ರಾಜಕಾರಣದಲ್ಲೂ ಟ್ರೆಂಡ್ ಸೆಟಿಂಗ್ ಸಾಧ್ಯವೇ, ಅದ್ಹೇಗೆ?

ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ.

 ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ ಮೂವತ್ತಾರು ಗಂಟೆ ಕಳೆದಿದೆ. ಚುನಾವಣಾಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳೆಂಬ ಅಬ್ಬರಗಳೂ ತಣ್ಣಗಾಗಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗುವ ಖಚಿತ ಟ್ರೆಂಡ್​ನ ಧ್ಯಾನದಲ್ಲಿ ಎಲ್ಲರೂ ಮುಳುಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆಗಳೇನು ಹಾಗಾದರೆ…

ಒಟ್ಟೊಟ್ಟಿಗೆ ಎರಡು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಿತು. ಒಂದು ಹಿಮಾಚಲ, ಮತ್ತೊಂದು ಗುಜರಾತ. ಹಿಮಾಚಲದಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಸ್ಥಾನಗಳು ಸಿಗುವ ಭವಿಷ್ಯ ನುಡಿಯಲಾಗಿದೆ. ಆದರೆ ಅದೇ ಗುಜರಾತಲ್ಲಿ ಬಿಜೆಪಿ ಸ್ಥಾನಗಳಿಕೆ ಇಳಿಕೆ ಆಗಬಹುದು ಎನ್ನಲಾಗುತ್ತಿದೆ. ಒಂದೆರಡು ಸಮೀಕ್ಷೆಗಳು ಮಾತ್ರ ಹತ್ತಿಪ್ಪತ್ತು ಸ್ಥಾನಗಳು ಹೆಚ್ಚು ಬರಬಹುದು ಎಂದಿವೆ. ಹಾಗೆ ನೋಡಿದರೆ ಕಾಂಗ್ರೆಸ್ಸಿಗೆ ಗುಜರಾತಲ್ಲಿ ನಿರಾಸೆ, ಹಿಮಾಚಲದಲ್ಲಿ ಆಘಾತ ಕಾದಿದೆ. ಇಷ್ಟಾದರೂ ದೇಶದ ಜನರ ಗಮನ ನೆಟ್ಟಿರುವುದು ಗುಜರಾತ್ ಫಲಿತಾಂಶದ ಮೇಲೆಯೇ ಹೊರತು ಹಿಮಾಚಲದ ಮೇಲಲ್ಲ. ಕಾರಣ ಇಷ್ಟೇ, ಎಲ್ಲ ಅಪವಾದಗಳ ನಡುವೆಯೂ ಗುಜರಾತ್ ದೇಶದ ರಾಜಕಾರಣ ಮತ್ತು ಅಭಿವೃದ್ಧಿ ಆಲೋಚನೆ ದೃಷ್ಟಿಯಿಂದ ಟ್ರೆಂಡ್ ಸೆಟ್ ಮಾಡಿರುವ ರಾಜ್ಯ ಎಂಬುದಕ್ಕಾಗಿ.

ಒಂದೆರಡು ಉದಾಹರಣೆಗಳನ್ನು ನೋಡೋಣ. ಅಭಿವೃದ್ಧಿ, ಹೂಡಿಕೆ, ಅಚ್ಛೇ ದಿನ ಚರ್ಚೆಗಳನ್ನೆಲ್ಲ ಬದಿಗಿಟ್ಟು ಕೆಲ ಮೇಲುಮೇಲಿನ ಸಂಗತಿಗಳನ್ನು ಗಮನಿಸೋಣ. ಮೊನ್ನೆ ಡಿ.13ಕ್ಕೆ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆಸಿ 17 ವರ್ಷಗಳಾದವು. ಆಗ ಮಡಿದ ಯೋಧರಿಗೆ ಗೌರವಾರ್ಪಣೆ ಮಾಡಲು ಸಂಸತ್ ಭವನದಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು. ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್, ಎಲ್.ಕೆ.ಆಡ್ವಾಣಿ ಮುಂತಾದವರು ಹಾಜರಿದ್ದರು. ಅವರ ಜೊತೆಗೆ ನಿಯೋಜಿತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ. ಆ ಸಂದರ್ಭದಲ್ಲಿ ಪ್ರಧಾನಿ ಮೋದಿಗಿಂತ ರಾಹುಲ್ ಎದ್ದು ಕಾಣಿಸುತ್ತಿದ್ದರು. ನೀಟಾಗಿ ಶೇವ್ ಮಾಡಿದ್ದರು. ಪೈಜಾಮ, ಜುಬ್ಬಾ ಅದರ ಮೇಲೊಂದು ಮೋದಿ ಕುರ್ತಾ ರೀತಿಯ ಕುರ್ತಾ ಧರಿಸಿದ್ದರು. ಇಲ್ಲಿಯವರೆಗೆ ನಾವು ರಾಹುಲ್ ಗಾಂಧಿಯನ್ನು ನೋಡಿದ್ದು ಜೀನ್ಸ್ ಪ್ಯಾಂಟು, ಕುರುಚಲು ಗಡ್ಡ, ಪ್ಯಾಂಟಿಗೆ ಹೊಂದಿಕೆ ಆಗದೇ ಇರುವ ಜುಬ್ಬಾ, ಕ್ಷಣಕ್ಷಣಕ್ಕೂ ತೋಳು ಮಡಚುವ ರೀತಿ ಇತ್ಯಾದಿ ಇತ್ಯಾದಿ. ಹಾಗಾದರೆ ಎರಡೇ ತಿಂಗಳ ಗುಜರಾತ್ ಒಡನಾಟದಲ್ಲಿ ಮೋದಿ ಪ್ರಭಾವ ರಾಹುಲ್ ಮೇಲೂ ಆಯಿತೇ?

