ಶಾಲಾರಂಭದ ತೊಡಕು – ಪಾಲಕರಿಗೆ ಯಾವುದೇ ಆತಂಕ ಬೇಡ

ಜುಲೈ 1ನೇ ತಾರೀಕಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಆರಂಭಿಸುವ ಚಿಂತನೆ ಮುನ್ನೆಲೆಗೆ ಬಂದಿದೆ. ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಕಚೇರಿ ಸಿಬ್ಬಂದಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಜೂನ್ 5ರಿಂದಲೇ ಕಚೇರಿ ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜೂನ್ 10ರಿಂದ 15ರವರೆಗೆ ಎಸ್‌ಡಿಎಂಸಿ ಸಭೆಗಳು ನಡೆಯಬೇಕು, ಜೂನ್ 15ರಿಂದ 20ರವರೆಗೆ ಶಾಲೆಯಿಂದ ಹೊರಗುಳಿದವರಿಗಾಗಿ ದಾಖಲಾತಿ ಆಂದೋಲನ ನಡೆಯಲಿದೆ ಎಂದೂ ಆಯುಕ್ತರು ನಿರ್ದೇಶಿಸಿದ್ದಾರೆ. ಜೂನ್ 8ರಿಂದ ಖಾಸಗಿ ಅನುದಾನರಹಿತ ಶಾಲೆ ಕಚೇರಿಗಳ ಆರಂಭಕ್ಕೂ ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಪದ್ಧತಿಯಲ್ಲಿ ತರಗತಿಗಳು, ವಿದ್ಯಾರ್ಥಿಗಳನ್ನು ಎರಡು ಗುಂಪಾಗಿ ವಿಂಗಡಿಸಿ ದಿನ ಬಿಟ್ಟು ದಿನ ತರಗತಿ, ಆನ್‌ಲೈನ್‌ ತರಗತಿಗಳು- ಹೀಗೆ ಹಲವು ವಿಧದ ಚಿಂತನೆಗಳು ನಡೆಯುತ್ತಿವೆ.
ಈ ನಡುವೆ, ತಮ್ಮ ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹಲವಾರು ಹೆತ್ತವರು- ಪೋಷಕರು, ಜುಲೈ 1ರಿಂದ ತರಗತಿಗಳನ್ನು ಆರಂಭಿಸುವ ನಡೆಯನ್ನು ಟೀಕಿಸಿದ್ದಾರೆ. ಮಾತ್ರವಲ್ಲ, ಈ ಬಗ್ಗೆ ‘ನಾವು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ’ ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ತಮ್ಮ ಕಂದಮ್ಮಗಳ ಆರೋಗ್ಯದ ಬಗ್ಗೆ ಹೆತ್ತವರ ಈ ಕಾಳಜಿಯೂ ಸಕಾರಣವಾದುದೇ. ಸಾರ್ವಜನಿಕ ಸ್ಥಳಗಳಲ್ಲಿ ಸಾರಿಗೆಯಲ್ಲಿ ಓಡಾಡುವ ಮಕ್ಕಳ ಸುರಕ್ಷತೆ ಕಷ್ಟ. ಶಾಲೆಗೆ ಬರುವ ಸಾವಿರಾರು ಮಕ್ಕಳ ನಡುವೆ ಸಾಮಾಜಿಕ ಅಂತರದ ಸಮಸ್ಯೆ ಸಹಜವಾಗಿ ಉದ್ಭವಿಸಬಹುದು. ಮಕ್ಕಳನ್ನು ಕ್ರೀಡೆಯಿಂದ ದೂರವಿಡಲು ಸಾಧ್ಯವಿಲ್ಲ. ಆ ವಯೋಮಾನಕ್ಕೆ ಸಹಜವಾದ ಪರಸ್ಪರ ಸ್ಪರ್ಶ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ, ಸ್ವಚ್ಛತೆಯ ಕಡೆಗೆ ಉಡಾಫೆ – ಇವನ್ನೆಲ್ಲ ನಿರೀಕ್ಷಿಸಬಹುದು. ಇಂಥ ಸನ್ನಿವೇಶದಲ್ಲಿ, ಶಾಲೆಗಳು ಕೊರೊನಾ ಸೋಂಕು ಹಬ್ಬುವ ಹಾಟ್‌ ಸ್ಪಾಟ್‌ಗಳೇ ಆಗಿ ಬದಲಾಗುವ ಸಾಧ್ಯತೆ ಇಲ್ಲದಿಲ್ಲ. ಈ ಆತಂಕದಿಂದಲೇ ಹೆಚ್ಚಿನ ಎಲ್ಲ ಮುಂದುವರಿದ ದೇಶಗಳು ಶಾಲೆಗಳನ್ನು ಪುನಾರಂಭಿಸದೆ ಸಕಾಲಕ್ಕೆ ಕಾಯುತ್ತಿವೆ.
