ಕೊರೊನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಸಂಬಂಧ ‘ಅನ್‌ಲಾಕ್’ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಶಾಲೆ ಆರಂಭದ ವಿಷಯದಲ್ಲಿ ಪೋಷಕರ ಆತಂಕವೂ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸಮಾಜದ ಎಲ್ಲವರ್ಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅದರಂತೆ, ಸೋಮವಾರ ಸಚಿವರು ‘ವಿಜಯ ಕರ್ನಾಟಕ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರ ಜತೆ ಚರ್ಚಿಸಿದ್ದಾರೆ. ಕೊರೊನಾ ಮಧ್ಯೆಯೂ ಪಿಯು ದ್ವಿತೀಯ ವರ್ಷದ ಇಂಗ್ಲಿಷ್ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಿ, ಯಶಸ್ವಿಯಾಗಿರುವ ಶಿಕ್ಷ ಣ ಸಚಿವರ ಈ ನಡೆ ಸ್ವಾಗತಾರ್ಹವಾಗಿದೆ.
ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ‘ವಿಜಯ ಕರ್ನಾಟಕ’ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪಾಠ ಪ್ರವಚನ ನಡೆಸುವುದಕ್ಕೆ ಇಂಥದ್ದೇ ವಿಧಾನ ಸರಿ ಅಥವಾ ತಪ್ಪು ಎಂಬುದಕ್ಕೆ ಕಟ್ಟು ಬೀಳುವ ಬದಲು ಆನ್‌ಲೈನ್, ಆಪ್‌ಲೈನ್, ವಾಟ್ಸ್ಆ್ಯಪ್, ಟಿವಿ, ರೆಡಿಯೋ, ಫ್ರೀ ರೆಕಾರ್ಡೆಡ್, ರಿಯಲ್ ಟೈಮ್ ಕ್ಲಾಸ್ ಅಥವಾ ಇನ್ನಾವುದೇ ಸಾಧ್ಯವಿರುವ ಮಾಧ್ಯಮಗಳ ಮೂಲಕ ಶೈಕ್ಷಣಿಕ ಚಟುವಟಿಕೆ ಸಮಗ್ರವಾಗಿ ನಡೆಯಬೇಕು. ಆ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಿ, ಅಕಾಡೆಮಿಕ್ ತೊಡಗಿಸಿಕೊಂಡಿದ್ದೇವೆ ಎಂಬ ಭಾವನೆ ಮಕ್ಕಳಲ್ಲಿ ಬೆಳೆಸುವ ಬಗ್ಗೆ ಆದ್ಯತೆ ಕೊಡಬೇಕು.
ಸರಕಾರಕ್ಕೆ ಎರಡು ಆದ್ಯತಾ ಹಂತಗಳಿವೆ. ಮೊದಲನೆಯದ್ದು ಈ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಥಮ ಮತ್ತು ದ್ವಿತೀಯ ತರಗತಿಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡುವುದು ಹಾಗೂ ಕಲಿಕಾ ಗುಣಮಟ್ಟ, ಸಮಗ್ರತೆ ಮೇಲೆ ನಿಗಾ ವಹಿಸುವುದು. ಎರಡನೆಯದು ಎಲ್‌ಕೆಜಿಯಿಂದ 9ನೇ ತರಗತಿಯವರೆಗೆ ಸಾಧ್ಯವಿರುವ ಎಲ್ಲವಿಧಾನ, ಸವಲತ್ತುಗಳನ್ನೂ ಬಳಸಿಕೊಂಡು ಸಮಾನ ಪಠ್ಯಕ್ರಮ ಜಾರಿಗೆ ವ್ಯವಸ್ಥೆ ಮಾಡುವುದು.
ಮೂರನೆಯದು, ಮಕ್ಕಳಿಗಿಂತಲೂ ಹೆಚ್ಚಾಗಿ ಪಾಲಕರಲ್ಲಿರುವ ಕೊರೊನಾ ಭಯ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳು ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಇದ್ದಾರೆ ನಿಜ. ಆದರೆ, ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಮನೆಯ ಇತರ ಸದಸ್ಯರು ಹೊರಗಡೆ ಓಡಾಟ, ಸಂಪರ್ಕದಲ್ಲಿರುವುದರಿಂದ ಮಕ್ಕಳನ್ನು ಬಾಹ್ಯ ಸಂಪರ್ಕದಿಂದ ಪ್ರತಿಶತ ನೂರರಷ್ಟು ದೂರವಿಡುವುದು ಅಸಾಧ್ಯ ಎಂಬ ವಾಸ್ತವಿಕತೆಯನ್ನೂ ಸಾರ್ವತ್ರಿಕವಾಗಿ ಮನವರಿಕೆ ಮಾಡಿಕೊಡಬೇಕು. ಲಾಕ್‌ಡೌನ್ ಮುಗಿದ ನಂತರದಲ್ಲಿ ಮಕ್ಕಳು ಶಾಲೆಗೆ ಹೋಗುವುದಕ್ಕೂ ಮನೆಯಲ್ಲಿ ಇರುವುದಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂಬ ಸತ್ಯವನ್ನು ತಿಳಿಸಿ ಹೇಳಬೇಕು. ಮಕ್ಕಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಇರುತ್ತದೆ. ರೋಗ ನಿರೋಧಕ ಶಕ್ತಿ ಇರದ ಮಕ್ಕಳನ್ನು ಅತಿ ಸುರಕ್ಷಿತವಾಗಿ ಪಾಠ ಪ್ರವಚನಕ್ಕೆ ವ್ಯವಸ್ಥೆ ಮಾಡುವುದು, ಶಾಲೆಗೆ ಬರುವ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು, ಮಾಸ್ಕ್ ಇತ್ಯಾದಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯ ಮಾಡಿ ನಿಗಾ ವಹಿಸುವುದನ್ನು ಸಂಬಂಧಪಟ್ಟ ಶಾಲೆಗಳಿಗೆ ಕಡ್ಡಾಯ ಮಾಡಲಿ. ವಿಶೇಷ ಜವಾಬ್ದಾರಿ ವಹಿಸಲಿ. ಇಷ್ಟು ಮಾಡಿದರೆ ಮುಂದಿನ ಎರಡು ಮೂರು ತಿಂಗಳಲ್ಲಿ ಶಾಲಾ ಚಟುವಟಿಕೆಯೂ ಸಹಜತೆಗೆ ಬರಬಹುದು.
ಸರಕಾರ ಗಮನಿಸಬೇಕಿರುವ ಸಂಗತಿ ಏನೆಂದರೆ, ಈ ಶೈಕ್ಷಣಿಕ ವರ್ಷದಲ್ಲಿ ಪಾಠ ಪ್ರವಚನದಲ್ಲಿ ತುಸು ವ್ಯತ್ಯಾಸವಾದರೂ ಪರೀಕ್ಷೆ, ತೇರ್ಗಡೆ ಇತ್ಯಾದಿಗಳ ವಿಷಯದಲ್ಲಿ ಸಮಾನತೆ ಕಾಯ್ದುಕೊಳ್ಳಲು, ಸಂಭವನೀಯ ತಾರತಮ್ಯ ನಿವಾರಣೆ ಮಾಡಲು ಸಾಧ್ಯತೆಯಿದೆ. ಆ ಬಗ್ಗೆ ಸೂಕ್ತ ಕಾಲದಲ್ಲಿ ನೀತಿ ನಿರ್ಧಾರ ತೆಗೆದುಕೊಳ್ಳಬಹುದು. ಮುಖ್ಯವಾಗಿ ಶಿಕ್ಷಣ ಸಚಿವರು ಈಗ ಆರಂಭಿಸಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸಲಹೆ ಪಡೆಯುವ ಕ್ರಮ ಸರಿಯಾಗಿದೆ. ಆದರೆ, ಅವೆಲ್ಲಕ್ಕೂ ಹೊರತಾಗಿ ಸರಕಾರ, ಶಿಕ್ಷಣ ಇಲಾಖೆ ತನ್ನದೇ ಆದ ಸ್ವಂತ ನಿಲುವು, ನಿರ್ಧಾರ ತೆಗೆದುಕೊಳ್ಳಬೇಕಿದೆ. ಸ್ಪಷ್ಟ ನಿರ್ಧಾರ ತೆಗೆದುಕೊಂಡು ಅದರ ಜಾರಿಗೆ ಬದ್ಧವಾದರೆ ಶೀಘ್ರದಲ್ಲಿ ಪರಿಸ್ಥಿತಿ ಸಹಜತೆಗೆ ಬರುವುದರಲ್ಲಿ ಅನುಮಾನ ಬೇಡ.