ಶೂದ್ರನೊಬ್ಬನ ತಪಸ್ಸು ಫಲಿಸುವ ಪರ್ವಕಾಲ

ಶೂದ್ರ ನಾಯಕನೊಬ್ಬ ಕೇವಲ ತನ್ನ ಧೀಶಕ್ತಿಯಿಂದಲೇ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿರುವುದು ಸಾಮಾನ್ಯ ಸಾಧನೆಯೇ? ದೇಶದ ಒಂದು ದೊಡ್ಡ ಸಮುದಾಯ ಈ ಗಳಿಗೆಗಾಗಿ ಅದೆಷ್ಟು ವರ್ಷಗಳಿಂದ ಕಾದು ಕುಳಿತಿತ್ತೋ?

download

ಮೋದಿಯವರನ್ನು ಶಂಕರಸಿಂಘ್ ವಾಘೇಲಾ ಹೊಗಳಿದ್ದರಲ್ಲಿ ಅಚ್ಚರಿಯಾಗುವಂಥದ್ದೇನೂ ಇಲ್ಲ. ಯಾಕೆಂದರೆ ಅವರಿಬ್ಬರ ಮೂಲ ಒಂದೇ. ಆದರೆ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‍ನ ಘಟಾನುಘಟಿಗಳಿಂದ ಹಿಡಿದು ಎಲ್ಲ ಪಕ್ಷ, ಪಂಗಡಗಳಿಗೆ ಸೇರಿದವರು ಮೋದಿ ಮ್ಯಾಜಿಕ್ಕನ್ನು ಒಪ್ಪಿಕೊಳ್ಳುತ್ತಿರುವ ರೀತಿ ಇದೆಯಲ್ಲಾ, ಅದು ನಿಜಕ್ಕೂ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಹಾಗಿದ್ದರೆ ಇದನ್ನು ನಾವು ಬದಲಾವಣೆಯ ಹಾದಿಯಲ್ಲಿನ ಭರವಸೆ ಅಂತ ಕರೆಯಬಹುದೇ?

ಹೌದೋ ಅಲ್ಲವೋ ಯೋಚನೆ ಮಾಡಿ. ಶೇಕಡ ಮೂವತ್ತರಷ್ಟು ದೇಶವಾಸಿಗಳು ಚುನಾವಣಾಪೂರ್ವದಲ್ಲೇ ಮೋದಿಯನ್ನು ಒಪ್ಪಿಕೊಂಡುಬಿಟ್ಟಿದ್ದರು. ಮೊನ್ನೆ ಸಂಸತ್ತಿನ ಸೆಂಟ್ರಲ್‍ಹಾಲ್‍ನಲ್ಲಿನ ಬಿಜೆಪಿ ಸಂಸದೀಯ ಸಭೆಯಲ್ಲಿ ಮೋದಿ ಮಾಡಿದ ಭಾಷಣ ಕೇಳಿದ ಮೇಲೆ, ಇನ್ನೂ ಮೂವತ್ತರಿಂದ ನಲ್ವತ್ತು ಪರ್ಸೆಂಟ್ ಜನರು ತಾವು ಮೋದಿ ಬೆಂಬಲಿಸದೇ ಎಂಥಾ ತಪ್ಪು ಮಾಡಿಬಿಟ್ಟೆವು ಅಂತ ಕೈಕೈ ಹಿಸುಕಿಕೊಳ್ಳುತ್ತಿದ್ದರೂ ಇರಬಹುದು. ಹಾಗಿದ್ದರೆ ಇನ್ನು ಬಾಕಿ ಉಳಿಯುವವರೆಷ್ಟು ? ಅಜಮಾಸು ಶೇಕಡ ಮೂವತ್ತರಿಂದ ನಲ್ವತ್ತರಷ್ಟು ಮಂದಿ. ಅವರೂ ಮೋದಿಹಾದಿಗೆ ಬರಲು ಮುಂದೆ ಭರಪೂರ ಕಾಲಾವಕಾಶವುಂಟು.

