ಹಿಂದೂಗಳ ಅಸ್ಮಿತೆ ಬಡಿದೆಬ್ಬಿಸಿದ ಚಳವಳಿ

– ಲಾಲ್‌ಕೃಷ್ಣ ಆಡ್ವಾಣಿ.

ದೇಶಾದ್ಯಂತ ರಥಯಾತ್ರೆ ಮಾಡಿ ರಾಮ ಜನ್ಮಭೂಮಿ ಆಂದೋಲನ ಬಿರುಗಾಳಿಯಂತೆ ವ್ಯಾಪಿಸುವಂತೆ ಮಾಡಿದವರು ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಆಡ್ವಾಣಿ. ಜನ್ಮಭೂಮಿ ಸಂಘರ್ಷದ ವೃತ್ತಾಂತ, ರಥಯಾತ್ರೆಯ ಆ ದಿನಗಳು- ಎಲ್ಲದರ ಕುರಿತು ಆಡ್ವಾಣಿಯವರು ತಮ್ಮ ಆತ್ಮಕತೆ ‘ಮೈ ಕಂಟ್ರಿ, ಮೈ ಲೈಫ್‌’ನಲ್ಲಿ ಬರೆದುದರ ಆಯ್ದ ಭಾಗ ಇಲ್ಲಿದೆ.

ದೇಶಾದ್ಯಂತ ಸುಂಟರಗಾಳಿ ಎಬ್ಬಿಸಿದ ಅಯೋಧ್ಯೆ ಮಹಾ ಆಂದೋಲನವು ನನ್ನ ರಾಜಕೀಯ ಜೀವನದ ಅತ್ಯಂತ ಕ್ಲಿಷ್ಟಕರ ಮತ್ತು ಸ್ಥಿತ್ಯಂತರದ ವಿದ್ಯಮಾನ. ನಮ್ಮ ಸಮಾಜ ಮತ್ತು ರಾಜಕೀಯ ಸ್ಥಿತಿಗತಿಯ ಮೇಲೆ ಅಯೋಧ್ಯೆ ಚಳವಳಿ ಬೀರಿದ ಪರಿಣಾಮ ಗಾಢ. ಅದು ನಮ್ಮೊಳಗಿನ ರಾಷ್ಟ್ರೀಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ ಪರಿ ಅಚ್ಚರಿ. 1990ರಲ್ಲಿ ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆಯತನಕ ನಡೆದ ಐತಿಹಾಸಿಕ ರಥಯಾತ್ರೆಯ ಸಾರಥ್ಯ ವಹಿಸಿದ್ದು ನನ್ನ ಪಾಲಿನ ಸೌಭಾಗ್ಯವೇ ಸರಿ. ಈ ಹೊಣೆಯನ್ನು ನಾನು ದೃಢ ನಿರ್ಧಾರ, ಪ್ರಾಮಾಣಿಕವಾಗಿ ಮತ್ತು ನನ್ನೊಳಗಿನ ಸಂಪೂರ್ಣ ಸಾಮರ್ಥ್ಯ‌ ಬಳಸಿ ನಿಭಾಯಿಸಿದ್ದೇನೆ ಎಂದು ಭಾವಿಸಿದ್ದೇನೆ. ಹಾಗೆಯೇ, ‘ಭಾರತ ಶೋಧ’ ಎನ್ನುವುದು ನನ್ನನ್ನು ನಾನು ಮರು ಶೋಧಿಸಿಕೊಳ್ಳುವ ಪ್ರಯತ್ನವೂ ಆಗಿತ್ತು. ಅಯೋಧ್ಯೆ ಚಳವಳಿ ಎನ್ನುವುದು ನನ್ನ ಪಾಲಿಗೆ ಕ್ರಿಯೆಯನ್ನು ಉದ್ದೀಪಿಸುವದರ ಜತೆಗೆ, ಅಂತರಾಳದ ಪ್ರತಿಬಿಂಬವನ್ನು ಉದ್ದೀಪಿಸುವ ಪ್ರಕ್ರಿಯೆಯೂ ಆಗಿತ್ತು.
ಜನ್ಮಭೂಮಿಯಲ್ಲೇ ಮಂದಿರ ಮರುಸ್ಥಾಪಿಸಬೇಕೆಂಬ ಬೇಡಿಕೆಗೆ ಹಿಂದೂ ಸಮಾಜದಲ್ಲಿ ಇಷ್ಟೊಂದು ಅಭೂತಪೂರ್ವ ಬೆಂಬಲ ಸಿಕ್ಕಿದ್ದಾದರೂ ಹೇಗೆ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದು ಬೃಹತ್‌ ಚಳವಳಿಯಾಗಿ ಮೂಡಿ ಬರಲು ಕಾರಣವಾದರೂ ಏನು? ಶಾಂತಿ-ಸೌಹಾರ್ದಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಆಪ್ತ ರೀತಿಯಲ್ಲಿ ಪರಿಹಾರಗೊಳ್ಳಬಹುದಾದ ಮಂದಿರ-ಮಸೀದಿ ವಿವಾದ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಭಾರಿ ಕಂದರ ಏರ್ಪಡಿಸಲು ಯಾರು ಕಾರಣ? 1992ರ ಡಿಸೆಂಬರ್‌ 6 ರಂದು ಬಾಬರಿ ಕಟ್ಟಡ ಉರುಳಿ, ಆ ಜಾಗದಲ್ಲಿ ತಾತ್ಕಾಲಿಕ ರಾಮ ಮಂದಿರ ಸ್ಥಾಪನೆಯಾದ ಘಟನೆಯ ಹಿಂದೆ ಕಾಂಗ್ರೆಸ್‌ನ ‘ದ್ವಿಪಾತ್ರ’ ಕೆಲಸ ಮಾಡಲಿಲ್ಲವೇ? ಭವಿಷ್ಯದಲ್ಲಿ ಈ ಸಮಸ್ಯೆಗೆ ಪರಿಹಾರ ಏನು? ಈ ಬಗ್ಗೆ ಚಿಂತನೆ ಅತ್ಯವಶ್ಯ.

