ದೇವ- ದಾನವ ದೇಶಗಳ ಆಧುನಿಕ ಸಮುದ್ರ ಮಥನ

– ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ

ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ
ದೇವರೆಂಬವರೆತ್ತ ಹೋದರೇನಿಂ ಭೋ?
ಅಂದೊಮ್ಮೆ ಓಡಿಹೋಗಿ ಆ ಶಿವನ ಮೊರೆಯ ಹೊಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ?
ಪುರಾಣ ಪ್ರಸಿದ್ಧವಾದ ಈ ಸಮುದ್ರಮಥನ ಕಥಾಪ್ರಸಂಗವನ್ನು ಉಲ್ಲೇಖಿಸಿ ಬಸವಣ್ಣನವರು ಈ ವಚನದಲ್ಲಿ ವಿಡಂಬನೆ ಮಾಡಿದ್ದಾರೆ. ದೇವತೆಗಳು ಮತ್ತು ರಾಕ್ಷಸರು ಸಮುದ್ರದ ಒಡಲಿನಲ್ಲಿದ್ದ ಅಮೃತವನ್ನು ಪಡೆಯಲು ಒಟ್ಟುಗೂಡಿ ಪ್ರಯತ್ನ ಮಾಡಿದರು ಎಂಬುದು ಪುರಾಣ ಪ್ರಸಿದ್ಧವಾದ ಕಥೆ. ಇದಕ್ಕಾಗಿ ಮಂದರಗಿರಿಯನ್ನೇ ಕಡೆಗೋಲನ್ನಾಗಿ ಮಾಡಿಕೊಂಡರು. ಸರ್ಪರಾಜನಾದ ವಾಸುಕಿಯನ್ನೇ ಹಗ್ಗವನ್ನಾಗಿ ಮಾಡಿಕೊಂಡರು. ದೇವತೆಗಳು ವಾಸುಕಿಯ ಬಾಲದ ಕಡೆಗೂ, ದಾನವರು ತಲೆಯ ಕಡೆಗೂ ಹಿಡಿದು ನಿಂತು ಸಮುದ್ರವನ್ನು ಕಡೆಯಲು ಆರಂಭಿಸಿದರು. ಆದರೆ ಅವರ ನಿರೀಕ್ಷೆಯಂತೆ ಸಮುದ್ರ ಮಂಥನದಿಂದ ಮೊದಲು ದೊರೆತದ್ದು ಅಮೃತವಲ್ಲ; ಹಾಲಾಹಲ ವಿಷ. ಅದರಿಂದ ಭಯಭೀತರಾದ ದೇವತೆಗಳು ಮತ್ತು ರಾಕ್ಷಸರು ದಿಕ್ಕಾಪಾಲಾಗಿ ಓಡತೊಡಗಿದರು. ಅಂತಹ ವಿಷಮ ಸನ್ನಿವೇಶದಲ್ಲಿ ನಿಮ್ಮ ‘ದೇವರುಗಳು’ ಎಲ್ಲಿ ಹೋದರು? ಎಂದು ನಾಸ್ತಿಕರಂತೆ ಬಸವಣ್ಣನವರು ಮೇಲ್ಕಂಡ ವಚನದಲ್ಲಿ ಪ್ರಶ್ನಿಸಿದ್ದಾರೆ. ಅವರ ಈ ಪ್ರಶ್ನೆಯ ಹಿಂದೆ ಇರುವುದು ನಾಸ್ತಿಕತೆ ಅಲ್ಲ. ಏಕದೇವತಾ ನಿಷ್ಠೆ. ಬಹುದೇವತಾರಾಧನೆಯ ವಿರೋಧ. ‘‘ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡ, ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ, ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತ್ತು ವೇದ’’ ಎಂದು ಬಸವಣ್ಣನವರು ಮತ್ತೊಂದೆಡೆ ಸ್ಪಷ್ಟಪಡಿಸುತ್ತಾರೆ. ‘‘ಓಂ ದ್ಯಾವಾಭೂಮೀ ಜನಯನ್‌ ದೇವ ಏಕಃ’’ ಎನ್ನುವ ವೇದವಾಕ್ಯವನ್ನೇ ಉದ್ಧರಿಸಿ ಸಮರ್ಥಿಸಿಕೊಳ್ಳುತ್ತಾರೆ. ಈ ಸೃಷ್ಟಿಯಲ್ಲಿ ಇಬ್ಬರು ಮೂವರು ದೇವರಿಲ್ಲ, ಒಬ್ಬನೇ ದೇವರು ಇರುವುದು ಎಂದು ಪ್ರತಿಪಾದಿಸುತ್ತಾರೆ.
