ರಾಜಕಾರಣದಲ್ಲಿ ಜಾತಿ ಸಮೀಕರಣವೇ ಎಲ್ಲ

ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡಿಕೊಳ್ಳಲು ಇತ್ತೀಚಿನ ಪರಿಷತ್ ಚುನಾವಣೆಯೂ ಅನುಕೂಲಕ್ಕೆ ಬಂತು. ಅದರ ಜೊತೆಗೆ ಮುನಿಯಪ್ಪ, ಮೊಯ್ಲಿ, ಪರಮೇಶ್ವರ್, ಖರ್ಗೆ ತವರಲ್ಲಿ ಕಾಂಗ್ರೆಸ್​ಗೆ ಆದ ಹಿನ್ನಡೆ ದಲಿತ ಸಿಎಂ ಗದ್ದಲವನ್ನು ಬದಿಗೆ ಸರಿಸಿತು.

MODImay1328siddu1ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ ಹೀಗೂ ಉಂಟೇ ಅಂತ! ರಾಜಕೀಯದಲ್ಲಾದರೆ ಜಾತಿಗೀತಿ ಲಾಬಿ ಎಲ್ಲ ಮಾಮೂಲು. ಬರಬರುತ್ತ ಅದು ಹೆಚ್ಚಾಗುತ್ತ ಹೋಗುತ್ತದೆಯೇ ಹೊರತೂ ಕಡಿಮೆ ಆಗುವ ಲಕ್ಷಣಗಳು ಯಾವ ರೀತಿಯಿಂದ ನೋಡಿದರೂ ಕಾಣಿಸುತ್ತಿಲ್ಲ. ಆದರೆ ನಮಗೆ ಅಚ್ಚರಿ ಆಗುವುದು ಪ್ರತಿಷ್ಠಿತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಸಂದರ್ಭದಲ್ಲೂ ಜಾತಿಯ ಮಾನದಂಡ ಮುಂದುಮಾಡಲಾಗುತ್ತಿದೆಯಲ್ಲ ಎಂಬುದಕ್ಕಾಗಿ. ಕೌಶಿಕ್ ಮುಖರ್ಜಿ ನಿವೃತ್ತಿ ಆಗುತ್ತಾರೆ ಎಂದಾಗ ಆದದ್ದು ಹೀಗೇನೆ. ಕೆಲ ದಲಿತ ಸಂಘಟನೆಗಳು ಹಿರಿಯ ಐಎಎಸ್ ಅಧಿಕಾರಿ ರತ್ನಪ್ರಭ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಬೇಕೆಂದು ಒತ್ತಾಯಿಸತೊಡಗಿದವು. ಅದರ ಬೆನ್ನಲ್ಲೇ ವೀರಶೈವ ಸಂಘಟನೆಯೊಂದು ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ವಿ.ಉಮೇಶ್ ಅವರನ್ನು ಈ ಸ್ಥಾನಕ್ಕೆ ನೇಮಿಸಬೇಕೆಂಬ ಬಿನ್ನಹ ಮುಂದಿಟ್ಟಿತು. ಅವರನ್ನು ನೇಮಕ ಮಾಡುವುದರಿಂದ ಉಪೇಕ್ಷೆಗೀಡಾದ ಆ ವರ್ಗಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂಬುದು ಆ ಸಂಘಟನೆಯ ವಾದವಾಗಿತ್ತು. ವಾಸ್ತವದಲ್ಲಿ ರತ್ನಪ್ರಭ ಮತ್ತು ವಿ. ಉಮೇಶ್ ಇಬ್ಬರೂ ಸ್ವ ಸಾಮರ್ಥ್ಯದಿಂದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ಅರ್ಹತೆ ಉಳ್ಳವರೇ ಆಗಿದ್ದರು. ಆದರೆ ಈ ರೀತಿ ಲಾಬಿಯಿಂದಾಗಿ ಚರ್ಚೆ ಬೇರೆ ದಿಕ್ಕನ್ನು ಹಿಡಿಯಿತು.

