ರಾಜಕೀಯ ಅಸ್ಪೃಶ್ಯತೆ ತೊಳೆದುಕೊಂಡ ಈಶಾನ್ಯ!

ದೇಶದ ಮತದಾರ ರಾಜಕೀಯ ಪ್ರಬುದ್ಧತೆ ಮೆರೆಯುತ್ತಿದ್ದಾನೆ. ಜಾತಿ, ಮತ, ಪಂಥ, ಪ್ರದೇಶ ಮೀರಿದ ಪ್ರಜ್ಞಾವಂತಿಕೆ ತೋರುತ್ತಿದ್ದಾನೆ. ಹೀಗಾಗಿ ಕೋಮುವಾದಕ್ಕೆ ವಿರೋಧ, ಸೆಕ್ಯುಲರ್ ಸಿದ್ಧಾಂತದ ಪರ ಇತ್ಯಾದಿಗಳ ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ತಿರಸ್ಕರಿಸುತ್ತಿದ್ದಾನೆ. ಇದಕ್ಕೆ ಉತ್ತಮ ಉದಾಹರಣೆ ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ.

ಭಾರತದಲ್ಲಿ ಹಿಂದೆ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು ಎಂಬುದನ್ನು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಕಾಲಾನಂತರದಲ್ಲಿ ಅಂಥ ಪದ್ಧತಿಗಳಿಗೆ ನಮ್ಮವರು ತಿಲಾಂಜಲಿ ಇಡುತ್ತ ಬಂದರು. ಅಂಥ ಅನಿಷ್ಟಗಳಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಒಂದು. ಸ್ವಾತಂತ್ರ್ಯ ಬರುವ ಪೂರ್ವದಲ್ಲೇ ಅದನ್ನು ನಾವು ತಿರಸ್ಕರಿಸಿದೆವು. ಸ್ವಾತಂತ್ರಾ್ಯ ನಂತರ ಅದೇ ಅಸ್ಪೃಶ್ಯತೆ ಆಚರಣೆಯನ್ನು ಕಾಯಿದೆಬದ್ಧವಾಗಿ ತೊಡೆದುಹಾಕಲು ಕ್ರಮವನ್ನೂ ತೆಗೆದುಕೊಂಡೆವು. ಈ ಕೊಳೆಯನ್ನು ತೊಳೆಯುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಪಾತ್ರ ಬಹಳ ದೊಡ್ಡದು. ಆದರೆ ಯಾವ ರಾಜಕೀಯ ವ್ಯವಸ್ಥೆಯ ಮೂಲಕ ಅಸ್ಪೃಶ್ಯತೆ ಯನ್ನು ಅಪರಾಧ ಎಂದು ಪರಿಗಣಿಸಲಾಯಿತೋ, ಅದೇ ವ್ಯವಸ್ಥೆಯಲ್ಲೇ ರಾಜಕೀಯ ಅಸ್ಪೃಶ್ಯತೆಯ ನಿನ್ನೆ ಮೊನ್ನೆಯವರೆಗೂ ಮುಂದುವರಿಸಿಕೊಂಡು ಬರಲಾಯಿತು. ಆದರೆ ಇನ್ನು ಇಂಥ ಆಟ ನಡೆಯಲಾರದು ಎನ್ನುವ ಸ್ಪಷ್ಟ ಸೂಚನೆ ಈಗ ಗೋಚರಿಸತೊಡಗಿದೆ.

ಇತ್ತೀಚೆಗೆ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶದ ಬೆಳಕಿನಲ್ಲಿ ಈ ಮೇಲಿನ ವಿಶ್ಲೇಷಣೆಯನ್ನು ಗಮನಿಸಿದರೆ ಹೆಚ್ಚು ಸರಳವಾಗಿ ಅರ್ಥವಾದೀತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಸರಳ ಬಹುಮತವನ್ನು ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ನಂತರದಲ್ಲಿ ಆ ಪಕ್ಷ ದೇಶದ ಹತ್ತೊಂಭತ್ತು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅದರಲ್ಲೂ ವಿಶೇಷವಾಗಿ ಶೇ.90ರಷ್ಟು ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರದಲ್ಲೂ ಆ ಪಕ್ಷ ಸರ್ಕಾರದಲ್ಲಿ ಪಾಲುದಾರ ಆಯಿತು. ಆದರೂ ಆ ಪಕ್ಷವನ್ನು ಒಂದು ವರ್ಗ, ವಿಚಾರ, ಪ್ರದೇಶಕ್ಕೆ ಸೀಮಿತಗೊಳಿಸುವ ಸ್ಥಾಪಿತ ಆಲೋಚನೆಯ ತೀರ್ವನದಲ್ಲಿ ಹೆಚ್ಚು ಬದಲಾವಣೆ ಗೋಚರಿಸಲಿಲ್ಲ. ಆದರೆ ಆ ಎಲ್ಲ ವ್ಯಾಖ್ಯಾನಗಳಿಗೆ ಈಶಾನ್ಯದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಸಂಪೂರ್ಣ ತೆರೆ ಎಳೆಯಬಹುದು ಎಂದು ನಿರೀಕ್ಷಿಸಬಹುದು.