ಇಡೀ ವಿಶ್ವವನ್ನೇ ಆವರಿಸಿ ಜೀವರಾಶಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದ ಆ ಭೀಕರ ವಿಷಜ್ವಾಲೆಯಿಂದ ತಲ್ಲಣಿಸಿದ ದೇವತೆಗಳು ಮತ್ತು ದಾನವರು ಓಡೋಡಿ ಹೋಗಿ ‘ತ್ರಾಹಿ! ತ್ರಾಹಿ!’ ಎಂದು ಆ ಜಗದೊಡೆಯನಾದ ಶಿವನಿಗೆ ಮೊರೆಯಿಟ್ಟರು. ಆ ಶಿವನು ಸಕಲ ಜೀವರಾಶಿಯನ್ನು ಸಂರಕ್ಷಿಸಲೋಸುಗ ಎಲ್ಲಾ ಹಾಲಾಹಲವನ್ನು ಒಂದೇ ಬೊಗಸೆಯಲ್ಲಿ ಕುಡಿದುಬಿಟ್ಟ! ಪತಿಯು ವಿಷ ಕುಡಿದದ್ದನ್ನು ನೋಡಿ ಗಾಬರಿಗೊಂಡ ಪಾರ್ವತಿಯು ಶಿವನ ಗಂಟಲನ್ನು ಒತ್ತಿ ಹಿಡಿದು ಹಾಲಾಹಲವು ಹೊಟ್ಟೆ ಸೇರದಂತೆ ಮಾಡಿದಳು. ವಿಷವು ಶಿವನ ಕಂಠದಲ್ಲಿಯೇ ಉಳಿಯಿತು; ಕೊರಳು ನೀಲಿಗಟ್ಟಿತು. ಹೀಗೆ ಶಿವನು ನೀಲಕಂಠನಾದ, ವಿಷಕಂಠನಾದ! ಸಮುದ್ರಮಂಥನ ಮುಂದುವರಿಯಿತು. ಹಾಲಾಹಲದ ನಂತರ ಒಂದೊಂದೇ ಬೆಲೆಬಾಳುವ ಅನಘ್ರ್ಯ ರತ್ನಗಳು ಮತ್ತು ರತ್ನಪ್ರಾಯವಾದ ವಸ್ತುಗಳು, ಸುಂದರಿಯರು ಸಮುದ್ರದ ಮೇಲೆ ತೇಲಿಬಂದರು. ಕೊನೆಯಲ್ಲಿ ಅಮೃತಕಲಶ ಹಿಡಿದು ಧನ್ವಂತರಿ ಮೇಲೆ ಬಂದನು. ನಂತರ ದೇವತೆಗಳು ಮತ್ತು ದಾನವರು ಅಮೃತವನ್ನು ಹಂಚಿಕೊಳ್ಳಲು ನಡೆಸಿದ ಪ್ರಯತ್ನ ಮತ್ತು ಅಮೃತವು ರಾಕ್ಷಕರಿಗೆ ದೊರೆಯಬಾರದೆಂದು ನಡೆಸಿದ ಕುತಂತ್ರ ಥೇಟ್‌ ಇಂದಿನ ರಾಜಕೀಯ ವಿದ್ಯಮಾನಗಳನ್ನೇ ಹೋಲುವಂತಿದೆ! ಅದು ಬೇರೆಯದೇ ಆಯಾಮ, ಇಲ್ಲಿ ಅದು ಅಪ್ರಸ್ತುತ! ಪಾರ್ವತಿಯು ವಿಷವನ್ನು ಗಂಟಲಿನಲ್ಲಿ ತಡೆದು ನಿಲ್ಲಿಸದಿದ್ದರೆ ಶಿವ ಸಾಯುತ್ತಿದ್ದನೇ? ಹಾಗಾದರೆ ಅವನು ನಿತ್ಯ, ಅನಾದಿ, ಅನಂತ ಹೇಗಾಗುತ್ತಾನೆ ಎಂಬ ಪ್ರಶ್ನೆ ಸರಿ ಎನಿಸಿದರೂ ಈ ಕಥಾಪ್ರಸಂಗವನ್ನು ತಾತ್ವಿಕ ದೃಷ್ಟಿಯಿಂದ ನೋಡಬಾರದು. ಲೌಕಿಕ ದಾಂಪತ್ಯ ಜೀವನದಲ್ಲಿ ತನ್ನ ಪತಿಯ ಬಗ್ಗೆ ಕಾಳಜಿಯುಳ್ಳ ಭಾರತೀಯ ನಾರಿಯರ ಭಾವನೆಗಳು ಹೇಗಿರುತ್ತವೆಯೆಂಬ ಭಾವನಾತ್ಮಕ ದೃಷ್ಟಿಯಿಂದ ನೋಡುವುದು ಒಳಿತು.
ಈ ಪುರಾಣದ ಕಥೆ ನೆನಪಾಗಲು ಕಾರಣ ಈಗ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಹೆಮ್ಮಾರಿ. ಜಗತ್ತಿನಾದ್ಯಂತ ದೇಶಗಳು ಐಹಿಕ ಸುಖವೆಂಬ ಅಮೃತವನ್ನು ಪಡೆಯಲು ನಾನಾ ರೀತಿಯ ಸಂಶೋಧನೆಗಳನ್ನು ನಡೆಸುತ್ತಾ ಬಂದಿವೆ. ಕವಿಯೊಬ್ಬ ಹೇಳುವಂತೆ, ‘‘ಮಿಂಚನ್ನು ಹಿಡಿತಂದು ನಮ್ಮ ಮನೆಯ ದೀಪವಾಗಿಸಿವೆ, ಬೀಸುವ ಗಾಳಿಯನ್ನು ನಮ್ಮ ಮನೆಯ ಬೀಸಣಿಕೆಯಾಗಿಸಿವೆ’’. ಆಕಾಶದಲ್ಲಿ ಹಕ್ಕಿಯಂತೆ ಹಾರುವ ಕನಸು ನನಸು ಮಾಡಿವೆ. ಚಂದ್ರಲೋಕದಲ್ಲಿ ಮನೆಕಟ್ಟುವ, ಮಂಗಳನ ಅಂಗಳಕ್ಕೆ ಲಗ್ಗೆ ಇಡುವ ಮಹದಾಕಾಂಕ್ಷೆ ಬೆಳೆದು ನಿಂತಿದೆ. ಈ ಆಧುನಿಕ ಸಮುದ್ರಮಥನದಲ್ಲಿ ಜಗತ್ತಿನ ಎಲ್ಲ್ಲ ದೇಶಗಳೂ ಭಾಗವಹಿಸಿವೆ. ಹಲವು ದೇಶಗಳು ದೇವತೆಗಳಂತೆ, ಕೆಲವು ದೇಶಗಳು ದಾನವರಂತೆ ಇವೆ. ಈ ಮಥನದಲ್ಲಿ ಭಾರತದಂತಹ ಹಂಚಿ ತಿನ್ನುವ ದೇವತಾ ದೇಶಗಳೂ ಇವೆ. ಚೀನಾದಂತಹ ಹೊಂಚಿ ತಿನ್ನುವ ರಾಕ್ಷಸ ದೇಶಗಳೂ ಇವೆ.
