ಶ್ರಾವಣ ಪ್ರತಿದಿನವೂ ಪಾವನ

– ಡಾ. ಆರತೀ ವಿ.ಬಿ.

ಸನಾತನ ಧರ್ಮವು ಪ್ರಕೃತಿಯಲ್ಲಿ ದೇವರನ್ನೂ ಅವನ ಪೋಷಕಶಕ್ತಿಯನ್ನೂ ಗುರುತಿಸಿ ಆರಾಧಿಸುವ ಸುಂದರ ಸಂಸ್ಕೃತಿಯಾಗಿದೆ. ಪ್ರತಿದಿನವೂ ಸೂರ್ಯನ ಉದಯಾಸ್ತಮಾನಗಳನ್ನೂ ಸೋಜಿಗದ ಕಣ್ಣಿಂದ ನೋಡಿ ನಲಿಯುತ್ತ, ಅದು ನಮಗೀಯುವ ಆಯುರಾಗ್ಯಗಳಿಗಾಗಿ ಕೃತಜ್ಞತೆಯಿಂದ ಅಘ್ರ್ಯ ನೀಡುತ್ತಲೇ ದಿನವನ್ನು ಪ್ರಾರಂಭಿಸುತ್ತೇವೆ. ಪ್ರತಿಯೊಂದು ನೈಸರ್ಗಿಕ ಬದಲಾವಣೆಗಳನ್ನೂ ತತ್ಸಂಬಂಧಿತ ಫಲ ಪುಷ್ಪ ಶಾಖಾದಿಗಳ ವಿಕಾಸವನ್ನೂ ಚಳಿ- ಗಾಳಿ- ಬಿಸಿಲು- ಮಳೆಗಳನ್ನೂ ‘ಬದುಕಿನ ಸ್ವಾರಸ್ಯಕರ ಅನುಭವಗಳು’ ಎಂದು ಅಂಗೀಕರಿಸುತ್ತ, ಅದೆಲ್ಲವನ್ನೂ ದೇವರ ಪ್ರಸಾದವಾಗಿ ಸ್ವೀಕರಿಸುವ ಭಾವ ನಮ್ಮದು. ಪ್ರಕೃತಿಯಲ್ಲೇ ದೇವರನ್ನು ಆರಾಧಿಸುವವರಾದ ಸನಾತನಧರ್ಮೀಯರ ಪಾಲಿಗೆ ಪ್ರತಸಂವತ್ಸರವೂ, ಆಯನವೂ, ದಿನವೂ, ವಾರವೂ, ಪಕ್ಷವೂ, ಮಾಸವೂ, ಋುತುವೂ, ನಕ್ಷ ತ್ರವೂ ಶ್ರೀಲಕ್ಷ್ಮೀಯ ಸುಂದರ ಲೀಲಾಭಿವ್ಯಕ್ತಿಗಳೆ! ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸವು ಅನೇಕ ವೈಶಿಷ್ಟ್ಯ-ಪ್ರಾಶಸ್ತ್ಯ ಹೊಂದಿದೆ.
ಉತ್ತರ ಭಾರತದಲ್ಲಿ ಶ್ರಾವಣವನ್ನು ಸಾವನ್‌ ಎಂದು ಕರೆಯುತ್ತಾರೆ. ಕೇಕೆ ಹಾಕುತ್ತ ಕಪ್ಪು ಮೋಡಗಳಿಗಡ್ಡವಾಗಿ ಹಾರಾಡುವ ಸಾಲು- ಸಾಲು ಬೆಳ್ಳಕ್ಕಿಗಳು ಸ್ವರ್ಗದ ಬಾಗಿಲಿಗೆ ತೋರಣಕಟ್ಟಿದಂತೆ ಕಾಣಬರುತ್ತವೆ. ನಿರಂತರ ಸುರಿಯುವ ಮಳೆಯಿಂದಾಗಿ, ವನಸ್ಪತಿಗಳು ಶುಭ್ರವಾಗಿ ಥಳಥಳಿಸುತ್ತವೆ. ಮಳೆಬಿಂದುಗಳನ್ನು ಅಂಚಿನಲ್ಲಿ ತಳೆದು ಬಾಗುವ ಮೋಹಕ ಹೂವೆಲೆಚಿಗುರುಗಳ ಪರಿಮಳವು, ಒದ್ದೆಮಣ್ಣಿನ ಸಿರಿಗಂಪಿನೊಂದಿಗೆ ಬೆರೆತು ಎಲ್ಲೆಲ್ಲೂ ಪಸರಿಸುತ್ತದೆ.
ಸೂರ್ಯಚಂದ್ರರೂ ಶ್ರಾವಣದ ಮೋಡಗಳ ಪರದೆಯ ಹಿಂದೆ ಮತ್ತೆ ಮತ್ತೆ ವಿಶ್ರಮಿಸುತ್ತ ಭೂಮಿಯನ್ನು ತಂಪಿನಲ್ಲಿ ತೋಯಿಸುತ್ತವೆ.
ಶ್ರಾವಣ ಬಂತೆಂದರೆ ಸಾಕು, ಸಾಲಾಗಿ ವ್ರತೋತ್ಸವಗಳು ಪ್ರಾರಂಭವಾಗುತ್ತವೆ! ಈಗೇನೋ ಕೊರೊನಾದಿಂದಾಗಿ ಜನ ಜತೆ ಸೇರುವಂತಿಲ್ಲ. ಆದರೆ ಮನೆಯೊಳಗೇ ವ್ರತ ಪೂಜೆ ಆಯನಗಳನ್ನು ಮಾಡಿಕೊಂಡು ಸಂತೋಷಪಡಬಹುದು.