400 ವರ್ಷಗಳ ಹೋರಾಟ
ಐತಿಹಾಸಿಕ ದಾಖಲೆಗಳನ್ನು ಅವಲೋಕಿಸಿದಾಗ ಈ ಪವಿತ್ರ ಸ್ಥಳಕ್ಕಾಗಿ ಹಿಂದೂಗಳು 400 ವರ್ಷಗಳಿಂದ ಹೋರಾಡುತ್ತ ಬಂದಿದ್ದಾರೆ. ಏಕೆಂದರೆ ರಾಮ ಜನ್ಮಭೂಮಿ ಪಾರಂಪರಿಕವಾಗಿ, ಭಾವನಾತ್ಮಕವಾಗಿ ಅತಿ ಮಹತ್ವದ ಸ್ಥಳ. ಆದರೆ ಮುಸ್ಲಿಮರಿಗೆ ಈ ಸ್ಥಳ ಸಾಂಸ್ಕೃತಿಕವಾಗಿಯಾಗಲಿ ಧಾರ್ಮಿಕ ನೆಲೆಯಲ್ಲಾಗಲಿ ವಿಶೇಷವೇನಿಲ್ಲ. ಸುದೀರ್ಘ ಮುಸ್ಲಿಂ ಆಳ್ವಿಕೆಯ ಕಾಲದಲ್ಲೂ ದೇಶಾದ್ಯಂತದ ಹಿಂದೂಗಳು ಅಯೋಧ್ಯೆಗೆ ತೀರ್ಥಯಾತ್ರೆ ಕೈಗೊಳ್ಳುತ್ತ ಬಂದಿದ್ದಾರೆ. ಮುಸ್ಲಿಮರ ಪಾಲಿಗೆ ಇದು, ಮಧ್ಯಕಾಲೀನ ಭಾರತದ ಮೇಲೆ ಪರಕೀಯ ಮುಸ್ಲಿಂ ರಾಜನೊಬ್ಬನ ಆಕ್ರಮಣದ ಸಂಕೇತವಷ್ಟೇ. ಸ್ಪಷ್ಟವಾಗಿ ಹೇಳಬೇಕೆಂದರೆ, ಬಾಬರಿ ಮಸೀದಿ ಧಾರ್ಮಿಕ ಅಸಹಿಷ್ಣುತೆಯ ಸಂಕೇತ ಮಾತ್ರವಲ್ಲ, ತಾಯ್ನಾಡಿನ ಮೇಲೆ ನಡೆದ ಪರಕೀಯರ ಆಕ್ರಮಣಕ್ಕೆ ಸಾಕ್ಷಿ. ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ವಿಶ್ವನಾಥ ಮಂದಿರದಂತೆ ಹಿಂದೂಗಳ ಪಾಲಿಗೆ ಅಯೋಧ್ಯೆಯ ರಾಮ ಜನ್ಮಭೂಮಿ ಪವಿತ್ರ ಕ್ಷೇತ್ರ.

ವಿವಾದ 80ರ ದಶಕದಲ್ಲಿ ಮತ್ತೆ ಸುತ್ತಿಕೊಂಡಿದ್ದೇಕೆ?
ರಾಜಕೀಯ ಲಾಭ ಗಿಟ್ಟಿಸಲು ಈ ವಿವಾದವನ್ನು ಆರ್‌ಎಸ್‌ಎಸ್‌-ವಿಹಿಂಪ-ಬಿಜೆಪಿ ಸಂಘಟನೆಗಳು ಜಂಟಿಯಾಗಿ ಉಲ್ಬಣಿಸಿದರು ಎಂದು ಕೆಲವರು ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ವಿವಾದಕ್ಕೆ 400 ವರ್ಷಗಳ ಇತಿಹಾಸವಿದೆ. ಅಯೋಧ್ಯೆ ಚಳವಳಿಗೆ ಬಿಜೆಪಿ ಅಧಿಕೃತವಾಗಿ ಬೆಂಬಲ ಘೋಷಿಸಿದ್ದು 1989ರಲ್ಲಿ. ಇದಕ್ಕಿಂತ 5 ವರ್ಷಗಳ ಮೊದಲೇ ಈ ವಿವಾದದ ಕಿಡಿ ಹೊತ್ತಿಕೊಂಡಿತ್ತು!
1951ರಿಂದ 1986ರ ತನಕ ವಿವಾದಿತ ಸಂಕೀರ್ಣದ ಗೇಟ್‌ಗೆ ಬೀಗ ಜಡಿಯಲಾಗಿತ್ತು. ಆಗ ಉತ್ತರ ಪ್ರದೇಶ ಮತ್ತು ದಿಲ್ಲಿಯಲ್ಲಿ ಕಾಂಗ್ರೆಸ್‌ ಸರಕಾದ ಆಳ್ವಿಕೆ ಇತ್ತು. ಅಲ್ಲಿಯವರೆಗೆ ಅಯೋಧ್ಯೆ ಕೇವಲ ಸ್ಥಳೀಯ ಸಮಸ್ಯೆಯಾಗಿತ್ತು. 1952ರಿಂದ ನಾನು ರಾಜಕೀಯ ರಂಗದಲ್ಲಿದ್ದರೂ ರಾಜಕೀಯ ವೇದಿಕೆಯಲ್ಲಿ ಒಮ್ಮೆಯೂ ನನಗೆ ಈ ವಿಚಾರವಾಗಿ ಮಾತನಾಡುವ ಸಂದರ್ಭ ಎದುರಾಗಿರಲಿಲ್ಲ. 80ರ ದಶಕದಲ್ಲಿ ಈ ವಿವಾದ ಇದ್ದಕ್ಕಿದ್ದಂತೆ ದೇಶದ ರಾಜಕೀಯ ರಂಗದಲ್ಲಿ ಬಿರುಗಾಳಿ ಎಬ್ಬಿಸಲು ಮುಖ್ಯ ಕಾರಣವಾಗುವ ಮೂರು ಮುಖ್ಯ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಒಂದು- ರಾಮಜನ್ಮಭೂಮಿಯ ಮುಕ್ತಿಗಾಗಿ ನ್ಯಾಯಾಲಯದ ತೀರ್ಪಿಗೆ ಕಾದು ಕಾದು ಹಿಂದೂ ಸಮುದಾಯದವರು ತಾಳ್ಮೆ ಕಳೆದುಕೊಂಡಿದ್ದರು. ಅಯೋಧ್ಯೆಗೆ ಆಗಮಿಸುತ್ತಿದ್ದ ಭಕ್ತರು ರಾಮಜನ್ಮಭೂಮಿಯಲ್ಲಿ ಮಸೀದಿಯ ಕಟ್ಟಡ ನೋಡಿ ಕಿರಿಕಿರಿಗೊಳಗಾಗುತ್ತಿದ್ದರು. ಮೂರು- ವಿವಾದಿತ ಕಟ್ಟಡದ ಗೇಟ್‌ ಮೂಲಕ ಒಬ್ಬ ಪುರೋಹಿತರಿಗೆ ಮಾತ್ರ ಕಳಿಸಿ ಪೂಜೆಗೆ ಅವಕಾಶ ನೀಡಲಾಗುತ್ತಿತ್ತು. ಭಕ್ತರು ಗೇಟಿನ ಹೊರಗಿನಿಂದಲೇ ಪ್ರಾರ್ಥಿಸಬೇಕಿತ್ತು. ಈ ಎಲ್ಲ ಸಂಗತಿಗಳು 1983ರಲ್ಲಿ ಸಾಮೂಹಿಕ ಚಳವಳಿಗೆ ನಾಂದಿ ಹಾಡಿದವು.
