ಲಕ್ಷ್ಮಿಯನ್ನು ಹಸ್ತಾಂತರಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ನಯಾಪೈಸೆ ಪಡೆಯದೆ ಲಕ್ಷ್ಮೇವಿಲಾಸ ಬ್ಯಾಂಕನ್ನು ವಿದೇಶಿ ಮಡಿಲಿಗಿಟ್ಟ ಆರ್‌ಬಿಐ ಕ್ರಮ ಸ್ವೀಕಾರಾರ್ಹವೇ?

ಭಾರತದ ಬ್ಯಾಂಕಿಂಗ್‌ ವಲಯದಲ್ಲಿ ಏನು ನಡೆಯುತ್ತಿದೆ? ಬ್ಯಾಂಕಿಂಗ್‌ ವಿಷಯದಲ್ಲಿ ಕನಿಷ್ಠ ತಿಳಿವಳಿಕೆ ಉಳ್ಳವರೆಲ್ಲರೂ ಕೇಳಿಕೊಳ್ಳುತ್ತಿರುವ ಅಚ್ಚರಿಯ ಪ್ರಶ್ನೆ ಇದು. ಅದರಲ್ಲೂ ಸ್ವದೇಶಿ, ಸ್ವಾವಲಂಬನೆ, ಸ್ವ ಶಕ್ತಿಯ ಆಶಯಗಳನ್ನೇ ಹೊಂದಿರುವ ಆತ್ಮನಿರ್ಭರತೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಲಕ್ಷ್ಮೇವಿಲಾಸ ಬ್ಯಾಂಕನ್ನು ಸಿಂಗಾಪುರ ಮೂಲದ ಡಿಬಿಎಸ್‌ಗೆ ಏಕಾಏಕಿ ಹಸ್ತಾಂತರ ಮಾಡಲಾಗಿದೆ. ಎಲ್ಲಿಯ ಆತ್ಮನಿರ್ಭರತೆ ಎಂಬ ಘೋಷಣೆ? ಅದೆಲ್ಲಿಯ ವಿದೇಶಿ ಬ್ಯಾಂಕಿನ ಆಕರ್ಷಣೆ? ಈ ಎಲ್ಲವೂ ತಳಮಳವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಇಕಾನಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ ಎಂಬುದು ಡಿಬಿಎಸ್‌ ಬ್ಯಾಂಕಿನ ಮೂಲ ಹೆಸರು. ಸಿಂಗಾಪುರದ ಉದ್ಯಮ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಂಗಾಪುರ ಸರಕಾರ 1968ರಲ್ಲಿ ಇಬಿಬಿಯನ್ನು ಸ್ಥಾಪನೆ ಮಾಡಿತು. ಮುಂದೆ 2003ರಲ್ಲಿ ಇಬಿಬಿಯೇ ದಿ ಡೆವಲಪ್‌ಮೆಂಟ್‌ ಬ್ಯಾಂಕ್‌ ಸಿಂಗಾಪುರ (ಡಿಬಿಎಸ್‌) ಎಂದು ಮರುನಾಮಕರಣಗೊಂಡಿತು. ನೂರಕ್ಕೂ ಹೆಚ್ಚು ಶಾಖೆಗಳನು ್ನಹೊಂದಿರುವ ಡಿಬಿಎಸ್‌ ಸದ್ಯ ಆಗ್ನೇಯ ಏಷ್ಯಾದ ಅತಿದೊಡ್ಡ ಬ್ಯಾಂಕಿಂಗ್‌ ಸಂಸ್ಥೆ ಎಂಬ ಖ್ಯಾತಿಯನ್ನೂ ಹೊಂದಿದೆ. ಕ್ರೆಡಿಟ್‌ ರೇಟಿಂಗ್ಸ್‌ ವಿಶ್ಲೇಷಿಸುವ ಮೂಡಿಸ್‌ ಸಂಸ್ಥೆ ನೀಡುವ ಕ್ರೆಡಿಟ್‌ ಟ್ರೆಂಡಿಂಗ್‌ನಲ್ಲೂ ಅದು ಟಾಪ್‌ ರೇಟಿಂಗ್‌ನಲ್ಲಿದೆ. ಇದೆಲ್ಲವೂ ಸರಿ, ಆದರೆ ಭಾರತದ ಒಂದು ದೊಡ್ಡ ಹಣಕಾಸು ಸಂಸ್ಥೆಯನ್ನು ಮತ್ತೊಂದು ಬಹುರಾಷ್ಟ್ರೀಯ ಬ್ಯಾಂಕಿಗೆ ಪಾರದರ್ಶಕವಲ್ಲದ ರೀತಿಯಲ್ಲಿ ಹಸ್ತಾಂತರ ಮಾಡಿರುವುದು ಏಕೆ? ಆತ್ಮ ನಿರ್ಭರತೆಯ ಘೋಷಣೆ ಮೊಳಗಿರುವ ಹೊತ್ತಲ್ಲಿಯೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಲಕ್ಷ್ಮೇವಿಲಾಸ ಬ್ಯಾಂಕನ್ನು ವಿದೇಶಿ ಡಿಬಿಎಸ್‌ನಲ್ಲಿ ವಿಲೀನ ಮಾಡುವ ನಿರ್ಧಾರವನ್ನು ಸ್ವತಂತ್ರ ಆಲೋಚನೆಯ ಆರ್ಥಿಕ ತಜ್ಞರು ಮಾತ್ರವಲ್ಲ, ಸ್ವತಃ ಸಂಘ ಪರಿವಾರದ ಚಿಂತಕ ಚಾವಡಿಯವರು ಕೂಡ ಆತಂಕದಲ್ಲಿಯೇ ಚರ್ಚೆಗೆ ಎತ್ತಿಕೊಂಡಿದ್ದಾರೆ. ಸ್ವದೇಶಿ ಆರ್ಥಿಕತೆ ಕುರಿತು ಆಲೋಚಿಸುವ ಸ್ವದೇಶಿ ಜಾಗರಣ ಮಂಚ್‌(ಎಸ್‌ಜೆಎಂ) ಈ ನಡೆಯನ್ನು ಪ್ರಶ್ನೆ ಮಾಡಿದ್ದು, ಆ ಸಂಘಟನೆಯ ಸಂಯೋಜಕ ಡಾ.ಅಶ್ವಾನಿ ಮಹಾಜನ್‌ ಅವರು ಆರ್‌ಬಿಐನ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಬರೆದಿರುವ ಪತ್ರ ಕಣ್ತೆರೆಸುವಂತಿದೆ.
‘‘ಠೇವಣಿದಾರರ ಹಿತದೃಷ್ಟಿ ಕಾಪಾಡುವ ಇಂಗಿತವನ್ನು ರಿಸರ್ವ್‌ ಬ್ಯಾಂಕ್‌ ವ್ಯಕ್ತಪಡಿಸಿರುವುದನ್ನು ಮೆಚ್ಚಬಹುದು. ಆದರೆ, ಇದರಿಂದಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಜತೆಗೆ, ಇಡೀ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಮುಂದಿಟ್ಟಿರುವ ಪ್ರಸ್ತಾಪ ಪಾರದರ್ಶಕವಾಗಿಲ್ಲ. ಅದು ಇದುವರೆಗೆ ಪಾಲಿಸಿಕೊಂಡು ಬರುತ್ತಿದ್ದ ತನ್ನದೇ ರೀತಿ ರಿವಾಜುಗಳನ್ನು ಉಲ್ಲಂಘಿಸಿದಂತಿದೆ,’’ ಎಂಬುದು ಎಸ್‌ಜೆಎಂ ಪತ್ರದ ಪೀಠಿಕೆ.
ಸ್ವದೇಶಿ ಜಾಗರಣ ಮಂಚ್‌ ಎತ್ತಿರುವ ಇತರೆ ಪ್ರಶ್ನೆಗಳು ಹೀಗಿವೆ.
1. ಎಲ್‌ವಿಬಿಯನ್ನು ನೇರವಾಗಿ ಡಿಬಿಎಸ್‌ ಇಂಡಿಯಾದ ಜತೆ ವಿಲೀನಗೊಳಿಸುವುದರಿಂದ, ಎಲ್‌ವಿಬಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಪ್ರಸ್ತಾಪದ ಪ್ರಕಾರ ಡಿಬಿಎಸ್‌ ಯಾವುದೇ ಹಣ ನೀಡದೆ(ಜೀರೊ ಪೇಮೆಂಟ್‌) ಎಲ್‌ವಿಬಿಯನ್ನು ಖರೀದಿಸಲಿದೆ. ಇದಕ್ಕೆ ಪ್ರತಿಯಾಗಿ ಡಿಬಿಎಸ್‌, ಎಲ್‌ವಿಬಿಯನ್ನು ಅದು ಹೇಗಿದೆಯೋ, ಅದೇ ಸ್ಥಿತಿಯಲ್ಲಿ ಖರೀದಿಸಲಿದೆ. ವಸೂಲಾಗದಿರುವ ಸಾಲದಿಂದ ಉಂಟಾಗಲಿರುವ ನಷ್ಟವೂ ಈ ಖರೀದಿ ಪ್ರಕ್ರಿಯೆಯ ವ್ಯವಹಾರದಲ್ಲಿ ಸೇರಿದೆ. ಅಂದರೆ, 563 ಶಾಖೆಗಳು, 1000 ಎಟಿಎಂಗಳು ಹಾಗೂ 20 ಲಕ್ಷ ಗ್ರಾಹಕರನ್ನು ಒಳಗೊಂಡಿರುವ ಲಕ್ಷ್ಮೇವಿಲಾಸ ಬ್ಯಾಂಕನ್ನು ಡಿಬಿಎಸ್‌ ಎಂಬ ವಿದೇಶಿ ಸಂಸ್ಥೆ ಉಚಿತವಾಗಿ ಪಡೆಯಲಿದೆ! ಇದು ಸ್ಪಷ್ಟವಾಗಿ ಹಿಂಬಾಗಿಲಿನ ಮೂಲಕ ಭಾರತೀಯ ಬ್ಯಾಂಕಿಂಗ್‌ಗೆ ವಿದೇಶಿ ಬ್ಯಾಂಕಿನ ಪ್ರವೇಶವಷ್ಟೆ. ಇದರಿಂದಾಗಿ ಭಾರತದಲ್ಲಿ ವಿದೇಶಿ ಬ್ಯಾಂಕ್‌ನ ಶಾಖೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಆರ್‌ಬಿಐ ತಾನೇ ರೂಪಿಸಿರುವ ನಿಯಮಗಳನ್ನು ತಾನೇ ಮುರಿದಂತಾಗಿದೆ.