ವಾಸ್ತವದಲ್ಲಿ ನಮ್ಮ ಕಾರ್ಯಾಂಗ ವ್ಯವಸ್ಥೆಯಲ್ಲಿ ಯಾರು ರಾಜ್ಯದ ಪೊಲೀಸ್ ಮುಖ್ಯಸ್ಥರಾಗಬೇಕು, ಯಾರು ಮುಖ್ಯ ಕಾರ್ಯದರ್ಶಿ ಆಗಬೇಕು, ಯಾರು ಸಂಪುಟ ಕಾರ್ಯದರ್ಶಿ ಆಗಬೇಕು ಎಂಬುದಕ್ಕೆಲ್ಲ ಒಂದು ನಿರ್ದಿಷ್ಟ ರೀತಿನೀತಿ, ಸಂಪ್ರದಾಯ, ವಿವೇಚನಾ ಕ್ರಮ ಎಲ್ಲವೂ ಇವೆ. ಆ ಪ್ರಕ್ರಿಯೆಗೆ ಅದರದ್ದೇ ಆದ ಘನತೆ ಮತ್ತು ಗಾಂಭೀರ್ಯವಿದೆ. ಕೆಲವೊಂದು ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ ಸಂಪುಟ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರಗಳಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೆಲ ಕಿರಿಯ ಅಧಿಕಾರಿಗಳನ್ನು ಹುಡುಕಿ ತೆಗೆದು ನೇಮಕ ಮಾಡಿದ ಉದಾಹರಣೆಗಳೂ ಇವೆ. ಅದಕ್ಕೆ ಅರ್ಹತೆ ಮತ್ತು ಸರ್ಕಾರದ ಆದ್ಯತೆಯ ಮಾನದಂಡ ಕಾರಣವಾಗಿತ್ತೇ ಹೊರತೂ ಇಂಥ ಜಾತಿ ಕಾರಣಗಳಿಗಾಗಿ ಅಲ್ಲ.

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬ ವಿಚಾರದಲ್ಲಿ ಆದ ಈ ಅನಿರೀಕ್ಷಿತ ಬೆಳವಣಿಗೆಯ ಪರಿಣಾಮವಾಗಿ ಸರ್ಕಾರ ವಿವಾದದಿಂದ ದೂರ ಉಳಿಯುವ ಜಾಣನಡೆ ಪ್ರದರ್ಶಿಸಿತು. ಸೇವಾಜ್ಯೇಷ್ಠತೆ ಆಧಾರದಲ್ಲೇ ನೇಮಕ ಮಾಡಲು ತೀರ್ವನಿಸಿತು. ಹೀಗಾಗಿ ಇನ್ನು ಕೇವಲ ಆರು ತಿಂಗಳು ಸೇವಾವಧಿ ಇರುವ ಅರವಿಂದ ಜಾಧವ್ ಅವರನ್ನು ನೇಮಕ ಮಾಡಿ ವಿವಾದಕ್ಕೆ ತೆರೆ ಎಳೆಯಿತು. ಏಕೆಂದರೆ ಈ ಜಾತಿ ಸಮೀಕರಣದ ಒಳಸುಳಿಯ ಲಾಭ-ನಷ್ಟದ ಪರಿಣಾಮ ಎಲ್ಲರಿಗಿಂತ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತು. ಅವರು ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಸುತಾರಾಂ ತಯಾರಿರಲಿಲ್ಲ ಅಂತ ತೋರುತ್ತದೆ. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಿಗೆ ಒಂದೇ ವರ್ಗ, ಒಂದೇ ಜಾತಿಯ ಅಧಿಕಾರಿಗಳನ್ನು ತಂದು ಕೂಡ್ರಿಸುತ್ತಿದ್ದಾರೆಂಬ ಬಲವಾದ ಅಪವಾದದ ನಡುವೆಯೇ ಮತ್ತೊಂದು ವಿವಾದ, ಅಪವಾದಕ್ಕೆ ಆಸ್ಪದ ಕೊಡಲು ಮಖ್ಯಮಂತ್ರಿ ತಯಾರಾಗಲಿಲ್ಲ ಎನಿಸುತ್ತದೆ. ಒಟ್ಟಿನಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ಹಗುರವಾಗಿ ನಿವಾರಿಸಿಕೊಂಡಂತಾಯಿತು.