ಸೂಟುಬೂಟಿನ ಟೀಕೆ ಮಾಡುವ ರಾಹುಲ್ ಗಾಂಧಿಯವರಿಗೆ ನೀಟಾಗಿ ಜುಬ್ಬಾ-ಪಾಯಿಜಾಮ, ಕುರ್ತಾ ಧರಿಸುವ ಮನಸ್ಸೆಲ್ಲಿಂದ ಬಂತು? ಬರಲೇಬೇಕು. ರಾಹುಲ್ ಮಾತ್ರವಲ್ಲ ದೇಶದ ಇಡೀ ರಾಜಕೀಯ ಸಮೂಹದವರ ಹಾವಭಾವ, ಧರಿಸುವ ದಿರಿಸೇ ಬದಲಾಗಿದೆ, ಠಾಕುಠೀಕಾಗಿದೆ. ದೊಡ್ಡದೊಡ್ಡ ಹೊಟ್ಟೆಗಳೆಲ್ಲ ಕರಗಿ ಸ್ಮಾರ್ಟ್ ಅಂಡ್ ಫಿಟ್ ಆಗುತ್ತಿವೆ. ಕುರುಚಲು ಗಡ್ಡ ನೈಸಾಗಿ ಶೇವ್ ಆಗುತ್ತಿದೆ. ಹೇಗೇಗೋ ಇದ್ದರೆ ಎಲ್ಲಿ ಜನ ತಿರಸ್ಕರಿಸುತ್ತಾರೋ ಎಂಬ ಭೀತಿ. ಜನರಿಗೂ ಅಷ್ಟೇ, ಇವರು ಕೊನೇ ಪಕ್ಷ ಮೇಲ್ಮೇಲೆ ನೆಟ್ಟಗಾದರೂ ಸಾಕು ಮುಂದೆ ತಲೆಯೊಳಗಿನ ಆಲೋಚನೆಯೂ ಸರಿದಾರಿಗೆ ಬಂದೀತೆಂಬ ಸಹಜ ನಿರೀಕ್ಷೆ ಮಾಡುತ್ತಿದ್ದಾರೆ.

