ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ. 
‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು ಮರೆಮಾಚಿ ಪರಿಸ್ಥಿತಿಗೆ ಅನುಗುಣವಾಗಿ ಪೋಷಾಕು ತೊಟ್ಟು ಮುಗುಳ್ನಗೆ ಬೀರುವ ಚಮತ್ಕಾರವನ್ನು ರಾಜಕಾರಣದಲ್ಲಿ ಮಾತ್ರ ಕಣ್ತುಂಬಿಸಿಕೊಳ್ಳಲು ಸಾಧ್ಯ. ಮೈತ್ರಿ ರಾಜಕಾರಣದ ಹಲವು ಮಜಲನ್ನು ರಾಜ್ಯ ರಾಜಕಾರಣ ಕಂಡಿದೆ. ಒಂದಲ್ಲ. ಎರಡಲ್ಲ. ಮೂರು ಬಾರಿ ಸಮ್ಮಿಶ್ರ ಸರಕಾರವನ್ನು ರಾಜ್ಯದ ಜನರು ಕಂಡಿದ್ದಾರೆ. ಜತೆಗೆ ಅದರ ಫಲವನ್ನೂ ಉಂಡಿದ್ದಾರೆ!

ರಾಜ್ಯಸಭೆಗೆ ಹೊಂದಾಣಿಕೆ: ಇದೇ ತಿಂಗಳು ನಡೆಯಲಿರುವ ರಾಜ್ಯಸಭೆ ಚುನಾವಣೆ ಮತ್ತೊಮ್ಮೆ ಮೈತ್ರಿ ರಾಜಕಾರಣವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ರಾಜ್ಯಸಭೆಯ ಎರಡು ಸ್ಥಾನಗಳನ್ನು ಗೆಲ್ಲುವುದು ಖಚಿತ. ಕಾಂಗ್ರೆಸ್‌ಗೂ ಒಂದು ಸ್ಥಾನ ನಿಕ್ಕಿ. ಜೆಡಿಎಸ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಪರಾವಲಂಬಿಯಾಗುವುದು ಅನಿವಾರ್ಯ. ದೇಶದ ರಾಜಕಾರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಹೃದಯ ವೈಶಾಲ್ಯತೆ ಮೆರೆಯಲು ಕಾಂಗ್ರೆಸ್ ಪಕ್ಷವೂ ಮನ ಮಾಡಿದೆ. ಹಾಗಾಗಿ ರಾಜ್ಯಸಭೆ ಚುನಾವಣೆಯ ‘ಶುಭ ಮುಹೂರ್ತ’ದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಮತ್ತೊಂದು ಸುತ್ತಿನ ಮೈತ್ರೀಬಂಧ ಏರ್ಪಡಲು ತಾರಾನುಕೂಲ ಕೂಡಿದಂತಿದೆ. ವಿಧಾನ ಪರಿಷತ್ ಚುನಾವಣೆಗೂ ಇದು ವಿಸ್ತರಣೆಯಾದೀತು. ಅಲ್ಲಿಗೆ ಜಾತ್ಯತೀತ ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಫೀಲ್ಡಿಗಿಳಿಯಲು