ರಾವಣನಿಂದ ಅಪಹೃತಗೊಂಡ ಸೀತೆಯ ಶೋಧಕ್ಕಾಗಿ ಹನುಮಂತ ಸಮುದ್ರವನ್ನೇ ಹಾರುತ್ತಾನೆ. ಅಲ್ಲಿ ಸೀತೆಯನ್ನು ಕಂಡು, ಆಕೆಯಿಂದ ಚೂಡಾಮಣಿಯನ್ನು ಪಡೆದು, ಮರಳಿ ಸಮುದ್ರದ ಮೇಲೆ ಹಾರಿ ಬರುತ್ತಿರುವಾಗ ಚೂಡಾಮಣಿ ಕೈಜಾರಿ ಸಮುದ್ರದೊಳಗೆ ಬಿತ್ತು. ಕೂಡಲೇ ಆಂಜನೇಯ ಸಮುದ್ರಕ್ಕೆ ಧುಮುಕಿ, ಉಂಗುರವನ್ನು ಹುಡುಕುತ್ತ ನೇರವಾಗಿ ಪಾತಾಳಕ್ಕೆ ಹೋದ. ಅಲ್ಲಿ ಬಲಿ ಚಕ್ರವರ್ತಿಯಿದ್ದ. ಅವನ ಬಳಿ ಹೋಗಿ ಮಾರುತಿ, ಚೂಡಾಮಣಿಯ ಬಗ್ಗೆ ಕೇಳಿದ. ಬಲಿಯೇಂದ್ರ ನೂರಾರು ಚೂಡಾಮಣಿಗಳಿದ್ದ ತಟ್ಟೆಯೊಂದನ್ನು ಹನುಮನ ಮುಂದಿರಿಸಿ, ‘‘ಇದರಲ್ಲಿ ನಿನ್ನ ಚೂಡಾಮಣಿ ಯಾವುದು ತೆಗೆದುಕೋ,’’ ಎಂದು ಹೇಳಿದ. ಇದೇನು ಎಂದು ಹನುಮ ಚಕಿತನಾದ. ಆಗ ಬಲಿ ಹೇಳಿದ- ‘‘ಈ ಹಿಂದಿನ ಕಲ್ಪಗಳಲ್ಲಿ ನಿನ್ನಂತೆ ನೂರಾರು ಹನುಮರು ಇಲ್ಲಿಗೆ ಬಂದು ಹೋದರು, ನೂರಾರು ರಾಮಾಯಣಗಳೂ ನಡೆದುಹೋದವು. ನೀನೂ ಅವರಲ್ಲಿ ಒಬ್ಬ ಅಷ್ಟೇ!’’
ಇದು ವಿದ್ವಾಂಸ, ಕವಿ ಎ.ಕೆ.ರಾಮಾನುಜನ್ ತಮ್ಮ ‘ಮುನ್ನೂರು ರಾಮಾಯಣಗಳು’ ಪ್ರಬಂಧದಲ್ಲಿ ಉಲ್ಲೇಖಿಸಿದ ಒಂದು ಜನಪದ ಕತೆ. ಗಮನವಿಟ್ಟು ಓದಿದರೆ ಈ ಕತೆ ಹತ್ತಾರು ವಿಚಾರಗಳನ್ನು ಹೇಳುತ್ತದೆ. ಒಂದು, ರಾಮಾಯಣಗಳು ಹಲವು ನಡೆದಿವೆ. ಮತ್ತು ಪ್ರತಿ ಕಲ್ಪದಲ್ಲಿಯೂ ನಾಲ್ಕು ಯುಗಗಳು ಘಟಿಸುತ್ತವೆ. ಪ್ರತಿ ತ್ರೇತಾಯುಗದಲ್ಲೂ ಒಂದೊಂದು ರಾಮಾಯಣ ನಡೆಯುತ್ತದೆ. ಯಾಕೆಂದರೆ ಭಾರತೀಯರ ಕಾಲದ ಕಲ್ಪನೆಯೇ ಚಕ್ರೀಯಗತಿಯದ್ದು. ಬಂಡಿಚಕ್ರ ತಿರುಗುತ್ತ ಹೋಗುತ್ತದೆ; ಕಾಲ ಕ್ರಮಿಸುತ್ತದೆ; ಆದರೆ ಚಕ್ರದ ಪ್ರತಿಯೊಂದು ಬಿಂದುವೂ ಮರಳಿ ಮರಳಿ ನೆಲವನ್ನು ಸ್ಪರ್ಶಿಸುತ್ತಲೇ ಇರುತ್ತದೆ. ಪ್ರತಿ ಘಟನೆಯೂ ನೂರಾರು ಸಾವಿರಾರು ಸಲ ನಡೆಯುತ್ತದೆ ಎನ್ನುವ ಭಾರತೀಯರ ಕಲ್ಪನೆಯೇ ತರ್ಕಾತೀತ; ಮತ್ತು ಇದು ಕಲ್ಪನೆಯ ಸೃಜನಶೀಲತೆಯ ತುತ್ತತುದಿ. ಇದು ಪಾಶ್ಚಾತ್ಯರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ಕತೆಯಲ್ಲೇ ಇರುವ ಇನ್ನೊಂದು ಸುಳಿವು ಎಂದರೆ, ಬಲಿಯ ತಟ್ಟೆಯಲ್ಲಿ ನೂರಾರು ಉಂಗುರಗಳು ಇದ್ದವು ಎನ್ನವುದು. ಅಂದರೆ ಈ ಉಂಗುರಗಳನ್ನು ಹುಡುಕಿ ಬರಲು ವಿಫಲರಾದ ಆಂಜನೇಯರೂ ಇದ್ದಿರಬಹುದಷ್ಟೆ! ಇಲ್ಲವಾದರೆ ಅವು ಬಲಿಯ ತಟ್ಟೆಯಲ್ಲಿ ಉಳಿಯಲು ಹೇಗೆ ಸಾಧ್ಯ? ಹನುಮಂತ ಚೂಡಾಮಣಿಯನ್ನು ಕಳೆದುಕೊಂಡರೆ, ಅದನ್ನು ರಾಮನಲ್ಲಿಗೆ ತರಲು ವಿಫಲನಾದರೆ, ರಾಮಾಯಣ ಹೇಗೆ ಮುಂದುವರಿದಿರಬಹುದು? ಈಗ, ರಾಮಾಯಣದ ಕತೆಯನ್ನು ಮುಂದುವರಿಸುವ ಜವಾಬ್ದಾರಿ ಕತೆಯ ಓದುಗ- ಕೇಳುಗರಾದ ನಮ್ಮ ಮೇಲೆ ಬೀಳುತ್ತದೆ! ಅಂದರೆ ರಾಮಾಯಣ ನಮ್ಮ ಮನೋರಂಗದಲ್ಲೇ ನಡೆಯಬೇಕು!
ಇಂಥದ್ದೇ ಇನ್ನೊಂದು ಕತೆಯಿದೆ. ಒಮ್ಮೆ ದಾಸರು ರಾಮಾಯಣದ ಕತೆ ಹೇಳುತ್ತಾ ಇದ್ದರು. ಚೂಡಾಮಣಿಯ ಪ್ರಸಂಗ ಬಂತು. ಆಗಲೂ ಹನುಮಂತನ ಕೈಯಿಂದ ಚೂಡಾಮಣಿ ಹಿಡಿತ ತಪ್ಪಿ ಸಮುದ್ರಕ್ಕೆ ಬಿದ್ದು ಪಾತಾಳಕ್ಕೆ ಹೋಯಿತು. ಆಗ ಕತೆ ಕೇಳುತ್ತಿದ್ದ ಹಳ್ಳಿಯವರಲ್ಲಿ ಒಬ್ಬಾತ ಈಜುಪಟು ದಿಡೀರನೆ ಎದ್ದು, ‘‘ಹನುಮಂತಾ, ಹೆದರಬೇಡ, ಆ ಉಂಗುರವನ್ನು ನಾನು ತಂದುಕೊಡುತ್ತೇನೆ,’’ ಎಂದು ಕೂಗಿ, ಸಮುದ್ರಕ್ಕೆ ಧುಮುಕಿ, ಉಂಗುರವನ್ನು ತಂದುಕೊಟ್ಟ. ಕತೆ ಮುಂದುವರಿಯಿತು. ಈ ಕತೆ ವಿಲಕ್ಷಣವಾಗಿದೆ; ಅಸಂಭವನೀಯತೆ ಇದಕ್ಕೆ ಸೇರಿಕೊಂಡಿದೆ. ಹಾಗೇ ಮ್ಯಾಜಿಕ್ ರಿಯಲಿಸಂ ಎಂದು ಹೊಸ ಸಾಹಿತ್ಯದಲ್ಲಿ ನಾವು ಕರೆಯುವ ಸ್ವಪ್ನವಾಸ್ತವ ಕತೆಗಾರಿಕೆಯ ಹಲವು ಲಕ್ಷಣಗಳೂ ಇದರಲ್ಲಿವೆ. ಅದೆಲ್ಲವನ್ನು ಬಿಟ್ಟು ನೋಡುವುದಾದರೆ, ಭಾರತೀಯ ಪ್ರಜೆ ರಾಮಾಯಣದಲ್ಲಿ ಎಷ್ಟು ಮಗ್ನನಾಗುತ್ತಾನೆ; ಈ ಕತೆಯನ್ನು ಎಷ್ಟು ಗಾಢವಾಗಿ ತನ್ನದೇ ಎಂಬಂತೆ ಭಾವಿಸಿದ್ದಾನೆ ಎಂಬುದು ಕೂಡ ಇಲ್ಲಿ ಗೊತ್ತಾಗುತ್ತದೆ.
ಇನ್ನೊಂದು ಜನಪದ ರಾಮಾಯಣದಲ್ಲಿ ಕಾಡಿಗೆ ಹೋಗುವ ವಿಷಯದ ಕುರಿತು ರಾಮ ಹಾಗೂ ಸೀತೆಯರ ನಡುವೆ ವಾಗ್ವಾದ ನಡೆಯುತ್ತದೆ. ನಿನ್ನ ಜೊತೆ ನಾನೂ ಕಾಡಿಗೆ ಬರುತ್ತೇನೆ ಎಂದು ಸೀತೆ. ವನವಾಸದ ನಿಯಮ ನನಗೆ ಮಾತ್ರ ಎಂದು ರಾಮ. ಗಂಡನ ಜೊತೆ ಹೆಂಡತಿ ಹೋಗಲೇಬೇಕು ಇತ್ಯಾದಿ ಸಾಂಪ್ರದಾಯಿಕ ವಾದಗಳಿಂದ ಸೀತೆ ರಾಮನನ್ನು ಗೆಲ್ಲಲಾಗುವುದಿಲ್ಲ. ಕಡೆಗೆ ಸೀತೆ ಲಾ ಪಾಯಿಂಟ್ ಹಾಕುತ್ತಾಳೆ- ‘‘ಯಾವುದೇ ರಾಮಾಯಣದಲ್ಲಿಯಾದರೂ ಸೀತೆಯನ್ನು ಬಿಟ್ಟು ರಾಮ ಕಾಡಿಗೆ ಹೋದ ಕತೆ ಉಂಟೇನು?’’ ನಿರ್ವಾಹವಿಲ್ಲದೆ ರಾಮ ಆಕೆಯನ್ನು ಕರೆದೊಯ್ಯಲು ಒಪ್ಪಬೇಕಾಗುತ್ತದೆ. ಹೀಗೆ ವಾದಿಸುವ ಸೀತೆಗೆ ತನಗೆ ಮುಂದೆ ಏನಾಗುತ್ತದೆ ಎಂಬುದೂ ಗೊತ್ತಿರಲೇಬೇಕು ಅಲ್ಲವೆ? ಆದರೂ ಆಕೆ ವಿಧಿ ಅಥವಾ ಕಾಲಚಕ್ರವನ್ನು ಮೀರಿ ಹೋಗಲು ಒಪ್ಪುವುದಿಲ್ಲ.
ರಾಮಾಯಣವನ್ನು ಕಾಲಕಾಲಕ್ಕೆ ಎಲ್ಲರೂ ಅವರದೇ ಆದ ರೀತಿಯಲ್ಲಿ ಹೇಳುತ್ತಾರೆ. ವಾಲ್ಮೀಕಿಯದು ಆದಿಕಾವ್ಯ ಇರಬಹುದು; ಆದರೆ ಭವಭೂತಿಯ ಉತ್ತರರಾಮಚರಿತ ಅಂತ್ಯಕಾವ್ಯವೇನೂ ಅಲ್ಲ. ನಮ್ಮ ಕಾಲದ ಭೈರಪ್ಪನವರೂ ಉತ್ತರಕಾಂಡವನ್ನು ಬರೆಯುತ್ತಾರೆ. ಕುಮಾರವ್ಯಾಸ ಅದಕ್ಕೇ ‘ತಿಣುಕಿದನು ಫಣಿರಾಯ’ ಎಂದು ಹೇಳಿರಬಹುದು. ಅವನು ಹೇಳುವ ‘ರಾಮಾಯಣದ ಕವಿಗಳ ಭಾರ’ ಎಂದರೆ ಭೂಮಿಗೆ ಅವರು ಭಾರ ಎಂದಲ್ಲ; ‘ರಾಮಾಯಣದ ಕವಿಗಳ ಘನತೆಯೇ ಬೇರೆ’ ಎಂದು ಅರ್ಥ ಮಾಡಿಕೊಳ್ಳೋಣ.