ಅದೊಂದೇ ಅಲ್ಲ, ಮೋದಿ ಮತ್ತು ಅಮಿತ್ ಷಾ ಸಹ ಅಷ್ಟೊಂದು ಬಾರಿ ಆ ಪರಿ ಭಯ-ಭಕ್ತಿಯಿಂದ ಉದ್ದುದ್ದ ಗಂಧದ ನಾಮ ಎಳೆದುಕೊಂಡು ಗುಜರಾತ್ ದೇವಾಲಯಗಳ ದರ್ಶನ ಮಾಡಿದ್ದಾರೋ ಇಲ್ಲವೋ? ರಾಹುಲ್ ಗಾಂಧಿ ಮಾಡಿದ್ದಾರೆ. ಸದಾ ಸೆಕ್ಯುಲರಿಸಂ ಬಗ್ಗೆ ಮಾತನಾಡುವ ರಾಹುಲ್​ಗೆ ದೇವಾಲಯ ಸಂದರ್ಶನ ಮಾಡುವ, ಗಂಧದ ನಾಮ ಹಾಕಿಕೊಳ್ಳುವ ಮನಸ್ಸೆಲ್ಲಿಂದ ಬಂತು? ವಿದ್ಯಾವಂತರು, ಪದವೀಧರರು, ಉತ್ತಮ ಉದ್ಯೋಗದಲ್ಲಿರುವವರು ಸೋಷಿಯಲ್ ಮೀಡಿಯಾದಲ್ಲಿ, ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಮಾತ್ರವಲ್ಲ, ಅಂಥವರಲ್ಲಿ ಆಸ್ತಿಕತೆ, ದೈವಭಕ್ತಿ ಕೂಡ ಹೆಚ್ಚಾಗುತ್ತಿದೆ. ಅಂಥ ನವ-ಯುವಸಮುದಾಯ ಮೋದಿ ಜೊತೆಗಿದೆ. ಅವರನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳಬೇಕೆಂಬ ಕಸರತ್ತಲ್ಲವೇ? ರಾಹುಲ್ ಹೊಸ ಟ್ರೆಂಡನ್ನು ಸರಿಯಾಗಿಯೇ ಗ್ರಹಿಸಿದ್ದಾರೆ!

ಮುಂದಿನ ವಿಚಾರ ನೋಡುವ. ರಾಜ್ಯ ಅಥವಾ ರಾಷ್ಟ್ರದ ಭವಿಷ್ಯ ನಿರ್ಧರಿಸುವ ಚುನಾವಣೆಗಳಲ್ಲಿ ಇಲ್ಲಿಯವರೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಪ್ರದಾಯ ಹೇಗಿತ್ತು? ಅಪ್ಪ ಸಂಸದನೋ, ಮಂತ್ರಿಯೋ, ಶಾಸಕನೋ ಆಗಿದ್ದರೆ ಆತನ ಮಕ್ಕಳಿಗೆ, ಮಡದಿಗೇನೆ ಟಿಕೆಟ್ ಕೊಡಬೇಕು. ಜನಜಾತಿ ಬಲ ನೋಡಿಯೇ ಟಿಕೆಟ್ ಆಖೈರು ಮಾಡಬೇಕು. ಆದರೆ ಈಗ ಹಾಗಲ್ಲ, ಪ್ರೊಫೆಷನಲ್ ಏಜೆನ್ಸಿಗಳು ನಡೆಸುವ ಸಮೀಕ್ಷೆಯಲ್ಲಿ ಆತ ಗಮನ ಸೆಳೆಯಬೇಕು, ವಿದ್ಯಾವಂತ ಆಗಿರಬೇಕು, ಕೊನೇ ಪಕ್ಷ ಓದು ಬರಹ ಆದರೂ ಬಲ್ಲವನಾಗಿರಬೇಕು, ಕ್ಲೀನ್ ಇಮೇಜ್ ಇರಬೇಕು, ಸಾಮಾನ್ಯ ಯುವಕನಾಗಿರಬೇಕು(ಮಾನಸಿಕವಾಗಿಯಾದರೂ), ಕ್ರಿ್ರುನಲ್ ಹಿನ್ನೆಲೆಯಂತೂ ಇರಲೇಬಾರದು ಇತ್ಯಾದಿ ಇತ್ಯಾದಿ ಅರ್ಹತೆಗಳು ತನ್ನಿಂತಾನೆ ಫಿಕ್ಸ್ ಆಗುತ್ತಿವೆ. ನೀವೇ ನೋಡಿ ಹಿಮಾಚಲ, ಗುಜರಾತ ಚುನಾವಣೆಯಲ್ಲಿ ಇಂತಿಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯವರಿದ್ದಾರೆ, ಕೋಟ್ಯಧಿಪತಿಗಳಿದ್ದಾರೆ ಎಂಬ ಚರ್ಚೆ ಮಾಧ್ಯಮದಲ್ಲಿ ನಡೆದದ್ದನ್ನು ಕೇಳಿದ್ದೇವಾ? ಓದಿದ್ದೇವಾ?

ಇನ್ನು ಕೆಲ ವರ್ಷಗಳಲ್ಲಿ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ, ಆತ ಹೊಂದಿರುವ ಸಂಪತ್ತು ಒಂದು ಚರ್ಚೆಯ ವಿಷಯವೇ ಆಗಿರುವುದಿಲ್ಲ. ಅಂಥ ಅರ್ಹತೆ ಉಳ್ಳವರು ಸಾರ್ವಜನಿಕ ಜೀವನದ ಹತ್ತಿರಕ್ಕೂ ಸುಳಿಯಲಾರರು…ಇದು ಈಗ ಸೆಟ್ಟಾಗುತ್ತಿರುವ ಟ್ರೆಂಡು.

ಸೋಷಿಯಲ್ ಮೀಡಿಯಾ ಜನಪ್ರಿಯತೆ: ಬರಬರುತ್ತ ಓರ್ವ ನಾಯಕನಾದವನಿಗೆ ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಎಷ್ಟು ಮಂದಿ ಹಿಂಬಾಲಕರು ಇದ್ದಾರೆ ಎಂಬುದೂ ಕೂಡ ಆತನ ಸಾಮರ್ಥ್ಯ ಅಳೆಯುವ ಮಾನದಂಡವಾಗುತ್ತಿದೆ. ಹಾಗಾದರೆ ಇದು ಬರೀ ಫ್ಯಾಷನ್ನಾ,ಗೀಳಾ? ಹುಚ್ಚುತನವಾ? ಏನದು ಹಾಗಾದರೆ? ಹಾಗೇನೂ ಅಲ್ಲ. ವಿದ್ಯಾವಂತರು ದೇಶದ ಬಗ್ಗೆ ಆಲೋಚನೆ ಮಾಡಲಾರರು, ಮತಗಟ್ಟೆಗೆ ಬರಲಾರರು ಎಂಬ ಅಪವಾದ ದೂರವಾಗುವ ಕಾಲ ಸನ್ನಿಹಿತವಾಗುತ್ತಿದೆ ಅಂತ ಭಾವಿಸಬೇಕು. 2010ರವರೆಗೆ ಎಷ್ಟುಮಂದಿ ಜನನಾಯಕರು/ರಾಜಕೀಯ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು? ಈಗ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯಿಂದ ಹಿಡಿದು ಎಚ್​ಡಿಕೆವರೆಗೆ ಎಲ್ಲರೂ ಸೋಷಿಯಲ್ ಮೀಡಿಯಾ ಒಂದು ಮಹತ್ವದ ತಾಣ ಎಂತಲೇ ಭಾವಿಸಿದ್ದಾರೆ. ಇದು ಈಗಿನ ಟ್ರೆಂಡು, ಸೆಟ್ಟಾದದ್ದು ಯಾರಿಂದ? ಯಾರು ಯಾರನ್ನು ಫಾಲೋ ಮಾಡುತ್ತಿದ್ದಾರೆ ಹಾಗಾದರೆ?

ಜಾತಿಕಾರಣವೂ ಬದಲಾದೀತೇ?: ಬಿಲ್​ಕುಲ್ ಹೌದು ಅನ್ನಲೇಬೇಕು. ಅದಕ್ಕೆ ಉತ್ತರಪ್ರದೇಶದ ಉದಾಹರಣೆಯೊಂದೇ ಸಾಕು. ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಜಾತಿರಾಜಕಾರಣದ್ದೇ ಮೇಲುಗೈ. ಇಲ್ಲಿಯವರೆಗೆ ಆ ರಾಜ್ಯಗಳಲ್ಲಿ ಯಾದವರು, ದಲಿತರು, ಮುಸ್ಲಿಮರು ಇದೇ ಚರ್ಚೆ. ಉತ್ತರಪ್ರದೇಶದಲ್ಲಿ ಮುಸ್ಲಿಂ ಮತದಾರರೇ ಹೆಚ್ಚಿರುವ 119 ಕ್ಷೇತ್ರಗಳ ಪೈಕಿ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನೂ ಕಣಕ್ಕಿಳಿಸದೆ ತೊಂಭತ್ತಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿತು. ಯಾವಾಗ ಅಲ್ಪಸಂಖ್ಯಾತರ ಆದರ ಎಂಬುದು ಮತಬ್ಯಾಂಕ್ ರಕ್ಷಣೆಯ ನಾಟಕ ಮಾತ್ರ ಎಂಬುದು ಗೊತ್ತಾಗುತ್ತದೆಯೋ, ಯಾವಾಗ ಆ ಸಮುದಾಯದ ಯವಕ ಯುವತಿಯರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಉದ್ಯಮ, ಕೌಟುಂಬಿಕ ಜೀವನದ ಸುಖ-ದುಃಖ, ಮುಖ್ಯವಾಹಿನಿಗೆ ಬರುವುದರ ಮಹತ್ವದ ಅರಿವಾಗುತ್ತದೆಯೋ ಅಲ್ಲಿಗೆ ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವಾದಗಳು ಬಿದ್ದುಹೋಗುತ್ತವೆ. ಆ ಹೆಸರಲ್ಲಿ ರಾಜಕಾರಣ ಮಾಡುವವರು ಹೊಟ್ಟೆಪಾಡಿಗೆ ಬೇರೆ ಉದ್ಯೋಗ ಅರಸಿ ಹೋಗಲೇ ಬೇಕಾಗುತ್ತದೆ. ಇದು ಉಳಿದ ಜಾತಿವಾದದ ರಾಜಕಾರಣಿಗಳಿಗೂ ಅನ್ವಯ ಆಗುವ ಸೂತ್ರ. ಇದು ಈಗ ಸೆಟ್ಟಾಗುತ್ತಿರುವ ಟ್ರೆಂಡು. ಹಾಗಾದರೆ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ ಬೆಂಬಲದಿಂದ ಕಾಂಗ್ರೆಸ್ ಪಕ್ಷಕ್ಕೆ, ರಾಹುಲ್ ಗಾಂಧಿಯವರಿಗೆ ಏನು ಲಾಭ ಆಗಬಹುದು? ಮೋದಿ, ಅಮಿತ್ ಷಾಗೆ ಏನು ನಷ್ಟ ಆಗಬಹುದು? ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಸಂಗ ಮಾಡಿ ಮಾಡಿಕೊಂಡಷ್ಟೇ ಲಾಭ ಮತ್ತು ನಷ್ಟ ಅವರವರ ಯೋಗ್ಯತೆಗೆ ತಕ್ಕಂತೆ ಆದೀತು. ಗೊತ್ತಾಗಲು ಹೆಚ್ಚು ದಿನ ಏನೂ ಬೇಕಿಲ್ಲವಲ್ಲ.