ಸದ್ಯಕ್ಕಂತೂ ಕಾದು ನೋಡುವ ನೀತಿಯೇ ಅತ್ಯುತ್ತಮವಾದುದು ಎಂದು ಕಾಣುತ್ತಿದೆ. ಯಾಕೆಂದರೆ ಪ್ರತಿನಿತ್ಯ ರಾಜ್ಯದಲ್ಲಿ ಇನ್ನೂರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಹೊಸಹೊಸ ಪ್ರದೇಶಗಳಲ್ಲಿ ದಾಖಲಾಗುತ್ತಿವೆ. ಒಂದು ಪ್ರಕರಣದ ಹಿಂದೆ, ಲಕ್ಷಣವನ್ನೇ ತೋರಿಸದ ಇನ್ನೂ ಹಲವಾರು ಸೋಂಕಿತರು ಇರುವ ಎಲ್ಲ ಸಾಧ್ಯತೆಯಿರುತ್ತದೆ. ಇಂಥ ಸನ್ನಿವೇಶದಲ್ಲಿ ನಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ಅಪಾಯಕ್ಕೆ ಒಡ್ಡಲು ಯಾರೂ ಮುಂದಾಗಲಾರರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಕೂಡ, ಎಸ್‌ಡಿಎಂಸಿಗಳು ಸಭೆ ಸೇರಿ ಅಲ್ಲಿ ಶಾಲಾರಂಭದ ಬಗ್ಗೆ ಅಭಿಪ್ರಾಯ ನೀಡುವಂತೆ ಪೋಷಕರಿಗೆ, ಸದಸ್ಯರಿಗೆ ತಿಳಿಸಿದ್ದಾರೆ. ಇಲ್ಲಿ ಪೋಷಕರು ತಮ್ಮ ಆತಂಕಗಳನ್ನು ಹಂಚಿಕೊಳ್ಳಬಹುದು. ಜುಲೈ 1 ಎಂಬುದು ಸಂಭವನೀಯ ಪಟ್ಟಿ, ಅಂತಿಮ ನಿರ್ಧಾರ ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದು ಆಯುಕ್ತರು ಹೇಳಿದ್ದಾರೆ. ಆದರೆ ಮಕ್ಕಳ ಮಾನಸಿಕ ಶೈಕ್ಷಣಿಕ ಬೆಳವಣಿಗೆ, ಮಾನಸಿಕ ಆರೋಗ್ಯ ಇತ್ಯಾದಿಗಳ ದೃಷ್ಟಿಯಿಂದ ಶಾಲೆ ತರಗತಿಗಳು, ಮುಖಾಮುಖಿ ಪಾಠಗಳು ಅಗತ್ಯ. ಆದರೆ ಕೊರೊನೋತ್ತರ ಕಾಲ ಪಠ್ಯದ ಗಾತ್ರವನ್ನು ಅರ್ಧಕ್ಕಿಳಿಸಬೇಕಾದ್ದು, ದಟ್ಟಣೆಯನ್ನು ನಿವಾರಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದ್ದು ಅಗತ್ಯ. ಸರಕಾರ ಶಿಕ್ಷಕರಿಗೆ ನೀಡುವ ಸಂಬಳ ವ್ಯರ್ಥವಾಗುತ್ತಿದೆ ಎಂದೆಲ್ಲ ಚಿಂತಿಸದೆ ಶಿಕ್ಷಕರ ಓರಿಯೆಂಟೇಶನ್‌ಗಳಿಗೆ  ಈ ಸಮಯವನ್ನು ವಿನಿಯೋಗಿಸಬಹುದು. ನಮ್ಮ ಮಕ್ಕಳ ಆರೋಗ್ಯವನ್ನು ಸರಕಾರ ಲಘುವಾಗಿ ಪರಿಗಣಿಸಲಾರದು ಹಾಗೂ ಸೋಂಕಿನ ಪ್ರಮಾಣ ಅಪಾಯರಹಿತ ಸ್ಥಿತಿ ತಲುಪುವವರೆಗೆ ದುಡುಕಲಾರದು ಎಂದು ಆಶಿಸೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top