‘ಜಮೀರ ಹಮ್ಮೀರ’ ಎಂದ್ರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ

-ಯಾವುದೇ ಕೋಮಿನ ನಾಯಕರ ಅತಿರೇಕದ ನಡವಳಿಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಇಲ್ಲ.

– ಶಶಿಧರ ಹೆಗಡೆ, ಬೆಂಗಳೂರು
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪಿತಾಮಹ ಎಂದರೆ ಕಾಂಗ್ರೆಸ್ ಪಕ್ಷ. ಅದರಲ್ಲೂ ಮುಸ್ಲಿಂ ತುಷ್ಟೀಕರಣದಲ್ಲಿ ಪುರಾತನ ಕಾಂಗ್ರೆಸ್ ಪಕ್ಷದ ಚರಿತ್ರೆ ‘ಕಿರೀಟಪ್ರಾಯ’ವಾದುದು. ಮುಲಾಯಂ, ಲಾಲೂ, ದೀದಿ, ನಿತೀಶ್ ಕುಮಾರ್‌ರಂಥವರು ಪ್ರವರ್ಧಮಾನಕ್ಕೆ ಬರುವ ಮೊದಲು ಮುಸಲ್ಮಾನರ ದಷ್ಟಿಯಲ್ಲಿ ಕಾಂಗ್ರೆಸ್ ಯಾವತ್ತಿಗೂ ಚಾಂಪಿಯನ್ ಆಗಿತ್ತು. ಆದರೆ, ಕಾಂಗ್ರೆಸ್ ಹೊರತಾಗಿಯೂ ದೇಶದ ರಾಜಕಾರಣದಲ್ಲಿ ತಮ್ಮನ್ನು ಆಧರಿಸುವವರು ಸಿಕ್ಕಾಗ ಮುಸಲ್ಮಾನರ ನಿಷ್ಠೆಯೂ ಮುಲಾಯಂ, ಲಾಲೂಗಳತ್ತ ವಾಲಿದ್ದು ಸುಳ್ಳಲ್ಲ. ಮತ್ತೊಂದೆಡೆ ಬಿಜೆಪಿ ಪ್ರಣೀತ ಹಿಂದುತ್ವದ ರಾಜಕಾರಣವೂ ಬಿರುಸುಗೊಂಡಾಗ ಕಾಂಗ್ರೆಸ್ ನಡುಗಿ ಹೋಯಿತು. ಜತೆಗೆ ರಾಜಕೀಯದ ಭೂಪಟ ಬದಲಾದಂತೆ ತನ್ನ ಧೋರಣೆಯನ್ನೂ ಕಾಂಗ್ರೆಸ್ ತಿದ್ದುಪಡಿ ಮಾಡಿಕೊಂಡಿದೆ. ಸದ್ಯಕ್ಕಂತೂ ಮುಸಲ್ಮಾನರನ್ನು ಓಲೈಸಿಕೊಂಡು ರಾಜಕಾರಣ ಮಾಡುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ರಾಜಕೀಯ ಭವಿಷ್ಯದ ಪುನರುತ್ಥಾನಕ್ಕಾಗಿ ಅಕ್ಷರಶಃ ತಂತಿಯ ಮೇಲಿನ ನಡಿಗೆಯಲ್ಲಿರುವ ಕಾಂಗ್ರೆಸ್‌ಗೆ ಎಲ್ಲರನ್ನೂ ಒಳಗೊಳ್ಳುವ ಸೂತ್ರ ಬೇಕಾಗಿದೆ. ಯಾವುದೇ ಒಂದು ಧರ್ಮ ಹಾಗೂ ಕೋಮಿನ ನಾಯಕರ ಅತಿರೇಕದ ನಡವಳಿಕೆಯನ್ನು ಅರಗಿಸಿಕೊಳ್ಳುವ ಮಜಬೂತು ಶಕ್ತಿ ಕಾಂಗ್ರೆಸ್‌ನಲ್ಲೀಗ ಉಳಿದಿಲ್ಲ. ಆದರೆ, ಕರ್ನಾಟಕ ಕಾಂಗ್ರೆಸ್ನಲ್ಲಿ ಬಿ.ಝೆಡ್.