ಹಿಂದಿ ಮತ್ತು ಹಿಂದೂ ಪಕ್ಷವೇ: ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡದ ಪ್ರಕಾರ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ರಾಷ್ಟ್ರೀಯ ಪಕ್ಷಗಳಿವೆ. ಸಮಾಜವಾದಿ ಪಕ್ಷ, ಬಿಎಸ್ಪಿ ಇವೆಲ್ಲ ಆ ಸಾಲಿನಲ್ಲಿ ಬರುವಂಥವೇ. ಅದು ಒಂದು ರೀತಿಯ ಹಾಸ್ಯಾಸ್ಪದ ಸಂಗತಿಯೂ ಹೌದು. ಆದರೆ ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ನಂತರವೂ, ಹತ್ತೊಂಭತ್ತು ರಾಜ್ಯಗಳಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದ ನಂತರವೂ ಬಿಜೆಪಿಯನ್ನು ಹಿಂದಿ ಭಾಷಿಕ ಪ್ರದೇಶದ ಪಕ್ಷ, ಹಿಂದುವಾದಿಗಳ ಪಕ್ಷ, ನಗರಪ್ರದೇಶಕ್ಕೆ ಸೀಮಿತವಾದ ಪಕ್ಷ ಎಂದೇ ಬ್ರಾಂಡ್ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಚುನಾವಣೆ ನಡೆದ ಈಶಾನ್ಯದ ಮೂರು ರಾಜ್ಯಗಳ ಪೈಕಿ ಮೂರೂ ಕಡೆ ಬಿಜೆಪಿ ಸರ್ಕಾರ ರಚಿಸಿರುವುದು ಈ ಸ್ಥಾಪಿತ ಹೇಳಿಕೆಗೆ ಅಥವಾ ಬ್ರಾಂಡಿಂಗ್ ಪ್ರವೃತ್ತಿಗೆ ವಿದಾಯ ಹೇಳಲು ಕಾರಣ ಆಗಬಹುದು ಎಂದು ಭಾವಿಸೋಣ.

ಇಲ್ಲಿ ಇನ್ನೂ ಒಂದು ಸಂಗತಿಯನ್ನು ಸ್ಪಷ್ಟಪಡಿಸಲೇಬೇಕು. ಈ ಖಚಿತ ಅಭಿಪ್ರಾಯದ ಪರಿಣಾಮ ನಾನು ಬಿಜೆಪಿ ಪರವಾದಿ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ಏಕೆಂದರೆ ಇಲ್ಲಿನ ಚರ್ಚೆ ರಾಜಕೀಯ ಅಸ್ಪೃಶ್ಯತೆ ಕುರಿತಾದದ್ದು. ಈ ರೀತಿ-ನೀತಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷವೂ ಅನುಸರಿಸಬಾರದು. ಚುನಾವಣಾ ಸೋಲು ಮತ್ತು ಗೆಲುವು ಬೇರೆ ವಿಚಾರ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬಾರದು ಎಂಬುದು ಒಟ್ಟು ತಾತ್ಪರ್ಯ. ಇದೇ ಮಾತನ್ನು 2014ರ ಲೋಕಸಭಾ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಪಕ್ಷದ ಕುರಿತಾಗಿಯೂ ಬರೆದಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ಈ ರೀತಿ ದುರ್ಬಲ ಆಗುವುದು ಒಳ್ಳೆಯದಲ್ಲ ಎಂದೇ ಹೇಳಿದ್ದೆ. ಇದೊಂದು ಸಾಂರ್ದಭಿಕ ಉಲ್ಲೇಖ ಮಾತ್ರ.

