ರಫೇಲ್ ಬಲ

ಫ್ರಾನ್ಸ್‌ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್‌ ಜೆಟ್‌ಗಳ ಫುಲ್ ಡಿಟೇಲ್ಸ್ ಇಲ್ಲಿದೆ.

ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್‌ಗಳನ್ನು ಲಡಾಕ್ ಸೆಕ್ಟರ್‌ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್‌ಗಳು ಭಾರತದ ಬತ್ತಳಿಕೆ ಸೇರುತ್ತಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.
ಐದು ರಫೇಲ್ ಜೆಟ್‌ಗಳು ಫ್ರಾನ್ಸ್‌ನ್ನ ಪೋರ್ಟ್ ಸಿಟಿ ಬೋರ್ಡೌ ವಾಯು ನೆಲೆಯಿಂದ ಸೋವವಾರ ಹೊರಟಿದ್ದು, 7,000 ಕಿ.ಮೀ ಕ್ರಮಿಸಿ, ಭಾರತದ ಅಂಬಾಲಾ ವಾಯುನೆಲೆಗೆ ಬುಧವಾರ ಬಂದಿಳಿಯಲಿವೆ. ಇಷ್ಟು ದೂರದ ಹಾದಿಯಲ್ಲಿ ಈ ವಿಮಾನಗಳು ಯುಎಇನಲ್ಲಿ ಮಾತ್ರ ಇಳಿಯಲಿದ್ದು, ಆಕಾಶದಲ್ಲೇ ಅವುಗಳಿಗೆ ಇಂಧನ ತುಂಬಲಾಗುವುದು.
ನಿಗದಿಯಂತೆ 10 ಯುದ್ಧ ವಿಮಾನಗಳು ಸಿದ್ಧವಾಗಿವೆ. ಈ ಪೈಕಿ ಐದು ವಿಮಾನಗಳನ್ನು ತರಬೇತಿಗಾಗಿ ಇನ್ನೂ ಫ್ರಾನ್ಸ್‌ನಲ್ಲೇ ಉಳಿಯಲಿವೆ. ಜೊತೆಗೆ, ಒಪ್ಪಂದದಂತೆ ಮೊದಲ ಕಂತಿನ 36 ಯುದ್ಧ ವಿಮಾನಗಳ ಪೂರೈಕೆಯು 2021ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಯುದ್ಧವಿಮಾನವನ್ನು ಫ್ರಾನ್ಸ್‌ನ ಡಸಾಲ್ಟ್ ಕಂಪನಿಯು ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

6 ಟ್ರೈನರ್ ಏರ್‌ ಕ್ರಾಫ್ಟ್
ಡಸಾಲ್ಟ್ ಕಂಪನಿ ಒದಗಿಸಲಿರುವ 36 ರಫೇಲ್‌ಗಳ  ಪೈಕಿ 30 ಫೈಟರ್ ಜೆಟ್‌ಗಳಾಗಿದ್ದು, ಆರು ವಿಮಾನಗಳು ಟ್ರೈನರ್‌ಗಳಾಗಿರಲಿವೆ. ಟ್ರೈನರ್ ವಿಮಾನಗಳಲ್ಲಿ ಅವಳಿ ಸೀಟ್‌ಗಳಿದ್ದವು, ಫೈಟರ್ ಜೆಟ್‌ಗ‌ಳು ಹೊಂದಿರುವ ಎಲ್ಲ ವಿಶೇಷತೆಗಳನ್ನು ಇವು ಹೊಂದರಲಿವೆ.