ಜಮೀರ್ ಅಹ್ಮದ್ ಖಾನ್‌ರಂತಹ ಶಾಸಕರು ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ. ಮನಬಂದಂತೆ ಚೀರುವವರಂತೆ ನಾಲಿಗೆ ಹರಿಯ ಬಿಡುವ ಜಮೀರ್ ಅಂಥವರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಕಾಂಗ್ರೆಸ್ ಪಕ್ಷ ದುಬಾರಿ ಬೆಲೆ ತೆರುವ ಸನ್ನಿವೇಶ ಬಂದೀತು. ರೋಗ ಲಕ್ಷಣವನ್ನು ಪ್ರಾರಂಭದಲ್ಲೆ ಗುರುತಿಸಿ ಚಿಕಿತ್ಸೆ ಮಾಡಿದರೆ ಕಾಂಗ್ರೆಸ್ ಬಚಾವ್. ಇಲ್ಲದೆ ಹೋದರೆ ಸ್ವಯಂಕತ ಅಪರಾಧದಿಂದ ವೈರಸ್ ಅಂಟಿಸಿಕೊಂಡು ಹರಡಲು ಬಿಟ್ಟಂತಾಗುತ್ತದೆ. ಕಾಂಗ್ರೆಸ್ ಪ್ರತಿಪಾದಿಸುವ  “Inclusive growth” ಕಾಳಜಿಗೆ ಅರ್ಥ ಬರಬೇಕಾದರೆ ಜಮೀರ್‌ರಂತೆ ಆಟಾಟೋಪ ಪ್ರದರ್ಶಿಸುವವರಿಗೆ ಬುದ್ಧಿ ಹೇಳಬೇಕು.

ಸುಲ್ತಾನ ಅಲ್ಲ
ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಮುಸಲ್ಮಾನರನ್ನು ಅಂಕುಶದಲ್ಲಿ ಇಟ್ಟುಕೊಳ್ಳಲು ಯತ್ನಿಸುವ ಜಮೀರ್ ಅಹ್ಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕರಷ್ಟೇ. ಈತ ಸುಲ್ತಾನ್ ಅಲ್ಲವೇ ಅಲ್ಲ. ಚಾಮರಾಜಪೇಟೆಯ ವ್ಯಾಪ್ತಿಯ ಪಾದರಾಯನಪುರವನ್ನು ಈ ವ್ಯಕ್ತಿಯ ಹೆಸರಿಗೆ ಸೇಲ್‌ಡೀಡ್‌ ಮಾಡಿಕೊಡಲಾಗಿಲ್ಲ. ಚಾಮರಾಜಪೇಟೆಯ ಪ್ರವೇಶದ್ವಾರದಲ್ಲಿ ‘ಇದು ಜಮೀರ್ ಖಾನ್ ಝೋನ್‌. ಅಪ್ಪಣೆಯಿಲ್ಲದೆ ಒಳ ಪ್ರವೇಶಿಸುವುದು ನಿಷಿದ್ಧ’ ಎಂಬ ಬೋರ್ಡ್‌ನ್ನು ಕೂಡ ತಗುಲಿ ಹಾಕಲಾಗಿಲ್ಲ. ಹಾಗಿದ್ದರೂ ಪಾದರಾಯನಪುರದಲ್ಲಿ ಗಲಭೆಯಾದಾಗ, ‘‘ಅಧಿಕಾರಿಗಳು ರಾತ್ರಿಯೇಕೆ ಅಲ್ಲಿಗೆ ಹೋದರು? ನನ್ನನ್ನು ಕೇಳಬೇಕಿತ್ತು…,’’ ಎಂದು ಜಮೀರ್ ಪೊಗರು ತೋರಿದ್ದರು. ಜಮೀರ್ ಇಂಥ ಉದ್ಧಟತನದ ಹೇಳಿಕೆ ನೀಡಿದಾಗ, ಪಾದರಾಯನಪುರ ಬೆಂಗಳೂರಿನಲ್ಲಿದೆ. ಪಾಕಿಸ್ತಾನದಲ್ಲಿ ಇಲ್ಲವೆಂದು ಜನರು ನೆನಪಿಸಿದರು ಎನ್ನುವುದು ಬೇರೆ ಮಾತು. ಇಷ್ಟಲ್ಲದೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪುಂಡರ ಬೆಂಬಲಕ್ಕೆ ನಿಂತ ಜಮೀರ್, ಅವರೆಲ್ಲರೂ ಅನಕ್ಷರಸ್ಥರು ಎಂಬ ‘ರಕ್ಷಾಕವಚ’ ತೊಡಿಸಲು ನೋಡಿದರು. ಜಮೀರ್ ವರಸೆ ಹೇಗಿದೆಯೆಂದರೆ ಬಾಯಲ್ಲಿ ಬೆರಳಿಟ್ಟರೂ ಕಚ್ಚಬೇಕು ಎನ್ನುವುದು ಪಾದರಾಯನಪುರದ ಪೋಕರಿಗಳಿಗೆ ಗೊತ್ತಾಗುವುದಿಲ್ಲ! ಪಾಪ ಅವರೆಲ್ಲ ಅಷ್ಟೊಂದು ಮುಗ್ಧರು!!