– ಹಬ್ಬಗಳಿಗೆ ಮುನ್ನುಡಿ –
ಶ್ರಾವಣದ ಎಲ್ಲ ದಿನಗಳೂ ಪ್ರಶಸ್ತ ಎನಿಸಿವೆ. ಶ್ರಾವಣ ಮಾಸದುದ್ದಕ್ಕೂ ಉಪವಾಸ, ಪೂಜೆ, ಪಾರಾಯಣ, ದಾನಾದಿಗಳನ್ನು ಮಾಡುವ ಪದ್ಧತಿಯಿದೆ. ಶ್ರಾವಣದ ವಿಶೇಷ ದಿನಗಳ ಬಗ್ಗೆ ನೋಡೋಣ:
ಶ್ರಾವಣ ಶನಿವಾರ: ವಿಷ್ಣುಪೂಜೆಗೆ ಶ್ರಾವಣ ಶನಿವಾರಗಳು ತುಂಬ ಪ್ರಶಸ್ತ. ಅದರಲ್ಲೂ ತಿರುಪತಿ, ಗುರುವಾಯೂರು, ರಂಗಪಟ್ಟಣಾದಿಗಳ ವಿಷ್ಣುದೇಗುಲಗಳಲ್ಲಂತೂ ಶ್ರಾವಣ ಶನಿವಾರಗಳಂದು ದೇವರಿಗೂ ಅರ್ಚಕರಿಗೂ ಪುರುಸೊತ್ತೇ ಸಿಗದಷ್ಟು ಭಕ್ತಭೃಂಗಗಳ ಹಾವಳಿ. ಮನೆ, ಮಠ, ದೇಗುಲಗಳಲ್ಲೆಲ್ಲ ವೇದಘೋಷ, ವಿಷ್ಣುಸಹಸ್ರನಾಮ ಪಾರಾಯಣ, ಪೂಜೆಹೋಮ, ಭಜನೆ, ಹರಿಕಥೆ, ಗೀತನೃತ್ಯಾದಿ ಸೇವೆಗಳು, ಅನ್ನಸಂತರ್ಪಣೆಯೂ ಭರದಿಂದ ಜರುಗುತ್ತವೆ.

ಶ್ರಾವಣ ಸೋಮವಾರ
ಆಷಾಢದಿಂದ ಕಾರ್ತೀಕದವರೆಗಿನ ಸೋಮವಾರಗಳ ಸರಣಿಯು ಶೈವವ್ರತಾಚರಣೆಗಳಿಗೆ ತುಂಬ ಪ್ರಶಸ್ತ. 16 ಸೋಮವಾರಗಳ ವ್ರತವನ್ನಾಚರಿಸುವುದೂ ಈ ಕಾಲದಲ್ಲೇ. ಶ್ರಾವಣ ಸೋಮವಾರಗಳಂದು ಶಿವಾಲಯಗಳಲ್ಲಿರುದ್ರ, ನಮಕ, ಚಮಕಗಳ ಪಠಣ, ನಿರಂತರ ರುದ್ರಾಭಿಷೇಕ, ಪೂಜೆ, ಪಾರಾಯಣ, ಹರಿಕಥೆ, ಭಜನೆ, ಗೀತನೃತ್ಯಗಳು ಭರದಿಂದ ಸಾಗುತ್ತವೆ. ಮನೆಮನೆಯಲ್ಲೂ ಪೂಜೆ, ತಾಂಬೂಲದಾನಾದಿಗಳು ನಡೆಯುತ್ತವೆ. ಪ್ರದೋಷ ಕಾಲದಲ್ಲಂತೂ ಎಲ್ಲೆಲ್ಲೂ ಘಂಟೆ, ಜಾಗಟೆಗಳ ನಿನಾದವೂ ಹೂ, ಅಗರು, ಚಂದನ, ಕರ್ಪೂರಗಳ ಸಿರಿಗಂಪೂ, ಶಾಲ್ಯಾನ್ನ, ಹವಿಸ್ಸುಗಳ ಸೊಂಪು, ತಾರಕಮಂತ್ರ ವೇದಘೋಷಗಳ ಇಂಪೂ ತಾರಕಕ್ಕೇರುತ್ತವೆ. ವರ್ಷವಿಡೀ ಮಾಡಲಾಗದ ಶಿವಾರಾಧನೆಗಳನ್ನು ಈ ಶ್ರಾವಣ ಸೋಮವಾರಗಳಲ್ಲಿ ಮಾಡಿ ಪೂರೈಸಬಹುದು ಎನ್ನುವ ನಂಬಿಕೆಯಿದೆ.

