– ಕೊರೊನಾ ವರದಿ ಇಲ್ಲದೆ ನೋ ಎಂಟ್ರಿ ಎನ್ನುತ್ತಿರುವ ಆಸ್ಪತ್ರೆಗಳು
– ತುರ್ತು ಪರಿಸ್ಥಿತಿಯಲ್ಲೂ ನಿಲ್ಲದ ಅಲೆದಾಟ
– ಸರಕಾರದ ಅಂತಿಮ ಎಚ್ಚರಿಕೆ ಮಧ್ಯೆಯೂ ಇತರ ರೋಗಿಗಳ ಸರಣಿ ಸಾವು.
– ಗಿರೀಶ್ ಕೋಟೆ ಬೆಂಗಳೂರು.
ಉಸಿರಾಟದ ತೊಂದರೆ, ಹೃದ್ರೋಗ ಸಮಸ್ಯೆ, ಹೆರಿಗೆ ನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರತಿ ಕ್ಷಣವೂ ಅಮೂಲ್ಯ. ಒಂದು ಕ್ಷಣವೂ ತಡ ಮಾಡದೆ ಅವರನ್ನು ಆಸ್ಪತ್ರೆಗೆ ಕರೆತರಬೇಕು… ಇತ್ತೀಚಿನವರೆಗೂ ವೈದ್ಯ ಜಗತ್ತು ಈ ಮಾತನ್ನು ಮಂತ್ರದಂತೆ ಪಠಿಸುತ್ತಿತ್ತು. ಆದರೆ ಈಗ ಕೊರೊನಾ ರೋಗಿಗಳಷ್ಟೇ ಅಲ್ಲ, ಇತರ ರೋಗಿಗಳೂ ಗಂಟೆಗಟ್ಟಲೆ, ದಿನಗಟ್ಟಲೆ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆಯುತ್ತ ಚಿಕಿತ್ಸೆ ಸಿಗದೆ ಜೀವ ಬಿಡುತ್ತಿದ್ದಾರೆ. ಕೋವಿಡ್ ಸೋಂಕಿನ ಉಸಾಬರಿಯೇ ಬೇಡ ಎಂದು ಬಹುತೇಕ ಆಸ್ಪತ್ರೆಗಳು ಕೊರೊನೇತರ ರೋಗಿಗಳನ್ನೂ ದೂರ ಇಡುತ್ತಿದ್ದಾರೆ.
ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸರಕಾರಿ ಆಸ್ಪತ್ರೆಗಳನ್ನು ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳನ್ನೂ ಚಿಕಿತ್ಸೆಗೆ ಬಳಸಿಕೊಳ್ಳಲಾಯಿತು. ಆದರೆ ಕೊರೊನಾ ಅಬ್ಬರದ ನಡುವೆ ಇತರ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ದಾರುಣವಾಗಿ ಸಾಯುವ ಪ್ರಕರಣಗಳು ಹೆಚ್ಚುತ್ತಿವೆ.
ವಿಶ್ವದ ಮೂಲೆ ಮೂಲೆಗಳಿಂದ ನಾನಾ ಚಿಕಿತ್ಸೆಗಳಿಗಾಗಿ ರೋಗಿಗಳನ್ನು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ವೈದ್ಯ ಜಗತ್ತಿನ ಹೆಗ್ಗಳಿಕೆಯಂತೂ ಕೊರೊನಾ ಕಾಲದಲ್ಲಿ ಮಂಕು ಕವಿದೆದೆ. ರಾಜ್ಯದ ಇತರ ಭಾಗಗಳ ಆಸ್ಪತ್ರೆಗಳು ಕೂಡ ಇದೇ ರೀತಿ ನಿರ್ಧಯವಾಗಿ ನಡೆಸಿಕೊಳ್ಳುತ್ತಿವೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ಗಗನ ಕುಸುಮ ಆಗಿರುವುದು ಒಂದು ಕಡೆಗಾದರೆ, ಮತ್ತೊಂದು ಕಡೆ ಕೊರೊನಾ ಇಲ್ಲದ ರೋಗಿಗಳೂ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಬಿಡುತ್ತಿದ್ದಾರೆ. ಏನೇ ಆರೋಗ್ಯ ಸಮಸ್ಯೆ ಆಗಿದ್ದರೂ ಕೊರೊನಾ ಪರೀಕ್ಷೆಯ ವರದಿ ಇಲ್ಲದೆ ಆಸ್ಪತ್ರೆಯೊಳಗೆ ಕಾಲಿಡಬೇಡಿ ಎನ್ನುವ ನಿರ್ದಯ ವರ್ತನೆ ವರದಿಯಾಗುತ್ತಿವೆ. ತಡರಾತ್ರಿಯಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಆದವರು ಕೊರೊನಾ ಪರೀಕ್ಷೆಗೆ ಎಲ್ಲಿಗೆ ಹೋಗಬೇಕು? ವರದಿ ಬರಲು 3ರಿಂದ 5 ದಿನಗಳಾದರೂ ಬೇಕು. ಅಲ್ಲಿಯವರೆಗೆ ತುರ್ತು ಅಗತ್ಯದ ರೋಗಿಗಳು ಎಲ್ಲಿಗೆ ಹೋಗಬೇಕು? ವರದಿ ಬರುವವರೆಗೂ ಜೀವ ಕಾಯುತ್ತದೆಯೇ ಎನ್ನುವ ಪ್ರಶ್ನೆಗಳಿಗೆ ‘ಸಾವೇ’ ಉತ್ತರವಾಗಿದೆ.
