ಸರಕಾರದ ವಿರುದ್ಧ ಝಂಡಾ ಎತ್ತಿದವರಿಗಿಲ್ಲ ಕುಂದಾ

– ಶಶಿಧರ ಹೆಗಡೆ ಬೆಂಗಳೂರು.  
ದಾರುಕ ಶ್ರೀಕೃಷ್ಣನ ಸಾರಥಿ. ಕೃಷ್ಣ ತನ್ನ ಸೋದರತ್ತೆ ಕುಂತಿಗೆ ‘ಮಮ ಪ್ರಾಣಾಹಿ ಪಾಂಡವಾಃ’ (ಪಾಂಡವರನ್ನು ನನ್ನ ಪ್ರಾಣದಂತೆಯೇ ರಕ್ಷಿಸುತ್ತೇನೆ) ಎಂದು ಮಾತು ಕೊಟ್ಟಿರುತ್ತಾನೆ. ಪಾಂಡವರಿಗೆ ಏನೇ ತಾಪತ್ರಯವಾದರೂ ಧೈರ್ಯ ಹೇಳಲು ಕೃಷ್ಣ ಅಲ್ಲಿ ಹಾಜರಿರುತ್ತಿದ್ದ. ಪಾಂಡವರು ವನವಾಸದಲ್ಲಿದ್ದಾಗ ಗಯ ಎನ್ನುವ ಗಂಧರ್ವನ ನಿಮಿತ್ತದಿಂದ ಕೃಷ್ಣಾರ್ಜುನರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರುತ್ತದೆ. ಅರ್ಜುನನ ರಕ್ಷಣೆಯಲ್ಲಿರುವ ಗಯನನ್ನು ಹಿಡಿದು ಶಿಕ್ಷಿಸುವ ಬಗೆ ಹೇಗೆಂದು ಕೃಷ್ಣ ಯೋಚಿಸುತ್ತ ಇರುವಾಗ ಸಾರಥಿ ದಾರುಕ ತನಗೆ ಈ ಹೊಣೆ ವಹಿಸುವಂತೆ ಕೇಳುತ್ತಾನೆ. ಇಷ್ಟು ಸಣ್ಣ ಕೆಲಸಕ್ಕೆ ತಲೆಬಿಸಿ ಮಾಡುವುದಲ್ಲ. ಆ ಪಾಂಡವರಿಗೆ ನಾನು ಬುದ್ಧಿ ಕಲಿಸುತ್ತೇನೆಂದು ಕೃಷ್ಣನೆದುರು ದಾರುಕ ಶುದ್ಧ ಅಧಿಕಪ್ರಸಂಗ ಮಾಡುತ್ತಾನೆ. ದಾರುಕನ ಸೊಕ್ಕು ಮುರಿಯಲು ಇದೇ ಸರಿಯಾದ ಸಮಯವೆಂದು ಎಣಿಸಿದ ಕೃಷ್ಣ ಪರಮಾತ್ಮ ತನ್ನ ಸಾರಥಿಯನ್ನು ಪಾಂಡವರಿರುವ ಕಾಮ್ಯಕಾವನದತ್ತ ಕಳುಹಿಸುತ್ತಾನೆ. ಭರ್ಜರಿ ಠೀವಿಯಿಂದಲೇ ರಥವೇರಿ ಹೊರಟ ದಾರುಕ ಪಾಂಡವರ ಸಮ್ಮುಖದಲ್ಲಿ ಬಹಳ ವಾಚಾಳಿತನ ಪ್ರದರ್ಶಿಸುತ್ತಾನೆ. ಮದೋನ್ಮತ್ತನಾಗಿ ಪಾಂಡವರನ್ನು ಅತ್ಯಂತ ಕ್ಷುಲ್ಲಕವಾಗಿ ನಿಂದಿಸುತ್ತಾನೆ. ನೋಡುವಷ್ಟು ನೋಡಿದ ಪಾಂಡವರು ಕಡೆಗೆ ದಾರುಕನಿಗೆ ತಕ್ಕ ಶಾಸ್ತಿ ಮಾಡಿ ಪೆಟ್ಟು ಕೊಟ್ಟು ಕೃಷ್ಣನಿದ್ದಲ್ಲಿಗೆ ಕಳುಹಿಸುತ್ತಾರೆ. ಹಾಗಾಗಿ ರಾಯಭಾರಿಯ ಗೆಟಪ್‌ನಲ್ಲಿ ರಥ ಏರಿ ಕಾಮ್ಯಕಾವನಕ್ಕೆ ಹೋಗಿದ್ದ ದಾರುಕ ವಾಪಸ್‌ ದ್ವಾರಕೆಗೆ ಬರುವಾಗ ದಾರಿಹೋಕನಾಗಿ ಹೋಗಿದ್ದ. ದ್ವಾರಾವತಿಯ ಜನರೂ ಅವನನ್ನು ಜೋಕರ್‌ನಂತೆ ನೋಡಿ ನಗಲಾರಂಭಿಸಿದ್ದರಂತೆ.