ಇದೇ ಮೊದಲಲ್ಲ
ಕೊರೊನಾ ಮಹಾಮಾರಿಗೆ ದೇಶ, ಭಾಷೆ, ಧರ್ಮದ ಗಡಿಯಿಲ್ಲ. ಇದೊಂದು ಜಾಗತಿಕ ವಿಪತ್ತು. ಇಡೀ ವಿಶ್ವವೇ ಒಂದಾಗಿ ಇದರ ವಿರುದ್ಧ ಹೋರಾಡುವ ತುರ್ತು ಇದೆ. ಈ ಸೂಕ್ಷ್ಮ ಬಹುತೇಕ ಎಲ್ಲರಿಗೂ ಅರಿವಿನಲ್ಲಿದೆ. ಆದರೆ, ಇಂತಹ ವಿಪತ್ತಿನಲ್ಲೂ ಜಮೀರ್ ಅಧಿಕ ಪ್ರಸಂಗತನ ಮಾಡುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾದಾಗಲೂ ಸಂವೇದನೆಯೇ ಇಲ್ಲದವರಂತೆ ಜಮೀರ್ ವರ್ತಿಸಿದ್ದರು. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಸ್ಲಿಂ ಪ್ರತಿನಿಧಿಗಳ ಸಭೆ ನಡೆಸಿದಾಗ ಜಮೀರ್ ಸಹಿತ ಸಭೆಯಲ್ಲಿದ್ದ ಮುಖಂಡರು ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲಾಗುವುದು. ಸಮುದಾಯದ ನಡುವೆ ಜಾಗತಿ ಮೂಡಿಸಲಾಗುವುದು ಎಂಬ ಭರವಸೆ ಕೊಟ್ಟಿದ್ದರು. ಈ ಸಭೆಯಿಂದ ಹೊರಬರುತ್ತಿದ್ದಂತೆಯೇ ಹಳೆ ಚಾಳಿ ಮುಂದುವರಿಸುವ ಅಣಿಮುತ್ತನ್ನು ಜಮೀರ್ ಉದುರಿಸಿದ್ದರು. ಇದು ಇತರ ಮುಸ್ಲಿಂ ಮುಖಂಡರಿಗೂ ಜಮೀರ್ ಅಹ್ಮದ್ ಅವರಿಗೂ ಇರುವ ವ್ಯತ್ಯಾಸ. ಈ ಸಂಗತಿಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡರೆ ಪಕ್ಷದ ಭವಿಷ್ಯದ ದಷ್ಟಿಯಿಂದ ಒಳ್ಳೆಯದು. ಸಮಾಜದ ಸ್ವಾಸ್ಥ್ಯವೂ ಕೆಡುವುದಿಲ್ಲ.