ಇರಲಿ, ಈಶಾನ್ಯದ ರಾಜ್ಯಗಳ ಚುನಾವಣೆ ಫಲಿತಾಂಶಕ್ಕೇ ಬರೋಣ. ಒಂದು ಗಮನಾರ್ಹ ಸಂಗತಿಯೆಂದರೆ ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ, ಮಿಜೋರಾಂ ಒಂದನ್ನು ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಿದೆ ಅಥವಾ ಮಿತ್ರಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಿದೆ. ಆ ಎಲ್ಲ ರಾಜ್ಯಗಳಲ್ಲಿ ಹಿಂದೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳಿದ್ದವು. ಈಗ ಕಾಂಗ್ರೆಸ್ ಪಾಲಿಗೆ ಉಳಿದಿರುವ ದೊಡ್ಡ ರಾಜ್ಯವೆಂದರೆ ಕರ್ನಾಟಕ ಮಾತ್ರ. ಮುಂಬರುವ ಚುನಾವಣೆ ನಂತರ ಕರ್ನಾಟಕದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆಂಬುದು ಯಾರಿಗೂ ಗೊತ್ತಿಲ್ಲ. ಉಳಿದಂತೆ ಪಂಜಾಬ್​ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದೂ ಕೂಡ ಅಮರಿಂದರ್ ಕಾಂಗ್ರೆಸ್ಸೇ ಹೊರತು ರಾಹುಲ್ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಅಲ್ಲ. ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವಿದೆ ನಿಜ, ಆದರೆ ಅದ್ಯಾವ ಲೆಕ್ಕ. ಇನ್ನು ಕಮ್ಯುನಿಸ್ಟರ ಪಾಲಿಗೆ ಅಳಿದುಳಿದಿರುವುದು ಕೇರಳ ಮಾತ್ರ. ಹಾಗಾದರೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಏನಂತ ಬ್ರಾಂಡ್ ಮಾಡೋಣ? ಇತಿಹಾಸಕ್ಕೆ ಸೇರುತ್ತಿರುವ ಪಕ್ಷಗಳು ಎನ್ನೋಣವೇ? ಈಗಲೂ ತಪ್ಪನ್ನು ತಿದ್ದಿಕೊಳ್ಳದೇ ಹೋದರೆ, ಅರ್ಥಾತ್ ಕಾಂಗ್ರೆಸ್ ಪಕ್ಷ ಓಲೈಕೆ ನೀತಿಯನ್ನು ಕೈಬಿಡದಿದ್ದರೆ, ಜನರ ನಾಡಿಮಿಡಿತವನ್ನು ಅರಿಯದೆ ಅದೇ ಒಣ ಭಂಡತನದಿಂದ ಸೆಕ್ಯುಲರ್ ಭಜನೆ ಮಾಡುತ್ತ ಹೋದರೆ, ಕಮ್ಯುನಿಸ್ಟ್ ಪಕ್ಷಗಳು ಕಾಯಾ-ವಾಚಾ-ಮನಸಾ ಭಾರತೀಯಕರಣಗೊಳ್ಳದೇ ಹೋದರೆ ಈ ಪಕ್ಷಗಳ ಅಳಿವನ್ನು ಯಾರು ತಾನೆ ತಪ್ಪಿಸಲು ಸಾಧ್ಯ.?!

ಅದೇನೆ ಇರಲಿ, ಈಶಾನ್ಯದ ಚುನಾವಣಾ ಫಲಿತಾಂಶವನ್ನು ಈ ಕೆಳಗಿನ ಕೆಲ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡೋಣ.

