ವೈದ್ಯರು ಬೇಕಾಗಿದ್ದಾರೆ

– ಆರೋಗ್ಯ ಇಲಾಖೆಯಲ್ಲಿ 30% ಹುದ್ದೆ ಖಾಲಿ, ಖಾಸಗಿಯಲ್ಲೂ ಸಮಸ್ಯೆ

– ಹೆಲ್ತ್ ಯೋಧರಿಗೂ ಸೋಂಕು | ಗುತ್ತಿಗೆ ವೈದ್ಯರ ಪದತ್ಯಾಗ ಬೆದರಿಕೆ.

ಕಾರ್ತಿಕ್ ಯು.ಎಚ್.

ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇನಾನಿಗಳಂತೆ ಹೋರಾಡುವ ವೈದ್ಯ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಲವಾರು ವೈದ್ಯರು, ಸಿಬ್ಬಂದಿ ಸೋಂಕು, ಭೀತಿ ಮತ್ತಿತರ ಕಾರಣಗಳಿಗಾಗಿ ಗೈರುಹಾಜರಾಗುತ್ತಿದ್ದಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ ಇದೇ ಪರಿಧಿಸ್ಥಿತಿ ಎದುರಾಗಿದೆ. ಹೀಗಾಗಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲೂ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಲಾಗಿರುವ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸೋಂಕಿತರು ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ. ಇಷ್ಟೊಂದು ಸಂಖ್ಯೆಗೆ ಪೂರಕವಾಗಿ ವೈದ್ಯರು ಸಿಗುತ್ತಿಲ್ಲ. ಹೀಗಾಗಿ ಆಸ್ಪತ್ರೆ ಸೇರಿದರೂ ಚಿಕಿತ್ಸೆ ಸಿಗದೆ ಸೋಂಕಿತರು ನರಳುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲೇ ವೈದ್ಯರು ಸೇರಿದಂತೆ ಶೇಕಡಾ 30 ಸಿಬ್ಬಂದಿಗಳ ಕೊರತೆ ಇದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರ ನೇರ ಭೇಟಿ ಎಷ್ಟೋ ದಿನಗಳ ವರೆಗೆ ಸಾಧ್ಯವಾಗುತ್ತಿಲ್ಲ. ಅರೆ ವೈದ್ಯ ಸಿಬ್ಬಂದಿಯೇ ಔಷಧ ಕೊಡುತ್ತಿದ್ದಾರೆ. ವೈದ್ಯರು ಬರುವುದಿಲ್ಲ ಎಂಬುದಕ್ಕೆ ಬರುತ್ತಾರೆ ಎಂದಷ್ಟೇ ಹೇಳುತ್ತಾರೆ. ಯಾವಾಗ ಬರುತ್ತಾರೆ ಎಂದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ ಎಂದು ರೋಗಿಗಳು ದೂರುತ್ತಾರೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಂತೂ ಲಕ್ಷಣ ರಹಿತ ರೋಗಿಗಳು ವಾರಗಟ್ಟಲೇ ಇದ್ದರೂ ಯಾರೂ ವೈದ್ಯ ಸಿಬ್ಬಂದಿ ಮಾತನಾಡಿಸುವುದಿಲ್ಲ. ಕೇವಲ ಮೂರು ಹೊತ್ತು ಊಟ ನೀಡಲಾಗುತ್ತದೆ!
30ರಷ್ಟು ಹುದ್ದೆಗಳು ಖಾಲಿ : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಶೇ. 30ರಷ್ಟು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಇಲಾಖೆ ಅಧೀನದಲ್ಲಿ ಇರುವ ಆಸ್ಪತ್ರೆಗಳಲ್ಲಿ 36,206 ಮಂಜೂರಾದ ಹುದ್ದೆಗಳಿದ್ದು, 10,548 ಹುದ್ದೆಗಳು ಖಾಲಿ ಇವೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಿದಂತೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸವಾಲಾಗುತ್ತಿದೆ. ತಜ್ಞ ವೈದ್ಯರು ಮತ್ತು ನರ್ಸ್‌ಗಳ ಹುದ್ದೆಗಳು ಹೆಚ್ಚಾಗಿ ಖಾಲಿ ಇದೆ. ಇದರಿಂದಾಗಿ ರೋಗಿಗಳ ನಿರ್ವಹಣೆ ಕಷ್ಟವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾತ್ರವಲ್ಲ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆ ಇದೆ.
ಖಾಸಗಿ ಆಸ್ಪತ್ರೆಗಳಲ್ಲೂ ಇದೇ ಕಥೆ : ಕೊರೊನಾ ಸೋಂಕು ಹರಡುವಿಕೆ ಆರಂಭವಾದಾಗಲೇ ಏಪ್ರಿಲ್, ಮಾರ್ಚ್‌ನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ಸಿಬ್ಬಂದಿ ಕೆಲಸ ತೊರೆದಿದ್ದರು. ಈಗ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಿದ್ದರೂ ಅನೇಕ ವೈದ್ಯರು, ನರ್ಸ್‌ಗಳು ಕೆಲಸಕ್ಕೆ ಹಾಜರಾಗುತ್ತಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 30ರಷ್ಟು ವೈದ್ಯರ ಕೊರತೆ ಮತ್ತು ಶೇ. 60ರಷ್ಟು ಶುಶ್ರೂಷಕರ ಕೊರತೆ ಇದೆ. 60 ವರ್ಷ ಮೇಲ್ಪಟ್ಟ ವೈದ್ಯರು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲ ವೈದ್ಯರು ಮನೆಯಲ್ಲಿ ಮಕ್ಕಳಿಗೆ, ವೃದ್ಧ ತಂದೆ ತಾಯಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೆಲಸಕ್ಕೆ ಬರುತ್ತಿಲ್ಲ. ಇರುವ ಸಿಬ್ಬಂದಿಯನ್ನು ಬಳಸಿಕೊಂಡೇ ಕೆಲಸ ಮಾಡುವ ಸವಾಲು ನಮ್ಮ ಮುಂದಿದೆ,’’ ಎಂದು ಫಾನಾ ಅಧ್ಯಕ್ಷ  ಡಾ. ಆರ್.ರವೀಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ… ಬೆಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಾದ ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್‌ನಲ್ಲಿ ವೈದ್ಯರು, ನರ್ಸ್ ಗಳ ಕೊರತೆ ಇದೆ. ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ 1,310 ಸಿಬ್ಬಂದಿ ಇದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಇತ್ತೀಚೆಗೆ 660 ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಈ ಪೈಕಿ 40 ಹುದ್ದೆ ಕಲಬುರಗಿ ಕಿದ್ವಾಯಿಗೆ ನೀಡಲಾಗಿದೆ. ಇದರಲ್ಲಿ 356 ಹುದ್ದೆ ಭರ್ತಿ ಮಾಡಲು ಮಾತ್ರ ಸದ್ಯಕ್ಕೆ ಅನುಮೋದನೆ ದೊರೆತಿದೆ.
ನೇಮಕ ಪ್ರಕ್ರಿಯೆ ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ 2,200 ವೈದ್ಯರು ಮತ್ತು 900ಕ್ಕೂ ಅಧಿಕ ಸ್ಟಾಫ್ ನರ್ಸ್‌ಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಕೋವಿಡ್ ಸಮಸ್ಯೆ ಆರಂಭವಾದ ನಂತರ ಅಗತ್ಯವಿರುವಲ್ಲಿ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಆದೇಶವಾಗಿತ್ತು. ಅದರ ಪ್ರಕಾರ ನೇಮಕ ಪ್ರಕ್ರಿಯೆ ನಡೆದಿದೆ,’’ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಗುತ್ತಿಗೆ ವೈದ್ಯರ ಬೆದರಿಕೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 507 ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಂಗೊಳಿಸದಿರುವುದರಿಂದ ಜು. 8ರಂದು ರಾಜೀನಾಮೆ ನೀಡುವುದಾಗಿ ವೈದ್ಯರು ಬೆದರಿಕೆ ಹಾಕಿದ್ದಾರೆ.
ಬೆಂಗಳೂರು ಬಿಡಬೇಡಿ ಸಿಎಂ ಮನವಿ : ರಾಜ್ಯದಲ್ಲಿ ಪುನಃ ಲಾಕ್‌ಡೌನ್‌ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ ಜನರು ಬೆಂಗಳೂರು ತೊರೆದು ಹೋಗಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.‘‘ಸದ್ಯಕ್ಕೆ ಕೊರೊನಾ ಜತೆಗೆ ಬದುಕು ಸಾಗಿಸಬೇಕಾದ ಪರಿಸ್ಥಿತಿಯಿದೆ. ಬೆಂಗಳೂರಿನಲ್ಲಿ ಆಸ್ಪತ್ರೆ, ಬೆಡ್‌ಗಳ ಕೊರತೆ ಇಲ್ಲ. ಯಾರೂ ಆತಂಕಪಡಬಾರದು,’’ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆ ಸ್ಥಿತಿಗತಿ

