ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ ಕೋವಿಡ್‌ ಚಿಕಿತ್ಸೆ ನೀಡುತ್ತಿವೆ; ಅದರಲ್ಲೂ ಕೆಲವು ವೈದ್ಯರು ಸೇವೆಗೆ ಹೋಗಲು ನಿರಾಕರಿಸುತ್ತಿರುವುದು ಕಂಡು ಬಂದಿದೆ. 50 ವರ್ಷ ಮೇಲ್ಪಟ್ಟ ವೈದ್ಯರು ವಯೋಸಹಜ ಸಮಸ್ಯೆಯ ಆತಂಕದಿಂದ ಮನೆಯಲ್ಲಿ ಉಳಿಯುತ್ತಿದ್ದಾರೆ. ಮನೆಯಲ್ಲಿ ಹಿರಿಯ ನಾಗರಿಕರು, ಮಕ್ಕಳು ಇರುವವರು ಕೂಡ ಅದೇ ಕಾರಣದಿಂದ ಬರುತ್ತಿಲ್ಲ. ವೈದ್ಯರ ಕೊರತೆಯಿಂದಾಗಿ ಸೇವೆ ನೀಡಲು ಕಷ್ಟವಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.30ರಷ್ಟು ವೈದ್ಯರ ಕೊರತೆ ಇದೆ. ಹಾಗಾದರೆ ಕೊರೊನಾ ವಿರುದ್ಧದ ನಮ್ಮ ಹೋರಾಟ ಯೋಧರೇ ಇಲ್ಲದ ಹೋರಾಟ ಆಗಲಿದೆಯೇ?
ವೈದ್ಯ ವೃತ್ತಿಯ ಶಪಥ ಕೈಗೊಳ್ಳುವಾಗಲೇ ಸೋಂಕು, ಸಾಂಕ್ರಾಮಿಕಗಳ ಬಗ್ಗೆ ವೈದ್ಯರಿಗೆ ಸಮಗ್ರ ಕಲ್ಪನೆಯಿರುತ್ತದೆ; ಯಾವುದೇ ರೋಗವಾದರೂ ಆ ಕ್ಷೇತ್ರದ ವೈದ್ಯರು ಅದನ್ನು ಎದುರಿಸಿ ರೋಗಿಯ ಜೀವ ಉಳಿಸುವ ಕರ್ತವ್ಯದ ಹೊಣೆಯನ್ನು ಹೊರಬೇಕಾಗುತ್ತದೆ. ಇದೇನೂ ಸಮಾಜವಾಗಲೀ ಸರಕಾರವಾಗಲೀ ಅವರ ಮೇಲೆ ಹೇರುವುದಲ್ಲ. ವೈದ್ಯರು ಸ್ವಯಿಚ್ಛೆಯಿಂದ ತೆಗೆದುಕೊಳ್ಳುವಂಥದು. ಹೀಗೆ ಶಪಥಕ್ಕೆ ಬದ್ಧರಾದ ಬಳಿಕ ಅವರು ಅದಕ್ಕೆ ನ್ಯಾಯ ಸಲ್ಲಿಸಬೇಕು. ಮುಖ್ಯವಾಗಿ ಈಗ ಆರೋಗ್ಯ ತುರ್ತುಪರಿಸ್ಥಿತಿಯಿದೆ. ಎಲ್ಲ ತುರ್ತುಪರಿಸ್ಥಿತಿಗಳಲ್ಲೂ ಪ್ರಜೆಗಳು ಕೆಲವು ವಿಶೇಷ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ವೈದ್ಯರ ವಲಯ ಈಗ ಅಂಥ ವಿಶೇಷ ಹೊಣೆ ಹೊತ್ತ ವಲಯ. ವೈದ್ಯರಂತೆ ಹಲವು ಪೊಲೀಸರೂ ರೋಗಪೀಡಿತರಾಗಿದ್ದಾರೆ. ಆದರೆ ಅವರು ತಮ್ಮ ಸೇವೆ, ಕಾನೂನು ಪರಿಪಾಲನೆಯ ಹೊಣೆಯಿಂದ ಹಿಂದೆಗೆದಿಲ್ಲ. ವೈದ್ಯರಿಂದಲೂ ಸಮಾಜ ಇದನ್ನೇ ನಿರೀಕ್ಷಿಸುತ್ತದೆ. ಇದು ಅವರ ವೃತ್ತಿಪರತೆಯ ಪ್ರಶ್ನೆ.
