ದೇಶದ ಶ್ರೀಮಂತ ಮಹಿಳೆ ಮಾತ್ರವಲ್ಲ, ಉದಾರ ಪರಂಪರೆಗೂ ಕೊಂಡಿ.
– ಹ.ಚ.ನಟೇಶ ಬಾಬು.
ನನಗೆ ಟೆಕ್ನಾಲಜಿ ಬಿಸಿನೆಸ್ನಲ್ಲಿ ಆಸಕ್ತಿಯಿಲ್ಲ, ಕನಿಷ್ಠ ನಾನು ಆ ಪ್ರಯತ್ನವನ್ನೂ ಮಾಡುವುದಿಲ್ಲ….
– ಇದು 2012ರಲ್ಲಿ ‘ಎಕನಾಮಿಕ್ ಟೈಮ್ಸ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ರೋಶ್ನಿ ಮಲ್ಹೋತ್ರಾ ನಾಡಾರ್ ಅವರು ಹೇಳಿದ್ದ ಮಾತು. ಈಗ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ನ ಅಧ್ಯಕ್ಷೆ. ಬೃಹತ್ ಐಟಿ ಕಂಪನಿ ಮುನ್ನಡೆಸುವ ಮೊದಲ ಭಾರತೀಯ ಮಹಿಳೆಯೂ ಹೌದು. ಅಪ್ಪನ ಉತ್ತರಾಧಿಕಾರಿಯಾಗಿ ಸಹಜವಾಗಿಯೇ ಕಂಪನಿಯಲ್ಲಿ ಈ ಉನ್ನತ ಸ್ಥಾನ ದಕ್ಕಿದ್ದರೂ, ಅಪ್ಪ ಶಿವ ನಾಡಾರ್ರ ನೆರಳಿನಾಚೆಗೆ ಬೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.
ಸಂದರ್ಶನ ನೀಡಿದ ಒಂದೇ ವರ್ಷಕ್ಕೆ, 2013ರಲ್ಲಿ ರೋಶ್ನಿ ಎಚ್ಸಿಎಲ್ ಆಡಳಿತ ಮಂಡಳಿಗೆ ಕಾಲಿಟ್ಟರು. ಬಳಿಕ ಉಪಾಧ್ಯಕ್ಷೆಯಾದರು. 27ನೇ ವಯಸ್ಸಿನಲ್ಲಿಯೇ ಕಂಪನಿಯಲ್ಲಿ ಸಿಇಒ ಆದರು. ಆ ಹುದ್ದೆಯಲ್ಲಿಯೇ ಮುಂದುವರಿಯಲಿರುವ ಅವರಿಗೆ, ಈಗ ಅಪ್ಪನ ಅಧ್ಯಕ್ಷ ಸ್ಥಾನವೂ ಸಿಕ್ಕಿದೆ. ಎಚ್ಸಿಎಲ್ ಸಮೂಹದ ಎಲ್ಲ ಕಂಪನಿಗಳನ್ನೂ ಮುನ್ನಡೆಸಬೇಕಾದ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅಧ್ಯಕ್ಷ ಸ್ಥಾನವನ್ನು ಶಿವ ನಾಡಾರ್ ತ್ಯಜಿಸಿದ್ದರೂ ಕಂಪನಿಯ ಎಂಡಿಯಾಗಿ ಮುಂದುವರಿಯಲಿದ್ದಾರೆ. ಕಾರ್ಯತಂತ್ರ ಅಧಿಕಾರಿಯಾಗಿ ಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಕಳೆದ ಶುಕ್ರವಾರ ಎಚ್ಸಿಎಲ್ ಟೆಕ್ನಾಲಜೀಸ್ ಜೂನ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿತು. ಇದರೊಟ್ಟಿಗೆ 