ಶ್ರಾವಣ ಶುಕ್ರವಾರ
ಶ್ರಾವಣ ಶುಕ್ರವಾರಗಳು ದೇವಿಯ ಆರಾಧನೆಗೆ ತುಂಬ ವಿಶೇಷ. ಶಕ್ತಿ ಉಪಾಸಕರೂ, ದೇವಿಯನ್ನು ಕುಲದೇವತೆಯಾಗಿ ಹೊಂದಿದವರೂ ಈ ಕಾಲದಲ್ಲಿ ಬಹಳ ನೇಮದಿಂದಿರುತ್ತಾರೆ. ದೇವೀ ಆಲಯಗಳಲ್ಲಿ ವಿಶೇಷ ಅಲಂಕಾರಗಳು, ಉತ್ಸವ, ಸೇವೆಗಳ ಸಂಭ್ರಮ ಮುಗಿಲುಮುಟ್ಟುತ್ತದೆ.

ವರಮಹಾಲಕ್ಷ್ಮೀ ವ್ರತ
ಶ್ರಾವಣದ ಎರಡನೆಯ ಶುಕ್ರವಾರವು ಕರ್ನಾಟಕದಲ್ಲಿ ವರಮಹಾಲಕ್ಷಿ ವ್ರತವಾಗಿ ಅತ್ಯಂತ ಪ್ರಸಿದ್ಧ. ಚಾರುಮತಿ ಎಂದ ಬಡವಿಯು ಈ ವ್ರತವನ್ನಚರಿಸಿ ಅತ್ಯಂತ ಶ್ರೀಮಂತಳಾದ ಕಥೆಯಿದೆ. ಹಿಂದಿನ ದಿನಗಳಿಂದಲೇ ಪೂಜಾ ಸಾಮಗ್ರಿಗಳನ್ನು ಹೊಂದಿಸುತ್ತ, ವ್ರತದಿನದಂದು, ಅಂಗಳವನ್ನು ತೊಳೆದು, ರಂಗವಲ್ಲಿ- ತಳಿರುತೋರಣಗಳಿಂದ ಅಲಂಕರಿಸಿ, ಅಭ್ಯಂಗಸ್ನಾನಗೈದು, ಹೊಸಸೀರೆ-ಒಡವೆಗಳನ್ನು ತೊಟ್ಟು ಕೈಬಳೆ ಕಾಲ್ಗೆಜ್ಜೆಗಳನ್ನು ಜಣಜಣಿಸುತ್ತ ಮನೆತುಂಬ ಓಡಾಡುವ ದೃಶ್ಯ ನಯನಮನೋಹರ. ಮಡಿ-ಉಪವಾಸಗಳಲ್ಲಿದ್ದು, ಕಲಶಸ್ಥಾಪನೆ ಮಾಡಿ, ಷೋಡಷೋಪಚಾರ ಪೂಜೆಗೈದು, ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ದೇವಿಗೆ ನೈವೇದ್ಯಗೈದು, ಹಾಡುತ ಆರತಿಗೈದು ಲಕ್ಷ್ಮೀಯನ್ನು ಬೇಡುತ್ತಾರೆ.
ಶ್ರಾವಣ ಮಂಗಳವಾರ: ಮದುವೆಯಾದ ಮೊದಲ ಐದು ವರ್ಷಗಳ ಶ್ರಾವಣಮಾಸದ ಮಂಗಳವಾರಗಳಂದು ಹೆಣ್ಣುಮಕ್ಕಳು ಮಂಗಳಗೌರೀವ್ರತ ಎಂದೇ ಪ್ರಸಿದ್ಧವಾದ ಶ್ರಾವಣಗೌರೀ ವ್ರತವನ್ನಾಚರಿಸುತ್ತಾರೆ. ದಾಂಪತ್ಯಸುಖವೂ ಸಂತಾನಭಾಗ್ಯವೂ, ಆಯುರಾರೋಗ್ಯ ಸಂತೋಷಗಳೂ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತಾರೆ. ಶ್ರಾವಣ ಪೂರ್ಣಿಮಾ ಸನಾತನ ಸಂಸ್ಕೃತಿಯಲ್ಲಿ ಹುಣ್ಣಿಮೆಗೆ ತುಂಬ ಪ್ರಾಶಸ್ತ್ಯವಿದೆ. ಅದಕ್ಕೆ ಧಾರ್ಮಿಕ ಭಾವನಾತ್ಮಕ ಪ್ರಾಕೃತಿಕ ಹಾಗೂ ಆಯುರ್ವೇದದ ಕಾರಣಗಳಿವೆ. ಚಂದ್ರನು ಪೂರ್ಣಕಳೆಯಿಂದ ಶೋಭಿಸುವ ಹುಣ್ಣಿಮೆಗಳಂದು ವಿಷ್ಣುವನ್ನೂ ದೇವಿಯನ್ನೂ ಪೂಜಿಸಲಾಗುತ್ತದೆ.