ಅಯೋಧ್ಯೆ ಚಳವಳಿ ಆರಂಭವಾಗಿದ್ದು ಸಂಪೂರ್ಣವಾಗಿ ರಾಜಕೀಯೇತರ ಸಂಘಟನೆಗಳಿಂದ. 1984ರ ಜುಲೈನಲ್ಲಿ ರಾಮಜನ್ಮಭೂಮಿ ಮುಕ್ತಿಯಜ್ಞ ಸಮಿತಿ ಅಸ್ತಿತ್ವಕ್ಕೆ ಬಂತು. ರಾಮ ಮಂದಿರವೆಂಬ ಅಂತಿಮ ಗುರಿ ಸಾಧಿಸಲು ದೇಶದ ಎಲ್ಲ ಹಿಂದೂ ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದು ಕೂರಿಸಿದ ಶ್ರೇಯಸ್ಸು ವಿಶ್ವ ಹಿಂದೂ ಪರಿಷತ್‌ಗೆ ಸಲ್ಲಬೇಕು.
ರಾಮ ಮಂದಿರದ ಗೇಟು ತೆರೆಯಲು ಆಗ್ರಹಿಸಿ 1984ರ್‌ನಲ್ಲಿ ಬಿಹಾರದ ಸೀತಾಮುರಿಯಿಂದ ಅಯೋಧ್ಯೆವರೆಗೆ ಬೃಹತ್‌ ಜಾಗೃತಿ ಯಾತ್ರೆ ನಡೆಯಿತು. ಆಗಿನ್ನೂ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. 1985ರ ಹೊತ್ತಿಗೆ ಆಂದೋಲನ ಮತ್ತಷ್ಟು ತೀವ್ರ ಸ್ವರೂಪ ಪಡೆಯಿತು. ಆಗಷ್ಟೆ ರಾಜೀವ್‌ ಗಾಂಧಿ ಪ್ರಧಾನಿ ಪಟ್ಟಕ್ಕೇರಿದ್ದರು. ಉತ್ತರ ಪ್ರದೇಶದಲ್ಲಿ ವೀರಭದ್ರ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಅಸ್ತಿತ್ವದಲ್ಲಿತ್ತು. 1986ರ ಜನವರಿ 19ರಂದು ಹಿಂದೂ ಸಮಾವೇಶದಲ್ಲಿ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಮಹಾಶಿವರಾತ್ರಿ ದಿನದೊಳಗೆ (ಮಾರ್ಚ್‌ 8) ಬೀಗ ತೆರೆಯಬೇಕು, ಇಲ್ಲವಾದರೆ ಬಲವಂತವಾಗಿ ಬೀಗ ಒಡೆಯಲಾಗುವುದು ಎಚ್ಚರಿಕೆಯ ಗಂಟೆ ಬಾರಿಸಲಾಯಿತು. ಈ ನಿರ್ಧಾರ, ಅಲ್ಲಿಯವರೆಗೆ ಈ ವಿವಾದದ ಬಗ್ಗೆ ತಣ್ಣಗೆ ಕುಳಿತಿದ್ದ ಉತ್ತರ ಸರಕಾರ ಮತ್ತು ನ್ಯಾಯಾಲಯಕ್ಕೆ ಬಿಸಿ ಮುಟ್ಟಿಸಿತು.
ಎರಡು ದಿನದೊಳಗೆ ಬೀಗ ತೆರೆಸುವಂತೆ ಉತ್ತರ ಪ್ರದೇಶ ಸರಕಾರ ಫೈಜಾಬಾದ್‌ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತು. ಜ. 28ರಂದು ಈ ಅರ್ಜಿ ತಿರಸ್ಕೃತವಾಯಿತು. ಆದರೆ ಆ ಬಳಿಕ ಸರಕಾರದ ಮೇಲ್ಮನವಿಗೆ ನ್ಯಾಯಾಲಯ ಹಸಿರು ನಿಶಾನೆ ತೋರಿಸಿ, ಫೆ.1ರೊಳಗೆ ದೇಗುಲ ಬಾಗಿಲು ತೆರೆಯಲು ಆದೇಶಿಸಿತು. ಮಂದಿರದ ಬಾಗಿಲು ತೆರೆದ ಮತ್ತು ಭಕ್ತರು ರಾಮಲಲ್ಲಾನಿಗೆ ಪೂಜೆ ಸಲ್ಲಿಸುತ್ತಿರುವ ಸನ್ನಿವೇಶವನ್ನು ದೂರದರ್ಶನ ಸಮಗ್ರ ವರದಿ ಪ್ರಸಾರ ಮಾಡಿತು. ದೂರದರ್ಶನ ಆಗ ಸಂಪೂರ್ಣ ಕೇಂದ್ರ ಸರಕಾರದ ಮುಖವಾಣಿಯಂತಾಗಿತ್ತು, ಪ್ರಧಾನಮಂತ್ರಿ ಕಚೇರಿಯ ನೇರ ಹಿಡಿತದಲ್ಲಿತ್ತು.
………..