ಈ ಜಾತಿಬಾಧೆ ಇಲ್ಲಿ ಮಾತ್ರ ಅನ್ನುವ ಹಾಗಿಲ್ಲ. ಹೌದೋ ಅಲ್ಲವೋ ನೋಡಿ. ‘ಅಭಿವೃದ್ಧಿ ಮತ್ತು ಅಚ್ಛೇ ದಿನ್’ ಸಂಕಲ್ಪದೊಂದಿಗೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ಅವರೇ ಜಾತಿ ಹಿನ್ನೆಲೆಯ ಬಗ್ಗೆ ಮಾತಾಡುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ದರೇನು? ಹೆಚ್ಚೆಂದರೆ ಅಂದು “ಚಾಯ್ವಾಲಾ”-ಇಂದು ”ದೇಶ್ ಚಲಾನೇವಾಲಾ” ಎಂಬ ಹೇಳಿಕೆಯನ್ನು ಮಾತ್ರ ಮೋದಿ ವಿಷಯದಲ್ಲಿ ಕೇಳಿದ್ದರು. ಮೋದಿ ಆಡಿದ ಆ ಮಾತಿನಿಂದ ಇಡೀ ದೇಶಕ್ಕೆ ದೇಶ ಒಮ್ಮೆ ಹೆಮ್ಮೆಪಟ್ಟಿತ್ತು ಕೂಡ. ಪ್ರಧಾನಿ ಪದವಿ ಒಂದು ಕುಟುಂಬಕ್ಕೆ ಮಾತ್ರ ಸೀಮಿತ ಎಂಬಂತಿದ್ದ ದೇಶದಲ್ಲಿ ಚಹಾ ಮಾರುವ ಹುಡುಗ ಕೂಡ ಸ್ವ ಸಾಮರ್ಥ್ಯದಿಂದ ಆ ಸ್ಥಾನಕ್ಕೆ ಏರಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ಜನ ಏಕಕಾಲಕ್ಕೆ ಖುಷಿ ಮತ್ತು ಅಭಿಮಾನಪಟ್ಟಿದ್ದರು. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ತಮ್ಮ ಜಾತಿ ಹಿನ್ನೆಲೆಯನ್ನು ನೆನೆದು ಹಳೆಯ ಕಹಿನೆನಪುಗಳನ್ನು ಮೆಲುಕು ಹಾಕಿದರು ಮೋದಿ. “ಹಿಂದುಳಿದ ಜಾತಿಯವರ ಕಷ್ಟ ನನಗೂ ಚೆನ್ನಾಗಿ ಗೊತ್ತು. ನಾನೂ ಸಾಕಷ್ಟು ಅವಮಾನ ಅನುಭವಿಸಿದ್ದೇನೆ. ದುಃಖ ನುಂಗಿಕೊಂಡಿದ್ದೇನೆ” ಅಂತ ಹೇಳಿದರು. ಎಲ್ಲ ಸಂದರ್ಭಗಳಲ್ಲೂ ರಾಜಕೀಯ ಲಾಭ ನಷ್ಟದ ನಿಖರ ಲೆಕ್ಕಾಚಾರ ಆಧರಿಸಿಯೇ ಮಾತನಾಡುವ ಚಾಣಾಕ್ಷ ರಾಜಕಾರಣಿ ಮೋದಿ ಬಾಯಲ್ಲಿ ಈ ಮಾತು ಸುಖಾಸುಮ್ಮನೇ ಬಂದಿರಬಹುದೇ?

ಸುತಾರಾಂ ಸಾಧ್ಯವಿಲ್ಲ. ಮೋದಿ ಹಾಗೆ ಹೇಳುವುದಕ್ಕೆ ನಿರ್ದಿಷ್ಟ ಕಾರಣವಿದೆ. ಬಿಹಾರ ಚುನಾವಣೆ ಕಲಿಸಿದ ಕಹಿ ಪಾಠದ ಪರಿಣಾಮ ಅದು. ಪ್ರಧಾನಿ ಮೋದಿ ಅದೆಷ್ಟೇ ಅಭಿವೃದ್ಧಿ ಚಿಂತನೆಯ ಭಾಷಣಗಳ ಸುರಿಮಳೆಯನ್ನೇ ಹರಿಸಿದರೂ ಬಿಹಾರದ ಮತದಾರರು ತಮ್ಮ ಆಂತರ್ಯದಲ್ಲಿರುವ ಜಾತೀಯ ನಿಲುವನ್ನು ಬದಲಿಸಲಿಲ್ಲ ಎಂಬುದು ಒಂದಾದರೆ , ಜಾತೀಯ ಆಲೋಚನೆ ಮಾಡದೇ ಹೋದರೆ, ಜಾತಿ ಹಿನ್ನೆಲೆಯ ರಾಜಕೀಯ ಲೆಕ್ಕಾಚಾರಗಳನ್ನು ಇಟ್ಟುಕೊಳ್ಳದೇ ಹೋದರೆ ಕನಿಷ್ಠ ಶೇ.40ರಷ್ಟು ಮತದಾರರ ಹೃದಯದ ಕದ ತಟ್ಟುವುದು ಕಷ್ಟ ಎಂಬ ಸತ್ಯದ ಅರಿವು ಆಗಿರುವುದು ಮತ್ತೊಂದು. ಅದರಲ್ಲೂ ಈ 2016ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಇತ್ಯಾದಿ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಎಲ್ಲೋ ಒಂದು ಕಡೆ ಮೋದಿ ಕೂಡ ತಮ್ಮ ವರಸೆಯನ್ನು ಬದಲಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಹೀಗಾಗಿ ಅಭಿವೃದ್ಧಿ ಚಿಂತಕ ಮೋದಿ ಮನದಲ್ಲಿ ಜಾತಿ ಹಿನ್ನೆಲೆ ಇಣುಕಿ ಹಾಕುತ್ತಿದೆ. ಬಾಯಲ್ಲಿ ಇತಿಹಾಸದ ಮೆಲುಕು ಹಾಕಿಸುತ್ತಿದೆ.

ಇನ್ನೂ ಬೇಕಾದಷ್ಟು ಉದಾಹರಣೆಗಳಿವೆ. ಒಂದೆರಡನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾದೀತು. ಬಿಜೆಪಿ ಮೊದ ಮೊದಲು ಕೇಡರ್ ಬೇಸ್ಡ್(ಕಾರ್ಯಕರ್ತರ ಪಡೆ ಆಧರಿಸಿದ)ಪಕ್ಷ ಅಂತಲೇ ಜನಜನಿತವಾಗಿತ್ತು. ತೊಂಭತ್ತರ ದಶಕದಲ್ಲಿ ಬಿಜೆಪಿ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ಪ್ರಮುಖ ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯವ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಪ್ರವರ್ಧಮಾನಕ್ಕೆ ಬಂತು. ಕಾಶ್ಮೀರ ಹೋರಾಟ, ಮಂದಿರ ನಿರ್ಮಾಣ ಚಳವಳಿ, ಮಂಡಲ ವರದಿ ವಿರೋಧದಂತಹ ವೈಚಾರಿಕ ಮತ್ತು ಮಾಸ್ ಮೂವ್ ಮೆಂಟ್​ಗಳು ಒಂದು ಕಾರಣವಾಗಿದ್ದರೆ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳಲ್ಲಿ ತಯಾರಾಗಿದ್ದ ಶಿಸ್ತುಬದ್ಧ ಲಕ್ಷಾಂತರ ಕಾರ್ಯಕರ್ತರ ಪಡೆ ಆಸರೆಯಾಗಿದ್ದುದು ಮತ್ತೊಂದು ಕಾರಣ. ಆ ಮೂಲಕವೇ ಆ ಪಕ್ಷ ದೇಶಾದ್ಯಂತ ಭದ್ರವಾದ ರಾಜಕೀಯ ನೆಲೆಯನ್ನು ಕಂಡುಕೊಂಡಿತ್ತು. ಹೀಗಾಗಿ ಅಲ್ಲಿ ವೈಚಾರಿಕ ಪ್ರತಿಪಾದನೆ ಮುಂಚೂಣಿಯಲ್ಲಿತ್ತೇ ಹೊರತು ನಾಯಕರು ಅಥವಾ ಜಾತಿ ಲೆಕ್ಕಾಚಾರದ ಸಮೀಕರಣಗಳಲ್ಲ. ಅದು ಒಂದು ಹಂತದಲ್ಲಿ ಬೇರೆ ರಾಜಕೀಯ ಪಕ್ಷಗಳಲ್ಲಿ ಹೊಸ ಚಿಂತನ-ಮಂಥನಕ್ಕೂ ಕಾರಣವಾಗಿತ್ತು. ಆದರೆ ಯಾವಾಗ ವೈಚಾರಿಕ ಪ್ರತಿಪಾದನೆಯನ್ನು ಪಾಲನೆ ಮಾಡುವುದು ತಾಂತ್ರಿಕ ಮತ್ತು ವ್ಯಾವಹಾರಿಕ ಕಾರಣಗಳಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರಗಳಿಂದ ಸಾಧ್ಯವಾಗಲಿಲ್ಲವೋ ಆಗ ಅಪಾಯದಿಂದ ಪಾರಾಗಲು ಪಕ್ಷದ ನಾಯಕರು ಜಾತಿಯಿಂದ ಗುರುತಿಸಿಕೊಳ್ಳುವುದರ ಕಡೆಗೆ ಹೊರಳಿದರು. ಉದಾಹರಣೆಗೆ ಉಮಾ ಭಾರತಿ. ಅವರು ಹಿಂದುತ್ವದ ಪ್ರತಿಪಾದಕಿ. ಫೈರ್​ಬ್ರಾಂಡ್ ನಾಯಕಿ ಎಂಬುದು ಗೊತ್ತಿತ್ತೇ ಹೊರತು ಅವರ ಜಾತಿ ಯಾರಿಗೂ ಗೊತ್ತಿರಲಿಲ್ಲ. ಮುಂದೆ ಅವರು ರಾಜಕೀಯ ಕಾರಣಗಳಿಗಾಗಿ ದಲಿತ ಕಾರ್ಡನ್ನು ಮುಂದೆ ಮಾಡಿದರು. ಹಾಗೇ ಕಲ್ಯಾಣ ಸಿಂಗ್. “ನಾನು ಅಯೋಧ್ಯಾ ರಾಮನ ಅಪರಾವತಾರ” ಎಂದುಕೊಂಡಿದ್ದ ಕಲ್ಯಾಣ ಸಿಂಗ್ ಉತ್ತರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ನಂತರ ದಲಿತ ಹಣೆಪಟ್ಟಿ ಕಟ್ಟಿಕೊಂಡರು. ಹಾಗೆ ಮಾಡಿದ್ದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭ ಆಯಿತೇ ಇಲ್ಲವೇ ಎಂಬುದು ಬೇರೆ ವಿಚಾರ. ಆದರೆ ಕೇವಲ ಹಿಂದುತ್ವದ ಪ್ರತಿಪಾದನೆ ಮಾಡುವುದನ್ನು ಬಿಟ್ಟು ಬಿಜೆಪಿ ಹೊಸ ಆಯಾಮಕ್ಕೆ ಹೊರಳಿದ್ದಂತೂ ಹೌದು.