ಒಂದು ಹದದಲ್ಲಿ ವೇದಿಕೆ ಸಜ್ಜಾಗಲಿದೆ. ಮೈತ್ರಿ ಮುರಿದುಕೊಂಡವರನ್ನು ‘ಹಳೆ ದೋಸ್ತಿ’ಗಳೆಂದು ಲೇವಡಿಗೈಯ್ಯುವುದು ರಾಜಕೀಯ ವ್ಯಾಖ್ಯಾನಕಾರರ ಶಬ್ದ ಚಾಪಲ್ಯವಷ್ಟೇ ಎಂಬಂತಾಗಿದೆ. ಯಾಕೆಂದರೆ, ಹಳೇ ದೋಸ್ತಿಗಳೆಂದು ಜರಿಸಿಕೊಂಡವರು ಯಾವಾಗ ಬೇಕಾದರೂ ಮರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ರಾಜಕೀಯ ಎದುರಾಳಿಗಳ ಕಣ್ಣಿಗೆ ಇದು ಸಮಯಸಾಧಕ ಎನಿಸುತ್ತದೆ. ಮರು ಮೈತ್ರಿ ಮಾಡಿಕೊಂಡವರ ದೃಷ್ಟಿಯಲ್ಲಿದು ಸಮಯೋಚಿತ ನಡೆಯಾಗಿರುತ್ತದೆ. ಬಹುತೇಕವಾಗಿ ಅಧಿಕಾರ ಹಂಚಿಕೊಳ್ಳಲು ಏರ್ಪಡುವ ಚುಣಾವಣೋತ್ತರ ಮೈತ್ರಿಗಳಲ್ಲಿ ಜನಾಭಿಪ್ರಾಯಕ್ಕೆ ಕಿಮ್ಮತ್ತು ಇರುವುದಿಲ್ಲ. ಇಂತಹ ಮೈತ್ರಿ ರಾಜಕಾರಣವನ್ನೂ ರಾಜ್ಯದ ಜನ ಕಂಡಿದ್ದಾರೆ. ಅದೇನೇ ಇರಲಿ. ಸದ್ಯಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಶ್ಚಿತ. ಅದಕ್ಕೆ ಉಭಯ ಪಕ್ಷಗಳ ವರಿಷ್ಠರು ಅಧಿಕೃತ ಠಸ್ಸೆ ಒತ್ತುವುದಷ್ಟೇ ಬಾಕಿಯಿದೆ.

ಮೈತ್ರಿ ಸಹಜ, ಮರು ಮೈತ್ರಿ ಅಸಹಜವಲ್ಲ!: ದುಷ್ಮನಿಗಳು ಹೆಚ್ಚಾದರೆ ರಾಜಕಾರಣದಲ್ಲಿ ಬಾಳುವುದು ಕಷ್ಟ. ಹಾಗಂತ ವಿರೋಧಿ ದಳದವರ ನಡುವೆ ಕಾಯಂ ಫ್ರೆಂಡ್‌ಶಿಪ್‌ ಇದ್ದರೂ ದುಬಾರಿಯಾಗುತ್ತದೆ. ಇಂತಹ ಸಾಮಾನ್ಯ ಸೂತ್ರದ ಹೊರತಾಗಿಯೂ ಹಲವು ಬಾರಿ ಅಚ್ಚರಿಯ ಮೈತ್ರಿ ಕುದುರುತ್ತದೆ. ಅತಂತ್ರ ಫಲಿತಾಂಶ ಬಂದಾಗ ಸೈದ್ಧಾಂತಿಕವಾಗಿ ಹತ್ತಿರವಿರುವ ಪಕ್ಷ ಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಂಡು ಅಧಿಕಾರ ನಡೆಸುವ ಆಯ್ಕೆಯಿರುತ್ತದೆ. ಸೈದ್ಧಾಂತಿಕವಾಗಿ ಉತ್ತರ-ದಕ್ಷಿಣ ಧ್ರುವ ಎಂದಿದ್ದವರು ಒಂದು ವೇದಿಕೆಯಡಿ ಬರುವುದು ಸುಲಭವಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಘಟಬಂಧನ್ ಏರ್ಪಡಲಿದೆಯೆಂದು ಯಾರು ಊಹಿಸಿದ್ದರು? ಅಧಿಕಾರವೇ ಮುಖ್ಯವಾದಾಗ ಇಂತಹ ಮೈತ್ರಿಗಳೂ ಚಲಾವಣೆಗೆ ಬರುತ್ತವೆ. ತಮ್ಮೆದುರು ಪ್ರಬಲ ಎದುರಾಳಿಯಿರುವಾಗ ವೈಷಮ್ಯ ಬದಿಗಿರಿಸಿದ ಇತರ ಪಕ್ಷಗಳು ಚುನಾವಣಾ ಪೂರ್ವ ಸೀಟು ಹೊಂದಾಣಿಕೆ ಮಾಡಿಕೊಂಡದ್ದೂ ಇದೆ. ಉತ್ತರ ಪ್ರದೇಶದಲ್ಲೂ ಹಾವು, ಮುಂಗುಸಿಯಂತಿದ್ದ ಮುಲಾಯಂ ಸಿಂಗ್ ಯಾದವರ ಎ‌ಸ್‌ಪಿ ಮತ್ತು ಮಾಯಾವತಿಯವರ ಬಿಎಸ್‌ಪಿ ನಡುವೆ ಬಾಂಧವ್ಯವೇರ್ಪಟ್ಟಿತ್ತು. ಪಶ್ಚಿಮ ಬಂಗಾಳದ ದೀದಿ ಮಮತಾ ಬ್ಯಾನರ್ಜಿ ಕಾಂಗ್ರೆಸ್, ಬಿಜೆಪಿಗಳೆರಡರ ಸಖ್ಯವನ್ನೂ ಹೊಂದಿದ್ದರು. ಅಧಿಕಾರದ ಉಪ್ಪರಿಗೆಯೇರಿದ ಬಳಿಕ ಏಣಿಯನ್ನೇ ಒದೆಯುವುದು ದೀದಿಯವರ ವ್ಯಕ್ತಿ ವಿಶಿಷ್ಟ ಶೈಲಿ. ಈ ಅನುಭವ ಉಭಯ ರಾಷ್ಟ್ರೀಯ ಪಕ್ಷಗಳಿಗೂ ಆಗಿದೆ. ಬಿಹಾರದ ನಿತೀಶ ಕುಮಾರ ಯಾವುದೇ ಪಾತ್ರೆಯೊಳಗೆ ಹಾಕುವ ನೀರು ಇದ್ದಂತೆ. ಮಿತ್ರಪಕ್ಷವನ್ನು ಬದಲಿಸಿ ಅಧಿಕಾರ ನಡೆಸುವ ಕಲೆಯನ್ನು ನಿತೀಶರಷ್ಟು ಸುಲಲಿತವಾಗಿ ಕರಗತ ಮಾಡಿಕೊಂಡವರು ದೇಶದ ರಾಜಕಾರಣದಲ್ಲೇ ಮತ್ತೊಬ್ಬರಿಲ್ಲ. ರಾಜಕೀಯವಾಗಿ ತಮ್ಮ ಕಡುವೈರಿ ಲಾಲೂ ಪ್ರಸಾದ್ ಯಾದವರೊಂದಿಗೇ ಕುಳಿತು ರಸಗವಳ ಮೆಲ್ಲುವಷ್ಟು ಒಮ್ಮೆ ಹತ್ತಿರವಾಗಿದ್ದರು. ಅಷ್ಟೇ ಬೇಗ ಬಿಹಾರದ ಮಹಾಘಂಟಬಂಧನ್‌ಗೆ ಅಂತ್ಯ ಹಾಡಿ ಬಿಜೆಪಿಯೊಂದಿಗೆ ಮರು ಮೈತ್ರಿ ಮಾಡಿಕೊಂಡರು. ನರೇಂದ್ರ ಮೋದಿಯೆಂದರೆ ಸಿಡಿಮಿಡಿಗೊಳ್ಳುತ್ತಿದ್ದ ನಿತೀಶ್ ಈಗ ಮೋದಿ ಅವರೊಂದಿಗೆ ಸಹ ಪ್ರಯಾಣಿಕ. ರಾಜ್ಯದಲ್ಲಂತೂ ಸಂದರ್ಭಾನುಸಾರ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಿದ ಅನನ್ಯ ಸಾಧನೆ ಜೆಡಿಎಸ್‌ನದ್ದಾಗಿದೆ. ಮೈತ್ರಿ ರಾಜಕಾರಣದ ಚರಿತ್ರೆ ಇಷ್ಟೊಂದು ರಸವತ್ತಾಗಿರುವಾಗ ರಾಜ್ಯಸಭೆ ಸದಸ್ಯತ್ವಕ್ಕಾಗಿ ಕಾಂಗ್ರೆಸ್‌ನತ್ತ ಜೆಡಿಎಸ್ ಒಲವಿನ ನೋಟ ಬೀರುವುದರಲ್ಲಿ ಹೊಸದೇನೂ ಕಾಣುತ್ತಿಲ್ಲ. ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಹೆಚ್ಚುವರಿ ಮತಗಳನ್ನು ಅನ್ಯಪಕ್ಷ ದ ಸಮರ್ಥ ಅಭ್ಯರ್ಥಿಗೆ ವರ್ಗಾಯಿಸಿದ ನಿದರ್ಶನವೂ ಹೊಸದಲ್ಲ. ದೇಶದ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಮಾತ್ರ ಇನ್ನೂ ಮೈತ್ರಿಯಾಗಿಲ್ಲ. ಉಳಿದ ಪ್ರಾದೇಶಿಕ ಪಕ್ಷಗಳು ಉಭಯ ರಾಷ್ಟ್ರೀಯ ಪಕ್ಷಗಳ ಸಖ್ಯೆ ಬೆಳೆಸಿವೆ. ಜತೆಗೆ ದೋಸ್ತಿ ಖತಂಗೊಳಿ ಮತ್ತೆ ಒಂದಾಗಿದ್ದಾರೆ. ಹಾಗಾಗಿ ಇಂತಹ ಪಕ್ಷಗಳ ನಡುವೆ ಮೈತ್ರಿ ಸಹಜ. ಮೈತ್ರಿ ಮುರಿದುಕೊಂಡ ಬಳಿಕ ಪುನರ್ ವಿವಾಹವಾಗುವುದೂ ಅಸಹಜವಲ್ಲ!!

ಒಳಗುಟ್ಟೇನು?: ಇದರ ಹೊರತಾಗಿಯೂ ಕಾಂಗ್ರೆಸ್-ಜೆಡಿಎಸ್ ನಡುವಿನ ಈ ಮೈತ್ರಿಯನ್ನು ರಾಜ್ಯಸಭೆ ಚುನಾವಣೆಗೆ ಸೀಮಿತಗೊಳಿಸಲಾಗದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಯಾವಾಗಲೂ ಕಾಂಗ್ರೆಸ್‌ನಂತಹ ಪಕ್ಷಗಳ ಜತೆಗಿನ ಸಖ್ಯಕ್ಕೆ ಮಹತ್ವ ಕೊಡುತ್ತಾರೆ. ಕಾಂಗ್ರೆಸ್‌ನೊಂದಿಗೆ ಬಾಂಧವ್ಯ ಬೆಸೆದುಕೊಂಡರೆ ತಮ್ಮ ಸೆಕ್ಯೂಲರ್ ಇಮೇಜ್‌ನ ಕಿರೀಟದ ಹೊಳಪು ಇಮ್ಮಡಿಸುತ್ತದೆ ಎಂದೇ ದೇವೇಗೌಡರು ವಿಶ್ವಾಸವಿರಿಸಿಕೊಂಡಿದ್ದಾರೆ. ಕಾಂಗ್ರೆಸ್ ವರಿಷ್ಠರೂ ಆಪತ್ಕಾಲದಲ್ಲಿ ಬೇಕಾಗುತ್ತಾರೆಂದು ಗೌಡರನ್ನು ಗೌರವಾದರಗಳಿಂದ ನಡೆಸಿಕೊಳ್ಳುತ್ತಾರೆ. 