– ಬ್ಯಾರಿಕೇಡ್ ಕಿತ್ತೆಸೆದು ಅಟ್ಟಹಾಸ ಮೆರೆದ 200 ಜನರ ತಂಡ, ಸೋಂಕು ತಡೆಗೆ ಅಸಹಕಾರ
ಬೆಂಗಳೂರು: ಸೀಲ್‌ಡೌನ್ ಆದ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ನೂರಾರು ಕಿಡಿಗೇಡಿಗಳು ಬ್ಯಾರಿಕೇಡ್ ಹಾಗೂ ಕಬ್ಬಿಣದ ತಗಡುಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ್ದಾರೆ. ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58 ಶಂಕಿತರನ್ನು ಕ್ವಾರಂಟೈನ್‌ನಲ್ಲಿಡಲು ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಭಾನುವಾರ ಸ್ಥಳಕ್ಕೆ ತೆರಳಿದ ವೇಳೆ ಉದ್ರಿಕ್ತ ಗುಂಪು ಪೊಲೀಸರಿಗೇ ಸವಾಲು ಹಾಕಿ ಅಟ್ಟಹಾಸ ಮಾಡಿದೆ.
ಈಗಾಗಲೇ ವಾರ್ಡ್‌ನಲ್ಲಿ11 ಮಂದಿ ಕೋವಿಡ್-19 ಸೋಂಕಿತರಿದ್ದು, ಅವರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ 58 ಜನರ ಜನರ ಪೈಕಿ 20 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಉಳಿದವರನ್ನು ಕ್ವಾರಂಟೈನ್‌ನಲ್ಲಿಡಲು ಮುಂದಾದಾಗ 200ಕ್ಕೂ ಹೆಚ್ಚು ಜನರಿದ್ದ ಗುಂಪು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಹಾಗೂ ಕಬ್ಬಿಣದ ತಗಡುಗಳನ್ನು ಕಿತ್ತೆಸೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಿಸಿತು.
”ನಮ್ಮಲ್ಲಿ ಹೊಸದಾಗಿ ಯಾರಿಗೂ ಸೋಂಕು ತಗುಲಿಲ್ಲ. ಸುಖಾಸುಮ್ಮನೆ ನಮ್ಮನ್ನೆಲ್ಲಾ ಎಳೆದುಕೊಂಡು ಹೋಗಿ ಕೂಡಿ ಹಾಕುತ್ತಿದ್ದೀರಿ,” ಎಂದು ಆರೋಪಿಸಿ ಎಂಟರಿಂದ ಹತ್ತು ಮಂದಿಯ ಗುಂಪು ಬಿಬಿಎಂಪಿ ಅಧಿಕಾರಿಗಳ ಜತೆ ಮೊದಲು ವಾಗ್ವಾದಕ್ಕೆ ಇಳಿಯಿತು. ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿತು. ಬಳಿಕ ನೂರಾರು ಮಂದಿ ಜಮಾಯಿಸಿ ದಾಂಧಲೆ ನಡೆಸಿದರು. ಈ ವೇಳೆ ಪಾಲಿಕೆ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ರಾತ್ರಿ ವೇಳೆ ಅನಗತ್ಯ ಆತಂಕ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು. ”ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದಂತೆ ಕೈ ಮೀರಬಹುದು. ಬಿಬಿಎಂಪಿ ಅಧಿಕಾರಿಗಳ ಜತೆಗಿನ ವಾಗ್ವಾದದಲ್ಲಿ ಬ್ಯಾರಿಕೇಡ್‌ಗಳು ಮತ್ತು ಪೊಲೀಸ್ ಕ್ಯಾಂಪ್ ಹಾನಿಯಾಗಿದೆ. ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಇಲ್ಲಿ ಶಾಂತಿ ಸ್ಥಾಪಿಸಲಾಗುವುದು” ಎಂದು ಇಮ್ರಾನ್ ಪಾಷಾ ಹೇಳಿದರು.