ಅಲ್ಪಸಂಖ್ಯಾತರು/ಬುಡಕಟ್ಟು ಜನರು ಬದಲಾವಣೆ ಬಯಸಿದ್ದೇಕೆ?: ವಾಸ್ತವದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಸೆಕ್ಯುಲರ್ ಪಕ್ಷಗಳಿಗೆ ಗುಡ್ ಬೈ ಹೇಳುವ ಪ್ರವೃತ್ತಿಯನ್ನು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಶುರುಮಾಡಿದ್ದರು. ಆ ಚುನಾವಣೆಯಲ್ಲಿ ಶೇ.8ರಷ್ಟು ಮುಸ್ಲಿಂ ಮತದಾರರು ಬಿಜೆಪಿ ಕಡೆಗೆ ವಾಲಿದ್ದರು. ಅದು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತಷ್ಟು ನಿಚ್ಚಳವಾಯಿತು. ಆಗ ಉಪ್ರದಲ್ಲಿ ಶೇ.12 ರಿಂದ ಶೇ.15ರಷ್ಟು ಮುಸ್ಲಿಂ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರು. ಅದಕ್ಕೇ ಅಲ್ಲವೇ ಅಲ್ಲಿನ 120 ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ 90ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಳ್ಳಲು ಸಾಧ್ಯವಾದದ್ದು? ಮುಸ್ಲಿಂ, ಕ್ರೈಸ್ತ ಅಥವಾ ಇನ್ನಾವುದೇ ಜಾತಿಗೆ ಸೇರಿದ ವ್ಯಕ್ತಿ ಕಳೆದ 70 ವರ್ಷದಲ್ಲಿ ನಮಗೇನು ಸಿಕ್ಕಿದೆ, ಉತ್ತಮ ಶಿಕ್ಷಣ, ಅಗತ್ಯ ಆರೋಗ್ಯ ಸೇವೆ, ಜೀವನ ನಿರ್ವಹಣೆಗೆ ಬೇಕಾದ ಉದ್ಯೋಗ, ವಸತಿ ಏನಾದರೂ ಸಿಕ್ಕಿದೆಯೇ? ನಮ್ಮನ್ನೇಕೆ ಮುಖ್ಯವಾಹಿನಿಯಿಂದ ಸದಾ ದೂರವಿರಿಸುವ ಪ್ರಯತ್ನವನ್ನು ಈ ಸ್ವಘೊಷಿತ ಸೆಕ್ಯುಲರ್ ಪಕ್ಷಗಳು ಮಾಡುತ್ತಿವೆ ಎಂದು ಗಟ್ಟಿಯಾಗಿ ಯಾವಾಗ ಆಲೋಚನೆ ಮಾಡಲು ಶುರು ಮಾಡುತ್ತಾರೋ ಆಗ ಅದೇ ಅಲ್ಪಸಂಖ್ಯಾತರು ಈ ಸೆಕ್ಯುಲರ್ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸಲು ಶುರು ಮಾಡುತ್ತಾರೆ. ಅಂತಹ ಸ್ಪಷ್ಟ ಮುನ್ಸೂಚನೆ ಈಶಾನ್ಯ ರಾಜ್ಯಗಳಲ್ಲಿ ಈಗ ಕಂಡುಬಂದಿದೆ.

ತ್ರಿಪುರಾ ಕಳೆದ 25 ವರ್ಷಗಳಿಂದ ಕಮ್ಯುನಿಸ್ಟರ ಬಿಗಿ ಹಿಡಿತದಲ್ಲಿದ್ದ ರಾಜ್ಯ. ಬುಡಕಟ್ಟು ಜನರು, ಕ್ರೈಸ್ತರು ನಿರ್ಣಾಯಕರು. ಒಂದು ವಾರದ ಹಿಂದಿನ ಸ್ಥಿತಿ ನೋಡಿದರೆ ಆ ರಾಜ್ಯದಲ್ಲಿ ಬಿಜೆಪಿಯ ಓರ್ವ ಕೌನ್ಸಿಲರ್ ಕೂಡ ಇರಲಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಶೇ.1.5ರಷ್ಟು ಮತಗಳನ್ನು ಮಾತ್ರ. ಅಲ್ಲಿನ ವಿಧಾನಸಭೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಶೂನ್ಯದಿಂದ 35 ಸ್ಥಾನಗಳಿಗೆ ಜಿಗಿತ. 43% ಮತಗಳಿಕೆ. ಈ ಫಲಿತಾಂಶ ಹೇಗೆ ಬಂತು? ತ್ರಿಪುರಾದಲ್ಲಿ ಮತದಾರರು ಒಂದು ಖಚಿತ ಸಂದೇಶ ರವಾನಿಸಿದ್ದಾರೆ. ಅದೇನೆಂದರೆ ಸರಳತೆ ಹೆಸರಿನಲ್ಲಿ ನಮಗೆ ದುರ್ಭಿಕ್ಷ ಬೇಡ, ನೀವು ಆಲೋಚನೆ ಬದಲಿಸಿಕೊಳ್ಳಿ, ಕಾರ್ಯಶೈಲಿ ಬದಲಿಸಿಕೊಳ್ಳಿ, ನಮಗೂ ಉತ್ತಮ ಜೀವನ ಕೊಡಿ, ನೀವೂ ಉತ್ತಮವಾಗಿ ಜೀವನ ಮಾಡಿ ಎಬುದು.