75 ವರ್ಷದ ಶಿವ ನಾಡಾರ್ ಪದವಿ ತ್ಯಾಗದ ಸುದ್ದಿಯೂ(ವಿಪ್ರೊದ ಅಜೀಮ್ ಪ್ರೇಮ್ಜಿಯೂ ತಮ್ಮ 75ನೇ ವರ್ಷದಲ್ಲಿ ಅಧಿಕಾರವನ್ನು ಮಗನಿಗೆ ವರ್ಗಾಯಿಸಿದ್ದರು) ಘೋಷಣೆಯಾಯಿತು. ಜೂನ್ ತ್ರೈಮಾಸಿಕದಲ್ಲಿ ಆದಾಯ 17,841 ಕೋಟಿ ರೂ. ಇದೆ. ಹಿಂದಿನ ತ್ರೈಮಾಸಿಕದಲ್ಲಿ 18,590 ಕೋಟಿ ರೂ. ಆದಾಯ ದಾಖಲಾಗಿತ್ತು. ಸಂಸ್ಥೆಯ ಲಾಭ ಕುಸಿತದ ಒಂದು ಸವಾಲು, ಕೋವಿಡ್ ತಂದೊಡ್ಡುತ್ತಿರುವ ಬಿಕ್ಕಟ್ಟುಗಳು ಇನ್ನೊಂದು ಕಡೆ. ಇವುಗಳ ಮಧ್ಯೆ, ಕಾರ್ಪೊರೇಟ್ ವಲಯದಲ್ಲಿನ ಅತಿಯಾದ ಸ್ಪರ್ಧಾತ್ಮಕತೆ. ಜೊತೆಗೆ ದೇಶದ ನಂ.1 ಉದಾರಿ ಎಂದು ಖ್ಯಾತರಾದ ಅಪ್ಪ ಶಿವ ನಾಡಾರ್ ಅವರ ಪರಂಪರೆಯನ್ನು ಕಾಯ್ದುಕೊಳ್ಳುವ ಸವಾಲು ಅವರ ಮುಂದಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಶಿವ ನಾಡಾರ್ ಜಗತ್ತಿನ 81ನೇ ಅತಿ ಶ್ರೀಮಂತ ವ್ಯಕ್ತಿ. 2018-19ನೇ ಸಾಲಿನಲ್ಲಿ 826 ಕೋಟಿ ರೂ. ದಾನ ನೀಡಿರುವ ಶಿವ ನಾಡಾರ್ ದೇಶದ ನಂ.1 ಉದಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕೋವಿಡ್ ಸಂದರ್ಭದಲ್ಲೂ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇಂಥ ಅಪ್ಪನಿಗೆ ರೋಶ್ನಿ ತಕ್ಕ ಮತ್ತು ಮೆಚ್ಚಿನ ಮಗಳು.
ಶಿವ ನಾಡಾರ್ ಮತ್ತು ಕಿರಣ್ ನಾಡಾರ್ ದಂಪತಿಯ ಏಕೈಕ ಪುತ್ರಿಯಾದ ರೋಶ್ನಿ ಬೆಳೆದದ್ದೆಲ್ಲ ದಿಲ್ಲಿಯಲ್ಲಿ. ವಸಂತ್ ವ್ಯಾಲಿ ಸ್ಕೂಲ್ನಲ್ಲಿ ವಿದ್ಯಾಭ್ಯಾಸ, ಅಮೆರಿಕಾದ ಇಲಿನಾಯ್ಸ್ನ ನಾರ್ತ್ವೆಸ್ಟ್ರನ್ ಯೂನಿವರ್ಸಿಟಿಯ ಪದವಿ ಪಡೆದವರು. ರೇಡಿಯೋ/ಟಿವಿ/ಸಿನಿಮಾ ಸಂವಹನದ ವಿಷಯದಲ್ಲಿ ಅಧ್ಯಯನ ಮಾಡಿದವರು. ಬಿಸಿನೆಸ್ ಅಡ್ಮಿನಿಸ್ಪ್ರೇಷನ್ನಲ್ಲೂ ಸ್ನಾತಕೋತ್ತರ ಪದವಿ ಪಡೆದ ಅವರು ಸೋಷಿಯಲ್ ಎಂಟರ್ಪ್ರೈಸ್ ಮ್ಯಾನೇಜ್ಮೆಂಟ್ ಬಗ್ಗೆ ತಿಳಿದುಕೊಂಡವರು. ಕಂಪನಿಯ ಸಿಇಒ ಆಗುವ ಮೊದಲು ರೋಶ್ನಿ ಅವರು ಶಿವ ನಾಡಾರ್ ಪ್ರತಿಷ್ಠಾನದಲ್ಲಿ ಟ್ರಸ್ಟಿಯಾಗಿದ್ದರು. ಶಿವ ನಾಡಾರ್ 800 ದಶಲಕ್ಷ ಡಾಲರ್ಗಳನ್ನು ಪ್ರತಿಷ್ಠಾನಕ್ಕೆ ವಿನಿಯೋಗಿಸಿದ್ದು, 30,000 ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕು ಬಂದಂತೆ ಆಗಿದೆ. ಟ್ರಸ್ಟ್ ಜೊತೆಗೆ ಚೆನ್ನೈನಲ್ಲಿ ಶಿವಸುಬ್ರಮಣಿಯನ್ ನಾಡಾರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಎನ್ನುವ ಲಾಭರಹಿತ ಸಂಸ್ಥೆಯನ್ನು ಚೊಕ್ಕವಾಗಿ ನಿಭಾಯಿಸಿದ ಅನುಭವ ರೋಶ್ನಿಗಿದೆ. ವೃತ್ತಿಯಾಚೆಗೆ ಅವರು ಕ್ಲಾಸಿಕಲ್ ಮ್ಯೂಸಿಕ್ ಕಲಿತವರು. ವೈಲ್ಡ್ಲೈಫ್ ಮತ್ತು ಸಂರಕ್ಷಣೆ ಬಗ್ಗೆ ಪ್ರೀತಿ ಉಳ್ಳವರು. ವಿದ್ಯಾಜ್ಞಾನ್ ಲೀಡರ್ಶಿಪ್ ಅಕಾಡೆಮಿಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದವರು. ಉತ್ತರ ಪ್ರದೇಶದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ರಾಜೀವ್ ಗಾಂಧಿ ಪ್ರತಿಷ್ಠಾನದಲ್ಲೂ ಗುರುತಿಸಿಕೊಂಡವರು.
ಅಂದಹಾಗೇ ರೋಶ್ನಿ ಅವರು ನ್ಯೂಸ್ ಪ್ರೊಡ್ಯೂಸರ್ ಆಗಿ ವೃತ್ತಿ ಆರಂಭಿಸಿದವರು. ಸ್ಕೈ ನ್ಯೂಸ್ ಯುಕೆ ಮತ್ತು ಸಿಎನ್ಎನ್ ಅಮೆರಿಕಾದಲ್ಲಿ ನ್ಯೂಸ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದವರು. ‘‘ಮೀಡಿಯಾ ಅನ್ನುವುದು ನನ್ನ ಪಾಲಿಗೆ ನಿಜಕ್ಕೂ ರೋಚಕ ಅನುಭವ. ಟಿವಿ, ರೇಡಿಯೊ, ಸಿನಿಮಾ ಸಂಬಂಧ ಸಿಎನ್ಬಿಸಿ ಮತ್ತು ಸಿಎನ್ಎನ್ನಲ್ಲಿ ನಾನು ಇಂಟರ್ನ್ಶಿಫ್ ಮಾಡಿದ್ದೇನೆ,’’ ಎಂದು ಸಂದರ್ಶನವೊಂದರಲ್ಲಿ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದರು.