ಎಲ್‌ವಿಬಿಯ ಶಾಖೆಗಳ ಜಾಲವು ಭಾರತದಲ್ಲಿರುವ ಒಟ್ಟು ವಿದೇಶಿ ಮೂಲದ ಬ್ಯಾಂಕ್‌ಗಳ ಎಲ್ಲ ಶಾಖೆಗಳಿಗಿಂತಲೂ ದೊಡ್ಡದು ಎಂಬುದು ಆರ್‌ಬಿಐಗೆ ತಿಳಿಯದಿರುವ ಸಂಗತಿಯಲ್ಲ. ಈಗಿನ ದಿನಗಳಲ್ಲಿ ಗ್ರಾಹಕರು ಹಾಗೂ ನೆಟ್‌ವರ್ಕ್‌ ಮೂಲಸೌಕರ್ಯಗಳನ್ನು ಪಡೆಯುವ ಏಕೈಕ ಉದ್ದೇಶದಿಂದ, ನಷ್ಟದಲ್ಲಿರುವ ಸಂಸ್ಥೆಗಳನ್ನು ಖರೀದಿಸಲು ಬಲಾಢ್ಯ ಕಂಪನಿಗಳು ದೊಡ್ಡಮೊತ್ತದ ಹಣ ಹೂಡಲೂ ತಯಾರಿರುತ್ತವೆ. ಹೀಗಿರುವಾಗ ಆರ್‌ಬಿಐ, ಎಲ್‌ವಿಬಿಯ ಮೌಲ್ಯವನ್ನು ಸರಿಯಾಗಿ ಅಳೆಯದೆ, ಕಡೆಗಣಿಸಿ ವಿದೇಶಿ ಕಂಪನಿಗೆ ಉಚಿತವಾಗಿ ಮಾರಲು ಮುಂದುವರಿದಿರುವುದು ಅಚ್ಚರಿ ಹುಟ್ಟಿಸುತ್ತಿದೆ. ಆರ್‌ಬಿಐ ನಿಜಕ್ಕೂ ಎಲ್‌ವಿಬಿಯ ನೆಟ್‌ವರ್ಕ್‌ ಮೌಲ್ಯ ಎಷ್ಟು ಎಂದು ಲೆಕ್ಕ ಹಾಕಿದೆಯೇ? ಇದ್ದರೆ ಲಕ್ಷಾಂತರ ಷೇರುದಾರರ ಹಿತದೃಷ್ಟಿಯಿಂದ ಬಹಿರಂಗಪಡಿಸಬೇಕು.
2. ಎಲ್‌ವಿಬಿಯನ್ನು ಖರೀದಿಸಲು ಡಿಬಿಎಸ್‌ ಭಾರತದಲ್ಲಿನ ತನ್ನ ಅಧೀನ ಬ್ಯಾಂಕಿಗೆ 2,500 ಕೋಟಿ ರೂ. ಕೊಡುವುದಾಗಿ ತಿಳಿಸಿದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಿಂಗಾಪುರದ ಡಿಬಿಎಸ್‌ ಸಂಸ್ಥೆಯ ಈ ಹಣವು, ಭಾರತದಲ್ಲಿನ ಅದರದ್ದೇ ಅಧೀನ ಸಂಸ್ಥೆಯಾದ ಡಿಬಿಎಸ್‌ ಇಂಡಿಯಾಗೆ ಬರಲಿದೆಯೇ ಹೊರತು, ಸಂಕಷ್ಟದಲ್ಲಿರುವ ಎಲ್‌ವಿಬಿಗೆ ಅಲ್ಲ. ಡಿಬಿಎಸ್‌ ಈ ಸ್ವಾಧೀನಕ್ಕೆ ನಯಾಪೈಸೆ ಕೊಡುವುದಿಲ್ಲ. ಹೀಗಾಗಿ ಡಿಬಿಎಸ್‌ ತನ್ನದೇ ಅಧೀನದಲ್ಲಿರುವ ಸಂಸ್ಥೆಗೆ 2,500 ಕೋಟಿ ರೂ.ಗಳನ್ನು ಜಮೆ ಮಾಡಿಕೊಂಡು, ಎಲ್‌ವಿಬಿಯಲ್ಲಿರುವ 20,000 ಕೋಟಿ ರೂ.ಗೂ ಅಧಿಕ ಭಾರತೀಯ ಠೇವಣಿಗಳ ಹಣಕಾಸು ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ.