ಉಪಾಕರ್ಮ
ವೇದಕಾಲದಿಂದಲೂ ಶ್ರಾವಣ ಹುಣ್ಣಿಮೆಯನ್ನು ವಿದ್ಯಾರಂಭದ ದಿನವನ್ನಾಗಿ ಆಚರಿಸಲಾಗಿದೆ. ಮಕ್ಕಳನ್ನು ಈ ದಿನದಂದು ಗುರುಕುಲಕ್ಕೆ ಸೇರಿಸುತ್ತಿದ್ದರು. ಅದಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದವರು ಈ ದಿನದಂದು ಉಪಾಕರ್ಮವನ್ನು ಮಾಡಿ, ಕಲಿತದ್ದನ್ನು ಗುರುಹಿರಿಯರೆದುರು ಒಪ್ಪಿಸಿ ಆಶೀರ್ವಾದ ಪಡೆಯುವ ದಿನವಿದು.
ರಕ್ಷಾಬಂಧನ: ಉತ್ತರ ಭಾರತದಲ್ಲಿ ಶ್ರಾವಣ ಹುಣ್ಣಿಮೆಯಂದು ರಕ್ಷಾಬಂಧನ ಎಂಬ ಸೋದರ-ಸೋದರಿಯರ ಹಬ್ಬ ಬಲು ಜನಪ್ರಿಯವಾದದ್ದು. ಸೋದರರಿಗೂ ಸೋದರ ಸಮಾನರಾದವರಿಗೂ ಹೆಣ್ಣು ಮಕ್ಕಳು ತಿಲಕ ಹಚ್ಚಿ, ರಕ್ಷಾಬಂಧನ ಸೂತ್ರವನ್ನು ಕಟ್ಟುತ್ತಾರೆ. ರಾಖೀ ಕಟ್ಟಿಸಿಕೊಂಡವರು ಸೋದರಿಯರಿಗೆ ಪ್ರತಿಯಾಗಿ ಹಣ ಅಥವಾ ಕಾಣಿಕೆಗಳನ್ನಿತ್ತು ಆಜನ್ಮ ರಕ್ಷಿಸುವುದಾಗಿ ಪ್ರತಿಜ್ಞೆಗೈಯುತ್ತಾರೆ.

