ಸಂಗಮೇಶ ಟಿ. ಚೂರಿ, ವಿಜಯಪುರ.
ಫ್ರಾನ್ಸ್ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳ ವಿಂಗ್ ಕಮಾಂಡರ್ ಆಗಿರುವ ಇಲ್ಲಿನ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ಅರುಣಕುಮಾರ ಬುಧವಾರ ಹರಿಯಾಣ ರಾಜ್ಯದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣಕ್ಕೆ ರಫೇಲ್ ಯುದ್ಧ ವಿಮಾನ ಇಳಿಸಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಮ್ಮಟನಗರಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.
ಫ್ರಾನ್ಸ್‌ನಿಂದ ಭಾರತ ಸೇನೆಗೆ ಸೇರ್ಪಡೆಯಾದ ರಫೇಲ್ ಜೆಟ್‌ಗೆ ದೇಶದ ವಿವಿಧ ಸೈನಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಈ ಪೈಕಿ ಇಲ್ಲಿನ ಸೈನಿಕ ಶಾಲೆಯಲ್ಲಿ 1995-2001ವರೆಗೆ ಓದಿದ ಬಿಹಾರ ಮೂಲದ ಅರುಣಕುಮಾರ ವಿಂಗ್ ಕಮಾಂಡರ್ ಆಗಿ ಆಯ್ಕೆಯಾಗಿದ್ದಾರೆ. 2002ರಲ್ಲಿ ಇವರು ನ್ಯಾಷನಲ್ ಡಿಫೆನ್ಸ್ ಆರ್ಮಿ ಪರೀಕ್ಷೆ ಪಾಸ್ ಮಾಡಿ ಎನ್‌ಡಿಎ ಸೇರಿದ್ದರು.
ಹೌಸ್ ಕ್ಯಾಪ್ಟೆನ್
ಸೈನಿಕ ಶಾಲೆಯಲ್ಲಿ 2001ರಲ್ಲಿ ಪಿಯು ಮುಗಿಸಿದ ಅರುಣಕುಮಾರ, ಶಾಲೆಯ ವಿಜಯನಗರ ಸದನದ ಹೌಸ್ ಕ್ಯಾಪ್ಟನ್ ಆಗಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಓದಿನ ಜತೆಗೆ ಆಟೋಟಗಳಲ್ಲಿ ಚುರುಕಾಗಿದ್ದರು. ರಫೇಲ್ ಮೊದಲ ಹಂತದ 5 ವಿಮಾನಗಳು ಭಾರತಕ್ಕೆ ಬಂದಿದ್ದು, ಪ್ರಥಮ ತಂಡದಲ್ಲಿಯೇ ಅರುಣಕುಮಾರ ವಿಂಗ್ ಕಮಾಂಡರ್ ಆಗಿ ಆಯ್ಕೆಯಾಗಿರುವುದು ವಿಶೇಷ. ಈ ಹುದ್ದೆ ಲೆಫ್ಟೆನೆಂಟ್ ಹುದ್ದೆಗೆ ಸಮಾನಾಗಿದೆ.
ಎನ್‌ಡಿಎ ವಿಶೇಷ
ಹೈದರಬಾದ್‌ನಲ್ಲಿ ಇರುವ ಎನ್‌ಡಿಎ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. ಪ್ರತಿವರ್ಷ ಸರಾಸರಿ 2 ಲಕ್ಷ ಜನ ಎನ್‌ಡಿಎ ಪರೀಕ್ಷೆ ಬರೆದರೆ, ಇದರಲ್ಲಿ 300 ಜನ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ. ಈ ಪೈಕಿ 40 ಜನ ಏರ್‌ಫೋರ್ಸ್‌ಗೆ, 30 ಜನ ನೌಕಾ ಪಡೆಗೆ ಹಂಚಿ ಹೋಗುತ್ತಾರೆ. ಅರುಣಕುಮಾರ ಇದರಲ್ಲಿ ಪ್ರಥಮರಾಗಿ ವಾಯು ಪಡೆ ಸೇರಿದ್ದಾರೆ.