400 ಕೋಟಿ ರೂ. ವೆಚ್ಚ
ರಫೇಲ್‌ಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಭಾರತೀಯ ವಾಯು ಪಡೆಯು ಈಗಾಗಲೇ 400 ಕೋಟಿ ರೂ. ವೆಚ್ಚ ಮಾಡಿದೆ. ಅಂದರೆ, ವಿಮಾನಗಳಿಗೆ ಶೆಲ್ಟರ್, ಹ್ಯಾಂಗರ್ ಮತ್ತು ಎರಡು ವಾಯು ನೆಲೆಯಲ್ಲಿ ನಿರ್ವಹಣಾ ಘಟಕಗಳ ನಿರ್ಮಾಣ ಇದರಲ್ಲಿ ಸೇರಿವೆ. ಜೊತೆಗೆ, ರಫೇಲ್ ಯುದ್ಧ ವಿಮಾನಗಳ ಸ್ವಾಗತಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಾಯುಪಡೆಗೆ ಬಲ
ಭಾರತೀಯ ವಾಯಪಡೆಗೆ ರಫೇಲ್ ಜೆಟ್‌ಗಳು ‘ಆರ್‌ಬಿ’ ಎಂಬ ನಾಮಕರಣದೊಂದಿಗೆ ಸೇರಲಿವೆ. ಆರ್‌ಬಿ ಎಂದರೆ ಈಗಿನ ವಾಯುಪಡೆ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಅವರ ಹೆಸರಿನ ಪೂರ್ವಾರ್ಧ. ಭಾರತಕ್ಕೆ ಬರುತ್ತಿರುವ ಜೆಟ್‌ಗಳು ಅತ್ಯಾಧುನಿಕ ಹಾಗೂ ಈ ಕ್ಷಣದ ತಂತ್ರಜ್ಞಾನದ್ದು. ಇವುಗಳಿಗೆ
ಫ್ರಾನ್ಸ್‌ನ 50 ವರ್ಷಗಳ ಔದ್ಯಮಿಕ ಸೇವಾ ಬೆಂಬಲ ಇದೆ. ಪಾಕಿಸ್ತಾನಿ ಜೆಟ್‌ಗಳಿಗೆ ಸುಳಿವೇ ಕೊಡದಂತೆ ಆಕ್ರಮಣ ಮಾಡುವ, ಪಾಕಿಸ್ತಾನ ಮಣ್ಣಿನಲ್ಲಿ ಎಲ್ಲೇ ಜೆಟ್‌ವಿಮಾನಗಳನ್ನು ಹೊರಟರೂ ಅವುಗಳನ್ನು ನಿಖರವಾಗಿ ಎದುರಿಸಿ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. 300 ಕಿ.ಮೀ. ದೂರದಿಂದ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಅಂದರೆ, ಬಾಲಾಕೋಟ್‌ನಂಥ ಸರ್ಜಿಕಲ್ ದಾಳಿ ನಡೆಸಲು ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿಯೊಳಗೆ ಹೋಗಬೇಕಾದ್ದೇ ಇಲ್ಲ. ಲೇಹ್‌ನಂಥ ಅತಿ ಎತ್ತರದ ವಾಯುನೆಲೆಗಳಿಂದ ಥಟ್ಟನೆ ಮೇಲೇರಬಲ್ಲವು. ನೂರು ಕಿಲೋಮೀಟರ್ ದೂರದಿಂದ ಕ್ಷಿಪಣಿ ಆಗಮನವನ್ನು ಗುರುತಿಸಿ ಟಾರ್ಗೆಟ್ ಮಾಡಬಲ್ಲದು. ಈಗ ವಾಯುಪಡೆ ಬಳಿ ಇರುವ ರಷ್ಯ ನಿರ್ಮಿತ ಸುಖೋಯ್ 30 ಜೆಟ್‌ಗಳಿಗೆ ಹೋಲಿಸಿದರೆ ಇದು ಅತ್ಯಂತ ಸಮರ್ಥ. ಸುಖೋಯ್ ರೇಂಜ್ 550 ಕಿ.ಮೀ. ಆದರೆ, ರಫೇಲ್ ರೇಂಜ್ 1055 ಕಿ.ಮೀ. ಹಾಗಾಗಿ, ಈ ರಫೇಲ್‌ಗಳು ಭಾರಿ ಬಲವನ್ನು ನೀಡಲಿವೆ.

ವಾಯನೆಲೆಯಲ್ಲಿ ಬಾಹುಬಲಿ
5 ರಫೇಲ್‌ ಸೇರ್ಪಡೆಯಿಂದ ನಮ್ಮ ವೈಮಾನಿಕ ಬಲ ತೀರಾ ಹೆಚ್ಚಾಗುವುದಿಲ್ಲ, ನಿಜ. ಆದರೆ 2022ರೊಳಗೆ ತಲಾ 18 ರಫೇಲ್‌ಗಳ 2 ಸ್ಕ್ವಾಡ್ರನ್‌ಗಳು ನಮ್ಮ ಆಯಕಟ್ಟಿನ ನೆಲೆಗಳಲ್ಲಿ ಸಜ್ಜಾಗಲಿವೆ. ಮೊದಲನೆಯದು ಪಾಕ್ ಎದುರಿಸಲು ಪಂಜಾಬಿನ ಅಂಬಾಲಾ, ಎರಡನೆಯದು ಚೀನಾ ಎದುರಿಸಲು ಪಶ್ಚಿಮ ಬಂಗಾಳದ ಹಾಶಿಮಾರಾ. ಅಲ್ಲಿಯ ತನಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತೂರಿ ಶತ್ರು ದಾಳಿಯನ್ನು ತಪ್ಪಿಸಿಕೊಳ್ಳಬಲ್ಲ ಚಾಕಚಕ್ಯತೆಯ ಅಭ್ಯಾಸಗಳಿಗೆ ಈ 5 ವಿಮಾನಗಳು ನೆರವಾಗಲಿವೆ. ವಾಯು ಕಾದಾಟದಲ್ಲಿ ಸುಖಾಯ್‌ಗಳಿಗೆ ಬಲಶಾಲಿ ಸಖನಾಗಬಲ್ಲ ರಫೇಲ್, ಕ್ಷಿಪಣಿ ತೂರಾಟದಲ್ಲಿ ಮಿರಾಜ್‌ಗಳಿಗೆ ಅಗ್ರಣಿಯಾಗಲಿದೆ. ಆಗಸದಲ್ಲಿನ ವಿಮಾನ, ನೆಲದ ಗುರಿ ಇವೆರಡನ್ನೂ 300 ಕಿ.ಮೀ ದೂರದಿಂದಲೇ ಗುರುತಿಸಬಲ್ಲ ಏಸಾರೇಡಾರ್, ಇದರ ಮಾರ್ಗ ದರ್ಶನದಿಂದ 150 ಕಿ.ಮೀ ದೂರದ ಕಣ್ನೋಟಕ್ಕೆ ಸಿಗದ ವಿಮಾನವನ್ನು ಹೊಡೆದುರಳಿಸಬಲ್ಲ ಮೀಟಿಯಾರ್ ಕ್ಷಿಪಣಿ, 250-500 ಕಿ.ಮೀ ದೂರದ ನೆಲದ ಮೇಲಿನ ಗುರಿಯನ್ನು ನಿಖರವಾಗಿ ಧ್ವಂಸ ಮಾಡಬಲ್ಲ ಸ್ಕಾಲ್ಪ್ ಕ್ಷಿಪಣಿ ಇವೆಲ್ಲವನ್ನೂ ಒಡಗೂಡಿಸಿಕೊಂಡಿರುವ ಒಂದು ಮೀಡಿಯಂ ಮಲ್ಟಿ- ರೋಲ್ ಕಾಂಬ್ಯಾಟ್ ಏರ್ ಕ್ರಾಫ್ಟ್ (MMRCA)ಈ ರಫೇಲ್.

-ಸುಧೀಂದ್ರ ಹಾಲ್ದೊಡ್ಡೇರಿ, ಹಿರಿಯ ವಿಜ್ಞಾನಿ
(MMRCA ಆಯ್ಕೆಗಾಗಿ ವಾಯುಪಡೆ ನಿಯೋಜಿಸಿದ್ದ ಪ್ರಾಥಮಿಕ ತಾಂತ್ರಿಕ ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದರು)