ಅಂತೂ ಇಂತೂ ಈ ಆಧುನಿಕ ಸಮುದ್ರಮಥನದಲ್ಲಿ ಈಗ ಕೊರೊನಾ ಎಂಬ ಹಾಲಾಹಲ ಆವಿರ್ಭವಿಸಿದೆ. ಶಿವಪುರಾಣದ ಕಥೆ ಈಗ ಕಾಲ್ಪನಿಕ ಕಥೆಯಾಗಿ ಉಳಿದಿಲ್ಲ. ವಾಸ್ತವತೆಯ ಸ್ವರೂಪವನ್ನು ಪಡೆದಿದೆ. ಈ ಹಾಲಾಹಲ ವಿಷವನ್ನು ಕುಡಿದು ಜಗತ್ತನ್ನು ಕಾಯಬಲ್ಲ ಶಿವ ಆವಿರ್ಭವಿಸಿ ಬರುತ್ತಾನೆಂದು ಪುರಾಣಶ್ರವಣ ಮಾಡುತ್ತಾ ಕಾದು ಕುಳಿತುಕೊಳ್ಳದೆ ಈ ಕೊರೊನಾ ವಿಷಾಣು ತಮ್ಮ ಗಂಟಲಿನಿಂದ ಶ್ವಾಸಕೋಶಕ್ಕೆ ಇಳಿಯದಂತೆ ಪ್ರತಿಯೊಬ್ಬರೂ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಎಂತಹ ವಿಪತ್ತು ಬಂದರೂ ಎದುರಿಸಿ ನಿಲ್ಲುವ ಬುದ್ಧಿಯನ್ನು ದೇವರು ಮನುಷ್ಯನಿಗೆ ಕೊಟ್ಟಿದ್ದಾನೆ. ಆ ಬುದ್ಧಿಯನ್ನು ಸರಿಯಾಗಿ ಬಳಸಿಕೊಂಡರೆ ಕೊರೊನಾ ರಕ್ಕಸಿಯನ್ನು ಸದೆಬಡಿಯುವುದು ಕಷ್ಟವೇನಲ್ಲ. ಆದರೆ ದೇವರು ಕೊಟ್ಟ ಬುದ್ಧಿಯನ್ನು ನಾವು ಬಳಸಿಕೊಳ್ಳುತ್ತಿದ್ದೇವೆಯೆ! ಹಿಂದಿನ ಶತಮಾನದಲ್ಲಿ ಪ್ಲೇಗ್‌ ಬಂದಾಗ ಜನ ಊರನ್ನು ಬಿಟ್ಟು ಅಡವಿಯಲ್ಲಿ ದೂರ ದೂರ ಗುಡಿಸಲು ಹಾಕಿಕೊಂಡು ಅಂತರ ಕಾಪಾಡಿಕೊಂಡು ಬದುಕಿ ಪಿಡುಗನ್ನು ಎದುರಿಸಿ ಗೆದ್ದರು. ಈಗಲೂ ನಾವು ಮಾಡಬೇಕಾದುದು ಅದನ್ನೇ. ಆದರೆ ಮನೆಮಠಗಳನ್ನು ಬಿಟ್ಟು ಬದಲಾದ ಕಾಲಮಾನದಲ್ಲಿ ಅಡವಿಗೆ ಹೋಗುವುದು ಬೇಕಾಗಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್‌ ಧರಿಸಿ, ಅನವಶ್ಯಕವಾಗಿ ಅಡ್ಡಾದಿಡ್ಡಿಯಾಗಿ ತಿರುಗಾಡದೆ ತಂತಮ್ಮ ಮನೆಗಳಲ್ಲಿದ್ದರೆ ಸಾಕು ಕೊರೊನಾವನ್ನು ಗೆದ್ದಂತೆಯೇ! ಅದನ್ನು ಜನರು ಮಾಡದಿದ್ದರೆ ಸರಕಾರಗಳು ಏನು ತಾನೆ ಮಾಡಲು ಸಾಧ್ಯ!