ಯಾಕೆ ಹೀಗೆ ಅಂದರೆ… ದೇಶದ ಪ್ರಧಾನಿಯಾಗಲು ಹೊರಟ ಮೋದಿ ತಮ್ಮ ಪ್ರತಿಹೆಜ್ಜೆಯಲ್ಲೂ ಅಂಥ ಭರವಸೆಯನ್ನು ಗಟ್ಟಿಗೊಳಿಸುತ್ತಲೇ ಹೋಗುತ್ತಿದ್ದಾರೆ. ಸಂಸತ್ತಿನೊಳಗೆ ಕಾಲಿಡುವ ಮುನ್ನ ಅದರ ಮೆಟ್ಟಿಲಿಗೆ ಹಣೆಯೊತ್ತಿ ಕರಜೋಡಿಸಿ ಒಳನಡೆದರು. ಮೋದಿ ಹಾಗೆ ನಡೆದುಕೊಳ್ಳಲು ಕಾರಣ ಇಲ್ಲ ಎನ್ನಬಹುದೇ? ಈ ದೇಶದ ಅಸ್ಮಿತೆಗೆ ಚೌಕಟ್ಟು ಹಾಕಿ ಹಿಡಿದಿಟ್ಟುಕೊಂಡಿರುವ ಸಂವಿಧಾನವನ್ನು ರೂಪಿಸಿದ್ದು ಮತ್ತು ಅದನ್ನು ಅನುಷ್ಠಾನಗೊಳಿಸಿದ್ದು ಇದೇ ಪ್ರಜಾತಂತ್ರದ ದೇಗುಲದಲ್ಲಿ. ಅದು ನಮಗೆ ಹೆಮ್ಮೆಯೂ ಹೌದು, ಶ್ರದ್ಧಾಕೇಂದ್ರವೂ ಹೌದು. ಹೀಗಿರುವಾಗ, ಈ ದೇಶ ಆಳಲು ಹೊರಟ ವ್ಯಕ್ತಿಯೊಬ್ಬ ಇದಕ್ಕಿಂತ ಭಿನ್ನವಾಗಿ ತನ್ನ ಭಾವನೆಯನ್ನು ತೋಡಿಕೊಳ್ಳಲು ಹೇಗೆ ಸಾಧ್ಯ? ಇಂಥ ಭಾವನಾತ್ಮಕ ಸನ್ನಿವೇಶವನ್ನು ಈ ಹಿಂದೆ ನಾವೆಲ್ಲಾದರೂ ನೋಡಿದ್ದೆವಾ? ಮೋದಿ ಅಂದು ನಡೆದುಕೊಂಡ ರೀತಿಯಿಂದ ಎಂಥಾ ಕಲ್ಲುಹೃದಯವೂ ಒಂದಿಷ್ಟು ಕರಗಿರಲಿಕ್ಕೆ ಸಾಕು. ಅದಿಲ್ಲ ಅಂದಿದ್ದರೆ, ಮೋದಿ ಸಂಸತ್ತನ್ನೂ ಕೇಸರೀಕರಣಗೊಳಿಸುತ್ತಿದ್ದಾರೆಂಬ ಬೊಬ್ಬೆ ಇಷ್ಟೊತ್ತಿಗಾಗಲೇ ಶುರುವಾಗಿರಬೇಕಿತ್ತು!