ಸಾರಥ್ಯವೇ ಬೇರೆ
ಈ ದೃಷ್ಟಾಂತದ ತಾತ್ಪರ್ಯವಿಷ್ಟೇ. ತಾನು ಸಾರಥಿಯಾಗಿರುವುದರಿಂದಲೇ ಕೃಷ್ಣನ ಲೋಕ ವ್ಯವಹಾರ ನಡೆಯುತ್ತಿದೆ ಎಂಬ ಅಹಂ ದಾರುಕನ ತಲೆಗೆ ಹೊಕ್ಕಿತ್ತು. ಹಾಗೆ ನೋಡಿದರೆ ಮಹಾಭಾರತ ಯುದ್ಧದಲ್ಲಿ ಪಾರ್ಥನ ರಥದ ಸಾರಥಿಯಾಗಿದ್ದ ಕೃಷ್ಣನದ್ದು ನಿಜವಾದ ಅರ್ಥದ ಸಾರಥ್ಯ. ದಾರುಕನಂಥವರು ಕೇವಲ ರಥ ಓಡಿಸುವವರು. ಈ ನೆಲೆಯಲ್ಲಿ ಸಾರಥ್ಯ ಮತ್ತು ರಥ ಓಡಿಸುವುದರ ನಡುವಿನ ಸೂಕ್ಷ್ಮ ಅರಿತುಕೊಳ್ಳಬೇಕು. ಸಾರಥ್ಯ ಎನ್ನುವುದು ಯೋಗ್ಯತೆ, ಅರ್ಹತೆ, ಕೌಶಲದಿಂದ ಬರುತ್ತದೆ. ನಾಯಕತ್ವದ ಗುಣಲಕ್ಷಣ ಹೊಂದಿದವರು ಮಾತ್ರ ಸಾರಥ್ಯವನ್ನು ನಿರ್ವಹಿಸಬಲ್ಲರು. ಉಳಿದವರು ಚಾಲಕರಷ್ಟೇ ಆಗಿರುತ್ತಾರೆ. ಅವರೆಂದೂ ಚಾಲಕ ಶಕ್ತಿಯಾಗಲಾರರು. ರಾಜ್ಯ ಬಿಜೆಪಿಯ ವಿದ್ಯಮಾನವನ್ನೂ ಇದೇ ದೃಷ್ಟಿಯಿಂದ ಸಮೀಕರಿಸಬಹುದು. ಅದಕ್ಕಾಗಿ ದಾರುಕನ ಪ್ರಸಂಗದ ಪೀಠಿಕೆ. ಬಿಜೆಪಿಯಲ್ಲಿ ಬಂಡಾಯ ವಗೈರೆ ವಗೈರೆಯೆಂಬ ವ್ಯಾಖ್ಯಾನ ಮಾಡಲಾಗುತ್ತಿದೆ. ಸುದ್ದಿಯಾಗುವ ಹಾಗೂ ಅದರಿಂದ ವೈಯಕ್ತಿಕ ರಾಜಕೀಯ ಲಾಭದ ನಿರೀಕ್ಷೆಯಲ್ಲಿದ್ದ ಒಂದಷ್ಟು ಶಾಸಕರು ಜೋಳದ ರೊಟ್ಟಿ ತಿನ್ನಲು ಸೇರಿದ್ದರು. ಹತ್ತೋ ಇಪ್ಪತ್ತೋ ಮಂದಿಯ ಈ ಬೈಠೆಕ್‌ನಲ್ಲಿ ರಾಜಕಾರಣದ ಹಲ್‌ಚಲ್‌ ಬಗ್ಗೆ ಪ್ರಸ್ತಾಪವಾಗಿದ್ದರೆ ಅಚ್ಚರಿಯೇನೂ ಅಲ್ಲ. ಆದರೆ, ಸಾರಥ್ಯ ವಹಿಸಿಕೊಳ್ಳುವಷ್ಟು ಸಮರ್ಥರು, ವರ್ಚಸ್ವಿಗಳು ಈ ಗುಂಪಿನಲ್ಲಿ ಇಲ್ಲ ಎನ್ನುವುದೂ ಅಷ್ಟೇ ದಿಟ. ಈ ಕೂಟದಲ್ಲಿ ಮುಂಚೂಣಿಯಲ್ಲಿರುವ ಶಾಸಕರ ‘ಫೇಸ್‌ ವ್ಯಾಲ್ಯೂ’ ಏನೆಂದು ಮನಸ್ಸಿನಲ್ಲೇ ಪ್ರತ್ಯಕ್ಷೀಕರಿಸಿಕೊಂಡರೆ ಇವರ್ಯಾರೂ ಸಾರಥಿಗಳಲ್ಲ ಎನ್ನುವುದು ಬಹುಬೇಗ ವೇದ್ಯವಾಗುತ್ತದೆ!