3. ಎಲ್‌ವಿಬಿ ವರದಿ ಪ್ರಕಾರ ಅದು 10% ನಿವ್ವಳ ವಸೂಲಾಗದ ಸಾಲ (ಎನ್‌ಪಿಎ) ಹೊಂದಿದೆ. 16,000 ಕೋಟಿ ರೂ. ಮುಂಗಡ ವಿತರಿಸಿದೆ. (2020 ನವೆಂಬರ್‌ 20ರ ವೇಳೆಗೆ) ಅಂದರೆ ವಸೂಲಾಗದಿರುವ ಸಾಲ 1600 ಕೋಟಿ ರೂ. ಒಟ್ಟಾರೆ ಎನ್‌ಪಿಎ ಶೇ.25 ಎಂದರೆ ಸುಮಾರು 4,000 ಕೋಟಿ ರೂ. ಆಗಲಿದೆ. ಸಾಮಾನ್ಯವಾಗಿ ಎಲ್‌ವಿಬಿ ಸಾಲ ಕೊಡುವಾಗ ಸೂಕ್ತ ಭದ್ರತಾ ವ್ಯವಸ್ಥೆ, ಅಡಮಾನ ಇತ್ಯಾದಿ ಮಾಡಿಕೊಂಡಿರುತ್ತದೆ. ಭೂಮಿ, ಕಟ್ಟಡ ಇತ್ಯಾದಿ. ಹಣಕಾಸು ಸಾಧನಗಳಾದ ಡೆಪಾಸಿಟ್‌ ಕೂಡ ಇರಬಹುದು. ಸಾಲ ಪಡೆದ ಕಂಪನಿಗಳ ಪ್ರವರ್ತಕರ ವೈಯಕ್ತಿಕ ಖಾತರಿಯನ್ನೂ ಗಳಿಸಿರಬಹುದು. ತಕ್ಷ ಣಕ್ಕೆ ಅವುಗಳ ರಿಕವರಿ ಆಗದಿದ್ದರೂ, ಕಾಲಾಂತರದಲ್ಲಿ ಸಾಲದ ಮೊತ್ತ ವಸೂಲು ಮಾಡಲು ಅವಕಾಶವಂತೂ ಇದ್ದೇ ಇದೆ. ಹಾಗಾದರೆ ಆರ್‌ಬಿಐ ಅಂದಾಜಿಸಿದ್ದು ಹೇಗೆ? ಇದುವರೆಗೂ ಪಾರದರ್ಶಕವಾಗಿಲ್ಲ.
ಮಾಧ್ಯಮಗಳ ವರದಿಗಳ ಪ್ರಕಾರ ಎಲ್‌ವಿಬಿಯ ಆಡಳಿತ ಮಂಡಳಿಯು ವಸೂಲಾಗದಿರುವ ಸಾಲದ ಬಹುಪಾಲು ಮೊತ್ತವನ್ನು ವಸೂಲು ಮಾಡುವ ವಿಶ್ವಾಸದಲ್ಲಿತ್ತು. ಆರ್‌ಬಿಐ ಮಧ್ಯಪ್ರವೇಶಕ್ಕೆ ಮೊದಲೇ ಸಾಲದ ರಿಕವರಿಯಲ್ಲಿ ಪ್ರಗತಿ ಸಾಧಿಸಲಾಗಿತ್ತು. ಸಾಲ ಮರುವಸೂಲಿಗೆ ಸಕಲ ಅವಕಾಶಗಳು, ಸಾಧ್ಯತೆಗಳು ಇದ್ದರೂ, ವಿದೇಶಿ ಸಂಸ್ಥೆಗೆ ಬ್ಯಾಂಕ್‌ ಅನ್ನು ಮಾರುವ ಅಗತ್ಯ ಇದೆಯೇ? ಇದು ಸರಿಯಲ್ಲ.
4. ಆರ್‌ಬಿಐ ನಿಯುಕ್ತಿಗೊಳಿಸಿರುವ ಆಡಳಿತಾಧಿಕಾರಿಗಳೇ ಎಲ್‌ವಿಬಿಯ ಠೇವಣಿಗಳು ಸುರಕ್ಷಿತ ಮತ್ತು ಬ್ಯಾಂಕ್‌ ಸಾಕಷ್ಟು ನಿಧಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಹೀಗಿರುವಾಗ ಮಾದರಿ ಪದ್ಧತಿಯನ್ನು ಅನುಸರಿಸಬಹುದಲ್ಲವೇ. ಒತ್ತಡದಲ್ಲಿರುವ ಸಂಸ್ಥೆಯ ಮೌಲ್ಯನಿಷ್ಕರ್ಷೆ, ಪಾರದರ್ಶಕ ರೀತಿಯಲ್ಲಿ ಬಿಡ್‌ದಾರರಿಗೆ ಆಹ್ವಾನ, ಪಾಲುದಾರರ ಜತೆ ಸಮಾಲೋಚನೆ ಇತ್ಯಾದಿ ಸಮಗ್ರ ವಿಧಾನದ ಮೂಲಕ ಸಂಸ್ಥೆಯ ಮೌಲ್ಯವನ್ನು ಗರಿಷ್ಠಗೊಳಿಸಬಹುದಿತ್ತಲ್ಲವೇ. ಆರ್‌ಬಿಐ ಈ ಪ್ರಕ್ರಿಯೆಗಳನ್ನು ಕೈಬಿಟ್ಟಿದೇಕೆ?
5. ಭಾರತದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣವಾದ ನಂತರ 1961ರಿಂದ 81 ಬ್ಯಾಂಕ್‌ಗಳ ವಿಲೀನವಾಗಿವೆ. 34 ಖಾಸಗಿ ಬ್ಯಾಂಕ್‌ಗಳಲ್ಲಿ 26 ಬ್ಯಾಂಕ್‌ಗಳು ಸಾರ್ವಜನಿಕ ಬ್ಯಾಂಕ್‌ಗಳ ಜತೆ ವಿಲೀನವಾಗಿವೆ. 8 ಇತರ ಖಾಸಗಿ ಬ್ಯಾಂಕ್‌ಗಳ ಜತೆ ವಿಲೀನವಾಗಿವೆ. ಕಳೆದ 60 ವರ್ಷಗಳಲ್ಲಿ ಒಂದೇ ಒಂದು ಬ್ಯಾಂಕನ್ನು ವಿದೇಶಿ ಸಂಸ್ಥೆಯ ಜತೆ ವಿಲೀನಗೊಳಿಸಿದ್ದಿಲ್ಲ. ಎಲ್‌ವಿಬಿಯನ್ನು ವಿದೇಶಿ ಬ್ಯಾಂಕ್‌ ಜತೆ ವಿಲೀನಗೊಳಿಸುತ್ತಿರುವುದೇಕೆ? ಇದುವೇ ಆರ್‌ಬಿಐ ಮತ್ತು ಸರಕಾರದ ಹೊಸನೀತಿಯೇ? ಆರ್‌ಬಿಐ ತನ್ನ ಮೂಲಭೂತ ನಿಯಮಗಳನ್ನೇ ಹೀಗೆ ಬದಲಾಯಿಸಿದ್ದೇಕೆ? ಇದಕ್ಕೆ ಮುನ್ನ ವ್ಯಾಪಕ ಚರ್ಚೆ ಆಗಬೇಡವೇ? ರಾಷ್ಟ್ರೀಯ ಹಿತ ಇದೆಯೇ ಎಂದು ಚಿಂತಿಸಬೇಡವೇ? ಇದು ಪ್ರಧಾನಿಯವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ವಿರುದ್ಧವಾದುದಲ್ಲವೇ?
6. ಭಾರತೀಯ ಬ್ಯಾಂಕ್‌ ವಿದೇಶಿ ಬ್ಯಾಂಕ್‌ ಜತೆ ವಿಲೀನವಾದ ಮೇಲೆ, ವಿದೇಶಿ ಬ್ಯಾಂಕಿನ ನೀತಿಗಳು ಪ್ರಭಾವ ಬೀರದೆ ಇರುವುದಿಲ್ಲ. ಡಿಬಿಎಸ್‌, ಎಲ್‌ವಿಬಿಯನ್ನು ಖರೀದಿಸಿದ ನಂತರ ಭವಿಷ್ಯದಲ್ಲಿ ಏನೇನಾಗಲಿದೆ ಎಂಬ ಯಾವುದೇ ವಿವರವನ್ನು ಡಿಬಿಎಸ್‌ ನೀಡಿಲ್ಲ. ಒಂದು ವೇಳೆ ವಿದೇಶಿ ಬ್ಯಾಂಕ್‌ ವಿಫಲವಾದರೆ, ಅಲ್ಲಿ ಹಣ ಇಟ್ಟಿರುವ ಭಾರತದ ಠೇವಣಿದಾರರ ಹಿತಾಸಕ್ತಿ ಕಾಪಾಡುವವರು ಯಾರು? ಆರ್‌ಬಿಐ ಧಾವಿಸುವುದೇ? ಭಾರತದ ನಾಗರಿಕರನ್ನು ಈ ಅಪಾಯದತ್ತ ಆರ್‌ಬಿಐ ತಳ್ಳುತ್ತಿರುವುದೇಕೆ?
7. ಇತ್ತೀಚಿನ ಉದಾಹರಣೆಯಲ್ಲಿ ಯೆಸ್‌ ಬ್ಯಾಂಕ್‌ ವಿಫಲವಾದಾಗ ಆರ್‌ಬಿಐ ಮಧ್ಯಪ್ರವೇಶಿಸಿತ್ತು. ಎಸ್‌ಬಿಐ, ಎಲ್‌ಐಸಿ, ಎಚ್‌ಡಿಎಫ್‌ಸಿ, ಐಸಿಐಸಿಐ, ಕೋಟಕ್‌ ಮತ್ತು ಇತರ ಬ್ಯಾಂಕ್‌ಗಳಿಂದ ಒಟ್ಟು 12,000 ಕೋಟಿ ರೂ.ಗಳ ಹೂಡಿಕೆಯನ್ನು ಯೆಸ್‌ ಬ್ಯಾಂಕಿಗೋಸ್ಕರ ಸಂಗ್ರಹಿಸಿ, ವಿಷಯವನ್ನು ಇತ್ಯರ್ಥಪಡಿಸಿತ್ತು. ಇದೇ ರೀತಿ ಎಲ್‌ವಿಬಿಗೆ ಕೂಡ ಭಾರತೀಯ ಮೂಲದ ಸಂಸ್ಥೆಗಳಿಂದ ಹೂಡಿಕೆ ಸಂಗ್ರಹಿಸಬಹುದಲ್ಲವೇ. ವಿದೇಶಿ ಕಂಪನಿಗಳನ್ನು ಅವಲಂಬಿಸುವುದು ಏಕೆ?