ಕೋಮುವಾದ/ಅಭಿವೃದ್ಧಿಯಲ್ಲಿ ಯಾವುದು ಮೇಲು?: ಅದನ್ನು ಅರಿಯಲು ಒಂದು ಉದಾಹರಣೆ ಸಾಕು. ಒಂದೇ ಒಂದು ಕೋಮು ಹಿಂಸಾಚಾರ, ಕೋಮುಪ್ರಚೋದನಾತ್ಮಕ ಭಾಷಣವಿಲ್ಲದೆ ಈ ಸಲದ ಗುಜರಾತ್ ವಿಧಾನಸಭೆ ಚುನಾವಣೆ ಮುಗಿದಿದೆ. ಹಾಗಾದರೆ ಬಿಜೆಪಿಗೆ ಸೋಲಾಗುತ್ತದೆಯೇ? ಆಗಲ್ಲ, ಏಕೆಂದರೆ ಈಗ ಕೋಮು ಸಂಘರ್ಷ ಒಂದು ವಿಷಯವೇ ಅಲ್ಲ. ಆ ರಾಜ್ಯದಲ್ಲಿ ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಮುಸ್ಲಿಂ ಮತಗಳಿಕೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಈ ಟ್ರೆಂಡು ಹೀಗೇ ಮುಂದುವರಿದರೆ ಅಲ್ಪಸಂಖ್ಯಾತರ ಮತಬ್ಯಾಂಕ್ ದಿವಾಳಿ ಆಗಲು ಹೆಚ್ಚು ಕಾಲ ಹಿಡಿಯಲಿಕ್ಕಿಲ್ಲ.

ಹಾಗಾದರೆ ಅಯ್ಯರ್ ಹೇಳಿಕೆ ಕತೆ ಏನು?: ಗುಜರಾತ್ ಚುನಾವಣೆ ಸಂದರ್ಭದಲ್ಲಿ ಈಸಲ ಹಿಂದೆಂದಿಗಿಂತಲೂ ಹೆಚ್ಚು ವೈಯಕ್ತಿಕ ನಿಂದನೆ ನಡೆದಿದೆ. ಹತಾಶೆಯೂ ಅದಕ್ಕೆ ಕಾರಣ ಇರಬಹುದು. ಆ ಪೈಕಿ ಹೆಚ್ಚು ಚರ್ಚೆಯಾದದ್ದು ಮೊದಲ ಹಂತದ ಮತದಾನಕ್ಕೆ ಮೂವತ್ತು ಗಂಟೆ ಬಾಕಿ ಇರುವಾಗ ಮಣಿಶಂಕರ್ ಅಯ್ಯರ್ ಪ್ರಧಾನಿಯನ್ನು ನೀಚ ಎಂದು ಜರಿದದ್ದು.