ರಾಜೀವ್‌ ಗಾಂಧಿ ನಾಟಕೀಯ ಬೆಂಬಲ
ರಾಜೀವ್‌ ಗಾಂಧಿ ಸರಕಾರ ರಾಮ ಮಂದಿರ ಚಳವಳಿಗೆ ನೀಡಿದ ಬೆಂಬಲ ನಾಟಕೀಯ ಎನ್ನಬಹುದು. ರಾಮ ಶಿಲೆಯನ್ನು (ಇಟ್ಟಿಗೆ) ದೇಶಾದ್ಯಂತದಿಂದ ಅಯೋಧ್ಯೆಗೆ ತರಲಾಗುವುದು ಮತ್ತು ನ. 10ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು 1989ರ ಸೆಪ್ಟೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ ಘೋಷಿಸಿತು. ಕೇಂದ್ರ ಮತ್ತು ಉ.ಪ್ರ.ದಲ್ಲಿದ್ದ ಕಾಂಗ್ರೆಸ್‌ ಸರಕಾರ ನ.8ರಂದು ಶಿಲಾನ್ಯಾಸ ಬೆಂಬಲ ವ್ಯಕ್ತಪಡಿಸಿತು. ವಿವಾದಿತ ಸ್ಥಳದ ಪಕ್ಕದಲ್ಲಿರುವ ಅವಿವಾದ ಸ್ಥಳದಲ್ಲಿ ಶಿಲಾನ್ಯಾಸ ನೆರವೇರಿಸಲು ಅಡ್ಡಿ ಇಲ್ಲ ಎಂದು ಸಾರಿತು. ಸ್ಮರಣೀಯ ಸಂಗತಿ ಎಂದರೆ, ಬಿಹಾರದ ಹರಿಜನ ಕಾಮೇಶ್ವರ ಗೋಪಾಲ್‌ ಅವರು ಮೊದಲ ಇಟ್ಟಿಗೆ ಇಟ್ಟು ಶಿಲಾನ್ಯಾಸ ನೇರವೇರಿಸಿದರು. ವಿಪರ್ಯಾಸವೆಂದರೆ, ಮರು ದಿನವೇ ಅದೇ ಸರಕಾರ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಅಪ್ಪಣೆ ಹೊರಡಿಸಿತು!
ಅಯೋಧ್ಯೆ ಚಳವಳಿಗೆ ಸಂಬಂಧಿಸಿ ರಾಜೀವ್‌ ಗಾಂಧಿಯವರ ‘ದ್ವಂದ್ವ ನೀತಿಯ’ ಬೆಂಬಲದ ಹಿಂದೆ ಅವರು 1989ರ ಲೋಕಸಭಾ ಚುನಾವಣೆಗೆ ಅಯೋಧ್ಯೆಯಿಂದ ಚುನಾವಣಾ ಪ್ರಚಾರ ಆರಂಭಿಸುವ ನಿರ್ಧಾರದ ಜತೆ ನಂಟು ಹೊಂದಿತ್ತು. ಏಕೆಂದರೆ ಅವರು ಜನರಿಗೆ ‘ರಾಮರಾಜ್ಯ’ ಭರವಸೆ ನೀಡಿದ್ದರು. ಕಾಂಗ್ರೆಸ್‌ನ ಈ ನಿರ್ಧಾರ ಅದರ ರಾಮ ಮಂದಿರದ ಕುರಿತಾದ ಅದರ ಹುಸಿ ಕಳವಳಿ ಮತ್ತು ಅವಕಾಶವಾದಿತನವನ್ನು ಬಟಾಬಯಲು ಮಾಡಿತು. ಅಯೋಧ್ಯೆ ವಿಷಯ ಅವರಿಗೆ, ಶಾಬಾನೊ ಪ್ರಕರಣದಲ್ಲಿ ಮುಸ್ಲಿಮರ ಒತ್ತಡಕ್ಕೆ ಶರಣಾದರು ಎಂಬ ಹಿಂದೂಗಳ ಟೀಕೆಯಿಂದ ಪಾರಾಗುವ, ಸಮತೋಲನಗೊಳಿಸಲು ಸಿಕ್ಕ ಅಸ್ತ್ರವಾಗಿತ್ತು.
ತಲಾಖ್‌ ಪಿಡುಗಿನಿಂದ ಮುಸ್ಲಿಂ ಮಹಿಳೆಯರನ್ನು ರಕ್ಷಿಸುವುದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದರ ವಿರುದ್ಧ ಸಂಪ್ರದಾಯವಾದಿ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದಾಗ, ಈ ತೀರ್ಪನ್ನು ನಿಷ್ಕ್ರಿಯಗೊಳಿಸುವ ಮುಸ್ಲಿಂ ಮಹಿಳಾ ಕಾಯಿದೆ-1986ನ್ನು ಕೇಂದ್ರ ಸರಕಾರ ಜಾರಿಗೆ ತಂದಿತು. ಇದು ಮುಸ್ಲಿಂ ವೋಟ್‌ ಬ್ಯಾಂಕನ್ನು ಭದ್ರಗೊಳಿಸಿಕೊಳ್ಳುವ ಕಾಂಗ್ರೆಸ್‌ನ ಸ್ಪಷ್ಟ ಹುನ್ನಾರವಾಗಿತ್ತು. ಇದು ಹಿಂದೂಗಳನ್ನು ಕೆರಳಿಸಿತು. ಅಷ್ಟೇ ಅಲ್ಲ, ಸುಧಾರಣೆವಾದಿ ಮುಸ್ಲಿಂರಲ್ಲೂ ಅಸಮಾಧಾನ ಮೂಡಿಸಿತು. ಅಯೋಧ್ಯೆ ಚಳವಳಿ ರಾಷ್ಟ್ರವ್ಯಾಪಿಯಾಗಿ ಹರಡಲು ಇದು ಪ್ರೇರೇಪಿಸಿತು. ಇದೇ ಹೊತ್ತಿಗೆ, ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಸರಕಾರದ ಮೇಲೆ ಒತ್ತಡ ಹೇರಿದರೆ ಯಾವುದೇ ಕೆಲಸ ಮಾಡಿಸಿಕೊಳ್ಳಬಹುದು ಎಂಬುದು ಶಾಬಾನೊ ಪ್ರಕರಣದಲ್ಲಿ ಖಚಿತವಾಗಿದ್ದರಿಂದ ಮುಸ್ಲಿಂ ಸಂಘಟನೆಗಳು, ವಿವಾದಿತ ಕಟ್ಟಡದ ಬೀಗ ತೆಗೆದಿರುವುದರ ವಿರುದ್ಧ ದನಿ ಎತ್ತಿದವು. 1986ರವರೆಗೆ ಯಾವುದೇ ಮುಸ್ಲಿಂ ಸಂಘಟನೆ ಬಾಬರಿ ಮಸೀದಿಗಾಗಿ ರಾಷ್ಟ್ರ ಮಟ್ಟದಲ್ಲಿ ಸಂಘಟಿತವಾಗಿರಲಿಲ್ಲ. ಆದರೆ ಶಾಬಾನೊ ಪ್ರಕರಣದಿಂದ ಉತ್ತೇಜಿತರಾಗಿ ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂತು.

……………
ಅಯೋಧ್ಯೆ ಚಳವಳಿಯಲ್ಲಿ ಬಿಜೆಪಿ ಭಾಗಿಯಾಗಿದ್ದೇಕೆ?