ರೈಫಲ್ ಹೋರಾಟ ಹಾದಿ..
2007: ಭಾರತೀಯ ವಾಯುಪಡೆಯ ಬೇಡಿಕೆಗೆ ಅನುಗುಣವಾಗಿ ಯುಪಿಎ ಸರಕಾರ 126 ಮೀಡಿಯಮ್ ಮಲ್ಟಿರೋಲ್ ಕಾಂಬ್ಯಾಟ್ ವಿಮಾನ (ಎಂಎಂಆರ್‌ಸಿಎ) ಖರೀದಿಗೆ ಟೆಂಡರ್
2012: ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಕಂಪನಿಯಿಂದ ಅತಿ ಕಡಿಮೆ ದರಕ್ಕೆ ವಿಮಾನ ಪೂರೈಕೆಗೆ ಟೆಂಡರ್ ಸಲ್ಲಿಕೆ ಆಗಿನ ಯುಪಿಎ ಸರಕಾರದ ಒಪ್ಪಂದದಲ್ಲಿದ್ದ ಷರತ್ತುಗಳು: 126ರ ಪೈಕಿ 18 ಯುದ್ಧವಿಮಾನಗಳನ್ನು ಹಾರಾಟಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಪೂರೈಕೆ ಮಾಡಬೇಕು, ಬಾಕಿ 108 ಯುದ್ಧವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.(ಎಚ್ಎಎಲ್) ನಿರ್ಮಿಸಲಿದ್ದು, ಇದಕ್ಕೆ ಡಸಾಲ್ಟ್ ಅಗತ್ಯ ತಾಂತ್ರಿಕ ಸಹಕಾರ ಸಿಗಬೇಕು.
2014: ಡಸಾಲ್ಟ್ ಹಾಗೂ ಎಚ್ಎಎಲ್ ನಡುವೆ ವರ್ಕ್ ಶೇರ್ ಒಪ್ಪಂದಕ್ಕೆ ಸಹಿ. ಅಂತಿಮ ಒಪ್ಪಂದವನ್ನು ಯುಪಿಎ ಸರಕಾರ ಮಾಡಿ ಕೊಂಡಿರಲಿಲ್ಲ. ದರ, ತಂತ್ರಜ್ಞಾನ, ಶಸ್ತ್ರಾಸ್ತ್ರ ಅಳವಡಿಕೆ, ನಿರ್ವಹಣೆ ವಿಚಾರವಾಗಿ ಡಸಾಲ್ಟ್ ಜತೆಗೆ ಸರಕಾರದಿಂದ ಚೌಕಾಶಿ ನಡೆಯುತ್ತಿತ್ತು. 526.1 ಕೋಟಿ ರೂ.ಗೆ ಒಪ್ಪಂದ ಕುದುರಿಸಿದ್ದಾಗಿ ಕಾಂಗ್ರೆಸ್ ನಾಯಕರು ಬೆನ್ನು ತಟ್ಟಿಕೊಂಡರು.
2015 ಏಪ್ರಿಲ್: ಪ್ಯಾರಿಸ್‌ಗೆ ಪ್ರಧಾನಿ ಮೋದಿ ಭೇಟಿ. 36 ಹಾರಾಟ ಸನ್ನದ್ಧ ಹಾಗೂ ಸಂಪೂರ್ಣ ಶಸ್ತ್ರಸಜ್ಜಿತ ರಫೇಲ್ ಯುದ್ಧವಿಮಾನ ಖರೀದಿ ಬಗ್ಗೆ ಘೋಷಣೆ. ವಾಯುಪಡೆಗೆ ತುರ್ತು ಅಗತ್ಯವಿದೆ ಎಂದು ಕಾರಣ ನೀಡಿದ ಸರಕಾರ.
2015 ಜೂನ್: 126 ಎಂಎಂಆರ್‌ಸಿಎ ಖರೀದಿಯ ಟೆಂಡರ್ ಹಿಂಪಡೆದ ರಕ್ಷಣಾ ಸಚಿವಾಲಯ
2016 ಜನವರಿ: ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಭಾರತಕ್ಕೆ ಭೇಟಿ. ರಫೇಲ್ ಖರೀದಿ ಒಡಂಬಡಿಕೆ. 36 ರಫೇಲ್‌ಗೆ ಅಂದಾಜು 59 ಸಾವಿರ ಕೋಟಿ ರೂ. ನೀಡಿ ಖರೀದಿಸಲು ಸರಕಾರದಿಂದ ತೀರ್ಮಾನ. 2018ರ ಸೆಪ್ಟೆಂಬರ್‌ನಿಂದ ರಫೇಲ್ ಪೂರೈಕೆ ಶುರು ಎಂದು ಒಪ್ಪಂದದಲ್ಲಿ ಉಲ್ಲೇಖ.
2016 ಅಕ್ಟೋಬರ್: ಡಸಾಲ್ಟ್ ಜತೆಗೆ ಜಂಟಿಯಾಗಿ ರಫೇಲ್ ಉತ್ಪಾದನೆಗೆ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್‌ನಿಂದ ಒಪ್ಪಂದ. ಒಪ್ಪಂದದ ಒಟ್ಟಾರೆ ಖರೀದಿ ಮೌಲ್ಯದ ಶೇ.50ರಷ್ಟು ಪರಿಹಾರ ಹೂಡಿಕೆ (ಆಫ್ಸೆಟ್ಸ್) ಮಾಡುವುದು ಡಸಾಲ್ಟ್‌ಗೆ ಕಡ್ಡಾಯಗೊಳಿಸಲಾಯಿತು.
2018: ರಿಲಯನ್ಸ್ ಹೊರತು ಬೇರೆ ಕಂಪನಿ ಆಯ್ಕೆ ಮಾಡಿಕೊಳ್ಳಲು ನಮಗೆ ಭಾರತ ಸರಕಾರ ಅವಕಾಶವೇ ನೀಡಲಿಲ್ಲ ಎಂದು ಹೇಳಿಕೆ ನೀಡಿದ ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂಡೆ. ಪ್ರತಿಪಕ್ಷಗಳಿಗೆ ಆಯುಧವಾದ ಹೊಲಾಂಡೆ ಹೇಳಿಕೆ. ಭಾರತ ಹಾಗೂ ಫ್ರಾನ್ಸ್ ಸರಕಾರಗಳು ರಫೇಲ್ ಒಪ್ಪಂದದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ರಕ್ಷಣಾ ಸಚಿವಾಲಯದಿಂದ ಸ್ಪಷ್ಟನೆ. ರಿಲಯನ್ಸ್ ಆಯ್ಕೆ ಮಾಡಿದ್ದು ನಾವೇ, ಇನ್ನೂ ಹಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಡಸಾಲ್ಟ್ ಕಂಪನಿಯಿಂದಲೂ ಸ್ಪಷ್ಟನೆ.
2019 ಅಕ್ಟೋಬರ್ 8: ಒಪ್ಪಂದದ ಭಾಗವಾಗಿ ಮೊದಲ ರಫೇಲ್ ಯುದ್ಧವಿಮಾನ ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರ.
2020 ಜುಲೈ 27: ಫ್ರಾನ್ಸ್‌ನಿಂದ ಹೊರಟ 5 ರಫೇಲ್ ಯುದ್ಧವಿಮಾನಗಳು ಜುಲೈ 29ರಂದು ಭಾರತಕ್ಕೆ ತಲುಪಿದವು.