ಶಾಸಕ ಜಮೀರ್ ಸಮ್ಮುಖದಲ್ಲಿ ವಶಕ್ಕೆ
ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದವರನ್ನು ಗುರುತಿಸಲಾಗಿದೆ. ಶಾಸಕ ಜಮೀರ್ ಸಮ್ಮುಖದಲ್ಲಿ ಬೆಳಗ್ಗೆ ವಾರ್ಡ್‌ನಲ್ಲಿ ಸಭೆ ನಡೆಸಿ ಸ್ಥಳೀಯರಿಗೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಬಾಲಸುಂದರ್ ”ಒಟ್ಟು 58 ಜನರು ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದರು. ಇವರಲ್ಲಿ 20 ಮಂದಿ ಕ್ವಾರಂಟೈನ್‌ಗೊಳಗಾಗಿದ್ದಾರೆ. ಉಳಿದವರು ನಮಗೆ ಸಹಕಾರ ನೀಡಿಲ್ಲ. ಶಾಸಕರು, ಪಾಲಿಕೆ ಸದಸ್ಯರು ಬರಬೇಕು. ನಮಗೆ ಕೊರೊನಾದ ಯಾವುದೇ ಲಕ್ಷಣ ಇಲ್ಲಎಂದು ಹೇಳಿದ್ದಾರೆ. ಇವರ ಮನವೊಲಿಸಲು ಸಾಧ್ಯವಾಗದ ಕಾರಣ ಸೋಮವಾರ ಬೆಳಗ್ಗೆ ಕ್ವಾರೆಂಟೈನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದರು.
ಪೊಲೀಸ್ ಕ್ಯಾಂಪ್ ಮೇಲೆ ದಾಳಿ
ಇನ್ನೂರಕ್ಕೂ ಹೆಚ್ಚು ಮಂದಿ ಏಕಾಏಕಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದಾರೆ. ಕುರ್ಚಿಗಳನ್ನು ಎಸೆದು, ಪೆಂಡಾಲ್ ಕಿತ್ತು ಹಾಕಿದ್ದಾರೆ. ಸ್ಥಳದಲ್ಲಿ ಕೆಲವೇ ಪೊಲೀಸ್ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ದಯವಿಟ್ಟು ಯಾರೂ ಈ ವಿಷಯವನ್ನು ರಾಜಕೀಯಗೊಳಿಸಬಾರದು. ಸರಕಾರ, ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು. ಎಲ್ಲಾ ಶಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಇಂತಹ ಅಯೋಗ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇವರು ಅಮಾಯಕರಲ್ಲ, ಬದಲಿಗೆ ಪ್ರಚೋದನೆಗೆ ಒಳಗಾದವರು. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂಥವರಿಂದಲೇ ದೇಶ ಹಾಳಾಗುತ್ತಿದೆ.
– ಸಿ.ಟಿ. ರವಿ, ಸಚಿವ
ಪೊಲೀಸ್ ಇನ್ ಆ್ಯಕ್ಷನ್
ಪಶ್ಚಿಮ ವಿಭಾಗದ ಎಲ್ಲ ಇನ್ಸ್‌ಪೆಕ್ಟರ್‌ಗೆ ಬುಲಾವ್
ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಸ್ಥಳಕ್ಕೆ ಹಾಜರ್
ನಗರದಲ್ಲಿನ ಹಿರಿಯ ಅಧಿಕಾರಿಗಳೆಲ್ಲ ಸ್ಥಳಕ್ಕೆ ದೌಡು
ಇಲ್ಲಿಯವರೆಗೆ ರಚಿಸಿದ್ದಕ್ಕಿಂತ ಹೆಚ್ಚು ಅಧಿಕಾರಿಗಳು ಇರುವ 2 ತಂಡ ರಚನೆ
ಗುಂಪುಗಳು ಬಂದ ಮಾರ್ಗ, ಅದರ ನಾಯಕತ್ವ ವಹಿಸಿದ್ದವರ ಮಾಹಿತಿ ಸಂಗ್ರಹ
ಸಿಸಿಟಿವಿಗಳು, ಮಾಧ್ಯಮಗಳ ಕ್ಯಾಮೆರಾಗಳ ದೃಶ್ಯಗಳ ಮೇಲೆ ಕ್ರಮಕ್ಕೆ ಸಿದ್ಧತೆ
ಸಿಎಆರ್, ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ
ಈ ಹಿಂದೆ ಬೇರೆ ಪ್ರಕರಣಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಈ ಘಟನೆ ಮರುಕಳಿಸಿರುವುದರಿಂದ ಸಹಿಸಲು ಸಾಧ್ಯವಿಲ್ಲ. ಪೊಲೀಸರ ಮೇಲೆ ಹಲ್ಲೆಗೆ ಪ್ರಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ವಾರಂಟೈನ್‌ಗೆ ಕಳುಹಿಸುವ ಜವಾಬ್ದಾರಿಯನ್ನು ಸ್ಥಳೀಯ ಶಾಸಕರಿಗೆ ವಹಿಸಿದ್ದೇವೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಒಂದೇ ವಾರ್ಡ್‌ನಲ್ಲಿ 11 ಸೋಂಕಿತರು
– ಪಾದರಾಯನಪುರ ಮೋಸ್ಟ್ ಡೇಂಜರಸ್ – ದ್ವಿತೀಯ ಹಂತದ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ
ಬೆಂಗಳೂರು: ಸೀಲ್‌ಡೌನ್ ಆಗಿರುವ ಪಾದರಾಯನಪುರ ವಾರ್ಡ್ ಒಂದರಲ್ಲೇ 11 ಸೋಂಕಿತರು ಪತ್ತೆಯಾಗಿರುವುದು ಪರಿಸ್ಥಿತಿ ಕೈ ಮೀರಿರುವುದಕ್ಕೆ ಸಾಕ್ಷಿಯಾಗಿದೆ. ಭಾನುವಾರ ನಡೆದ ದಾಂಧಲೆ ಪ್ರಕರಣದಿಂದಾಗಿ ಈ ಪ್ರದೇಶದಲ್ಲಿ ಇನ್ನಷ್ಟು ತೀವ್ರ ಕ್ರಮ ಅನಿವಾರ್ಯ ಎಂಬ ಪರಿಸ್ಥಿತಿ ಸೃಷ್ಟಿಸಿದೆ.
ಸೋಂಕಿತರಲ್ಲಿ ಹೆಚ್ಚಿನವರು ಹೊಸದಿಲ್ಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕ ಸೋಂಕಿಗೆ ಒಳಗಾದವರು ಹಲವರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಅನಿವಾರ್ಯತೆ ಉಂಟಾಗಿದೆ. ಇದನ್ನು ಒಪ್ಪಲು ಅಲ್ಲಿನ ಸ್ಥಳೀಯರು ಸಿದ್ಧರಿರಲಿಲ್ಲ. ವಿನಾಕಾರಣ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ದಾಂಧಲೆ ಮಾಡಲಾಯಿತು.
ಸೀಲ್‌ಡೌನ್ ಆದಾಗಿನಿಂದಲೂ ಈ ಪ್ರದೇಶದ ಸಂಪೂರ್ಣ ನಿಯಂತ್ರಣ ಪಡೆದುಕೊಳ್ಳಲು, ಪಾಲಿಕೆ, ಪೊಲೀಸ್ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಭರವಸೆಯಂತೆ ಅಗತ್ಯ ಸಾಮಗ್ರಿಗಳನ್ನು ಮನೆಗೆ ಪೂರೈಸಲು ಪಾಲಿಕೆ ವಿಫಲವಾಯಿತು. ಇದರ ಬೆನ್ನಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದರು. ಅಗತ್ಯ ವಸ್ತುಗಳನ್ನು ಒದಗಿಸುವಂತೆ ಕಾರ್ಪೊರೇಟರ್‌ಗೆ ದುಂಬಾಲು ಬಿದ್ದಿದ್ದರು.
ಹೆಚ್ಚುವರಿ ಪೊಲೀಸರ ನಿಯೋಜನೆ
ಘಟನೆ ಹಿನ್ನೆಲೆಯಲ್ಲಿ ಪಾದರಾಯನಪುರ ವಾರ್ಡ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿಗೆ ಕಪ್ಪುಚುಕ್ಕೆ
ಸೋಂಕು ನಿಯಂತ್ರಣಕ್ಕೆ ಸಹಕರಿಸದೆ ದಾಂಧಲೆ ಮಾಡುವ ಘಟನೆಗಳು ಉತ್ತರದ ರಾಜ್ಯಗಳಲ್ಲಿಈವರೆಗೆ ಹೆಚ್ಚಾಗಿ ವರದಿಯಾಗಿದ್ದವು. ಇಂತಹ ಘಟನೆ ನಡೆದಿರುವುದು ಬೆಂಗಳೂರು ನಗರಕ್ಕೆ ಕಪ್ಪು ಚುಕ್ಕೆಯಾದಂತಾಗಿದೆ.
