ಗ್ರಾಮೀಣರ ಸಫಲ ಸಾಧನೆ- ಮುಂದಿನ ಕಲಿಕೆಯತ್ತ ಗಮನ ಬೇಕು

ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನದಲ್ಲಿ ಕಳೆದ ವರ್ಷಕ್ಕಿಂತ ಶೇ.9ರಷ್ಟು ಹೆಚ್ಚಿನ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಕಡಿಮೆ ಹತ್ತಿರದಲ್ಲೇ ಗ್ರಾಮೀಣ ವಿದ್ಯಾರ್ಥಿಗಳು ಸಹ ಫಲಿತಾಂಶ ಪಡೆದಿರುವುದು ಒಂದು ಅಚ್ಚರಿಯ ಹಾಗೂ ಶ್ಲಾಘನೀಯ ವಿಚಾರ. ರೂಢಿಯಂತೆ ಕರಾವಳಿಯ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ. ಗ್ರಾಮೀಣ ಪ್ರದೇಶದ ಕೆಲವು ಕಾಲೇಜುಗಳು ಹೆಚ್ಚಿನ ರಾರ‍ಯಂಕ್‌ ಪಡೆದಿವೆ. ಕೆಲವು ಸರಕಾರಿ ಕಾಲೇಜುಗಳೂ ಶೇಕಡ ನೂರು ಫಲಿತಾಂಶ ದಾಖಲಿಸಿವೆ. ಕೊರೊನಾ ಕಾಲಘಟ್ಟದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಪ್ರಥಮವಾಗಿ ಫಲಿತಾಂಶವನ್ನು ಪ್ರಕಟಿಸಿದ ಮೊದಲ ರಾಜ್ಯ ಎನಿಸಿರುವುದು ಒಂದು ಹೆಮ್ಮೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಎದೆಗುಂದದೆ ಪಿಯುಸಿ ಇಂಗ್ಲಿಷ್‌ ನಡೆಸಿದ ಇಲಾಖೆಯ ಮತ್ತು ಪರೀಕ್ಷೆಗೆ ಹಾಜರಾದ ಮಕ್ಕಳ ಸಂಕಲ್ಪಶಕ್ತಿಯನ್ನು ಶ್ಲಾಘಿಸಲೇಬೇಕು.
ಪರೀಕ್ಷೆಯಲ್ಲಿ ಉತ್ತೀರ್ಣರಾದ, ಉನ್ನತ ಅಂಕಗಳನ್ನು ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು ಸಲ್ಲುತ್ತವೆ. ವರ್ಷವಿಡೀ ಪಟ್ಟ ಪರಿಶ್ರಮ ಸಾರ್ಥಕವಾದ ಗಳಿಗೆ ಸಂತೋಷ ತರುವಂಥದು. ಮುಂದಿನ ಆಯ್ಕೆಗಳನ್ನೂ ಅವರು ವಿವೇಕದಿಂದ ಮಾಡುವಂತಾಗಲಿ. ಆದರೆ ಪರೀಕ್ಷೆ ಫಲಿತಾಂಶವನ್ನು ಹಿಂಬಾಲಿಸಿಕೊಂಡು ಯಾವುದೇ ವಿದ್ಯಾರ್ಥಿಯ ದುರಂತ ಸುದ್ದಿಗಳು ಬರಬಾರದೆಂಬುದು ಎಲ್ಲ ಪ್ರಜ್ಞಾವಂತರ ಕಳಕಳಿ. ಪಿಯುಸಿ ಎಂಬುದು ಜೀವನದಲ್ಲಿ ಒಂದು ಮಹತ್ವದ ಘಟ್ಟ ನಿಜ; ಆದರೆ ಅದೇ ಎಲ್ಲವೂ ಅಲ್ಲ. ಪರೀಕ್ಷೆಯಲ್ಲಿ ಸೋತವರು ಜೀವನದಲ್ಲಿ ರಾಂಕ್‌ ಪಡೆದ ಕೋಟ್ಯಂತರ ಉದಾಹರಣೆಗಳಿವೆ. ಅನುತ್ತೀರ್ಣರಾದವರು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು, ಮರಳಿ ಪರೀಕ್ಷೆ ಕಟ್ಟಲು ಅವಕಾಶಗಳಿವೆ. ಬದುಕು ಒಂದು ಅವಕಾಶವನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಟ್ಟೇ ಕೊಡುತ್ತದೆ. ಧೃತಿಗೆಡದೆ ಮರಳಿ ಯತ್ನ ಮಾಡುವುದರಿಂದ ಶ್ರೇಯಸ್ಸಿದೆ ಎಂಬುದನ್ನು ಎಲ್ಲರೂ ನೆನಪಿಡಬೇಕು. ಹಾಗೆಯೇ ಅನುತ್ತೀರ್ಣರಾದವರನ್ನು ಪೋಷಕರು, ಸಮಾಜ ಕೂಡ ಪ್ರೋತ್ಸಾಹಪೂರ್ವಕವಾಗಿ ನೋಡುವುದರಿಂದ ಕಲಿಕೆಯಲ್ಲಿ ವ್ಯತ್ಯಾಸ ತರಲು ಸಾಧ್ಯವಿದೆ.
