ಸಿದ್ದರಾಮಯ್ಯ ದರಬಾರಿನಲ್ಲಿ ಕಾಡಿದ ಪಟೇಲರ ನೆನಪು

ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮಾನವೀಯತೆಯ ದೃಷ್ಟಿಕೋನವಲ್ಲದೆ ಅದಕ್ಕೊಂದು ಆಡಳಿತಾತ್ಮಕ ಮುಖವೂ ಇದೆ. ಘಟನೆ ನಡೆದುಹೋದ ಬಳಿಕವೂ ಎಚ್ಚೆತ್ತುಕೊಳ್ಳದೆ, ವಿವೇಚನೆಯಿಂದ ಪ್ರಕರಣ ನಿಭಾಯಿಸದೇ ಇರುವುದು ಸರ್ಕಾರ ಗಾಢಾಂಧಕಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿ ಎನ್ನಬಹುದು.

ಸರ್ಕಾರಗಳ ಸ್ಥಿರತೆ-ಅಸ್ಥಿರತೆ ಕುರಿತು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಹೇಳಿದ ಉಪಮೆಯೊಂದು ಬಹಳ ಮಜವಾಗಿದೆ. ಆ ಸಂದರ್ಭವನ್ನು ನೆನೆಸಿಕೊಂಡರೆ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಆಗ ರಾಷ್ಟ್ರ ರಾಜಕಾರಣದಲ್ಲಾದ ಹಠಾತ್ ಬೆಳವಣಿಗೆಯ ಕಾರಣ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿ ಪ್ರಮೋಷನ್ ಪಡೆದರು. ಹೀಗಾಗಿ ಜೆ.ಎಚ್. ಪಟೇಲರು ರಾಜ್ಯದ ಮುಖ್ಯಮಂತ್ರಿಯಾದರು. ದೇವೇಗೌಡರ ಹನ್ನೊಂದು ತಿಂಗಳ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಜನತಾದಳದಲ್ಲಿ ರಾಜಕೀಯ ತಿಕ್ಕಾಟಗಳು ಶುರುವಾಗಿದ್ದವು. ಹೆಗಡೆ, ದೇವೇಗೌಡ, ಬೊಮ್ಮಾಯಿ ಹೀಗೆ ಒಬ್ಬರು ಮತ್ತೊಬ್ಬರ ಮುಖ ನೋಡಿಕೊಳ್ಳುವ ಸ್ಥಿತಿ ಇರಲಿಲ್ಲ. ಅದರ ಪರಿಣಾಮ ಪಟೇಲರ ಸರ್ಕಾರದಲ್ಲೂ ಬಣಗಳು ಹುಟ್ಟಿಕೊಂಡಿದ್ದರಿಂದ, ಸರ್ಕಾರ ಆಗಲೋ ಈಗಲೋ ಪತನವಾಗಬಹುದು ಎಂಬ ಚರ್ಚೆ ಶುರುವಾಗಿತ್ತು. ಹೀಗಾಗಿ ಸರ್ಕಾರದ ಭವಿಷ್ಯದ ಕುರಿತು ಹೋದಲ್ಲಿ ಬಂದಲ್ಲಿ ಮಾಧ್ಯಮದವರು ಪಟೇಲರನ್ನು ಒಂದೇ ಸಮನೆ ಪ್ರಶ್ನೆಮಾಡತೊಡಗಿದ್ದರು; ‘ನಿಮ್ಮ ಸರ್ಕಾರ ಇನ್ನೆಷ್ಟು ದಿನ? ನೀವು ಯಾವಾಗ ರಾಜೀನಾಮೆ ಕೊಡುತ್ತೀರಿ?’ ಎಂದೆಲ್ಲ ಪೀಡಿಸತೊಡಗಿದ್ದರು.

