ರಾಜಕೀಯ ಚಟುವಟಿಕೆಗೆ ವೈರಸ್ ಕಾಟ – ದಾಳ ಉರುಳಿಸುವ ಆಟ ಇಲ್ಲ, ಕಾಲೆಳೆಯುವ ಕಬಡ್ಡಿಯೂ ಇಲ್ಲ, ಏನಿದ್ದರೂ ಟೆಸ್ಟ್ ಮ್ಯಾಚ್ ಪರ್ವ

– ಶಶಿಧರ ಹೆಗಡೆ.
ರಾಜಕೀಯ ಯಾವತ್ತೂ ನಿಂತ ನೀರಲ್ಲ. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲೂ ಇದೊಂದು ವಲಯ ಗತಿಶೀಲವಾಗಿರುತ್ತದೆ. ರಾಜಕಾರಣದೊಂದಿಗೆ ಮಹತ್ವಾಕಾಂಕ್ಷೆಯೂ ತಳುಕು ಹಾಕಿಕೊಂಡಿರುತ್ತದೆ. ಅದು ರಾಜಕಾರಣದಲ್ಲಿ ತೊಡಗಿಸಿಕೊಂಡವರನ್ನು ಚಟುವಟಿಕೆಯಿಂದ ಇಡುತ್ತದೆ. ಇದರ ನಡುವೆ ರಾಜಕಾರಣದಲ್ಲಿ ಧಡಕಿಯಾಗುವುದೂ ಸರ್ವೇಸಾಮಾನ್ಯ. ಪರಸ್ಪರ ಟೀಕೆ, ಟಿಪ್ಪಣಿಯಿಲ್ಲದಿದ್ದರೆ ರಾಜಕಾರಣಿಗಳಿಗೂ ತಿಂದದ್ದು ಪಚನವಾಗುವುದಿಲ್ಲ. ‘ಕುಶಾಲಿ’ಗಾದರೂ ಎದುರಾಳಿಯ ವಿರುದ್ಧ ದೋಷಾರೋಪ ಹೊರಿಸಿ ತಮ್ಮವರ ವಲಯದಲ್ಲಿ ಕುಶಾಲುತೋಪು ಹಾರಿಸದಿದ್ದರೆ ರಾಜಕಾರಣಿಗಳಿಗೆ ನಿದ್ದೆಯೂ ಬಾರದು. ರಾಜಕಾರಣ ಎನ್ನುವುದೇ ಒಂದು ಬಗೆಯ ಮಾಯೆ. ಈ ಮಾಯಾಲೋಕದಲ್ಲಿ ಇರುವವರು ಅಗೋಚರ ಶಕ್ತಿಯನ್ನು ಆವಾಹಿಸಿಕೊಂಡವರಂತೆಯೂ ವರ್ತಿಸುವುದುಂಟು. ರಾಜಕಾರಣಕ್ಕೆ ಕಾಲ, ಋುತುಮಾನದ ಬಂಧನವಿರದು. ಈ ಕ್ಷೇತ್ರದ ಕಾರ್ಯಕರ್ತರು ಸದಾ ಯುದ್ಧ ಸನ್ನದ್ಧರಾಗಿರಬೇಕಾಗುತ್ತದೆ. ‘ಯುದ್ಧಕಾಲೇ ಶಸ್ತ್ರಾಭ್ಯಾಸೇ’ ಎನ್ನುವುದು ರಾಜಕೀಯಕ್ಕೆ ಸುತಾರಾಂ ಹೊಂದುವುದಿಲ್ಲ. ಹಾಗಾಗಿ ರಾಜಕಾರಣದಲ್ಲಿ ಅನುದಿನವೂ ಸಾಮು ಮಾಡುವುದು ಅನಿವಾರ್ಯ. ರಾಜಕಾರಣದ ಗರಡಿ ಮನೆಯನ್ನು ಅನುಕ್ಷಣವೂ ತೆರೆದೇ ಇಡಬೇಕಾಗುತ್ತದೆ. ಆದರೆ, ಕೊರೊನಾ ಬಂದಂದಿನಿಂದ ರಾಜಕಾರಣದ ಪಡಸಾಲೆಗಳಲ್ಲಿ ಒಂದು ಬಗೆಯ ಮೌನ ಆವರಿಸಿದೆ. ಸದ್ದುಗದ್ದಲವೆಬ್ಬಿಸಿ ಸುದ್ದಿಯಾಗುವುದು ರಾಜಕಾರಣಿಗಳ ಮೂಲಭೂತ ಸ್ವಭಾವ ಎಂಬಂತಾಗಿ ಬಿಟ್ಟಿದೆ. ಇದನ್ನು ಪುಷ್ಟೀಕರಿಸುವಂತೆ ಅಲ್ಲೊಬ್ಬರು ಇಲ್ಲೊಬ್ಬರು ರಾಜಕೀಯದ ಕಮಟು ವಾಸನೆ ಬರುವಂತಹ ಹೇಳಿಕೆಯನ್ನು ಈ ಹೊತ್ತಿನಲ್ಲೂ ನೀಡಿದ್ದಿರಬಹುದು. ಅದರ ಹೊರತಾಗಿ ಸರೋವರ ಸ್ವಚ್ಛವಾಗಿದೆ. ಕನ್ನಡಿಯಂತೆ ಪ್ರತಿಬಿಂಬವನ್ನು ತೋರುವ ಸರೋವರಕ್ಕೆ ಕಲ್ಲೆಸೆದು ಓಡಿ ಹೋಗಬೇಕೆಂದುಕೊಂಡವರೂ ಕೆರೆ ದಂಡೆಯ ಬಳಿ ಬರುವುದನ್ನೇ ನಿಲ್ಲಿಸಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಕೊರೊನಾವೆಂದರೆ ನಂಬಬೇಕು. ಪ್ರಾಯಶಃ ರಾಜಕಾರಣದ ಮಾಯೆಯನ್ನು ದಿಗ್ಬಂಧನಕ್ಕೆ ಒಳಪಡಿಸಿ ಕಟ್ಟಿಹಾಕಿರುವ ಕೊರೊನಾವನ್ನು ಈ ದೃಷ್ಟಿಯಲ್ಲಿ ಮಹಾಮಾಯೆ ಎನ್ನುವುದೇ ಸರಿ!

ಏಕಛತ್ರದಡಿ ಭಿನ್ನ ರಾಜಕೀಯ ವಿವಿಗಳು
ರಾಜ್ಯ ರಾಜಕಾರಣದ ಅಖಾಡ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಈ ದೃಷ್ಟಿಯಿಂದಲೂ ರಾಜಕಾರಣಿಗಳು ಹೊಸ ಹೊಸ ಪಟ್ಟುಗಳನ್ನು ಕಾಲಕಾಲಕ್ಕೆ ಕರಗತ ಮಾಡಿಕೊಳ್ಳಬೇಕಾಗುತ್ತದೆ. ತಂತ್ರ-ಪ್ರತಿತಂತ್ರದ ಲೆಕ್ಕಾಚಾರಗಳು ರಾಜಕಾರಣಿಗಳ ತಲೆಯಲ್ಲಿ ಗಿರಕಿ ಹೊಡೆಯುತ್ತ ಇರಬೇಕಾಗುತ್ತದೆ. ಅದನ್ನು ಸಂದರ್ಭಾನುಸಾರ ಬಳಸಬೇಕಾಗುತ್ತದೆ. ನಮ್ಮ ರಾಜಕಾರಣಿಗಳು ರಾಜಕೀಯ ಪರಿಭಾಷೆಯ ಬಿಲ್ವಿದ್ಯಾ ಪಾರಂಗತರೂ ಆಗಿರಬೇಕಾಗುತ್ತದೆ. ಮಲ್ಲಯುದ್ಧಕ್ಕೂ ಸಿದ್ಧರಿರಬೇಕಾಗುತ್ತದೆ. ರಾತ್ರಿ ಕಾಲದಲ್ಲಿ ಯುದ್ಧ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾದರೆ ಬಿಲ್ಲನ್ನು ಹೆದೆಯೇರಿಸಬೇಕಾಗುತ್ತದೆ. ಶಬ್ದವೇದಿ ಬಾಣ ಪ್ರಯೋಗ ಕೌಶಲವೂ ಗೊತ್ತಿರಬೇಕಾಗುತ್ತದೆ. ಜತೆಗೆ ಅದು ತನ್ನ ಗುರಿಯನ್ನು ಕರಾರುವಾಕ್ಕಾಗಿ ತಲುಪಬೇಕು. ಇಲ್ಲದಿದ್ದರೆ ರಾಜಕಾರಣಿಯ ಕಥೆ ಮುಗಿದಂತೆ. ರಾಜಕಾರಣದಲ್ಲಿ ಇಷ್ಟೆಲ್ಲ ನಿಷ್ಣಾತರಾಗಲು ಆ ಮಟ್ಟದ ಚಾತುರ್ಯ, ಪರಿಶ್ರಮದ ಹಿನ್ನೆಲೆ ಅಪೇಕ್ಷಿತ. ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ವಿಶ್ವವಿದ್ಯಾಲಯ’ವನ್ನೇ ತೆಗೆದುಕೊಳ್ಳಿ. ಗೌಡರದ್ದು 24×7 ರಾಜಕಾರಣ. ಅವರದ್ದು ಸದಾ ಸರ್ವದಾ ರಾಜಕೀಯದ ಚಿಂತನ-ಮಂಥನ. ಗೌಡರು ಎಂತಹ ಗುರಿಕಾರರೆಂದರೆ ಅವರು ಬಿಲ್ಲುಹಿಡಿದು ಬಾಣ ಹೂಡಿದ್ದು ಕಣ್ಣಿಗೆ ಕಾಣುವುದಿಲ್ಲ. ಆದರೆ, ದೇವೇಗೌಡರು ಸಂಕಲ್ಪ ಮಾಡಿ ಅದೃಶ್ಯ ಬಾಣ ಪ್ರಯೋಗಿಸಿದರೆಂದರೆ ಅದು ಯಾರದೋ ರಾಜಕೀಯ ಜೀವನವನ್ನು ಆಹುತಿ ತೆಗೆದುಕೊಂಡಿತು ಎಂದೇ ಅರ್ಥ. ಗೌಡರು ತಮ್ಮ ರಾಜಕಾರಣದ ಪಾಕಶಾಲೆಯಲ್ಲಿ ಒಗ್ಗರಣೆ ಹಾಕಿದರೆಂದರೆ ಅದರಿಂದ ಸಿಡಿಯುವ ಒಂದೊಂದು ಸಾಸಿವೆ ಕಾಳುಗಳೂ ಅವರು ದಿಗ್ದರ್ಶನ ಮಾಡಿದ ಕಡೆಯೇ ಹೋಗುತ್ತವೆ. ತಾಗಬೇಕಾದವರಿಗೆ ತಾಗುತ್ತವೆ. ಗೌಡರ ರಾಜಕಾರಣದ ಬಗ್ಗೆ ರಾಜಕೀಯ ವಲಯದಲ್ಲಿ ಇಂತಹ ಮಾತುಗಳು ಜನಜನಿತ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ತಳಮಟ್ಟದಿಂದ ಬೆಳೆದು ಬಂದ ಜನಾನುರಾಗಿ ನಾಯಕ. ರಾಜಕೀಯದ ಅನೇಕ ಪಟ್ಟುಗಳನ್ನು ಪ್ರಯೋಗಿಸಿಯೇ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಮಾತು ಅನ್ವಯ. ವಿವಿಧ ಪಕ್ಷಗಳಲ್ಲಿ ಮುಂಚೂಣಿಯಲ್ಲಿ ಇರುವವರಲ್ಲಿ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದ್ದು ‘ಮಾತೇ ಮಾಣಿಕ್ಯ’ ಎನ್ನುವ ಮನೋಭಾವ. ‘ಮುತ್ತಿನಂತ ಹೇಳಿಕೆ’ ಕೊಡುವ ಮೂಲಕವೇ ಎದುರಾಳಿಗಳನ್ನು ಬೆಚ್ಚಿ ಬೀಳಿಸುವ ಕಲೆ ಕುಮಾರಸ್ವಾಮಿ ಅವರಿಗೆ ಸಿದ್ಧಿಸಿದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿಯವರ ಆಪ್ತ ಸಖ ಎನಿಸಿದ್ದ ಡಿ.ಕೆ.ಶಿವಕುಮಾರರದ್ದು ಡಿಫರೆಂಟು ಸ್ಟೈಲು. ಒಟ್ಟಿನಲ್ಲಿ ಈ ಎಲ್ಲ ರಾಜಕಾರಣಿಗಳದ್ದು ವ್ಯಕ್ತಿ ವಿಶಿಷ್ಟ ಶೈಲಿ ಬೇರೆ ಬೇರೆಯಾದರೂ ಗುರಿ ಮಾತ್ರ ಏಕಮುಖವಾದುದು. ಅಂದರೆ ತಾವು ಪ್ರತಿನಿಧಿಸುವ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವುದು ಹಾಗೂ ವೈಯಕ್ತಿಕವಾಗಿಯೂ ಮಿಂಚುವುದು ಇವರ ಉದ್ದೇಶ. ಆದರೆ, ಕೊರೊನಾ ವಿಪತ್ತಿನಲ್ಲಿ ರಾಜಕಾರಣದ ಈ ಭಿನ್ನ ಭಿನ್ನ ವಿಶ್ವವಿದ್ಯಾಲಯಗಳು ಏಕಛತ್ರದಡಿ ಬಂದಿವೆ. ರಾಜಕಾರಣದ ಹೊಯ್ದಾಟ ಬದಿಗಿಟ್ಟು ಕೋವಿಡ್-19ರ ವಿರುದ್ಧದ ಸಮರದಲ್ಲಿ ಯಶಸ್ಸು ಗಳಿಸುವುದೇ ಸರ್ವಪಕ್ಷಗಳ ಆದ್ಯತೆಯಾಗಿದೆ.