2018ರ ವಿಧಾನಸಭೆ ಚುನಾವಣೆ ಬಳಿಕ ಅತಂತ್ರ ಫಲಿತಾಂಶ ಬಂದಾಗ ಗೌಡರ ಮನೆಬಾಗಿಲಿಗೆ ಕಾಂಗ್ರೆಸ್ ವರಿಷ್ಠರೇ ತೆರಳಿದ್ದರು. ಮುಖ್ಯಮಂತ್ರಿ ಪದವಿಯನ್ನು ಬಂಗಾರದ ಹರಿವಾಣದಲ್ಲಿಟ್ಟು ಜೆಡಿಎಸ್‌ಗೆ  ಬಿಟ್ಟುಕೊಟ್ಟಿದ್ದರು. ದೇವೇಗೌಡರ ಈ ರಾಜಕಾರಣದ ತಾಕತ್ತಿನ ಅರಿವಿರುವುದರಿಂದಲೇ ಕಾಂಗ್ರೆಸ್ ಹೈಕಮಾಂಡ್ ಅವರ ಬಗ್ಗೆ ಮೃಧು ಧೋರಣೆ ತಳೆಯುತ್ತದೆ. ಸ್ಥಳೀಯ ಕಾಂಗ್ರೆಸಿಗರಿಗೆ ಇಷ್ಟವೋ ಕಷ್ಟವೋ ಅದು ಬೇರೆ ಮಾತು. ಆದರೆ, ದೇವೇಗೌಡರು ಮತ್ತು ಜೆಡಿಎಸ್ ವಿಚಾರದಲ್ಲಿ ಕಾಂಗ್ರೆಸ್‌ನ ದಿಲ್ಲಿ ನಾಯಕರಿಗೆ ಪ್ರೀತ್ಯಾದರ. ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಪರ್ಯಾಯ ಶಕ್ತಿಯನ್ನು ಸಕ್ರಿಯವಾಗಿಡಲು ಜೆಡಿಎಸ್ ಪಕ್ಷವನ್ನು ಬೆನ್ನಿಗಿಟ್ಟುಕೊಳ್ಳಬೇಕು ಎನ್ನುವುದು ಕಾಂಗ್ರೆಸ್ ವರಿಷ್ಠರ ರಾಜಕಾರಣದ ಒಳಗುಟ್ಟು.

ಲೇನಾ ಮಾತ್ರ. ದೇನಾ ಇಲ್ಲ!: ಜೆಡಿಎಸ್ ಸಖ್ಯವೂ ಬೇಡ. ಜೆಡಿಎಸ್‌ನೊಂದಿಗೆ ಯಾವುದೇ ಬಗೆಯ ‘ಲೇನಾ-ದೇನಾ’ ಬೇಕಿಲ್ಲ ಎನ್ನುವ ಅಭಿಪ್ರಾಯವೂ ರಾಜ್ಯ ಕಾಂಗ್ರೆಸ್‌ನ ಒಂದು ವಲಯದಲ್ಲಿದೆ. ಮಿತ್ರಪಕ್ಷದಿಂದ ‘ಲೇನಾ’ ನಿರಂತರವಿರಲಿ. ತಮ್ಮ ಕಡೆಯಿಂದ ‘ದೇನಾ’ ಏನೂ ನಿರೀಕ್ಷಿಸಬೇಡಿ ಎನ್ನುವುದು ಜೆಡಿಎಸ್‌ನವರ ಸಿದ್ಧಾಂತ. ಈ ಮೈತ್ರಿಯಿಂದ ಜೆಡಿಎಸ್‌ಗಷ್ಟೇ ಅನುಕೂಲ. ಜೆಡಿಎಸ್‌ಗೀಗ ಹೊಳೆ ದಾಟಿಸುವವರ ಜರೂರತ್ತು ಇದೆ. ಹಾಗಾಗಿ ಇಂತಹ ಸ್ನೇಹ ಬೇಕಾ? ಎನ್ನುವವರೂ ಪ್ರದೇಶ ಕಾಂಗ್ರೆಸ್‌ನಲ್ಲಿದ್ದಾರೆ. ಅದಕ್ಕೆ ಅವರು ಕಳೆದ ಮೈತ್ರಿ ಸರಕಾರದ ಘಟನಾವಳಿಗಳು, ಲೋಕಸಭೆ ಚುನಾವಣೆಯ ದಯನೀಯ ಸೋಲು ಹಾಗೂ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಾದ ಕಹಿ ಘಟನೆಗಳನ್ನು ಮೆಲುಕು ಹಾಕುತ್ತಾರೆ. ಒಂದು ದೃಷ್ಟಿಯಿಂದ ಇದು ನಿಜ ಕೂಡ. ಈ ಮೈತ್ರಿಯಿಂದ ಜೆಡಿಎಸ್ ಕಳೆದುಕೊಳ್ಳುವುದು ಏನೂ ಇಲ್ಲ. ಲಾಭವಾದರೆ ಅದು ಬೋನಸ್. ಕಾಂಗ್ರೆಸ್‌ನ ಸ್ಥಿತಿ ಹಾಗಲ್ಲ. ಮುಂಬರುವ ಚುನಾವಣೆಗಳಲ್ಲೂ ಮೈತ್ರಿಯ ಬಾಗಿಲು ತೆರೆದುಕೊಂಡರೆ ಲೋಕಸಭೆ ಚುನಾವಣೆ ಗೋಜಲು ಮರುಕಳಿಸುತ್ತದೆ. ಇದು ಸ್ಥಳೀಯ ಕಾಂಗ್ರೆಸಿಗರು ಹಾಗೂ ಬೇರುಮಟ್ಟದ ಕಾರ್ಯಕರ್ತರ ಆತಂಕ.

ಅಗತ್ಯಾನುಸಾರ ಬೆಂಬಲದ ಸೂತ್ರ: ಕಾಂಗ್ರೆಸ್ ಕಾರ್ಯಕರ್ತರ ಚಿಂತೆಯೇನೇ ಇದ್ದರೂ ಇಂತಹ ಮೈತ್ರಿಯ ಮಾತುಕತೆ ಮೇಲ್ಮಟ್ಟದಲ್ಲೆ ನಡೆಯುತ್ತದೆ. ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ನಂತರ ಕಾರ್ಯಕರ್ತರ ಮೇಲೆ ಹೇರಿಕೆ ಮಾಡಲಾಗುತ್ತದೆ. ಇದು ಕಾಂಗ್ರೆಸ್ ರಾಜಕಾರಣ ನಡೆದು ಬಂದ ದಾರಿ. ಈ ನಡುವೆಯೂ ರಾಜ್ಯಸಭೆ ಚುನಾವಣೆ ನೆಪದಲ್ಲಿ ರಾಜ್ಯದ ಪ್ರತಿಪಕ್ಷಗಳು ಒಗ್ಗಟ್ಟು ತೋರಿದರೆ ಅದು ಒಂದು ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ. ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಗೊಂದಲಕ್ಕೆ ಅವಕಾಶವನ್ನೇ ನೀಡಿಲ್ಲ. ಜೆಡಿಎಸ್‌ನಲ್ಲೂ ದೇವೇಗೌಡರು ಸ್ಪರ್ಧಿಸುತ್ತಾರೆಂದರೆ ಎಲ್ಲವೂ ಸಲೀಸು. ಉಭಯ ಪಕ್ಷಗಳ ಈ ನಡೆಯ ಹಿಂದೆ ಅಗತ್ಯಾನುಸಾರ ಪರಸ್ಪರ ಬೆಂಬಲದ ಸೂತ್ರವಿದ್ದಂತಿದೆ. ಇದರ ಅರ್ಥ ಮರು ಮೈತ್ರಿಗೆ ರಹದಾರಿ ನಿರ್ಮಾಣವಾಗಿದೆಯೆಂದಲ್ಲ. ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುವ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದಾಗ ಇದರ ಸ್ವರೂಪ ಸ್ಪಷ್ಟವಾಗಬಹುದು.