ಹಾಗೆ ನೋಡಿದರೆ ರಾಮಾಯಣ, ಕಾವ್ಯದ ಬಗೆಗಿನ ಚಿಂತನೆಯೂ ಹೌದು. ಕ್ರೌಂಚಮಿಥುನವನ್ನು ಬೇಟೆಗಾರ ಕೊಂದ ಕ್ಷಣವೇ ವಾಲ್ಮೀಕಿಯಲ್ಲಿ ಮೂಡಿದ ಶೋಕ, ಶ್ಲೋಕವಾಗಿ ಹೊಮ್ಮುತ್ತದೆ. ಶ್ಲೋಕದ ಹಿನ್ನೆಲೆಯಲ್ಲಿ ಶೋಕವಿದೆ ಎಂಬುದು ಶಬ್ದಗಾರುಡಿಯಷ್ಟೇ ಅಲ್ಲ. ಅದಕ್ಕೂ ಮೊದಲೇ ವಾಲ್ಮೀಕಿಗಳು ನಾರದರಿಂದ ರಾಮನ ಕತೆಯನ್ನು ಕೇಳಿರುತ್ತಾರೆ. ಹೀಗೆ ಕೇಳಿದ ಒಂದು ಕತೆ, ನಿಜಜೀವನದ ಒಂದು ಘಟನೆಯಾಗಿ, ಅನುಭವವಾಗಿ ಹೊಮ್ಮಬೇಕು. ರಾಮ- ಸೀತೆಯರ ಅಗಲುವಿಕೆ ಕ್ರೌಂಚಮಿಥುನದ ಅಗಲಿಕೆಯಾಗಿ ಕಾಣಬೇಕು. ಒಳಸ್ರೋತವಾಗಿ ಲಕ್ಷ್ಮಣ- ಊರ್ಮಿಳೆಯರ ಅಗಲಿಕೆಯೂ ಇರಬಹುದು. ಹೀಗೆ ಕೇಳಿದ್ದು, ಕಂಡಿದ್ದು, ಆರ್ತನಾಗಿ ಅನುಭವಿಸಿದ್ದು ಎಲ್ಲವೂ ಸಂಗಮಿಸಿದಾಗ ಒಂದು ಕಾವ್ಯ ಸಿದ್ಧವಾಗುತ್ತದೆ.
ಕಾವ್ಯದ ಒಳಗೆ ಕವಿ ಎಷ್ಟಿರಬೇಕು, ಹೇಗಿರಬೇಕು ಎಂಬುದಕ್ಕೂ ಆದಿಕಾವ್ಯವೇ ಒಂದು ಮಾದರಿಯನ್ನು ಹಾಕಿಕೊಡುತ್ತದೆ. ಉತ್ತರಕಾಂಡ ವಾಲ್ಮೀಕಿಯೇ ಬರೆದದ್ದೋ ಅಲ್ಲವೋ ಎಂಬ ವ್ಯಾಜ್ಯವನ್ನು ಬದಿಗಿಟ್ಟು ನೋಡಿದರೆ, ಆ ಕತೆ ರಾಮಾಯಣದ ಕರುಣಾರಸವನ್ನು ತುತ್ತತುದಿಗೆ ಒಯ್ಯುತ್ತದೆ. ಇಲ್ಲಿ ಸ್ವತಃ ಕವಿ ವಾಲ್ಮೀಕಿಯೇ ತನ್ನ ಕಥಾನಾಯಕಿ ಸೀತೆಗೆ ಆಶ್ರಯ ಕೊಡುತ್ತಾನೆ. ‘‘ಯಾರಾದರೂ ಒಂದು ಪಾತ್ರದ ಕೈಬಿಟ್ಟರೆ, ಅದಕ್ಕೆ ಕತೆಗಾರನೇ ಆಶ್ರಯ ಕೊಡಬೇಕಲ್ಲದೆ ಇನ್ಯಾರು?,’’ ಎಂದು ಹೇಳುತ್ತಾರೆ ಚಿಂತಕ ಲಕ್ಷ್ಮೇಶ ತೋಳ್ಪಾಡಿ ಒಂದು ಕಡೆ. ತನ್ನ ಕಥಾನಾಯಕ ರಾಮನ ಮುಂದೆ ಅವನದೇ ಕತೆಯನ್ನು ಆತನ ಮಕ್ಕಳಿಂದ ಹೇಳಿಸುತ್ತಾನೆ ವಾಲ್ಮೀಕಿ. ಒಂದು ತಲೆಮಾರಿನ ಕತೆಯನ್ನು ಅದರ ಮುಂದಿನ ತಲೆಮಾರು ಹೇಳುವುದೆಂದರೆ, ಇಡೀ ತಲೆಮಾರನ್ನು ವಿಮರ್ಶೆಗೆ ಒಡ್ಡುವುದು ಎಂದೂ ಅರ್ಥ ಅಲ್ಲವೆ? ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನಡೆಯಲಿರುವ ಸಂದರ್ಭದಲ್ಲಿ ಇದೆಲ್ಲ ನೆನಪಾಯಿತು.