8. ಎಲ್‌ವಿಬಿ 1926ರಿಂದ ಅಸ್ತಿತ್ವದಲ್ಲಿದೆ. ಸಮುದಾಯದ ಜತೆ ಆಳವಾದ ಸಂಬಂಧ, ಸಂಸ್ಕೃತಿಯನ್ನು ಹೊಂದಿದೆ. ಇಂಥ ಬ್ಯಾಂಕನ್ನು ಯಾವುದಾದರೂ ಸಾರ್ವಜನಿಕ ಬ್ಯಾಂಕ್‌ ಅಥವಾ ದಕ್ಷಿಣ ಭಾರತದ ಕರೂರ್‌ ವೈಶ್ಯ ಬ್ಯಾಂಕ್‌ ಇತ್ಯಾದಿ ಸ್ಥಳೀಯ ಬ್ಯಾಂಕ್‌ ಜತೆ ವಿಲೀನಗೊಳಿಸಬಹುದಿತ್ತಲ್ಲವೇ? ಅಥವಾ ಭಾರತದ್ದೇ ಪ್ರಬಲ ಎನ್‌ಬಿಎಫ್‌ಸಿಗಳನ್ನು ಪರಿಶೀಲಿಸಬಹುದಿತ್ತಲ್ಲವೇ? ಭಾರತದಲ್ಲೇ ಉತ್ತಮ ಅವಕಾಶಗಳಿರುವಾಗ ವಿದೇಶಿ ಬ್ಯಾಂಕಿಗೆ ಮಣೆ ಹಾಕಿರುವುದೇಕೆ?
9. ಆರ್‌ಬಿಐ ಬಗ್ಗೆ ನಮಗೆ ಅಪಾರ ಗೌರವ ಇದೆ. ಆರ್‌ಬಿಐಗೆ ನಮ್ಮ ಮನವಿ ಏನೆಂದರೆ, ದಯವಿಟ್ಟು ಎಲ್‌ವಿಬಿಯನ್ನು ಡಿಬಿಎಸ್‌ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ಮರುಪರಿಶೀಲಿಸಬೇಕು. ಸಂಪೂರ್ಣ ಭಾರತದ್ದೇ ಸಂಸ್ಥೆಯ ಜತೆ ವಿಲೀನಗೊಳಿಸಬೇಕು. ಪರ್ಯಾಯ ಆಯ್ಕೆ ಭಾರತದ್ದೇ ಆಗಿರಲಿ. ಸ್ವದೇಶಿ ಜಾಗರಣ ಮಂಚ್‌ ಎತ್ತಿರುವ ಪ್ರಶ್ನೆಗಳಿಗೆ ಪೂರಕವಾಗಿ ಇತ್ತೀಚೆಗೆ ಆರ್‌ಬಿಐನ ಆಂತರಿಕ ಸಮಿತಿ ದೊಡ್ಡ ಕಾರ್ಪೋರೇಟ್‌ ಕಂಪೆನಿಗಳು ಬ್ಯಾಂಕ್‌ಗಳನ್ನು ಆರಂಭಿಸಲು ಪೂರಕವಾಗಿ ನೀಡಿರುವ ವರದಿ ಕೂಡ ಚರ್ಚೆಗೆ ಗ್ರಾಸವಾಗಿದೆ. ಆರ್‌ಬಿಐನ ಆಂತರಿಕ ಸಮಿತಿಯ ಐವರು ಸದಸ್ಯರ ಪೈಕಿ ಒಬ್ಬರನ್ನು ಹೊರತುಪಡಿಸಿ ಬೇರೆಲ್ಲ ಸದಸ್ಯರೂ ಸೇರಿ ಬಹುತೇಕ ಆರ್ಥಿಕ ತಜ್ಞರು ಆತಂಕಪೂರಿತ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇವೆಲ್ಲ ಗಮನಿಸಬೇಕಾದ ಸಂಗತಿಗಳು.
ಕಾರ್ಪೊರೇಟ್‌ ಕಂಪೆನಿಗಳು ಬ್ಯಾಂಕ್‌ ತೆರೆಯುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅಭಿಪ್ರಾಯ ಇಲ್ಲಿ ಗಮನಾರ್ಹ. ದೊಡ್ಡ ಸಾಲಗಾರನ ಕೈಯಲ್ಲಿ ಸ್ವಂತ ಬ್ಯಾಂಕ್‌ ಇದ್ದರೆ, ಅಂಥ ಬ್ಯಾಂಕ್‌ ಸರಿಯಾದ ರೀತಿಯಲ್ಲಿ ಸಾಲ ನೀಡೀತೆ? ಇದೊಂದು ರೀತಿ ಇಡೀ ಹಣಕಾಸು ವ್ಯವಸ್ಥೆಗೇ ಬಾಂಬ್‌ ಎಸೆದಂತೆ ಎನ್ನುತ್ತಾರೆ ಅವರು.