ಆ ಹೇಳಿಕೆಯೊಂದರಿಂದಲೇ ಬಿಜೆಪಿ ಗೆಲುವಿಗೆ ದಾರಿಯಾಗುತ್ತದೆ ಎಂಬ ರೀತಿಯಲ್ಲಿ ಮಾಧ್ಯಮಗಳಲ್ಲಿ ಚರ್ಚೆ ಆಯಿತು. ಆದರೆ ವಾಸ್ತವದಲ್ಲಿ ಇಂಥ ಹೇಳಿಕೆಗಳೆಲ್ಲ ಊಟದ ಜೊತೆಗೆ ಉಪ್ಪಿನಕಾಯಿ ಇದ್ದಹಾಗೆ. ಅದೇ ಊಟ ಆಗಲು ಸಾಧ್ಯವಿಲ್ಲ. ಮತದಾರಪ್ರಭು ಹಲವು ಕಾರಣಗಳಿಗೆ ತನ್ನ ನಿರ್ಧಾರವನ್ನು ಮುಂಚಿತವಾಗಿ ಮಾಡಿರುತ್ತಾನೆಯೇ ಹೊರತು ಮೊದಲಿನ ಹಾಗೆ ಕೊನೇ ಘಳಿಗೆಯಲ್ಲಲ್ಲ. ಕಳೆದ ಸಲಕ್ಕಿಂತ 2 ಪರ್ಸೆಂಟ್ ಮತದಾನ ಕಡಿಮೆ ಆಗಿದೆ, ಅದರಿಂದ ಫಲಿತಾಂಶ ಬದಲಾಗುತ್ತದೆ ಎನ್ನಲೂ ಸಾಧ್ಯವಿಲ್ಲ. ಅದರಿಂದ ನಷ್ಟ ಇಳಿಜಾರಿನಲ್ಲಿರುವವರಿಗೇ ಹೆಚ್ಚಾದರೆ ಅಚ್ಚರಿಯಿಲ್ಲ. ಮುಖ್ಯವಾಗಿ ಗಮನಿಸಬೇಕಾದ್ದು ಏನೆಂದರೆ ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಇದೇ ಟ್ರೆಂಡ್ ಹೀಗೇ ಮುಂದುವರಿಯುತ್ತದೆ.

ಕರ್ನಾಟಕದ ಮೇಲೆ ಪರಿಣಾಮ?: ಆಗೇ ಆಗುತ್ತದೆ ಅನುಮಾನ ಬೇಡ. ಹಿಮಾಚಲದಲ್ಲಿ ಆದದ್ದು ಕರ್ನಾಟಕದಲ್ಲೂ ಆಗುತ್ತದೆ. ಸ್ಥಳೀಯವಾಗಿ ನಾಯಕತ್ವದ ಸಾಮರ್ಥ್ಯವನ್ನು ಸರಿಯಾಗಿ ಬಿಂಬಿಸಲು ಸಾಧ್ಯವಾಗಿದ್ದರೆ ಅದರ ಪರಿಣಾಮ ಇನ್ನಷ್ಟು ಗಾಢವಾಗಿ ಆಗಿರುತ್ತಿತ್ತು. ಸರ್ಕಾರ ನಡೆಸುವವರ ನಡವಳಿಕೆ, ಹಾವಭಾವ, ಆಡುವ ಮಾತಿನ ಧಾಟಿ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ಅತಿಯಾದ ಜಾತಿ ರಾಜಕಾರಣ ಇವೆಲ್ಲವೂ ಕರ್ನಾಟಕದ ಮತದಾರರ ಮೇಲೆ ಪರಿಣಾಮ ಬೀರಿರಲು ಸಾಕು. ಹಾಗಾದರೆ ಪರಿಣಾಮ ಸಕಾರಾತ್ಮಕವಾಗಿರುತ್ತದೆಯೇ?

ಗುಜರಾತ ಫಲಿತಾಂಶದ ಬಳಿಕ ಡಿಸೆಂಬರ್ ಕೊನೇ ಹೊತ್ತಿಗೆ ರಾಜ್ಯರಾಜಕಾರಣದ ದಿಕ್ಸೂಚಿಯೇ ಬದಲಾದರೆ ಅಚ್ಚರಿಪಡಬೇಕಿಲ್ಲ.!

ಅದು ಮುಂದುವರಿಯುವ ಟ್ರೆಂಡು…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top