ಬೆಳಗಾವಿ ಮೂಲ
ರಾಜ್ಯ ಬಿಜೆಪಿಯ ಸದ್ಯದ ಬೆಳವಣಿಗೆಗೆ ಬೆಳಗಾವಿ ಜಿಲ್ಲಾ ರಾಜಕಾರಣವೇ ಮೂಲ. ಸಕ್ಕರೆ ಲಾಬಿಯ ಅಸ್ತ್ರ ಹಿಡಿದಿರುವ ಬೆಳಗಾವಿಯ ರಾಜಕಾರಣಿಗಳು ಎಲ್ಲ ಸರಕಾರಗಳಿಗೂ ಕಾಡಿದ್ದಾರೆ. ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ 18 ವಿಧಾನಸಭೆ ಕ್ಷೇತ್ರಗಳಿವೆ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳೂ ಜಿಲ್ಲೆಯಲ್ಲಿ ಭರಪೂರ. ಇವರನ್ನೆಲ್ಲ ಸಂತೈಸಿ ತಕ್ಕಡಿಯಲ್ಲಿ ಹಾಕುವುದು ಯಾವುದೇ ಸರಕಾರಕ್ಕೂ ಸವಾಲು. ‘ಅಣ್ಣನಿಗೆ ಮಂತ್ರಿ ಪದವಿ. ತಮ್ಮನಿಗೆ ರಾಜ್ಯಸಭೆ’ ಎನ್ನುವುದು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳ ವರಸೆ. ಇಲ್ಲಿನ ಬಹುತೇಕ ರಾಜಕೀಯ ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಪತ್ನಿ ಸಚಿವೆಯಾದರೆ ಪತಿರಾಯ ಸಂಸದ. ಒಂದೇ ಫ್ಯಾಮಿಲಿಯಿಂದ ಮೂರೂ ಪಕ್ಷಗಳಲ್ಲಿರುವ ಮತ್ತು ಅವರಿರುವ ಪಕ್ಷ ಅಧಿಕಾರಕ್ಕೆ ಬಂದಾಗ ಪಕ್ಕಾ ಮಂತ್ರಿಯಾಗುವವರೂ ಇದ್ದಾರೆ. ಇಂತಹ ಅಪರೂಪದ ಕುಟುಂಬ ರಾಜಕಾರಣವನ್ನು ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ನೋಡಲು ಸಾಧ್ಯ. ಈ ರಾಜಕೀಯ ಕುಟುಂಬಗಳ ನಡುವೆಯೇ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸದಾ ಆಂತರಿಕ ಫೈಟಿಂಗ್‌. ಅದನ್ನು ಹೊರಜಗತ್ತಿಗೆ ಗೊತ್ತುಪಡಿಸಿ ತಮ್ಮ ವೈಯಕ್ತಿಕ ಅಜೆಂಡಾಕ್ಕೆ ಕಾವು ಕೊಡಬೇಕು ಎಂದಾದಾಗ ರಾಜಧಾನಿಯಲ್ಲಿ ಸಭೆ ಏರ್ಪಾಡಾಗುತ್ತದೆ. ಜತೆಗೆ ಜೋಳದ ರೊಟ್ಟಿ ಊಟ. ಇದು ಬೆಳಗಾವಿ ಪಾಲಿಟಿಕ್ಸ್‌ನ ಮಜಕೂರಿ!