J.hಇಂಥ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಪಟೇಲರಿಗೂ ಸಾಕಾಗಿತ್ತು ಅಂತ ತೋರುತ್ತದೆ. ಒಂದು ದಿನ ಮುಂಜಾನೆ ವಿಧಾನಸೌಧದೆದುರು ಪಟೇಲರನ್ನು ಸುತ್ತುವರಿದಾಗ ಅವರೊಂದು ತುಸು ಅಶ್ಲೀಲವೇ ಆದರೂ ಆಗಿನ ಸ್ಥಿತಿಗೆ ಹೋಲುವ ಒಂದು ಕಥೆ ಹೇಳಿ ಮಾಧ್ಯಮದವರ ಬಾಯಿ ಮುಚ್ಚಿಸಿದ್ದರು. ಅದು ಹೀಗಿದೆ: ‘ಒಂದೂರಲ್ಲಿ ಒಂದು ದಷ್ಟಪುಷ್ಟವಾದ ಹೋರಿ(ಎತ್ತು)ಯಿತ್ತು. ಹಾಯಾಗಿ ಮೈ ತುಂಬಿಕೊಂಡಿದ್ದ ಹೋರಿಗೆ ಕಂತ್ರಿ ನಾಯಿಯೊಂದು ಗಂಟು ಬಿದ್ದಿತ್ತು. ಹಗಲು ರಾತ್ರಿ, ಮಳೆ ಗಾಳಿ ಚಳಿ ಬಿಸಿಲು ಭೇದವಿಲ್ಲದೆ ಅದು ಆ ಹೋರಿಯನ್ನು ಹಿಂಬಾಲಿಸುತ್ತಲೇ ಇತ್ತು. ಆ ನಾಯಿಗೆ ಹೋರಿಯ ವೃಷಣದ ಮೇಲೇ ಕಣ್ಣು. ಅದು ಅಲ್ಲಾಡುವುದನ್ನು ಕಂಡು ಆಗ ಬೀಳಬಹುದು ಈಗ ಬೀಳಬಹುದು; ಬಿದ್ದರೆ ತಾನದನ್ನು ತಿನ್ನಬಹುದೆಂದು ಆ ನಾಯಿ ಜೊಲ್ಲು ಸುರಿಸುತ್ತಿತ್ತು. ತೀರಾ ಹತ್ತಿರ ಹೋಗಿ ಬಾಯಿ ಹಾಕಲೂ ಭಯ. ಏಕೆಂದರೆ ಆ ಹೋರಿ ಅಷ್ಟು ಭಯಂಕರವಾಗಿತ್ತು. ಪಾಪ… ಆ ನಾಯಿಗೇನು ಗೊತ್ತು, ಅಲ್ಲಾಡುವುದು ಅದರ ಜಾಯಮಾನ. ಹಾಗಂತ ಅದು ಬಿದ್ದುಹೋಗುವಂಥದ್ದೇನೂ ಅಲ್ಲ ಅಂತ’. ಪಟೇಲರು ಇಷ್ಟು ಹೇಳಿ, ‘ಅಲ್ಲಾರಿ ನಿಮ್ದೊಳ್ಳೆ ಕತೆ ಆಯಿತಲ್ಲ’ ಎಂದಾಗ ಪತ್ರಕರ್ತರು ಮರುಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಮತ್ತೆಂದೂ ಪಟೇಲರ ಬಳಿ ಸರ್ಕಾರದ ಅಸ್ಥಿರತೆ ವಿಚಾರವಾಗಿ ಪತ್ರಕರ್ತರು ಮಾತನಾಡಲಿಲ್ಲ.