ಕೊರೊನಾ ಕಾಲಘಟ್ಟದಲ್ಲಿ ಎಲ್ಲ ಬಗೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಲಕ್ವ ಹೊಡೆದಿದೆ. ಪಿಯು ನಂತರದ ಕಾಲೇಜು ಸೇರ್ಪಡೆ, ಕಲಿಕೆಗಳಿಗೂ ಗ್ರಹಣ ಬಡಿದಿದೆ. ಸೋಂಕು ಕಡಿಮೆಯಾಗುವರೆಗೆ ಕಾಯುವುದು ಅಥವಾ ಸೊಂಕಿನ ಜೊತೆಗೇ ಅಕಾಡೆಮಿಕ್‌ ಚಟುವಟಿಕೆ ಮುಂದುವರಿಸುವುದು ಅನಿವಾರ್ಯ ಆಗಬಹುದು. ಅದು ಏನಿದ್ದರೂ ಮುಂದಿನ ಪ್ರಕ್ರಿಯೆಗಳಿಗೆ ಪೂರಕವಾದ ವಾತಾವರಣವನ್ನು ಶಿಕ್ಷಣ ಇಲಾಖೆ, ಪಿಯು ಪರೀಕ್ಷೆ ನಡೆಸಲು ಸೃಷ್ಟಿಸಿದ ಸನ್ನದ್ಧತೆ ಹಾಗು ಮುಂಜಾಗರೂಕತೆಯೊಂದಿಗೇ ನಡೆಸಬೇಕಾಗಿದೆ.
ಪರೀಕ್ಷೆ ಫಲಿತಾಂಶದಲ್ಲಿ ಕೆಲವು ಜಿಲ್ಲೆಗಳು ಹಲವು ವರ್ಷಗಳಿಂದ ನಿರಂತರವಾಗಿ ಕೊನೆಯ ಸ್ಥಾನಗಳಲ್ಲಿವೆ; ಇದು ಚಿಂತನೆಗೆ ಅರ್ಹ ವಿಷಯ. ಹಾಜರಾತಿ, ಉಪನ್ಯಾಸಕರ ಅಲಭ್ಯತೆ, ಪ್ರಶಿಕ್ಷಣ, ಶಿಸ್ತಿನ ಕೊರತೆ, ಶೈಕ್ಷಣಿಕ ಪರಿಕರ ಅಥವಾ ಪಠ್ಯಗಳ ಕೊರತೆ, ಇಲಾಖೆಯ ನಿರ್ಲಕ್ಷ್ಯ- ಹೀಗೆ ಸಮಸ್ಯೆಯ ಮೂಲ ತಿಳಿದರೆ ಅದರ ಪರಿಹಾರದ ಕಡೆಗೆ ಗಮನ ಹರಿಸಬಹುದು. ಮುಂದಿನ ವರ್ಷವಾದರೂ ಈ ಪ್ರದೇಶಗಳ ಹೆಚ್ಚಿನ ಮಕ್ಕಳು ಪಿಯುಸಿಯಲ್ಲಿ ಉತ್ತೀರ್ಣರಾಗುವಂತೆ ಮಾಡಲು ಸಕಲ ಪ್ರಯತ್ನಗಳನ್ನೂ ಮಾಡಬೇಕು. ಹಿನ್ನಡೆಗೆ ಕಾರಣಗಳನ್ನು ವೈಜ್ಞಾನಿಕವಾಗಿ ಶೋಧಿಸಿ ವರದಿ ನೀಡಬಲ್ಲ ತಜ್ಞರ ಸಹಕಾರದಿಂದ ಈ ಕೆಲಸಗಳನ್ನು ಹಮ್ಮಿಕೊಳ್ಳಬೇಕು. ಸರಕಾರಿ ಕಾಲೇಜುಗಳಿಗೆ ಉತ್ತಮ ಪಠ್ಯ ಪರಿಕರಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಹಾಜರಾತಿ, ಒಳಗೊಳ್ಳುವಿಕೆ, ಅಧ್ಯಯನಗಳು ಫಲಪ್ರದವಾಗಲು ಆಡಳಿತ ಮಂಡಳಿಗಳು, ಉಪನ್ಯಾಸಕರು ಹೆಚ್ಚಿನ ಪ್ರಯತ್ನ ಪಡಬೇಕು. ರಾಜ್ಯದ ಒಟ್ಟಾರೆ ಹಿತದ ದೃಷ್ಟಿಯಿಂದ ಈ ಶೈಕ್ಷಣಿಕ ಅಸಮತೋಲನ ಹೋಗಲಾಡಿಸಲು ಎಲ್ಲರೂ ಯತ್ನಿಸಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top