ಕಾಯ್ದು ನೋಡುವ ತಂತ್ರ
ಸದ್ಯಕ್ಕಂತೂ ತಂತ್ರ-ಪ್ರತಿತಂತ್ರದ ರಸವತ್ತಾದ ರಾಜಕಾರಣದ ಅಬ್ಬರವನ್ನು ಅಖಾಡದಲ್ಲಿ ಕಾಣಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೂಡಿಕೆಯಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯೂ ಮುಂದಕ್ಕೆ ಹೋಗುವುದು ನಿಚ್ಚಳ. ವಿಧಾನಸಭೆ ಚುನಾವಣೆ ಸ್ವಲ್ಪ ದೂರದಲ್ಲಿದೆ. ಹಾಗಂತ ರಾಜಕೀಯ ಪಕ್ಷ ದವರು ಕಾಲು ಚಾಚಿಕೊಂಡು ಮಲಗಿ ಹಾಯಾಗಿ ನಿದ್ರಿಸುವಂತಿಲ್ಲ. ಯಾವಾಗ ಬೇಕಾದರೂ ಚುನಾವಣಾ ಯುದ್ಧವೇರ್ಪಡಬಹುದು ಎಂಬ ಲಕ್ಷ್ಯದಲ್ಲಿ ಇರಬೇಕಾಗುತ್ತದೆ. ಗಡಿ ಕಾಯುವ ಸೈನಿಕರಂತೆಯೇ ರೆಡಿಯಿರಬೇಕಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಯುದ್ಧದ ಸ್ವರೂಪವೇ ಬದಲಾಗಿದೆ. ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಬಡಿದಾಡುತ್ತಿದ್ದ ರಾಜಕೀಯ ಪಕ್ಷಗಳೀಗ ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಈ ಪಂಥಾಹ್ವಾನವನ್ನು ಎಲ್ಲಪಕ್ಷಗಳೂ ಸ್ವೀಕರಿಸಿವೆ. ಇದರ ಎದುರು ಆಡಳಿತ-ಪ್ರತಿಪಕ್ಷಗಳೆಂಬ ಗೆರೆ ಮಸುಕಾಗಿದೆ. ಹಾಗಾಗಿ ರಾಜಕೀಯ ಪಕ್ಷ ಗಳು ಪುನರ್‌ ಸಂಘಟನೆಯಲ್ಲಿ ತೊಡಗಲು ಕೊರೊನಾ ವೈರಸ್ ಕದನ ವಿರಾಮ ಘೋಷಿಸಬೇಕಾಗುತ್ತದೆ. ಅದಕ್ಕಾಗಿ ಇನ್ನೂ ಕೆಲವು ತಿಂಗಳು ಕಾಯಬೇಕಾಗಿ ಬರಬಹುದು. ಅಲ್ಲಿಯವರೆಗೆ ಕಾಯ್ದು ನೋಡುವ ತಂತ್ರಕ್ಕೆ ಶರಣಾಗಬೇಕು ಎನ್ನುವುದು ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ಮಂತ್ರವೂ ಆಗಿದೆ. ಹಾಗಾಗಿ ರಾಜಕಾರಣದಲ್ಲೀಗ ಟೆಸ್ಟ್ ಮ್ಯಾಚ್ ಪರ್ವ. ಒನ್‌ಡೇ, ಟಿ20 ಪಂದ್ಯಗಳ ರೋಚಕತೆ ಅನುಭವಿಸಲು ಕಾಲ ಕೂಡಿ ಬರಬೇಕಾಗಿದೆ. ಇನ್ನೊಂದು ಪ್ರಮುಖಾಂಶವೆಂದರೆ ಪಕ್ಷ ದೊಳಗಿನ ಬೇಗುದಿಯೂ ತಣ್ಣಗಾಗಿದೆ. ಸ್ಥಾನಮಾನಗಳಿಗಾಗಿ ಒತ್ತಡ ತರುವವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಗುಂಪುಗಾರಿಕೆಯ ಸಭೆ ಬಂದ್ ಆಗಿದೆ. ಇದೂ ಕೂಡ ರಾಜಕೀಯ ಪಕ್ಷಗಳಿಗೆ ಕೊರೊನಾ ಕೊಟ್ಟ ತಾತ್ಕಾಲಿಕ ರಿಲೀಫ್.