ರಾಮಜನ್ಮಭೂಮಿ ಚಳವಳಿಗೆ ಬಿಜೆಪಿಗಿಂತ ಮೊದಲು ಬೆಂಬಲ ಘೋಷಿಸಿದ್ದು ಕಾಂಗ್ರೆಸ್‌. ಹಾಗಾಗಿ, ಅಯೋಧ್ಯೆಯಲ್ಲಿ ರಾಮ ಮಂದಿರದ ಆಶ್ವಾಸನೆ ನೀಡಿದ ಶ್ರೇಯಸ್ಸು ಯಾರಿಗೆ ಸಲ್ಲಬೇಕೆಂಬುದು ನಮಗೆ ಪ್ರಶ್ನೆಯೇ ಅಲ್ಲ. ಈ ಭರವಸೆಯನ್ನು ಕಾಂಗ್ರೆಸ್‌ ಈಡೇರಿಸಿದ್ದೇ ಆದರೆ ಬಿಜೆಪಿ ಆ ಪಕ್ಷಕ್ಕೆ ಆಭಾರಿಯಾಗಿರುತ್ತಿತ್ತು. ದುರದೃಷ್ಟದ ಸಂಗತಿ ಎಂದರೆ, ರಾಜೀವ್‌ ಗಾಂಧಿ ಮತ್ತು ಆ ಬಳಿಕ ಅವರ ಪಕ್ಷ ಈ ವಿಚಾರದಲ್ಲಿ ಬೇರೆಯೇ ದಾರಿ ಹಿಡಿಯಿತು. ಬಹುಸಂಖ್ಯಾತ ಹಿಂದೂಗಳ ನ್ಯಾಯಯುತ ಬೇಡಿಕೆಗೆ ಕೆಲವು ಮುಸ್ಲಿಂ ಸಂಘಟನೆಗಳು ನಕಾರಾತ್ಮಕವಾಗಿ ಸ್ಪಂದಿಸಿದ್ದು ನಮ್ಮನ್ನು ಎಚ್ಚರಗೊಳಿಸಿತು. ಆ ಸಂದರ್ಭದಲ್ಲಿ ನನಗಾದ ಆಶ್ಚರ್ಯಕರ ಮತ್ತು ಆಘಾತಕಾರಿ ಸಂಗತಿ ಎಂದರೆ, ಭಾರತೀಯ ಮುಸ್ಲಿಮರು ಬಾಬರಿ ಮಸೀದಿಯನ್ನು ಜೀವನ್ಮರಣದ ಪ್ರಶ್ನೆ ಎಂಬಂತೆ ವರ್ತಿಸಿದ್ದು. ಮೆಕ್ಕಾ ತಮಗೆ ಹೇಗೆ ಪವಿತ್ರ ಕ್ಷೇತ್ರವೋ ಹಾಗೆಯೇ ಅಯೋಧ್ಯೆ ಹಿಂದೂಗಳಿಗೆ ಎಂಬ ಭಾವನೆ ಅವರಲ್ಲಿ ಮೂಡದೇ ಹೋಗಿದ್ದು ದುಃಖಕರ. ಮುಸ್ಲಿಮರು ಮೆಕ್ಕಾದಲ್ಲಿ ಇಸ್ಲಾಂ ಪ್ರಭಾವಳಿಯನ್ನು, ವ್ಯಾಟಿಕನ್‌ನಲ್ಲಿ ಕ್ರಿಶ್ಚಿಯನ್ನರು ಕ್ರಿಶ್ಚಿಯನ್‌ ಪ್ರಭಾವಳಿಯನ್ನು ಗ್ರಹಿಸುವುದಾದರೆ ಹಿಂದೂಗಳು ರಾಮಜನ್ಮಭೂಮಿಯಲ್ಲಿ ಹಿಂದೂ ಪ್ರಭಾವಳಿಯನ್ನು ಅನುಭವಿಸಬಾರದೇಕೆ?
ಸಂಸತ್‌ನಲ್ಲಿ ಸಂಪೂರ್ಣ ಬಹುಮತ ಇದ್ದಾಗಲೂ ಕಾಂಗ್ರೆಸ್‌ ಪಕ್ಷ ಅಯೋಧ್ಯೆ ವಿವಾದವನ್ನು ಸಕಾರಾತ್ಮಕವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಸತ್ಯಾಂಶವನ್ನು ಮುಸ್ಲಿಂ ಸಮುದಾಯದ ಎದುರು ಮಂಡಿಸುವ ಧೈರ್ಯ ತೋರಲಿಲ್ಲ. 1989ರ ಫೆ.1ರಂದು ಅಯೋಧ್ಯೆ ಚಳವಳಿ ಮತ್ತಷ್ಟು ಕಾವು ಪಡೆದುಕೊಂಡಿತು. ಕುಂಭಮೇಳದಲ್ಲಿ ಪ್ರಯಾಗದಲ್ಲಿ ಸಮಾವೇಶಗೊಂಡಿದ್ದ ದೇಶಾದ್ಯಂತದ ಸಾವಿರಾರು ಸಂತರು ಮತ್ತು ಸಾಧುಗಳು, ನ. 10ರಂದು ರಾಮಮಂದಿರಕ್ಕೆ ಅಡಿಗಲ್ಲು ಹಾಕುವುದಾಗಿ ಘೋಷಿಸಿದರು. ದೇಶದ ಲಕ್ಷ-ಲಕ್ಷ ಹಳ್ಳಿಗಳಿಂದ ಮಂದಿರಕ್ಕಾಗಿ ಇಟ್ಟಿಗೆಗಳನ್ನು ಸಂಗ್ರಹಿಸಿ ಅವುಗಳನ್ನು ಕರಸೇವಕರ ಮೂಲಕ ಅಯೋಧ್ಯೆಗೆ ತರಲು ನಿರ್ಧರಿಸಲಾಯಿತು.
ಇದು ದೇಶಾದ್ಯಂತದ ಹಿಂದೂಗಳಲ್ಲಿ ವಿದ್ಯುತ್‌ ಸಂಚಾರ ಮೂಡಿಸಿತು. ಮಂದಿರ ಆಂದೋಲನಕ್ಕೆ ಜನಸಾಮಾನ್ಯರಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಆದರೆ ಯಾವುದೇ ರಾಜಕೀಯ ಪಕ್ಷಗಳು ಬಹಿರಂಗವಾಗಿ ರಾಮ ಮಂದಿರ ಮಾತನಾಡಲಿಲ್ಲ. ಏಕೆಂದರೆ, ಅಸಂಘಟಿತ ಹಿಂದೂ ಮತಗಳ ಎದುರು ಸಂಘಟಿತ ಮುಸ್ಲಿಂ ಮತಗಳು ರಾಜಕೀಯ ಪಕ್ಷಗಳ ಪಾಲಿಗೆ ಗೆಲುವಿನ ಖಚಿತ ಬಂಡವಾಳವಾಗಿತ್ತು. ‘ಜಾತ್ಯತೀತ’ದ ಹೆಸರಿನಲ್ಲಿ ಅವು ತಮ್ಮ ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದವು.