ಬೇರೆ ಎಲ್ಲ ಇರಲಿ, ಜಾತಿ ಮತ್ತು ಅಭಿಮಾನ ಹೇಗೆ ಸೂಕ್ಷ್ಮವಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ನಾವೇ ಕಣ್ಣಾರೆ ಕಂಡ ಮತ್ತೊಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ. ಅದು ಈಗಷ್ಟೇ ಮುಗಿದ ವಿಧಾನ ಪರಿಷತ್ ಚುನಾವಣೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಮುಖವಾಗಿ ಎರಡು ಕ್ಷೇತ್ರಗಳ ಫಲಿತಾಂಶವನ್ನು ವಿಶ್ಲೇಷಿಸೋಣ. ಒಂದು ವಿಜಯಪುರ ಮತ್ತೊಂದು ಶಿವಮೊಗ್ಗ. ವಿಜಯಪುರದಲ್ಲಿ ಸ್ವಂತ ಶಕ್ತಿಯ ಮೇಲೆ ಚುನಾವಣಾ ಕಣಕ್ಕೆ ಧುಮುಕಿದ ಬಸನಗೌಡ ಪಾಟೀಲ ರಾಜಕೀಯ ಜಾಣ್ಮೆಯನ್ನು ಮೆರೆದರು. ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಮಾಡಿದ ಯಾವ ಪ್ರಯತ್ನವೂ ಕೈಗೂಡದಿದ್ದಾಗ ಕೊನೆಗೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಯಿತು. ಆ ಮುಂಚೆ ಅವರೊಂದು ಮಾತನ್ನು ಹೇಳಿದ್ದರು, “ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಮುಂದಿನ ಸಿಎಂ ಎಂದು ಘೊಷಿಸುವುದಾದರೆ ನಾನು ಕಣದಿಂದ ನಿವೃತ್ತನಾಗಲು ಸಿದ್ಧ” ಎಂದು. ಚುನಾವಣೆಯಲ್ಲಿ ಗೆದ್ದ ನಂತರವೂ ಆ ಮಾತನ್ನು ಪುನರುಚ್ಚರಿಸಿದ್ದಾರೆ. ಅದರ ಅರ್ಥ ಯತ್ನಾಳ ಯಡಿಯೂರಪ್ಪ ಅಭಿಮಾನಿ, ಕಟ್ಟಾ ಬೆಂಬಲಿಗ ಎಂಬುದಕ್ಕಿಂತ ಹೆಚ್ಚಾಗಿ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ಒಂದು ದಾಳ ಪ್ರಯೋಗಿಸಿದರು ಎಂಬುದನ್ನು ಪ್ರಮುಖವಾಗಿ ನಾವಿಲ್ಲಿ ಮನಗಾಣಬೇಕಿದೆ. ಯಡಿಯೂರಪ್ಪ ಎಂದಾಕ್ಷಣ ಆ ಸಮುದಾಯದವರ ಪ್ರಜ್ಞೆ ಜಾಗೃತ ಆಗಿಬಿಡುತ್ತದೆ ಎಂಬ ಆಲೋಚನೆ ಯತ್ನಾಳರ ಕೈ ಹಿಡಿಯಿತು. ಹಾಗೇ ಶಿವಮೊಗ್ಗದ ಉದಾಹರಣೆ. ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದ ಸಿದ್ದರಾಮಣ್ಣ ಅವರನ್ನು ಮತ್ತೆ ಕಣಕ್ಕಿಳಿಸಲು ಯಡಿಯೂರಪ್ಪ ಅವರಿಗೆ ಮನಸ್ಸಿರಲಿಲ್ಲ ಎಂಬ ಒಂದೇ ಒಂದು ಅಂತೆಕಂತೆ ಸುದ್ದಿ ಅಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ತಂದುಕೊಟ್ಟು ಬಿಟ್ಟಿತು. ರಾಜಕೀಯದಲ್ಲಿ ಸಮುದಾಯದ ಪ್ರಜ್ಞೆಯ ಮಹಿಮೆ ಹೇಗಿರುತ್ತದೆ ನೋಡಿ. ಇದು ನಿಜವೇ ಆಗಿದ್ದರೆ, ಲಿಂಗಾಯತ ಸಮುದಾಯದ ಮತ ಬ್ಯಾಂಕ್ ಹೊರತಾಗಿ ಬೇರಾವುದೇ ಹೇಳಿಕೊಳ್ಳುವಂಥ ಗಟ್ಟಿ ನೆಲೆ ಇಲ್ಲದ ಬಿಜೆಪಿಯ ಮುಂದಿನ ನಡೆ ಏನಿರಬಹುದು ಎಂಬುದು ಕುತೂಹಲಕರ.