38 ವರ್ಷದ ರೋಶ್ನಿ 2017, 2018, 2019ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್-2019ರಲ್ಲಿ ದೇಶದ ಶ್ರೀಮಂತ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ಅವರ ಒಟ್ಟು ಆಸ್ತಿ 2019ರಲ್ಲಿ 38,000 ಕೋಟಿ ರೂಪಾಯಿ. 2010ರಲ್ಲಿ ಶಿಖರ್ ಮಲ್ಹೋತ್ರಾ ಅವರನ್ನು ಮದುವೆಯಾಗಿದ್ದು, ಅವರ ಪತಿ ಎಚ್ಸಿಎಲ್ ಹೆಲ್ತ್ಕೇರ್ನ ಉಪಾಧ್ಯಕ್ಷರಾಗಿದ್ದಾರೆ.
ಪ್ರಸ್ತುತ 1.7 ಲಕ್ಷ ಕೋಟಿ ರೂ. ಮೌಲ್ಯದ ಎಚ್ಸಿಎಲ್ ಟೆಕ್ನಾಲಜೀಸ್ ಅನ್ನುವುದು ಶಿವ ನಾಡಾರ್ ಅವರ ಕನಸಿನ ಕೂಸು. 1976ರಲ್ಲಿ ಕೇವಲ 1.87 ಲಕ್ಷ ರೂ.ನಲ್ಲಿ ಶುರುವಾದ ಕಂಪನಿ ಇಂದು ಬೃಹತ್ ಆಗಿ ಬೆಳೆದು ನಿಂತಿದೆ. ಟಿಸಿಎಸ್ ಮತ್ತು ಇನ್ಫೋಸಿಸ್ ಬಿಟ್ಟರೆ, ದೇಶದ ಮೂರನೇ ದೊಡ್ಡ ಕಂಪನಿ. ‘‘ರೋಶ್ನಿಗೆ ಎಚ್ಸಿಎಲ್ನ ಪ್ರತಿಯೊಂದು ಮೂಲೆಯೂ ಗೊತ್ತು. ಪ್ರತಿ ಸಂಜೆಯೂ ಅಪ್ಪನ ಪಾಠ ಮಗಳನ್ನು ಗಟ್ಟಿಗೊಳಿಸುತ್ತಿದೆ,’’ ಎಂದು ನಾಡಾರ್ ಆಪ್ತರು ಹೇಳುತ್ತಾರೆ.
‘‘ನೀವು ಯಾವ ಉದ್ಯಮದಲ್ಲಿದ್ದರೂ, ನೀವು ಏನು ಮಾಡುತ್ತಿದ್ದೀರಿ ಅನ್ನುವುದು ಮುಖ್ಯವಲ್ಲ. ಯಾವ ಒಳ್ಳೆಯ ಅಂಶವನ್ನು ಕಾರ್ಯಗತಗೊಳಿಸಿದ್ದೀರಿ ಅನ್ನುವುದಷ್ಟೇ ನಿರ್ಣಾಯಕ,’’ ಎಂದು 2019ರಲ್ಲಿ ದಾವೋಸ್ನಲ್ಲಿ ನಡೆದ ವಲ್ಡ್ ಎಕನಾಮಿಕ್ ಫೋರಮ್ನಲ್ಲಿ ಹೇಳಿದ್ದ ರೋಶ್ನಿ, ಕಂಪನಿಯ ಜೊತೆಗೆ ಸಮಾಜಕ್ಕೂ ಹಿತವನ್ನು ಮಾಡುವ ಹಾದಿಯಲ್ಲಿದ್ದಾರೆ. ಹಿಂದೂಸ್ತಾನಿ ಸಂಗೀತ, ವನ್ಯಜೀವಿ ಸಂರಕ್ಷಣೆ, ಬಡಮಕ್ಕಳಿಗೆ ಶಿಕ್ಷಣ, ಮೀಡಿಯಾ ಪ್ರೀತಿಗಳ ಮಧ್ಯೆಯೇ ಹೊಸ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದಾರೆ.