತಗೊಳಿಸಲಾಗಿತ್ತು. ಈ ವೇಳೆ ನನ್ನ ಕುವೈತ್ ಸ್ನೇಹಿತೆ ‘ಊಟ ಮತ್ತು ವಿಟಮಿನ್ ಮಾತ್ರೆ’ಗಳನ್ನು ತಂದುಕೊಟ್ಟು ಉಪಚರಿಸಿದಳು,” ಎಂದು ಸ್ಮರಿಸಿದರು.