ನಗೆಪಾಟಲಿಗೀಡಾದ ಶಾಸಕರು
ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಕ್ಕೆ ಬೆಳಗಾವಿ ಜಿಲ್ಲೆಯ ರಮೇಶ ಜಾರಕಿಹೊಳಿ ಬಂಡಾಯವೆದ್ದದ್ದೇ ಕಾರಣವಾಗಿತ್ತು. ಉಮೇಶ ಕತ್ತಿ ಅವರಿಗೆ ಅರ್ಜಂಟಾಗಿ ಮಂತ್ರಿಯಾಗಬೇಕಿದೆ. ರಾಜ್ಯ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾದ ಅವರಿಗೆ ಪ್ರಬಲ ಜಾತಿಯ ಹಿನ್ನೆಲೆಯಿದೆ. ಬೆಳಗಾವಿ ರಾಜಕಾರಣವೇ ಅವರಿಗೆ ಮುಖ್ಯ. ಜಿಲ್ಲೆಯಲ್ಲಿನ ಎದುರಾಳಿಗಳನ್ನು ಮಣಿಸಲು ಯಾವೆಲ್ಲ ಪಟ್ಟು ಹಾಕಬೇಕು ಎನ್ನುವುದರಲ್ಲಿ ಅವರು ಗಟ್ಟಿಗರು. ಈ ನಡುವೆಯೂ ಈ ಸಲ ಬಿಜೆಪಿ ಸರಕಾರ ರಚನೆಯಾದಾಗ ಕತ್ತಿ ಸಾಹೇಬರಿಗೆ ಸಂಪುಟದ ಬಸ್‌ ತಪ್ಪಿದೆ. ಜಿಲ್ಲೆಯ ವಿರೋಧಿಗಳೇ ಅವರನ್ನು ಖೆಡ್ಡಾಕ್ಕೆ ಕೆಡವಿ ಚಂದ ನೋಡುತ್ತಿದ್ದಾರೆ. ಅಂದಿನಿಂದಲೂ ಚಡಪಡಿಕೆಯಲ್ಲಿರುವ ಕತ್ತಿಯವರು ಮಂತ್ರಿಯಾಗಲು ಕಸರತ್ತು ಮುಂದುವರಿಸಿದ್ದಾರೆ. ಈ ಬಾರಿಯ ಸಂದರ್ಭ ಮಾತ್ರ ಅದಕ್ಕೆ ತಕ್ಕುದಾದುದಲ್ಲ. ಯಾಕೆಂದರೆ ಕೊರೊನಾ ಸಂಕಷ್ಟವಿರುವಾಗ ಶಾಸಕರ ತೆರೆಮರೆಯ ಚಟುವಟಿಕೆ ಸರ್ವತ್ರ ಟೀಕೆಗೊಳಗಾಗಿದೆ. ಈ ಶಾಸಕರೂ ನಗೆಪಾಟಲಿಗೆ ಗುರಿಯಾದರು.

ಸಮಾನ ದುಃಖಿಗಳು
ಫೈರ್‌ ಬ್ರ್ಯಾಂಡ್‌ ಬಸನಗೌಡ ಪಾಟೀಲ ಯತ್ನಾಳರಂತೂ ಜಬರ್‌ದಸ್ತ್‌ ಹೇಳಿಕೆ ಕೊಟ್ಟುಬಿಟ್ಟಿದ್ದಾರೆ. ಪಕ್ಷ ದಲ್ಲಿ ಹಿರಿಯರಾದರೂ ಒಮ್ಮೆ ಹೊರಗೆ ಹೋಗಿ ಮತ್ತೆ ಒಳಗೆ ಬಂದದ್ದರಿಂದ ಅವರು ರಾಜಕೀಯ ಹಿನ್ನಡೆಯಲ್ಲಿದ್ದಾರೆ. ಈ ಕೊರಗು ಯತ್ನಾಳ್‌ರಿಗೂ ಕತ್ತಿ ಅವರಿಗೂ ದೋಸ್ತಿ ಕುದುರಿಸಿದಂತಿದೆ. ಹಾಗಾಗಿ ಸಮಾನ ದುಃಖಿಗಳು ಸೇರಿ ರೊಟ್ಟಿ, ಎಣ್ಣೆಗಾಯಿ ತಿಂದಿದ್ದಾರೆ. ಮಾವಿನಹಣ್ಣು ಸವಿದಿದ್ದಾರೆ. ಇದೇ ಯತ್ನಾಳ್‌ ಪಕ್ಷೇತರರಾಗಿ ಎಂಎಲ್ಸಿ ಎಲೆಕ್ಷನ್‌ಗೆ ನಿಂತಾಗ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದರು. ಅದು ಅವರಿಗೆ ಫಲ ಕೊಟ್ಟಿತ್ತು. ಬಿಎಸ್‌ವೈ ನಾಯಕತ್ವದಡಿಯೇ ಬಿಜೆಪಿ ಸೇರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಹಕೀಕತ್‌ ಹೀಗಿದ್ದರೂ ಯತ್ನಾಳ್‌ ಆಲೋಚನೆಯಲ್ಲೀಗ ಫರಕ್‌ ಆಗಿದೆ!