ಮೋದಿಯ ನಡೆ ಮಾತ್ರವಲ್ಲ, ನುಡಿಯಲ್ಲೂ ನಾವೊಂದು ಹೊಸ ದಿಕ್ಕು, ಹೊಸ ಭರವಸೆಯನ್ನು ಗುರುತಿಸಬಹುದು. ಐತಿಹಾಸಿಕ ಗೆಲುವಿನ ನಂತರ ವಡೋದರಾದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಮೋದಿ, ದೇಶಸೇವೆಯ ಕಾಯಕದಲ್ಲಿ ತಾವು ಕೂಲಿ ನಂಬರ್ ಒನ್ ಅಂತ ಕರೆದುಕೊಂಡರು. ನಂತರ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದ ರೀತಿ ಸ್ವತಃ ಆಡ್ವಾಣಿಯಂಥ ಮೇಧಾವಿಯನ್ನೇ ಮಂತ್ರಮುಗ್ಧಗೊಳಿಸಿತು. `ಮೋದಿಕೃಪೆಯಿಂದ ಇಂದು ನಮಗೆಲ್ಲ ಈ ಸುದಿನ ಪ್ರಾಪ್ತವಾಗಿದೆ’ ಅಂತ ಆಡ್ವಾಣಿ ಹೇಳಿದ್ದನ್ನು ಮೋದಿ ಸುತರಾಂ ಒಪ್ಪಲಿಲ್ಲ. `ಆಡ್ವಾಣಿಜೀ ನಿಮ್ಮಲ್ಲಿ ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ, ಮತ್ತೊಮ್ಮೆ ಈ ಮಾತನ್ನು ಹೇಳಬೇಡಿ; ತಾಯಿಗಾಗಿ ಮಗ ಕೈಗೊಳ್ಳುವ ಕರ್ತವ್ಯವನ್ನು, ಸೇವೆಯನ್ನು ಎಂದಾದರೂ ಕೃಪೆ ಎನ್ನಲಾದೀತೇ? ನನಗೆ ಭಾರತ ಮತ್ತು ಭಾಜಪಾ ಇವೆರಡೂ ತಾಯಂದಿರು. ನಿಮ್ಮೆಲ್ಲರ ನಡುವೆ ನನಗೆ ಈ ಸೇವೆಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸುದೈವ’ ಎಂದರು ಮೋದಿ. ಹಾಗೇ ಮತ್ತೊಂದು ಮಾತು- `ನನ್ನನ್ನು ಇಷ್ಟೆತ್ತರಕ್ಕೆ ಬೆಳೆದ ನಾಯಕ ಅಂತಲೂ ಬಣ್ಣಿಸಬೇಡಿ; ಲಕ್ಷೋಪಲಕ್ಷ ಕಾರ್ಯಕರ್ತರು, ಇಲ್ಲಿ ಕುಳಿತ ಜ್ಯೇಷ್ಠ, ಕನಿಷ್ಠ ಕಾರ್ಯಕರ್ತರು ನಿಮ್ಮ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಮೆರೆಸಿದ್ದರಿಂದ ನಾನು ಎತ್ತರಕ್ಕೆ ಏರಿದಂತೆ ಭಾಸವಾಗುತ್ತಿದೆ. ನೀವಿಲ್ಲದೇ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ’ ಎನ್ನುತ್ತ ಕಣ್ಣಾಲಿಗಳನ್ನು ಒರೆಸಿಕೊಂಡರು. ಹಾಗಿದ್ದರೆ ನಾವಿದನ್ನು ಕೇವಲ ಮೋದಿಯ ಮಾತಿನಮೋಡಿ ಅನ್ನುವ ತೀರ್ಮಾನ ಕೊಟ್ಟು ಸುಮ್ಮನಾಗಬಹುದೇ, ಅಥವಾ ಆ ಮಾತಿಗಿರುವ ಐತಿಹಾಸಿಕ ಹಿನ್ನೆಲೆ, ಸಾಂಸ್ಕøತಿಕ ಸಂಬಂಧವನ್ನು ಹುಡುಕುತ್ತ ಹೋಗಬೇಕೇ?

ಆರೆಸ್ಸೆಸ್‍ನ ಎರಡನೇ ಸರಸಂಘಚಾಲಕ ಮಾ.ಸ. ಗೋಳವಲ್ಕರ್ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು: `ಮೈ ನಹೀ, ತೂ ಹೀ- ನಾನಲ್ಲ ನೀನು’. ನಾನು ಅನ್ನುವುದು ನಿಮಿತ್ತ, ಸಾಧನೆಯ ಕೀರ್ತಿಯೆಲ್ಲ ನಿಮ್ಮದೇ ಎಂಬುದು ಆ ಮಾತಿನ ಅರ್ಥ. ಅಂದು ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತ, `ಈ ಕೀರ್ತಿಯೆಲ್ಲ ಐದು ತಲೆಮಾರಿನ ಕಾರ್ಯಕರ್ತರ ತ್ಯಾಗ, ಪರಿಶ್ರಮಕ್ಕೆ ಸಲ್ಲಬೇಕು; ನಮ್ಮಲ್ಲಿ ಧ್ಯೇಯವೆಂಬ ಚೈತನ್ಯವನ್ನು ತುಂಬಿ, ಓರೆಕೋರೆಗಳನ್ನು ತಿದ್ದಿ, ತೀಡಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಹಿರಿಯ ಚೇತನಗಳಿಗೆ ಸಲ್ಲಬೇಕು’ ಅಂತ ಹೇಳುವಾಗ ಮೋದಿ ಬಾಯಲ್ಲಿ ಅಕ್ಷರಶಃ ಗೋಳವಲ್ಕರ್ ಧ್ವನಿಯೇ ಪ್ರತಿಧ್ವನಿಸಿತ್ತು.