ವಿಭಾಗ  – ಮಂಜೂರು – ಕೊರತೆ

ತಜ್ಞರು – 2,832 –  824

ವೈದ್ಯರು – 3,046 – 607

ಸ್ಟಾಫ್ ನರ್ಸ್ – 8,471 – 2,681

ಲ್ಯಾಬ್ ತಂತ್ರಜ್ಞ – 2,411 – 590

ಫಾರ್ಮಸಿಸ್ಟ್ –  2,932 – 958

ಕಿರಿಯ ಸಹಾಯಕ – 9,850 – 2,062

ಎಫ್‌ಡಿಎ – 2,673 – 1,459

ಎಸ್‌ಡಿಎ – 2,559 – 1,237

ಡಾಟಾ ಎಂಟ್ರಿ – 1,432 – 130

ಒಟ್ಟು – 36,206 – 10,548

ವೈದ್ಯರನ್ನೇ ಕಾಡಿದ ಸೋಂಕು ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಯೇ ಕೊರೊನಾ ಸೋಂಕಿಗೆ ಒಳಗಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 30, ವಿಕ್ಟೋರಿಯಾದಲ್ಲಿ 23, ನಿಮ್ಹಾನ್ಸ್‌ನಲ್ಲಿ 15, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 4, ವಾಣಿ ವಿಲಾಸ ಆಸ್ಪತ್ರೆಯಲ್ಲಿ 2, ರಾಜಾಜಿ ನಗರದ ಇಎಸ್ಐ ಆಸ್ಪತ್ರೆಯಲ್ಲಿ 11, ಕಿದ್ವಾಯಿಯಲ್ಲಿ 10 ಸಿಬ್ಬಂದಿಗೆ ಸೋಂಕು ತಗಲಿದೆ. ವೈದ್ಯರು, ವೈದ್ಯಾಧಿಕಾರಿಗಳು, ವಾರ್ಡ್ ಸಹಾಯಕರು, ನರ್ಸ್‌ಗಳು ಇದರಲ್ಲಿ ಸೇರಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top