ರಾಹುಲ್ ವರ್ಸಸ್ ಮೋದಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಒದಗಿ ಬಂದದ್ದು ರಫೇಲ್ ಅಸ್ತ್ರ. ‘‘ಯುಪಿಎ ಸರಕಾರ 526.1 ಕೋಟಿ ರೂ.ಗೆ 126 ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು. ಆದರೆ ಬಿಜೆಪಿ ಸರಕಾರ 60,000 ಕೋಟಿ ರೂ.ಗೆ 36 ವಿಮಾನಗಳನ್ನಷ್ಟೆ ಖರೀದಿಸಿದೆ. ಜೊತೆಗೆ, ಅನಿಲ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಡಿಫೆನ್ಸ್‌ಗೆ ಈ ಡೀಲನ್ನು ನೀಡಲಾಗಿದೆ. ಹೀಗಾಗಿ ಒಪ್ಪಂದದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ,’’ ಎಂದು ರಾಹುಲ್ ಆರೋಪಿಸಿದ್ದರು. ಹೋದಲ್ಲಿ ಬಂದಲ್ಲಿ ಚುನಾವಣಾ ಭಾಷಣದಲ್ಲಿ ಆರೋಪಗಳ ಸುರಿಮಳೆಗರೆದಿದ್ದರು.

ಮೈ ಭೀ ಚೌಕಿದಾರ್ ಅಭಿಯಾನ
ರಾಹುಲ್ ಅವರ ಈ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ‘ಮೈ ಭೀ ಚೌಕಿದಾರ್’ ಎನ್ನುವ ಸಾಮಾಜಿಕ ಜಾಲತಾಣ ಅಭಿಯಾನವನ್ನು ಆರಂಭಿಸಿತು. ಕೇಂದ್ರ ಸಚಿವರು, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ‘ಚೌಕಿದಾರ್’ ಎಂದು ಟ್ವಿಟರ್ನಲ್ಲಿ ತಮ್ಮ ಹೆಸರಿಗೆ ಪೂರ್ವನಾಮ ಸೇರಿಸಿಕೊಂಡರು. ಇದು ಬಿಜೆಪಿಗೆ ಪ್ರಚಂಡ ಜಯ ತಂದುಕೊಡುವಲ್ಲಿ ಮಹತ್ತರ ಪಾತ್ರ ಕೂಡ ವಹಿಸಿತು. ಮೇ 23ರ ಫಲಿತಾಂಶದ ಬಳಿಕ ಪೂರ್ವನಾಮ ತೆಗೆದುಹಾಕಿದ ಮೋದಿ, ‘‘ಇದು ನನ್ನ ಹೆಸರಿನ ಅವಿಭಾಜ್ಯ ಅಂಗವಾಗಿದೆ,’’ ಎಂದಿದ್ದರು.