ಸರಕಾರ ಕೊಟ್ಟ ಎಚ್ಚರಿಕೆಗಳೇನು?
– ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಮಾಡಲಾಗುವುದು.
– ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಲಾಗುವುದು.
ಆಗುತ್ತಿರುವುದೇನು?
– 11 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಯಿತು. ಇದರ ಹೊರತಾಗಿ ನೋಟಿಸ್ ಪಡೆದ ಆಸ್ಪತ್ರೆಗಳ ವಿರುದ್ಧ ಯಾವುದೇ ಕ್ರಮ ಆಗಲಿಲ್ಲ.
– ಕೊರೊನಾ ತಪಾಸಣೆಗೆ ನಿಗದಿಗಿಂತ ಹೆಚ್ಚು ಹಣ ಪಡೆದ 2 ಲ್ಯಾಬ್‌ಗಳಿಗೆ ನೋಟಿಸ್ ನೀಡಲಾಯಿತು. ಕ್ರಮ ಆಗಲಿಲ್ಲ. ಕೆಲವು ಖಾಸಗಿ ಲ್ಯಾಬ್‌ಗಳು 4,500 ಬದಲಿಗೆ 6 ಸಾವಿರಕ್ಕಿಂತ ಹೆಚ್ಚು ಹಣ ಪಡೆಯುತ್ತಿವೆ.
– ಎರಡು ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು. ಬಳಿಕ ಆಸ್ಪತ್ರೆಗಳು ತಪ್ಪು ತಿದ್ದಿಕೊಂಡಿದ್ದಾಗಿ ಹೇಳಿಕೆ ನೀಡಿದವು ಅಷ್ಟೆ.
ಹೈಕೋರ್ಟ್ ಚಾಟಿ ಬಳಿಕವೂ…
ಸರಕಾರದ ಸರಣಿ ಕೊನೆಯ ಎಚ್ಚರಿಕೆಗಳಿಗೂ ಆಸ್ಪತ್ರೆಗಳು ಮಣಿಯದಿದ್ದಾಗ ಹೈಕೋರ್ಟ್ ಚಾಟಿ ಬೀಸಿತು. ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿತು. ಇದುವರೆಗೆ ಯಾವ ಆಸ್ಪತ್ರೆ ವಿರುದ್ಧವೂ ಸರಕಾರ ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿಲ್ಲ.
ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವುದು ಅಕ್ಷಮ್ಯ. ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಪ್ರಮಾದ ಎಸಗುವ ಆಸ್ಪತ್ರೆ ಹಾಗೂ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.
– ಡಾ. ಕೆ. ಸುಧಾಕರ್, ವೈದ್ಯ ಶಿಕ್ಷಣ ಸಚಿವ
ಗರ್ಭಿಣಿಯರಿಗೆ ಪಾಸಿಟಿವ್, ನೆಗೆಟಿವ್ ಪ್ರಶ್ನೆಯಿಲ್ಲ. ಅವರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಬೇಕಾಗುತ್ತದೆ. ಮುಂದಿನ 3ರಿಂದ 4 ತಿಂಗಳಲ್ಲಿ 86 ಸಾವಿರ ಗರ್ಭಿಣಿಯರಿಗೆ ಹೆರಿಗೆಯಾಗಲಿದೆ. ಇದಕ್ಕೆ ಬೇಕಾದ ಮುಂಜಾಗ್ರತೆ ಕೈಗೊಳ್ಳಲು ಸೂಚಿಸಲಾಗಿದೆ. ಕಂಟೈನ್ಮೆಂಟ್, ಸೀಲ್‌ಡೌನ್ ಆಗಿದ್ದರೂ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಆದೇಶಿಸಲಾಗಿದೆ.
– ಬಿ. ಶ್ರೀರಾಮುಲು ಆರೋಗ್ಯ ಸಚಿವ
ಬೆಡ್ ಚಾರ್ಜ್ 30 ಸಾವಿರ!
ಆಸ್ಪತ್ರೆಗೆ ಬರುವ ಪ್ರತಿ ರೋಗಿಗೂ ಕೊರೊನಾ ಪರೀಕ್ಷೆ ಆಗಬೇಕು ಎನ್ನುವುದರ ಹಿಂದೆಯೂ ಲೆಕ್ಕಾಚಾರ ಇದೆ. ವರದಿ ಬರುವವರೆಗೂ ಪ್ರತಿ ದಿನದ ಬೆಡ್ ಶುಲ್ಕ 30 ಸಾವಿರ ಇದೆ. ವರದಿ ಪಾಸಿಟಿವ್/ನೆಗೆಟಿವ್ ಏನೇ ಬಂದರೂ ಈ ಹಣ ಕಟ್ಟಲೇಬೇಕು. ಅಲ್ಲಿಯವರೆಗೂ ಬೆಡ್ ಮಾತ್ರ ಸಿಗುತ್ತದೆ. ಚಿಕಿತ್ಸೆ ಇಲ್ಲ. ವರದಿ ಬಂದ ಬಳಿಕ ಚಿಕಿತ್ಸೆ ಶುರು ಮಾಡ್ತೇವೆ. 5 ಲಕ್ಷ ಮೊದಲೇ ಕಟ್ಟಿದರೆ ಮಾತ್ರ ದಾಖಲಿಸಿಕೊಳ್ಳುತ್ತೇವೆ’ ಎಂದು ಕೆಲ ಆಸ್ಪತ್ರೆಗಳು ಹೇಳುತ್ತಿವೆ.