ಸರಕಾರಕ್ಕೂ ಉಪಕಾರ!: ಇನ್ನೊಂದು ಪ್ರಮುಖಾಂಶವೆಂದರೆ ಪ್ರತಿಪಕ್ಷ ಗಳ ನಡುವೆ ಸಮನ್ವಯವಿದ್ದರೆ ಸರಕಾರವೂ ಎಚ್ಚರದಿಂದ ಹೆಜ್ಜೆಯಿರಿಸುತ್ತದೆ. ಕೋವಿಡ್-19 ವಿಪತ್ತಿನಿಂದ ರಾಜ್ಯದ ಅಭಿವೃದ್ಧಿ ನೆಲಕಚ್ಚುವ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಮೈತ್ರಿಪೂರ್ಣವಾಗಿ ಕಲೆತು ಚಾಟಿ ಬೀಸಿದರೆ ಆಳುವವರಿಗೂ ಉಪಕಾರ ಮಾಡಿದಂತೆಯೇ ಆಗಲಿದೆ. ಪ್ರತಿಪಕ್ಷಗಳು ಸರಕಾರವನ್ನು ಸದಾ ಜಾಗೃತಾವಸ್ಥೆಯಲ್ಲಿ ಇರಿಸಿದರೆ ಜನರೂ ಒಂದಷ್ಟು ನಿರೀಕ್ಷಿಸಬಹುದು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು ಅತ್ಯಂತ ಪ್ರಖರ ಪ್ರತಿಪಕ್ಷದ ನಾಯಕರಾಗಿದ್ದರು. ಸಿದ್ದರಾಮಯ್ಯ ಸರಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಮಾತನಾಡುವಾಗ, ಅರಸು ಕಾಲದ ಪ್ರತಿಪಕ್ಷದ ನಾಯಕ ದೇವೇಗೌಡರನ್ನು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೆನಪಿಸಿದ್ದರು. ಅಂದರೆ ತಂದೆಯಷ್ಟು ಸಿದ್ಧತೆ, ಆಕ್ರಮಣಶೀಲತೆ ಕುಮಾರಸ್ವಾಮಿ ಅವರಲ್ಲಿ ಕಾಣುತ್ತಿಲ್ಲವೆಂದು ಅವರು ಅಂದು ಹೇಳಿದಂತಿತ್ತು. ಹೋರಾಟದ ಹಾದಿಯಿಂದಲೇ ಬಂದಿರುವ ಬಿ.ಎಸ್.ಯಡಿಯೂರಪ್ಪ ಅವರೂ ಪ್ರತಿಪಕ್ಷದ ನಾಯಕರಾಗಿದ್ದಾಗ ವಿಧಾನಸೌಧವನ್ನೇ ನಡುಗಿಸುತ್ತಾರೆ ಎಂಬ ಮಾತು ಜನಜನಿತವಾಗಿತ್ತು. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರೂ ಪ್ರತಿಪಕ್ಷದ ನಾಯಕರಾಗಿ ಅಸ್ತ್ರ ಝಳಪಿಸಿದ್ದಿದೆ. ಸಿದ್ದರಾಮಯ್ಯ ಪುನಃ ಪ್ರತಿಪಕ್ಷದ ಸೀಟ್‌ನಲ್ಲಿದ್ದಾರೆ. ಕುಮಾರಸ್ವಾಮಿ ಕೂಡ ವಿಧಾನಸಭೆಯಲ್ಲಿ ಅದೇ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ರಾಜ್ಯದ ಹಿತದ ವಿಚಾರ ಬಂದಾಗ ಪ್ರತಿಪಕ್ಷಗಳು ಸರಕಾರದತ್ತ ಬೆಂಕಿಯುಂಡೆಯಂತಹ ಬೌನ್ಸರ್‌ಗಳನ್ನೇ ಎಸೆಯಬೇಕಾಗುತ್ತದೆ. ಈ ದೃಷ್ಟಿಯಿಂದಲೂ ರಾಜ್ಯಸಭೆ ಚುನಾವಣೆಯ ಮೈತ್ರಿ ಪ್ರತಿಪಕ್ಷಗಳನ್ನು ಚುರುಕುಗೊಳಿಸಬೇಕು ಎನ್ನುವುದು ಅಪೇಕ್ಷಣೀಯವಾದುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top