ರಘುರಾಂ ರಾಜನ್‌ ಅಭಿಪ್ರಾಯವನ್ನು ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಕೂಡ ಖಚಿತ ಧ್ವನಿಯಲ್ಲಿ ಬೆಂಬಲಿಸಿದ್ದಾರೆ. ಮುಖ್ಯವಾಗಿ ಈ ಇಬ್ಬರೂ ಆರ್ಥಿಕ ತಜ್ಞರು ಎತ್ತಿರುವ ಪ್ರಶ್ನೆ, ಕಾರ್ಪೊರೇಟ್‌ ಕಂಪೆನಿಗಳು ಬ್ಯಾಂಕ್‌ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರೆ ಅದು ಆ ಕಂಪೆನಿ ವ್ಯವಹಾರಕ್ಕೆ ಅನುಕೂಲ ಆಗುತ್ತದೆಯೇ ಹೊರತು ಜನಸಾಮಾನ್ಯರ ಉಪಯೋಗಕ್ಕೆ ಬರುವುದಿಲ್ಲ. ಅಂತಹ ಬ್ಯಾಂಕ್‌ಗಳಲ್ಲಿ ಸ್ವತಂತ್ರ ನಿಯಂತ್ರಕ ಇದ್ದರೂ ಲೋಪದೋಷಗಳನ್ನು ಪತ್ತೆ ಹಚ್ಚುವುದು ಬಲುಕಷ್ಟ. ಬಹುಕಾಲ ತನ್ನ ಲೋಪದೋಷಗಳನ್ನು ಬಚ್ಚಿಟ್ಟುಕೊಂಡ ಯೆಸ್‌ ಬ್ಯಾಂಕ್‌ ಉದಾಹರಣೆ ಕಣ್ಣಮುಂದೇ ಇದೆಯಲ್ಲ? ಎಲ್ಲದಕ್ಕಿಂತ ಮುಖ್ಯವಾಗಿ ಕೆಲವೇ ಕೆಲವು ಕಾರ್ಪೊರೇಟ್‌ ಕಂಪೆನಿಗಳ ಕೈಯಲ್ಲಿ ಆರ್ಥಿಕ ಮತ್ತು ರಾಜಕೀಯ ಶಕ್ತಿ ಕೇಂದ್ರೀಕೃತ ಆಗುವುದು ಬಲು ಅಪಾಯಕಾರಿ. ಈಗಾಗಲೇ ಬ್ಯಾಂಕ್‌ ಸ್ಥಾಪನೆಗೆ ಬೇಕಾದ ಬಂಡವಾಳ ಇರುವ ದೊಡ್ಡ ಕಂಪೆನಿಗಳು ಮುಂದೆ ತಮ್ಮದೇ ಬ್ಯಾಂಕಿನ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತವೆ. ಭಾರತದಲ್ಲಿ ಬ್ಯಾಂಕಿಂಗ್‌ ಸೇವೆ ವಿಸ್ತರಣೆ ಅಗತ್ಯ ಇರುವುದು ನಿಜ, ಆದರೆ ಸೀಮಿತ ಸಾಲ ವಿತರಣೆ ವ್ಯವಸ್ಥೆಯ ನಡುವೆಯೂ ಬ್ಯಾಂಕ್‌ಗಳು ಅಪಾರ ನಷ್ಟ ಅನುಭವಿಸುತ್ತಿವೆ. ನಷ್ಟದಲ್ಲಿರುವ ಬ್ಯಾಂಕ್‌ಗಳ ರಕ್ಷ ಣೆಗೆ ಸರಕಾರ ಮುಂದಾಗಲೇ ಬೇಕಾಗುತ್ತದೆ. ಆಗ ಅದಕ್ಕೆ ವೆಚ್ಚ ಆಗುವುದು ತೆರಿಗೆದಾರರ ಹಣವೇ ಹೊರತು ಬೇರೇನೂ ಅಲ್ಲ.