ಎಲ್ಲದಕ್ಕೂ ಸರಕಾರದ ಕಡೆಗೆ ಬೆರಳು ಮಾಡಿ ತೋರಿಸುವ ಪ್ರವೃತ್ತಿ ನಮ್ಮ ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿದೆ. ಹಿಂದೆ ರಾಜಮಹಾರಾಜರುಗಳ ಕಾಲದಲ್ಲಿ ಕೋಶ (Treasury) ಮತ್ತು ಸೈನ್ಯ (Army) ಎರಡು ಪ್ರಮುಖ ಆಧಾರಸ್ತಂಭಗಳಾಗಿದ್ದವು. ಕೋಶ ಮರದ ಬೇರು ಇದ್ದಂತೆ ಎಂದು ವಿಷ್ಣುಧರ್ಮೋತ್ತರ ಹೇಳುತ್ತದೆ. ರೆಂಬೆ ಕೊಂಬೆಗಳು ಬೆಳೆಯಬೇಕೆಂದರೆ ಬೇರು ಗಟ್ಟಿಯಾಗಿರಬೇಕು. ಖಜಾನೆ ತುಂಬುವುದು ಜನರ ತೆರಿಗೆ ಹಣದಿಂದ. ರಾಜನು ತನಗೆ ತಿಳಿದಂತೆ ತೆರಿಗೆಯನ್ನು ವಿಧಿಸುವಂತಿರಲಿಲ್ಲ. ಆಹಾರಧಾನ್ಯಗಳ ಆದಾಯದ ಮೇಲೆ 1/6 ಭಾಗದಂತೆ ವಿಧಿಸಬಹುದು. ಆಪತ್ಕಾಲದಲ್ಲಿ ಒಮ್ಮೆ ಮಾತ್ರ 1/3 ಅಥವಾ ಹೆಚ್ಚೆಂದರೆ 1/4 ಭಾಗ ವಿಧಿಸಬಹುದಾಗಿತ್ತು. ಖಜಾನೆಯನ್ನು ತುಂಬಿಸಲು ಜನರ ಮೇಲೆ ತೆರಿಗೆ ಹಾಕುವುದು ಅನಿವಾರ್ಯ. ಆದರೆ ವಿಧಿಸುವ ತೆರಿಗೆ ಅವರಿಗೆ ಭಾರವಾಗದಂತೆ, ನೋವಾಗದಂತೆ ಇರಬೇಕೇ ಹೊರತು ಸುಲಿಗೆ ಆಗಬಾರದು ಎಂಬ ನಿಯಮವಿತ್ತು. ‘ಯಥಾ ಮಧು ಸಮಾಧೃತ್ತೇ ರಕ್ಷನ್‌ ಪುಷ್ಪಾಣಿ ಷಟ್‌ಪದಃ|’ ಎನ್ನುತ್ತದೆ ಮಹಾಭಾರತದ ಉದ್ಯೋಗ ಪರ್ವ (34.17-18). ದುಂಬಿಯು ಮಕರಂದವನ್ನು ಹೀರುವಾಗ ಹೂವಿಗೆ ತಿಲಮಾತ್ರವೂ ನೋವಾಗುವುದಿಲ್ಲ. ನಾಜೂಕಾಗಿ ಹೀರುತ್ತದೆ. ಹಾಗೆ ರಾಜನು ಜನರ ಮೇಲೆ ವಿಧಿಸುವ ತೆರಿಗೆಗಳು ಸಹ ಜನರ ದೈನಂದಿನ ಬದುಕಿಗೆ ವ್ಯತ್ಯಯವನ್ನು ಉಂಟುಮಾಡುವಂತಿರಬಾರದು, ಅವರಿಗೆ ಭಾರವೆನಿಸಬಾರದು. ಅಂತಹ ಎಚ್ಚರಿಕೆ ಅಗತ್ಯ ಎನ್ನುತ್ತದೆ. ಕೋಶ ರಾಜನ ಸಂಪತ್ತಲ್ಲ. ಅದು ಪ್ರಜೆಗಳ ಹಿತಕ್ಕಾಗಿ ಇರುವ ನಿಧಿ. ಅದನ್ನು ಪೋಲಾಗದಂತೆ ಜಾಗರೂಕತೆಯಿಂದ ನಿರ್ವಹಿಸಬೇಕು ಎಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ. ಜನರ ಸಂಪತ್ತಾಗಿರುವ ಕೋಶವನ್ನು ರಾಜನೇ ಆಗಲಿ ಪ್ರಜಾಪ್ರತಿನಿಧಿಗಳೇ ಆಗಲಿ ಸ್ವಂತಕ್ಕೆ ಬಳಸಿದರೆ, ತಮ್ಮ ಮೋಜು ಮಸ್ತಿಗಳಿಗೆ ಲೂಟಿ ಹೊಡೆದರೆ ಜನರಿಗೆ ವಂಚನೆ ಮಾಡಿದಂತಾಗುತ್ತದೆ.
ಕೊರೊನಾ ಹೆಮ್ಮಾರಿಯು ಹಲವು ಆಯಾಮಗಳ ಸಂಕಷ್ಟಗಳನ್ನು ತಂದೊಡ್ಡಿದೆ. ಅದರಲ್ಲಿ ಸಮುದಾಯ ಆರೋಗ್ಯಕ್ಕೆ ಬಂದಿರುವ ಅತಿ ದೊಡ್ಡ ಸವಾಲು. ಇಂತಹ ಸಂಕಷ್ಟದ ಸಂದರ್ಭಲ್ಲಿ ಜನರನ್ನು ಯಾರು ಕಾಪಾಡಬೇಕು. ದೇವರು ಅವತಾರವೆತ್ತಿ ಬಂದು ರಕ್ಷಿಸುತ್ತಾನೆಂದು ಜನರು ಕುಳಿತುಕೊಳ್ಳಬೇಕೇ? ದೇವರು ತಮಗೆ ಕೊಟ್ಟ ಸದ್ಬುದ್ಧಿಯನ್ನು ಬಳಸಿಕೊಂಡು ವಿಪತ್ತಿನಿಂದ ಪಾರಾಗಬೇಕೆ? ರೆಕ್ಕೆಹುಳುಗಳು ದೀಪದ ಬೆಳಕಿಗೆ ಆಕರ್ಷಿತವಾಗಿ ತೆಕ್ಕೆಬಿದ್ದು ರೆಕ್ಕೆಸುಟ್ಟು ಸಾಯುವಂತೆ ಜನರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವರ್ತಿಸುತ್ತಿದ್ದಾರೆ. ಹುಳುಗಳಿಗೆ ಸಾಯುತ್ತೇವೆಂಬ ಪರಿವೆಯಿಲ್ಲ; ಧಾವಿಸಿ ಹಾರಿ ಬರುತ್ತವೆ. ಕಣ್ಣೆದುರಿಗೆ ಕ್ಷಣಾರ್ಧದಲ್ಲಿ ಸುಟ್ಟು ಸೀಕಲಾಗಿ ಸೀದುಹೋಗುವುದನ್ನು ನೋಡಿಯೂ ಬೆಂಕಿಗೆ ಬೀಳುತ್ತವೆ. ಇದೇ ರೀತಿ ಕುಟುಂಬಕ್ಕೆ ವಿದಾಯ ಹೇಳಿ ಹೀನವಾಗಿ ಸಾಯಬೇಕಾಗುತ್ತದೆ ಎಂಬ ಅರಿವಿದ್ದರೂ ಬಹುತೇಕ ಜನರು ಮತಿಹೀನರಾಗಿ ವರ್ತಿಸುತ್ತಿರುವುದು ದೊಡ್ಡ ದುರಂತ!