ಪೈಪೋಟಿಯೇ ಮುಖ್ಯವಲ್ಲ
ಪ್ರದೇಶ ಕಾಂಗ್ರೆಸ್‌ನಲ್ಲಿ ಜಾಫರ್ ಷರೀಫರಂತಹ ನಾಯಕರಿದ್ದರು. ತನ್ವೀರ್ ಸೇಠ್, ಯು.ಟಿ.ಖಾದರ್‌ರಂತಹ ಹಾಲಿ ಶಾಸಕರೂ ಸಮುದಾಯ ಪ್ರಜ್ಞೆ ಹೊಂದಿದ್ದಾರೆ. ಎಲ್ಲರೊಂದಿಗೆ ಸಹಬಾಳ್ವೆ ಮುಖ್ಯವೆನ್ನುವ ಮನೋಭಿಲಾಷೆಯನ್ನು ಇವರಲ್ಲಿ ಕಾಣಬಹುದು. ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅಂಥವರು ಹಗುರವಾಗಿ ಮಾತನಾಡುತ್ತಾರಾದರೂ ಸಮಾಜವನ್ನು ಕೆರಳಿಸುವುದಿಲ್ಲ. ಜಮೀರ್‌ರಂತೆ ಇಬ್ರಾಹಿಂ ಅಪಾಯಕಾರಿಯೂ ಅಲ್ಲ. ಎಲ್ಲ ಸಂದರ್ಭದಲ್ಲಿ ಇಬ್ರಾಹಿಂ ಮಾತುಗಳನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿಯೂ ಇಲ್ಲ. ಯಾಕೆಂದರೆ ವಿದೂಷಕ ಎಂಬ ಪಟ್ಟವನ್ನು ಬೇರೆಯವರಿಗೆ ಬಿಟ್ಟುಕೊಡಲು ಸುತಾರಾಂ ಸಿದ್ಧರಿಲ್ಲದ ಇಬ್ರಾಹಿಂ ಈ ಗದ್ದುಗೆಯ ಮೇಲೆ ಕೊಂಚವೂ ಮಿಸುಕಾಡದಂತೆ ಕುಳಿತು ಬಿಟ್ಟಿದ್ದಾರೆ. ಇಬ್ರಾಹಿಂ ಸಾಹೇಬರು ಅಖಾಡದ ರಾಜಕಾರಣದಲ್ಲೂ ಇಲ್ಲ. ಅಖಾಡದಿಂದ ಜನರೇ ಇಬ್ರಾಹಿಂ ಅವರಿಗೆ ‘ಬೀಳ್ಕೊಡುಗೆ ಸಮಾರಂಭ’ ನೆರವೇರಿಸಿ ಕಳುಹಿಸಿದ್ದಾರೆ ಎನ್ನುವುದೇ ಸರಿ. ಹಾಗಾಗಿ ಇಬ್ರಾಹಿಂ ಹೇಳಿಕೆಗಳಿಂದ ಕಾಂಗ್ರೆಸ್‌ಗೂ ನಷ್ಟವಿಲ್ಲ. ಜಮೀರ್ ಹಾಗಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಜಾಫರ್ ಷರೀಫರ ನಿಧನದ ಬಳಿಕ ಮುಸ್ಲಿಂ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. ರೋಶನ್ ಬೇಗ್‌ರಂತಹ  ಅನುಭವಿಗಳು ಪಕ್ಷ ತೊರೆದಿದ್ದಾರೆ. ಈ ಜಾಗಕ್ಕೆ ಬಂದು ಸೆಟ್ಲ್ ಆಗಲು ಜಮೀರ್ ಕನಸು ಕಾಣುತ್ತಿದ್ದಾರೆ. ಅಸಲಿಗೆ ನಾಯಕನಾಗುವ ಯಾವ ಲಕ್ಷಣವೂ ಜಮೀರ್ ಅವರಲ್ಲಿ ಇಲ್ಲ. ಜೆಡಿಎಸ್‌ನಲ್ಲಿದ್ದ ಕಾಲದಿಂದಲೂ ಅಸಂಬದ್ಧ ಹೇಳಿಕೆ, ವಿವಾದದಿಂದಲೇ ಜಮೀರ್ ಸುದ್ದಿಯಾದವರು. ಚಾಮರಾಜಪೇಟೆಯಲ್ಲಿ ಮುಸ್ಲಿಂ ಬಾಹುಳ್ಯವಿದೆ ಎನ್ನುವುದೇ ಜಮೀರ್ ಅಂಥವರಿಗೆ ಬಂಡವಾಳ. ಇಂತಹ ಕ್ಷೇತ್ರಗಳಲ್ಲಿ ಚುನಾವಣೆ ಸಂದರ್ಭದ ತೆರೆಮರೆಯ ಚಟುವಟಿಕೆ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಇಲ್ಲದಿದ್ದರೆ ಜಮೀರ್‌ರಂಥವರೂ ಎಂದೋ ತೆರೆಮರೆಗೆ ಸರಿದು ಹೋಗುತ್ತಿದ್ದರು.