ಈ ವಿಷಯದಲ್ಲಿ ವರ್ಲ್ಡ್‌ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಕೌಶಿಕ್‌ ಬಸು ಅವರ ಪ್ರತಿಕ್ರಿಯೆ ಇನ್ನೂ ಖಾರವಾಗಿದೆ. ಕಾರ್ಪೋರೇಟ್‌ ಕಂಪೆನಿಗಳು ಬ್ಯಾಂಕ್‌ಗಳನ್ನು ತೆರೆಯಲು ಅವಕಾಶ ನೀಡುವುದು ತೋರಿಕೆಗಷ್ಟೇ ಚಂದ. ಇದು ದೇಶದ ಆರ್ಥಿಕತೆಯನ್ನು ರೋಗಗ್ರಸ್ತ ಮಾಡಲು ಹಾಕಿದ ಪೀಠಿಕೆ ಎನ್ನುತ್ತಾರೆ. ಅದಕ್ಕಿಂತ ಹೆಚ್ಚಾಗಿ ದೇಶದ ಬಹುಪಾಲು ಆರ್ಥಿಕ ಚಟುವಟಿಕೆಯನ್ನು ನಡೆಸುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಹಣಕಾಸು ಸಂಸ್ಥೆಗಳನ್ನು ನುಂಗಿ ಹಾಕಲು ಮಾಡುತ್ತಿರುವ ವ್ಯವಸ್ಥೆಯಂತೆ ತೋರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೌಶಿಕ್‌ ಬಸು ಇನ್ನೊಂದು ಎಚ್ಚರಿಕೆ ನೀಡಿದ್ದಾರೆ. 1997ರಲ್ಲಿ ಪೂರ್ವ ಏಷ್ಯಾದಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟಕ್ಕೆ ಈ ರೀತಿಯ ಹಿತಾಸಕ್ತಿಗಳಿಂದ ಕೂಡಿದ ಬ್ಯಾಂಕಿಂಗ್‌ ವ್ಯವಸ್ಥೆ ಹಾಗೂ ಕೆಟ್ಟ ಸಾಲದ ಪ್ರಮಾಣವೇ ಕಾರಣ ಎಂದು ಉದಾಹರಿಸುತ್ತಾರೆ.
ಇವಿಷ್ಟೇ ಅಲ್ಲ ಈಗ ನಡೆಯುತ್ತಿರುವ ಬ್ಯಾಂಕ್‌ ವಿಲೀನೀಕರಣದ ವಿಷಯದಲ್ಲೂ ಕೂಡ ಮರು ಆಲೋಚನೆ ಮಾಡಬೇಕಾದ ಅಗತ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಭಾರತದಂತಹ ಸಣ್ಣಪುಟ್ಟ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳೇ ಶೇ.60ರಷ್ಟು ಆರ್ಥಿಕ ವ್ಯವಸ್ಥೆಯ ಆಧಾರ ಆಗಿರುವುದರಿಂದ ವಿಲೀನೀಕರಣದ ಬದಲು ಪಾರದರ್ಶಕ ಸ್ಪರ್ಧಾತ್ಮಕತೆಗೆ ಅವಕಾಶ ಮಾಡಿಕೊಡಬೇಕಾದ್ದೇ ಹೆಚ್ಚು ಸಮಂಜಸವಾದ ಕ್ರಮ. ಈ ಹಿಂದೆ ಕೇವಲ ಒಂದೆರಡು ದೊಡ್ಡ ಬ್ಯಾಂಕುಗಳಿರುವ ಶ್ರೀಮಂತ ದೇಶಗಳೇ ಬ್ಯಾಂಕುಗಳ ಜೊತೆಗೆ ಆರ್ಥಿಕ ದಿವಾಳಿ ಆಗಿರುವ ಜ್ವಲಂತ ನಿದರ್ಶನಗಳಿವೆ. ಅದೇ ವೇಳೆ ಬಹುಪಾಲು ಸಣ್ಣ ಹಿಡುವಳಿಗಳಿಂದ ಕೂಡಿದ ಭಾರತೀಯ ಕೃಷಿ ವಲಯ, ಭಾರತದ ಆರ್ಥಿಕ ವ್ಯವಸ್ಥೆ ಈ ಹಿಂದೆ ಜಾಗತಿಕ ಆರ್ಥಿಕ ಹಿಂಜರಿತದಿಂದಲೂ ಬಚಾವಾದ ಉದಾಹರಣೆಯೂ ಇದೆ. ಇಂಥ ಸನ್ನಿವೇಶದಲ್ಲಿ ಬ್ಯಾಂಕಿಂಗ್‌, ಟೆಲಿಕಾಂ, ಬಂದರು, ವಿಮಾನ ನಿಲ್ದಾಣಗಳು, ಇಂಧನ ವಲಯ, ರೀಟೇಲ್‌ ಉದ್ಯಮ ವಲಯದ ವಹಿವಾಟುಗಳನ್ನೆಲ್ಲ ಒಂದೋ ಎರಡೋ ಕಂಪೆನಿಗಳ ತೆಕ್ಕೆಗೆ ನೀಡುವ ಮುನ್ನ ಸರಕಾರ ನೂರು ಬಾರಿ ಆಲೋಚನೆ ಮಾಡಬೇಕಾದ ತುರ್ತು ಅಗತ್ಯವಿದೆ. ಅದಿಲ್ಲದೇ ಹೋದರೆ ಸ್ವದೇಶಿ, ಸುರಕ್ಷೆ, ಸ್ವಾಭಿಮಾನ, ಆತ್ಮನಿರ್ಭರತೆ, ಗಾಂಧೀಪ್ರಣೀತ ವಿಕೇಂದ್ರೀಕರಣ, ಗ್ರಾಮಸ್ವರಾಜ್ಯದ ಮಾತುಗಳೆಲ್ಲ ನಿಷ್ಪ್ರಯೋಜಕ ಆಗುವುದು ಗ್ಯಾರಂಟಿ.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top