ನಾಗಾಲ್ಯಾಂಡ್ ಫಲಿತಾಂಶ ಇನ್ನೂ ವಿಶೇಷ. ಅಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರು. ಅಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಹಿಂದಿನ ಚುನಾವಣೆಯಲ್ಲಿ ಆ ಪಕ್ಷದ ಮತಗಳಿಕೆ ಪ್ರಮಾಣ ಶೇ. 1.8 ಮಾತ್ರ. ಈ ಸಾರಿ ಅದು ಶೇ.15.3ಕ್ಕೆ ಏರಿತು. ಹಾಗಾದರೆ ಹಿಂದಿ ಮತ್ತು ಹಿಂದು ಪಕ್ಷವನ್ನು ನಾಗಾಲ್ಯಾಂಡಿನ ಮುಸ್ಲಿಮರೇಕೆ ಕೈಹಿಡಿದರು?

ಮೇಘಾಲಯದಲ್ಲೂ ಪರಿಸ್ಥಿತಿ ಭಿನ್ನವೇನಲ್ಲ. ಅಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಶೇ.1.3ರಿಂದ ಶೇ.9.6ಕ್ಕೆ ಏರಿಕೆಯಾಗಿದೆ. ಎಲ್ಲದಕ್ಕಿಂತ ಆಘಾತಕಾರಿ ತ್ರಿಪುರಾ ಮತ್ತು ನಾಗಾಲ್ಯಾಂಡಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯಕ್ಕೆ ಕುಸಿದದ್ದು. ನಿರಂತರವಾಗಿ ಕಮ್ಯುನಿಸ್ಟರನ್ನು,ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದ ಮುಸ್ಲಿಮರಿಗೆ, ಕ್ರೈಸ್ತರಿಗೆ, ಬುಡಕಟ್ಟು ಜನರಿಗೆ ವಾಸ್ತವ ಅರ್ಥ ಆಗಿರಲೇಬೇಕಲ್ಲವೇ?

ಆರೆಸ್ಸೆಸ್ ಪರಿಶ್ರಮಕ್ಕೆ ಫಲ: ಇಲ್ಲಿಯವರೆಗೆ ತ್ರಿಪುರಾ, ನಾಗಾಲ್ಯಾಂಡ್​ನಲ್ಲಿ ಆರೆಸ್ಸೆಸ್​ನ ನೂರಾರು ಕಾರ್ಯಕರ್ತರು ಕಮ್ಯುನಿಸ್ಟರ ಕ್ರೌರ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆರೆಸ್ಸೆಸ್ ಆಯಕಟ್ಟಿನ ಈಶಾನ್ಯದ ರಾಜ್ಯಗಳಲ್ಲಿ ಜಾತಿ,ಮತ,ಪಂಥವನ್ನು ಮೀರಿದ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಕೈಬಿಡದೆ ನಿರಂತರವಾಗಿ ಮುನ್ನಡೆಸಿಕೊಂಡು ಬಂತು. ಆ ಪರಿಶ್ರಮದ ಫಲ ಈ ಚುನಾವಣೆ ಫಲಿತಾಂಶದ ರೂಪದಲ್ಲಿ ವ್ಯಕ್ತವಾಗಿದೆ.

ಮೃದು ಹಿಂದುತ್ವದ ಬ್ಲ್ಯಾಕ್​​ವೆುೕಲ್ ತಂತ್ರವೇ?:ಇದನ್ನು ಸ್ವಘೊಷಿತ ಸೆಕ್ಯುಲರ್ ವಾದಿಗಳ ಕೊನೆ ಅವತಾರ ಎಂದರೆ ತಪ್ಪಾಗಲಾರದು. ಇಲ್ಲಿ ಹಿಂದುತ್ವದ ಕಡೆಗೆ ವಾಲುವುದಕ್ಕಿಂತ ಹೆಚ್ಚಾಗಿ, ಸೆಕ್ಯುಲರ್ ಪಕ್ಷಗಳು ಮೃದು ಹಿಂದುತ್ವದ ಕಾರ್ಡ್ ಮೂಲಕ ನೀವು ಕೈಬಿಟ್ಟರೆ ನಾವೂ ಕೈಬಿಡುತ್ತೇವೆ ಎನ್ನುವ ಮೃದು ಆಘಾತವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲು ಹೊರಟಂತಿದೆ. ಇದನ್ನು ನಾವು ಬ್ಲಾ್ಯಕ್​ವೆುೕಲ್ ಅಂತ ನಾವು ಕರೆಯೋಣವೇ?