ಈ ಎಲ್ಲ ಬೆಳವಣಿಗೆಗಳಿಂದಾಗಿ ಅಯೋಧ್ಯೆ ವಿಷಯ ಕೇವಲ ರಾಮ ಮಂದಿರ ನಿರ್ಮಿಸುವುದಕ್ಕೆ ಮಾತ್ರ ಸೀಮಿತವಾಗುಳಿಯಲಿಲ್ಲ. ಜಾತ್ಯತೀತ ಮತ್ತು ಹುಸಿ ಜಾತ್ಯತೀತ ನಡುವಿನ ಹೋರಾಟದ ಸಂಕೇತವಾಗಿ ರೂಪುಗೊಂಡಿತು. ಇದೇ ಹೊತ್ತಿಗೆ, ದೇಶದ ಏಕತಗೆ ಪೂರಕವಾದ ‘ರಾಷ್ಟ್ರತ್ವ ಮತ್ತು ರಾಷ್ಟ್ರೀಯ ಛಾಪು (ನ್ಯಾಷನಲ್‌ ಐಡೆಂಟಿಟಿ):ಸಾಂಸ್ಕೃತಿಕ ರಾಷ್ಟ್ರತ್ವ’ ಹಾಗೂ ದೇಶ ವಿಭಜನೆ ಕಲ್ಪನೆಯ ಹಿಂದೂ ವಿರೋಧಿ ರಾಷ್ಟ್ರತ್ವದ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿತು. ಈ ಕಾಲಘಟ್ಟದಲ್ಲಿ ಬಿಜೆಪಿ ರಾಮ ಮಂದಿರ ಆಂದೋಲನಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಮೊದಲ ಬಾರಿ ಘೋಷಿಸಿತು. ಅಲ್ಲಿಯವರೆಗೆ ಪಕ್ಷದ ನಾಯಕರಾದ ಮಾತಾ ವಿಜಯರಾಜೆ ಸಿಂಧಿಯಾ ಮತ್ತು ವಿನಯ್‌ ಕಟಿಯಾರ್‌ ಅವರು ವೈಯಕ್ತಿಕ ನೆಲೆಯಲ್ಲಿ ಚಳವಳಿಯಲ್ಲಿ ಭಾಗವಹಿಸಿದ್ದರೇ ಹೊರತು ಬಿಜೆಪಿ ನೇರವಾಗಿ ಭಾಗವಹಿಸಿರಲಿಲ್ಲ. 1989ರ ಜೂನ್‌ನಲ್ಲಿ ಹಿಮಾಚಲ ಪ್ರದೇಶದ ಪಾಲಂಪುರ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಯೋಧ್ಯೆ ಚಳವಳಿಯಲ್ಲಿ ಭಾಗವಹಿಸುವ ಮತ್ತು ಆ ಮೂಲಕ ನೈಜ ಜಾತ್ಯತೀತ ಮತ್ತು ಸಾಂಸ್ಕೃತಿಕ ರಾಷ್ಟ್ರತ್ವಕ್ಕಾಗಿ ಹೋರಾಡುವ ನಿರ್ಣಯವನ್ನು ವಿಧ್ಯುಕ್ತವಾಗಿ ಕೈಗೊಳ್ಳಲಾಯಿತು.
……………….

ದೇಶಾದ್ಯಂತ ಮಾರ್ದನಿಸಿದ ಜೈ ಶ್ರೀರಾಮ್‌
ಕರ ಸೇವೆಯ ಕೂಗು ದೇಶಾದ್ಯಂತ ಮಾರ್ದನಿಸಿತು. ವಿಶ್ವ ಹಿಂದೂ ಪರಿಷತ್‌ ಹಳ್ಳಿ ಹಳ್ಳಿಗಳಲ್ಲಿ ಕರ ಸೇವಾ ಸಮಿತಿಯನ್ನು ರಚಿಸಿತ್ತು. ನಗರ, ಗ್ರಾಮ, ಕೊಳಚೆ ಪ್ರದೇಶ ಎಂಬ ಎಲ್ಲೆ ಇಲ್ಲದೆ ದೇಶದ ಮೂಲೆಮೂಲೆಗಳಲ್ಲಿ ಕರ ಸೇವೆಯ ಮೂಲಕ ವ್ಯಾಪಿಸಿತ್ತು. ಕರ ಸೇವೆಗೆ ನಮ್ಮ ಪಕ್ಷ ಅದಾಗಲೇ ಬೆಂಬಲ ಘೋಷಿಸಿತ್ತು. ನಾನಾಗ ಬಿಜೆಪಿ ಅಧ್ಷಕ್ಷನಾಗಿದ್ದೆ. ಈ ಆಂದೋಲನಕ್ಕೆ ಇನ್ನೂ ಹೆಚ್ಚಿನದೇನು ಮಾಡಬಹುದೆಂಬ ಬಗ್ಗೆ ಚಿಂತಿಸುತ್ತಿದ್ದೆ. ಆಗ ಹೊಳೆದಿದ್ದೇ ರಥ ಯಾತ್ರೆ.
1989ರ ಸೆ. 25ರಂದು ಬೆಳಗ್ಗೆ ಸೋಮನಾಥ ಮಂದಿರದ ಜ್ಯೋತಿರ್ಲಿಂಗಕ್ಕೆ ಪೂಜೆ ಸಲ್ಲಿಸಿದೆ. ಪ್ರಮೋದ್‌ ಮಹಾಜನ್‌, ಗುಜರಾತ್‌ನ ಯುವ ನಾಯಕ ನರೇಂದ್ರ ಮೋದಿ ಹಾಜರಿದ್ದರು. ಪಕ್ಷದ ಉಪಾಧ್ಯಕ್ಷರಾಗಿದ್ದ ಹಿರಿಯ ನಾಯಕರಾದ ರಾಜಮಾತೆ ವಿಜಯರಾಜೆ ಸಿಂಧಿಯಾ ಮತ್ತು ಸಿಕಂದರ್‌ ಭಕ್ತ್‌ ರಥಯಾತ್ರೆಗೆ ಹಸಿರು ನಿಶಾನೆ ತೋರಿಸಿದರು. ಮಂದಿರದ ಹೊರಗಿದ್ದ ಸರ್ದಾರ್‌ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆವು.