ಬಹುಶಃ, ಮೋದಿ ವಾರಾಣಸಿಯಿಂದ ಚುನಾವಣಾ ಕಣಕ್ಕಿಳಿಯುವುದಕ್ಕೂ ಆ ಸೆಳೆತವೇ ಕಾರಣ ಇದ್ದಿರಬಹುದು. ವಾರಾಣಸಿಯಿಂದ ಸ್ಪರ್ಧಿಸಿದರೆ ಉತ್ತರ ಭಾರತದ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಬಹುದು ಎಂಬ ರಾಜಕೀಯ ಲೆಕ್ಕಾಚಾರ ನಿಜವೇ ಆದರೂ, ಮೋದಿಯ ತೀರ್ಮಾನಕ್ಕೆ ಅದಕ್ಕಿಂತ ಮುಖ್ಯವಾದ ಬೇರೆಯೇ ಕಾರಣವಿದೆ ಎನಿಸುತ್ತದೆ. ಮೋದಿ ಮೂಲತಃ ಗೋಳವಲ್ಕರ್ ಅವರ ವಿಚಾರಗಳಿಂದ ಪ್ರೇರಿತರಾದವರು. ಮೋದಿ ಗೆದ್ದ ವಾರಾಣಸಿ ಗೋಳವಲ್ಕರ್ ಅವರ ಕರ್ಮಭೂಮಿ. ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಗೋಳವಲ್ಕರ್ ಆರೆಸ್ಸೆಸ್ ಸಂಪರ್ಕಕ್ಕೆ ಬಂದದ್ದು ಅಲ್ಲಿಂದಲೇ. ಆರೆಸ್ಸೆಸ್ ಸಂಪರ್ಕಕ್ಕೆ ಬರುವುದಕ್ಕೂ ಪೂರ್ವದಲ್ಲಿ ಅಧ್ಯಾತ್ಮ ಸಾಧನೆಗೋಸ್ಕರ ಹಿಮಾಲಯದ ಗರ್ಭ ಸೇರಿಕೊಳ್ಳಲು ಗೋಳವಲ್ಕರ್ ತೀರ್ಮಾನಿಸಿದ್ದರು. ಹೆಡಗೇವಾರರ ಪರಿಚಯವಾದ ಮೇಲೆ ಅವರು ತಮ್ಮ ಆಲೋಚನೆಯ ದಿಕ್ಕನ್ನೇ ಬದಲಿಸಿಕೊಂಡರು. `ತಪಸ್ಸು ಮಾಡಲು ಹಿಮಾಲಯಕ್ಕೇ ಯಾಕೆ ಹೋಗಬೇಕು, ಇಲ್ಲಿ ಸಮಾಜದ ನಡುವೆಯೇ ಇದ್ದು ಆ ಕೆಲಸ ಮಾಡಬಹುದಲ್ಲ’ ಎಂದು ಹೆಡಗೇವಾರ್ ಹೇಳಿದಾಗ ಗೋಳವಲ್ಕರ್ ಮರುಮಾತಿಲ್ಲದೇ ಒಪ್ಪಿಕೊಂಡರು. ಅಂಥ ಗೋಳವಲ್ಕರರ `ವ್ಯಕ್ತಿತ್ವ-ನಿರ್ಮಾಣ ಅಭಿಯಾನ’ದಲ್ಲಿ ಬೆಳೆದವರ ಪೈಕಿ ಮೋದಿ ಕೂಡ ಒಬ್ಬರು. ಅಂದಮೇಲೆ ಮೋದಿಗೆ ವಾರಾಣಸಿಗಿಂತ ಪ್ರಶಸ್ತ ಕ್ಷೇತ್ರ ಬೇರೆಲ್ಲಿ ಸಿಕ್ಕೀತು?