ಸ್ವಾಮಿ, ಜನತೆಗೆ ಬೇಕಿರುವುದು ಮೃದು ಅಥವಾ ಕಠಿಣ ಹಿಂದುತ್ವವಲ್ಲ. ಸಾಂಸ್ಕೃತಿಕ ತಳಹದಿ ಮೇಲೆ ನಿರ್ವಣವಾಗುವ ಉತ್ತಮ ಜೀವನ ಮಾತ್ರ. ಸೆಕ್ಯುಲರ್ ಪಕ್ಷಗಳಿಗೆ, ಕಮ್ಯುನಿಸ್ಟರಿಗೆ ಇದು ಅರ್ಥವಾಗಬೇಕು ತಾನೆ?

ಒಂದು ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ತ್ರಿರಾಜ್ಯಗಳ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೇರಳದಿಂದ ತ್ರಿಪುರದವರೆಗೆ ನಡೆಯುತ್ತಿರುವ ಕಮ್ಯುನಿಸ್ಟ್ ಕ್ರೌರ್ಯವನ್ನು ಉಲ್ಲೇಖಿಸಿ ಹೇಳಿದ್ದು, ‘ಚೋಟ್ ಕಾ ಜವಾಬ್ ವೋಟ್’ (ಶಸ್ತ್ರ ಹಿಡಿದು ದಾಳಿ ಮಾಡುವವರಿಗೆ ಮತದಾನದ ಪ್ರತ್ಯಸ್ತ್ರವನ್ನು ಝುಳಪಿಸಿ ಅಂತ ಅದರ ಅರ್ಥ). ಪರಿಣಾಮ ಏನಾಯಿತು? ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಫಲಿತಾಂಶ ಕಂಡು ಮೋದಿ ಮತ್ತೊಂದು ಉದ್ಗಾರ ತೆಗೆದಿದ್ದರು. ಮತ ಎಣಿಕೆ ಹಿಂದಿನ ದಿನ ಆ ರಾಜ್ಯಗಳಲ್ಲಿ ಕೆಂಪು ಸೂರ್ಯ ಮುಳುಗಿ ಕೇಸರಿ ಸೂರ್ಯ ಉದಯಿಸಿದ ಎಂದು. ಇಲ್ಲಿ ಕೇಸರಿಯನ್ನು ತ್ಯಾಗ, ಬದಲಾವಣೆ ಅಂತ ತೆಗೆದುಕೊಳ್ಳೋಣ.

ಕೊನೆಯದಾಗಿ ಒಂದು ಮಾತು. ಪಕ್ಷಗಳಿಗೆ ಸಿದ್ಧಾಂತ ಬೇಕು. ಅದು ದೇಶಹಿತಕ್ಕೆ ಪೂರಕವಾಗಿರಬೇಕು. ಆದರೆ ಕೇವಲ ಸಿದ್ಧಾಂತವೊಂದೇ ಸದಾಕಾಲ ಪಕ್ಷದ ಹಿತವನ್ನು ಕಾಯದು. ಜನಹಿತಕ್ಕೆ ಪೂರಕವಾಗಿ ಉತ್ತಮ ಆಡಳಿತವನ್ನೂ ನಡೆಸಬೇಕು. ಇದು ಬಿಜೆಪಿ ಆದಿಯಾಗಿ ಎಲ್ಲ ಪಕ್ಷಗಳಿಗೂ ಅನ್ವಯಿಸುವ ಮಾತು. ಮತದಾರನಿಗೆ ಯಾವ ಪಕ್ಷವೂ ಸಾರ್ವಕಾಲಿಕ ಸಹ್ಯವಲ್ಲ, ಯಾವ ಪಕ್ಷವೂ ಅಸ್ಪೃಶ್ಯವಲ್ಲ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top