ನಿಜ, ಈಗ ವೈದ್ಯರ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿದೆ. ಮಾನಸಿಕ ಒತ್ತಡಗಳೂ ಇರಬಹುದು. ಆದರೆ ವೈದ್ಯರು ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮತ್ತು ಭರವಸೆ ನೀಡಬೇಕಾದ ಸ್ಥಾನದಲ್ಲಿ ಇರುವವರು. ಈಗ ಡಾಕ್ಟರ್‌ಗಳು ಅಂಜಿ ಸೇವೆಗೆ ಹಿಂಜರಿದರೆ, ಅದರ ಋುಣಾತ್ಮಕ ಪರಿಣಾಮ ಇತರರ ಮೇಲೂ ಆಗಬಹುದಾದ ಸಾಧ್ಯತೆ ಅಧಿಕ. ಕೋವಿಡ್‌ ಸೋಂಕು ಹರಡುವುದು ಹೇಗೆ, ತಡೆಯುವುದು ಹೇಗೆ, ಅದರ ವಿರುದ್ಧ ಸಮಗ್ರ ರಕ್ಷಣೆ ಹೇಗೆ ಸಾಧ್ಯ ಎಂಬುದರ ಆಳ ಅಗಲ ಬಲ್ಲವರು. ಇಂಥವರು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುವುದರಿಂದ ಪವಾಡವನ್ನೇ ಮಾಡಬಹುದು. ಸಮಾಜಕ್ಕೆ ಆರೋಗ್ಯದ ಜೊತೆಗೆ ನೈತಿಕ ಬೆಂಬಲವನ್ನೂ ನೀಡುವ ಒಂದು ಕ್ರಮ ಅದು. ಮುಂಚೂಣಿಯ ಯೋಧರೇ ಹೋರಾಟ ಸಾಧ್ಯವಾಗದು ಎಂದು ಕೈಚೆಲ್ಲಿದರೆ ಕಾಯುವವರು ಯಾರು? ವೈದ್ಯರನ್ನು ಕೊರೊನಾ ವಾರಿಯರ್‌ಗಳೆಂದು ಸಮಾಜ ಹಾಗೂ ಆಳುವವರು ಒಪ್ಪಿ, ಅವರ ಮೇಲೆ ಹೂಮಳೆಯನ್ನೂ ಸುರಿಸಲಾಗಿದೆ. ಇದು ದೊಡ್ಡದೊಂದು ಗೌರವ. ಅವಶ್ಯವಿದ್ದರೆ ವೇತನದಲ್ಲಿ ಹೆಚ್ಚಳ ಕೇಳಲಿ; ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಲಿ; ಶಿಫ್ಟ್‌ಗಳನ್ನು ಬಳಸಲಿ; ಯಾರೂ ಬೇಡವೆನ್ನುವುದಿಲ್ಲ. ಆದರೆ ಹೋರಾಟವನ್ನೇ ಮಾಡುವುದಿಲ್ಲ ಎಂದು ಕೈಚೆಲ್ಲುವುದು ವೃತ್ತಿಪರತೆಯೂ ಅಲ್ಲ; ಜೀವಪರತೆಯೂ ಅಲ್ಲ. ಸರಕಾರವೂ ಸೂಕ್ತ ನೆರವಿನೊಂದಿಗೆ ವೈದ್ಯವಲಯಕ್ಕೆ ಬೆಂಬಲವಾಗಿ ನಿಂತು ವೈದ್ಯರು ಸೇವೆ ಸಲ್ಲಿಸಲು ಮುಂದೆ ಬರುವಂತೆ ಮಾಡಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top