ಬಿಜೆಪಿಗೆ ಹೋಲಿಸಿದರೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ಥಿಂಕ್ ಟ್ಯಾಂಕ್​ನ ಜಾತಿ ಸಮೀಕರಣ, ಅಧಿಕಾರ ಭದ್ರಪಡಿಸಿಕೊಳ್ಳುವ ಮುಂದಾಲೋಚನೆ ಇನ್ನೂ ಗಟ್ಟಿ. ಅಹಿಂದ ನಾಯಕರಾಗಿ ಸಿಎಂ ಪಟ್ಟವೇರಿದ ಸಿದ್ದರಾಮಯ್ಯ ಹೇಗೆ ಒಂದೊಂದು ಹೆಜ್ಜೆ, ಒಂದೊಂದು ಅಗ್ನಿಪರೀಕ್ಷೆಯಲ್ಲೂ ಇನ್ನಷ್ಟು ಮತ್ತಷ್ಟು ಬಲಿಷ್ಠವಾಗುತ್ತಲೇ ಸಾಗುತ್ತಿದ್ದಾರೆ ನೋಡಿ. ಅವರನ್ನು ಅಷ್ಟೋ ಇಷ್ಟೋ ವಿಚಲಿತರನ್ನಾಗಿ ಮಾಡಿದ್ದು ದಲಿತ ಸಿಎಂ ಕೂಗು ಮಾತ್ರ. ಅದರ ನಡುವೆಯೇ ಕಳೆದ ಲೋಕಸಭಾ ಚುನಾವಣೆ, ಮಂತ್ರಿಮಂಡಲ ವಿಸ್ತರಣೆ ಮುಂತಾದ ಕಠಿಣ ಸನ್ನಿವೇಶಗಳನ್ನೆಲ್ಲ ಸುಲಭವಾಗಿ ನಿಭಾಯಿಸಿಕೊಂಡು ಬಂದ ಸಿದ್ದರಾಮಯ್ಯ ಈ ವಿಧಾನಪರಿಷತ್ ಚುನಾವಣೆಯಲ್ಲಿ ದಲಿತ ಸಿಎಂ ಪಟ್ಟದ ಸಾಧ್ಯತೆಯನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಲ್ಲಿ ಸದ್ದಿಲ್ಲದೆ ಸಫಲರಾಗಿದ್ದಾರೆ.

ಹೌದೋ ಅಲ್ಲವೋ ನೋಡಿ, ಕೋಲಾರದಲ್ಲಿ ಮುನಿಯಪ್ಪ, ವೀರಪ್ಪ ಮೊಯ್ಲಿ, ತುಮಕೂರಿನಲ್ಲಿ ಪರಮೇಶ್ವರ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಹಿನ್ನಡೆ ಸಿಎಂಗೆ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಸಿಕ್ಕ ವರದಾನ ಅಂತಲೇ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ದಲಿತ ಸಿಎಂ ದಾಳದ ಮೂಲಕ ಪರೋಕ್ಷವಾಗಿ ರಾಜ್ಯ ರಾಜಕೀಯದ ಮುಂಚೂಣಿಗೆ ಬಂದಿದ್ದ ಖರ್ಗೆ ಮತ್ತು ಮುನಿಯಪ್ಪ ಅವರು ಸದ್ಯಕ್ಕಂತೂ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕುವ ಸಾಧ್ಯತೆಗಳು ತೀರಾ ಕಡಿಮೆ.

ಹಾಗೇ, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಹಾಸನದಲ್ಲಿ ದೇವೇಗೌಡರ ಕುದುರೆಯನ್ನು ಕಟ್ಟಿ ಹಾಕಿದ ಸಚಿವ ಎ.ಮಂಜು ಸಿಎಂ ಸಿದ್ದರಾಮಯ್ಯ ಅವರ ಹಾಯಾದ ನಿರಾಳತೆಗೆ ಬೀಸಣಿಕೆ ಸೇವೆ ಮಾಡಿದ್ದಾರೆ ಅಂತಲೇ ಅರ್ಥೈಸಬಹುದಲ್ಲವೇ?

ಒಳಿತೋ ಕೆಡುಕೋ ಬೇರೆ ವಿಚಾರ… ಒಟ್ಟಿನಲ್ಲಿ ಜಾತಿ ಸಮೀಕರಣದ ಲೆಕ್ಕವೇ ಸದ್ಯೋಭವಿಷ್ಯದಲ್ಲಿ ಗಟ್ಟಿ ಬಿಡಿ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top