ಹಾಗೆನೋಡಿದರೆ ಪಟೇಲರು ನಿಜವಾಗಿ ಉತ್ತಮ ಆಡಳಿತಗಾರರಾಗಿದ್ದರು. ನಯನಾಜೂಕಿನಿಂದ ಅಧಿಕಾರಿಗಳನ್ನು ದುಡಿಸಿಕೊಳ್ಳುವ ಚಾಣಾಕ್ಷಮತಿಯೂ ಅವರಾಗಿದ್ದರು. ನಿಜಜೀವನದಲ್ಲಿ ನಗೆಚಾಟಿಕೆ ಮೂಲಕವೇ ಜನಪ್ರಿಯರಾಗಿದ್ದರೂ ಆಡಳಿತದಲ್ಲಿ ಬಿಗಿ ಹಿಡಿತ ಇಟ್ಟಿದ್ದರು. ಕಣ್ಣಿಗೆ ಕಾಣಿಸುವಂತಹ ಅನೇಕ ಉತ್ತಮ ಯೋಜನೆಗಳನ್ನು ಅವರು ಅನುಷ್ಠಾನಗೊಳಿಸಿದ್ದರು. ಉದಾಹರಣೆಗೆ ಹೇಳಬೇಕೆಂದರೆ ಬೆಂಗಳೂರಲ್ಲಿ ಫ್ಲೈಓವರ್​ಗಳನ್ನು ಪರಿಚಯಿಸಿದ್ದು ಪಟೇಲರೇ. ಬೆಂಗಳೂರಿನ ಅತಿ ಉದ್ದದ ಕೆಆರ್ ಮಾರ್ಕೆಟ್ ಫ್ಲೈಓವರ್ ಪಟೇಲರ ಕನಸಿನ ಫಲ. ಎಲ್ಲರೂ ಎಸ್ಸೆಂ ಕೃಷ್ಣ ಅಂತಾರೆ. ಅದು ನಿಜವಲ್ಲ. ಹಾಗಿದ್ದ ಪಟೇಲರು ದೇವೇಗೌಡ, ಹೆಗಡೆ, ಬೊಮ್ಮಾಯಿ ಈ ಬಣಗಳ ತಿಕ್ಕಾಟದಿಂದಾಗಿ ಕೊನೆ ಕೊನೆಗೆ ಏನೂ ಮಾಡದಂಥ ಸ್ಥಿತಿ ತಲುಪಿದ್ದರು. ಆ ಕ್ಷಣಕ್ಕೆ ತಿಳಿಹಾಸ್ಯದ ಮೂಲಕ ಪರಿಸ್ಥಿತಿ ನಿಭಾಯಿಸುವ ಛಾತಿ ಇದ್ದಿದ್ದರಿಂದ ಅವರು ಹಾಗೂ ಹೀಗೂ ಸರ್ಕಾರದ ಗಾಡಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಅವರ ಆ ಅಸಹಾಯಕ ಸ್ಥಿತಿಯ ಒಟ್ಟು ಪರಿಣಾಮ ಏನಾಯಿತೆಂದರೆ ಮುಂದೆ ಜನತಾದಳ ಸಂಪೂರ್ಣವಾಗಿ ಕರ್ನಾಟಕದ ಜನರ ತಿರಸ್ಕಾರಕ್ಕೆ ಒಳಗಾಯಿತು.

ಪಕ್ಷ ಗಟ್ಟಿಯೇ?: ಈಗ ಸಿದ್ದರಾಮಯ್ಯ ಸರ್ಕಾರದ ಅವಾಂತರಗಳನ್ನು ನೋಡುತ್ತಿದ್ದರೆ ಈ ಹಿಂದಿನ ಜನತಾದಳ ಸರ್ಕಾರದ ನೆನಪುಗಳು ಮರುಕಳಿಸುತ್ತವೆ. ಅಂದು ದಳಕ್ಕೆ ಆ ಸ್ಥಿತಿ ಬರುವುದರಲ್ಲಿ ಪಟೇಲರ ಪಾತ್ರವೇನೂ ಇರಲಿಲ್ಲ. ಆದರೆ ಇಂದು ಈ ಸ್ಥಿತಿ ನಿರ್ಮಾಣ ಆಗುವುದರಲ್ಲಿ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಇಬ್ಬರದೂ ಪಾತ್ರವಿದೆ. ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ಕುಸಿದು ಕುಳಿತಿರುವುದರಿಂದ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಬದಿಗೆ ಸರಿಸಬಲ್ಲ ಮತ್ತೊಬ್ಬ ಪರ್ಯಾಯ ನಾಯಕ ಇಲ್ಲದ್ದರಿಂದ ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ. ಒಬ್ಬಿಬ್ಬರು ಡಿವೈಎಸ್ಪಿಗಳಲ್ಲ, ಇಂಥ ಇನ್ನೂ ಹತ್ತುಮಂದಿ ನೇಣು ಬಿಗಿದುಕೊಂಡರೂ ಸಿದ್ದರಾಮಯ್ಯ ನೆಮ್ಮದಿಗೆ ಭಂಗಬರುವುದಿಲ್ಲ. ಹಾಗಂದಮಾತ್ರಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯ ಅಷ್ಟೇ ಗಟ್ಟಿ ಎಂದು ಹೇಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಆ ಪಕ್ಷಕ್ಕೆ ಮರ್ವಘಾತವಾಗುವ ಸಂದರ್ಭ ಎದುರಾದರೂ ಅಚ್ಚರಿಯಿಲ್ಲ.