ಸಾರ್ವಜನಿಕ ಬದುಕು ನಿತ್ಯ ನರಕವಾಗುತ್ತಿದೆ; ಜನಸಮುದಾಯದ ಜೀವನ ಬುಡಮೇಲಾಗುತ್ತಿದೆ. ಕೂಲಿಕಾರರು ನೆಲೆ ಕಳೆದುಕೊಂಡಿದ್ದಾರೆ. ಅವರು ದಿನನಿತ್ಯದ ದುಡಿಮೆಯನ್ನೇ ನಂಬಿ ಬದುಕುವ ಜನ; ಯಾವ ಆಸ್ತಿಪಾಸ್ತಿಗಳೂ ಇಲ್ಲ. ಇನ್ನು ರೈತರ ಕಷ್ಟವಂತೂ ಹೇಳತೀರದು. ಅವರು ಕಷ್ಟಪಟ್ಟು ಬಿತ್ತಿ ಬೆಳೆದ ಫಸಲಿಗೆ ಬೆಲೆ ಇಲ್ಲದೆ ಸಾಲಸೋಲಗಳ ನೇಣಿಗೆ ಬಲಿಯಾಗುತ್ತಿದ್ದಾರೆ. ಕಾರ್ಖಾನೆಗಳು ಉತ್ಪಾದನೆಯಿಲ್ಲದೆ ತೊಳಲಾಡುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಕೊಡುವುದಾದರೂ ಹೇಗೆ? ಕೊಡದಿದ್ದರೆ ಕಾರ್ಮಿಕರು ಮತ್ತು ಅವರನ್ನು ನಂಬಿಕೊಂಡ ಸಂಸಾರಗಳು ಬದುಕುವುದಾದರೂ ಹೇಗೆ? ಸರಕಾರದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆರ್ಥಿಕ ಚಟುವಟಿಕೆಗಳಿದ್ದರೆ ಮಾತ್ರ ತೆರಿಗೆ ಖಜಾನೆಗೆ ಹರಿದು ಬರುತ್ತದೆ. ಕೊರೊನಾದ ದುರ್ದೆಸೆಯಿಂದ ದೇಶದ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಸರಕಾರಿ ನೌಕರರಿಗೆ ವೇತನ ನೀಡುವುದೂ ಸಹ ಸರಕಾರಕ್ಕೆ ಕಷ್ಟವಾಗಿದೆ. ಹಾಗೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಕಟವೂ ಸಹ ಇದೇ ಆಗಿದೆ. ಶಾಲೆಗಳು ನಡೆದರೆ ಫೀಸು ಸಂಗ್ರಹವಾಗುತ್ತದೆ, ಶಿಕ್ಷಕರಿಗೆ ವೇತನ ದೊರೆಯುತ್ತದೆ, ಅವರ ಬದುಕಿನ ಬಂಡಿ ಚಲಿಸುತ್ತದೆ. ಈಗ ಶಾಲೆಗಳೇ ಮುಚ್ಚಿರುವುದರಿಂದ ಫೀಸು ಬರುತ್ತಿಲ್ಲ, ಶಿಕ್ಷಕರಿಗೆ ವೇತನ ನೀಡಲು ಹಣ ಎಲ್ಲಿಂದ ಬರಬೇಕು? ವೇತನವೇ ನೀಡದಿದ್ದರೆ ಅದನ್ನೇ ನಂಬಿಕೊಂಡ ಅವರ ಬದುಕು ನಡೆಯುವುದಾದರೂ ಹೇಗೆ? ಒಟ್ಟಾರೆ ಇದೊಂದು ವಿಷವರ್ತುಲ. ಸಂಕಷ್ಟಗಳನ್ನು ಸಂಸ್ಥೆಗಳು ಮತ್ತು ನೌಕರರು ಹಂಚಿಕೊಂಡು ಹೇಗೋ ಉಸಿರಾಡಿ ಬದುಕಬೇಕಾದ ದುರ್ಭರ ಸಂದರ್ಭವಿದು.
ಕೊರೊನಾ ವೈರಸ್‌ಗೆ ವಿಜ್ಞಾನಿಗಳು ವ್ಯಾಕ್ಸೀನ್‌ ಕಂಡುಹಿಡಿಯಲು ಜಗತ್ತಿನಾದ್ಯಂತ ಹೆಣಗಾಡುತ್ತಿದ್ದಾರೆ. ಅದು ದೊರೆಯುವ ತನಕ ಜನರಿಗೆ ಬವಣೆ ತಪ್ಪಿದ್ದಲ್ಲ. ಜನರು ವೈರಸ್‌ನೊಂದಿಗೇ ಬದುಕುವುದನ್ನು ಕಲಿಯಬೇಕಾಗಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಲೇ ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡಬೇಕಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top