ಗೋಳವಲ್ಕರ್ ತಮ್ಮ ಜೀವನದುದ್ದಕ್ಕೂ ದೇಶಭಕ್ತ, ಸಮರ್ಪಿತ ವ್ಯಕ್ತಿಗಳ ನಿರ್ಮಾಣಕ್ಕೆ ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಚಾರಿತ್ರೃಶುದ್ಧ, ದೃಢಮನಸ್ಸಿನ, ರಾಷ್ಟ್ರ-ಧರ್ಮನಿಷ್ಠರನ್ನು ನಿರ್ಮಿಸುವುದಕ್ಕೋಸ್ಕರವೇ ಅವರು ಭಾರತದ ಉದ್ದಗಲಕ್ಕೆ ಸುತ್ತಿದ್ದರು. ತಮ್ಮ ಇಡೀ ಜೀವನವನ್ನು ಅದಕ್ಕೆಂದೇ ಗಂಧದಂತೆ ತೇಯ್ದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ನ ವರ್ಗದವರು, ಸಮಾಜದ ಕೆಳಸ್ತರದ ವ್ಯಕ್ತಿಗಳು ಸಾಮಾಜಿಕ ಹೊಣೆಹೊರಲು ಮುಂದೆ ಬರಬೇಕೆಂದು ಗೋಳವಲ್ಕರ್ ಸದಾ ಹಂಬಲಿಸಿದ್ದರು. ಉದ್ಯೋಗ ವ್ಯವಸ್ಥೆಗೆ ಜಾತಿಯ ಹಿನ್ನೆಲೆ ತಳುಕು ಹಾಕಿಕೊಂಡಿದೆ, ಉದ್ಯೋಗ ಶ್ರೇಣೀಕರಣಗೊಂಡಿದೆ. ಸಮಾಜದಲ್ಲಿನ ಮೇಲು-ಕೀಳು ಎಂಬ ಭಾವನೆ, ಅಸ್ಪೈಶ್ಯತೆಯಂಥ ಪಿಡುಗುಗಳನ್ನು ಹೋಗಲಾಡಿಸಬೇಕಾದರೆ, ಉದ್ಯೋಗದಲ್ಲಿ ಕೀಳೆಂದು ಭಾವಿಸುವ ಚರ್ಮಕಾರರು, ಸಫಾಯಿ ಕರ್ಮಚಾರಿಗಳು, ಕ್ಷೌರಿಕರೇ ಮೊದಲಾದವರ ಶ್ರಮಕ್ಕೆ ಬೇರೆಲ್ಲಾ ವೃತ್ತಿನಿರತರಿಗಿಂತ ಹೆಚ್ಚಿನ ಪ್ರಾಧಾನ್ಯತೆ ಸಿಗುವಂತಾಗಬೇಕೆಂಬ ಜಗಜ್ಯೋತಿ ಬಸವೇಶ್ವರರ ತತ್ತ್ವವನ್ನು ಗೋಳವಲ್ಕರ್ ಮನಸಾರೆ ಒಪ್ಪಿದ್ದರು. ವೃತ್ತಿಸಂಬಂಧಿತ ಜಾತಿವ್ಯವಸ್ಥೆ ಬದಲಾಯಿಸಲು ಗೋಳವಲ್ಕರ್ ಒಂದು ಉಪಾಯ ಕಂಡುಕೊಂಡಿದ್ದರು. ಅದೆಂದರೆ, ಸಾಮಾಜಿಕ ಸಾಮರಸ್ಯ ಸಾಧಿಸಲು, ಅಸ್ಪೈಶ್ಯತೆ ದೂರಮಾಡಲು ಧರ್ಮಾಚಾರ್ಯರು ಮುಂದೆ ಬರಬೇಕೆಂದು ಅವರು ಪ್ರತಿಪಾದನೆ ಮಾಡುತ್ತಿದ್ದರು. ಏಕೆಂದರೆ ಈ ಸಮಾಜದಲ್ಲಿ, `ಒಳಗೆ ಬರಬಾರದು’ ಎನ್ನುವವರು ಇರುವ ಹಾಗೇ `ಒಳಗೆ ಹೋಗಬಾರದು’ ಎಂಬ ಸಂಪ್ರದಾಯ ಪಾಲಿಸುವವರೂ ಇದ್ದಾರೆ. ಈ ಭಾವನೆ ದೂರಮಾಡಲು ಧಾರ್ಮಿಕ ನಾಯಕರು ಮುಂದೆ ಬರಬೇಕೆಂದು ಗೋಳವಲ್ಕರ್ ಹೇಳುತ್ತಿದ್ದರು. ದಲಿತರಲ್ಲಿರುವ ಕೀಳರಿಮೆ, ಭಯದ ಕಂಪನ ದೂರಾಗಬೇಕೆಂದರೆ ಮೇಲ್ವರ್ಗದವರು ಕೊಳೆಗೇರಿಗಳ ದಲಿತನಿವಾಸಗಳಿಗೆ ತೆರಳಿ ಸಹಭೋಜನ ಮಾಡಿ, ಅವರಲ್ಲಿ ಪ್ರೀತಿವಿಶ್ವಾಸ ತುಂಬುವ ಕೆಲಸಕ್ಕೆ ಗೋಳವಲ್ಕರ್ ಚಾಲನೆ ನೀಡಿದ್ದರು. ಆ ಚಿಂತನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೋಸ್ಕರವೇ 1969ರ ಡಿಸೆಂಬರ್‍ನಲ್ಲಿ ಉಡುಪಿಯಲ್ಲಿ ಬೃಹತ್ ಸಂತಸಭೆಯನ್ನೂ ಗೋಳವಲ್ಕರ್ ಆಯೋಜಿಸಿದ್ದರು. ಪುರಿ, ದ್ವಾರಕಾ ಶಂಕರಾಚಾರ್ಯರಿಂದ ಮೊದಲ್ಗೊಂಡು ಆರು ನೂರಕ್ಕೂ ಹೆಚ್ಚು ಧರ್ಮಾಚಾರ್ಯರು ಅದರಲ್ಲಿ ಭಾಗವಹಿಸಿ ಹಿಂದುಧರ್ಮಕ್ಕೆ ಅಂಟಿರುವ ಕಳಂಕ ದೂರಮಾಡಲು ಸಂಕಲ್ಪ ತೊಟ್ಟಿದ್ದರು.

ಇದನ್ನೆಲ್ಲ ಯಾಕೆ ನೆನಪುಮಾಡಿಕೊಳ್ಳಬೇಕಾಗಿ ಬಂತು ಅಂದರೆ, ಸುಮಾರು 35-40 ವರ್ಷಗಳ ಹಿಂದೆ ಗೋಳವಲ್ಕರ್ ವಿಚಾರಧಾರೆಯ ಪ್ರೇರಣೆ ಪಡೆದು ಹೆಗಲಿಗೆ ಜೋಳಿಗೆಯೇರಿಸಿ ಮನೆಮಠ, ಸಂಸಾರ ತೊರೆದು ದೇಶಾಂತರ ಹೊರಟ ಫಕೀರನೊಬ್ಬ ಇಂದು ದೇಶದ ಚುಕ್ಕಾಣಿ ಹಿಡಿಯಲು ಹೊರಟಿದ್ದಾನೆ….. ಇದನ್ನು ಕಂಡಾಗ ಒಂದಿಡೀ ಇತಿಹಾಸ ಕಣ್ಣಮುಂದೆ ಬರುತ್ತದೆ.