ಪಾಠವಾಗಬೇಕು
ಪಾದರಾಯನಪುರ ಘಟನೆ ಬಳಿಕ ಜಮೀರ್ ಅಹ್ಮದ್ ಕರೆಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ಪ್ರಮುಖರು ಬುದ್ಧಿ ಹೇಳಿದ್ದಾರೆಂಬ ಮಾಹಿತಿಯಿದೆ. ಜಮೀರ್‌ರಂಥ ಅಪ್ರಬುದ್ಧರಿಗೆ ಕಡಿವಾಣ ಹಾಕಲೇಬೇಕೆಂದು ಕಾಂಗ್ರೆಸ್‌ನ ಇತರ ಅಲ್ಪಸಂಖ್ಯಾತ ಮುಖಂಡರು ಒತ್ತಡವನ್ನೂ ತಂದಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯ ಕಾಂಗ್ರೆಸ್‌ಗೆ ಜಮೀರ್ ಅಸಹನೀಯವಾಗಿದ್ದಾರೆ ಎನ್ನುವುದು ಸ್ಪಷ್ಟ. ಇಷ್ಟರ ನಡುವೆಯೂ ಜಮೀರ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡ ಕೆಲವು ದೊಡ್ಡ ನಾಯಕರಿಗೆ ಈ ವ್ಯಕ್ತಿ ಬಗ್ಗೆ ಸಾಫ್ಟ್‌ ಕಾರ್ನರ್ ಇದೆ. ಇಷ್ಟೆಲ್ಲ ಭಾನಗಡಿ ಬಳಿಕವೂ ‘ಜಮೀರ ನಮ್ಮ ಹಮ್ಮೀರ’ ಎಂದು ಕಾಂಗ್ರೆಸ್ ಭಾವಿಸಿದರೆ ಅವನತಿಯ ಹಾದಿ ಹಿಡಿದಂತೆಯೇ ಆಗಲಿದೆ. ಬದಲಾಗಿ ಜಮೀರ್ ತಂದಿಟ್ಟ ಮುಜುಗರವನ್ನು ಪಾಠವಾಗಿ ಸ್ವೀಕರಿಸಿದರೆ ರಾಜ್ಯ ಕಾಂಗ್ರೆಸ್ ನಾಯಕರು ಮೇಲ್ಪಂಕ್ತಿ ಹಾಕಿಕೊಟ್ಟಂತಾಗಲಿದೆ.

ಜಾಗತಿ ಮೂಡಿಸಲಿ
ಹಾಗೆ ನೋಡಿದರೆ ಫೈರ್ ಬ್ರ್ಯಾಂಡ್ ಭಾಷಣದಿಂದ ಯಾವ ಪ್ರಯೋಜನವೂ ಆಗದು. ಹಿಂದೂಗಳ ಮತ ಕ್ರೋಡೀಕರಿಸಲು ಉಗ್ರಾವತಾರ ತೋರುವವರಿಗೇನೂ ಕಡಿಮೆಯಿಲ್ಲ. ಅಂಥವರನ್ನೂ ಜಮೀರ್‌ರನ್ನು ಹಾಕಿದ ತಕ್ಕಡಿಯಲ್ಲೇ ಇಟ್ಟು ತೂಗಿ ನೋಡಬೇಕಾಗುತ್ತದೆ. ಹಿಂದೂ ಇರಲಿ. ಮುಸ್ಲಿಂ ಇರಲಿ. ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡುವವರನ್ನು ಒಂದೇ ದಷ್ಟಿಯಲ್ಲೇ ನೋಡಬೇಕಾಗುತ್ತದೆ. ಯಾವುದೇ ಧರ್ಮಕ್ಕೆ ಸೇರಿದವರಿರಲಿ. ಅವರು ಅನಕ್ಷರಸ್ಥರು ಎಂದಾದರೆ ತಿಳಿ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆಯೇ ಅವರಿಗೆ ಅಕ್ಷರ ಜ್ಞಾನ ನೀಡಲು ವ್ಯವಸ್ಥೆ ಮಾಡಬೇಕು. ಕೊರೊನಾ, ಸಿಎಎ ಇತ್ಯಾದಿ ವಿಚಾರಗಳಲ್ಲಿ ಹಾದಿ ತಪ್ಪಿದವರನ್ನು ಸರಿದಾರಿಗೆ ತರುವ ಕೆಲಸವನ್ನು ಧಾರ್ಮಿಕ, ರಾಜಕೀಯ ಮುಖಂಡರೇ ಮುಂದೆ ನಿಂತು ಮಾಡಬೇಕು. ಈ ಬಗೆಯಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ಜಮೀರ್ ಯಾವತ್ತಾದರೂ ಮಾಡಿದ್ದಾರಾ? ನಾಲ್ಕನೇ ಬಾರಿಗೆ ಶಾಸಕರಾಗಿರುವ ಜಮೀರ್ ಅವರಿಗೆ ತಮ್ಮ ಕ್ಷೇತ್ರದ ಜನರು ಇನ್ನೂ ಅನಕ್ಷರಸ್ಥರು ಎನ್ನಲು ನಾಚಿಕೆಯೂ ಆಗುವುದಿಲ್ಲವಾ? ಕ್ಷೇತ್ರದ ಜನರ ಬಡತನ, ಅಜ್ಞಾನವನ್ನೇ ಬಂಡವಾಳ ಮಾಡಿಕೊಳ್ಳುವ ಹಾಗೂ ಮತೀಯ ವಿಷಪ್ರಾಶನ ಮಾಡುವಂಥವರು ಕೊಬ್ಬದಂತೆ ನೋಡಿಕೊಳ್ಳುವ ಉತ್ತರದಾಯಿತ್ವ ರಾಜಕೀಯ ಪಕ್ಷಗಳಿಗೂ ಇದೆ. ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ ಅಂತಹ ದಢ ನಿರ್ಧಾರ ತೆಗೆದುಕೊಳ್ಳುವ ಜರೂರು ಇದೆ.

ನಜೀರ್ ಸಾಬ್, ಷರೀಫ್ ಮಾದರಿ
ರಾಜ್ಯದ ಮುಸ್ಲಿಂ ನಾಯಕರಲ್ಲಿ ಅಗ್ರಮಾನ್ಯರು ಜಾಫರ್ ಷರೀಫ್‌ ಮತ್ತು ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿ ಅನನ್ಯ ಕೊಡುಗೆ ಸಲ್ಲಿಸಿದ್ದ ನಜೀರ್ ಸಾಬ್. ಷರೀಫ್‌ ಕಟ್ಟಾ ಕಾಂಗ್ರೆಸಿಗರಾದರೆ ನಜೀರ್ ಸಾಬರು ರಾಜ್ಯದಲ್ಲಿ ಮೊದಲ ಕಾಂಗ್ರೆಸೇತರ ಸರಕಾರದಲ್ಲಿ ಮಂತ್ರಿಯಾಗಿ ಜನರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ನೀರು ಕೊಡಿಸಿದ ನಜೀರ್ ಸಾಬ್ ಅವರನ್ನು ನೀರ್ ಸಾಬ್ ಎಂದೇ ಕೊಂಡಾಡಲಾಗುತ್ತದೆ. ಷರೀಫರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ಛಾಪು ಮೂಡಿಸಿದವರು. ಅಂತಹ ಷರೀಫ್‌ ಹಾಗೂ ನಜೀರ್ ಸಾಬ್ ಅವರೊಂದಿಗೆ ಜಮೀರ್ ಅಂಥವರನ್ನು ಹೋಲಿಸಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿನ ಹಾಲಿ ಮುಸ್ಲಿಂ ಮುಖಂಡರಲ್ಲಿ ಷರೀಫ್, ನಜೀರ್ ಸಾಬ್ ಅವರ ಎತ್ತರಕ್ಕೆ ಬೆಳೆಯುವ ಹಸಿವೂ ಇದ್ದಂತಿಲ್ಲ. ಷರೀಫ್ ಹಾಗೂ ನಜೀರ್ ಸಾಬ್ ಅಲ್ಪಸಂಖ್ಯಾತರ ನಾಯಕರಷ್ಟೇ ಆಗಿರಲಿಲ್ಲ. ಅವರ ಆಚರಣೆಯಲ್ಲೂ ಧರ್ಮ ನಿರಪೇಕ್ಷತೆಯಿತ್ತು. ಜಾರ್ ಷರೀಫರು ಒಮ್ಮೆ ಅವರ ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಸಮಾವೇಶ ನಡೆದಾಗ ಸ್ಥಳಕ್ಕೆ ಹೋಗಿ ಸಿದ್ಧತೆ ವೀಕ್ಷಿಸಿ, ಸಮಾವೇಶ ಸಾಂಗವಾಗಿ ನಡೆಯಲು ಬೆಂಬಲ ನೀಡಿದ್ದರು. ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತ ಸಮುದಾಯಗಳಲ್ಲೂ ಇಂತಹ ನಾಯಕರನ್ನು ಬೆಳೆಸಲು ಪಕ್ಷಗಳು ಮನ ಮಾಡಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top