ಮನೆಯಲ್ಲೇ ರಕ್ಷಾ ಬಂಧನ ಸೌಭಾಗ್ಯ

ಕೊರೊನಾದಿಂದಾಗಿ ಊರಲ್ಲೇ ಇದ್ದಾರೆ ಸೋದರರು | ಅಂಚೆಯಣ್ಣನಿಗೆ ಕೆಲಸ ಕಡಿಮೆ.

ಬೆಳಗಾವಿ: ರಕ್ಷಾ ಬಂಧನ ಮಾರಾಟ ನಡೆದರೂ ಯಾರೂ ಪಾರ್ಸೆಲ್‌ ರವಾನೆ ಮಾಡುತ್ತಿಲ್ಲ. ಎಲ್ಲರೂ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಸಲ ಕೊರಿಯರ್‌, ಅಂಚೆಯಣ್ಣನಿಗೆ ಕೆಲಸ ಕಡಿಮೆ!!
ಉದ್ಯೋಗದ ಕಾರಣ ಎಷ್ಟೋ ಸಹೋದರ, ಸಹೋದರಿಯರಿಗೆ ಹಬ್ಬಕ್ಕೆ ಊರಿಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಅಂಚೆಯೇ ಮಾಧ್ಯಮವಾಗಿತ್ತು. ಕೆಲವರಿಗೆ ಹಬ್ಬ ಕಳೆದು ವಾರದ ನಂತರ ರಾಖಿ ತಲುಪುತ್ತಿತ್ತು. ಅದರೆ ಈ ಸಲ ಕೊರೊನಾ ಕಾರಣಕ್ಕೆ ಹೆಚ್ಚಿನ ಅಣ್ಣ- ತಂಗಿ, ಅಕ್ಕ- ತಮ್ಮ ಒಟ್ಟಾಗಿ ಮನೆಯಲ್ಲೇ ಆಚರಿಸುವ ಸೌಭಾಗ್ಯ ಒದಗಿಬಂದಿದೆ. ಮಹಾನಗರ, ವಿದೇಶದಿಂದ ಮರಳಿದ ಎಷ್ಟೋ ಜನರು 8-10 ವರ್ಷಗಳ ಬಳಿಕ ಸಹೋದರಿಯರ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಕ್ಕ, ತಂಗಿಯರಿಗೂ ಬಹಳ ವರ್ಷಗಳ ಬಳಿಕ ಸಹೋದರರಿಗೆ ಆರತಿ ಬೆಳಗಿ ನಿಜವಾದ ಹಬ್ಬ ಆಚರಿಸುವ ಅವಕಾಶ ಒದಗಿ ಬಂದಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಸಹೋದರಿಯರು ಸಹೋದರರಿಗೆ ಆರತಿ ಬೆಳಗಿ ರಾಖಿ ಕಟ್ಟಿ ರಕ್ಷೆ ಬೇಡುತ್ತಾರೆ. ಅದಕ್ಕೆ ಪ್ರತಿಯಾಗಿ ಸಹೋದರರು ಅಕ್ಕ, ತಂಗಿಗೆ ಉಡುಗೊರೆ ಕೊಡುವುದು ಸಂಪ್ರದಾಯ. ಈ ಹಬ್ಬ ಬಾಂಧವ್ಯ ಬೆಸೆಯುವುದರಿಂದ ಉಳಿದೆಲ್ಲ ಹಬ್ಬಗಳಿಗಿಂತ ಬಹಳ ವಿಶೇಷ ಮತ್ತು ಭಾವನಾತ್ಮಕವಾಗಿತ್ತು.
ಬದಲಾದ ಜೀವನ ಶೈಲಿಯಿಂದ ಎಷ್ಟೋ ಕುಟುಂಬಗಳಲ್ಲಿ ರಕ್ಷಾ ಬಂಧನದ ಮೂಲ ಆಚರಣೆಯೇ ಮರೆಯಾಗಿದ್ದವು. ಬಣ್ಣದ ದಾರದಲ್ಲಿ ಹಬ್ಬ ಮುಗಿಯುತ್ತಿತ್ತು. ಕೊರೊನಾದಿಂದಾಗಿ ಭಾರತೀಯ ಸಂಸ್ಕೃತಿಗೆ ಮರು ಜೀವ ಬಂದಂತಾಗಿದೆ.