ಯಾರಿಗೆ ನಷ್ಟ?
ಹಿತಾಸಕ್ತಿ ರಕ್ಷಣೆಯೊಂದೇ ಇವರ ಕಾರ್ಯಸೂಚಿ. ಸರಕಾರದ ಅಸ್ತಿತ್ವಕ್ಕೇ ಸಂಚಕಾರ ತರುವುದಲ್ಲ. ದಿಲ್ಲಿ ಯಾತ್ರೆ ಕೈಗೊಂಡರೂ ಆಲೂ ಪರೋಟ ತಿಂದು ವಾಪಸ್‌ ಬರಬೇಕಾಗುತ್ತದೆ. ಯಡಿಯೂರಪ್ಪ ಅವರಿಗೂ ಹಾನಿಯಾಗದು. ಏಕೆಂದರೆ ಕೋವಿಡ್‌-19 ನಿರ್ವಹಿಸುವುದರಲ್ಲಿ ಯಡಿಯೂರಪ್ಪ ಕ್ಷಮತೆ ತೋರಿದ್ದಾರೆ. ತಮ್ಮ ನಾಯಕತ್ವದ ಛಾಪು ಉಳಿಸಿಕೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಬಿಎಸ್‌ವೈ ನೆಮ್ಮದಿ ಕೆಡಿಸುವ ಕೆಲಸಕ್ಕೆ ಹೈಕಮಾಂಡ್‌ ಕೈಹಾಕಲಾರರು. ಸರಕಾರ, ಪಕ್ಷ ಕ್ಕೆ ಕಸಿವಿಸಿ ತರುವಂತೆ ಝಂಡಾ ಎತ್ತಿದವರಿಗೆ ಸದ್ಯಕ್ಕೆ ಕುಂದಾ ಸಿಗುವುದೂ ಡೌಟು. ಒಂದು ಜಿಲ್ಲೆಯ ರಾಜಕಾರಣ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುವುದೂ ಅನುಮಾನವೇ.
‘ದಾರುಕನ ಮನಸ್ಥಿತಿ’ಯಲ್ಲಿ ಮುನ್ನುಗ್ಗಿ ನಗಾಡುವವರ ಮುಂದೆ ಎಡವಿ ಬಿದ್ದ ಶಾಸಕರಲ್ಲಿ ಸಾರಥ್ಯದ(ನಾಯಕತ್ವ) ಲಕ್ಷ ಣವಿಲ್ಲದಿರಬಹುದು. ಹಾಗಂತ ಅವರನ್ನು ಸಂಪೂರ್ಣ ಉಪೇಕ್ಷಿಸುವುದೂ ಸರಿಕಾಣದು. ಭಿನ್ನಮತ ಬಿಜೆಪಿಯ ಹಳೆಯ ಕಾಯಿಲೆ. ಅದು ಪದೇಪದೆ ಮರುಕಳಿಸುತ್ತಿರುವುದಕ್ಕೆ ಇತ್ತೀಚಿನ ‘ಲೆಟರ್‌ ವಾರ್‌’ ಕೂಡ ನಿದರ್ಶನ. ಅದೃಷ್ಟವಶಾತ್‌ ಕರೋನಾಸ್ತ್ರ ಲೆಟರ್‌ ವಾರ್‌ ಅನ್ನು ಬಗ್ಗು ಬಡಿದಿದೆ. ಜೋಳದ ರೊಟ್ಟಿ ಸಭೆಯ ರಾಜಕಾರಣವೂ ಸದ್ಯಕ್ಕೆ ಬರಖಾಸ್ತಾಗಿರಬಹುದು. ಭವಿಷ್ಯದಲ್ಲಿ ಇದು ಇನ್ಯಾವ ರೂಪದಲ್ಲಾದರೂ ಹೆಡೆಯೆತ್ತಬಹುದು. ಅದನ್ನು ನಿವಾರಿಸಿಕೊಳ್ಳಲು ಸುಧಾರಣೆ ಮಾಡಬೇಕಿರುವುದು ಎಲ್ಲಿ ಎನ್ನುವುದು ಮುಖ್ಯಮಂತ್ರಿಯವರಿಗೇ ಗೊತ್ತಿರಬಹುದು. ಆ ನಿಟ್ಟಿನಲ್ಲಿ ಅವರು ಬಂದೋಬಸ್ತ್‌ ಮಾಡಿಕೊಂಡರೆ ಸರಕಾರವೂ ಸೇಫ್‌. ಭಿನ್ನಮತವೂ ಖತಂ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top