ಸಂಸ್ಕೃತ ದಿವಸ/ಪಾಣಿನೀಮಹಿರ್ಷಿಯ ಪುಣ್ಯದಿನ
ಶ್ರಾವಣ ಹುಣ್ಣಿಮೆಯನ್ನು ಪಾಣಿನೀಮಹರ್ಷಿಗಳ ಪುಣ್ಯದಿನವೆನ್ನಲಾಗುತ್ತದೆ. ವಿಶ್ವಭಾಷಾಲೋಕಕ್ಕೆ ಸಂಸ್ಕೃತ ವ್ಯಾಕರಣದ ಅಷ್ಟಾಧ್ಯಾಯಿಯೆಂಬ ಮೇರುಗ್ರಂಥದ ಅಭೂತಪೂರ್ವ ಯೋಗದಾನವನ್ನಿತ್ತ ಪಾಣಿನೀಮಹರ್ಷಿಗಳ ಗೌರವಸೂಚಕವಾಗಿ ಈ ದಿನವನ್ನು ಸಂಸ್ಕೃತ ದಿವಸವೆಂದು ಮಾನ್ಯ ಮಾಡಲಾಗಿದೆ. ಆ ಜೀವನವೂ ವ್ಯಾಕರಣ ಸೂತ್ರೀಕರಣದ ಅನನ್ಯ ಸಾಧನೆಯಲ್ಲೇ ತೊಡಗಿದ ಪಾಣಿನೀ ಮಹರ್ಷಿಯು, ಹುಲಿಯು ಬಂದೆರಗಿ ತನ್ನನ್ನು ಕೊಲ್ಲುತ್ತಿರುವ ಕೊನೆಗಳಿಗೆಯಲ್ಲೂ, ಉಚ್ಚಕಂಠದಲ್ಲಿವ್ಯಾಕರಣ ಸೂತ್ರವೊಂದನ್ನು ರಚಿಸಿಹೇಳಿ ಅಸುನೀಗಿದ ಮಹಾನುಭಾವರು ಎನ್ನುವ ಕಥೆ ಪ್ರಚಲಿತವಿದೆ!

ಕೃಷ್ಣ ಜನ್ಮಾಷ್ಟಮಿ
ಶ್ರಾವಣ ಮಾಸದ ಕೃಷ್ಣಪಕ್ಷ ದ ಅಷ್ಟಮೀತಿಥಿಯು ಕೃಷ್ಣಜನ್ಮಾಷ್ಟಮಿಯೆಂದು ಸುಪ್ರಸಿದ್ಧ. ಲೋಕಪ್ರಿಯನಾದ ಕೃಷ್ಣನನ್ನು ಜಪ ತಪ, ಉಪವಾಸ, ಭಜನೆ, ಕಥಾಶ್ರವಣ, ದಾನ ಧರ್ಮಾದಿಗಳಿಂದ ದಿನವಿಡೀ ಪೂಜಿಸಲಾಗುತ್ತದೆ. ಕತ್ತಲಾಗುತ್ತಲೇ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು, ಹೂವು- ತುಳಸಿಗಳಿಂದ ಅರ್ಚಿಸಿ, ಅಷ್ಟೋತ್ತರ ಶತ- ಸಹಸ್ರನಾಮಗಳನ್ನು ಪಠಿಸಿ, ಹಾಲು, ಬೆಣ್ಣೆ, ಅವಲಕ್ಕೆ, ಸಿಹಿತಿನಿಸು, ಉಂಡೆ, ಚಕ್ಕುಲಿಗಳನ್ನು ನೈವೇದ್ಯ ಮಾಡಲಾಗುತ್ತದೆ. ನೆರೆಕೆರೆಯ ಪುಟ್ಟ ಮಕ್ಕಳನ್ನು ಆಹ್ವಾನಿಸಿ, ಸಾಯಂಕಾಲ ಕೃಷ್ಣನ ತೊಟ್ಟಿಲ ಮುಂದೆ ಕುಳ್ಳಿರಿಸಿ, ತಿಲಕ ಹಚ್ಚಿ ಆರತಿ ಎತ್ತಿ, ಬಗೆಬಗೆಯ ಸಿಹಿತಿನಿಸುಗಳನ್ನು ಕೊಟ್ಟು, ಉಂಡೆ ಚಕ್ಕುಲಿಗಳ ಗಂಟುಗಳನ್ನು ನೆರೆಕೆರೆಯವರಿಗೂ ಬಂದುಮಿತ್ರರಿಗೂ ವಾರವಿಡೀ ಹಂಚುತ್ತಾರೆ. ಇವು ಇಂದಿಗೂ ವಿಜೃಂಭಿಸುವ ಕೃಷ್ಣಾಷ್ಟಮಿ ಹಬ್ಬದ ಕೆಲವು ಸುಂದರ ಪದ್ಧತಿಗಳು, ರಾಜ್ಯರಾಜ್ಯದಲ್ಲೂಶ್ರಾವಣವನ್ನು ಹೇಗೆ ಆಚರಿಸುತ್ತಾರೆ ಎಂದು ನೋಡುತ್ತ ಹೋದರೆ, ಅದೊಂದು ಗ್ರಂಥವೇ ಆದೀತು! ಉತ್ಸವಪ್ರಿಯವಾದ ಶ್ರಾವಣವು ಅತ್ಯಂತ ಪ್ರಿಯವೂ ಪ್ರಶಸ್ತವೂ ಆದ ಮಾಸ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top