ಅಣ್ಣ-ತಂಗಿಯರ ಸಂಭ್ರಮ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಚಿಕ್ಕೋಡಿಯ ದಿಗ್ವಿಜಯ ಅವರಿಗೆ ಎಂಟು ವರ್ಷಗಳಿಂದ ರಕ್ಷಾ ಬಂಧನಕ್ಕೆ ಊರಿಗೆ ಬರಲು ಆಗಿರಲಿಲ್ಲ. ಈ ವರ್ಷ ಮನೆಯಲ್ಲೇ ತಂಗಿಯಿಂದ ರಾಖಿ ಕಟ್ಟಿಸಿಕೊಳ್ಳುತ್ತಿರುವುದು ಖುಷಿ ಕೊಡುತ್ತಿದೆ ಎನ್ನುತ್ತಾರೆ ಅವರು. ‘‘ಕೆಲಸದ ಒತ್ತಡದಿಂದ ಕಳೆದ 10 ವರ್ಷಗಳಲ್ಲಿ 7-8 ಬಾರಿ ಪೋಸ್ಟ್‌ನಲ್ಲಿ ಬಂದ ರಾಖಿಯನ್ನೇ ಕಟ್ಟಿಕೊಂಡಿದ್ದೇನೆ. ಈ ಬಾರಿ ಮನೆಯಲ್ಲಿ ತಂಗಿ ಕಟ್ಟುತ್ತಿದ್ದಾಳೆ’’ ಎನ್ನುತ್ತಾರೆ ಲಕ್ಷ್ಮಣ ಜಾಯಗೊಂಡೆ. ‘‘ಪ್ರತಿ ವರ್ಷ ತಮ್ಮನಿಗೆ ರಾಖಿ ಕಟ್ಟಿದರೆ, ಅಣ್ಣನಿಗೆ ಅಂಚೆಯಲ್ಲಿ ಕಳುಹಿಸಬೇಕಿತ್ತು. ಅಣ್ಣನಿಗೆ ರಾಖಿ ಕಟ್ಟಿದರೆ ತಮ್ಮನಿಗೆ ಪೋಸ್ಟ್‌ ಮಾಡಬೇಕಿತ್ತು. ಈ ವರ್ಷ ಎಲ್ಲರಿಗೂ ರಾಖಿ ಕಟ್ಟುವ ಭಾಗ್ಯ ಸಿಕ್ಕಿದೆ’’ ಎಂದು ಪಿ. ಸುಶ್ಮಿತಾ ಸಂತಸ ಹಂಚಿಕೊಳ್ಳುತ್ತಾರೆ.

ಅಂಚೆ ಇಲಾಖೆ ಸ್ಪೆಷಲ್‌ ಡ್ರೈವ್‌

ಅಂಚೆಯಲ್ಲಿ ಬರುವ ಅಥವಾ ಅಂಚೆ ಇಲಾಖೆ ವೆಬ್‌ಸೈಟ್‌ನಲ್ಲಿ ಆರ್ಡರ್‌ ಮಾಡಿರುವ ರಾಖಿಗಳನ್ನು ಜನರ ವಿಳಾಸಕ್ಕೆ ತಲುಪಿಸಲು ಅಂಚೆ ಇಲಾಖೆ ಭಾನುವಾರ ಎಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಇಲಾಖೆ ವೆಬ್‌ ಸೈಟ್‌ ಮೂಲಕ ಆನ್‌ ಲೈನ್‌ನಲ್ಲಿಯೇ ರಾಖಿ ಮಾರಾಟ ಮಾಡುವ ವ್ಯವಸ್ಥೆಯನ್ನು ಅಂಚೆ ಇಲಾಖೆ ಮಾಡಿದೆ.

ಸಾಮಾನ್ಯ ವರ್ಷಗಳಲ್ಲಿ ರಕ್ಷಾ ಬಂಧನ ವೇಳೆ ಅಂಚೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿದ್ದವು. ಯಾವ ಕಾರಣವೊ ಗೊತ್ತಿಲ್ಲ. ಕವರ್‌ಗಳಲ್ಲಿ ಬರುತ್ತಿದ್ದ ರಾಖಿ ಸಂಖ್ಯೆ ಈ ಸಲ ಕಡಿಮೆ ಇದೆ.
– ಧರ್ಮೇಂದ್ರ ಜಾಯಿ ಅಂಚೆ ಚೀಟಿ ಸಂಗ್ರಹ ವಿಭಾಗದ ಮುಖ್ಯಸ್ಥ, ಬೆಳಗಾವಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top