ಡಿವೈಎಸ್ಪಿ ಗಣಪತಿ ಸಾವಿಗೆ ಸಂಬಂಧಿಸಿ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಜೆಡಿಎಸ್​ನ ಎಚ್.ಡಿ.ಕುಮಾರಸ್ವಾಮಿ ಅವರು ಉಲ್ಲೇಖಿಸಿದ ಒಂದು ಪ್ರಸಂಗ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಂತಿತ್ತು. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ನಂತರ ಸಿದ್ದರಾಮಯ್ಯ ಎರಡು ದಿನ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಮೊದಲ ದಿನ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಾರನೇ ದಿನ ಎಲ್ಲ ಜಿಲ್ಲಾಧಿಕಾರಿಗಳನ್ನು ಮುಂದೆ ಕುಳ್ಳಿರಿಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ‘‘ಅಲ್ಲಾರಿ ಇದೇನ್ರಿ ಆಡಳಿತ ವ್ಯವಸ್ಥೆ. ಇದನ್ನೇನು ಸರ್ಕಾರ ಅಂತ ಕರೀತಾರೇನ್ರಿ… ನಾನು ಬರೆದ ಪತ್ರಕ್ಕೇ ಎಂಟು-ಹತ್ತು ತಿಂಗಳಾದ್ರೂ ಉತ್ತರ ಕೊಡುವ ಸೌಜನ್ಯವೂ ಇಲ್ಲವಲ್ರಿ ನಿಮಗೆ’’ ಎಂದು ತರಾಟೆಗೆ ತೆಗೆದುಕೊಂಡಿದ್ದನ್ನು ಕುಮಾರಸ್ವಾಮಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಇದು ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಸರ್ಕಾರಕ್ಕೆ ಕೊಟ್ಟುಕೊಂಡ ಸರ್ಟಿಫಿಕೇಟ್ ಎಂದು ಮೊನಚಾಗಿ ಚುಚ್ಚಿದ್ದರು.

ಹಾಗಂತ ಸಿದ್ದರಾಮಯ್ಯನವರು ಅಧಿಕಾರಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡದ್ದು ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಎರಡು ಮೂರು ಸಲ ಹೀಗೆ ಅವರು ಗದರಿದ್ದಾರೆ. ಹೀಗೆ ನೆನಪಾದಾಗೊಮ್ಮೆ ಬೊಬ್ಬಿರಿದು ಸುಮ್ಮನಾದರೆ, ನಿರಂತರ ಫಾಲೋಅಪ್ ಇಲ್ಲದೇ ಹೋದರೆ, ಅಧಿಕಾರಿಗಳನ್ನು ದುಡಿಸಿಕೊಳ್ಳುವ ಪರಿಶ್ರಮ, ಜಾಣ್ಮೆ ಇಲ್ಲದಿದ್ದರೆ, ಅಧಿಕಾರಿಗಳನ್ನು ದುಡಿಸಿಕೊಳ್ಳುವ ಚಾರ್ವಿುಂಗ್ ಮಂತ್ರಿಗಳ ಪಡೆಯನ್ನು ಜೊತೆಯಲ್ಲಿ ಇಟ್ಟುಕೊಳ್ಳದಿದ್ದರೆ, ಬದಲಾದ ಪರಿಸ್ಥಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಆಡಳಿತ ನಡೆಸುವ ತಂತ್ರಗಾರಿಕೆ, ಚಾಣಾಕ್ಷತನ ಮೈಗೂಡಿಸಿಕೊಳ್ಳದೇ ಹೋದರೆ, ತಳಮಟ್ಟದಲ್ಲಿ ಭ್ರಷ್ಟಾಚಾರವನ್ನು