ನಮ್ಮನ್ನು ಅಭಿನಂದಿಸಲು ಮತ್ತು ಆಶೀರ್ವದಿಸಲು ಸಾವಿರಾರು ಜನ ಸೋಮನಾಥದಲ್ಲಿ ಜಮಾಯಿಸಿದ್ದರು. ಅಲಂಕರಿಸಿದ್ದ ರಥವನ್ನು ಏರಿದೆವು. ಜನಸಾಗರದ ನಡುವಿನಿಂದ ಜೈ ಶ್ರೀರಾಮ್‌, ಸೌಗಂಧ್‌ ರಾಮ್‌ ಕಿ ಖಾತೆ ಹೈಂ, ಮಂದಿರ್‌ ವಂಹೀ ಬನಾಯೇಂಗೆ ಎಂಬ ಘೋಷಣೆ ಮುಗಿಲು ಮುಟ್ಟಿತು. ರಥ ಯಾತ್ರೆಗೆ ಚಾಲನೆ ದೊರೆಯಿತು. ಆ ದಿನಗಳಲ್ಲಿ ಈ ಘೋಷಣೆಯ ಜತೆಗೆ, ಹಿಂದೂಸ್ಥಾನದ ಗಾನ ಕೋಗಿಲೆ ಲತಾ ಮಂಗೇಷ್ಕರ್‌ ಹಾಡಿದ ಗೀತೆಯೊಂದು ದೇಶಾದ್ಯಂತ ಮಾರ್ದನಿಸುತ್ತಿತ್ತು.
ಅ.24ರಂದು ಯಾತ್ರೆ ಉತ್ತರ ಪ್ರದೇಶದ ಡಿಯೊರಿಯಾ ಪ್ರವೇಶಿಸಬೇಕಿತ್ತು. ಆದರೆ ಬಿಹಾರದ ಸಮಷ್ಟಿಪುರದಲ್ಲಿ ಅಕ್ಟೋಬರ್‌ 23ರಂದು ನನ್ನನ್ನು ತಡೆಯಲಾಯಿತು. ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಬಿಹಾರದ ಜನತಾ ದಳ ಸರಕಾರ ನನ್ನನ್ನು ಬಂಧಿಸಿತು. ದೇಶಾದ್ಯಂತ ಪ್ರತಿಭಟನೆಯ ಅಲೆ ಎದ್ದಿತು. ನನ್ನ ರಥ ಯಾತ್ರೆ ಈ ರೂಪದಲ್ಲಿ ಮುಕ್ತಾಯವಾಯಿತು. ಆದರೆ, ಇದು ನನ್ನ ರಾಜಕೀಯ ಜೀವನದಲ್ಲಿ ಮಹತ್ವಪೂರ್ಣ ಘಟನೆಯಾಗಿ ದಾಖಲಾಯಿತು.
………..

ಉಲ್ಟಾ ಹೊಡೆದ ವಿ.ಪಿ.ಸಿಂಗ್‌, ಉರುಳಿ ಬಿದ್ದ ಕೇಂದ್ರ ಸರಕಾರ
ಅಯೋಧ್ಯೆ ವಿವಾದ ಪರಿಹರಿಸಲು ಅಂದಿನ ಪ್ರಧಾನಿ ವಿ.ಪಿ.ಸಿಂಗ್‌ ಮತ್ತು ರಾಷ್ಟ್ರೀಯ ರಂಗ ಸರಕಾರದಲ್ಲಿನ ಅವರ ಸಹೋದ್ಯೋಗಿಗಳು ಹಲವಾರು ಕಸರತ್ತು ನಡೆಸಿದ್ದರು. 1990ರ ಆರಂಭದ ದಿನಗಳಲ್ಲಿ ವಿ.ಪಿ.ಸಿಂಗ್‌ ಸರಕಾರ ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿ ಪರಿಹಾರ ಸೂತ್ರವೊಂದನ್ನು ಹೆಣೆದಿತ್ತು. ವಿವಾದಿತ ಸ್ಥಳವನ್ನು ನೂತನ ಹಿಂದೂ ಟ್ರಸ್ಟ್‌ಗೆ ಒಪ್ಪಿಸುವುದು, ವಿವಾದಿತ ಕಟ್ಟಡಕ್ಕೆ ಯಾವುದೇ ಧಕ್ಕೆ ಮಾಡದಂತೆ ಅದಕ್ಕೆ ಷರತ್ತು ವಿಧಿಸುವುದು ಮತ್ತು ನೂತನ ರಾಮ ಮಂದಿರ ಮತ್ತು ವಿವಾದಿತ ಕಟ್ಟಡದ ಮಧ್ಯೆ ಗೋಡೆ ನಿರ್ಮಿಸುವುದು- ಇವು ಪರಿಹಾರ ಸೂತ್ರದ ಸಾರ.
ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕೃಷ್ಣಕಾಂತ್‌ ವಿ.ಪಿ.ಸಿಂಗ್‌ ರಾಯಭಾರಿಯಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಕಂಚಿ ಕಾಮಕೋಟಿ ಮಠದ ಶ್ರೀ ಸ್ವಾಮಿ ಜಯೇಂದ್ರ ಸರಸ್ವತಿ ಅವರನ್ನು ನೂತನ ಟ್ರಸ್ಟ್‌ ನ ಮುಖ್ಯಸ್ಥ ಸ್ಥಾನಕ್ಕೆ ಕೃಷ್ಣಕಾಂತ್‌ ಸೂಚಿಸಿದರು. ಇದಕ್ಕೆ ಪೂರಕವಾಗಿ ಅವರು ತಮಿಳುನಾಡಿನ ಕಂಚಿಪುರದಲ್ಲಿ ಜಯೇಂದ್ರ ಸರಸ್ವತಿ ಮತ್ತು ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ನಾಯಕ ಅಲಿ ಮಿಯಾನ್‌ ನಡುವೆ ಮಾತುಕತೆ ಏರ್ಪಡಿಸಿದರು. ಬಳಿಕ ಉಡುಪಿಗೆ ಧಾವಿಸಿದ ಕೃಷ್ಣಕಾಂತ್‌, ಪೇಜಾವರ ಮಠಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್‌ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಜತೆ ಪರಿಹಾರ ಸೂತ್ರದ ಬಗ್ಗೆ ಮಾತುಕತೆ ನಡೆಸಿದರು. ಇತರ ಹಿಂದೂ ಧರ್ಮಗುರುಗಳನ್ನು ಈ ನಿಟ್ಟಿನಲ್ಲಿ ಸಂಪರ್ಕಿಸಿ ಅವರ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿಯನ್ನು ಪೇಜಾವರ ಮಠಾಧೀಶರಿಗೆ ವಹಿಸಲಾಯಿತು. ಕೆಲವು ದಿನಗಳ ಬಳಿಕ ಪ್ರಧಾನಿ ಸಿಂಗ್‌ ಜತೆ ಸಮಾಲೋಚನೆಗಾಗಿ ಪೇಜಾವರ ಶ್ರೀಗಳನ್ನು ವಿಶೇಷ ವಿಮಾನದಲ್ಲಿ ಉಡುಪಿಯಿಂದ ದಿಲ್ಲಿಗೆ ಕರೆದೊಯ್ಯಲಾಯಿತು.