”ಕೊರೊನಾ ಸೋಂಕಿನ ವಿರುದ್ಧ ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂರ್ಖರು ನಮ್ಮ ಹೀರೋಗಳ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಈ ರಾಷ್ಟ್ರ ವಿರೋಧಿಗಳ ಬಗ್ಗೆ ಮೃದು ಧೋರಣೆ ತೋರುವುದು ಸಲ್ಲ”
– ಶೋಭಾ ಕರಂದ್ಲಾಜೆ, ಸಂಸದೆ
ಜಮೀರ್ ನೇರ ಹೊಣೆ
ಪೊಲೀಸರು ವಿಶ್ರಾಂತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯವಸ್ಥಿತವಾಗಿ ದಾಳಿ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಅವರೇ ನೇರ ಕಾರಣ. ಹಿಂದೆ ಹೆಗಡೆನಗರದಲ್ಲಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದ ಜಮೀರ್ ಅವರ ಕ್ರಮ, ಇಲ್ಲಿನ ಪುಂಡರಿಗೆ ಪರೋಕ್ಷ ನೆರವಾದಂತೆ ಕಾಣಿಸುತ್ತಿದೆ.
– ಅಶ್ವತ್ಥನಾರಾಯಣ, ರಾಜ್ಯ ಬಿಜೆಪಿ ವಕ್ತಾರ
ಸರಕಾರಿ ಅಧಿಕಾರಿ, ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ವಿಪತ್ತು ನಿರ್ವಹಣಾ ಕಾಯಿದೆಯಡಿ ತಪ್ಪಿತಸ್ಥರ ವಿರುದ್ಧ ಒಂದು ವರ್ಷ ಶಿಕ್ಷೆಗೊಳಪಡಿಸಲು ಅವಕಾಶವಿದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು
– ರಮೇಶ್ ಬಾನೋತ್, ಡಿಸಿಪಿ
ಕ್ವಾರಂಟೈನ್ ಆದವರ ಪರಿಶೀಲನೆಗೆ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ಹೋದಾಗ ಅವರ ಮೇಲೆ ಹಲ್ಲೆ, ಬೆಂಕಿ ಹಾಕಿರುವ ಘಟನೆ ಅತ್ಯಂತ ಖಂಡನೀಯ. ಕೊರೊನಾ ವಿರುದ್ಧದ ಹೋರಾಟ ಮಾನವತೆಯ ಹೋರಾಟ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಬಲವಾದ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವರು ಹಾಗೂ ಡಿಜಿಪಿಯೊಂದಿಗೆ ಮಾತನಾಡಿದ್ದೇನೆ.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಪಾದರಾಯನಪುರದಲ್ಲಿಆರೋಗ್ಯಾಧಿಕಾರಿಗಳಿಗೆ ಕೊರೊನಾ ಚಿಕಿತ್ಸೆಗೆ ಸ್ಪಂದಿಸದೆ, ಪೊಲೀಸ್ ಅಧಿಕಾರಿಗಳ ಮೇಲೆ ದುರ್ವರ್ತನೆ ತೋರಿದವರ ಮೇಲೆ ಈ ಕೂಡಲೇ ಶಿಸ್ತು ಕ್ರಮ ಜರುಗಿಸಲಿ. ಪಾದರಾಯನಪುರದಲ್ಲಿ ಅಶಾಂತಿ ನಿರ್ಮಿಸಿದವರನ್ನು ಕೂಡಲೇ ಪೊಲೀಸ್ ವಶಕ್ಕೆ ಪಡೆಯಲಿ.
– ಎಂ.ಪಿ. ರೇಣುಕಾಚಾರ‍್ಯ, ಬಿಜೆಪಿ ಶಾಸಕ
ಸ್ಥಳಕ್ಕೆ ಬಾರದ ಶಾಸಕ: ಆಕ್ರೋಶ
ಪಾದರಾಯನಪುರದಲ್ಲಿ ಇಷ್ಟೆಲ್ಲಾ ಗಲಾಟೆ ನಡೆದರೂ ಶಾಸಕ ಜಮೀರ್ ಅಹಮದ್ ಖಾನ್ ಸ್ಥಳಕ್ಕೆ ಬಾರದೆ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.