ಎರಡು ದಿನದ ಹಿಂದೆ, ಇದೇ ಸಂಗತಿಯನ್ನು ಮಾಜಿ ಸಂಸದ ಎಚ್.ವಿಶ್ವನಾಥ ಮಡಿಕೇರಿಯಲ್ಲಿ ಬಹಳ ಚೆನ್ನಾಗಿ ಹೇಳಿದ್ದಾರೆ. `ದೇಶದ ನೂತನ ಪ್ರಧಾನಿಯಾಗಲಿರುವ ಮೋದಿ ಭಾರತದ ಎಲ್ಲ ರಾಜಕಾರಣಿಗಳಿಗೆ ಮಾದರಿ; ತಮಗೊಪ್ಪಿಸಿದ ಕೆಲಸವನ್ನು ತಪಸ್ಸಿನಂತೆ ನಿರ್ವಹಿಸಿ ಮೋದಿ ಗೆಲುವು ಸಾಧಿಸಿ ತೋರಿಸಿದ್ದಾರೆ. ಶೂದ್ರ ನಾಯಕನೊಬ್ಬ ಕೇವಲ ತನ್ನ ಧೀಶಕ್ತಿಯಿಂದಲೇ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿರುವುದು ಸಾಮಾನ್ಯ ಸಾಧನೆಯೇನಲ್ಲ’ ಎಂಬ ಅವರ ಮಾತಿಗೆ ಸೈ ಎನ್ನದೇ ಇರಲಾದೀತೇ? ವಿಶ್ವನಾಥರಂಥ ಬಹಳಷ್ಟು ಮಂದಿಗೆ ಮೋದಿ ಕಳೆದ ಒಂದು ವರ್ಷದಿಂದ ಪಟ್ಟ ಪರಿಶ್ರಮ ಮಾತ್ರ ಕಾಣಿಸುತ್ತದೆ. ಇನ್ನು ಕೆಲವರು ಕಳೆದ 10-12 ವರ್ಷಗಳ ಪರಿಶ್ರಮವನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಅದಕ್ಕೂ ಹಿಂದಿನ 40 ವರ್ಷಗಳ ತಪಸ್ಸಿನಂಥ ಕಠಿಣ ಪರಿಶ್ರಮ, ತ್ಯಾಗವಿದೆಯಲ್ಲಾ, ಅದರ ಮುಂದೆ ನಾವೀಗ ಕಾಣುವ ಕಷ್ಟ, ಪರಿಶ್ರಮ ಏನೇನೂ ಅಲ್ಲ.

ಬಹುಶಃ ಈ ಕಾರಣಕ್ಕೇ ಮೋದಿ ತಮ್ಮ ಭಾಷಣದ ನಡುವೆ ಹೇಳುವುದು, `ನಾವು ಅಧಿಕಾರಕ್ಕಾಗಿ ಹಂಬಲಿಸುವ ಮೊದಲು, ನಮ್ಮೆಲ್ಲರ ಹೆಗಲ ಮೇಲಿರುವ ಹೊಣೆಗಾರಿಕೆಯನ್ನು ನೆನಪಿಸಿಕೊಳ್ಳೋಣ’ ಅಂತ. ಹಾಗೆ ಹೇಳುವಾಗ ಅವರು ಹೇಳಿದ ಮತ್ತೊಂದು ಮಾತು ಹೃದಯಸ್ಪರ್ಶಿಯಾಗಿದೆ. `ನಾನು ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದಾಗ ಓರ್ವ ಕಾರ್ಯಕರ್ತನನ್ನು ನೋಡಿದೆ, ಆತ ಹರುಕುಮುರುಕು ಜುಬ್ಬಾ ತೊಟ್ಟಿದ್ದ, ಆ ಜುಬ್ಬಾ ಒಂದನ್ನು ಬಿಟ್ಟರೆ ಆತನ ಮೈಮೇಲೆ ಬೇರೇನೂ ಇರಲಿಲ್ಲ, ಆದರೆ ಆತನ ಹೆಗಲಮೇಲೆ ಪಕ್ಷದ ಬಾವುಟ ಇತ್ತು; ಆ ಸನ್ನಿವೇಶ ಕಂಡಾಗ ಒಂದುಕ್ಷಣ ಸ್ತಂಭೀಭೂತನಾಗಿಹೋದೆ, ಕಣ್ಣಲ್ಲಿ ನೀರುಕ್ಕಿತು, ಹೃದಯ ಭಾರವಾಗಿಹೋಯಿತು. ಇಂಥ ಲಕ್ಷಾಂತರ ಮಂದಿ ಈ ದಿನದ ಸಂಭ್ರಮಕ್ಕೆ ಕಾರಣರಾಗಿರುವುದನ್ನು ನಾವೆಂದೂ ಮರೆಯಬಾರದು’ ಎಂದರು ಮೋದಿ. ಮೋದಿ ಸಂಪುಟದಲ್ಲಿ ಮಂತ್ರಿಗಿರಿಗೆ ಚಾತಕಪಕ್ಷಿಯಂತೆ ಕಾಯುತ್ತಿರುವವರಿಗೆ ಈ ಮಾತು ಅರ್ಥವಾದೀತೇ?!