ವಿವಾದ ಪರಿಹಾರಕ್ಕಾಗಿ ವಿ.ಪಿ.ಸಿಂಗ್‌ ಅವರು ನಾನಾ ಪ್ರಯತ್ನ ಮಾಡಿದ್ದೇನೋ ನಿಜ. ಆದರೆ ಅವರ ನಿಲುವಿನಲ್ಲಿ ಸ್ಪಷ್ಟತೆ ಮತ್ತು ಬದ್ಧತೆ ಇರಲಿಲ್ಲ. ತಾವು ನಿರ್ಧರಿಸಿದ್ದ ವಿಷಯಗಳನ್ನು ತಮ್ಮ ಸಹೋದ್ಯೋಗಿಗಳಿಗೇ ಒಪ್ಪಿಸಲಾಗದೆ ಹೆಣಗಾಡುತ್ತಿದ್ದರು. ಕಂಚಿ ಮತ್ತು ಉಡುಪಿ ಮಠಾಧೀಶರ ಮಧ್ಯಸ್ಥಿಕೆ ವಿಷಯದಲ್ಲೂ ಹೀಗೇ ಆಯಿತು. ವಿವಾದಿತ ಜಾಗ ವಶಕ್ಕೆ ತೆಗೆದುಕೊಳ್ಳುವ ಅಧ್ಯಾದೇಶ ಹೊರಡಿಸುವುದಾಗಿ ಘೋಷಿಸಿದ ಸಿಂಗ್‌ ಕೇವಲ 48 ಗಂಟೆಗಳೊಳಗೆ ಉಲ್ಟಾ ಹೊಡೆದರು!
ಪ್ರಧಾನಿಯವರ ಸ್ವಂತ ಪಕ್ಷದ ಬಿಹಾರ ಮುಖ್ಯಮಂತ್ರಿ ನನ್ನ ರಥಯಾತ್ರೆಗೆ ತಡೆ ಹಾಕಿ ನನ್ನ ಬಂಧನಕ್ಕೆ ಆದೇಶಿಸುವ ಮೂಲಕ, ಕೇಂದ್ರ ಸರಕಾರ ತನ್ನ ದುರ್ವಿಧಿಗೆ ತಾನೇ ಮುನ್ನುಡಿ ಬರೆಯಿತು. ನನ್ನ ಬಂಧನ ಆಗುತ್ತಿದ್ದಂತೆ ಬಿಜೆಪಿ ಬೆಂಬಲ ವಾಪಸ್‌ ತೆಗೆದುಕೊಂಡಿತು. ಮುಲಾಯಂ ಬೆದರಿಕೆಗೆ ಸೊಪ್ಪು ಹಾಕದ ಸಹಸ್ರಾರು ಕರ ಸೇವಕರು ದೇಶದ ನಾನಾ ಭಾಗಗಳಿಂದ ಅಯೋಧ್ಯೆಯತ್ತ ದೌಡಾಯಿಸತೊಡಗಿದರು. ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಅಶೋಕ್‌ ಸಿಂಘಲ್‌ ಅ.28ರಂದು ಅಯೋಧ್ಯೆ ತಲುಪಿದರು. ಪ್ರವಾಹದಂತೆ ನುಗ್ಗಿ ಬಂದ ಸಾವಿರಾರು ಕರ ಸೇವಕರ ಜಯಘೋಷದ ನಡುವೆ ನಿಗದಿತ ದಿನವೇ ಅಲ್ಲಿ ಕರ ಸೇವೆ ನಡೆಯಿತು. ಇದರಿಂದ ಉತ್ತರ ಪ್ರದೇಶ ಸರಕಾರ ಮುಖಭಂಗ ಅನುಭವಿಸಬೇಕಾಯಿತು. ಕರ ಸೇವಕರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮತ್ತು ಅರೆ ಸೇನಾ ಪಡೆಗೆ ಆದೇಶಿಸಲಾಯಿತು. ನ.2ರಂದು ಮಾತ್ರ ಮಹಾ ರಕ್ತಪಾತವೇ ನಡೆಯಿತು. ಆ ದಿನ ಮಂದಿರ ಚಳವಳಿ ಇತಿಹಾಸದ ಅತ್ಯಂತ ಕರಾಳ ದಿನ. ರಾಮ ಜನ್ಮಭೂಮಿಯತ್ತ ಧಾವಿಸಿದ ನೂರಾರು ನಿರಾಯುಧ ಕರ ಸೇವಕರ ಮೇಲೆ ಪೊಲೀಸರು ಮನಬಂದಂತೆ ಗುಂಡು ಹಾರಿಸಿದರು. 50ಕ್ಕೂ ಅಧಿಕ ಕರ ಸೇವಕರು ಬಲಿಯಾಗಿ, ನೂರಾರು ಮಂದಿ ಗಾಯಗೊಂಡರು. ಈ ಘಟನೆ ದೇಶದ ಹಿಂದೂಗಳನ್ನು ಕೆರಳಿಸಿತು. 1992ರ ಡಿಸೆಂಬರ್‌ 6ರಂದು ವಿವಾದಿತ ಕಟ್ಟಡದ ಗೋಪುರದ ಮೇಲೆ ಕೆಲವರು ಏರಿ ಕೇಸರಿ ಧ್ವಜ ಹಾರಿಸುವ ಮೂಲಕ ಹಿಂದಿನ ಘಟನೆಯ ಸೇಡು ತೀರಿಸಿಕೊಂಡರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top