ಬಿಜೆಪಿಗೆ ಹೊಸ ಟೀಮ್ ನಿರೀಕ್ಷೆ
ಪಕ್ಷ ಅಧಿಕಾರದಲ್ಲಿದ್ದಾಗ ಸರಕಾರದ ಕಡೆಯೇ ಹೆಚ್ಚು ಫೋಕಸ್ ಇರುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಸಹಜವಾಗಿ ಸರಕಾರದ ಕಡೆಯೇ ಎಲ್ಲರ ದೃಷ್ಟಿಯಿರುತ್ತದೆ. ಇದರ ಮಧ್ಯೆ ಪಕ್ಷ ಗೌಣವಾಗುವ ಸಾಧ್ಯತೆಯೇ ಹೆಚ್ಚು. ಈ ನಡುವೆಯೂ ಪಕ್ಷದ ಕಚೇರಿಯ ಬಾಗಿಲು ಹಾಕುವಂತಿಲ್ಲವಲ್ಲ? ಸಂಘಟನಾ ಚಟುವಟಿಕೆಯನ್ನು ಚಾಲ್ತಿಯಲ್ಲಿ ಇಟ್ಟಿರಬೇಕಾಗುತ್ತದೆ. ಪಕ್ಷವನ್ನು ಮುನ್ನಡೆಸುವ ‘ಶಾಂತಿಕಾಲದ ಅಧ್ಯಕ್ಷರು’ ಈ ಕೆಲಸವನ್ನಾದರೂ ಅಚ್ಚುಕಟ್ಟಾಗಿ ನಿಭಾಯಿಸಬೇಕಾಗುತ್ತದೆ. ಇಲ್ಲದೇ ಹೋದರೆ ಚುನಾವಣೆ ಹತ್ತಿರವಾದಾಗ ವಿಪರೀತ ಕಸರತ್ತು ನಡೆಸುವ ಸಂದಿಗ್ಧ ಎದುರಾಗುತ್ತದೆ. ಅಂದರೆ ಸರಕಾರ ಇರುವುದರಿಂದ ಅಧಿಕಾರದ ಬೆಲ್ಲದ ರುಚಿಗೆ ಆಕರ್ಷಿತರಾದ ಕಾರ್ಯಕರ್ತರು ಸಂಘಟನೆಯ ಚಟುವಟಿಕೆಯನ್ನು ಮರೆತು ಬಿಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲೂ ಸಂಘಟನಾತ್ಮಕ ಕಾರ್ಯ ಒಂದು ಹದದಲ್ಲಿ ನಡೆಯುತ್ತಿದೆ. ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ಪೂರೈಸಲಾಗಿದೆ. ಜಿಲ್ಲಾ, ಮಂಡಲ, ವಾರ್ಡ್ ಅಧ್ಯಕ್ಷರ ಆಯ್ಕೆಯಾಗಿದೆ. ಆದರೆ, ಅತ್ಯಂತ ಪ್ರಮುಖವಾದ ರಾಜ್ಯ ಘಟಕದಲ್ಲಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಉಪಾಧ್ಯಕ್ಷರು, ವಕ್ತಾರರು, ಮುಂಚೂಣಿ ಘಟಕಗಳ ಪುನಾರಚನೆ ಬಾಕಿಯಿದೆ. ಕೊರೊನೋತ್ತರದಲ್ಲಿ ಬಿಜೆಪಿ ಹೊಸ ಟೀಮ್ ಸಜ್ಜುಗೊಳಿಸುವ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್ ಟೇಕಾಫ್‌ಗೆ ಕೊರೊನಾ ಅಡ್ಡಿ
ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಪ್ರವೇಶವಾಗಿದೆ. ಇದು ಕಾಕತಾಳೀಯವಷ್ಟೇ ಎನ್ನಿ. ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಡಿಕೆಶಿ ಅವರೇನೋ ಸಕ್ರಿಯರಾಗಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರ ಪಡೆ ಸಂಭ್ರಮೋಲ್ಲಾಸದಲ್ಲಿ ತೇಲಾಡುವಂತೆ ಅಧಿಕಾರ ವಹಿಸಿಕೊಳ್ಳಲು ಶಿವಕುಮಾರ ಅವರಿಗೆ ಕೊರೊನಾ ಅಡ್ಡಿ ಬಂದಿದೆ. ಇದರಿಂದಾಗಿ ಕೆಪಿಸಿಸಿಯ ಹೊಸ ಅಧ್ಯಕ್ಷರು ಕಾಂಗ್ರೆಸ್‌ನ ಸಂಪ್ರದಾಯದಂತೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನ ಗಜಗಾತ್ರದ ಪದಾಧಿಕಾರಿಗಳ ಪಟ್ಟಿಯನ್ನು ಬರಖಾಸ್ತುಗೊಳಿಸಲಾಗಿದೆ. ಹಾಗಾಗಿ ಸಂಪೂರ್ಣ ಹೊಸ ತಂಡ ಕಟ್ಟುವ ಸವಾಲು ಶಿವಕುಮಾರ ಹೆಗಲ ಮೇಲಿದೆ. ಕೊರೊನಾ ವಿರಾಮದ ಬಳಿಕವೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

ಜೆಡಿಎಸ್‌ಗೆ ಪುಟಿದೇಳುವ ಆಸೆ
ಮೈತ್ರಿ ಸರಕಾರದ ಪತನದ ಬಳಿಕ ಜೆಡಿಎಸ್‌ನಲ್ಲಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜಿಸಲಾಗಿದೆ. ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಹೊರತಾದವರು ಪಕ್ಷದ ಅಧ್ಯಕ್ಷರಾದರೆ ನಿಭಾಯಿಸುವುದು ಕಷ್ಟ. ಗೌಡರ ಮಕ್ಕಳೇ ಅಧ್ಯಕ್ಷರಾಗಿ ಮುಂದುವರಿದರೆ ಕುಟುಂಬ ರಾಜಕಾರಣದ ಆರೋಪ ಮುಫತ್ತಾಗಿ ಬರುತ್ತದೆ. ಈ ತೊಳಲಾಟದಿಂದ ಹೊರಬರುವುದು ಜೆಡಿಎಸ್‌ಗೆ ಈ ಜನ್ಮದಲ್ಲಿ ಸಾಧ್ಯವಾಗದೆ ಇರಬಹುದು. ಅದೇನೇ ಇದ್ದರೂ ಪಕ್ಷ ದ ಸಂಘಟನೆಗೆ ಮರುಜೀವ ತುಂಬಲು ಕುಮಾರಸ್ವಾಮಿ ಅವರೀಗ ತುಸು ಗಮನ ಹರಿಸಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಕಾರ್ಯಪ್ರವೃತ್ತರಾಗಲು ಶಾಸಕರೊಂದಿಗೆ ವಿಡಿಯೊ ಸಂವಾದ ನಡೆಸಿದ್ದಾರೆ. ಖುದ್ದಾಗಿಯೂ ರಾಮನಗರ ಇನ್ನಿತರ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಮುಂಬರುವ ಚುನಾವಣೆ ಹೊತ್ತಿಗೆ ಪುಟಿದೆದ್ದು ಬರಬೇಕಿದ್ದರೆ ಕೊರೊನೋತ್ತರದಲ್ಲಿ ಜೆಡಿಎಸ್ ಸಂಘಟನೆಯೂ ಚೇತರಿಸಿಕೊಳ್ಳಬೇಕಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top