ಬಗ್ಗು ಬಡಿಯದೇ ಹೋದರೆ, ದಕ್ಷತೆಯ ಮಾನದಂಡವನ್ನೇ ಇಟ್ಟುಕೊಳ್ಳದೆ ಕೇವಲ ಜಾತಿ ಹಿನ್ನೆಲೆಯಿಂದಲೇ ಅಧಿಕಾರಿಗಳಿಗೆ ಮಣೆ ಹಾಕುತ್ತ ಹೋದರೆ, ಒಳ್ಳೆಯ ದಕ್ಷ ಅಧಿಕಾರಿಗಳನ್ನು ಮೂಲೆಗೆ ಸರಿಸುತ್ತ ಹೋದರೆ ಸರ್ಕಾರಿ ಯಂತ್ರ ಹಡಾಲೆದ್ದು ಹೋಗದೆ ಮತ್ತಿನ್ನೇನಾಗುತ್ತದೆ ಹೇಳಿ ನೋಡೋಣ…

ವಾಸ್ತವದಲ್ಲಿ ಸರ್ಕಾರವನ್ನೂ ಒಂದು ಕಾರ್ಪೆರೇಟ್ ಕಂಪನಿ ರೀತಿಯಲ್ಲೇ ನಡೆಸುವ ಕಾಲವಿದು. ಲಾಭ ಮತ್ತು ಸೇವೆಯ ಲೆಕ್ಕವನ್ನು ಪ್ರತ್ಯೇಕವಾಗಿ, ಸಮತ್ವದಿಂದ ನೋಡಿದರಷ್ಟೇ ಇರುವ ಸಂಪನ್ಮೂಲದಲ್ಲಿ ಏನಾದರೂ ಒಂದಿಷ್ಟು ಒಳ್ಳೆ ಕೆಲಸ ಮಾಡಲು ಸಾಧ್ಯ. ಅಂಥದ್ದರಲ್ಲಿ ಸರ್ಕಾರಕ್ಕೆ ಆಧುನಿಕತೆಯ ಸ್ಪರ್ಶವನ್ನೇ ಕೊಡದೆ, ಕೇವಲ ಭಾಗ್ಯಗಳನ್ನು ಕರುಣಿಸುತ್ತ ಹೋದರೆ ಏನಾದೀತು? ಅಲ್ಲವೇ.

ಹೊಸ ಚಿಂತನೆ ಬೇಕು: ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಆಪ್ತವಾಗಿ ಹೇಳಿದ ಮಾತೊಂದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾದೀತು. ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ನಂತರ ಎಲ್ಲ ಜಿಲ್ಲಾಧಿಕಾರಿಗಳನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೇರಿಸಿ ಬೆಳಗಿನಿಂದ ಸಂಜೆಯವರೆಗೆ ಸಭೆ ನಡೆಸಿದ್ದನ್ನು ಈ ಮೊದಲು ಹೇಳಿದ್ದೇನೆ. ಆ ಸಭೆಯನ್ನು ನಡೆಸಿದ ರೀತಿಯ ಬಗ್ಗೆ ಆ ಐಎಎಸ್ ಅಧಿಕಾರಿಯ ಆಕ್ಷೇಪವಿತ್ತು. ಒಂದು ದಿನದ ಸಭೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿಭಾಗಾಧಿಕಾರಿಗಳು ಬರಲು ಒಂದು ದಿನ, ಹೋಗಲು ಒಂದು ದಿನ. ಒಂದಿಡೀ ದಿನ ಮೀಟಿಂಗ್. ಹೀಗೆ ಮೂರು ದಿನ ಕಾಲಹರಣ ಮಾಡಿದರು. ಅವರು ಬಂದು ಹೋಗುವ ಖರ್ಚು, ಹೋಟೆಲ್ ವಾಸ್ತವ್ಯದ ವೆಚ್ಚ ಸೇರಿ ಕೋಟ್ಯಂತರ ರೂ. ತೆರಿಗೆ ಹಣ ಪೋಲಾಯಿತು. ಅದರ ಬದಲು ಸಿಎಂ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ sidh_650_110415124959ಅದೇ ಮೀಟಿಂಗ್ ನಡೆಸಬಹುದಿತ್ತು. ಬಹುತೇಕ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ವ್ಯವಸ್ಥೆ ಈಗಾಗಲೇ ಇದೆ. ಇಲ್ಲದ ಕಡೆ ವ್ಯವಸ್ಥೆ ಮಾಡುವುದು