ಯುದ್ಧವಿಮಾನದ ವಿಶೇಷತೆಗಳು
– 24,500 ಕೆ.ಜಿ
ರಫೇಲ್‌ನ ನಿವ್ವಳ ತೂಕ

– 9,500 ಕೆ.ಜಿ
ಸಾಗಣೆ ಸಾಮರ್ಥ್ಯ

– 3,700ಕಿ.ಮೀ
ಹಾರಾಟ ಸಾಮರ್ಥ್ಯ

– 1,389ಕಿ.ಮೀ
ಗರಿಷ್ಠ ವೇಗ (ಪ್ರತಿ ಗಂಟೆಗೆ)

– 59,000 ಕೋಟಿ ರೂ.
ರಫೇಲ್‌ಗಳ ಖರೀದಿಗೆ ಮಾಡಿಕೊಳ್ಳಲಾದ ಒಪ್ಪಂದದ ಮೌಲ್ಯ

5.3 ಮೀ
– ರಫೇಲ್‌ನ ಎತ್ತರ

10.3 ಮೀ
– ರಫೇಲ್‌ನ ಅಗಲ

– ಬಹು ಕಾರ್ಯ ನಿರ್ವಹಣೆ ಸಾಮರ್ಥ್ಯದ ಯುದ್ಧ ವಿಮಾನ
– ಭೂ ಸೇನೆ ನೆರವಿಗೂ ಬಳಕೆಯಾಗಬಲ್ಲದು, ವಾಯುದಾಳಿಗಳಲ್ಲಿಯೂ ಬಳಸಬಹುದು, ನೌಕೆಗಳಿಂದಲೂ ದಾಳಿ ನಡೆಸಬಹುದು
– ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು, 30 ಎಂಎಂ ಜಿಐಎಟಿ ಗನ್ ಹಾಗೂ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊತ್ತೊಯ್ಯ ಬಲ್ಲದು
– ಸಣ್ಣಪ್ರಮಾಣದ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಎಲ್ಲಿ ನಿಯೋಜನೆ?
– ಮೊದಲ ಸ್ಕ್ವಾಡ್ರನ್ ಭಾರತ-ಪಾಕ್ ಗಡಿಯಿಂದ 220 ಕಿ.ಮೀ ದೂರದಲ್ಲಿರುವ ಅಂಬಾಲಾದಲ್ಲಿ
– ಎರಡನೇ ಸ್ಕ್ವಾಡ್ರನ್ ಪಶ್ಚಿಮ ಬಂಗಾಳದ ಹಾಸಿಮಾರಾ ವಾಯುನೆಲೆಯಲ್ಲಿ.

ಕೋರ್ಟಿನಲ್ಲಿ ಹೋರಾಟ…
2018 ಮಾರ್ಚ್ 16: ರಫೇಲ್ ಒಪ್ಪಂದದ ಬಗೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ.
2018 ಡಿಸೆಂಬರ್ 14: ಅರ್ಜಿ ವಿಚಾರಣೆ ಮುಗಿಸಿ, ಒಪ್ಪಂದವನ್ನು ಸಂಶಯಿಸಲು ಯಾವುದೇ ಕಾರಣವಿಲ್ಲ ಎಂದ ಸುಪ್ರೀಂ ಕೋರ್ಟ್.
2019 ಜನವರಿ 19: ತೀರ್ಪಿನ ಮರುಪರಿಶೀಲನೆಗೆ ಅರ್ಜಿದಾರರಾದ ಅರುಣ್ ಸೌರಿ, ಪ್ರಶಾಂತ್ ಭೂಷಣ್ ಕೋರಿಕೆ.
2019 ಏಪ್ರಿಲ್ 12: ರಾಹುಲ್ ಗಾಂಧಿ ಅವರ ‘ಚೌಕಿದಾರ್ ಚೋರ್ ಹೈ’ ಹೇಳಿಕೆ ಆಕ್ಷೇಪಿಸಿ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಅವರಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ.
2019 ಏಪ್ರಿಲ್ 23: ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್.
2019 ಮೇ 8: ರಾಹುಲ್ ಅವರಿಂದ ಬೇಷರತ್ ಕ್ಷಮಾಯಾಚನೆ.
2019 ಮೇ 14: ರಫೇಲ್ ಪ್ರಕರಣದ ಎಲ್ಲ ಮರುಪರಿಶೀಲನೆ ಅರ್ಜಿಗಳು ರದ್ದು, ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವೂ ರದ್ದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top