ಹಾಗೇ ಇನ್ನೊಂದು ಸಂದರ್ಭ. ಕಳೆದ ಆರು ತಿಂಗಳ ಹಿಂದೆ ಹರಿದ್ವಾರದಲ್ಲಿ ಬಾಬಾ ರಾಮದೇವ ನೇತೃತ್ವದಲ್ಲಿ ಭಾರಿ ದೊಡ್ಡ ಸಂತಸಭೆಯೊಂದನ್ನು ಆಯೋಜಿಸಲಾಗಿತ್ತು. ಸಹಸ್ರಾರು ಮಂದಿ ದೊಡ್ಡದೊಡ್ಡ ಸಾಧು-ಸಂತರೆಲ್ಲ ಅಲ್ಲಿ ಸಮಾವೇಶಗೊಂಡಿದ್ದರು. ಸಮಾರಂಭದ ವೇದಿಕೆಯಲ್ಲೇ ನೂರಾರು ಹಿರಿಯ ಸಂತರು ಆಸೀನರಾಗಿದ್ದರು. ಪ್ರಧಾನಿ ಅಭ್ಯರ್ಥಿ ಮೋದಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಕಪ್ಪುಹಣ ವಾಪಸಾತಿ, ಭ್ರಷ್ಟಾಚಾರ ನಿರ್ಮೂಲನೆ, ಧರ್ಮವಿರೋಧಿಗಳನ್ನು ಅಧಿಕಾರದಿಂದ ದೂರ ಇಡುವ ಕುರಿತು ಉಗ್ರಭಾಷಣ ಮಾಡುವುದಕ್ಕಾಗಿ ಸಂತರ ನಡುವೆಯೇ ಪೈಪೆÇೀಟಿ ನಡೆಯಿತು. ಒಬ್ಬರಿಗಿಂತ ಒಬ್ಬರು ಉಗ್ರವಾಗಿ ಭಾಷಣ ಮಾಡಿದರು. ಆ ಸಭೆಯಲ್ಲಿ ಅಪ್ಪಿತಪ್ಪಿ ಕೂಡ ರಾಜಕೀಯವನ್ನು ಪ್ರಸ್ತಾಪ ಮಾಡದೆ, ಎಲ್ಲರಿಗಿಂತ ಅತ್ಯಂತ ಸಂಯಮದಿಂದ ಸುಮಾರು ಮೂವತ್ತು ನಿಮಿಷ ಮಾತನಾಡಿದ್ದು ನರೇಂದ್ರ ಮೋದಿ ಮಾತ್ರ. ಭಾವಾವೇಶದ ಕೈಗೆ ಬುದ್ಧಿಕೊಡದೆ, ಎಂಥದ್ದೇ ಪ್ರಸಂಗ ಬಂದರೂ ವಿವೇಚನೆ, ಸಂಯಮದ ಗೆರೆ ಮೀರದೆ ಗಾಂಭೀರ್ಯ ಮೆರೆಯುವ ಇಂಥ ನಾಯಕನಲ್ಲಿ ಜನರು ವಿಶ್ವಾಸವಿಟ್ಟದ್ದು ಸರಿ ತಾನೆ?

ಕೋಟಿ ಕೋಟಿ ಜನರ ನಿರೀಕ್ಷೆಯ ಸಾಕಾರಕ್ಕೆ ಇನ್ನು ನಲ್ವತ್ತೆಂಟು ಗಂಟೆಯಷ್ಟೇ ಬಾಕಿ…. ದೇಶಕ್ಕೆ ಹೊಸ ಪ್ರಧಾನಿ, ಹೊಸ ಸರ್ಕಾರ, ಹೊಸ ಮಂತ್ರಿಮಂಡಲ. ಎಲ್ಲವೂ ಗರಿ ಗರಿ. ಮುಂದಿನದೆಲ್ಲವೂ ಅಂದುಕೊಂಡಂತೆ ಆಗಲೆಂದು ಆಶಿಸೋಣ, ಅಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top