ಕಷ್ಟವೇನಲ್ಲ. ಯಾಕೆಂದರೆ ಜಿಲ್ಲಾಧಿಕಾರಿಗಳೇ ಸರ್ಕಾರದ ಆಡಳಿತ ವ್ಯವಸ್ಥೆಯ ತಳಪಾಯ. ಡಿಸಿಗಳೊಂದಿಗೆ ನಿರಂತರವಾಗಿ ವಾರಕ್ಕೆ ಅದಿಲ್ಲ ಅಂದರೆ ಕನಿಷ್ಠಪಕ್ಷ ಹದಿನೈದು ದಿನಕ್ಕೊಮ್ಮೆ ಮುಖಾಮುಖಿ ಮಾತುಕತೆ ನಡೆಸುತ್ತಿದ್ದರೂ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬಹುದು. ಪ್ರಧಾನಿ ಮೋದಿ ಅದನ್ನೇ ಮಾಡುತ್ತಿದ್ದಾರೆ. ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ, ಪೊಲೀಸ್ ಮುಖ್ಯಸ್ಥರೊಂದಿಗೆ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳೊಂದಿಗೆ ಕಾಲಕಾಲಕ್ಕೆ ವಿಡಿಯೋ ಕಾನ್ಪರೆನ್ಸ್​ನಲ್ಲಿ ಮಾತುಕತೆ ನಡೆಸುತ್ತಾರೆ. ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಯ ಪರಾಮರ್ಶೆ ಮಾಡುತ್ತಾರೆ. ನಮ್ಮ ಮುಖ್ಯಮಂತ್ರಿಗಳೂ ಹಾಗೇಕೆ ಮಾಡಬಾರದು ಎಂಬುದು ಆ ಅಧಿಕಾರಿಯ ಪ್ರಶ್ನೆಯಾಗಿತ್ತು. ಇನ್ನಾದರೂ ಯೋಚನೆ ಮಾಡಬೇಕು.

ನಮ್ಮ ನೇತಾರರು ಅದೆಷ್ಟು ಅಪ್ರಾಯೋಗಿಕ, ಅವಾಸ್ತವಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂಬುದಕ್ಕೆ ಮುಖ್ಯಮಂತ್ರಿಗಳ ಜನತಾದರ್ಶನವೇ ಒಂದು ಒಳ್ಳೆಯ ನಿದರ್ಶನ. ಪಂಚಾಯಿತಿಯಿಂದ ಹಿಡಿದು ಸಚಿವಾಲಯದವರೆಗೆ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ, ಸಾರ್ವಜನಿಕರ ಅಹವಾಲನ್ನು ಆಲಿಸಿ ಕಷ್ಟಕೋಟಲೆ ಪರಿಹರಿಸಿದರೆ ಈ ಜನತಾದರ್ಶನ ಎಂಬ ಷೋ ಏಕೆ ಬೇಕಾಗುತ್ತದೆ? ತಹಶೀಲ್ದಾರು, ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜನತಾದರ್ಶನ ಮಾಡಬಹುದು. ಅವರೆಲ್ಲರೂ ಹಾಗೆ ಮಾಡುವಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಯ ಕೆಲಸವೇ ಹೊರತು, ಅವರು ಸ್ವೀಕರಿಸಬೇಕಾದಂತಹ ಅರ್ಜಿಗಳನ್ನು ಸ್ವೀಕರಿಸಿ ಕಸದ ಬುಟ್ಟಿಗೆ ತುರುಕಲು ದಿನಗಟ್ಟಲೇ ಸಮಯ ಹಾಳುಮಾಡುವುದು ಸಿಎಂ ಆದವರ ಕೆಲಸ ಅಲ್ಲವೇ ಅಲ್ಲ. ಹೊಸ ಹೊಸ ಯೋಚನೆಗಳಿಂದ ಮಾಡಲು ಕೈತುಂಬ ಕೆಲಸ, ತಲೆತುಂಬ ಆಲೋಚನೆ ಇದ್ದರೆ ಮಾತ್ರ ಇಂಥದೆಲ್ಲ ಅರ್ಥವಾಗುತ್ತದೆ. ಆಗಲೇ ಅಂಥ ಪರ್ಯಾಯ ಚಿಂತನೆಗಳು ಹುಟ್ಟಿಕೊಳ್ಳುವುದು ತಾನೆ.

ಈಗ ವಿಧಾನಸಭೆಯಲ್ಲಿ ನಡೆಯುತ್ತಿರುವ ರಾದ್ಧಾಂತ, ರಾಜಕೀಯ ಬೃಹನ್ನಾಟಕವನ್ನೇ ತೆಗೆದುಕೊಳ್ಳೋಣ. ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮಾನವೀಯತೆಯ ದೃಷ್ಟಿಕೋನವಲ್ಲದೆ ಅದಕ್ಕೊಂದು ಆಡಳಿತಾತ್ಮಕ ಮುಖವೂ ಇದೆ. ಸರ್ಕಾರದ ವ್ಯವಸ್ಥೆ ಹೇಗೆ ದಿನೇದಿನೆ ಸಡಿಲವಾಗುತ್ತಿದೆ ಎಂಬುದಕ್ಕೆ ಇವೆಲ್ಲ ನಿದರ್ಶನ ಎಂಬುದನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಿದೆ. ವಿಚಿತ್ರ ಅಂದರೆ ಘಟನೆ ನಡೆದುಹೋದ ಬಳಿಕವೂ ಎಚ್ಚೆತ್ತುಕೊಳ್ಳದೆ, ವಿವೇಚನೆಯಿಂದ ಪ್ರಕರಣ ನಿಭಾಯಿಸದೇ ಇರುವುದು ಒಂದು ಸರ್ಕಾರ ಗಾಢಾಂಧಕಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿ ಎನ್ನಬಹುದು. ಹಾಗಾದರೆ ಹೈದರಾಬಾದ್​ನ ರೋಹಿತ್ ವೇಮುಲನ ಜೀವಕ್ಕಿಂತ ನಮ್ಮ ಡಿವೈಎಸ್ಪಿಗಳ ಜೀವದ ಬೆಲೆ ಕಡಿಮೆಯೇ? ರಾಹುಲ್ ಗಾಂಧಿ ಅದೇಕೆ ಈಗ ಮೌನಕ್ಕೆ ಶರಣಾಗಿದ್ದಾರೆ?

ಇಬ್ಬರು ಡಿವೈಎಸ್ಪಿಗಳು ಒಂದು ವಾರದ ಅಂತರದಲ್ಲಿ ಅನ್ಯಾಯವಾಗಿ ಆತ್ಮಹತ್ಯೆಗೆ ಶರಣಾದರು. ಸರ್ಕಾರ ಯಾವುದೇ ಇರಲಿ ಇಂಥ ದುರಂತಗಳು ನಡೆಯಬಾರದು. ಒಂದೊಮ್ಮೆ ನಡೆದರೂ ಸರ್ಕಾರ ಹಿಂದೆಮುಂದೆ ನೋಡದೆ ತೀರ್ವನ ಪ್ರಕಟಿಸಿಬಿಡಬಾರದು. ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಸುದ್ದಿ ಬರುತ್ತಿದ್ದಂತೆ ಆತ್ಮಹತ್ಯೆ ಅಂದರು. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿದ್ದ ಎಂದರು. ಡಿವೈಎಸ್ಪಿ ಗಣಪತಿ ಮಾನಸಿಕ ಅಸ್ವಸ್ಥ ಎಂದುಬಿಟ್ಟಿತು ಸರ್ಕಾರ. ಹಾಗಾದರೆ ತನಿಖೆಗೆ ಇನ್ನೆಲ್ಲಿಯ ಬೆಲೆ? ಎಲ್ಲದಕ್ಕಿಂತ ಬೇಸರ ತರಿಸಿದ್ದು ಮಾತಿನ ಓಘದಲ್ಲಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ‘ನಿಮ್ಮ ಜಾತಕ ಬಿಚ್ಚಿಡಲಾ? ನಿಮ್ಮವರು ಜೈಲಿಗೆ ಹೋಗಲಿಲ್ವಾ? ನಿಮ್ಮವರು ರೇಪ್ ಮಾಡಲಿಲ್ಲವಾ?’ ಎಂದಿದ್ದು. ಜೈಲಿಗೆ ಹೋದದ್ದು, ರೇಪ್ ಮಾಡಿದ್ದು ಯಾವುದೂ ಇನ್ನೂ ಅಂತಿಮ ತೀರ್ವನ ಆಗಿಲ್ಲವಲ್ಲ? ಇದೆಲ್ಲ ನಡೆಯುವಾಗ ವಿಧಾನಸೌಧ, ಸದನದ ಕಲಾಪ ಕಣ್ತುಂಬಿಕೊಳ್ಳಲು ಬಂದಿದ್ದ ನೂರಾರು ಮಕ್ಕಳು ವೀಕ್ಷಕರ ಗ್ಯಾಲರಿಯಲ್ಲಿ ಮೌನವಾಗಿ ಕುಳಿತಿದ್ದರು… ಛೇ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top